ಮೈಲಾರಿ ಮಹಾತ್ಮೆಗೆ ಎಪ್ಪತ್ತು ವರ್ಷ!
Team Udayavani, Dec 18, 2017, 3:37 PM IST
ಮೈಸೂರಿಗೆ ಕಾಲಿಟ್ಟಾಗ, ಹೊಟ್ಟೆ ತಾಳ ಹಾಕಲು ಶುರುವಾದರೆ ಪ್ರತಿಯೊಬ್ಬರಿಗೂ ಜ್ಞಾಪಕಕ್ಕೆ ಬರುವುದು ಈ ಮೈಲಾರಿ ಹೋಟೆಲ್. ಒಂದು ಸಲ ಇಲ್ಲಿನ ಮಸಾಲೆ ದೋಸೆ ತಿಂದು ಹೋದರೆ, ಮೈಸೂರಿಗೆ ಬಂದಾಗೆಲ್ಲಾ ಹಸಿವು ಆಗುತ್ತಲೇ ಇರುತ್ತದೆ. ಮಸಾಲೆ
ದೋಸೆ ಬೇಕು ಅನಿಸುತ್ತಲೇ ಇರುತ್ತದೆ. ಹೌದು, ಮೈಲಾರಿ ಹೋಟೆಲಿನ ಮಸಾಲೆ ದೋಸೆಯ ಖದರೇ ಹಾಗೇ. ಮೈಸೂರಿಗೂ ಮಾಲ್ ಸಂಸ್ಕೃತಿ ಕಾಲಿಟ್ಟು, ಹತ್ತಾರು ತಾರಾ ಹೋಟೆಲ್‌ಗಳು ತಲೆಎತ್ತಿರಬಹುದು, ಆದರೆ, ನಜರ್‌ಬಾದ್ ಮುಖ್ಯ ರಸ್ತೆಯಲ್ಲಿರುವ ಈ ಮೈಲಾರಿ ಹೋಟೆಲ್ ಇಂದಿಗೂ ತನ್ನತನವನ್ನು ಉಳಿಸಿಕೊಳ್ಳುವ ಮೂಲಕ ಗ್ರಾಹಕರ ಅಚ್ಚುಮೆಚ್ಚಿನ ಹೋಟೆಲ್ ಎನಿಸಿದೆ. ಈ ಹೋಟೆಲ್ ಅನ್ನು 70 ವರ್ಷಗಳ ಹಿಂದೆ ಮೈಲಾರಸ್ವಾಮಿ ಅವರು ಆರಂಭಿಸಿದರು. ಈಗ ಅವರ ಮಗ ರಾಜಶೇಖರ್ ಮತ್ತು ಮೊಮ್ಮಗ ಉಜ್ವಲ್ ನೋಡಿಕೊಳ್ಳುತ್ತಾರೆ. ಮಸಾಲೆ ದೋಸೆ, ಇಡ್ಲಿ, ಅದಕ್ಕೆ ಕಾಯಿ ಚಟ್ನಿ, ಕಾಫಿ-ಟೀ ಮಾತ್ರ ಇಲ್ಲಿ ಲಭ್ಯ. ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ನಂತರ ಮಧ್ಯಾಹ್ನ 3 ರಿಂದ ರಾತ್ರಿ 8ಗಂಟೆವರೆಗೆ ಬಿಸಿಬಿಸಿ ಮಸಾಲೆ ದೋಸೆ ಲಭ್ಯ.
ಸೆಲೆಬ್ರಿಟಿಗಳಿಗೆ ಅಚ್ಚುಮೆಚ್ಚು
ಈ ಹೋಟೆಲ್ ಚಿಕ್ಕದಾದರೂ ಅಲ್ಲಿನ ರುಚಿಗೆ ಮನಸೋಲದವರೇ ಇಲ್ಲ. ಮೈಸೂರು ಮೃಗಾಲಯಕ್ಕೆ ಸಮೀಪದಲ್ಲಿರುವುದರಿಂದ
ಪ್ರವಾಸಿಗರು ಆಗಾಗ ಬಂದು, ಮಸಾಲೆ ದೋಸೆ ತಿಂದು ಬಾಯಿ ಚಪ್ಪರಿಸಿಕೊಂಡು ಹೋಗುತ್ತಾರೆ. ಹೋಟೆಲ್ ಆರಂಭವಾದ ಈ 70ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಹತ್ತಾರು ನಟರು, ನೂರಾರು ವಿದೇಶಿ ಪ್ರವಾಸಿಗರು ಇಲ್ಲಿನ ಮಸಾಲೆ ದೋಸೆ, ಇಡ್ಲಿ ಸವಿದಿದ್ದಾರೆ. ಮಾತ್ರವಲ್ಲ, ಈ ಹೋಟೆಲ್‌ನ ಮಸಾಲೆ ದೋಸೆ, ಇಡ್ಲಿಯ ರುಚಿಗೆ ಮಾರುಹೋಗಿ ಮೈಸೂರಿಗೆ ಬಂದಾಗೆಲ್ಲಾ ಮೈಲಾರಿ
ಹೋಟೆಲ್‌ಗೆ ಬಂದು ಮಸಾಲೆ ದೋಸೆ, ಇಡ್ಲಿ ಸವಿದು ಹೋಗುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ.
ಹಿಂದೆ ಮೈಲಾರಸ್ವಾಮಿ ಅವರ ಕಾಲದಲ್ಲಿ ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ ಕುಮಾರ್ ಸೇರಿದಂತೆ ಹಲವು ನಟ-ನಟಿಯರು ಈ ಹೋಟೆಲ್‌ಗೆ ಬಂದು ದೋಸೆ, ಇಡ್ಲಿ ತಿಂದು ಹೋಗಿದ್ದಾರೆ. ಈಗ ಸ್ಯಾಂಡಲ್‌ವುಡ್‌ನ ಸ್ಟಾರ್ ಗಳಾದ ಪುನೀತ್ ರಾಜ್ ಕುಮಾರ್, ಸುದೀಪ್, ಉಪೇಂದ್ರ ಮೊದಲಾದವರೆಲ್ಲ ಬಂದು ಸಾಮಾನ್ಯ ಗ್ರಾಹಕರಂತೆ ಕುಳಿತು ಮೈಲಾರಿ ಹೋಟೆಲ್‌ನ ಗರಿಗರಿಯಾದ ಮಸಾಲೆ ದೋಸೆ, ಇಡ್ಲಿ ತಿಂದು ಮೆಚ್ಚುಗೆ ವ್ಯಕ್ತಪಡಿಸಿ ಹೋಗಿದ್ದಾರಂತೆ.
ಮೈಲಾರಿ ಹೋಟೆಲ್‌ನ ಜನಪ್ರಿಯತೆಯಿಂದಾಗಿ ಮೈಸೂರಿನಲ್ಲಿ ನಾಲ್ಕಾರು ಮೈಲಾರಿ ಹೋಟೆಲ್‌ಗಳು ತಲೆ ಎತ್ತಿವೆ. ಆದರೆ, ಈ
ಮೈಲಾರಿ ಹೋಟೆಲ್‌ನ ಯಾವುದೇ ಬ್ರಾಂಚ್ ಆರಂಭಿಸಿಲ್ಲ. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ ಅನ್ನುತ್ತಾರೆ ರಾಜಶೇಖರ್. “ನಮ್ಮ ಹೋಟೆಲಿನ ಜನಪ್ರಿಯತೆ ಹೆಚ್ಚಾಗಿದೆ ಅಂತ ಗುಣಮಟ್ಟದಲ್ಲಿ ನಾವು ಯಾವತ್ತೂ ರಾಜಿ ಮಾಡಿಕೊಂಡಿಲ್ಲ. ನಮ್ಮ ತಂದೆ ಕಾಲದಿಂದ ಯಾವ ರೀತಿ ಗುಣಮಟ್ಟದ ತಿಂಡಿಗಳಿಗೆ ಹೆಸರಾಗಿತ್ತೋ ಈಗಲೂ ಅದೇ ಗುಣಮಟ್ಟ ಉಳಿಸಿಕೊಂಡು ಬಂದಿದ್ದೇವೆ. ಅದಕ್ಕಾಗಿಯೇ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ’ ಎನ್ನುತ್ತಾರೆ ಮಾಲೀಕ ರಾಜಶೇಖರ್ .
ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.