ಕೆರೆಮರೆಯ ಸಂಧಾನ
ನೀರ ಸೆಲೆಗಳು ಇಲ್ಲವಾಗುತ್ತಿರುವ ಹೊತ್ತಿನಲ್ಲಿ...
Team Udayavani, Aug 19, 2019, 5:00 AM IST
ಇಂಜಿನಿಯರಿಂಗ್, ಮೆಡಿಕಲ್ ಉನ್ನತ ಶಿಕ್ಷಣ ಪಡೆದವರು ಹಳ್ಳಿ ಹಳ್ಳಿಯಲ್ಲಿದ್ದಾರೆ. ಕೆರೆದಂಡೆಯ ರಸ್ತೆ ಬಳಸುತ್ತ ಶಿಕ್ಷಣಯಾನ ಸಾಗಿದೆ. ಎಲ್ಲರ ಗೆಲುವಿನ ಹಿಂದೆ ನೀರ ನೆಮ್ಮದಿ ನೀಡಿದ ಕೆರೆಗಳ ಕೊಡುಗೆಯಿದೆ. ಶಾಲೆ ಓದದ ಮಂದಿ ರಾಜ್ಯದ ಮೂಲೆ ಮೂಲೆಗಳಲ್ಲಿ ಕೆರೆ ನಿರ್ಮಿಸಿ ಬದುಕು ನೀಡಿದ್ದಾರೆ, ಊರು ಕಟ್ಟಿದ್ದಾರೆ. 1700 ವರ್ಷಗಳ ಕೆರೆ ನಿರ್ಮಾಣದ ಭವ್ಯ ಪರಂಪರೆಯ ನಮ್ಮ ಕರುನಾಡಿನಲ್ಲಿ, ಕೆರೆಗಳೆಂಬ ನೀರಮ್ಮನ ನಾಡಿಮಿಡಿತ ಬಲ್ಲವರು ಎಷ್ಟು ಜನರಿದ್ದಾರೆ?
“ಊರಾಗ ಒಂದು ಕೆರೆ ಐತಿ, ನೋಡಾಕ ಬರ್ರೀ…’ ಜಲ ಕಾಯಕ ಶುರುಮಾಡಿದ ಎರಡು ದಶಕಗಳಲ್ಲಿ ಕೆರೆ ವೀಕ್ಷಣೆಗೆ ಕರೆದವರು ಹಲವರು. ಹೂಳು ಭರ್ತಿಯಾಗಿ ಜಾಲಿಕಂಟಿಗಳ ಬೀಡಾದ ಕೆರೆಯಂಗಳ ತೋರಿಸುತ್ತ “ಸರಕಾರಿ ಕೆರಿಯಾಗ ಕಸ ತುಂಬೈತ್ರಿ’ ಎಂದಿದ್ದಾರೆ. ಹೊಸ ಹುಡುಗರಿಗೆ ಕೆರೆ ದಾರಿ ಅಪರಿಚಿತ. ಅಲ್ಲೊಬ್ಬರು ಇಲ್ಲೊಬ್ಬರು ಜನಜೀವನ ಇತಿಹಾಸಗಳನ್ನು ಕೆರೆಗಳ ಮೂಲಕ ಕಂಡವರು. ಓದು ಬಲ್ಲವರಿಂದ ಕಳಚಿಕೊಂಡು ಕುರಿ ಕಾಯುವವರು, ದನ ಕಾಯುವವರು, ವಡ್ಡರು, ಕೃಷಿಕರು, ನೇಕಾರರು, ಕಮ್ಮಾರರು, ಕುಂಬಾರರ ಜೊತೆ ನಿಂತರೆ ಕೆರೆ ಬಗ್ಗೆ ಕಣ್ಮುಚ್ಚಿ ಮಾತಾಡಬಲ್ಲವರು. ನೀರಗಂಟಿಗಳು, ದೇಗುಲದ ಅರ್ಚಕರು, ಶಾನಭೋಗರು, ಮೀನುಗಾರರು… ಹುಡುಕುತ್ತ ಹೋದರೆ, ಕೆರೆ ಮಾರ್ಗದರ್ಶನಕ್ಕೆ ಜನ ಸಿಗುತ್ತಾರೆ. ಅಕ್ಷರದ ಪರಿಚಯವಿಲ್ಲದವರು ಜೀವ ಜಲ ವ್ಯವಸ್ಥೆ ನಿರ್ಮಿಸಿ, ನಿರ್ವಹಿಸಿದ ಸೇವಕರು. ಪ್ರತಿ ನಿತ್ಯ ಕೆರೆ ನೋಡುತ್ತ, ಆಸುಪಾಸು ಓಡಾಡುತ್ತ ಬೆಳೆದವರು, ಕೆರೆ ಕೌತುಕದ ಜನಪದ ಕಥೆ ಹೇಳುವ ತಜ್ಞರು. ಓದು ಬಲ್ಲವರಲ್ಲಿ ಅಜ್ಞಾನವೆಂಬುದು ಕೆರೆ ಕಳೆಗಿಂತ ಭೀಕರವಾಗಿ ಮನದ ದಂಡೆ ದಡಗಳನ್ನು ಹಬ್ಬುತ್ತಾ ಕೊಳವೆ ಬಾವಿಯ ಅಂಚಿಗೆ ನಿಂತಿದೆ.
ಲೆಕ್ಕಕ್ಕೆ ಸಿಗದಷ್ಟು ಕೆರೆಗಳಿವೆ
20 ವರ್ಷಗಳಲ್ಲಿ ನೋಡಿದ ಕೆರೆಗಳು ಸಾವಿರಾರು. ಕೆರೆ ಇತಿಹಾಸ, ನಿರ್ಮಾಣ ಸ್ಥಳ, ವಿನ್ಯಾಸ ವಿಶೇಷಗಳು ಹಲವು. ಕಳೆದ ವರ್ಷ ಸತತ ಐದಾರು ತಿಂಗಳ ಸುತ್ತಾಟದಲ್ಲಿ 18 ಜಿಲ್ಲೆಗಳ 700ಕ್ಕೂ ಹೆಚ್ಚು ಕೆರೆಗಳು ಮಾತಿಗೆ ಸಿಲುಕಿವೆ. ಬಯಲುಸೀಮೆ, ಮಲೆನಾಡು, ಅರೆಮಲೆನಾಡು, ಕರಾವಳಿ ಸೀಮೆಗಳಲ್ಲಿ ದಾಖಲಿಸಿದ ಸಹಸ್ರಾರು ಕೆರೆಗಳ ಚಿತ್ರ ಕಣ್ಣೆದುರು ಬಂದಾಗೆಲ್ಲ ಜನಜೀವನದ ನಾಡಿಮಿಡಿತ ಕಾಣಿಸುತ್ತಿದೆ. ನೀರಾವರಿ ಇಲಾಖೆಯ ಟ್ಯಾಂಕ್ ರಿಜಿಸ್ಟರ್ ದಪ್ತರ್‌ನ ತಾಂತ್ರಿಕ ದಾಖಲೆ ಹೊರತಾಗಿ ಜನಮನದ ಅನುಭವಗಳಲ್ಲಿ ಕೆರೆಗಳ ಭವ್ಯ ಚರಿತೆಯಿದೆ. ರಾಜರು, ರಾಣಿಯರು, ದಂಡನಾಯಕರು, ವಿಧವೆಯರು, ವೇಶ್ಯೆಯರು ನಿರ್ಮಿಸಿದ ಕೆರೆ ಹುಡುಕುತ್ತ ಹೊರಟರೆ ಯಾರೂ ಓದದ “ಕೆರೆ ಭಾರತ’ ಕರುನಾಡಿನ ಕೆರೆಗಳಲ್ಲಿ ಹೂತು ಹೋಗಿದೆ. ಸರಕಾರಿ ಲೆಕ್ಕಕ್ಕೆ ಸಿಗುವ ಸಣ್ಣ ನೀರಾವರಿ ಇಲಾಖೆಯ 38,608 ಕೆರೆಗಳಿವೆ. ಆಡಳಿತದ ಅನುಕೂಲಕ್ಕೆ ವಿಭಾಗಿಸಿದ ಜಿಲ್ಲಾ ಪಂಚಾಯತ್, ಅರಣ್ಯ ಇಲಾಖಾ ವ್ಯಾಪ್ತಿಯ ಕೆರೆಗಳನ್ನು ನೋಡುತ್ತ ಹೋದರೆ ಜಲವಿಶ್ವ ದರ್ಶನವಾಗುತ್ತದೆ. ಕೇಂದ್ರೀಕೃತ ನೀರಾವರಿ ವ್ಯವಸ್ಥೆಯ ಅತ್ಯುತ್ತಮ ಮಾದರಿಯಾಗಿ ಕೆರೆಕಟ್ಟೆಗಳು ಮೈದಳೆದಿವೆ.
ಜನಜೀವನ, ಕೃಷಿ ಬದುಕು ನೀರಿನ ಮೇಲೆ ನಿಂತಿದೆ. ನಮ್ಮ ಪುಟ್ಟ ಗ್ರಾಮಗಳು ಬದುಕು ಕಂಡಿದ್ದು ನದಿ, ಹಳ್ಳಗಳಲ್ಲಾದರೂ ಕೊನೆಗೆ ಸ್ಥಿರವಾಗಿ ನಿಂತದ್ದು ಕೆರೆಗಳ ಸುತ್ತವೇ! ಹತ್ತು ಕೆರೆಗಳ ನೀರು ಕುಡಿದ ಬಳಿಕವೇ ಅನುಭವ ಬೆಳೆದಿದೆ. ನೈಸರ್ಗಿಕ ಮೂಲ ಸ್ವರೂಪದಲ್ಲಿ ಅತ್ಯಂತ ಶಕ್ತಿಶಾಲಿಯಾದ ನೀರನ್ನು ಕೆರೆ, ಬಾವಿಗಳಲ್ಲಿ ಹಿಡಿದು ಪಳಗಿಸಿದ ಮನುಕುಲದ ಕಲ್ಯಾಣದ ಪರಿಕಲ್ಪನೆ ಮಹತ್ವದ್ದಾಗಿದೆ. ಊರ ಜನರ ಮಧ್ಯೆ ಸಾಕಾರಗೊಂಡ ಕಟ್ಟೆಯಲ್ಲಿ ನೀರ ನೆಮ್ಮದಿ ಕಾಣಿಸಿದ್ದು ಮೇಲ್ನೋಟಕ್ಕೆ ಜನಪದರ ಸರಳ ವಿದ್ಯೆ. ಆದರೆ ಸೂಕ್ತ ಜಾಗ ಆಯ್ಕೆ, ನಿರ್ಮಾಣ, ನಿರಂತರ ನಿರ್ವಹಣೆಗೆ ಸಮುದಾಯ ಹೆಗಲು ನೀಡಿದ ಸೂತ್ರ ತಾಂತ್ರಿಕತೆಗಿಂತ ಮಹತ್ವದ್ದಾಗಿದೆ. ಸತತ ಬರ, ಜಲಕ್ಷಾಮದಲ್ಲಿ ಸಂಕಟ ಅನುಭವಿಸಿದವರು ಮಣ್ಣಿನ ಮಾರ್ಗದಲ್ಲಿ ಗುದ್ದಾಡಿ ಗೆದ್ದಿದ್ದಾರೆ. ಕೆರೆಗಳ ನೀರು ನಂಬಿಯೇ ಅಲೆಮಾರಿ ಜೀವಗಳಿಗೆ ನಿಶ್ಚಿತ ವಿಳಾಸ ಒದಗಿ ಕೃಷಿ ಸಂಸ್ಕೃತಿ ಅರಳಿದೆ.
ನೀರಿನ ಕಥನ ಮತ್ತು ಕದನ
ನಾಳೆ ಏನಾಗುತ್ತದೆಂದು ಇಂದು ನೀರು ನೋಡಿ ಅರಿಯಬಹುದಾ? ಸಾಧ್ಯವಿದೆ. ಇದಕ್ಕೆ ಪೂರಕವಾಗಿ ತೋಡಿನಾಗಮ್ಮ ಮಹಾಸತಿ ಆಚರಣೆಯ ಕಥನವಿದೆ. ಹೊಲದಲ್ಲಿ ಹತ್ತಿ ಬಿಡಿಸುತ್ತಿದ್ದ ನಾಗಮ್ಮ ಬಾಯಾರಿಕೆಯಿಂದ ನೀರು ಹುಡುಕುತ್ತಾಳೆ. ಕೈಯಿಂದ ಮರಳು ಬಗೆಯುತ್ತ ತಗ್ಗು ತೆಗೆಯುತ್ತಾಳೆ. ಅಲ್ಲಿ ನೀರು ಬರುವ ಬದಲು ರಕ್ತ ಕಾಣಿಸಿತಂತೆ! ಆ ಕ್ಷಣದಲ್ಲಿ ನಾಗಮ್ಮನಿಗೆ ದಂಡಿಗೆ ಹೋದ ಗಂಡ ಯುದ್ಧದಲ್ಲಿ ಸಾವನ್ನಪ್ಪಿದ ಸುದ್ದಿ ತಿಳಿಯುತ್ತದೆ. ಪಂಚಭೂತಗಳಲ್ಲಿ ಒಂದಾದ ನೀರಿನ ನಂಬಿಕೆಯಲ್ಲಿ ನಾಡು ನಡೆದ ದಾರಿಯನ್ನು ಜನಪದ ಕಥನ ಸಾರುತ್ತಿದೆ. ನೀರು ಭವಿಷ್ಯವನ್ನು ಹೇಗೆ ಬರೆಯುತ್ತಿದೆಯೆಂದು ಇಂದಿನ ಪರಿಸ್ಥಿತಿ ಕೂಡಾ ಹೇಳುತ್ತಿದೆ. ರಾಜ್ಯದ ಅರ್ಧದಷ್ಟು ಜಿಲ್ಲೆಗಳು ಮಳೆ ಪ್ರವಾಹದಲ್ಲಿ ಮುಳುಗಿವೆ. ಇನ್ನುಳಿದ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿ ಟ್ಯಾಂಕರ್‌ಗಳು ಓಡುತ್ತಿವೆ. ಜನರ ಬದುಕು ಮುಳುಗಿಸಿದ ಇದೇ ಪ್ರವಾಹದ ಒಂದಿಷ್ಟು ನೀರು ಕೆರೆಯಲ್ಲಿ ನಿಂತರೆ, ನಾಳೆ ಊರು ಬದುಕಲು ನೆರವಾಗುತ್ತದೆ. ನೀರ ನಡೆಯಲ್ಲಿ ಎಂಥ ವಿಸ್ಮಯವಿದೆ!
ಸಾಹೇಬ್ರಾ… ಕೆರೆ ಕಾಡಾಗೈತಿ!
ರಾಯಚೂರಿನ ಹಟ್ಟಿ ಚಿನ್ನದ ಗಣಿಯಿಂದ ತುಸು ದೂರದ ಗುಡ್ಡದ ಮೇಲೆ ಕೆರೆಯಿದೆ. ಹಳ್ಳ, ಹೊಳೆಗಳಿಲ್ಲದ ಊರಿಗೆ ಗುಡ್ಡದಲ್ಲಿ ಮಳೆ ನೀರು ಹಿಡಿಯುವ ಪ್ರಯತ್ನವಿದು. ಮಳೆಯಿಲ್ಲದೆ, ಕೆರೆ ಭರ್ತಿಯಾಗದೆ ಹಲವು ವರ್ಷಗಳಾಗಿವೆ. ಜಾಲಿಕಂಟಿಗಳು ಕೆರೆಯಂಗಳ, ದಂಡೆ, ಕಾಲುವೆಗಳನ್ನು ಆವರಿಸಿವೆ. ಕೆರೆ ವೀಕ್ಷಣೆಗೆ ದಂಡೆಯಲ್ಲಿ ನಿಂತಿದ್ದಾಗ ನಗಲೂರು ಶಾಂತಮ್ಮ (66) ಎದುರಾದರು. “ಸಾಹೇಬ್ರ ಕೆರೆ ಕಾಡಾಗೈತಿ. ಇದರಾಗ ನೀರು ತುಂಬಿದಾಗ ಬಟ್ಟೆ ತೊಳೆದ್ವಿ, ದನಕರುಗೆ ಕುಡಿಸಿದ್ವಿ, ಕೃಷಿ ಮಾಡಿದ್ವಿ. ಕೆರೆಯ ಈ ದಂಡ್ಯಾಗ ನನ್ ತವರು ಮನಿ, ಆ ತುದಿಯಾಗ ಗಂಡನ ಮನಿ. ತವರಿಗೂ ಮನೆಗೂ ಐವತ್ತು ವರ್ಸ್‌ದಿಂದ ಈ ಕೆರೆದಂಡ್ಯಾಗ ನಡದೀನಿ… ಈಗ ಕುಲಗೆಟ್ಟು ಕಂಟಿ ಬೆಳೆದೈತಿ’ ಕೆರೆಯ ಸ್ಥಿತಿಯನ್ನು ಮನಮುಟ್ಟುವಂತೆ ಪರಿಚಯಿಸಿದಳು. ಶಾಂತಮ್ಮರ ತವರನ್ನು ಹಾಗೂ ಗಂಡನ ಮನೆಯನ್ನು ರೇನಗನೂರು ಕೆರೆ ಜೋಡಿಸಿದ ಉದಾಹರಣೆಯಲ್ಲಿ ಮನಮುಟ್ಟುವ ಸಾಕ್ಷಿಯಿದೆ.
ನಾಡು ನೀರಿನ ವಿಚಾರದಲ್ಲಿ ಬಹಳ ಸೋತಿದೆ. ಗೆಲ್ಲುವ ದಾರಿ ಹುಡುಕಲು ನಿಶ್ಚಿತ ಜಲನಿಧಿಗಳಾದ ಕೆರೆಗಳು ನೆರವಾಗುತ್ತವೆ. ನಮ್ಮ ಓದು, ಪದಗಳಲ್ಲಿ ಕೆರೆ ಚರಿತ್ರೆಯ ಒಂದು ಸಾಲು ಕಾಣಿಸುತ್ತಿಲ್ಲ. ಮಳೆಯಲ್ಲಿ ಕೆರೆ ತುಂಬುತ್ತ ಬಂದಂತೆ ಕೃಷಿ ಖುಷಿ ಇಮ್ಮಡಿಸುವುದು, ಒಣಗುತ್ತ ಹೋದಾಗ ಜಲಸತ್ಯಗಳ ಅರಿವಾಗುತ್ತದೆ. ಕೆರೆಕಟ್ಟೆಯ ಚೌಕಟ್ಟಿನಲ್ಲಿ ನಮ್ಮ ಅನ್ನವಿದೆ, ಆರೋಗ್ಯವಿದೆ, ಶಿಕ್ಷಣವಿದೆ. ಹಕ್ಕಿಗಳ ಚಿಲಿಪಿಲಿ, ಹೂವಿನ ಪರಿಮಳ, ತೆನೆ ತೋರಣಕ್ಕೆಲ್ಲ ಕೆರೆಯ ಕಾರಣಗಳಿವೆ. ಜಗತ್ತು ನೋಡಲು ಸಂಪರ್ಕ ಮಾಧ್ಯಮ ಎಲ್ಲರ ಕೈಯಲ್ಲಿವೆ. ನಮಗೆ ಜೀವದ ಕಣ್ಣು ಕೊಟ್ಟ ಕೆರೆಗಳ ಜಲದ ಕಣ್ಣು ಈಗ ಮುಚ್ಚಿ ಹೋಗಿದೆ. ಶಸ್ತ್ರಚಿಕಿತ್ಸೆ ತುರ್ತಾಗಿ ನಡೆಯಬೇಕು. ಊರಿನ ಕೆರೆ ಕಾಳಜಿಯ ಕೇಂದ್ರಕ್ಕೆ ಕಾಲುದಾರಿಯ ಕಾರ್ಯಕರ್ತರು ಬೇಕು.
ಮುಂದಿನ ಭಾಗ- ಕರುನಾಡಿನ ಕೆರೆ ಯಾತ್ರೆ- 2. ಕೆರೆಕಟ್ಟೆಗೆ ಜೀವ ಬಲಿ!
-ಶಿವಾನಂದ ಕಳವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.