ಕಟ್ಟಡ ನಿರ್ಮಾಣಕ್ಕೆ ಬೇಕು ಕಂಬಿ, ಕರಣೆ, ಸುತ್ತಿಗೆ !
Team Udayavani, Apr 2, 2018, 5:41 PM IST
ಕಟ್ಟಡ ನಿರ್ಮಾಣದಲ್ಲಿ ಏನೆಲ್ಲಾ ಬದಲಾವಣೆಗಳಾಗಿದ್ದರೂ, ಕರಣೆ, ಕಂಬಿ, ಸುತ್ತಿಗೆಗೆ ಪರ್ಯಾಯವಾಗಿ ಯಾವ ವಸ್ತುವೂ ಬಂದಿಲ್ಲ. ಗಾರೆ ಕೆಲಸದವರು ಕರಣೆಯನ್ನು ಹೇಗೆ ಉಪಯೋಗಿಸುತ್ತಾರೆ ಎಂಬುದನ್ನು ಗಮನಿಸಿಯೇ ಕಟ್ಟಡ ಅಂದ ಚೆಂದದ ಬಗ್ಗೆ ಭವಿಷ್ಯ ಹೇಳಿಬಿಡಬಹುದು…
ಉತ್ತಮ ಸಲಕರಣೆಗಳು ಇದ್ದಷ್ಟೂ ಗುಣಮಟ್ಟದ ಮನೆ ನಿರ್ಮಾಣಕ್ಕೆ ಅನುಕೂಲವಾಗುತ್ತದೆ. ಕೆಲಸಗಾರರು ಕೆಲವೊಮ್ಮೆ ಮನೆಯ ಯಜಮಾನರನ್ನು ವಿವಿಧ ಸಲಕರಣೆಗಳನ್ನು ತರಲು ಕೇಳಿದರೆ ಅವು ಏನು? ಅವೆಲ್ಲಾ ಏತಕ್ಕೆ ಬೇಕಾಗುತ್ತದೆ ಎಂದು ತಿಳಿಯದೆ ತಬ್ಬಿಬ್ಟಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಆದುದರಿಂದ ಮನೆ ಕಟ್ಟಲು ಬೇಕಾಗಿರುವ ಕೆಲ ಮೂಲ ಸಲಕರಣೆಗಳ ಕುರಿತು ಪರಿಚಯ ಮಾಡಿಕೊಂಡಿರುವುದು ಒಳ್ಳೆಯದು.
ಪಾಯದ ಸಲಕರಣೆಗಳು: ಮನೆ ಕಟ್ಟುವ ಕೆಲಸವನ್ನು ಶುರುಮಾಡುವುದು ಅದರ ತಳಪಾಯ ಗುರುತು ಹಾಕಿ, ಮಣ್ಣು ಅಗೆಯುವ ಮೂಲಕವೇ ಆಗಿರುತ್ತದೆ. ಸಾಮಾನ್ಯವಾಗಿ ಮನೆಯ ಅನೇಕ ಭಾಗಗಳು “ಮೂಲೆ ಮಟ್ಟಕ್ಕೆ’ ಅಂದರೆ “ರೈಟ್ ಆ್ಯಂಗಲ್’ ತೊಂಭತ್ತು ಡಿಗ್ರಿ ಕೋನದಲ್ಲಿ ಗೋಡೆಗಳು ಒಂದಕ್ಕೊಂದು ಇದ್ದು ಚೌಕಾಕಾರವಾಗಿರುವುದರಿಂದ,
ದೊಡ್ಡದಾದ ತ್ರಿಕೋನದಂತಿರುವ ಈ ಸಲಕರಣೆ ಇಟ್ಟುಕೊಂಡೇ ಕಟ್ಟಡದ ಕೆಲಸವನ್ನು ಶುರು ಮಾಡುವುದು. ನಿವೇಶನಗಳು ನಾನಾ ಕಾರಣಗಳಿಂದಾಗಿ ಚೌಕಾಕಾರವಾಗಿರುವುದಿಲ. ಹಾಗಾಗಿ ಸೈಟಿನ ವಿವಿಧ ಮೂಲೆಗಳು ಎಷ್ಟೆಷ್ಟು ಸೊಟ್ಟಗಿದೆ ಎಂದು ನೋಡಿ, ಅದಕ್ಕೆ ಹೊಂದುವ ಹಾಗೆ ಮನೆಯ ಪ್ಲಾನ್ ಅನ್ನು ನಿರ್ಧರಿಸುವಲ್ಲಿಯೂ ಮೂಲೆ ಮಟ್ಟ ಮುಖ್ಯವಾಗುತ್ತದೆ.
ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಸರ್ವೆ ಸಲಕರಣೆಗಳ ಮೂಲಕವೇ ಕೋನಗಳನ್ನು ನಿರ್ಧರಿಸಲಾಗುತ್ತದೆ. ಹಿಂದೆಲ್ಲಾ ಮೂಲೆಮಟ್ಟ ಟೀಕ್ ಮರದಿಂದ ಮಾಡಿದ ಮೂರರಿಂದ ನಾಲ್ಕು ಅಡಿ ಅಳತೆಯದಾಗಿರುತ್ತಿತ್ತು. ಈಗೀಗ ಕೇವಲ ಎರಡು ಅಡಿಯ “ಎಲ್’ ಆಕಾರದ ಉಕ್ಕಿನ ಮೂಲೆಮಟ್ಟವೂ ಹೆಚ್ಚು ಜನಪ್ರಿಯವಾಗುತ್ತಿದೆ.
ನೂಲು ದಾರ, ಕಂಬಿ- ಮೊಳೆ: ಯಾವುದೇ ಕಟ್ಟಡ ಕಟ್ಟುವಾಗ “ನೇರ’ ನೋಡಲು ಬಳಸುವ ಸಲಕರಣೆ ಅತಿ ಅಗ್ಗದ್ದು ಎನ್ನಬಹುದಾದ ಗಟ್ಟಿಮುಟ್ಟಾದ ದಾರವೇ ಆಗಿರುತ್ತದೆ. ಮನೆಕಟ್ಟುವಾಗ ದುಬಾರಿ ಸರ್ವೆ ಸಲಕರಣೆಗಳ ಬಳಕೆ ಕಡಿಮೆ ಇರುವ ಕಾರಣ, ದಿನನಿತ್ಯದ ಬಳಕೆಗೆ ಒಂದಷ್ಟು ದಾರ ಇದ್ದರೆ ನೇರ ನೋಡಿಕೊಂಡು ಗುಣಮಟ್ಟ ಕಾಯ್ದುಕೊಳ್ಳಬಹುದು. ಹತ್ತು ಇಪ್ಪತ್ತು ಅಡಿಯ ನೇರ ನೋಡಲು ಸಣ್ಣದೊಂದು ನೂಲು ದಾರದ ಉಂಡೆ ಸಾಕಾದರೂ,
ಇಡೀ ಮನೆಯನ್ನು ಗುರುತು ಹಾಕಲು ಹತ್ತಾರು ಉಂಡೆಗಳು ಬೇಕಾಗಬಹುದು. ಇವುಗಳನ್ನು ಇತ್ತೀಚಿನ ದಿನಗಳಲ್ಲಿ ಸಣ್ಣ ಪ್ಲಾಸ್ಟಿಕ್ ದಾರಗಳಿಂದ ಮಾಡಿರುವುದರಿಂದ, ಒಂದೊಂದಕ್ಕೆ ಕೇವಲ ಹತ್ತಾರು ರೂ ಆಗುವುದರಿಂದ, ನಿವೇಶನದಲ್ಲಿ ಉರಿಬಿಸಿಲಿನಲ್ಲಿ ನಿಂತು ದಾರಗಳನ್ನು ಬಿಚ್ಚಿ ಕಟ್ಟಿ ಮಾಡುವ ಬದಲು, ಒಂದಾದಮೇಲೆ ಮತ್ತೂಂದನ್ನು ಕಟ್ಟುತ್ತ ಹೋದರೆ, ಕೆಲಸ ಶೀಘ್ರ ಆಗುವುದರ ಜೊತೆಗೆ ಮಾರ್ಕ್ ಕೂಡ ಸ್ಪಷ್ಟವಾಗಿ ಕಾಣುತ್ತದೆ.
ಮೊಳೆ, ಕಂಬಿ ಸಲಕರಣೆಗಳು: ಮೊಳೆಗಳು ಸೂಜಿ ಗುಂಡಿನ ಸೈಜಿನಿಂದಒಂದು ಅಡಿ ಉದ್ದದವರೆಗೂ ಸಿಗುತ್ತವೆ. ಸಾಮಾನ್ಯವಾಗಿ ಮೊಳೆಗಳನ್ನು ಉದ್ದವನ್ನು ಮಾರ್ಕ್ ಮಾಡಲು ಬಳಸಲಾಗುತ್ತದೆ. ಅತಿ ಸಣ್ಣವನ್ನು ಮರಗೆಲಸದಲ್ಲಿ “ಫಿನಿಶ್’ ಮಾಡಲು ಉಪಯೋಗಿಸಲಾಗುತ್ತದೆ. ಮಿಕ್ಕಂತೆ ಎರಡು ಮೂರು ಇಂಚಿನ ಮೊಳೆಗಳನ್ನು ಮರಗೆಲಸದಲ್ಲಿ ಬಳಸಲಾಗುತ್ತದೆ.
ಈ ಹಿಂದೆ ಮೊಳೆ ಎಂದರೆ ಅದನ್ನು ಮೃದುವಾದ ವಸ್ತುವಿನೊಳಗೆ ಹೊಕ್ಕು ಹಿಡಿಯಲು – ಗ್ರಿಪ್‌ಗೆ ಎಂದಾಗಿದ್ದರೂ ಈಗ ಗಟ್ಟಿಮುಟ್ಟಾದ “ಮೇಸನರಿ’ ಗೋಡೆ ಮೊಳೆಗಳು ಲಭ್ಯವಿದ್ದು, ಇವನ್ನು ಇಟ್ಟಿಗೆ ಇಲ್ಲವೇ ಕಾಂಕ್ರಿಟ್ ಗೋಡೆಗಳಿಗೆ ನೇರವಾಗಿ ಹೊಡೆಯಬಹುದಾಗಿದೆ! ಈ ಮೊಳೆಗಳನ್ನು ಟೆಂಪರ್ – ಗಟ್ಟಿಗೊಳಿಸಿದ ಉಕ್ಕಿಗೆ ವಿವಿಧ ಲೋಹಗಳ ಮಿಶ್ರಣವನ್ನೂ ಮಾಡಿರುವುದರಿಂದ ಸುಲಭದಲ್ಲಿ ಇವು ಬಾಗುವುದೂ ಇಲ್ಲ.
ಸುತ್ತಿಗೆಗಳು: ಸಣ್ಣ ಮೊಳೆ ಹೊಡೆಯಲು ನೂರು ಗ್ರಾಮ್ ತೂಕದ ಸುತ್ತಿಗೆ ಬಳಸಬೇಕಾಗಿದ್ದರೆ, ಮೇಸನರಿ ಮೊಳೆ ಹೊಡೆಯಲು ಕಡೇ ಪಕ್ಷ ಒಂದು ಕೆ.ಜಿ ಭಾರದ ಸುತ್ತಿಗೆಯಾದರೂ ಬೇಕಾಗುತ್ತದೆ. ಅದೇರೀತಿಯಲ್ಲಿ, ಕಂಬಿ ಕತ್ತರಿಸಲು, ಕಲ್ಲು ಒಡೆಯಲು ನಾಲ್ಕಾರು ಕೆ.ಜಿ ಭಾರದ ಸ್ಲೆಡ್ಜ್ ಹ್ಯಾಮರ್ ಎಂಬ ದೊಡ್ಡ ಸುತ್ತಿಗೆಯನ್ನು ಬಳಸಲಾಗುತ್ತದೆ. ಸಣ್ಣ ಸುತ್ತಿಗೆಯನ್ನು ಒಂದೇ ಕೈಯಲ್ಲಿ ಎತ್ತಿ ಹೊಡೆಯಬಹುದಾದರೂ, ಚಮಟಿಯನ್ನು ಎರಡೂ ಕೈಯಲ್ಲಿ ಎತ್ತಿ ಪ್ರಯೋಗಿಸಬೇಕಾಗುತ್ತದೆ. ಆಯಾ ಕೆಲಸಕ್ಕೆ ಅದಕ್ಕೆ ಹೊಂದುವಂತಹ ಸಲಕರಣೆಗಳನ್ನು ಬಳಸುವುದು ಅತ್ಯಗತ್ಯ.
ಕರಣೆ – ಟ್ರೊವೆಲ್: ಮನೆ ಕಟ್ಟುವ ಗಾರೆ ಕೆಲಸದವರ ಕೈಯ ಮುಂದುವರಿದ ಭಾಗವೇ ಏನೋ ಎಂಬಂತಿರುವ ಕರಣೆಗೂ ಸಾವಿರಾರು ವರ್ಷದ ಇತಿಹಾಸವಿದೆ. ಕಟ್ಟಡ ಕಟ್ಟುವಿಕೆಯಲ್ಲಿ ಏನೇನೋ ಬದಲಾವಣೆಗಳು ಬಂದಿದ್ದರೂ ಇಂದಿಗೂ ಕರಣೆ ತನ್ನ ಸ್ಥಾನಮಾನವನ್ನು ಬಿಟ್ಟುಕೊಟ್ಟಿಲ್ಲ. ಉತ್ತಮ ಕರಣೆಯಿಂದ ಉತ್ತಮ ಗುಣ ಮಟ್ಟ ಸುಲಭವಾಗುವ ರೀತಿಯಲ್ಲೇ ಅದನ್ನು ಅಷ್ಟೇ ಚೆನ್ನಾಗಿ ಬಳಸಬಲ್ಲ ಗಾರೆಯವರ ಅಗತ್ಯವು ಇರುತ್ತದೆ. ಕರಣೆಯನ್ನು ಹೇಗೆ ಚಲಾಯಿಸುತ್ತಾರೆ ಎಂಬುದನ್ನು ನೋಡಿ ಅವರ ಕೌಶಲ್ಯವನ್ನು ಅಳೆಯಲಾಗುತ್ತದೆ.
ನಾಲ್ಕಾರು ವರ್ಷ ಕರಣೆ ಉಪಯೋಗಿಸಿದ್ದರೆ, ಅವರ ಕೈಯ ಒಂದು ಭಾಗವೇ ಆಗಿಹೋಗುವ ಈ ಸಲಕರಣೆ ಅವರು ಹೇಳಿದಂತೆ ಕೇಳುತ್ತ, ಉತ್ತಮ ಗುಣ ಮಟ್ಟದ ಕಟ್ಟಡ ಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮನೆ ಕಟ್ಟಲು ನೂರಾರು ಸಲಕರಣೆಗಳನ್ನು ಬಳಸಲಾಗುತ್ತದೆ, ಅವುಗಳಲ್ಲಿ ಕೆಲವದರ ಬಗ್ಗೆ ಹಾಗೂ ಅವು ಹೇಗೆ ಕಾರ್ಯ ನಿರ್ವಸುತ್ತವೆ ಎಂಬುದನ್ನು ತಿಳಿದುಕೊಂಡರೆ, ಇತರೆ ಟೂಲ್ಸ್ ಗಳನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ!
* ಆರ್ಕಿಟೆಕ್ಟ್ ಕೆ. ಜಯರಾಮ್
ಹೆಚ್ಚಿನ ಮಾತಿಗೆ: 98441 32826
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.