ಎಂಎನ್‌ಪಿ ಪ್ರಯೋಗ; ಮೊಬೈಲ್‌ಗೆ ಬಂದಿದ್ದು ಬೇರೆಡೆ ಸಲ್ಲದೇ?
Team Udayavani, Jul 9, 2018, 4:47 PM IST
ಇವತ್ತಿಗೂ ಎಂಎನ್‌ಪಿ ಸೇವೆ ಸಂಪೂರ್ಣ ಸುಧಾರಿಸಿಲ್ಲ. ಒಮ್ಮೆಗೇ ಹೆಚ್ಚು ಗ್ರಾಹಕರು ಎಂಎನ್‌ಪಿಗೆ ಅಗತ್ಯವಾದ ವಿಶಿಷ್ಟ ಪೋರ್ಟಿಂಗ್ ಕೋಡ್-ಯುಪಿಸಿ ಸಂಖ್ಯೆಗೆ ಮನವಿ ಸಲ್ಲಿಸಿದರೆ ಅದು ಲಭ್ಯವಾಗದೆ ಹೋದ ಪ್ರಕರಣಗಳಿವೆ. ಯುಪಿಸಿ ಕೋಡ್‌ಗೆ ಸಲ್ಲಿಸುವ ಮನವಿಯ ಎಸ್‌ಎಂಎಸ್ ಉಚಿತವಾಗಿರಬೇಕು ಎಂಬ ನಿಯಮವಿದ್ದರೂ ಅದಕ್ಕೆ ಶುಲ್ಕ ತೆತ್ತ ಘಟನೆಗಳು ನಡೆದಿವೆ.
ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಟ್ರಾಯ್‌ನ ಬಗ್ಗೆ ಅರಿತವರು ಅದರ ಬಗ್ಗೆ ಸದಾ ಒಂದು ತಕರಾರು ಸಲ್ಲಿಸುತ್ತಾರೆ. ಬಹಳಷ್ಟು ವಿಚಾರಗಳಲ್ಲಿ ಟ್ರಾಯ್ ಕ್ಷಿಪ್ರವಾಗಿ ಕ್ರಮ ತೆಗೆದುಕೊಳ್ಳದೆ ಇರುವುದು, ಕೆಲವೊಂದು ವಿಚಾರದಲ್ಲಿ ಮೌನವಾಗಿರುವುದರಿಂದ ದೂರವಾಣಿ ಗ್ರಾಹಕರಿಗೆ ಹಲವು ರೀತಿಯಲ್ಲಿ ನ್ಯಾಯ ಸಿಗುತ್ತಿಲ್ಲ. ನಮ್ಮ ದೇಶದ ನಿಯಂತ್ರಣ ಪ್ರಾಧಿಕಾರಗಳಲ್ಲಿ ಬಹುತೇಕ ಎಲ್ಲಾ ಜನರ ಹಿತ ಕಾಯುವ ನಿಟ್ಟಿನಲ್ಲಿ ಟ್ರಾಯ್ ಒಂದಷ್ಟು ಶ್ಲಾಘನೀಯ ಸಾಧನೆಗಳನ್ನು ಮಾಡಿದೆ. ಮುಖ್ಯವಾಗಿ, ಅತ್ಯಂತ ಕೆಳ ಹಂತದ ಗ್ರಾಹಕನ ಸಮಸ್ಯೆಯ ಇತ್ಯರ್ಥಕ್ಕೆ ಮುಂದಾಗಿದೆ ಎಂಬುದು ಅದರ ಹೆಗ್ಗಳಿಕೆ. ಅದರಲ್ಲಿ ಮೊಬೈಲ್ ನಂಬರ್ ಪೋರ್ಟಬಿಲಿಟಿ ಅಲಿಯಾಸ್ ಎಂಎನ್‌ಪಿ ಒಂದು ಮಾಸ್ಟರ್ ಸ್ಟ್ರೋಕ್. ಈ ಒಂದು ಅವಕಾಶ, ಗ್ರಾಹಕ ಸೇವೆಯ ಗುಣಮಟ್ಟವನ್ನು ಹಲವು ಪಟ್ಟು ಹೆಚ್ಚಿಸುವಲ್ಲಿ ಸಹಕಾರಿಯಾಯಿತು. ಈ ಜುಲೈಗೆ ಎಂಎನ್‌ಪಿ ಪೂರ್ಣ ಪ್ರಮಾಣದಲ್ಲಿ ಬಂದು ಮೂರು ವರ್ಷಗಳಾಗಿವೆ. ಟ್ರಾಯ್ ಕೂಡ ಈ ಅವಕಾಶದಲ್ಲಿ ಈ ವ್ಯವಸ್ಥೆಯನ್ನು ಪುನರಾವಲೋಕಿಸಿ ಕೆಲವು ಬದಲಾವಣೆಗೆ ಹಿತಾಸಕ್ತರ ಪ್ರತಿಕ್ರಿಯೆ ಕೇಳಿತ್ತು. ಒಮ್ಮೆ ಹಿಂತಿರುಗಿ ನೋಡಲು ನಮಗೂ ಇದು ಸಕಾಲ!
ಹತ್ತು ವರ್ಷಗಳ ಹಿಂದಿನ ಹೊಳಹು!
2009ರಲ್ಲಿ ಟ್ರಾಯ್ ತಲೆಯಲ್ಲಿ ಮೂಡಿದ ವಿಚಾರ, ಚರ್ಚೆಗಳ ನಂತರ ನಿಯಮಗಳಾಗಿ ರೂಪ ತಳೆದು 2010ರ ನವೆಂಬರ್ 25ರಂದು ಕೇವಲ ಹರಿಯಾಣ ರಾಜ್ಯದಲ್ಲಿ ಪ್ರಯೋಗ ಸ್ವರೂಪದಲ್ಲಿ ಜಾರಿಗೆ ಬಂದಿತು. 2011ರ ಜವರಿ 20ರಂದು ಇಡೀ ದೇಶದಲ್ಲಿ ಎಂಎನ್‌ಪಿಗೆ ಅವಕಾಶ ಸಿಕ್ಕಿತಾದರೂ ಆರಂಭಿಕವಾಗಿ ಆಯಾ ನಂಬರ್‌ಗಳ ಸೇವಾ ಕ್ಷೇತ್ರದಲ್ಲಿ ಮಾತ್ರ ಅದು ಜಾರಿಯಾಯಿತು. ಎಂಎನ್‌ಪಿ ಎಂದರೆ, ನಮ್ಮ ನಿರ್ದಿಷ್ಟ ಮೊಬೈಲ್ ನಂಬರ್‌ಅನ್ನು ಬದಲಿಸದೆ ಸೇವಾದಾತರನ್ನು ಮಾತ್ರ ಬದಲಿಸಲು ಆಯ್ಕೆ ಇರುವ ಒಂದು ವಿಶಿಷ್ಟ ವ್ಯವಸ್ಥೆ. ಈವಿಚಾರ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ ಎಂಬ ಕಾರಣಕ್ಕೆ ಎಂ ಎನ್‌ಪಿ ಎಂದರೆ ಏನೆಂದು ಲೇಖನದ ಆರಂಭದಲ್ಲಿ ವಿವರಿಸಲು ಹೋಗಿಲ್ಲ. 2015ರ ಜುಲೈನಲ್ಲಿ ಈ ಪೋರ್ಟಬಿಲಿಟಿ ದೇಶದ ಯಾವುದೇ ಭಾಗದ ನಂಬರ್‌ಗೂ ಅನ್ವಯವಾಗುವಂತಾಯಿತು. ದೆಹಲಿಯಲ್ಲಿ ಚಾಲನೆಯಾದ ಸಿಮ್‌ಅನ್ನು ಕರ್ನಾಟಕದಲ್ಲಿ ಬಳಸುವ ಉದ್ಯೋಗಿ ಇಲ್ಲಿಯೇ ಸೇವಾದಾತರನ್ನು ಬದಲಿಸುವ ಆ ಅವಕಾಶ ಗ್ರಾಹಕನಿಗೆ ಅಪೂರ್ವವಾದ ಶಕ್ತಿಯನ್ನು ಕೊಟ್ಟಿತು. ಈ ವರ್ಷದ ಏಪ್ರಿಲ್ ಅಂತ್ಯಕ್ಕೆ 377.55 ಮಿಲಿಯನ್ ದೂರವಾಣಿ ಚಂದಾದಾರರು ತಮ್ಮ ಮೂಲ ಸೇವಾದಾತರನ್ನು ಬಿಟ್ಟು, ಹೊಸ ಮೊಬೈಲ್ ಕಂಪನಿಯ ಸೇವೆಗೆ ತೆರಳಲು ಅನುಮತಿ ಪಡೆದಿದ್ದಾರೆ.
ಬರೀ ಏಪ್ರಿಲ್ ಒಂದು ತಿಂಗಳಲ್ಲಿಯೇ 6.73 ಮಿಲಿಯನ್ ಎಂಎನ್‌ಪಿ ಬೇಡಿಕೆ ಬಂದಿದೆ ಎಂದರೆ ಸೇವಾದಾತರು ಹೆಚ್ಚು ಎಚ್ಚರದಿಂದ ಇರುವಂತೆ ಮಾಡಲು ಇದು ಉಪಯೋಗವಾಗುತ್ತದೆ ಎಂದು ಭಾವಿಸಬಹುದು. ಕೊನೇ ಪಕ್ಷ, ಆ ಗ್ರಾಹಕ ಸೇವಾ ಗುಣಮಟ್ಟದಿಂದ ಬೇಸತ್ತು ಹೋಗಿ ಕಂಪನಿ ಬದಲಿಸುವ ಅವಕಾಶ ಸಿಕ್ಕಿರುವುದು ಬಿಡುಗಡೆಯ ನಿಟ್ಟುಸಿರು ಬಿಡಲಂತೂ ಸಾಕಾಗುತ್ತದೆ.
ಇವತ್ತಿಗೂ ಎಂಎನ್‌ಪಿ ಸೇವೆ ಸಂಪೂರ್ಣ ಸುಧಾರಿಸಿಲ್ಲ. ಒಮ್ಮೆಗೇ ಹೆಚ್ಚು ಗ್ರಾಹಕರು ಎಂಎನ್‌ಪಿಗೆ ಅಗತ್ಯವಾದ ವಿಶಿಷ್ಟ ಪೋರ್ಟಿಂಗ್ ಕೋಡ್-ಯುಪಿಸಿ ಸಂಖ್ಯೆಗೆ ಮನವಿ ಸಲ್ಲಿಸಿದರೆ ಅದು ಲಭ್ಯವಾಗದೆ ಹೋದ ಪ್ರಕರಣಗಳಿವೆ. ಯುಪಿಸಿ ಕೋಡ್‌ಗೆ ಸಲ್ಲಿಸುವ ಮನವಿಯ ಎಸ್‌ಎಂಎಸ್ ಉಚಿತವಾಗಿರಬೇಕು ಎಂಬ ನಿಯಮವಿದ್ದರೂ ಅದಕ್ಕೆ ಶುಲ್ಕ ತೆತ್ತ ಘಟನೆಗಳು ನಡೆದಿವೆ ಮತ್ತು ಅದು ಟ್ರಾಯ್ ಗಮನಕ್ಕೆ ಬಂದಿದೆ.
ಎಂಎನ್‌ಪಿ ಬೇಡಿಕೆ ಸಲ್ಲಿಸಿ ಯುಪಿಸಿ ಪಡೆದ 24 ಘಂಟೆಯೊಳಗೆ ಗ್ರಾಹಕ ಮನಸ್ಸು ಬದಲಿಸಿ ಈ ಹಿಂದಿನ ಸೇವಾದಾತರನ್ನೇ ಆಯ್ದುಕೊಳ್ಳುವ ಅವಕಾಶ ಕಲ್ಪಿಸಲಾಗಿದ್ದರೂ ಇತ್ತ ಮೂಲ ಕಂಪನಿಯೂ ಸೇವೆ ಕಡಿತಗೊಳಿಸಿ, ಅತ್ತ ಹೊಸ ಕಂಪನಿಗೂ ಸೇರ್ಪಡೆ ಆಗಲಾಗದೆ ತ್ರಿಶಂಕು ಸ್ವರ್ಗ ಅನುಭವಿಸಿದ ಉದಾಹರಣೆಗಳು ಕೂಡ ಯಥೇತ್ಛ.
ನಿಯಮದ ಹಿಂದೆ ಸಮಸ್ಯೆಯ ಜಮಾ!
ಇನ್ನೊಮ್ಮೆ ಫ್ಲಾಶ್‌ಬ್ಯಾಕ್‌ಗೆ ಹೋಗಬೇಕು. 24 ಘಂಟೆಗಳಲ್ಲಿ ಎಂಎನ್‌ಪಿ ಪ್ರಕ್ರಿಯೆಗಳು ಮುಗಿದು ಗ್ರಾಹಕ ಹೊಸ ಕಂಪನಿಯ ಸಿಮ್ ಪಡೆದು ಮಾತು ಆರಂಭಿಸುವಂತಾಗಬೇಕು ಎಂಬುದು ಟ್ರಾಯ್ ಉದ್ದೇಶವಾಗಿತ್ತು. ನಂತರದಲ್ಲಿ ಇದು ಅವಾಸ್ತವ ಎಂದು ಅರ್ಥ ಮಾಡಿಕೊಂಡ ಟ್ರಾಯ್ 24 ಘಂಟೆಯಿಂದ ನಾಲ್ಕು ದಿನಗಳ ಅವಧಿಗೆ ಈ ಸಮಯಮಿತಿಯನ್ನು ಹೆಚ್ಚಿಸಿತು. ಈ ನಿಯಮಗಳು ಜಮ್ಮು ಕಾಶ್ಮೀರ, ಅಸ್ಸಾಂ, ಉತ್ತರ ಪೂರ್ವ ಭಾರತದ ಕೆಲವೆಡೆ ಭಿನ್ನವಾಗಿವೆ ಎಂಬುದು ನೆನಪಿರಲಿ. ಇಂಥವು ಸಂಕೀರ್ಣ ಸಮಸ್ಯೆಗಳೇನಲ್ಲ. ಆದರೆ, 2012ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ಕೆಲವು ಕಾನೂನುಬಾಹಿರ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕೆಲವು ಸೇವಾದಾತರ ನಿರ್ದಿಷ್ಟ ಲೈಸೆನ್ಸ್‌ಗಳನ್ನು ರದ್ದುಗೊಳಿಸಿತು. ಈ ವೇಳೆ ಸದರಿ ಸೇವಾದಾತರ ಮೂಲಕ ಚಂದಾದಾರರಾಗಿ ತಮ್ಮ ಗುರುತಿನ ಮೊಬೈಲ್ ನಂಬರ್‌ಗಳನ್ನು ಪಡೆದವರ ಗತಿ ಹದಗೆಟ್ಟಿತ್ತು. ಅವರಲ್ಲಿ ಹಲವರು ಲೈಸೆನ್ಸ್ ರದ್ದಾದ ಕಂಪನಿಗೆ ಎಂಎನ್‌ಪಿ ಮಾಡಿಕೊಂಡು 90 ದಿನ ಪೂರೈಸಿರಲಿಲ್ಲ. ಆ ಕಾಲದಲ್ಲಿದ್ದ ಕಾನೂನಿನ ಪ್ರಕಾರ ಅವರು ಮತ್ತೂಂದು ಬಾರಿ ಈ ಷರತ್ತು ಅವಧಿಗೆ ಮುನ್ನ ಎಂಎನ್‌ಪಿಯನ್ನು ಮಾಡಿಕೊಳ್ಳುವಂತಿಲ್ಲ. ಟ್ರಾಯ್ ಇಂತಹ ಸಂದರ್ಭವನ್ನು ಗಂಭೀರವಾಗಿ ಪರಿಗಣಿಸಿ ಅಂತಹ ನಂಬರ್‌ಗೆ ಎಂಎನ್‌ಪಿ ಸೌಕರ್ಯವನ್ನು ವಿಶೇಷವಾಗಿ ಕಲ್ಪಿಸುವ ತಿದ್ದುಪಡಿಯನ್ನು ಜೂನ್ 2012ರಲ್ಲಿ ತಂದಿದ್ದು ಗಮನಾರ್ಹ.
ಇದೇ ರೀತಿ ಎಂಎನ್‌ಪಿ ಪ್ರಕ್ರಿಯೆಯಲ್ಲಿ ತಪ್ಪೆಸಗಿದ ಕಂಪನಿಗಳಿಗೆ ದಂಡ ವಿಧಿಸುವ ಮತ್ತೂಂದು ನೀತಿ 2012ರ ಸೆಪ್ಟೆಂಬರ್‌ನಲ್ಲಿ ಜಾರಿಗೆ ಬಂದಿತು. ಕಾರ್ಪೊರೇಟ್ ನಂಬರ್‌ಗಳ ಹೋಲ್‌ಸೇಲ್ ಎಂಎನ್‌ಪಿ 2013ರಲ್ಲಿ ಜಾರಿಗೆ ಬಂದಿತು. ಒಂದೇಟಿಗೆ 50 ನಂಬರ್‌ಗಳಿಗೆ ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಪûಾಂತರ ಮಾಡುವ ಸದಾವಕಾಶ ಕೊಡಲಾಯಿತು. ವಾಸ್ತವವಾಗಿ 2017ರ ಸೆಪ್ಟೆಂಬರ್‌ನಲ್ಲಿ ಯುಪಿಸಿ ಪ್ರಕ್ರಿಯೆಯ ದೋಷಗಳನ್ನು ಸರಿಪಡಿಸಲು ದೂರವಾಣಿ ನಿಯಂತ್ರಣ ಪ್ರಾಧಿಕಾರ ಒಂದು ಕರಡನ್ನು ಹೊರಡಿಸಿತು. ಈ ವೇಳೆ ಎಲ್ಲ ಹಿತಾಸಕ್ತರಿಂದ ಬಂದ ಪ್ರತಿಕ್ರಿಯೆಗಳ ನಂತರ, ಟ್ರಾಯ್‌ಗೆ ಈ ವ್ಯವಸ್ಥೆಯನ್ನು ಇನ್ನಷ್ಟು ಆಮೂಲಾಗ್ರವಾಗಿ ತಿದ್ದುಪಡಿ ಮಾಡಬೇಕಾದ ಅಗತ್ಯವಿದೆ ಎಂಬುದು ಮನದಟ್ಟಾಯಿತು. ತತ್ಪರಿಣಾಮವಾಗಿ ಮೊನ್ನೆ ಏಪ್ರಿಲ್‌ನಲ್ಲಿ ಇಡೀ ಎಂಎನ್‌ಪಿ ಕುರಿತ ತಿದ್ದುಪಡಿ ಕರಡನ್ನು ಹೊರಡಿಸಿತು.
ಆಳಕ್ಕಿಳಿದಾಗಲೇ ಅರ್ಥವಾಗುವ ಸಮಸ್ಯೆಗಳ ಅಳತೆ!
ಹಲವು ಮುಖ್ಯ ಅಂಶಗಳಿದ್ದವು. ಈವರೆಗೆ ತನ್ನದಲ್ಲದ ನಂಬರ್‌ಗೂ ಸಿಮ್ ಹೊಂದಿದ್ದು ಯುಪಿಸಿ ಪಡೆಯುವ ಗ್ರಾಹಕ ಹೊಸ ಸೇವಾದಾತರಿಗೆ ತನ್ನ ಕೆವೈಸಿ ದಾಖಲೆಗಳನ್ನು ಕೊಟ್ಟರೆ, ಆ ನಂಬರ್‌ಗೆ ಆತ ಒಡೆಯನಾಗುತ್ತಿದ್ದ. ಇದು ಎಂಎನ್‌ಪಿಯ ದೊಡ್ಡ ದೋಷ. ಇದರಿಂದ ಅಸಲಿಯತ್ತಾಗಿ ಸದರಿ ನಂಬರ್‌ನ ಒಡೆಯನಾದವ, ದಾಖಲೆಗಳಲ್ಲಿ ಅದನ್ನು ಬಳಸಿಕೊಂಡವ ಮತ್ತೆ ಆ ನಂಬರ್ ಪಡೆಯಲಿಕ್ಕೇ ಆಗದ ಸನ್ನಿವೇಶ ನಿರ್ಮಾಣವಾಗಬಹುದು. ಎಂಎನ್‌ಪಿ ಆಗುವ ಗ್ರಾಹಕನ ಟಾಕ್‌ಟೈಮ್ ವರ್ಗಾವಣೆಯಾಗುವುದಿಲ್ಲ. ಇದೇ ಕಾರಣದಿಂದ ಎಂಎನ್‌ಪಿಯನ್ನು ಮುಂದೆ ಹಾಕುವ ಅನಿವಾರ್ಯತೆ ಮೂಡಬಹುದು. ಒಂದೊಮ್ಮೆ ಟಾಕ್‌ಟೈಮ್ ಆಸೆ ಬಿಟ್ಟು ಎಂಎನ್‌ಪಿ ಆಗುವವನ ಹಣ, ಆ ಕಂಪನಿಗೆ ಸೇವೆ ನೀಡದೆ ಲಭಿಸುವುದು ಕೂಡ ಸಮರ್ಥನೀಯವಲ್ಲ. ಮೊಬೈಲ್ ನಂಬರ್ ಜೊತೆ ಗ್ರಾಹನ ಟಾಕ್‌ಟೈಮ್ ಕೂಡ ವರ್ಗಾಯಿಸುವ ವಿಚಾರವನ್ನು ಕೂಡ ಟ್ರಾಯ್ ಚರ್ಚೆಗಿಟ್ಟಿದೆ.
ಈವರೆಗೆ ನಂಬರ್ ತರಿಸಿ ನಾನಾಕಾರಣಗಳಿಂದ ಬಳಕೆಯಾಗದೆ ಕಂಪನಿಗಳಿಗೆ 65.13 ಮಿಲಿಯನ್ ನಂಬರ್‌ಗಳು ವಾಪಾಸಾಗಿವೆ ಎಂಬುದು ಭಿನ್ನವಾದ ಅಂಕಿಅಂಶ. ಆದರೆ ಈ ಏಳು ವರ್ಷಗಳಲ್ಲಿ ಮೂಲ ಕಂಪನಿಯಿಂದ ಎಂಎನ್‌ಪಿಯಾದ 5.26 ಗ್ರಾಹಕ ಸಂಖ್ಯೆಗಳು ಬಿಲ್ ಪಾವತಿಯಾಗದ ಕಾರಣ ಸಂಪರ್ಕ ಕಡಿತಕ್ಕೊಳಗಾಗಿವೆ.
ಈ ನಂಬರ್‌ಗಳನ್ನು ಎಡಬಿಡಂಗಿ ಮಾಡದೆ ಆರು ತಿಂಗಳ ಅವಧಿಯ ನಂತರ ಮೂಲ ಕಂಪನಿಗೆ ಮರಳಿಸುವ ಉದ್ದೇಶವನ್ನು ಟ್ರಾಯ್ ಹೊಂದಿದೆ.
ಟ್ರಾಯ್‌ನ ಕಳೆದ ಹತ್ತು ಹನ್ನೆರಡು ವರ್ಷಗಳ ನಿಯಮ, ನಿರ್ದೇಶನಗಳನ್ನು ಗಮನಿಸಿದರೆ ಅದು ವ್ಯಕ್ತ. ಅದರಿಂದ ಹೆಚ್ಚಿನದನ್ನು ನಾವು ನಿರೀಕ್ಷಿಸುತ್ತೇವೆ. ಅದು ಸಹಜ. ಆದರೆ ಇಂಥದೊಂದು ಮಹತ್ವದ ಕರಡಿಗೆ ಇಡೀ ದೇಶದಿಂದ ಕೇವಲ 13 ಪ್ರತಿಕ್ರಿಯೆಗಳು ಬಂದಿವೆ ಎಂಬುದು ನಿರಾಶಾದಾಯಕ ವಿಚಾರ. ಅದರಲ್ಲೂ ಕೇವಲ ಐದು, ಗ್ರಾಹಕ ಸಂಘಟನೆಗಳ ಪ್ರತಿಪಾದನೆಯಾದರೆ ಉಳಿದವು ಸೇವೆ ಸಲ್ಲಿಸುತ್ತಿರುವ ಕಂಪನಿಗಳದ್ದು. ಜನರ ಭಾಗವಹಿಸುವಿಕೆಯಲ್ಲಿ ಸುಧಾರಣೆಯಾಗದಿದ್ದರೆ ಹೊಸ ಮನ್ವಂತರವನ್ನು ಕಾಣುತ್ತೇವೆ ಎಂಬ ಮಾತು ಕೇವಲ ಸಿನಿಕತನವಾಗುತ್ತದೆ.
ಹೆಚ್ಚು ಕ್ಷೇತ್ರಗಳಲ್ಲಿ ಎನ್‌ಪಿ ಬರಬೇಕಲ್ಲವೇ?
ಒಂದಕ್ಕಿಂತ ಹೆಚ್ಚು ಸೇವಾದಾತರು ಲಭಿಸುವ ಕ್ಷೇತ್ರಗಳಲ್ಲಿ ನಂಬರ್ ಪೋರ್ಟಬಿಲಿಟಿಯ ವಿಶೇಷ ಅವಕಾಶವನ್ನು ಕಲ್ಪಿಸುವುದು ಸೇವಾ ಗುಣಮಟ್ಟದ ವೃದ್ಧಿಗೆ ಪರೋಕ್ಷ ಪ್ರಚೋದನೆಯನ್ನು ನೀಡುವಂತಾಗುತ್ತದೆ. ಹಾಗಾಗಿ, ನಾವು ಪೋರ್ಟಬಿಲಿಟಿಯನ್ನು ಸ್ವಾಗತಿಸೋಣ. ಇದು ಹೆಚ್ಚು ಸುಲಭವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬರಬಹುದಾಗಿದೆ. ಡೈರೆಕ್ಟ್ ಟು ಹೋಮ್ ಸೇವೆಯಲ್ಲಿ ಇಂತಹ ಬದಲಾವಣೆಯ ತುರ್ತು ಇದೆ. ವೈಯುಕ್ತಿಕ ವಿಮಾ ಕ್ಷೇತ್ರದಲ್ಲಿ ಇದು ಬರಬೇಕು. ಈಗಾಗಲೇ ಎಲ್‌ಪಿಜಿ ಗ್ಯಾಸ್ ಸೌಕರ್ಯಕ್ಕೆ ಈ ಸೌಲಭ್ಯ ಇದ್ದರೂ ಅದು ಬಳಕೆಯಾಗದಿರುವುದು ಕಾಣುತ್ತದೆ. ಮೋಟಾರ್ ವಾಹನ ವಿಮೆಯಲ್ಲಿ ನೋ ಕ್ಲೈಮ್ ಬೋನಸ್ ಸಮೇತ ವಿಮಾ ಕಂಪನಿ ಬದಲಿಸುವ ಅನುಕೂಲವಿದೆ. ಇದೇನೇ ಇರಲಿ, ಸೇವೆ ಎಂದ ತಕ್ಷಣ ನಾವು ಆರಿಸಿ ಕಳಿಸುವ ಜನಪ್ರತಿನಿಧಿಯನ್ನು ಬದಲಿಸುವ “ಎಂಎನ್‌ಪಿ’ ಮಾತ್ರ ಯಾವತ್ತೂ ಸಿಗದು!
-ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.