ಅಂಚೆ ಆದರ
Team Udayavani, Jan 28, 2019, 5:38 AM IST
ಹೂಡಿಕೆ ಮಾಡುವವರು ಅಂಚೆಯಣ್ಣನ ಕಡೆ ಸ್ವಲ್ಪ ತಿರುಗಿ. ಏಕೆಂದರೆ, ಸಣ್ಣ ಉಳಿತಾಯದ ಬಡ್ಡಿ ದರಗಳು ಕೆಲ ಯೋಜನೆಗಳಲ್ಲಿ ಬ್ಯಾಂಕುಗಳ ಫಿಕ್ಸೆಡ್ ಡಿಪಾಸಿಟ್‌ಗಳಿಗಿಂತ ಉತ್ತಮವಾಗಿವೆ. ಹಾಗಾಗಿ, ಅಂಚೆಯಣ್ಣನ ಪೋಸ್ಟಲ್ ಸೇವಿಂಗ್ಸ್ ಯೋಜನೆಗಳ ಮೇಲೆ ಇಲ್ಲಿದೆ ಒಂದು ನೋಟ.
ಹೊಸ ವರ್ಷದಿಂದ ನಮ್ಮ ಅಂಚೆ ಇಲಾಖೆ ತನ್ನ ಸಣ್ಣ ಉಳಿತಾಯದ ಯೋಜನೆಯಡಿ ಬಡ್ಡಿ ದರಗಳನ್ನು ಮತ್ತೂಮ್ಮೆ ಪರಿಷ್ಕರಿಸಿದೆ. ಸಧ್ಯ ಅಂಚೆಯಣ್ಣನ ಸಣ್ಣ ಉಳಿತಾಯದ ಬಡ್ಡಿ ದರಗಳು ಕೆಲ ಯೋಜನೆಗಳಲ್ಲಿ ಬ್ಯಾಂಕುಗಳ ಫಿಕ್ಸೆಡ್ ಡಿಪಾಸಿಟ್‌ಗಳಿಗಿಂತ ಉತ್ತಮವಾಗಿದೆ. ಹಾಗಾಗಿ, ಇದೀಗ ಅಂಚೆಯಣ್ಣನ ಪೋಸ್ಟಲ್ ಸೇವಿಂಗ್ಸ್ ಯೋಜನೆಗಳ ಮೇಲೆ ಒಂದು ನೋಟ:
ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಂ
60 ವರ್ಷ ಮೀರಿದ ಸೀನಿಯರ್ ಸಿಟಿಜನ್‌ಗಳಿಗಾಗಿಯೇ (ವಿ.ಆರ್.ಎಸ್ ನಂಥ ಕೆಲವು ವಿಶೇಷ ಸಂದರ್ಭಗಳಲ್ಲಿ 55 ವರ್ಷ) ಸರಕಾರವು ಅಂಚೆ ಕಚೇರಿಗಳಲ್ಲಿ ಆರಂಭಿಸಿದ ಈ ನಿಗದಿತ ಆದಾಯದ ಸ್ಕೀಂ ಯಾವುದೇ ರಿಸ್ಕ್ ಇಲ್ಲದೆ ಶೇ. 8.7ರಷ್ಟು ಬಡ್ಡಿ ನೀಡುತ್ತದೆ. ಬಡ್ಡಿಯು ಪ್ರತಿ ತ್ತೈಮಾಸಿಕ ಕೈಸೇರುತ್ತದೆ. ಅಂಥ ಬಡ್ಡಿಯ ಮೇಲೂ ಬಡ್ಡಿ ಲೆಕ್ಕ ಹಾಕುವುದಾದರೆ ವಾರ್ಷಿಕ ಪ್ರತಿಫಲ 9% ದ ಆಸುಪಾಸು ಎಂದು ಹೇಳಬಹುದು. ಒಬ್ಬ ವ್ಯಕ್ತಿ ಕನಿಷ್ಠ 1000 ದಿಂದ ಆರಂಭಿಸಿ 15 ಲಕ್ಷ ರೂಪಾಯಿಗಳವರೆಗೆ ಇದರಲ್ಲಿ ಹೂಡಬಹುದು. (ವಿ. ಆರ್. ಎಸ್ ನಂಥ ವಿಶೇಷ ಸಂದರ್ಭಗಳಲ್ಲಿ ರಿಟೈರ್ಮೆಂಟ್ ಮೊತ್ತ ಅಥವಾ 15 ಲಕ್ಷ, ಯಾವುದು ಕಡಿಮೆಯೋ ಅದು) ಇದು 5 ವರ್ಷಗಳ ಸ್ಕೀಂ ಆಗಿದ್ದು, ಅಂತ್ಯದಲ್ಲಿ ಇನ್ನೂ 3 ವರ್ಷಗಳಿಗೆ ಒಂದು ಬಾರಿ ನವೀಕರಿಸಬಹುದಾಗಿದೆ. ಈ ಖಾತೆಯಲ್ಲಿ ಹೂಡಿದ ಮೊತ್ತಕ್ಕೆ ಸೆಕ್ಷನ್ 80 ಸಿ ಅಡಿಯಲ್ಲಿ ಆದಾಯ ವಿನಾಯತಿಯನ್ನು ಪಡೆಯಬಹುದಾಗಿದೆ. ಆದರೆ ಇದರಿಂದ ಪಡೆಯುವ ಬಡ್ಡಿ ಸಂಪೂರ್ಣವಾಗಿ ಆದಾಯ ತೆರಿಗೆಗೆ ಒಳಪಡುತ್ತದೆ.
ನ್ಯಾಶನಲ್ ಸೇವಿಂಗ್ಸ್ ಸರ್ಟಿಫಿಕೇಟ್
ಅಂಚೆಯಣ್ಣನ ಇನ್ನೊಂದು ಬಹುಜನಪ್ರಿಯವೂ, ಭದ್ರತೆಯನ್ನೂ ಹೊಂದಿದ ಯೋಜನೆ. 5 ವರ್ಷಗಳ ಅವಧಿಯ ಈ ಸರ್ಟಿಫಿಕೇಟ್ ಅಂತ್ಯದಲ್ಲಿ ಮಾತ್ರ ದುಡ್ಡು ನೀಡುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ ವಾರ್ಷಿಕ 8% ಲೆಕ್ಕದಲ್ಲಿ ಬಡ್ಡಿ ಕ್ರೆಡಿಟ್ ಆಗುತ್ತದೆ. ಅಂದರೆ, ಚಕ್ರೀಕರಣದ ನಿಮಿತ್ತ ವಾರ್ಷಿಕ ಪ್ರತಿಫಲ 8.16% ದ ಆಸುಪಾಸು ಆಗುತ್ತದೆ. ಕನಿಷ್ಠ ಮೊತ್ತ ರೂ. 500 ಆಗಿದ್ದು ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. ಇದರಲ್ಲಿ ಹೂಡಿದ ಮೊತ್ತ ಸೆಕ್ಷನ್ 80 ಸಿ ಅಡಿಯಲ್ಲಿ ಆದಾಯ ವಿನಾಯಿತಿ ಪಡೆಯುತ್ತದಲ್ಲದೆ, ಇದರಿಂದ ಉತ್ಪತ್ತಿಯಾಗುವ ವಾರ್ಷಿಕ ಬಡ್ಡಿ ಕೂಡಾ ಕೈಸೇರದಿದ್ದರೂ ಮರುಹೂಡಿಕೆಯೆಂಬ ಕಾರಣಕ್ಕೆ ಸೆಕ್ಷನ್ 80 ಸಿ ಅಡಿಯಲ್ಲಿ ವಿನಾಯತಿ ಪಡೆಯುತ್ತದೆ. ಆದರೆ, ಅಂಥ ಬಡ್ಡಿಯನ್ನು ಆ ವರ್ಷದ ಆದಾಯಕ್ಕೆ ಸೇರಿಸಿ ತೆರಿಗೆ ಕಟ್ಟತಕ್ಕದ್ದು.
ಮಂತ್ಲಿ ಇನ್ಕಂ ಸ್ಕೀಂ
ಪ್ರತಿ ತಿಂಗಳೂ ಬಡ್ದಿ ನೀಡುವ 5 ವರ್ಷಗಳ ಈ ಸ್ಕೀಂ ವಾರ್ಷಿಕ 7.7% ಬಡ್ಡಿ ನೀಡುತ್ತದೆ. ಕನಿಷ್ಠ ಡೆಪಾಸಿಟ್ ರೂ. 4500 ಆಗಿದ್ದು ಗರಿಷ್ಠ ಮೊತ್ತ ರೂ 4.5 ಲಕ್ಷ (ಸಿಂಗಲ್ ಅಕೌಂಟ್) ಹಾಗೂ ರೂ 9 ಲಕ್ಷ (ಜಾಯಿಂಟ್ ಅಕೌಂಟ್). ಇಲ್ಲಿ ಪ್ರತಿ ತಿಂಗಳು ಬರುವ ಮಾಸಿಕ ಬಡ್ಡಿಯನ್ನು ಅದೇ ಅಂಚೆ ಕಚೇರಿಯಲ್ಲಿ ಆರ್.ಡಿ ಮಾಡಿದರೆ ಒಟ್ಟಾರೆ ಪ್ರತಿಫಲ 7.9% ಅಂದಾಜು ದೊರಕುತ್ತದೆ. ಹಲವಾರು ಅಂಚೆಯ ಏಜೆಂಟರು ಈ ರೀತಿ ಖಾತೆ ಮಾಡಿಸಿಕೊಡುತ್ತಾರೆ. ಉತ್ತಮ ಭದ್ರತೆ, ಬಡ್ಡಿದರ, ಮಾಸಿಕ ಬಡ್ಡಿಹರಿವು ಇರುವ ಈ ಯೋಜನೆ ತೆರಿಗೆಯಾರ್ಹ ಆದಾಯ. ಹೂಡಿಕೆಯ ಮೇಲೂ ಪ್ರತಿಫಲದ ಮೇಲೂ ಯಾವುದೇ ರೀತಿಯ ಕರವಿನಾಯತಿ ಇರುವುದಿಲ್ಲ.
ಕಿಸಾನ್ ವಿಕಾಸ ಪತ್ರ
ಅಂಚೆ ಕಚೇರಿಯ ಇನ್ನೊಂದು ಯೋಜನೆ. 112 ತಿಂಗಳುಗಳಲ್ಲಿ ಡಬಲ್ ಆಗುವ ಈ ಸ್ಕೀಂ ವಾರ್ಷಿಕ 7.7% ಪ್ರತಿಫಲ ನೀಡುತ್ತದೆ. ಕನಿಷ್ಠ ಮೊತ್ತ ರೂ 100, ಗರಿಷ್ಠ ಮಿತಿಯಿಲ್ಲ. ಬಡ್ಡಿಯ ಮೇಲೆ ತೆರಿಗೆ ಇದೆ. ಇದರಲ್ಲಿ ಭದ್ರತೆಯೂ ಇದೆ, ರಿಟರ್ನೂ ಇದೆ. ಆದರೆ ದಿಢೀರ್ ದುಡ್ಡು ಬೇಕೆಂದಾಗ (ಲಿಕ್ವಿಡಿಟಿ ಅಥವಾ ದ್ರವ್ಯತೆ) ಸಿಗಲಿಕ್ಕಿಲ್ಲ ಮತ್ತು ಆದಾಯ ತೆರಿಗೆಯ ಮಟ್ಟಿಗೆ ಇದರಲ್ಲಿ ಯಾವುದೇ ರಿಯಾಯಿತಿ ಸಿಗುವುದಿಲ್ಲ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್
15 ವರ್ಷಗಳ ಸಂಪೂರ್ಣ ತೆರಿಗೆ ವಿನಾಯತಿ ಇರುವ 8% ಬಡ್ಡಿದರದ ಈ ಯೋಜನೆ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದು. ಇದರಲ್ಲಿ ರೂ 1,50,000 ವರೆಗೆ ಸೆಕ್ಷನ್ 80 ಸಿ ಹಾಗೂ ಪ್ರತಿಫಲ ಸಂಪೂರ್ಣವಾಗಿ ಸೆಕ್ಷನ್ 10 ರ ಅನ್ವಯ ಕರರಹಿತ. ಇದು ಭದ್ರತೆ, ರಿಟರ್ನ್, ತೆರಿಗೆ ವಿನಾಯತಿ ಮಟ್ಟಿಗೆ ಉತ್ತಮವಾದರೂ ಲಿಕ್ವಿಡಿಟಿಯ ಮಟ್ಟಿಗೆ ಅಷ್ಟು ಉತ್ತಮವಲ್ಲ. ಆದರೂ ಈ ಯೋಜನೆಯಲ್ಲಿ ಖಾತೆ ತೆರೆದ 3 ನೆಯ ವರ್ಷದಿಂದ ಸಾಲ ಸೌಲಭ್ಯವೂ 7 ನೆಯ ವರ್ಷದಿಂದ ಅಂಶಿಕ ಹಿಂಪಡೆತವೂ ಇವೆ.
ಪೋಸ್ಟಲ್ ಟೈಮ್ ಡೆಪಾಸಿಟ್
ಚಾರಿತ್ರಿಕವಾಗಿ ಒಂದು ಉತ್ತಮ ಹೂಡಿಕಾ ಪದ್ಧತಿಯಾಗಿ ಬೆಳೆದು ಬಂದ Time Deposit ಎಂಬ ಈ ಫಿಕ್ಸೆಡ್ ಡಿಪಾಸಿಟ್ ಸ್ಕೀಂ ಸಧ್ಯಕ್ಕೆ 5 ವರ್ಷಕ್ಕೆ 7.8% ಬಡ್ಡಿ ನೀಡುತ್ತದೆ ಹಾಗೂ 1, 2 ಹಾಗೂ 3 ವರ್ಷಗಳ ಠೇವಣಿಗಳಿಗೆ ವಾರ್ಷಿಕ 7% ನೀಡುತ್ತದೆ. ಅಸಲಿನಲ್ಲಿ ಈ ಬಡ್ಡಿ ಪ್ರತಿ ತ್ತೈಮಾಸಿಕದಲ್ಲೂ ಕ್ರೆಡಿಟ್ ಆಗುವ ಕಾರಣ ನೈಜವಾದ ವಾರ್ಷಿಕ ಪ್ರತಿಫಲ ಅದರಿಂದ ತುಸು ಜಾಸ್ತಿಯೇ ಇರುತ್ತದೆ. 5 ವರ್ಷಗಳ ಟಿ.ಡಿ ಗಳು ಮಾತ್ರ ಸೆಕ್ಷನ್ 80ಸಿ ಆದಾಯ ವಿನಾಯತಿಗೆ ಅರ್ಹ; ಅದರಿಂದ ಅಲ್ಪಕಾಲಿಕ ಡೆಪಾಸಿಟ್‌ಗಳು ಅಲ್ಲ.
ಆರ್.ಡಿಗಳು
ಅಂಚೆ ಕಚೇರಿಯ ರಿಕರಿಂಗ್ ಡೆಪಾಸಿಟ್ ಅಥವಾ ನಿರಂತರ ಠೇವಣಿಯಲ್ಲಿ ಪ್ರತಿ ತಿಂಗಳೂ ಒಂದು ನಿಗದಿತ ಮೊತ್ತ ಕಟ್ಟುವ ಕರಾರು. ಇದು 5 ವರ್ಷಗಳ ಸ್ಕೀಂ ಹಾಗೂ ಇದರಲ್ಲಿ 7.3% ಬಡ್ಡಿದರವಿದ್ದು, ಯಾವುದೇ ಕರವಿನಾಯತಿಗಳು ಇಲ್ಲದೆ ನೀಡಲಾಗುತ್ತದೆ. ಪ್ರತಿ ತ್ತೈಮಾಸಿಕದಲ್ಲಿ ಚಕ್ರೀಕೃತಗೊಳ್ಳುವ ಕಾರಣ ಈ ಬಡ್ಡಿ ವಾರ್ಷಿಕವಾಗಿ 7.4% ಆಸುಪಾಸಿನಲ್ಲಿ ಪ್ರತಿಫಲ ನೀಡಿದಂತಾಯಿತು. ಇದು ಭದ್ರ. ಆದರೆ, ಬಡ್ಡಿದರ ಸಾಧಾರಣ ಮತ್ತು ಲಿಕ್ವಿಡಿಟಿ ಚೆನ್ನಾಗಿಲ್ಲ.
ಗಮನಿಸಿರಿ
ಪಿಪಿಎಫ್ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ ಪ್ರತಿಬಾರಿ ಪರಿಷ್ಕೃತಗೊಳ್ಳುವ ಹೊಸದರಗಳು ಹಳೆಯ ಹಾಗೂ ಹೊಸ ಖಾತೆಗಳೆಲ್ಲವುಗಳಿಗೂ ಸಮಾನವಾಗಿ ಅನ್ವಯಿಸುತ್ತವೆ. ಉಳಿದೆಲ್ಲಾ ಯೋಜನೆಗಳಲ್ಲೂ ಪರಿಷ್ಕರಣೆಯ ಬಳಿಕ ತೆರೆದ ಖಾತೆಗಳಿಗೆ ಮಾತ್ರ ಅನ್ವಯಿಸುತ್ತವೆ. ಅಂದರೆ, ಪಿಪಿಎಫ್ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಗಳೂ ಪ್ರತಿ ವರ್ಷವೂ ಹೂಡಿಕೆ ಮಾಡುತ್ತಾ ಹೋಗುವ ಖಾತೆಗಳು. ಅಂಥ ಖಾತೆಗಳ ಮೇಲೆ ಪ್ರತಿ ತ್ತೈಮಾಸಿಕಕ್ಕೆ ಆವಾಗ ಪ್ರಚಲಿತವಾಗಿರುವ ಬಡ್ದಿ ದರಗಳನ್ನು ಅನ್ವಯಿಸಲಾಗುತ್ತವೆ. ಉಳಿದೆಲ್ಲಾ ಖಾತೆಗಳು ಸಿಂಗಲ್ ಡೆಪಾಸಿಟ್ ಅಥವಾ ಏಕಗಂಟಿನಲ್ಲಿ ಹೂಡಿಕೆ ಮಾಡುವಂತವುಗಳು. ಅವುಗಳ ಮೇಲೆ ಸಿಗುವ ಅಂತ್ಯದವರೆಗಿನ ಬಡ್ಡಿ ದರವು ಹೂಡಿಕೆಯ ಸಮಯದ ದರವನ್ನು ಅನುಸರಿಸುತ್ತವೆ. ಅವು ಪ್ರತಿ ತ್ತೈಮಾಸಿಕದಲ್ಲಿ ಬದಲಾಗುವ ಬಡ್ಡಿ ದರಗಳನ್ನು ಅನುಸರಿಸುವುದಿಲ್ಲ. ಅದಲ್ಲದೆ, ಆರ್.ಡಿ ಖಾತೆಗಳಲ್ಲೂ ಆರಂಭದ ಬಡ್ಡಿದರ ಕೊನೆಯವರೆಗೆ ಸಿಗುತ್ತದೆ. ಎಲ್ಲಾ ಹೂಡಿಕೆದಾರರೂ ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.
•ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.