ಫೋನ್ ಕೊಳ್ಳುವ ಸಮಯ… ಗ್ರಾಹಕರಿಗೆ ಸಲಹೆಗಳು
Team Udayavani, Dec 2, 2019, 5:00 AM IST
ಆನ್‌ಲೈನ್ ಮೂಲಕ ಸ್ಮಾರ್ಟ್‌ಫೋನ್ ಖರೀದಿಸುವಾಗ ವಿಶ್ವಾಸಾರ್ಹ ಸ್ಟೋರ್‌ಗಳನ್ನೇ ಆಯ್ಕೆ ಮಾಡಿಕೊಳ್ಳಿ. ಯಾವುದೋ ಅನಧಿಕೃತ ಜಾಹಿರಾತಿಗೆ ಮರುಳಾಗಿ, ಹೆಸರೇ ಕೇಳಿರದ ವೆಬ್‌ಸೈಟು ಇಲ್ಲವೇ ಆ್ಯಪ್‌ಗ್ಳಿಂದ ಖರೀದಿಸಬೇಡಿ. ಆನ್‌ಲೈನ್ ಮೂಲಕ ಹೊಸದಾಗಿ ಮೊಬೈಲ್ ಫೋನ್ ಕೊಳ್ಳುವವರಿಗಾಗಿ ಇಲ್ಲಿವೆ ಕೆಲವು ಸಲಹೆಗಳು.
ರಸ್ತೆಯಲ್ಲಿ ಸಾಗುತ್ತಿರುವಾಗ ಪೋಸ್ಟ್‌ಮ್ಯಾನ್ ಯುವಕನೋರ್ವನ ಸೈಕಲ್ ಹಿಡಿದು ನಾಲೈದು ಮಂದಿ ತಡೆದುಕೊಂಡಿದ್ದರು. ಜೋರು ದನಿಯಲ್ಲಿ ಅವನನ್ನು ಪ್ರಶ್ನಿಸುತ್ತಿದ್ದರು. ಏನಾಯೆ¤ಂದು ದಾರಿಹೋಕರು ಪ್ರಶ್ನಿಸಿದಾಗ, ಆ ಮನೆಯವರು, ನೋಡಿ ನಾವು ಆನ್‌ಲೈನ್‌ನಲ್ಲಿ ಮೊಬೈಲ್ ಫೋನ್ ಬುಕ್ ಮಾಡಿದ್ದೆವು. ಇವನು ತಂದುಕೊಟ್ಟ ಪಾರ್ಸೆಲ್‌ನಲ್ಲಿ ಯಾವುದೋ ಚಪ್ಪಲಿ ಇದೆ ಎಂದರು. ಪೋಸ್ಟ್‌ಮ್ಯಾನ್ ದಯನೀಯ ದನಿಯಲ್ಲಿ, ಸರ್ ಇವರು ಆರ್ಡರ್ ಮಾಡಿರುವುದನ್ನು ಇವರ ವಿಳಾಸಕ್ಕೆ ತಲುಪಿಸುವುದಷ್ಟೇ ನನ್ನ ಕೆಲಸ. ಕ್ಯಾಶ್ ಆನ್ ಡೆಲಿವರಿ ಆರ್ಡರ್ ಮಾಡಿದ್ದರು. ಅದಕ್ಕೆ ಹಣ ಪಡೆದು ಪಾರ್ಸೆಲ್ ಕೊಟ್ಟಿದ್ದೇನೆ. ಒಳಗೇನಿದೆ ಅಂತ ನನಗೇನು ಗೊತ್ತು? ಇವರು ಸಂಬಂಧಿಸಿದ ಆನ್‌ಲೈನ್ ಕಂಪೆನಿಯವರನ್ನು ಕೇಳಬೇಕು ಎಂದ. ಆನ್‌ಲೈನ್ ಮಾರಾಟದ ಅರಿವಿದ್ದ ದಾರಿಹೋಕ ಯುವಕರು, ಇದು ಯಾವ ಕಂಪೆನಿ ಆನ್‌ಲೈನ್ ಸ್ಟೋರ್? ಎಂದು ಪ್ಯಾಕೆಟ್ ನೋಡಿದರು. ಅದು ಹೆಸರೇ ಕೇಳಿಲ್ಲದ ಯಾವುದೋ ಆನ್‌ಲೈನ್ ಕಂಪೆನಿ. ಎಷ್ಟು ರೂ. ಮೊಬೈಲ್? ಯಾವ ಕಂಪೆನಿಯದು ಬುಕ್ ಮಾಡಿದ್ದಿರಿ ಎಂದು ಕೊಂಡವರನ್ನು ಕೇಳಿದರೆ, ಕಂಪೆನಿ ಗೊತ್ತಿಲ್ಲ, ಟಿವಿಯಲ್ಲಿ ಬರುವ ಜಾಹೀರಾತು ನೋಡಿ, 3500 ರೂ. ಟಚ್‌ಸ್ಕ್ರೀನ್ ಮೊಬೈಲ್ ಬುಕ್ ಮಾಡಿದ್ದೆವು. ಹಣ ನೀಡಿ ಪಾರ್ಸೆಲ್ ಓಪನ್ ಮಾಡಿದರೆ, ಯಾವುದೋ ಚಪ್ಪಲಿ ಇದೆ. ಇವನು ನಮಗೆ ನಮ್ಮ ಹಣ ವಾಪಸ್ ಕೊಡಬೇಕು ಎಂದು ಜಗ್ಗಿಸಿ ಕೇಳಿದರು. ಆಗ ದಾರಿಹೋಕ ಯುವಕರು, ಸಾರ್, ಇದ್ಯಾವುದೋ ನಕಲಿ ಕಂಪೆನಿ. ನಿಮಗೆ ಅವರು ಮೋಸ ಮಾಡಿದ್ದಾರೆ. ಆ ನಕಲಿ ಕಂಪೆನಿ ಕಳುಹಿಸಿದ ಪಾರ್ಸೆಲ್ ಅನ್ನು ಈ ಪೋಸ್ಟ್‌ಮ್ಯಾನ್ ನಿಮಗೆ ತಂದುಕೊಟ್ಟಿದ್ದಾನೆ. ಇದರಲ್ಲಿ ಅವನ ತಪ್ಪು ಏನೂ ಇಲ್ಲ. ಈಗ ಅವನು ನಿಮಗೆ ಹಣ ವಾಪಸ್ ಕೊಡಲು ಸಾಧ್ಯವಿಲ್ಲ. ನೀವು ಆನ್‌ಲೈನ್‌ನಲ್ಲಿ ಖರೀದಿ ಮಾಡುವಾಗ ಅಮೆಜಾನ್, ಫ್ಲಿಪ್‌ಕಾರ್ಟ್, ಪೇಟಿಎಂ ನಂಥ ವಿಶ್ವಾಸಾರ್ಹ ಆನ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಸಬೇಕು ಎಂದು ಹೇಳಿದರು. ಮೋಸ ಹೋದ ಗ್ರಾಹಕರು, ನಾನು ಕಂಪ್ಲೇಂಟ್ ಕೊಡ್ತೀನಿ ಅಂತ ಕೂಗಾಡಿದರು.
ಇವಿಷ್ಟು ಗಮನಲದಲ್ಲಿರಲಿ
ಟಿವಿಗಳಲ್ಲಿ ಕಾಲು ಗಂಟೆ ಕಾಲ ಪ್ರಸಾರವಾಗುವ ಉದ್ದುದ್ದ ಜಾಹೀರಾತು ರೀತಿ ಬರುವ ಸರಣಿಗಳಲ್ಲಿ ಕೇವಲ 3 ಸಾವಿರ ರೂ.ಗೆ ಮೊಬೈಲ್ ಫೋನ್, ಕೂಡಲೇ ಈ ವಿಳಾಸಕ್ಕೆ ಫೋನ್ ಮಾಡಿ ಎಂಬುದನ್ನು ನಂಬಿ ಕೆಲವರು ಮೋಸ ಹೋಗುತ್ತಾರೆ. ಇಂಥವಕ್ಕೆ ಮರುಳಾಗದಿರಿ. ಆನ್‌ಲೈನ್ ಮಾರಾಟದಲ್ಲಿ ಕಡಿಮೆ ಬೆಲೆಗೆ ಮೊಬೈಲ್ ದೊರಕುತ್ತವೆ ನಿಜ. ಹಾಗೆಂದು 3 ಸಾವಿರಕ್ಕೆ, 2500 ರೂ.ಗಳಿಗೆ ಸ್ಮಾರ್ಟ್‌ಫೋನ್‌ಗಳು ದೊರಕುವುದಿಲ್ಲ. ಕಂಪ್ಯೂಟರ್, ಮೊಬೈಲ್, ಆನ್‌ಲೈನ್ ಇತ್ಯಾದಿಗಳ ಪರಿಚಯ ಇರದ ಜನ ಸಾಮಾನ್ಯರು ಆನ್‌ಲೈನ್ ಮೂಲಕ ಖರೀದಿ ಮಾಡುವಾಗ ಕೆಲವು ಅಂಶಗಳನ್ನು ಅರಿತುಕೊಳ್ಳಬೇಕು.
· ನಿಮಗೆ ಆನ್‌ಲೈನ್ ಖರೀದಿಯ ಬಗ್ಗೆ ಯಾವುದೇ ಐಡಿಯಾ ಇರದಿದ್ದರೆ, ಖಂಡಿತ ಅದಕ್ಕೆ ಕೈ ಹಾಕಬೇಡಿ. ನಿಮಗೆ ಪರಿಚಯವಿರುವ ವಿಶ್ವಾಸಾರ್ಹ ವ್ಯಕ್ತಿಗಳಿಗೆ ಆನ್‌ಲೈನ್ ಖರೀದಿ, ತಂತ್ರಜ್ಞಾನ ಗೊತ್ತಿದ್ದರೆ ಅಂಥವರನ್ನು ಕೇಳಿ, ನಿಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಿಸಿ.
· ಆನ್‌ಲೈನ್‌ನಲ್ಲಿ ಖರೀದಿ ಮಾಡುವ ನಿರ್ಧಾರಕ್ಕೆ ಬಂದಾಗ, ಅಮೆಜಾನ್, ಫ್ಲಿಪ್‌ಕಾರ್ಟ್, ಪೇಟಿಎಂ, ಟಾಟಾ ಕ್ಲಿಕ್ ಮೂಲಕ ಖರೀದಿಸಿ. ಅದರಲ್ಲೂ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ದರ, ವಸ್ತುಗಳ ಬದಲಾಯಿಸಿಕೊಡುವಿಕೆ ಅಥವಾ ವಾಪಸ್ ಪಡೆಯುವಿಕೆ ನಿಯಮಗಳು ಸರಳವಾಗಿವೆ.
· ಕೆಲವೊಂದು ಮೊಬೈಲ್‌ಗಳು ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್ ಎಕ್ಸ್‌ಕ್ಲುಸಿವ್ ಆಗಿರುತ್ತವೆ. ಅಂಥ ಮೊಬೈಲುಗಳನ್ನು ಆಯಾ ಆನ್‌ಲೈನ್‌ಸ್ಟೋರ್‌ನಲ್ಲೇ ಖರೀದಿಸಿ. ಉದಾಹರಣೆಗೆ ರೆಡ್‌ಮಿ ನೋಟ್ 8 ಪ್ರೊ ಮೊಬೈಲ್ ಅನ್ನು ಶಿಯೋಮಿ ಕಂಪೆನಿ ಅಮೆಜಾನ್.ಇನ್ ನಲ್ಲಿ ಮಾರಾಟಕ್ಕೆ ಬಿಡುಗಡೆ ಮಾಡಿದೆ. ಅದನ್ನು ಅಮೆಜಾನ್‌ನಲ್ಲೇ ಖರೀದಿಸಬೇಕು. ಅದೇ ಮೊಬೈಲ್ ಫ್ಲಿಪ್‌ಕಾರ್ಟ್‌ನಲ್ಲಿ ಬೇರೆ ಯಾವುದೋ ಸೆಲ್ಲರ್ ಮೂಲಕ ಹೆಚ್ಚು ಬೆಲೆಗೆ ಮಾರಾಟವಾಗುತ್ತಿರುತ್ತದೆ. ರೆಡ್‌ಮಿ ನೋಟ್ 8 ಪ್ರೊನ 128+8 ಜಿಬಿ ಆವೃತ್ತಿಯ ಮೊಬೈಲ್, ಅದರ ಅಧಿಕೃತ ಮಾರಾಟ ದರ ಅಮೆಜಾನ್‌ನಲ್ಲಿ 16 ಸಾವಿರ ರೂ.ಗಳಿದೆ. ಅದೇ ಮೊಬೈಲನ್ನು ಫ್ಲಿಪ್‌ಕಾರ್ಟ್‌ನಲ್ಲಿ 18 ಸಾವಿರ ರೂ.ಗಳಿಗೆ ಬೇರೆ ಮಾರಾಟಗಾರ ಮಾರಾಟ ಮಾಡುತ್ತಿದ್ದಾನೆ. ಅಮೆಜಾನ್, ಫ್ಲಿಪ್‌ಕಾರ್ಟ್ ನಲ್ಲಿ ಖರೀದಿಯ ಅನುಭವ ಇರುವವರಿಗೆ ಮಾತ್ರ ಇದರ ಬಗ್ಗೆ ತಿಳುವಳಿಕೆ ಇರುತ್ತದೆ. ಇಲ್ಲೊಂದು ಅಕ್ಷೇಪಣೆಯಿದೆ. ಒಂದು ಮೊಬೈಲ್ ಒಂದು ಆನ್‌ಲೈನ್ ಮಾರಾಟ ಸಂಸ್ಥೆಗೆ ಎಕ್ಸ್‌ಕ್ಲುಸಿವ್ ಮಾರಾಟಕ್ಕೆ ಬಿಟ್ಟ ಮೇಲೆ, ಅದೇ ಮೊಬೈಲ್ ಬೇರೆ ಸೆಲ್ಲರ್ ಮೂಲಕ ಇನ್ನೊಂದು ಆನ್‌ಲೈನ್ ಸ್ಟೋರ್‌ನಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡಲು ಅವಕಾಶ ನೀಡಬಾರದು. ಅಮೆಜಾನ್‌ನಲ್ಲಿ ಬಿಟ್ಟಿರುವ ಮೊಬೈಲನ್ನು ತನ್ನಲ್ಲಿ, ಯಾವನೋ ಮಾರಾಟಗಾರ ಮಾರಲು ಫ್ಲಿಪ್‌ಕಾರ್ಟ್ ಅವಕಾಶ ನೀಡಬಾರದು. ತದ್ವಿರುದ್ಧವಾಗಿ ಅಮೆಜಾನ್‌ಗೂ ಈ ನೀತಿ ಅನ್ವಯಿಸಬೇಕು.
· ಕೆಲವೊಂದು ಮೊಬೈಲ್ ಫೋನ್‌ಗಳು ಆನ್‌ಲೈನ್‌ಗಿಂತಲೂ ಕಡಿಮೆ ಅಥವಾ ಸರಿಸಮ ದರದಲ್ಲಿ ಅಂಗಡಿಗಳಲ್ಲೇ ಸಿಗುತ್ತವೆ. ಹಾಗಿದ್ದಾಗ, ನಿಮ್ಮೂರಿನ ನಿಮ್ಮ ವಿಶ್ವಾಸಾರ್ಹ, ಪರಿಚಯಸ್ಥ ಅಂಗಡಿಗಳಲ್ಲೇ ಕೊಳ್ಳುವುದು ಒಳಿತು.
· ಯಾವುದೇ ಆನ್‌ಲೈನ್ ಖರೀದಿಯಿರಲಿ, ವಸ್ತು ನಿಮ್ಮ ಕೈಸೇರಿದ ಬಳಿಕ ಪಾರ್ಸೆಲ್ ಓಪನ್ ಮಾಡುವ ಮುನ್ನ, ನಿಮ್ಮ ಮೊಬೈಲ್‌ನಲ್ಲಿ ವಿಡಿಯೋ ಆನ್ ಮಾಡಿಕೊಂಡು ರೆಕಾರ್ಡ್ ಮಾಡಿಕೊಳ್ಳಿ. ವಿಡಿಯೋದಲ್ಲಿ ಪ್ಯಾಕ್ ಇನ್ನೂ ಒಡೆದಿರದ್ದನ್ನು ತೋರಿಸಿ, ಅನಂತರ ನೀವು ಕತ್ತರಿಸಿ ಓಪನ್ ಮಾಡಿದ್ದು ದಾಖಲಾಗಲಿ. ನಿಮ್ಮ ಮೊಬೈಲ್ ಹೊರತೆಗೆದು ಆನ್ ಮಾಡುವವರೆಗೂ ವಿಡಿಯೋ ಮಾಡಿ.
· ಎಷ್ಟೇ ವಿಶ್ವಾಸಾರ್ಹ ಆನ್‌ಲೈನ್ ಸ್ಟೋರ್ ಆದರೂ, ಮಾನವ ಸಹಜ ತಪ್ಪಿನಿಂದ ಪಾರ್ಸೆಲ್‌ನೊಳಗೆ ನೀವು ಆರ್ಡರ್ ಮಾಡಿರುವ ಮೊಬೈಲೇ ಇಲ್ಲದಿರಬಹುದು, ಅಥವಾ ನೀವು ಆರ್ಡರ್ ಮಾಡಿದ ಮಾಡೆಲ್ ಬದಲು ಬೇರೆ ಮಾಡೆಲ್ ಇರಬಹುದು. ನೀವು ವಿಡಿಯೋ ಮಾಡಿದ್ದರೆ, ಏನಾದರೂ ವ್ಯತ್ಯಾಸವಾದರೆ, ಗ್ರಾಹಕ ಸೇವೆಗೆ ಕರೆ ಮಾಡಿ ನಿಮ್ಮ ಸಾಕ್ಷಿ ಆಧಾರ ಒದಗಿಸಲು ಅನುಕೂಲವಾಗುತ್ತದೆ.
ಆನ್‌ಲೈನ್ ಮೂಲಕ ನಿಮ್ಮ ಮೊಬೈಲ್ ಫೊನ್ ಖರೀದಿ ಮಾಡುವಾಗ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿ. ಇದು ಮೊಬೈಲ್ ಮಾತ್ರವಲ್ಲ, ಆನ್‌ಲೈನ್‌ನ ಎಲ್ಲ ಖರೀದಿಗಳಿಗೂ ಅನ್ವಯವಾಗುತ್ತದೆ.
-ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.