ಬೆಲೆ ಏರಿಕೆಯ ತೈಲಮಜ್ಜನ
Team Udayavani, Jun 4, 2018, 12:41 PM IST
ಡೀಸೆಲ್, ಪೆಟ್ರೋಲ್‌ನ ಬೆಲೆ ಪದೇ ಪದೆ ಏರಿಕೆಯಾಗುತ್ತಲೇ ಇದೆ. ನಿತ್ಯದ ಓಡಾಟಕ್ಕೆ ವಾಹನಗಳನ್ನೇ ಅವಲಂಭಿಸಿರುವವರು ಇದರಿಂದ ತತ್ತರಿಸಿದ್ದಾರೆ. ಬಸ್-ರೈಲು ಪ್ರಯಾಣದ ಬೆಲೆಯೂ ಹೆಚ್ಚಿದರೆ ಗತಿಯೇನು ಎಂದು ಯೋಚಿಸಿ, ಜನ ಕಂಗಾಲಾಗಿದ್ದಾರೆ. ಹೂಡಿಕೆ ಮತ್ತು ಉಳಿತಾಯದ ಲೆಕ್ಕಾಚಾರವನ್ನು ಉಲ್ಟಾ ಮಾಡುವ ತೈಲ ಬೆಲೆ ಏರಿಕೆಯ ಹಿಂದಿರುವ ಕಾರಣಗಳೆಲ್ಲ ಇಲ್ಲಿ ಅನಾವರಣಗೊಂಡಿವೆ…
ಮೊದಲು ಒಳ್ಳೆಯ ಸುದ್ದಿ ಹೇಳಿ ಮುಗಿಸೋಣ: ಮೊನ್ನೆ ಕೇಂದ್ರ ಸರ್ಕಾರವು ಪೆಟ್ರೋಲ್ ಬೆಲೆಯಲ್ಲಿ 1 ಪೈಸೆ ಕಮ್ಮಿ ಮಾಡಿದೆ. ಹೀಗಾಗಿ ಈಗ ಪೆಟ್ರೋಲ್ ಬೆಲೆ ಲೀಟರ್‌ಗೆ ಸುಮಾರು 80ರೂ. ಮತ್ತು ಡೀಸಲ್ ಬೆಲೆ ಲೀಟರಿಗೆ ಸುಮಾರು 70ರೂ.ರ ಮಟ್ಟ ಮುಟ್ಟುತ್ತಿದ್ದಂತೆ ದೇಶದಾದ್ಯಂತ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಹಾಗಾದರೆ ವಾಸ್ತವವಾಗಿ ತೈಲ ಬೆಲೆಯ ಪರಿಸ್ಥಿತಿ ಏನು, ಇದರಿಂದ ನಮ್ಮ ಹೂಡಿಕೆ, ಸಾಮಾನ್ಯ ಬದುಕಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಅನ್ನೋದನ್ನು ತಿಳಿಯುವುದು ಸೂಕ್ತ.
ಈಗ ಏಕೆ ತಟ್ಟುತ್ತೆ?
ಹಿಂದೆಲ್ಲಾ ತೈಲ ಬೆಲೆ ಏರಿಕೆಯಾದಾಗ ವಿಪರೀತ ಬಿಸಿ ತಟ್ಟುತ್ತಿರಲಿಲ್ಲ, ಈಗ ಏಕೆ ತಟುತ್ತಿದೆ? ಇದು ಪ್ರತಿಯೊಬ್ಬರೂ ಕೇಳುವ ಪ್ರಶ್ನೆ. ಹಿಂದಿನ ಯುಪಿಎ ಸರ್ಕಾರ ತೈಲ ಬೆಲೆಯನ್ನು ಸಹಾಯ ಧನದ ಮೂಲಕ ವಿತರಣೆ ಮಾಡುತ್ತಿತ್ತು. ಹಾಗಾಗಿ ತೈಲ ಬೆಲೆ ಒಂದು ಬ್ಯಾರಲ್‌ಗೆ 120 ಡಾಲರ್ ಆದರೂ ಸಹ ಇಲ್ಲಿ ಲೀಟರ್‌ಗೆ ರೂ.60-70ದಾಟಲಿಲ್ಲ. ಇದರಿಂದ ಸರ್ಕಾರದ ಅರ್ಥಿಕ ಹೊರೆ ಕೂಡ ಹೆಚ್ಚಾಗಿತ್ತು. ಕ್ರಮೇಣವಾಗಿ 2010ರಲ್ಲಿ ಪೆಟ್ರೋಲ್ ಮತ್ತು 2014ರಲ್ಲಿ ಡೀಸಲ್ ಉತ್ಪನ್ನಗಳನ್ನು ಸರ್ಕಾರ ತನ್ನ ಹಿಡಿತದಿಂದ ಹೊರತಂದು ಮುಕ್ತ ಮಾರುಕಟ್ಟೆಗೆ ಹೊಂದಿಸಿತು. ಅಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂದಿನ ಬೆಲೆಯ ಆಧಾರದ ಮೇಲೆಯೇ ತೈಲ ಬೆಲೆ ನಿರ್ಧಾರವಾಗುವುದು ಎಂಬ ಹೊಸ ನೀತಿಯೊಂದು ಜಾರಿಗೆ ಬಂತು.
ಚಿನ್ನದ ಬೆಲೆ ಹೇಗೆ ದಿನ ನಿತ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯ ನಿರ್ಧಾರಿತ ಬೆಲೆಯ ಆಧಾರದ ಮೇಲೆ ಬದಲಾಗುತ್ತದೆಯೋ, ಹಾಗೆಯೇ, ಆದರೆ ಆರ್ಥಿಕ ಸುಧಾರಣೆ ಮಾರುಕಟ್ಟೆ ಆಧಾರಿತ ವಾಸ್ತವ ಬೆಲೆ ಬರೀ ಹೇಳಿಕೆಯಾಯಿತು. 2014ರಿಂದ ಅಂತಾರಾಷ್ಟ್ರೀಯ ತೈಲ ಬೆಲೆ ಕುಸಿಯುತ್ತಾ ಹೋದಂತೆಲ್ಲಾ ಕೇಂದ್ರ ಸರ್ಕಾರ ಅಬಕಾರಿಯನ್ನು ತೆರಿಗೆ ಹೆಚ್ಚಿಸುತ್ತಾ ಹೋಯಿತು. ತೈಲ ಬೆಲೆ ಹಿಂದೆ ಇದ್ದ 120 ಡಾಲರ್‌ನಿಂದ 30 ಡಾಲರ್‌ಗೂ ಕುಸಿದದ್ದು ಉಂಟು. ಆಗ ಖುಷಿಪಟ್ಟದ್ದು ಸರ್ಕಾರ. ಏಕೆಂದರೆ ಅದು 11 ಬಾರಿ ತೆರಿಗೆ ಹೆಚ್ಚಿಸಿ ತನ್ನ ಬೊಕ್ಕಸ ತುಂಬಿಕೊಂಡಿದೆ. 2014ರಲ್ಲಿ ತೈಲದಿಂದ ಗಳಿಸಿದ ತೆರಿಗೆ 1ಲಕ್ಷ ಕೋಟಿ ಇದ್ದದ್ದನ್ನು 2015-16ಕ್ಕೆ 1 ಲಕ್ಷ 78 ಸಾವಿರ ಕೋಟಿಗೆ ಏರಿಸಿಕೊಂಡಿತು. 2016-17ರಲ್ಲಿ 2 ಲಕ್ಷ 42 ಸಾವಿರ ಕೋಟಿಗೆ ಏರಿಸಿಕೊಂಡಿತು. ಹೀಗೆ, ಇತ್ತೀಚಿನವರೆಗೂ ಕೇಂದ್ರವು ಒಟ್ಟು ಮಾರುಕಟ್ಟೆಗೂ ಮೀರಿ ತುಂಬಿಕೊಂಡ ಮೊತ್ತವೇ ಮೂರು 3 ಲಕ್ಷ ಕೋಟಿ ರೂಪಾಯಿ. ಇದು ಒಂದು ರೀತಿಯಲ್ಲಿ ನರಿ ಮತ್ತು ಕರಡಿ ಒಟ್ಟು ಸೇರಿ ಕೃಷಿ ಮಾಡಿ ಪಸಲು ಹಂಚಿಕೊಂಡ ಕಥೆಯ ಹಾಗಿದೆ! ಆಲೂಗೆಡ್ಡೆ ಬೆಳೆದಾಗ ಭೂಮಿಯ ಅಡಿ ಇರುವ ಪಸಲು ನರಿಗೆ, ಕಬ್ಬು ಬೆಳೆದಾಗ ಭೂಮಿಯ ಮೇಲಿನ ಪಸಲು ನರಿಗೆ ..ಹೀಗೆ.
ಲಾಭ ಮಾಡಿದ್ದು ಇವರು
ಇದರ ಪರಿಣಾಮ ಮಾತ್ರ ಸಾಮಾನ್ಯ ಗ್ರಾಹಕರು ಮತ್ತು ಹೂಡಿಕೆದಾರರ ಮೇಲೆ ಆಗಿರುವುದು ಸುಳ್ಳಲ್ಲ. ಕೇಂದ್ರದ ತೆರಿಗೆ ಹೆಚ್ಚಾದಂತೆಲ್ಲಾ ರಾಜ್ಯ ಸರ್ಕಾರಗಳು ತಾನು ತೈಲಕ್ಕೆ ವ್ಯಾಟ್ ತೆರಿಗೆ ಹಾಕುವ ಮೂಲಕ ಲಾಭ ಗಳಿಸಿಕೊಂಡವು. ಇದು ಹೆಚ್ಚಿನದೇನೂ ಅಲ್ಲ. ಕಾರಣ, 2014ರಲ್ಲಿ ಒಟ್ಟು ರಾಜ್ಯಗಳು ಪಡೆಯುತ್ತಿದ್ದ ತೆರಿಗೆ 1 ಲಕ್ಷ 37 ಸಾವಿರ ಕೋಟಿ ಇದ್ದದ್ದು 15-16 ರಲ್ಲಿ 1.42 ಲಕ್ಷ ಕೋಟಿ ಆಗಿ 17-18ರಲ್ಲಿ 1.66 ಲಕ್ಷ ಕೋಟಿಯೂ ಆಯಿತು. ಕೇಂದ್ರ ಸರ್ಕಾರ ಮಾತ್ರ 3 ಲಕ್ಷ ಕೋಟಿ ಹೆಚ್ಚು ಹಣಗಳಿಸಿದರೆ ಒಟ್ಟು ರಾಜ್ಯಗಳು ಗಳಿಸಿದ್ದು ಕೇವಲ ಸುಮಾರು 40 ಸಾವಿರ ಕೋಟಿ. ಆದರೂ ಕೇಂದ್ರ ಸರ್ಕಾರವು ಜಾಣತನದಿಂದ, ಗುಜರಾತ್ ಚುನಾವಣೆ ಹಾಗೂ ಕರ್ನಾಟಕ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ತೈಲ ಬೆಲೆ ಏರಿಕೆಯನ್ನು ಒಂದು ತಿಂಗಳ ಮಟ್ಟಿಗೆ ಸ್ಥಬ್ಧಗೊಳಿಸಿದ್ದು ಮಾತ್ರ ಯಕ್ಷಪ್ರಶ್ನೆಯಂತಿದೆ. ಓಟು ಸಿಕ್ಕ ನಂತರ ಮತ್ತೆ ತೆಗೆತೆರಿಗೆ ಹಾಕುತ್ತಿದೆ.
ಹಾಗಾದರೆ ಮುಕ್ತ ಮಾರುಕಟ್ಟೆ ಅಂದರೆ ಇದೇನಾ?
ಅವರಿಗೆ ಬೇಕಾದಾಗ ತೆರಿಗೆ ಹಾಕಿ, ಬೇಡದೆ ಇದ್ದಾಗ ತಡೆಯಬಹುದಾ? ಇಂಥ ಪ್ರಶ್ನೆಗಳು ಎದ್ದು ತೈಲ ಕಂಪೆನಿಗಳ ಷೇರುಗಳನ್ನು ಅನುಮಾನವಾಗಿ ನೋಡುವ ಕಣ್ಣುಗಳ ಸಂಖ್ಯೆ ಹೆಚ್ಚಿವೆ.
ಈಗ ಅಂತಾರಾಷ್ಟ್ರೀಯ ತೈಲ ಬೆಲೆ ನಿಜವಾಗಿಯೂ ಏರಿಕೆಯಾಗಿ ಒಂದು ಬ್ಯಾರಲ್‌ಗೆ 80 ಡಾಲರ್ ತಲುಪಿದೆ. ಈ ಮೊದಲೇ ತೆರಿಗೆ ಹೆಚ್ಚಿಸಿಕೊಂಡಿರುವುದರಿಂದ ಲಾಭ ಇನ್ನೂ ಹೆಚ್ಚು. ಆದರೆ ಜನಸಾಮಾನ್ಯರಿಗೆ ಬೆಲೆ ಏರಿಕೆ ಹೊಡೆತ ತಾಳಲಾಗುತ್ತಿಲ್ಲ. ಬೇರೆ ಬೇರೆ ದೇಶಗಳಲ್ಲೂ ಇದೇ ರೀತಿ ಇದೆಯಾ ಅಂತ ನೋಡಿದರೆ ಆಶ್ಚರ್ಯವಾಗುತ್ತದೆ. ಪಾಕಿಸ್ತಾನದಲ್ಲಿ ಈಗಲೂ ಪೆಟ್ರೋಲ್ ಬೆಲೆ ಸುಮಾರು ರೂ. 50.00, ಶ್ರೀಲಂಕಾದಲ್ಲಿ ರೂ. 55.00, ಇಂಡೋನೇಶಿಯಾದಲ್ಲಿ ರೂ. 45.00 ಮಲೇಶಿಯಾದಲ್ಲಿ ರೂ38.00.
ಇಲ್ಲೆಲ್ಲ ಇಷ್ಟಿಷ್ಟು
ನಮ್ಮಲ್ಲಿ ಏಕೆ ಹೀಗೆ?- ಕೆಲವು ಆರ್ಥಿಕ ತಜ್ಞರ ಪ್ರಕಾರ, ಸರ್ಕಾರಕ್ಕೆ ಅತಿ ಸುಲಭವಾಗಿ ಹಣ ಗಳಿಸುವ ಮಾರ್ಗ ಎಂದರೆ ತೈಲಬೆಲೆ ಏರಿಕೆ ಅಂತಾರೆ.
ಇನ್ನೊಂದು ವಾದ ಏನೆಂದರೆ, ಇಲ್ಲಿ ಬಂದ ಹಣದಿಂದ ಒದಗಿಸಲಾಗಿರುವ ಬಡವರಿಗೆ ಉಚಿತ ಅಡುಗೆ ಅನಿಲದ ಬೆಲೆ ಒದಗಿಸಲಾಗುತ್ತಿದೆ ಎಂದು. ಆದರೆ ವಾಸ್ತವ ಬೇರೆ.
ಕಳೆದ ಮೂರು ವರ್ಷದಲ್ಲಿ 4 ಕೋಟಿ ಜನರಿಗೆ ಅಡುಗೆ ಅನಿಲ ತಲಾ 1,600 ರೂಪಾಯಿಯಂತೆ ಎಂದು ಲೆಕ್ಕ ಹಾಕಿದರೆ ಆಗುವ ಒಟ್ಟು ಮೊತ್ತ 6,400 ಕೋಟಿಯಷ್ಟೇ. ಆದರೆ ಅಧಿಕ ಲಾಭ ಬಂದದ್ದು 3 ಲಕ್ಷ ಕೋಟಿ. ಮೂರು ವರ್ಷ ತೈಲಬೆಲೆ ಕುಸಿತದ ಲಾಭ ಪಡೆದು, ಬೆಲೆ ಇಳಿಸಿ ಅದನ್ನು ಜನರಿಗೂ ತಲುಪಿಸದೇ ವಿತ್ತೀಯ ಕೊರತೆಯನ್ನು ಸ್ವಲ್ಪ ಮಟ್ಟಿಗಾದರೂ ಸರಿದೂಗಿಸಿತು ಎಂದು ನಿಟ್ಟುಸಿರು ಬಿಡುವಹಾಗಿಲ್ಲ. ಏಕೆಂದರೆ, ಶೇ. 3.2ರಷ್ಟು ಇರಬೇಕಾದ ವಿತ್ತೀಯ ಕೊರತೆಯನ್ನು ಶೇ.3.5ಕ್ಕೆ ಏರಿಸಿ ಸಾಲ ಮಾಡಿದ್ದೇವೆ. ತೈಲ ಬೆಲೆ ಏನಾದರೂ ಕಳೆದು ಮೂರು ವರ್ಷದಿಂದ ಇದೇ ಬೆಲೆ ಇದ್ದಿದ್ದರೆ ದೇಶದ ಅರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗುತ್ತಿತ್ತು. ನಮ್ಮ ಆರ್ಥಿಕ ಅಭಿವೃದ್ಧಿ ಶೇ. 9ರಷ್ಟು ಇರಬೇಕಾಗಿತ್ತು. ಆದರೆ ಶೇ.7 ದಾಟಿಲ್ಲ. ಬಾಂಗ್ಲಾದೇಶ, ಶೇ.12 ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸುತ್ತಿದೆ. ಒಟ್ಟು ಆರ್ಥಿಕ ಅಭಿವೃದ್ಧಿಯಲ್ಲೂ ಸಾಧಾರಣ ಯಶಸ್ಸು ಕಂಡುಬಂದಿರುವುದರಿಂದ ಈಗಿನ ತೈಲ ಬೆಲೆ ಏರಿಕೆಯಿಂದ ಆಗುತ್ತಿರುವ ತೊಂದರೆಯನ್ನು ಸರಿದೂಗಿಸುವುದು ಕಷ್ಟ.
ನಾವು ಕಳೆದ ವರ್ಷ ಸುಮಾರು 5 ಲಕ್ಷ ಕೋಟಿಯ ತೈಲವನ್ನು ಆಮದು ಮಾಡಿಕೊಂಡಿದ್ದೇವೆ. ನಮ್ಮ ಶೇ.80 ತೈಲ ಆಮದಿನ ಮೇಲೆ ಅವಲಂಬಿತವಾಗಿದೆ. ಕಚ್ಚಾ ತೈಲ ತರಿಸಿ ಅದನ್ನು ಮೌಲ್ಯವರ್ಧನೆ ಮಾಡಿ ರಫ್ತು ಕೂಡ ಮಾಡಲಾಗುತ್ತಿದೆ. ನಮ್ಮ ದೇಶದ ಅತ್ಯಂತ ಹೆಚ್ಚು ರಫ್ತಾಗುವ ವಸ್ತು ಪೆಟ್ರೋಲಿಯಂ ಉತ್ಪನ್ನಗಳೇ. ನಮ್ಮ 80:20 ರಫ್ತು ಮತ್ತು ಆಮದಿನ ನಿಯಮದ ಪ್ರಕಾರ ಇದು ಇನ್ನೂ ಹೆಚ್ಚಾಗಬೇಕಿತ್ತು. ಆದರೆ ನಮ್ಮ ತೈಲ ಕಂಪನಿಗಳಿಗೆ ಸುಲಭವಾಗಿ ಲಾಭ ಮಾಡಿಕೊಳ್ಳಲು ಭಾರತದಂಥ ದೇಶ ಸಿಗುತ್ತಿಲ್ಲ. ಅಲ್ಲದೇ ಮುಕ್ತ ಮಾರುಕಟ್ಟೆಯಲ್ಲಿ ಒಂದು ಕಂಪನಿಯ ಬೆಲೆಗೂ ಇನ್ನೊಂದು ಕಂಪನಿಯ ತೈಲ ಬೆಲೆಗೂ ವ್ಯತ್ಯಾಸವಿದೆ. ಅದನ್ನು ಇಲ್ಲಿ ಗಮನಿಸುವುದಿಲ್ಲ.
ಇದಕ್ಕೆ ಕಾರಣ ಅವುಗಳಲ್ಲಿನ ಒಳ ಒಪ್ಪಂದ. ಹಾಗೆಯೇ ನಮ್ಮ ತೈಲ ಕಂಪನಿಗಳ ಸಂಸ್ಕರಣ ವಿಧಾನ ಪುರಾತನವಾದದ್ದು. ಇದರಲ್ಲಿ ಶೇ.10 ತೈಲ ಪೋಲಾಗುತ್ತಿದೆ. ಇಲ್ಲಿಯೂ ಸಹ ನಾವು ಹೊಸ ತಂತ್ರಜಾnನ ಅಳವಡಿಸಿಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ.
ಈಗ ತೈಲ ಬೆಲೆ ಹೆಚ್ಚಾಗಲು ಕಾರಣ ಅಮೆರಿಕ. ಇದು ಸೌದಿ ಅರೇಬಿಯಕ್ಕೆ ಸಹಾಯ ಹಸ್ತ ನೀಡಿ ಅದರ ವೈರಿ ಇರಾನ್ ಮತ್ತು ವೆನಿಜ್ಯುವೆಲ ದೇಶಕ್ಕೆ ಶಿಕ್ಷೆ ಕೊಡುವತ್ತ ಹೊರಟಿದೆ. ಸೌದಿ ಅರೇಬಿಯಾ, ತೈಲ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾದ ರಷ್ಯಾ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು, ಉತ್ಪಾದನೆ ಕಮ್ಮಿ ಮಾಡಿಸಿ, ಬೆಲೆ ಏರಿಸಿ, ಹಣ ಸಂಪಾದಿಸಿ ತನ್ನ ಆರ್ಥಿಕ ಮುಗ್ಗಟ್ಟನ್ನು ಸರಿದೂಗಿಸಿಕೊಳ್ಳಲು ಹೊರಟಿದೆ ಅಮೇರಿಕ. ಇರಾನ್ ನಮಗೆ ಮೊದಲು ಕಚ್ಚಾ ತೈಲವನ್ನು ಸಾಲದ ರೂಪದಲ್ಲಿ ಒದಗಿಸುತ್ತಿತ್ತು. ಈಗ ಅಮೇರಿಕಾ ಹೇರಿರುವ ನಿರ್ಬಂಧದಿಂದ ಬೇರೆ ಮಾರ್ಗ ಹುಡುಕಿಕೊಳ್ಳಬೇಕಾಗಿದೆ.
ಒಂದು ಅಂದಾಜಿನ ಪ್ರಕಾರ, ತೈಲದ ಬೆಲೆ ಬ್ಯಾರಲ್‌ಗೆ 120 ಡಾಲರ್ ತಲುಪಬಹುದು ಎನ್ನಲಾಗಿದೆ. ಇದು ಅಂತಾರಾಷ್ಟ್ರೀಯ ರಾಜಕೀಯ ಮತ್ತು ವ್ಯಾಪಾರ ನೀತಿಯಿಂದಾಗಿರುವುದರಿಂದ ಶೇ.7ರಷ್ಟು ಜಗತ್ತಿನ ತೈಲ ಬಳಸುವ ಭಾರತ ತನ್ನ ಅಭಿಪ್ರಾಯ ಹೇರುವುದು ಕಷ್ಟ. ಈ ನಡುವೆ ನಾವು ಶೇ. 80 ಆಮದಿನ ಮೇಲೆ ಅವಲಂಬಿತರಾಗಿರುವುದನ್ನು ಹೇಗೆ ಕಮ್ಮಿ ಮಾಡಿಕೊಳ್ಳುವುದು ಎಂದು ಹೆಚ್ಚುಯೋಚಿಸಬೇಕಾಗಿದೆ. ಸೌರ ಶಕ್ತಿ, ಕಲ್ಲಿದ್ದಲನ್ನು ವಿವಿಧ ರೀತಿಯ ಮೌಲ್ಯವರ್ಧನೆಗೆ ಒಳಪಡಿಸುವುದು, ಪರ್ಯಾಯ ಮಾರ್ಗ ಕಂಡು ಹಿಡಿಯುವುದು ಅವಶ್ಯಕ. ಅಲ್ಲದೆ ವಿದ್ಯುತ್ಛಕ್ತಿಯಿಂದ ಓಡಿಸಬಲ್ಲ ವಾಹನಗಳತ್ತಲೂ ಹೆಚ್ಚು ಗಮನಹರಿಸಬೇಕಾಗಿದೆ.
ಒಂದು ಮಾತಿದೆ ‘ರಾಜ ವ್ಯಾಪಾರಿ; ಪ್ರಜಾ ಬಿಕಾರಿ’ ಎಂತ. ನಮ್ಮ ತೈಲ ಬೆಲೆ ವಿಚಾರವಾಗಿ ಇದು ಬಹಳ ಚೆನ್ನಾಗಿ ಅನ್ವಯಿಸುತ್ತದೆ.
ಚಿನ್ನದಂಥ ಮಾತಷ್ಟೇ
ಚಿನ್ನದ ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ಹೇಗೆ ಏರುತ್ತೋ ಅದೇ ರೀತಿ ಪೆಟ್ರೋಲ್ ಬೆಲೆಯೂ ಏರುತ್ತದೆ ಅನ್ನುತ್ತಾರೆ. ಆದರೆ ಚಿನ್ನದ ಬೆಲೆ ನಿಗದಿ ಆಗೋದು ಸ್ವಿಜರ್‌ಲ್ಯಾಂಡ್‌ನಲ್ಲಿ. ಇವತ್ತು ಅಲ್ಲಿನ ಬೆಲೆಯನ್ನು ಇಲ್ಲಿನ ಚಿನ್ನದ ಅಂಗಡಿಯವನು ಕೊಡಬೇಕು. ಅದೇ ರೀತಿ ನಡೆಯುತ್ತಿದೆ. ಆದರೆ ಪೆಟ್ರೋಲ್ ವಿಚಾರವಾಗಿ ಈ ರೀತಿ ನಡೆಯುತ್ತಿಲ್ಲ. ಒಪೆಕ್ ದೇಶಗಳು ( ತೈಲ ಉತ್ಪನ್ನ ರಾಷ್ಟ್ರಗಳ ಸಮೂಹ) ಕಚ್ಛಾ ತೈಲದ ಬೆಲೆ ಇಳಿಸಿದರೂ ನಮ್ಮಲ್ಲೇನೂ ತೈಲ ಬೆಲೆ ಇಳಿಯುವುದಿಲ್ಲ. ಅಲ್ಲಿನ ಇಳಿಕೆಗೂ ಇಲ್ಲಿನ ಲೀಟರ್ ಪೆಟ್ರೋಲ್ ಬೆಲೆ ಇಳಿಕೆಗೂ ಅಜಗಜಾಂತರವಿದೆ.
ಹೀಗಾಗಿ ಮುಕ್ತ ಮಾರುಕಟ್ಟೆಯ ಬೆಲೆ ನಿಗಧಿ ಅನ್ನೋದೇ ಕಣRಟ್ಟಿನ ಆಟದ ರೀತಿಯಾಗಿದೆ. ನಮ್ಮಲ್ಲಿ ಸಾಗಾಣಿಕಾ ವೆಚ್ಚ ಶೇ.14ರಷ್ಟಿದೆ. ಇದರಿಂದಾಗಿ, ತೈಲದ ಬೆಲೆ ಮತ್ತೂ ಏರಿಕೆಯಾಗುವ ಅಪಾಯಗಳು ಜಾಸ್ತಿ ಇದೆ.
– ಡಾ.ಕೆ.ಸಿ. ರಘು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.