ಮೌಲ್ಯವರ್ಧನೆಯಲ್ಲಿ ಮಾರುಕಟ್ಟೆ ಕೌಶಲ
Team Udayavani, Jul 8, 2019, 5:00 AM IST
ತೋಟದ ಫಲಗಳನ್ನು ನೇರ ಮಾರುಕಟ್ಟೆಗೆ ಒಯ್ದರೆ ಬೆಲೆ ಕಡಿಮೆ, ಹಣ್ಣುಗಳಂತೂ ಬಹುಬೇಗ ಕೊಳೆತು ಹಾಳಾಗಿ ನಷ್ಟವಾಗುತ್ತದೆ. ಒಣಗಿಸಿ, ಜ್ಯೂಸ್, ಜ್ಯಾಮ್, ಕ್ಯಾಂಡಿ, ಹಲ್ವ, ಚಾಕಲೇಟ್ ಮುಂತಾದ ಮೌಲ್ಯವರ್ಧಿತ ಉತ್ಪನ್ನಗಳಾಗಿಸಿದರೆ ಆದಾಯ ಹೆಚ್ಚುತ್ತದೆ. ಸಸ್ಯವೈವಿಧ್ಯಗಳ ಪೋಷಣೆಯ ಜೊತೆಗೆ ಕಾಡು ತೋಟದ ಕೃಷಿಕರು ಸಂಸ್ಕರಣೆಯ ಕೌಶಲವನ್ನು ಕಲಿಯಬೇಕು…
ಮೂರು ದಶಕಗಳ ಹಿಂದೆ ಮಲೆನಾಡಿನ ಅಡಿಕೆ ಸೀಮೆಯಲ್ಲಿ ಹೊಸ ಬೆಳೆಯಾಗಿ ಪಪ್ಪಾಯ ಅವತರಿಸಿ ತೋಟಗಳು ಶುರುವಾಗಿದ್ದವು. ಸಸಿ ನೆಟ್ಟವರಿಗೆ ವರ್ಷದೊಳಗೆ ಫಲ ದೊರಕಿದ ಸಂಭ್ರಮ. ತೋಟಗಾರಿಕೆ ಇಲಾಖೆ ಕ್ಷೇತ್ರೋತ್ಸವ ಏರ್ಪಡಿಸಿ ಇನ್ನಷ್ಟು ಪ್ರಚಾರ ಒದಗಿಸಿತು. ತೋಟಗಳಲ್ಲಿ ವಾರಕ್ಕೆ ಒಂದೆರಡು ಟನ್ ಪಪ್ಪಾಯ ಉತ್ಪಾದನೆಯಾಗುತ್ತಿತ್ತು. ಮಾರುಕಟ್ಟೆಯಲ್ಲಿ ಒಂದು ಕಿಲೋ ಹಣ್ಣಿಗೆ 15-20 ರುಪಾಯಿ ಬೆಲೆ. ಬೆಳೆಗಾರರಿಗೆ ನಾಲ್ಕೆದು ರುಪಾಯಿ ಸಿಕ್ಕರೂ ಲಾಭವಾಗುತ್ತದೆಂದು ಸರಳ ಲೆಕ್ಕ ಹಾಕಿದರು. ಹಳ್ಳಿಯ ರಸ್ತೆ, ವಾಹನ ವ್ಯವಸ್ಥೆ ಸರಿಯಾಗಿ ಸುಧಾರಿಸದ ಕಾಲವದು.
ಸ್ಥಳೀಯವಾಗಿ ಪಪ್ಪಾಯ ಹಣ್ಣು ತಿನ್ನುವವರು ಕಡಿಮೆ, ಮಾರುಕಟ್ಟೆಯಲ್ಲಿ ಹಣ್ಣಿಗೆ ಬೇಡಿಕೆಯಿಲ್ಲದೆ, ಬೆಳೆಗಾರರನ್ನು ಮಾರಾಟ ಸಮಸ್ಯೆ ಕಾಡತೊಡಗಿತು.
ಪಪ್ಪಾಯ ಬೆಲೆ ಸ್ಪರ್ಧೆ
“ಟ್ಯೂಟಿ ಫ್ರೂಟಿ’ ತಯಾರಿಕಾ ಘಟಕಗಳು ಆರಂಭವಾಗಿ ಕಾಯಿ ಖರೀದಿ ಶುರುವಾಯ್ತು. ಕಿಲೋ ಪಪ್ಪಾಯಕ್ಕೆ ನಾಲ್ಕು ರುಪಾಯಿ ಬೆಲೆ. ತೋಟದಿಂದ 15-20 ಕಿಲೋಮೀಟರ್
ಸನಿಹದಲ್ಲಿ ಕಾರ್ಖಾನೆಗಳಿದ್ದರೆ ಲಾಭದಾಯಕವಾಗುತ್ತಿತ್ತು. ನೂರಾರು ಕಿಲೋಮೀಟರ್ ದೂರ ಸಾಗಾಟ ವೆಚ್ಚ ಜಾಸ್ತಿಯಾಗಿ ಬೆಳೆಗಾರರು ಕೈ ಸುಟ್ಟುಕೊಂಡರು. ರಂಜಾನ್
ಉಪವಾಸ ಕಾಲಕ್ಕೆ ಹಣ್ಣಿಗೆ ಬೇಡಿಕೆ ಜಾಸ್ತಿಯೆಂದು ಮಾರುಕಟ್ಟೆ ಸೂಕ್ಷ್ಮ ಅರಿತ ಕೃಷಿಕರು, ಕಾಲಕ್ಕೆ ಸರಿಯಾಗಿ ಹಣ್ಣಿನ ಉತ್ಪಾದನೆ ಆರಂಭಿಸಿ ಹಿಡಿತ ಸಾಧಿಸಿದರು. ಅಬ್ಬರದ ಮಳೆ, ಬರಗಾಲ, ಬಿರುಗಾಳಿ ಪ್ರಹಾರಕ್ಕೆ ತೋಟ ಉಳಿಸುವುದು ಬಯಲು ಸೀಮೆಗಳಲ್ಲಿ ಸವಾಲಾಯ್ತು. ಈಗ ಕಾಲ ಬದಲಾಗಿದೆ, ಹಣ್ಣಿನ ಸೇವನೆ ಹೆಚ್ಚಿದೆ. ಪ್ರವಾಸಿ ತಾಣಗಳಲ್ಲಿ ಮಾರಾಟ ಸ್ವಲ್ಪ ಚೇತರಿಸಿದೆ. ಮಾವು ಮಾರುಕಟ್ಟೆಗೆ ಬರಲು ಶುರುವಾದರೆ, ಪಪ್ಪಾಯ ಸ್ಪರ್ಧೆಯಲ್ಲಿ ಸೋತು ಬೆಲೆ ಕುಸಿಯುತ್ತದೆ. ಹಣ್ಣಿನ ಬೆಳೆ ಹಲವು ಮುಖದ ಅನುಭವ ನೀಡಿದೆ. ಕೃಷಿಕರು ಗೆಲ್ಲುವ ವಿಧಾನ ಕಲಿತಿದ್ದಾರೆ.
ಅಡಿಕೆ ನಾಟಿ ಮಾಡಿದಾಗ ಫಲಕ್ಕೆ ಹಲವು ವರ್ಷ ಕಾಯುವ ಸಂದರ್ಭದಲ್ಲಿ ತಕ್ಷಣದ ಆದಾಯಕ್ಕೆ ಬಾಳೆ ಬೆಳೆಯುವುದು ಸಾಮಾನ್ಯ. ಪಚ್ಚಬಾಳೆ, ನೇಂದ್ರ ಬಾಳೆ, ಗ್ರ್ಯಾಂಡ್ ನೈನ್, ಮೈಸೂರು ಮಿಟ್ಲಿ, ರೋಬಸ್ಟಾ, ಬೂದು ಬಾಳೆ… ಹೀಗೆ ಹಲವು ತಳಿಗಳು ಕೃಷಿಯಲ್ಲಿವೆ. ಹಣ್ಣು ಸೇವನೆ, ಹಪ್ಪಳ, ಸಂಡಿಗೆ, ಅಡುಗೆ, ಔಷಧ ಹೀಗೆ ಅಗತ್ಯಕ್ಕೆ
ತಕ್ಕಂತೆ ತಳಿ ಬಳಕೆಯಿದೆ. ಗೊನೆ ಕಟಾವು ಮಾಡಿ ಹಣ್ಣು ಮಾಡಿ ಮಾರಾಟಕ್ಕೆ ಹೋದರೆ ಮಾರುಕಟ್ಟೆ ಅನಿಶ್ಚಿತ.
ಶ್ರಾವಣ ಮಾಸದ ದಿನಗಳಲ್ಲಿ ದೇಗುಲಗಳ ಪೂಜಾ ಬಳಕೆಗಾಗಿ ಬೇಡಿಕೆ
ಹೆಚ್ಚಿ ಬೆಲೆ ಏರುತ್ತದೆ. ಇದನ್ನು ಗಮನಿಸಿದ ಬೆಳೆಗಾರರು ಶ್ರಾವಣಕ್ಕೆ ಬೆಳೆಯುವಂತೆ ತೋಟ ಬೆಳೆಸುವ ತಂತ್ರ ಅನುಸರಿಸುತ್ತಾರೆ. ಬೆಳೆಗಾರರಿಗೆ ಕಿಲೋಗೆ 8- 10 ರುಪಾಯಿ
ದೊರೆಯುವ ಬಾಳೆಕಾಯಿ ಅಂತಿಮವಾಗಿ ಗ್ರಾಹಕರ ಕೈ ತಲುಪುವಾಗ 60 ರುಪಾಯಿಗೆ ಏರಿರುತ್ತದೆ. ಹಣ್ಣನ್ನು ಒಣಗಿಸಿ ಸುಕೇಳಿಯಾಗಿ ಮಾರುವುದು, ಚಿಪ್ಸ್ ತಯಾರಿಸುವ
ಮೌಲ್ಯವರ್ಧನೆಯ ಮಾರ್ಗಗಳು ಕೃಷಿ ಗೆಲ್ಲಿಸುತ್ತವೆ, ಜನಕ್ಕೆ ಕೆಲಸವನ್ನು ನೀಡುತ್ತವೆ.
ಗ್ರಾಹಕರನ್ನು ಹುಡುಕಬೇಕು
ಸಾಮಾನ್ಯವಾಗಿ ಬೆಳೆ ಬೆಳೆಯುವಲ್ಲಿ ಗೆಲ್ಲುವ ನಾವು ಬೆಳೆಯ ಸಂಸ್ಕರಣೆ, ಮಾರುಕಟ್ಟೆ ವಿಚಾರದಲ್ಲಿ ಸೋಲುತ್ತೇವೆ. ಇಂದಿನ ಬದಲಾದ ಕಾಲದಲ್ಲಿ, ಕೃಷಿಕ ಬೆಳೆಯ
ಮೌಲ್ಯವರ್ಧನೆಯತ್ತ ಗಮನಹರಿಸಿದರೆ ಮಾತ್ರ ಆದಾಯ ಹೆಚ್ಚಿಸಲು ಸಾಧ್ಯ. ಆನ ಬಾಳೆ (ಶಾನಬಾಳೆ) ಚಿರಪರಿಚಿತ, ತರಕಾರಿ ಮಾರುಕಟ್ಟೆಯಲ್ಲಿ ಕಾಯಿಗಳ ಮಾರಾಟ
ನಡೆಯುತ್ತದೆ. ಒಂದು ಕಾಯಿಗೆ ಎರಡು ಮೂರು ರುಪಾಯಿ ಬೆಲೆ, ತರಕಾರಿಗಳ ಬೆಲೆ ಏರಿದಾಗ ಇದರ ಬೆಲೆಯೂ ಏರುತ್ತದೆ. ಇದೇ ಬಾಳೆಕಾಯಿಯನ್ನು ಕಡಲೆ ಹಿಟ್ಟಿನಲ್ಲಿ ಅದ್ದಿ,
ಎಣ್ಣೆಯಲ್ಲಿ ಕರಿದು, ಬಜ್ಜಿ ತಯಾರಿಸುವ ವ್ಯಾಪಾರಿಯ ತಂತ್ರ ಗಮನಿಸಬೇಕು. ಪರಿಶ್ರಮದಿಂದ ಒಂದು ಬಾಳೆಕಾಯಿಯಲ್ಲಿ 60-80 ರುಪಾಯಿ ಗಳಿಸುತ್ತಾರೆ. ಮೌಲ್ಯವರ್ಧನೆಯ ಮಹತ್ವ ಅರ್ಥವಾಗಲು ಮಾರುಕಟ್ಟೆಯಲ್ಲಿ ಶ್ರೀಸಾಮಾನ್ಯರ
ಬದುಕಿನ ರೀತಿಗಳನ್ನು ಗಮನಿಸಬೇಕಾಗುತ್ತದೆ. ಬೆಳೆಗೆ ನಿಶ್ಚಿತ ಗ್ರಾಹಕರನ್ನು ಹುಡುಕಬೇಕಾಗುತ್ತದೆ.
ನೆಲ್ಲಿಯಿಂದ ಆರೋಗ್ಯ ವೃದ್ಧಿ
ನೆಲ್ಲಿ “ಸಿ’ ಜೀವಸತ್ವ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ ಹಾಗೂ “ಬಿ’ ಜೀವಸತ್ವಗಳಿರುವ ಫಲ. ಬನಾರಸ್, ಕೃಷ್ಣಾ, ಚಕೈಯಾ, ಕಾಂಚನ ಮುಂತಾದ ತಳಿಗಳಿವೆ. ಮಳೆ ಆಶ್ರಿತ
ತೋಟಗಾರಿಕೆಯಲ್ಲಿ ಬಯಲುಸೀಮೆಯ ಗಮನ ಸೆಳೆದ ಬೆಳೆಯಿದು. ಮರಕ್ಕೆ ಒಂದೆರಡು ಕ್ವಿಂಟಾಲ್ ನೆಲ್ಲಿಕಾಯಿ ದೊರೆಯುವ ಸಾಧ್ಯತೆಯಿದೆ. ತೋಟದ ನೆಲ್ಲಿಯನ್ನು ನೇರ
ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲಾಗುವುದಿಲ್ಲ. ಆಯುರ್ವೇದ ಔಷಧ ತಯಾರಿಕಾ ಕಂಪನಿಗಳು ಖರೀದಿಸುತ್ತವಾದರೂ ಉತ್ತಮ ಬೆಲೆ
ದೊರೆಯುವುದು ಕಷ್ಟ. ಕೃಷಿ ವೆಚ್ಚವಿಲ್ಲದ ಕಾಡಿನ ನೆಲ್ಲಿಯೂ ಮಾರುಕಟ್ಟೆ ಪ್ರವೇಶಿಸುವುದರಿಂದ ಉತ್ತಮ ಬೆಲೆ ದೊರೆಯುವುದಿಲ್ಲ. ನೆಲ್ಲಿಪುಡಿ, ನೆಲ್ಲಿ ಅಡಿಕೆ, ನೆಲ್ಲಿ ಹಪ್ಪಳ, ನೆಲ್ಲಿ ಹಿಂಡಿ, ಉಪ್ಪಿನಕಾಯಿ, ಜ್ಯೂಸ್, ಜ್ಯಾಮ್, ತಂಬುಳಿ ಪುಡಿ,
ನೆಲ್ಲಿ ತೊಕ್ಕು ಮುಂತಾಗಿ 50ಕ್ಕೂ ಹೆಚ್ಚು ವಿಧದ ಉತ್ಪನ್ನ ತಯಾರಿಸಿ ವರ್ಷವಿಡೀ ಮಾರಾಟ ಮಾಡಬಹುದು. ಹಲಸಿನ ಎಳೆಗಾಯಿಂದ ಹಣ್ಣಿನವರೆಗಿನ ಹತ್ತಾರು
ಉತ್ಪನ್ನಗಳಿಗೆ ಬೇಡಿಕೆಯಿದೆ. ಹಪ್ಪಳ, ಸಂಡಿಗೆಯ ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಒಂದು ಹಲಸನ್ನು ನೇರ ಮಾರಿದರೆ 50 ರುಪಾಯಿ ದೊರೆಯುತ್ತದೆಂದು
ಅಂದಾಜಿಸಿದರೆ ಅದನ್ನು ಚಿಪ್ಸ್ ತಯಾರಿಸಿ ಮಾರಿದರೆ ಇದಕ್ಕಿಂತ ಐದಾರು ಪಟ್ಟು ಜಾಸ್ತಿ ಹಣ ದೊರೆಯುತ್ತದೆ.
ಕೋಕಂ ಮಾರುಕಟ್ಟೆ ಬೆಳೆಯಬೇಕು
ಕರಾವಳಿ, ಮಲೆನಾಡಿನಲ್ಲಿ ಮುರುಗಲು(ಕೋಕಂ) ಕಾಡುತ್ಪನ್ನ. ಈಗ ತೋಟಗಳಲ್ಲಿ ಬೆಳೆಸಲಾಗಿದೆ. ಬೀಜ, ಹಣ್ಣಿನಿಂದ ಹಲವು ಉತ್ಪನ್ನ ತಯಾರಿಸಲಾಗುತ್ತದೆ. ಬೇಸಿಗೆಯ ದಿನಗಳಲ್ಲಿ ಪ್ರವಾಸಿ ತಾಣಗಳಲ್ಲಿ ಕೋಕಂ ಜ್ಯೂಸ್ ಆರೋಗ್ಯಯುತ ಸಾವಯವ ಪೇಯವಾಗಿದೆ. ಹಳ್ಳಿಮನೆಗಳಲ್ಲಿ ತಾಜಾ ಹಣ್ಣಿನ ಸಿಪ್ಪೆಯನ್ನು ಸಕ್ಕರೆಯಲ್ಲಿ ಹಾಕಿ ಬಿಸಿಲಲ್ಲಿಟ್ಟು ಮನೆ ಬಳಕೆಗೆ ಕೋಕಂ ಪಾಕ ತಯಾರಿಸಿಡುವ ವಿಧಾನ ಹಳೆಯದು. ಸಿಪ್ಪೆ ಒಣಗಿಸಿ ಅಡುಗೆಗೆ ಬಳಸಲಾಗುತ್ತದೆ. ಸ್ಥಳೀಯ ಬಳಕೆಯ ಜ್ಞಾನದಿಂದ ಕಾಡು
ಫಲ ನಾಡಿಗೆ ಚಿರಪರಿಚಿತವಾಗಿದೆ. ನಾವು ಬೆಳೆದಿದ್ದೇವೆ, ಜನ ಖರೀದಿಸಬೇಕು, ಲಾಭವಾಗಬೇಕೆಂದು ಕುಳಿತಲ್ಲಿ ಲೆಕ್ಕ ಹಾಕುತ್ತಿರುವುದಕ್ಕಿಂತ ಸುತ್ತಲಿನ ಮಾರುಕಟ್ಟೆ
ಅರ್ಥಮಾಡಿಕೊಳ್ಳಬೇಕು. ಸಪೋಟ ಕಿಲೋಗೆ ತೋಟದಲ್ಲಿ 8-10 ರು.ಗೂ ಕೇಳುವವರಿಲ್ಲ. ಸ್ವತಃ ಕೃಷಿಕ ಅಥವಾ ಅಕ್ಕಪಕ್ಕದ ಸಣ್ಣಪುಟ್ಟ ಉದ್ದಿಮೆದಾರರು ಇದನ್ನು ಬಳಸಿ ಉತ್ಪನ್ನ ತಯಾರಿಸುವ ಹಂತ ತಲುಪಿದಾಗ ಮಾತ್ರ ಬೆಳೆ, ಬೆಲೆಯ ಸುಸ್ಥಿರತೆ ಉಳಿಯುತ್ತದೆ.
ಆಲಸ್ಯ ನಿವಾರಕ ದಾಲ್ಚಿನ್ನಿ ಚಾಕಲೇಟು
ಕಾಡು ತೋಟದ ಮೂಲ ಉದ್ದೇಶ ಏಕ ಬೆಳೆಯ ಸ್ವರೂಪ ಬದಲಿಸುವುದೆಂದು ಈಗಾಗಲೇ ಗಮನಿಸಿದ್ದೇವೆ. ಮಾವು, ಹಲಸು, ಅಡಿಕೆ, ತೆಂಗು, ಕಾಫಿ ಬೆಳೆದು ಮಾರುವುದು ಅಭ್ಯಾಸವಾಗಿದೆ. ಎರಡು ಮೂರು ಎಕರೆ ಕಾಡು ತೋಟದಲ್ಲಿ
ಹದಿನೈದು ಇಪ್ಪತ್ತು ರೀತಿಯ ಬೆಳೆಯಿದ್ದಾಗ ಮಾರಾಟ ಹೇಗೆ? ಸಣ್ಣ ಪ್ರಮಾಣದ ಸಂಸ್ಕರಣೆ ಸಾಧ್ಯವೇ? ಪ್ರಶ್ನೆ ಕಾಡುತ್ತದೆ. ಸಂಸ್ಕರಣಾ ಮಾದರಿಗಳು ಬಹುತೇಕ ಎಲ್ಲ
ಹಣ್ಣುಗಳಿಗೂ ಇದೆ. ಡ್ರೆçಯರ್‌ಗಳು ಹಣ್ಣುಗಳನ್ನು ಒಣಗಿಸಲು ನೆರವಾಗಬಹುದು. ಕೃಷಿ ಕುಟುಂಬ ಬಿಡುವಿನ ಸಮಯದಲ್ಲಿ ಉತ್ಪನ್ನ ತಯಾರಿಯ ಕಾರ್ಯ ಮಾಡಬಹುದು. ಕಾಡಿನ ಮೂಲೆಯಲ್ಲಿ ತೋಟವಿರುವವರು ಮಾರುಕಟ್ಟೆ ತಲುಪುವುದು ಮೊದಲಿನಷ್ಟು ಕಷ್ಟವಲ್ಲ. ಗುಣಮಟ್ಟದ ಉತ್ಪನ್ನಗಳಿಗೆ ಸಾವಯವ ಉತ್ಪನ್ನ ಮಾರಾಟ
ಮಳಿಗೆ, ಸಂತೆಗಳಲ್ಲಿ ಅವಕಾಶವಿದೆ. ಕೃಷಿಗೆ ಹೆಚ್ಚು ಸಮಯ ನೀಡುವ ಆಸಕ್ತಿಯಿದ್ದಾಗ ಇಂಥ ಕೆಲಸಗಳು ಕೈಹಿಡಿಯುತ್ತವೆ. ಮಲೆನಾಡಿನ ಅಡಕೆ ತೋಟದಂಚಿನಲ್ಲಿ ಹೇರಳೆ(ಹುಳಿಕಂಚಿ) ಬೆಳೆಯುತ್ತದೆ, ಸಾಮಾನ್ಯವಾಗಿ ಅಡುಗೆಗೆ ಬಳಸಿ ಉಳಿದದ್ದು
ಕೊಳೆತು ಹಾಳಾಗುತ್ತದೆ.
ಮೈಸೂರು ಸೀಮೆಗಳಲ್ಲಿ ಬೇಸಗೆಯಲ್ಲಿ ಜ್ಯೂಸ್
ಅಂಗಡಿಯವರು ಹೇರಳೆ ಹಣ್ಣಿನ ಜ್ಯೂಸ್ ತಯಾರಿಸುತ್ತಾರೆ. ಸಿಪ್ಪೆಯ ನೈಸರ್ಗಿಕ ಪರಿಮಳ ಗ್ರಾಹಕರನ್ನು ಸೆಳೆಯುತ್ತದೆ. ಹೀಗೆ ಪ್ರಾದೇಶಿಕ ಬಳಕೆ ವೈವಿಧ್ಯ ಗುರುತಿಸಿ ಮಾರುಕಟ್ಟೆಗೆ ಒಯ್ಯುವ ಪರಿಜ್ಞಾನ ಬೆಳೆಸಿಕೊಳ್ಳಬೇಕು. ದಾಲಿcನ್ನಿ ಸಾಂಬಾರ ವಸ್ತುವಾಗಿ ಪರಿಚಿತ. ಎಲೆ, ಚಕ್ಕೆಗಳನ್ನು ಅಡುಗೆಗೆ ಬಳಸಲಾಗುತ್ತದೆ. ದಾಲಿcನ್ನಿಯ ಪರಿಮಳಕ್ಕೆ ಆಲಸ್ಯ, ನಿದ್ದೆ ಓಡಿಸಿ ಲವಲವಿಕೆ ಹುಟ್ಟಿಸುವ ಗುಣವಿದೆ. ಇದರಿಂದ
ಚಾಕಲೇಟ್ ತಯಾರಿಸಿದರೆ ವಾಹನ ಚಾಲಕರ ಆಯಾಸ ಪರಿಹರಿಸುವ ಶಕ್ತಿಯಿದೆ. ಹಲವು ಸಸ್ಯಗಳಲ್ಲಿ ಔಷಧೀಯ ಮಹತ್ವವಿದೆ. ಸದಾ ನೀರಿರುವ ನೆಲದ ಒಂದೆಲಗ ಒಣಗಿಸಿ ತಂಪು ತಂಬುಳಿಗೆ ಉಪಯುಕ್ತ ಪುಡಿ ತಯಾರಿಸಬಹುದು.
ಶಿವಣೆ ಎಲೆಗಳನ್ನು ಕಷಾಯಕ್ಕೆ ಒದಗಿಸಬಹುದು.
ನಕಲಿಗಳ ಬಗ್ಗೆ ಎಚ್ಚರವಿರಲಿ
ಕಾಡು ತೋಟದಲ್ಲಿ ಸಸ್ಯ ಕೂಡಿಸುವಾಗ ಮಾರುಕಟ್ಟೆ, ಮೌಲ್ಯವರ್ಧನೆಯ ಸಾಧ್ಯತೆಗಳತ್ತ ಗಮನ ನೀಡಿದರೆ ತೋಟದ ಲಾಭ ಹೆಚ್ಚಿಸಿಕೊಳ್ಳಬಹುದು. ಹಾಗಂತ ಬೆಳೆದಿದ್ದೆಲ್ಲ ಮಾರಾಟವಾಗಿ ನಗದು ಹಣ ದೊರೆಯಬೇಕೆಂಬ ನಿರ್ಧಾರ
ಸರಿಯಲ್ಲ. ಮುಖ್ಯವಾಗಿ, ಮನೆಯಲ್ಲಿ ಬಳಸುವ ಅಭ್ಯಾಸ ಉತ್ತಮ. ಅಡುಗೆಯಲ್ಲಿ ಕಂಚಿ, ಲಿಂಬು, ಅಮಟೆ, ಬೇರುಹಲಸು, ಹಲಸು, ನೆಲ್ಲಿ, ಮುರುಗಲು ಫಲಗಳನ್ನು ಬಳಸುವುದು ಆರಂಭವಾದರೆ ತರಕಾರಿ ವೆಚ್ಚ ಕಡಿಮೆಯಾಗುತ್ತದೆ. ಜಗತ್ತು ಉತ್ತಮ ಆಹಾರ ಹುಡುಕುತ್ತಿದೆ. ಪ್ರಸ್ತುತ ಸಾವಯವ ಪ್ರಚಾರ ಮಾರುಕಟ್ಟೆಯನ್ನು ಬಹಳ
ಹಿಗ್ಗಿಸಿದೆ, ಬೆಳೆಗಿಂತ ಕೊಳ್ಳುವವರು ಜಾಸ್ತಿಯಾಗಿದ್ದಾರೆ. ಸಾವಯವ ಪದಾರ್ಥಗಳಿಗೆ ಅಪಾರ ಬೇಡಿಕೆಯಿರುವ ಈ ದಿನಗಳಲ್ಲಿ ಮೋಸ, ನಕಲಿ ಉತ್ಪನ್ನಗಳು ಹೆಚ್ಚಿವೆ.
ಮಣ್ಣುಮುಟ್ಟದ ವ್ಯಾಪಾರಿಗಳು, ಸಂಸ್ಥೆಗಳಿಗೆ ದೊಡ್ಡ ಲಾಭ ಹೋಗುತ್ತಿದೆ. ರೈತರಿಗಿಂತ ಸಾವಯವ ಪ್ರಮಾಣ ಪತ್ರ ನಂಬುವ ವರ್ಗ ದೊಡ್ಡದಿದೆ. ರೈತರಿಗೆ ನೆರವಾಗಬೇಕಾದ
ಪರಿಸರಸ್ನೇಹಿ ಸಾವಯವ ದಾರಿಯಲ್ಲಿ ಸುಲಿಗೆಕೋರರ ಸಾಲು ಹೆಚ್ಚಿ ವಿಶ್ವಾಸ ಕಡಿಮೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಕೃಷಿ ಮಾರ್ಗವೇ ಅಪ್ಪಟ ನೈಸರ್ಗಿಕವಾದ
ಕಾಡು ತೋಟದ ಫಲ, ಉತ್ಪನ್ನಗಳನ್ನು ಬಳಕೆದಾರರಿಗೆ ಪರಿಚಯಿಸುವ ಕಾರ್ಯ ಮಹತ್ವದ್ದಾಗಿದೆ. ಗ್ರಾಹಕರಿಗೆ ತೋಟ ದರ್ಶನದ ಅವಕಾಶ ಒದಗಿಸಿ ನೇರ ನಿಶ್ಚಿತ ಮಾರುಕಟ್ಟೆ ಹೊಂದುವ ಮಾರ್ಗಗಳನ್ನು ಹುಡುಕಬೇಕಿದೆ.
ಕಾಡು ತೋಟ- 24: ಸ್ಪೆಸ್ ಟೂರಿಸಮ್- ಮಣ್ಣಿನ ಓದಿನ ಅರ್ಥ ವ್ಯವಸ್ಥೆ
ಶಿವಾನಂದ ಕಳವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.