ಕಲ್ಲು ಗುಡ್ಡದ ಮೇಲೆ…ಬಂಜರು ಭೂಮಿ ಬಂಗಾರವಾದದ್ದು
Team Udayavani, Oct 21, 2019, 4:00 AM IST
ಗುಡ್ಡಗಾಡು ಪ್ರದೇಶದಲ್ಲಿ ಕೃಷಿ ಮಾಡುವವರು ವಿರಳ. ಕಲ್ಲುಮಣ್ಣುಗಳಿಂದ ಕೂಡಿದ ಜಾಗದಲ್ಲಿ ಬೆಳೆ ತೆಗೆಯುತ್ತೇನೆಂದು ಹೊರಟಾಗ ಅನೇಕರು ಆಡಿಕೊಂಡಿದ್ದರು. ಆದರೆ ಈಗ ಅದೇ ಭೂಮಿಯ ರೂಪಾಂತರವನ್ನು ಕಂಡು ಮೆಚ್ಚಿಕೊಳ್ಳುತ್ತಿದ್ದಾರೆ.
ಕೃತಕವಾಗಿ ತಯಾರಿಸಲ್ಪಡುವ ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರಗಳಿಂದ ಬೆಳೆಗಳಿಗೆ ದೊರಕುವ ಪ್ರತಿಯೊಂದು ಪೋಷಕಾಂಶಗಳನ್ನು ನಿಸರ್ಗದಲ್ಲಿ ದೊರಕುವ ಜೈವಿಕ ಕ್ರಿಯೆಗಳಿಂದ ಯಾವ ರೀತಿ ಪಡೆದುಕೊಳ್ಳಬಹುದು ಎಂಬುದನ್ನು ಎಳೆ ಎಳೆಯಾಗಿ ರೈತ ಸಮೂಹಕ್ಕೆ ತಿಳಿಸಿಕೊಟ್ಟವರು ಮಹಾರಾಷ್ಟ್ರದ ಡಾ. ಸುಭಾಷ್ ಪಾಳೇಕಾರರವರು ಈ ಕೃಷಿ ಪದ್ಧತಿಯ ಆಧುನಿಕ ಹರಿಕಾರರಾಗಿದ್ದಾರೆ. ಅವರ ಸೂಚನೆಗಳನ್ನು, ಅವರು ಪ್ರಚುರಪಡಿಸಿದ ವಿಧಾನಗಳನ್ನು ಅನೇಕ ರೈತರು ಅಳವಡಿಸಿಕೊಂಡಿರುವುದಷ್ಟೇ ಅಲ್ಲದೆ, ಯಶಸ್ವಿಯೂ ಆಗಿದ್ದಾರೆ. ಈ ಪದ್ಧತಿಯಲ್ಲಿ ಬೆಳೆದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಯೂ ಸಿಗುತ್ತದೆ. ಪಾಳೇಕರರಿಂದ ಪ್ರೇರಿತರಾದ ಅನೇಕ ರೈತರಲ್ಲಿ ರಾಮಣ್ಣ ತುಕಾರಾಮ ಕಡಕೋಳ ಅವರೂ ಒಬ್ಬರು.
18 ವರ್ಷಗಳ ಹಿಂದಿನ ಮಾತು. ಆಗ, ರಾಮಣ್ಣ ಅವರ 8 ಎಕರೆ ಜಮೀನು ಕೃಷಿಯೋಗ್ಯವಾಗಿರಲಿಲ್ಲ. ಗುಡ್ಡಗಾಡು ಪ್ರದೇಶವಾಗಿತ್ತು. ಆ ಭೂಮಿಯಲ್ಲಿ ಯಾವುದೇ ರೀತಿಯ ಬೆಳೆ ಬೆಳೆಯಲಾರದಂಥ ಪರಿಸ್ಥಿತಿ ಇತ್ತು. ಆ ಗುಡ್ಡಗಾಡು ಭೂಮಿಯಲ್ಲಿ ಬೆಳೆ ತೆಗೆಯುವ ವಿಚಾರವನ್ನು ಆತ್ಮೀಯರಲ್ಲಿ ಹಂಚಿಕೊಂಡಾಗ ಅಪಹಾಸ್ಯಕ್ಕೆ ಗುರಿಯಾಗಿದ್ದರು. ಆದರೆ ರಾಮಣ್ಣನವರ ಮನಸ್ಸು ದೃಢವಾಗಿತ್ತು. ಯಾರ ಕೊಂಕು ನುಡಿಯನ್ನೂ ಲೆಕ್ಕಿಸದೆ ಕಲ್ಲು- ಮುಳ್ಳುಗಳಿಂದ ಕೂಡಿದ ಭೂಮಿಗೆ ಹಸಿರು ಹಾಸು ಹೊದಿಸಬೇಕೆಂದು ತೀರ್ಮಾನ ಮಾಡಿಯಾಗಿತ್ತು. ಅಲ್ಲೇ ಸಿಕ್ಕ ಕಲ್ಲುಗಳಿಂದ ಅಡ್ಡಲಾಗಿ ಕಟ್ಟಿ ಅಲ್ಲಲ್ಲಿ ಕಿರು ಕಟ್ಟೆಗಳನ್ನು ನಿರ್ಮಿಸಿದರು. ಇದರಿಂದ ಮಳೆನೀರು ಮುಂದಕ್ಕೆ ಹರಿದು ಹೋಗದಂತೆ ಆಯ್ತಲ್ಲದೆ, ಮಳೆ ನೀರಿನ ರಭಸಕ್ಕೆ ಮೇಲಿನ ಪದರದ ಫಲವತ್ತಾದ ಮಣ್ಣು ಕೊಚ್ಚಿ ಹೋಗದಂತೆ ತಡೆಯಲಾಯಿತು.
ಬಹುವಾರ್ಷಿಕ ಬೆಳೆ
ಭೂಮಿಯು ವರ್ಷದಿಂದ ವರ್ಷಕ್ಕೆ ಸಮತಟ್ಟಾಗುತ್ತಾ ಬಂದಿತು. ಅಷ್ಟೇ ಅಲ್ಲ, ಭೂಮಿ ಇಳಿಜಾರಿದ್ದರೂ ಮಣ್ಣಿನ ಕುಸಿತ ಸಂಭವಿಸಲಿಲ್ಲ. ನೈಸರ್ಗಿಕವಾಗಿಯೇ ತಮ್ಮ ಗುಡ್ಡಗಾಡು ಜಮೀನನ್ನು ಸಮತಟ್ಟಾಗಿಸಿ, ಸಂಪೂರ್ಣವಾಗಿ ಕೃಷಿಯೋಗ್ಯ ಭೂಮಿಯನ್ನಾಗಿ ಪರಿವರ್ತನೆ ಮಾಡಿದರು. ಇಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳನ್ನು ಬೆಳೆದು ಸುಸ್ಥಿರ ಬೇಸಾಯ ಕೈಗೊಂಡು ಸುತ್ತಮುತ್ತಲಿನ ರೈತರಿಗೆ ಮಾದರಿಯಾಗಿದ್ದಾರೆ.
ಕೃಷಿ ಇಲಾಖೆ ಮತ್ತು ಶ್ರೀಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆಯವರ ಮಾರ್ಗದರ್ಶನದಲ್ಲಿ ಕಬ್ಬು ಮತ್ತು ಬಾಳೆಯಂಥ ಬಹುವಾರ್ಷಿಕ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ.
ಅಂತರ್ಜಲ ರೀಚಾರ್ಜ್ ಆಗಿದೆ
ಅಲ್ಲಿ ನೀರಿನ ಸೌಕರ್ಯ ಚೆನ್ನಾಗಿಲ್ಲದಿದ್ದರೂ ಇರುವಷ್ಟನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿದ್ದಾರೆ. ಇವರ ಈ ಅದ್ಭುತ ಕಾರ್ಯವನ್ನು ಕೇಳಿ ಸುತ್ತಮುತ್ತಲಿನ ಹಲವಾರು ಗ್ರಾಮಗಳ ರೈತರು ಸ್ಥಳಕ್ಕೆ ಭೇಟಿ ಕೊಟ್ಟು ಅಗತ್ಯ ಮಾರ್ಗದರ್ಶನವನ್ನು ಪಡೆಯುತ್ತಿದ್ದಾರೆ. ಹರಿದು ವ್ಯರ್ಥವಾಗಿ ಹೋಗುತ್ತಿದ್ದ ಮಳೆನೀರನ್ನು ನಿಲ್ಲಿಸಿದ್ದರಿಂದ ಕೊಳವೆಬಾವಿಯೂ ರೀಚಾರ್ಜ್ ಆಗಿವೆ. ಇಂಗು ಗುಂಡಿಗಳು, ಕಸಗಳ ಸದುಪಯೋಗ ಸೇರಿದಂತೆ ಹಲವಾರು ಕೃಷಿ ಸಂಬಂಧಿ ಪ್ರಯೋಗಗಳನ್ನು ರಾಮಣ್ಣ ಯಶಸ್ವಿಯಾಗಿ ಕೈಗೊಂಡಿದ್ದಾರೆ.
ನೆಲವನ್ನು ತಣ್ಣಗಿಟ್ಟಿದ್ದಾರೆ
ಬಹುವಾರ್ಷಿಕ ಬೆಳೆಗಳಿಂದ ಬರುವ ಕೃಷಿ ತ್ಯಾಜ್ಯವಸ್ತುಗಳಾದ ಕಬ್ಬು ಬೆಳೆಯ ಒಣಗಿದ ರವದಿ ಮತ್ತು ಬಾಳೆ ಬೆಳೆಯಿಂದ ಬಾಳೆ ಗೊನೆ ಕಟಾವಾದ ನಂತರ ಉಳಿಯುವ ಬಾಳೆ ಎಲೆ ಹಾಗೂ ಕಾಂಡಗಳನ್ನು ಅದೇ ಜಮೀನಿನಲ್ಲಿ ಅಚ್ಛಾದನೆ (ಹೊದಿಕೆ) ಮಾಡಿ ಮಣ್ಣಿನಲ್ಲಿ ತೇವಾಂಶ ಕಾಪಾಡಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗೆ: 9448019516
– ಬಸವರಾಜ ಶಿವಪ್ಪ ಗಿರಗಾಂವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.