ಪೇಮೆಂಟ್ ಬ್ಯಾಂಕ್; ಹೊಸ ವ್ಯವಸ್ಥೆಗೆ ಬಾಲಗ್ರಹ!
Team Udayavani, Oct 1, 2018, 12:52 PM IST
ಜನಕ್ಕೆ ಒಮ್ಮೆಗೇ ಹಣ ಒಟ್ಟು ಮಾಡುವುದು ಕಷ್ಟ. ಹಾಗಾಗಿಯೇ ಸಣ್ಣ ಅಂಗಡಿಯವರು, ರಸ್ತೆ ಬದಿಯ ವ್ಯಾಪಾರಿಗಳು, ರೈತರು, ಕೂಲಿಗಳು ಪಿಗ್ಮಿಯಲ್ಲಿ ಹಣವನ್ನು ಉಳಿತಾಯ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಈ ಪಿಗ್ಮಿಯಲ್ಲಿ ಆರು ತಿಂಗಳವರೆಗೆ ವಾಪಾಸು ಪಡೆದರೆ ದಂಡ ಶುಲ್ಕ, ವರ್ಷದವರೆಗೆ ಬಡ್ಡಿ, ಬಿಡಿಕಾಸು ಇಲ್ಲ ಎಂಬ ನಿಯಮಗಳ ಹೊರತಾಗಿಯೂ ಜನ ಪಿಗ್ಮಿಯಲ್ಲಿ ಹಣ ಹೂಡಲು ಕಾರಣ, ಕೈಯಲ್ಲಿ ಹಣ ನಿಲ್ಲುವುದಿಲ್ಲ. ದಿನಕ್ಕೆ 50, 100 ರೂಪಾಯಿಗಳನ್ನು ಪಿಗ್ಮಿಗೆ ಹಾಕಿದರೆ ವರ್ಷಕ್ಕೊಮ್ಮೆ ಬರುವ ಎಲ್‌ಐಸಿ ಪ್ರೀಮಿಯಂ ನೋಟಿಸ್‌ಗೆ ಹಣ ತುಂಬಲು ಅಥವಾ ದೀಪಾವಳಿ ಸಂದರ್ಭದಲ್ಲಿ ಕುರಿ ಕಡಿಯಲು ಬೇಕಾಗುವ ಹಣ, ಒಂದೆಡೆ ಇಡುಗಂಟಲ್ಲಿ ಸಿಗುತ್ತದೆ ಎಂಬುದೇ ಆಗಿದೆ. ಬಹುಶಃ, ಪಿಗ್ಮಿಯಲ್ಲಿ ಸಿಗದ ಕೆಲವು ಸವಲತ್ತುಗಳನ್ನು ಸೇರಿಸಿ ದೇಶದ ರಿಸರ್ವ್ ಬ್ಯಾಂಕ್ ರೂಪಿಸಿರುವ ವ್ಯವಸ್ಥೆಯೇ ಪೇಮೆಂಟ್ ಬ್ಯಾಂಕ್ ಎನ್ನಿಸುತ್ತದೆ.
ಡಿಜಿಟಲೀಕರಣದ ಕೂಸು!
ಸಾಂಪ್ರದಾಯಿಕ ಬ್ಯಾಂಕ್‌ಗಳಿಗಿಂತ ಪೇಮೆಂಟ್ ಬ್ಯಾಂಕ್ ಸಂಪೂರ್ಣ ಭಿನ್ನ. ಇಂದಿನ ಡಿಜಿಟಲೀಕರಣದ ಪರಮಾವಧಿ ಉಪಯೋಗ ಪಡೆದು ರೂಪಿಸಲಾಗಿರುವ ಈ ವ್ಯವಸ್ಥೆ, ಬ್ಯಾಂಕ್ ವ್ಯವಸ್ಥೆಯಿಂದ ದೂರವಿರುವ ಗ್ರಾಮಾಂತರ ಭಾಗದ ಜನರಿಗೆ ಹೆಚ್ಚು ಉಪಯುಕ್ತ. 2013ರಲ್ಲಿ ಆರ್‌ಬಿಐ ದುರ್ಲಭ ಸಂಪರ್ಕ ಹೊಂದಿದ ಭಾರತೀಯ ಜನರಿಗಾಗಿ ಮೂಲಭೂತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಒದಗಿಸುವ ಪೇಮೆಂಟ್ ಬ್ಯಾಂಕಿಂಗ್ ಕುರಿತು ಮೊತ್ತಮೊದಲಾಗಿ ಉದ್ದೇಶ ಪ್ರಕಟಿಸಿ, ಪರವಾನಗಿ ಪಡೆಯಲು ಆಸಕ್ತರನ್ನು ಆಹ್ವಾನಿಸಿತು.
2015ರ ಆಗಸ್ಟ್ ವೇಳೆಗೆ ಆರ್‌ಬಿಐ ಆಹ್ವಾನಕ್ಕೆ ಪೇಮೆಂಟ್ ಬ್ಯಾಂಕ್ ಅನುಮತಿಗೆ 41 ಅರ್ಜಿಗಳು ಬಂದವು. ಮೊದಲ ಹಂತದ ಪರಿಶೀಲನೆಯ ನಂತರ ಆರ್‌ಬಿಐ ಅವುಗಳಲ್ಲಿ 11ಕ್ಕೆ ತಾತ್ವಿಕ ಒಪ್ಪಿಗೆಯನ್ನು ದಯಪಾಲಿಸಿತು. ಪೇಮೆಂಟ್ ಬ್ಯಾಂಕ್ ಸ್ಥಾಪನೆಗೆ ಷರತ್ತುಗಳನ್ನು ರೂಪಿಸಿದ ಆರ್‌ಬಿಐ ಆಗಸ್ಟ್ 19ರಿಂದ ಮುಂದಿನ ಎರಡು ವರ್ಷಗಳಲ್ಲಿ ಅವುಗಳನ್ನು ನಿಭಾಯಿಸಲು ಸೂಚಿಸಿತು.
ಆಯ್ಕೆಯಾಗಿದ್ದ 11ರಲ್ಲಿ ಮೂವರು ಆಸಕ್ತರು ತಾತ್ವಿಕ ಒಪ್ಪಿಗೆಯನ್ನು ಮರಳಿಸಿ ತಾವು ಆಸಕ್ತರಲ್ಲ ಎಂದು ಪರೋಕ್ಷವಾಗಿ ಘೋಷಿಸಿಕೊಂಡರು. ಉಳಿದ 8ರಲ್ಲಿ ಮೂರು ಕಂಪನಿಗಳು ಏನಾದವು ಎಂಬ ಬಗ್ಗೆ ಮಾಹಿತಿಯೇ ಇಲ್ಲ. ಪ್ರಸ್ತುತ ಭಾರತೀಯ ಅಂಚೆಯ ಸುಗಮ್ ಖಾತೆ, ಪೇಟಿಎಂ, ಫಿನೋ ಅವರ ಪ್ರಥಮ ಸೇವಿಂಗ್ಸ್, ಏರ್‌ಟೆಲ್ ಹಾಗೂ ಆದಿತ್ಯ ಬಿರ್ಲಾ ಪೇಮೆಂಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಿವೆ.
ಸೌಲಭ್ಯಕ್ಕೆ ಷರತ್ತುಗಳ ಅಂಕುಶ!
ಬ್ಯಾಂಕಿಂಗ್ ಸೇವೆಗಳ ಜೊತೆಗೆ ಇದನ್ನು ಹೋಲಿಕೆ ಮಾಡಲೇ ಹೋಗಬಾರದು. ನಗದನ್ನು ಸ್ವೀಕರಿಸುವ ಹಾಗೂ ನಗದು ಪಾವತಿಯ ಸೌಲಭ್ಯ ಇದೆ. ಡಿಮ್ಯಾಂಡ್ ಡಿಪಾಸಿಟ್ ಮತ್ತು ಸೇವಿಂಗ್ಸ್ ಖಾತೆಯಲ್ಲಿ ಹಣ ಠೇವಣಿ ಮಾಡಲು ಅವಕಾಶವಿದೆ. ನೇರವಾಗಿ ನಿಯತಕಾಲಿಕ ಠೇವಣಿಗೆ ಹಸಿರು ನಿಶಾನೆ ತೋರಿಸಲಾಗಿಲ್ಲ. ಡೆಬಿಟ್ ಕಾರ್ಡ್‌ನ ಸೌಲಭ್ಯ ಕೊಡಬಹುದು. ಇಸಿಎಸ್, ನೆಫ್ಟ್ ಹಾಗೂ ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಲು ಅವಕಾಶವಿದೆ. ವಿದ್ಯುತ್, ನೀರು ಮೊದಲಾದ ಗ್ರಾಹಕ ಬಿಲ್‌ಗಳನ್ನು ಪಾವತಿಸಲು ಪೇಮೆಂಟ್ ಬ್ಯಾಂಕ್
ತಾಂತ್ರಿಕತೆಯನ್ನು ಬಳಸಬಹುದು. ಆರ್‌ಬಿಐನ ನಿಯಮಗಳನ್ನು ಅನುಸರಿಸಿ ಬೇರೆ ಬ್ಯಾಂಕ್‌ಗಳಿಗೆ ಆರ್ಥಿಕ ಸಹವರ್ತಿಯಾಗಿ ಕಾರ್ಯ ನಿರ್ವಹಿಸಬಹುದು. ಪೇಮೆಂಟ್ ಬ್ಯಾಂಕ್‌ಗಳು ಶಾಖೆಗಳನ್ನು ತೆರೆಯಬಹುದು. ಎಟಿಎಂಗಳನ್ನು ಸ್ಥಾಪಿಸಬಹುದು. ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಕೊಡಬಹುದು. ಮ್ಯೂಚುಯಲ್ ಫಂಡ್ ರೀತಿಯಲ್ಲೇ, ಯೂನಿಟ್ ಮಾರಾಟ, ವಿಮಾ ಪ್ರಾಡಕ್ಟ್, ನಿವೃತ್ತಿ ವೇತನಗಳ ಯೋಜನೆಗಳಂಥ ಸಾಮಾನ್ಯ, ದೊಡ್ಡದಾದ ಆರ್ಥಿಕ ಸವಾಲುಗಳಿಲ್ಲದ ಸೇವೆಗಳನ್ನೂ ಕೊಡಬಹುದು.
ಪಿಗ್ಮಿ ಯೋಜನೆಗಳ ಹೋಲಿಕೆಗೆ ನಿಂತರೆ ಅಂಚೆ ಇಲಾಖೆ ಹಾಗೂ ಏರ್‌ಟೆಲ್ ಶೇ. 5.5ರ ದರದಲ್ಲಿ ಉಳಿತಾಯದ ಮೊತ್ತಕ್ಕೆ ಬಡ್ಡಿ ಕೊಡುತ್ತವೆ. ಪೇಟಿಎಂ, ಫಿನೋ, ಆದಿತ್ಯ ಬಿರ್ಲಾದವರು ಶೇ. 4ರ ಬಡ್ಡಿ ನೀಡುತ್ತಾರೆ. ಎಂದಿನಂತೆ ಅಂಚೆಯ ಪೇಮೆಂಟ್ ಬ್ಯಾಂಕ್ ವ್ಯವಸ್ಥೆ ಹೆಚ್ಚು ದುಬಾರಿಯಲ್ಲ. ಶುಲ್ಕಗಳನ್ನು ವಿಧಿಸುವುದರಲ್ಲಿ ಅದು ಮಾರ್ವಾಡಿತನ ತೋರುತ್ತಿಲ್ಲ. ಅದೇ ಮಾತನ್ನು ಸಾರ್ವತ್ರಿಕವಾಗಿ ಪೇಮೆಂಟ್ ಬ್ಯಾಂಕ್‌ಗಳ ಬಗ್ಗೆ ಹೇಳುವುದು ತಪ್ಪಾಗುತ್ತದೆ.
ಏರ್‌ಟೆಲ್ ಹರಾಕಿರಿ!
ಈ ಹಿಂದೆ ಪೇಮೆಂಟ್ ಬ್ಯಾಂಕ್‌ಗಳ ಖಾತೆಗಳನ್ನು ಸುಲಭವಾಗಿ ಆರಂಭಿಸಲಾಗುತ್ತಿತ್ತು. ಗ್ರಾಹಕನ ಆಧಾರ್, ಮೊಬೈಲ್ ದೃಢೀಕರಣದ ಸಂಯೋಜನೆಯಲ್ಲಿ ಖಾತೆಗಳನ್ನು ಆರಂಭಿಸುವುದು ಮಾನ್ಯವಾಗಿತ್ತು. ಇದೇ ಸೂತ್ರವನ್ನು ಬಳಸಿ ಪೇಮೆಂಟ್ ಬ್ಯಾಂಕ್ ಆರಂಭಿಸಿದ ಮೊಬೈಲ್ ಸೇವಾದಾತರು ತನ್ನ ಗ್ರಾಹಕರನ್ನು ಅವರ ಅರಿವಿಗೆ ಬಾರದಂತೆ ತನ್ನ ಪೇಮೆಂಟ್ ಬ್ಯಾಂಕ್ ಚಂದಾದಾರರನ್ನಾಗಿಸಿದ್ದುದೂ ಉಂಟು. ಈ ರೀತಿ ಏರ್‌ಟೆಲ್ ಆಧಾರ್ ಲಿಂಕ್ ಮಾಡುತ್ತಿದ್ದಂತೆ ಪೇಮೆಂಟ್ ಬ್ಯಾಂಕ್ ಖಾತೆಯನ್ನು ತೆರೆದಿದ್ದರಿಂದ ಜನರಿಗೆ ಅರಿಲ್ಲದಂತೆ ಅಡುಗೆ ಅನಿಲದ ಸಹಾಯಧನ, ಕರ್ನಾಟಕ ಸರ್ಕಾರ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ಕೊಡುವ ಸಹಾಯಧನವೆಲ್ಲ ನೇರವಾಗಿ ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಗೆ ಹೋದ ಸಾವಿರಾರು ಘಟನೆಗಳು ನಡೆದಿದ್ದವು. ಈಗಲೂ ಜನರ ಗಮನಕ್ಕೇ ಬಾರದ ಈ ಥರದ ಕೋಟಿ ಕೋಟಿ ರೂ. ಈ ಪೇಮೆಂಟ್ ಬ್ಯಾಂಕ್ ಖಾತೆಯಲ್ಲಿರಬಹುದು. ನೆನಪಿರಲಿ, ಗ್ರಾಹಕರ ಗಮನಕ್ಕೆ ತರದೆ ಈ ರೀತಿ ಏರ್‌ಟೆಲ್ ವ್ಯಾಲೆಟ್‌ಗಳನ್ನು ಏರ್‌ಟೆಲ್ ಪೇಮೆಂಟ್ ಅಕೌಂಟ್‌ಗೆ ಪರಿವರ್ತಿಸಿದ ಕೃತ್ಯಕ್ಕೆ ಆರ್‌ಬಿಐ ಏರ್‌ಟೆಲ್‌ಗೆ 50 ಮಿಲಿಯನ್ ರೂ.ಗಳ ದಂಡ ವಿಧಿಸಿದೆ.
2014ರ ಆರ್‌ಬಿಐ ಸುತ್ತೋಲೆಯ ಪ್ರಕಾರ ಪೇಮೆಂಟ್ ಬ್ಯಾಂಕ್ ವ್ಯವಸ್ಥೆಯಲ್ಲಿ ಖಾತೆದಾರ ಗರಿಷ್ಠ ಒಂದು ಲಕ್ಷ ರೂ.ಗಳನ್ನು ಮಾತ್ರ ಒಮ್ಮೆಗೆ ಇಟ್ಟಿರಬಹುದು. ಸಮಯಾಧಾರಿತ ನಿಶ್ಚಿತ ಠೇವಣಿಗಳನ್ನಾಗಲಿ, ಕ್ರೆಡಿಟ್ ಕಾರ್ಡ್‌ಗಳನ್ನು ತರಿಸಲಾಗಲಿ ಇವಕ್ಕೆ ಅವಕಾಶವಿಲ್ಲ. ಸಾಲ ಕೊಡುವಂತಿಲ್ಲ. ಅನಿವಾಸಿ ಭಾರತೀಯರಿಂದ ಠೇವಣಿ ಸಂಗ್ರಹಿಸುವಂತಿಲ್ಲ. ಪೇಮೆಂಟ್ ಬ್ಯಾಂಕ್‌ನ ಮೂಲ ಬಂಡವಾಳದಲ್ಲಿ ಶೇ. 24ರಷ್ಟು ಅನಿವಾಸಿ ಭಾರತೀಯರ ಹಣ ಆಗಿರಬಹುದು.
100 ಕೋಟಿಯ ಮೂಲ ಬಂಡವಾಳ, ಪ್ರವರ್ತಕರು ಮೊದಲ ಐದು ವರ್ಷ ಷೇರಿನ ಶೇ. 40ರಷ್ಟು ಮೊತ್ತವನ್ನು ತೊಡಗಿಸಿರಬೇಕು ಎಂಬ ತಾಂತ್ರಿಕ, ಆರ್‌ಬಿಐ ನಿಯಮಗಳನ್ನು ಬದಿಗಿರಿಸಿದರೂ ಪೇಮೆಂಟ್ ಬ್ಯಾಂಕ್‌ಗಳ ಭವಿಷ್ಯ
ಅಂಧಕಾರದಲ್ಲಿಯೇ ಇದೆ. 2016ರಲ್ಲಿ 2.5 ಮಿಲಿಯನ್ ನಷ್ಟಕ್ಕೊಳಗಾಗಿದ್ದ ಏರ್‌ಟೆಲ್ 2017ರಲ್ಲಿ ಅದರ ಎರಡು ಪಟ್ಟು ನಷ್ಟಕ್ಕೀಡಾಗಿದೆ. ಫಿನೋ 2017ರ ಮಾರ್ಚ್‌ಗೆ 820 ಮಿಲಿಯನ್ ನಷ್ಟ ಮಾಡಿಕೊಂಡಿದೆ.
ದಾರಿ ದುರ್ಗಮ
ಸಾಲ ನೀಡಿಕೆಯ ಅವಕಾಶವನ್ನು ಪೇಮೆಂಟ್ ಬ್ಯಾಂಕ್‌ಗಳಿಗೆ ಕೊಡದಿರುವುದು, ಮೂರನೇ ಪಕ್ಷದ ಪರಿಶೀಲನೆಯ ನಂತರವಷ್ಟೇ ಖಾತೆ ಆರಂಭವಾಗುವ ಷರತ್ತು ಈ ಕ್ಷೇತ್ರದ ಬೆಳವಣಿಗೆಗೆ ದೊಡ್ಡ ತೊಡಕಾಗಿದೆ. ಗ್ರಾಮೀಣ ಬ್ಯಾಂಕ್‌ಗಳು, ಪಿಎಲ್‌ಡಿಬಿಗಳು, ಸೊಸೈಟಿಗಳ ಒಂದರಿಂದ ಐದು ಲಕ್ಷದೊಳಗಿನ ವಹಿವಾಟಿನ ಗ್ರಾಹಕರನ್ನು ಗಮನದಲ್ಲಿರಿಸಿಕೊಂಡು ಪೇಮೆಂಟ್ ಬ್ಯಾಂಕ್‌ಗಳು ಕೆಲಸ ಮಾಡಬೇಕಿದೆ. ಕೆಲವು ಆಶಾಕಿರಣಗಳೂ ಇವೆ. ವಿಶ್ವಾಸಾರ್ಹತೆಯ ಆಧಾರದಲ್ಲಿ ದೊಡ್ಡ ಮೊತ್ತದ ಪಿಗ್ಮಿ ಸಂಗ್ರಹಿಸಲು ಸಾಧ್ಯವಿದೆ. ಮನೆಬಾಗಿಲಿಗೆ ಎಟಿಎಂ ಮಾದರಿ ಆಕರ್ಷಕವಾಗಬಹುದು. ವ್ಯಾಲೆಟ್‌ಗಳಾಗಿ ಚಾಲ್ತಿಯಲ್ಲಿರಬಹುದು. ಖಾಸಗಿ ವ್ಯವಸ್ಥೆಗಳಿಗೆ ಈಗಾಗಲೇ ವ್ಯವಸ್ಥಿತ ರಚನೆ ಹೊಂದಿರುವ ಅಂಚೆಯನ್ನು ಪೇಮೆಂಟ್ ಬ್ಯಾಂಕ್ ಕ್ಷೇತ್ರದಲ್ಲಿ ಎದುರಿಸುವುದು ಸುಲಭವಲ್ಲ. ಮುಂದಿನ ಎರಡು ವರ್ಷಗಳಲ್ಲಿ ಈ ಮಾದರಿಯ ಅಳಿವು ಉಳಿವುಗಳು ನಿರ್ಧಾರವಾಗಲಿದೆ.
ಮಾ.ವೆಂ.ಸ.ಪ್ರಸಾದ್
ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.