ಬೆಳೆಗೆ ಟಾನಿಕ್!
ಒಂದು ದ್ರಾವಣ - ಹಲವು ಪ್ರಯೋಜನ!
Team Udayavani, Dec 23, 2019, 4:48 AM IST
ಬೆಳೆ ತೆಗೆಯಲು, ಉಳಿಯಲು, ಹೂವು ಉದುರದಿರಲು, ಕಾಯಿ ಕಚ್ಚದಿರುವಿಕೆಗೆ, ಕೀಟಬಾಧೆಗೆ, ಅಧಿಕ ಇಳುವರಿಗೆ ಹೀಗೆ ಪ್ರತಿಯೊಂದಕ್ಕೂ ರೈತರು ನಗರದ ಗೊಬ್ಬರ ಮತ್ತು ಔಷಧಿ ಅಂಗಡಿಗೆ ಭೇಟಿ ನೀಡುತ್ತಾರೆ. ಪ್ರತಿಯೊಂದು ಸಮಸ್ಯೆಗೂ ಪ್ರಕೃತಿಯಲ್ಲೇ ಉತ್ತರವಿದೆ. ನಮ್ಮ ಸುತ್ತಮುತ್ತ ಸಿಗುವ ಸಸ್ಯಜನ್ಯ- ಪ್ರಾಣಿಜನ್ಯ ಪದಾರ್ಥಗಳಿಂದಲೇ ಕೀಟನಾಶಕ ತಯಾರಿಸಿಕೊಳ್ಳಬಹುದು. ಅಂಥ ಒಂದು ಟಾನಿಕ್‌ನ ಪರಿಚಯ ಇಲ್ಲಿದೆ. ಇದು ಹೆಚ್ಚು ಕಡಿಮೆ ಜೀವಾಮೃತದಂತೆ ತೋರಿದರೂ, ಅದು ನೀಡುವ ಪ್ರಯೋಜನ ಮಾತ್ರ ಬೇರೆ ರೀತಿಯದು.
ಬೇಕಾಗುವ ಪದಾರ್ಥಗಳು
ಹಸುವಿನ ಸಗಣಿ- 10 ಕೆ.ಜಿ., ಗೋ ಮೂತ್ರ- 10 ಲೀಟರ್, ಬೆಲ್ಲ- 2 ಕೆ.ಜಿ, ಅರಿಶಿನ ಪುಡಿ- 100 ಗ್ರಾಂ. ನೀರು- 10 ಲೀಟರ್, 250 ಲೀಟರ್ ಸಾಮರ್ಥ್ಯದ ಡ್ರಮ್- 1, ಮೂವತ್ತು ಲೀಟರ್ ಸಾಮರ್ಥ್ಯದ ಡ್ರಮ…- 1
ತಯಾರಿಸುವ ವಿಧಾನ
30 ಲೀಟರ್ ಸಾಮರ್ಥ್ಯದ ಪ್ಲಾಸ್ಟಿಕ್ ಡ್ರಮ್‌ನಲ್ಲಿ 10 ಲೀಟರ್ ಹಸುವಿನ ಮೂತ್ರ, 10 ಕೆಜಿ ಹಸುವಿನ ಸಗಣಿ, 100 ಗ್ರಾಂ ಅರಿಶಿನ ಪುಡಿ, 2 ಕೆ.ಜಿ. ಬೆಲ್ಲ ಹಾಕಿ, ಅದಕ್ಕೆ 10 ಲೀಟರ್ ನೀರು ಬೆರೆಸಿ ಚೆನ್ನಾಗಿ ಕಲಕಬೇಕು. ನಂತರ ಡ್ರಮ್‌ನ ಬಾಯಿಯನ್ನು ಗೋಣಿ ಬಟ್ಟೆಯಿಂದ ಮುಚ್ಚಬೇಕು. ಡ್ರಮ್‌ಅನ್ನು ಸೂರ್ಯನ ಬೆಳಕು ನೇರವಾಗಿ ಬೀಳದಂಥ ಸ್ಥಳದಲ್ಲಿ ಇರಿಸಿ. ನಾಲ್ಕು ದಿನಗಳವರೆಗೆ ದಿನಕ್ಕೆ ಎರಡು ಸಲದಂತೆ ಈ ದ್ರಾವಣವನ್ನು ಕಲಕುತ್ತಾ ಇರಬೇಕು. ಐದನೇ ದಿನ ವಿಶೇಷ ಟಾನಿಕ್ ಸಿದ್ಧವಾಗುತ್ತದೆ.
ಬಳಕೆ ಹೇಗೆ?
ಈ ದ್ರಾವಣವನ್ನು 250 ಲೀಟರ್ ಡ್ರಮ್‌ನಲ್ಲಿ ಸೋಸಿ ಹಾಕಿ ನಂತರ ಅದಕ್ಕೆ 200 ಲೀಟರ್ ನೀರು ಬೆರೆಸಬೇಕು. ಹೀಗೆ ತಯಾರಾಗುವ ದ್ರವವನ್ನು ಸಸ್ಯಗಳ ಎಲ್ಲಾ ಭಾಗಗಳಿಗೂ ತಗುಲುವಂತೆ ಸಿಂಪಡಿಸಬೇಕು. ಬಿಸಿಲಿರುವಾಗ ಸಿಂಪಡಣೆ ಬೇಡ, ಬೆಳಗಿನ ಜಾವ ಅಥವಾ ಸಂಜೆ ಸಿಂಪಡಣೆ ಕೈಗೊಳ್ಳಿ. ಹಾಗೆಯೇ, ಮಾಮೂಲಿ ಜೀವಾಮೃತವನ್ನು ಹೇಗೆ ಪ್ರತಿ 20 ದಿನಗಳಿಗೊಮ್ಮೆ ಸ್ಪ್ರೆ ಮಾಡುತ್ತೇವೆಯೋ… ಇದನ್ನೂ ಹಾಗೆಯೇ 20 ದಿನಗಳಿಗೊಮ್ಮೆ ಸಿಂಪಡಿಸಬೇಕು. ಈ ಬಹುಪಯೋಗಿ ದ್ರಾವಣವನ್ನು ತಯಾರಿಸಿ ಸಂಗ್ರಹಿಸಿಡಲು ಸಾಧ್ಯವಿಲ್ಲ. ಸೂಕ್ಷ್ಮಾಣುಜೀವಿಗಳನ್ನು ಹೊಂದಿರುವ ಯಾವುದೇ ದ್ರವವನ್ನು ಸಂಗ್ರಹಿಸಿ ಇಡಬಾರದು. ತಯಾರಿಸಿದ ಮೇಲೆ ತಡಮಾಡದೇ ಬಳಸಿಬಿಡಬೇಕು. ಪ್ರತಿ 15 ದಿನಕ್ಕೊಮ್ಮೆ ತಯಾರಿ ಆರಂಭಿಸಿ ಪ್ರತಿ 20 ದಿನಗಳಿಗೊಮ್ಮೆ ಸಿಂಪಡಿಸಬೇಕು.
ಈ ದ್ರಾವಣವನ್ನು ನಿಯಮಿತವಾಗಿ ಬಳಸಿತೊಡಗಿದರೆ ಸಸ್ಯಗಳ ಎಲೆಯ ಗಾತ್ರ ವಿಸ್ತಾರಗೊಳ್ಳುತ್ತದೆ. ಹೂವುಗಳು ಮತ್ತು ಮೊಗ್ಗುಗಳ ಉದುರುವಿಕೆ ನಿಯಂತ್ರಿತವಾಗುತ್ತದೆ. ಇಳುವರಿಯ ಒಟ್ಟಾರೆ ಪ್ರಮಾಣ ಹೆಚ್ಚುತ್ತದೆ.
ಪ್ರಯೋಜನಗಳು
– ಮಣ್ಣು ಫಲವತ್ತಾಗುತ್ತದೆ
– ಬೆಳೆಯಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
– ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ.
– ಬೇರುಗಳು ಆಳವಾಗಿ ಮತ್ತು ಬಲವಾಗಿ ಬೆಳೆಯುತ್ತವೆ
– ಇಳುವರಿ ಅಧಿಕಗೊಳ್ಳುತ್ತದೆ.
– ರಸ ಹೀರುವ ಕೀಟಗಳ ಕಾಟ ಕಡಿಮೆಯಾಗುತ್ತದೆ
– ಹೂವು ಉದುರುವುದು ಕಡಿಮೆಯಾಗಿ ಹೆಚ್ಚು ಕಾಯಿ ಕಚ್ಚುತ್ತದೆ.
-ಎಸ್. ಕೆ. ಪಾಟೀಲ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.