ಹೊಸತು ಹೊಸತು ಬರುತಿದೆ…
Team Udayavani, Feb 10, 2020, 1:10 PM IST
ಸಾಂಧರ್ಬಿಕ ಚಿತ್ರ
ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಹೊಸ ವಸ್ತುಗಳ ಅವಿಷ್ಕಾರ ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು? ಎಂಬುದೇ ಅನೇಕ ಸಾರಿ ಸವಾಲಾಗಿ ಬಿಡುತ್ತದೆ. ಕೆಲವೊಮ್ಮೆ ಹೊಸ ವಸ್ತುಗಳು ಬಲುಬೇಗನೇ ಜನರನ್ನು ಆಕರ್ಷಿಸುತ್ತವೆ. ಇನ್ನು ಕೆಲವು, ವರ್ಷಗಳು ಕಳೆದರೂ ಹೆಚ್ಚು ಜನಪ್ರಿಯ ಆಗುವುದಿಲ್ಲ!
ಆಯಾ ಕಾಲಕ್ಕೆ, ಜನರಿಗೆ ಹತ್ತಿರ ಆಗುವ ವಸ್ತುಗಳು ಬೇಗ ಜನಪ್ರಿಯವಾಗುತ್ತವೆ ಎಂದು ಹೇಳಬಹುದು. ಬೇರೆಯವರು ಉಪಯೋಗಿಸುತ್ತಿದ್ದಾರ ಎಂಬ ಏಕೈಕ ಕಾರಣಕ್ಕೆ ನಾವು ಹೊಸ ವಸ್ತುಗಳನ್ನು ಬಳಸುವ ಬದಲು ಅವುಗಳ ಗುಣ- ಅವಗುಣಗಳನ್ನು ತಿಳಿದುಕೊಂಡು, ನಮಗೆ ಹೇಗೆ ಉಪಯುಕ್ತ ಎಂಬುದನ್ನು ನಿರ್ಧರಿಸಿ ಮುಂದುವರಿಯುವುದು ಸೂಕ್ತ. ಜೊತೆಗೆ, ನಮ್ಮ ಬಜೆಟ್‌ಗೆ ಸರಿಹೊಂದುತ್ತದೆಯೇ? ಎಂಬುದನ್ನೂ ಮುಖ್ಯವಾಗಿ ಗಮನಿಸಬೇಕಾಗುತ್ತದೆ.
ವೈವಿಧ್ಯಮಯ ನೆಲ ಹಾಸುಗಳು : ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಅನ್ನುವಷ್ಟು ವಿವಿಧ ಮಾದರಿಯ ಹಾಗೂ ವಿನ್ಯಾಸದ ಟೈಲ್ಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯ. ಯಾವುದನ್ನುಆಯ್ದುಕೊಳ್ಳಬೇಕು? ಎಂಬುದೇ ತಲೆನೋವು. ಒಂದಕ್ಕಿಂತ ಮತ್ತೂಂದು ವರ್ಣರಂಜಿತವಾಗಿಯೂ, ಆಕರ್ಷಕವಾಗಿಯೂ ಇರುತ್ತದೆ. ಬೆಲೆಗಳೂ ಒಂದಕ್ಕೊಂದು ಸಂಬಂಧ ಇಲ್ಲವೇನೋ ಎನ್ನುವ ರೀತಿಯಲ್ಲಿ ಹೆಚ್ಚು ಅಥವಾ ಕಡಿಮೆ ಇರುತ್ತದೆ. ಕಡಿಮೆ ಬೆಲೆಯದ್ದು ತೆಗೆದುಕೊಂಡರೆ ಅದು ಸರಿಯಾಗಿಕಾರ್ಯ ನಿರ್ವಹಿಸದಿದ್ದರೆ? ಎಂಬ ಆತಂಕ ಇರುತ್ತದೆ. ಹಾಗೆಯೇ ದುಬಾರಿ ಬೆಲೆ ತೆರುವುದಕ್ಕೂ ಹಣಕಾಸಿನ ಲೆಕ್ಕಾಚಾರ ನೋಡಬೇಕಾಗುತ್ತದೆ. ಇನ್ನು ಅವು ದಪ್ಪ, ಸಣ್ಣಕ್ಕಿದ್ದರೂ ಬೆಲೆಗಳಲ್ಲಿ ವ್ಯತ್ಯವಿರುತ್ತದೆ. ಇನ್ನು ಕೆಲವೊಮ್ಮೆ ತೆಳ್ಳಗಿದ್ದರೂ ಬೆಲೆ ಹೆಚ್ಚಿರುತ್ತದೆ!
ಕ್ಲಿಷ್ಟಕರ ವಿನ್ಯಾಸ : ಎಲ್ಲರಿಗೂ ಅವರವರದೇ ಆದ ಆಯ್ಕೆ ಇರುತ್ತದೆ. ಕೆಲವರಿಗೆ ತೆಳು ಬಣ್ಣಗಳು ಇಷ್ಟವಾದರೆ, ಮಿಕ್ಕವರಿಗೆ ಗಾಢವಾದ ಬಣ್ಣಗಳು ಇಷ್ಟ ಆಗಬಹುದು. ಹಾಗೆಯೇ ಕೆಲವರು ವಿನ್ಯಾಸದಲ್ಲೂ ಸರಳವಾದುದನ್ನು ಇಷ್ಟಪಟ್ಟರೆ, ಮಿಕ್ಕವರು “ಹೇಗಿದ್ದರೂ ಕಾಸು ಕೊಡುತ್ತಿದ್ದೇವೆ, ಅದೇ ಬೆಲೆಗೆ ಹೆಚ್ಚು ವಿನ್ಯಾಸದ ಟೈಲ್ಸ್ ಸಿಕ್ಕರೆ, ಏಕೆ ಬಿಡಬೇಕು?’ ಎಂದು, ಇರುವುದರಲ್ಲಿ ಹೆಚ್ಚು ಕ್ಲಿಷ್ಟವಾದ ವಿನ್ಯಾಸವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ಮಾಡುವುದು ತಪ್ಪಲ್ಲದಿದ್ದರೂ, ನಮ್ಮ ಆಯ್ಕೆಯ ಟೈಲ್ಸ್‌ಅನ್ನು ಎಲ್ಲಿ ಮತ್ತು ಎಷ್ಟು ಉಪಯೋಗಿಸಬೇಕು? ಎಂಬುದನ್ನು ನಿರ್ಧರಿಸಿದರೆ, ಒಮ್ಮೆ ಹಾಕಿದ ಮೇಲೆ ಎಡವಟ್ಟು ಆಗುವುದನ್ನು ತಪ್ಪಿಸಬಹುದು.
ಬಾರ್ಡರ್ ಲೆಕ್ಕಾಚಾರ : ಕೆಲವೊಮ್ಮೆ ಗಾಢವಾದ ಬಣ್ಣ ಇಷ್ಟವಾದರೆ, ಅದನ್ನು ಇರುವ ಸಣ್ಣ ಸ್ಥಳದಲ್ಲಿ ಉಪಯೋಗಿಸಿದರೆ, ಸ್ಥಳ ಎಲ್ಲಿ ಚಿಕ್ಕದಾಗಿ ಕಾಣಿಸುತ್ತದೋ ಎಂಬ ಆತಂಕ ಇರುತ್ತದೆ. ಅಂಥ ಸಮಯದಲ್ಲಿ, ಈ ಗಾಢಬಣ್ಣದ ಟೈಲ್ಸ್‌ಗಳನ್ನು ಬಾರ್ಡರ್‌ನಂತೆ ಉಪಯೋಗಿಸಿದರೆ, ನಮಗೆ ಇಷ್ಟವಾದ ಟೈಲ್ಸ್ ಹೆಚ್ಚು ಎದ್ದು ಕಾಣುವುದರ ಜೊತೆಗೆ, ನಮ್ಮ ಕೋಣೆ ಮತ್ತೂ ವಿಶಾಲವಾಗಿ ಕಾಣಲು ಸಹಾಯಕವಾಗುತ್ತದೆ. ಹೀಗೆ ಬಾರ್ಡರ್ ನೀಡುವಾಗ ಬಣ್ಣಗಳ ಕಾಂಟ್ರಾಸ್ಟ್ ಇಲ್ಲವೇ ಕಾಂಪ್ಲಿಮೆಂಟರಿ- ಸರಿಹೊಂದುವಂತೆಯೂ ಮಾಡಿದರೆ, ಬಣ್ಣಗಳ ಮೆರಗು ಮತ್ತೂ ಹೆಚ್ಚುತ್ತದೆ.
ಮೇಂಟೆನೆನ್ಸ್ ಬಗ್ಗೆ ಗಮನ ವಹಿಸಿ : ಅನೇಕ ಬಾರಿ ದುಬಾರಿ ಹಾಗೂ ವೈವಿಧ್ಯಮಯ ಟೈಲ್ಸ್‌ಗಳನ್ನು ನೋಡಿಕೊಳ್ಳುವುದೇ ದೊಡ್ಡ ತಲೆನೋವಾಗಿ ಬಿಡುತ್ತದೆ. ಸ್ವಲ್ಪ ಗೀರುಗಳು ಬಂದರೂ, ಢಾಳಾಗಿ ಎದ್ದು ಕಾಣಿಸಿಬಿಡುತ್ತದೆ. ಆದುದರಿಂದ ನಾವು ಟೈಲ್ಸ್‌ಗಳನ್ನು ಆಯ್ದುಕೊಳ್ಳಬೇಕಾದರೆ, ಸುಲಭವಾಗಿ ಶುದ್ಧಗೊಳಿಸಿ ಕಾಪಾಡಿಕೊಳ್ಳಬಹುದಾದಂಥ ವಿನ್ಯಾಸ ಹಾಗೂ ಮಾದರಿಯನ್ನು
ಅಳವಡಿಸಿಕೊಳ್ಳಬೇಕು. ಟೈಲ್ಸ್‌ಗಳು ದೊಡ್ಡದಾದಷ್ಟೂ ಅವು ಬಿರುಕು ಬಿಡುವ ಸಾಧ್ಯತೆ ಹೆಚ್ಚು. ಜೊತೆಗೆ, ಒಂದು ಕಡೆ ಸ್ವಲ್ಪ ಮುರಿದರೂ ಇಡೀ ಬಿಲ್ಲೆಯನ್ನು ತೆಗೆದು ಹೊಸದನ್ನು ಹಾಕಬೇಕಾಗುತ್ತದೆ. ಜೊತೆಗೆ ಅದೇ ಮಾದರಿಯ ಟೈಲ್ಸ್ ಮತ್ತೆ ಸಿಗುತ್ತದೆ ಎಂಬ ಖಾತರಿ ಏನೂ ಇರುವುದಿಲ್ಲ. ಆದುದರಿಂದ ನಮ್ಮ ಮನೆಯಲ್ಲಿ ಎಲ್ಲೆಲ್ಲಿ ಹೆಚ್ಚು ಒಡೆಯುವ ಸ್ಥಳಗಳು ಇರುತ್ತವೋ ಅಲ್ಲೆಲ್ಲ, ಸಣ್ಣಗಾತ್ರದ ಟೈಲ್ಸ್‌ಗಳನ್ನು ಹಾಕುವುದು ಒಳ್ಳೆಯದು.
ಫರ್ನಿಚರ್- ಪೀಠೊಪಕರಣಗಳನ್ನು ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಆಗಿಂದಾಗ್ಗೆ ಬದಲಾಯಿಸುವ ಅಭ್ಯಾಸ ಇದ್ದರೆ, ಒಂದು ತೊಂದರೆ ಸಾಮಾನ್ಯವಾಗಿ ಆಗಿಯೇ ಆಗುತ್ತದೆ. ಅವುಗಳನ್ನು ಎಳೆದು ಹಾಕುವಾಗ, ನೂಕುವಾಗ ನೆಲಕ್ಕೆ ಘಾಸಿ ಆಗುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ. ಹಾಗಾಗಿ ಅಲ್ಲೆಲ್ಲ ಸಣ್ಣಗಾತ್ರದ ಟೈಲ್ಸ್ ಹೆಚ್ಚು ಸೂಕ್ತ. ನಾವು ಮನೆಯನ್ನು ಪದೇಪದೇ ಕಟ್ಟುವುದಿಲ್ಲ. ಹಾಗಾಗಿ, ಕಟ್ಟುವ ಮನೆಯ ಅತಿ ಮುಖ್ಯ ಭಾಗವಾದ ನೆಲಹಾಸನ್ನು, ಎಲ್ಲ ಕೋನಗಳಿಂದಲೂ ಯೋಚಿಸಿ ಮುಂದುವರಿಯುವುದು ಉತ್ತಮ.
ಚೇತೋಹಾರಿಯಾದ ಬಣ್ಣಗಳು : ಕೆಲವೊಮ್ಮೆ ಹೊಸತು ಎಂದು ಚಿತ್ರವಿಚಿತ್ರ ಬಣ್ಣಗಳು ಮಾರುಕಟ್ಟೆಗೆ ಬರುತ್ತವೆ, ಅವುಗಳ ವಿಶೇಷತೆ ಏನೆಂದರೆ ಅವು ಹೊಸತು ಎಂಬುದೇ ಆಗಿರುತ್ತದೆ. ಹೀಗೆ ಹೊಸತರ ಹಿಂದೆ ಬೀಳದೆ, ನಮ್ಮ ಆಯ್ಕೆ ನಮಗಿಷ್ಟವಾದ ಬಣ್ಣ ವಿನ್ಯಾಸವೇ ಆಗಿದ್ದರೆ ಒಳ್ಳೆಯದು. ಹೊಸತು ಎಂಬುದು ಇವತ್ತು ಇದ್ದು, ನಾಳೆ ಹೋಗಿಬಿಡುತ್ತದೆ. ಆದರೆ, ನಮಗಿಷ್ಟ ಆದದ್ದು ಹತ್ತಾರು ವರ್ಷ ಹೊಸದಾಗೇ ಇರುತ್ತದೆ. ಕೆಲವು ಬಣ್ಣಗಳು ಮನಸ್ಸಿಗೆ ಮುದ ನೀಡುತ್ತವೆ. ನಮ್ಮನ್ನು ಉತ್ತೇಜಿಸುವಂತೆ ಇರುತ್ತವೆ. ಈ ಗುಂಪಿಗೆ ಕೆಂಪು ಹಾಗೂ ಹಳದಿಯ ಜೊತೆಗೆ ಅವುಗಳ ಮಿಶ್ರಣ ಆದಾಗ ಉಂಟಾಗುವ ಇತರೆ ಬಣ್ಣಗಳು- ಕೇಸರಿ ಇತ್ಯಾದಿ ಇರುತ್ತದೆ. ಬಣ್ಣ ಎಂದರೆ ಅದು ಗಾಢವಾಗಿ ಇರಲೇಬೇಕು ಎಂದೇನೂ ಇಲ್ಲ. ಆ ಗುಂಪಿನ ತೆಳು ಮಾದರಿ ಆದರೂ ಮನಸ್ಸಿಗೆ ಮುದ ನೀಡುತ್ತದೆ. ಅದೇ ರೀತಿಯಲ್ಲಿ ಕೆಲ ಬಣ್ಣಗಳು ನಮ್ಮನ್ನು ನಿರಾಳ ಆಗುವಂತೆ, ಶಾಂತ ಮನಸ್ಥಿತಿಗೆ ತಲುಪುವಂತೆ ಮಾಡಬಲ್ಲವು. ಹಸಿರು, ನೀಲಿ ಈ ಗುಂಪಿನ ಪ್ರಮುಖ ಬಣ್ಣಗಳು. ಇವು ಕೂಡ ಗಾಢವಾಗಿ ಇರಬೇಕು ಎಂದೇನೂ ಇಲ್ಲ.
ಅಳತೆ ನೋಡಿ ಟೈಲ್ಸ್ ಆಯ್ಕೆ : ನಮ್ಮ ಮನೆಯ ಗಾತ್ರ ನೋಡಿ ಟೈಲ್ಸ್ ಸೈಝ್ ನಿರ್ಧರಿಸುವುದು ಒಳ್ಳೆಯದು. ತೀರಾ ದೊಡ್ಡದಾದ ಟೈಲ್ಸ್‌ಗಳು ಸಣ್ಣ ನಿವೇಶನಗಳಿಗೆ ಸರಿಹೊಂದುವುದಿಲ್ಲ. ಸಾಮಾನ್ಯವಾಗಿ ಸಣ್ಣ ಗಾತ್ರದ ಟೈಲ್ಸ್ ಒಂದು ಕೋಣೆಯನ್ನು ದೊಡ್ಡದಾಗಿ ಕಾಣುವಂತೆ ಮಾಡಬಲ್ಲವು, ಹಾಗೆಯೇ ದೊಡ್ಡವು, ಕೆಲವೊಮ್ಮೆ ಇರುವ ಸ್ಥಳವನ್ನು ಕುಗ್ಗಿದಂತೆ= ತೋರಿಸಬಲ್ಲವು. ಅದೇ ರೀತಿಯಲ್ಲಿ, ಗಾಢಬಣ್ಣಗಳು ಕೋಣೆಯನ್ನು ಚಿಕ್ಕದಾಗಿಸುತ್ತವೆ. ತೆಳು ಬಣ್ಣಗಳು, ಇರುವ ಸಣ್ಣಸ್ಥಳವೂ ವಿಶಾಲವಾಗಿ ಇರುವಂತೆ ಮಾಡಬಲ್ಲವು! ಹಾಗೆಯೇ, ಗೆರೆಗಳ ವಿನ್ಯಾಸ ಉದ್ದುದ್ದಕ್ಕೆ ಇದ್ದರೆ, ಇರುವ ಸ್ಥಳ ಹಿಗ್ಗುತ್ತದೆ. ಅಡ್ಡಾದಿಡ್ಡಿ ಯಾಗಿದ್ದರೆ, ಕುಗ್ಗಿದಂತೆ ಕಾಣುತ್ತದೆ. ಸಣ್ಣ ಸಣ್ಣ ಅಳತೆಯ ಅನೇಕ ಚಿತ್ತಾರಗಳು ಟೈಲ್ಸ್ ಮೇಲಿದ್ದರೆ, ಕೋಣೆಗಳು ಸ್ವಲ್ಪ ದೊಡ್ಡದಾಗಿ ಕಾಣುತ್ತವೆ.
ಮಾಹಿತಿಗೆ : 9844132826,
ಆರ್ಕಿಟೆಕ್ಟ್ ಜಯರಾಮ್ ಕೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.