ಗೌರಮ್ಮನ ಪಪ್ಪಾಯಿ ಖುಷಿ
Team Udayavani, Jan 23, 2017, 3:45 AM IST
ಅಡಿಕೆ ಗಿಡಗಳೊಂದಿಗೆ ನೆಟ್ಟ ಸಮ್ಮಿಶ್ರ ಕೃಷಿಯ ಪಪ್ಪಾಯಿ ಗಿಡಗಳು ಕೃಷಿ ಸಾಧಕಿ ಗೌರಮ್ಮನಿಗೆ ಒಂದು ವರ್ಷದಲ್ಲಿ ತಂದುಕೊಟ್ಟ ನಿವ್ವಳ ಲಾಭ ಒಂದು ಲಕ್ಷ ರೂಪಾಯಿ ಎಂಬುದು ಅವರ ಮೊಗದಲ್ಲಿ ಹರ್ಷದ ಹೊನಲು ಹರಿಸಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಸಿಂಗಟಗೆರೆ ಗ್ರಾಮದ ತರಗÕನಹಳ್ಳಿಯಲ್ಲಿ ಅವರು ಮೂರು ವರ್ಷ
ವಯಸ್ಸಿನ ಅಡಿಕೆಗಿಡಗಳ ನಡುವೆ ಒಂದು ಗಿಡಕ್ಕೆ ಒಂದರಂತೆ 350 ಪಪ್ಪಾಯಿ ಗಿಡಗಳನ್ನು ನಾಟಿ ಮಾಡಿದ್ದು ಒಂದೂವರೆ ವರ್ಷಗಳ ಹಿಂದೆ. ಈಗ ಎರಡನೆಯ ಬೆಳೆಯ ಕೊಯ್ಲು ಆರಂಭವಾಗಿದೆ. ಮೊದಲ ವರ್ಷ ನಾಟಿಯ ಖರ್ಚು ಕಳೆದು ಅಷ್ಟು ಲಾಭ ಬಂದಿರುವಾಗ ಇನ್ನೆರಡು ವರ್ಷಗಳಲ್ಲಿ ಅಧಿಕ ಲಾಭ ಸಿಗುತ್ತದೆಂಬ ಭರವಸೆ ಅವರಿಗೆ ಬಂದಿದೆ.
ಗೌರಮ್ಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯೆಯಾದ ಕಾರಣ ಆಕೆಗೆ ಸಮ್ಮಿಶ್ರ ಕೃಷಿಯ ಮಾಹಿತಿ ಮತ್ತು ತರಬೇತಿ ಯೋಜನೆಯ ಮೂಲಕವೇ ಸಿಕ್ಕಿದೆ. ಜೊತೆಗೆ ಪ್ರಗತಿನಿಧಿಯನ್ನೂ ಪಡೆದಿದ್ದಾರೆ. ಅರ್ಧ ಕಿಲೋ ಪಪ್ಪಾಯಿ ಸುಧಾರಿತ ತಳಿಯ ಬೀಜಗಳಿಗೆ ಅವರು ಕೊಟ್ಟದ್ದು 2,300 ರೂಪಾಯಿ. ಇದರಲ್ಲಿ 600 ಗಿಡ ತಯಾರಿಸಬಹುದು. ಪಾಲಿಥಿನ್ ತೊಟ್ಟೆಗೆ ಮಣ್ಣು ತುಂಬಿಸಿ ಗಿಡ ತಯಾರಿಸಿ 40 ದಿನಗಳ ಬಳಿಕ ನಾಟಿ ಮಾಡಿದ್ದಾರೆ.
ಹೆಚ್ಚಾಗಿ ಸಾವಯವ ಕೃಷಿಯನ್ನೇ ನೆಚ್ಚಿಕೊಂಡಿರುವ ಗೌರಮ್ಮ ಗೋಬರ್ ಬಗ್ಗಡ, ಗಂಜಲ, ಬೆಲ್ಲ ಇತ್ಯಾದಿ ಸೇರಿಸಿ ತಯಾರಿಸಿದ ಜೀವಾಮೃತವನ್ನು ನಾಲ್ಕು ತಿಂಗಳಿಗೊಂದು ಬಕೆಟ್ ಪ್ರಮಾಣದಲ್ಲಿ ಗಿಡಗಳಿಗೆ ಪೂರೈಸಿದ್ದಾರೆ. ಡಿಎಪಿ ಮತ್ತು ಪೊಟ್ಯಾಷ್ ರಸಗೊಬ್ಬರಗಳನ್ನು ಎರಡು ಕ್ವಿಂಟಾಲುಗಳಷ್ಟು ಹಂತಹಂತವಾಗಿ ನೀಡಿದ್ದಾರೆ.
ಆರು ತಿಂಗಳಲ್ಲಿ ಹಣ್ಣು ಕೊಯ್ಲಿಗೆ ಬಂದಿದೆ. ಗೌರಮ್ಮ ಹಣ್ಣುಗಳನ್ನು ಕೊಯಿದು ಮಾರುಕಟ್ಟೆಗೆ ಸಾಗಿಸುವ ಶ್ರಮಪಟ್ಟಿಲ್ಲ. ಕಿಲೋಗೆ ಆರು ರೂ. ದರದಲ್ಲಿ ಗುತ್ತಿಗೆ ಕೊಟ್ಟಿದ್ದಾರೆ. ಎರಡು ದಿನಕ್ಕೆ ಒಂದು ಗಿಡದಲ್ಲಿ ಒಂದು ಕಾಯಿ ಮಾಗುತ್ತದೆ. ವ್ಯಾಪಾರಿಗಳು ತಾವೇ ಬಂದು ತೆಗೆದುಕೊಂಡು ಹೋಗುತ್ತಾರೆ. ಮಾರುಕಟ್ಟೆಯಲ್ಲಿ ಬೆಲೆಗಳು ಏರಿಳಿತವಾದರೂ ಗೌರಮ್ಮನಿಗೆ ನಿಗದಿತ ದರ ಸಿಗುತ್ತದೆ. ಮೊದಲ ವರ್ಷ ಬಂದ ಒಟ್ಟು ಆದಾಯ ಒಂದೂಕಾಲು ಲಕ್ಷ ರೂಪಾಯಿ. ಇಪ್ಪತ್ತೆ„ದು ಸಾವಿರ ರೂಪಾಯಿ ವೆಚ್ಚವಾಗಿದೆ.
ರೋಗ ಬಾಧೆ ಬಂದಿಲ್ಲ. ಕೀಟಗಳು ತೊಂದರೆ ಕೊಡಲಿಲ್ಲ. ಆರೋಗ್ಯಕರವಾದ ಫಸಲು ಗೌರಮ್ಮನಿಗೆ ಕೈಗೆಟಕಿದೆ. ಅಡಿಕೆಯ ಫಸಲು ಬರಲು ಇನ್ನೊಂದೆರಡು ವರ್ಷ ಬೇಕು. ಆ ತನಕ ಪಪ್ಪಾಯಿ ತರುವ ಗಳಿಕೆಯಿಂದ ಮುಖವರಳಿಸಿದೆ.
-ಪ.ರಾಮಕೃಷ್ಣ ಶಾಸ್ತ್ರೀ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.