ಬೆಲೆ ಸೂಚ್ಯಂಕ, ಏನು ಹಾಗಂದರೆ?
Team Udayavani, Jul 23, 2018, 12:47 PM IST
ಗ್ರಾಹಕರು ಖರೀದಿಸುವ ಕೆಲವು ಗ್ರಾಹಕ ಉಪಯೋಗಿ ವಸ್ತುಗಳ ಮತ್ತು ಸೇವೆಯ ದರ ಮತ್ತು ಶುಲ್ಕದಲ್ಲಿ ಆದ ಬದಲಾವಣೆಯನ್ನು ಗ್ರಾಹಕರ ಬೆಲೆ ಸೂಚ್ಯಂಕ ಎನ್ನುತ್ತಾರೆ. ಇದನ್ನು ಸಾಮಾನ್ಯವಾಗಿ ಹಿಂದಿನ ವರ್ಷದ ಅದೇ ಅವಧಿಯಲ್ಲಿನ ಸ್ಥಿತಿಗತಿಗಳಿಗೆ ಹೋಲಿಸಿ ಶೇಕಡಾವಾರು ಪ್ರಮಾಣದಲ್ಲಿ ಹೇಳುತ್ತಾರೆ.
ಪ್ರತಿ ದಿನವೂ ಗೃಹೋಪಯೋಗಿ ಪದಾರ್ಥಗಳ ಬೆಲೆ ಏರುತ್ತಿದೆ. ಬದುಕು ದುಸ್ತರವಾಗಿದೆ. ಗ್ರಾಹಕರ ಬೆಲೆ ಸೂಚ್ಯಾಂಕ ನೋಡಿ : ಹೇಗೆ ಉತ್ತರ ಮುಖೀಯಾಗಿ ಏರುತ್ತಿದೆ. ಈ ದೇಶದಲ್ಲಿ ಮನುಷ್ಯನ ಬೆಲೆ ಬಿಟ್ಟು ಬೇರೆ ಎಲ್ಲದರ ಬೆಲೆ ಏರುತ್ತಿದೆ. ಇಂಥ ಹತಾಶೆಯ ಮಾತುಗಳನ್ನು ನಾವು ಪ್ರತಿದಿನ ಕೇಳುತ್ತಿರುತ್ತೇವೆ. ಮಾಸಾಂತ್ಯಕ್ಕೆ ಸಂಬಳ ಪಡೆಯುವವರು, ಸಂಬಳದಲ್ಲಿ ತುಟ್ಟಿಭತ್ಯೆ ಪಡೆಯುವವರು, ಈ ಗ್ರಾಹಕರ ಬೆಲೆ ಸೂಚ್ಯಂಕವನ್ನು ನೋಡುತ್ತಾ ,ಮೂರು ತಿಂಗಳಿಗೊಮ್ಮೆ, ವಾರ್ಷಿಕವಾಗಿ ಅಥವಾ ಸರ್ಕಾರ ಮನಸ್ಸುಮಾಡಿ ತುಟ್ಟಿ ಭತ್ಯೆಯನ್ನು ಏರಿಸಿದಾಗ, ಈ ಬೆಲೆ ಏರಿಕೆಗೆ ತುಟ್ಟಿ ಭತ್ಯೆ ರೂಪದಲ್ಲಿ ಏನಾದರೂ ಪರಿಹಾರ ಸಿಗಬಹುದೇ ಎಂದು ಚರ್ಚಿಸುತ್ತಾರೆ. ಹೆಸರೇ ಸೂಚಿಸುವಂತೆ ಗ್ರಾಹಕ ಉಪಯೋಗಿ ಪದಾರ್ಥಗಳ ಬೆಲೆ ಹೆಚ್ಚಿದಾಗ , ತುಟ್ಟಿಯಾದಾಗ ಅದಕ್ಕೆ ಪರಿಹಾರ ನೀಡುವ ಹಣಕಾಸು ಸಹಾಯವೇ ತುಟ್ಟಿ ಭತ್ಯೆ . ಬೆಲೆ ಏರಿಳಿಕೆಯನ್ನು ಕ್ರಮಬದ್ಧವಾಗಿ, ವೈಜ್ಞಾನಿಕವಾಗಿ ಲೆಕ್ಕ ಹಾಕುವ ಮಾನದಂಡವೇ ಗ್ರಾಹಕರ ಬೆಲೆ ಸೂಚ್ಯಂಕ.
ಒಂದು ಉತ್ಪನ್ನದ ಬೆಲೆ ಹಿಂದೆ ಎಷ್ಟಿತ್ತು, ಈಗ ಎಷ್ಟಾಗಿದೆ, ಏರಿಳಿಕೆಯ ಪ್ರಮಾಣ ಎಷ್ಟು ಎನ್ನುವುದನ್ನು ಇದು ದಾಖಲಿಸುತ್ತದೆ. ತುಟ್ಟಿ ಭತ್ಯೆ ರೂಪದಲ್ಲಿ ನೀಡುವ ಪರಿಹಾರ ಬೆಲೆ ಏರಿಕೆಗೆ ಸಂಪೂರ್ಣ ಪರಿಹಾರವಾಗದೇ, ಸ್ವಲ್ಪ ಮಟ್ಟಿಗೆ ನೆಮ್ಮದಿ ನೀಡುತ್ತದೆ ಎನ್ನುವುದು ಬೇರೆ ಮಾತು. ಅಂತೆಯೇ ದುಡಿಯುವ ವರ್ಗ ಈ ಗ್ರಾಹಕ ಬೆಲೆ ಸೂಚ್ಯಂಕದ ಬಗೆಗೆ ಸಂದೇಹ ವ್ಯಕ್ತಪಡಿಸುತ್ತದೆ. ಇದು ಕೇವಲ ಸೂಚನಾತ್ಮಕ (indicative) ವಿನಃ absolute ಆಗಿರುವುದಿಲ್ಲ ಎನ್ನುವ ಅಭಿಪ್ರಾಯವೂ ಇದೆ.
ಗ್ರಾಹಕರ ಬೆಲೆ ಸೂಚ್ಯಂಕ ಎಂದರೇನು?
ಕೆಲವು ಮಾದರಿ ಮತ್ತು ಜೀವನಾವಶ್ಯಕ ಪದಾರ್ಥಗಳ ಬೆಲೆಯನ್ನು ಒಂದು ನಿರ್ದಿಷ್ಟ ಅವಧಿಯಲ್ಲಿ ಸಂಗ್ರಹಿಸಿ, ಬೆಲೆ ಏರಿಳಿಕೆಯನ್ನು ಅಂಕಿ-ಸಂಖ್ಯೆಗಳ ಮೂಲಕ ಅಂದಾಜಿಸುವ ಸಂಖ್ಯೆ ಇದು. ಗ್ರಾಹಕರು ಖರೀದಿಸುವ ಕೆಲವು ಗ್ರಾಹಕ ಉಪಯೋಗಿ ವಸ್ತುಗಳ ಮತ್ತು ಸೇವೆಯ ದರ ಮತ್ತು ಶುಲ್ಕದಲ್ಲಿ ಆದ ಬದಲಾವಣೆಯನ್ನು ಗ್ರಾಹಕರ ಬೆಲೆ ಸೂಚ್ಯಂಕ ಎನ್ನುತ್ತಾರೆ. ಇದನ್ನು ಸಾಮಾನ್ಯವಾಗಿ ಹಿಂದಿನ ವರ್ಷದ ಅದೇ ಅವಧಿಯಲ್ಲಿನ ಸ್ಥಿತಿಗತಿಗಳಿಗೆ ಹೋಲಿಸಿ ಶೇಕಡಾವಾರು ಪ್ರಮಾಣದಲ್ಲಿ ಹೇಳುತ್ತಾರೆ. ಈ ಅಂಕಿ ಸಂಖ್ಯೆಗಳನ್ನು ಆಧರಿಸಿ ದೇಶದ ಹಣಕಾಸು ಸ್ಥಿತಿಯ ಬಗೆಗೆ, ಬೆಲೆ ಏರಿಕೆ ಬಗೆಗೆ, ಹಣದುಬ್ಬರ, ಅಳವಡಿಸಿಕೊಳ್ಳಬೇಕಾದ ಹಣಕಾಸು ನೀತಿ ನಿಯಮಾವಳಿ ಬಗೆಗೆ ಭಾಷ್ಯ ಬರೆಯುತ್ತಾರೆ. ಸೂಚನೆ ಮತ್ತು ಸಲಹೆಗಳನ್ನು ನೀಡುತ್ತಾರೆ.
ಯಾರು ಸಿದ್ಧ ಪಡಿಸುತ್ತಾರೆ?
ಹಣಕಾಸು ಮಂತ್ರಾಲಯ, ಹಲವು ಅಂಕಿ- ಸಂಖ್ಯಾ ಸಂಸ್ಥೆಗಳು,ರಿಸರ್ವ್ ಬ್ಯಾಂಕ್ ಮತ್ತು ನಾಗರಿಕ ಪೂರೈಕೆ ಇಲಾಖೆಗಳು ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತದ ಮೇಲೆ ನಿಗಾ ಇಡುತ್ತವೆ. ಮಾಹಿತಿಯನ್ನು ಸಂಗ್ರಹಿಸುತ್ತವೆ. ಆದರೆ, ಈ ಮಾಹಿತಿಗಳು ಅವುಗಳ ಅಂತರಿಕ ಬಳಕೆಗಷ್ಟೇ ಸೀಮಿತವಾಗಿರುತ್ತದೆ. ಈ ನಿಟ್ಟಿನಲ್ಲಿ ಬ್ಯೂರೋ ಆಫ್ ಲೇಬರ್‌ಸ್ಟ್ಯಾಟಿಸ್ಟಿಕ್ಸ್ ನಿಖರವಾದ ಮಾಹಿತಿಯನ್ನು ಕಲೆಹಾಕಿ ಗ್ರಾಹಕರ ಬೆಲೆ ಸೂಚ್ಯಂಕದ ಬಗೆಗೆ ಮಾಹಿತಿ ನೀಡುತ್ತದೆ. ಇದು 1982 ನ್ನು ಮೂಲ ಬೇಸ್ ವರ್ಷ ಮತ್ತು 100 ಅರಂಭದ ಬೇಸ್ ಪಾಯಿಂಟ್ ಆಧಾರದ ಮೇಲೆ ಸೂಚ್ಯಂಕವನ್ನು ಲೆಕ್ಕ ಹಾಕುತ್ತದೆ. ಸುಮಾರು 80ಸಾವಿರ ವಸ್ತುಗಳು ಮತ್ತು ಸೇವೆಯನ್ನು ಪರಿಗಣಿಸುತ್ತಿದ್ದು, ಇದನ್ನು ಬಾಸ್ಕೆಟ್ ಎಂದು ಕರೆಯಲಾಗುತ್ತದೆ. ದಿನನಿತ್ಯದ ಬದುಕಿನಲ್ಲಿ ಗ್ರಾಹಕರು ಖರೀದಿಸುವ ,ಮಾರುವ ಮತ್ತು ಬಳಸುವ ಸೇವೆಯ ಮೇಲೆ ಅವಲಂಭಿಸಿರುತ್ತದೆ. ಬೆಲೆ ಏರಿಳಿತದ ದೃಷ್ಟಿಯಲ್ಲಿ ಇದೇ ದೇಶದಲ್ಲಿ ಆಧಿಕೃತ ಮಾಹಿತಿ ಯಾಗಿರುತ್ತಿದ್ದು, ಸರ್ಕಾರವು ದೇಶದ ಹಣಕಾಸು ನಿರ್ವಹಣೆ, ಬೆಲೆ ಏರಿಕೆಯನ್ನು ಚರ್ಚಿಸುವಾಗ ಇದನ್ನೇ ಉಪಯೋಗಿಸುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ಇದೇ ಅಂಕಿ-ಆಂಶಗಳನ್ನು ಬಳಸಿಕೊಳ್ಳುತ್ತದೆ. ಅಮೆರಿಕದ ಅರ್ಥಿಕತೆಯಲ್ಲಿ ಹಣ ದುಬ್ಬರದ ಮೇಲೆ ನಿಗಾ ಇಡಲು ಇದನ್ನೇ ಮುಖ್ಯ ಮಾನದಂಡವಾಗಿ ಉಪಯೋಗಿಸುತ್ತಾರೆ.
ಗ್ರಾಹಕರ ಬೆಲೆ ಸೂಚ್ಯಂಕವನ್ನು ಪ್ರತಿ ತಿಂಗಳು ಲೆಕ್ಕ ಹಾಕುತ್ತಾರೆ. ಬಳಸಿಕೊಳ್ಳುವ ವಸ್ತುಗಳು ಮತ್ತು ಸೇವೆಯನ್ನು ಆಹಾರ-ಉತ್ತೇಜಕ ಪೇಯಗಳು, ವಸತಿ, ಉಡುಪು, ಸಾರಿಗೆ, ವೈದ್ಯಕೀಯ ಚಿಕಿತ್ಸೆ, ಮನರಂಜನೆ ಮತ್ತು ಶಿಕ್ಷಣ- ಸಂವಹನ ಮುಂತಾಗಿ ಎಂಟು ವಿಧವಾಗಿ ವರ್ಗೀಕರಿಸುತ್ತಾರೆ. ಇವುಗಳ ಬೆಲೆಗಳ ಏರಿಳಿಕೆಗಳೇ ಒಟ್ಟಾರೆ ಬೆಲೆ ಏರಿಳಿತಗಳ ಬೇಸ್ ಆಗಿರುವುದರಿಂದ ಮುಖ್ಯವಾದುದರಿಂದ,ಇವುಗಳನ್ನು ಗ್ರಾಹಕರ ಬೆಲೆ ಸೂಚ್ಯಂಕವನ್ನು ಲೆಕ್ಕ ಹಾಕುವಾಗ ಪರಿಗಣಿಸುತ್ತಾರೆ.
ಎಲ್ಲೆಲ್ಲಿ ಉಪಯೋಗಿಸುತ್ತಾರೆ?
ದೇಶದ ಅರ್ಥಿಕ ನಿರ್ವಹಣೆ ಮತ್ತು ಸಾಧನೆಯ ಮಾಪನವೇ ಗ್ರಾಹಕರ ಬೆಲೆ ಸೂಚ್ಯಂಕ. ಇದು ಏರುತ್ತಿದ್ದರೆ,ದೇಶದ ಆರ್ಥಿಕ ನಿರ್ವಹಣೆಯಲ್ಲಿ ಲೋಪ ದೋಷ ಇದೆ ಎಂದೇ ಅರ್ಥ. ದೇಶದ ಅರ್ಥಿಕ ನೀತಿ ನಿಯಮಾವಳಿಯನ್ನು ಮಾಡಬೇಕಾಗಿದೆ ಎನ್ನುವ ಸಂದೇಶ ಕೊಡುತ್ತದೆ.
ರಿಸರ್ವ್ ಬ್ಯಾಂಕ್ ಪ್ರತಿ ಎರಡು ತಿಂಗಳಿಗೊಮ್ಮೆ ತನ್ನ ಹಣಕಾಸು ನೀತಿಯನ್ನು ಪರಾಮರ್ಶಿಸುತ್ತಿದ್ದು, ಬಡ್ಡಿದರವನ್ನು ಬದಲಿಸುವಾಗ ಮತ್ತು ಇನ್ನಿತರ ಕೆಲವು ಅರ್ಥಿಕ ನೀತಿಯಲ್ಲಿ ಬದಲಾವಣೆ ಮಾಡುವಾಗ, ಗ್ರಾಹಕರ ಬೆಲೆ ಸೂಚ್ಯಂಕವನ್ನು ಅವಶ್ಯಕವಾಗಿಪರಿಗಣಿಸುತ್ತದೆ. ಜನತೆಯ ಜೀವನ ವೆಚ್ಚವನ್ನು ಲೆಕ್ಕ ಹಾಕಲು ಇದನ್ನು ಉಪಯೋಗಿಸುತ್ತಾರೆ. ದೇಶದಲ್ಲಿನ ಹಣದುಬ್ಬರವನ್ನು ಲೆಕ್ಕಹಾಕುವಾಗ, ಇದೇ ಮುಖ್ಯ ಟೂಲ್ ಆಗಿರುತ್ತದೆ.
ದುಡಿಯುವ ವರ್ಗಗಳ ಸಂಬಳ-ಭತ್ಯೆ ನಿಗದಿ ಪಡಿಸುವಾಗ ಮತ್ತು ಬದಲಾವಣೆ ಮಾಡುವಾಗ ಇದನ್ನು ಬಳಸಲಾಗುತ್ತದೆ. ರಿಸರ್ವ್ ಬ್ಯಾಂಕ್ ಬ್ಯಾಂಕುಗಳ ಬಡ್ಡಿದರ ನಿಗದಿಪಡಿಸುವಾಗ, ಇದನ್ನು ಪರಿಗಣಿಸುತ್ತದೆ. ನಿವೃತ್ತಿ ಸೌಲಭ್ಯಗಳನ್ನು ನಿರ್ಧರಿಸುವಾಗ, ಮಕ್ಕಳಿಗೆ ಜೀವನಾಂಶವನ್ನು ನಿಗದಿಪಡಿಸುವಾಗ ಕಾನೂನು ವ್ಯವಸ್ಥೆಯಲ್ಲಿ ಗ್ರಾಹಕರ ಬೆಲೆ ಸೂಚ್ಯಂಕವನ್ನು ಲೆಕ್ಕಕ್ಕೆ ತೆಗೆದು ಕೊಳ್ಳುತ್ತಾರೆ. ದುಡಿಯುವ ವರ್ಗಕ್ಕೆ ಬೆಲೆ ಏರಿಕೆಯಿಂದ ಸ್ವಲ್ಪ ನೆಮ್ಮದಿ ಪಡೆಯಲು,ಅವರಿಗೆ ತುಟ್ಟಿ ಭತ್ಯೆ ರೀತಿಯಲ್ಲಿ ಪರಿಹಾರ ನೀಡಲಾಗುತ್ತದೆ. ಈ ತುಟ್ಟಿ ಭತ್ಯೆಯ ಪ್ರಮಾಣವನ್ನು ನಿರ್ಧರಿಸಲು ಗ್ರಾಹಕರ ಬೆಲೆ ಸೂಚ್ಯಂಕವನ್ನು ಬಳಸಲಾಗುತ್ತದೆ.
ಗ್ರಾಹಕರ ಬೆಲೆ ಸೂಚ್ಯಂಕದಂತೆ ಸಗಟು ಬೆಲೆ ಸೂಚ್ಯಂಕ (wholesale Price Index) ವೂ ಇರುತ್ತಿದ್ದು, ಇದನ್ನು ವಾಣಿಜ್ಯ ಮಂತ್ರಾಲಯದ ಹಣಕಾಸು ಸಲಹಾ ವಿಭಾಗ ಸಿದ್ಧಪಡಿಸುತ್ತದೆ. ಇದನ್ನು ಕೂಡಾ ಬೆಲೆ ಏರಿಳಿಕೆಯ ಪ್ರಮಾಣವನ್ನು ತಿಳಿಯಲು ಬಳಸುತ್ತಾರೆ. ಆದರೆ, ಗ್ರಾಹಕರ ಬೆಲೆ ಸೂಚ್ಯಂಕವೇ ಬೆಲೆ ಏರಿಳಿಕೆಯನ್ನು ತಿಳಿಯಲು ಮುಖ್ಯ. ಯಶವಂತಪುರ ಮಂಡಿಯಲ್ಲಿನ ದರವೂ, ಡಿಪಾರ್ಟ್‌ಮೆಂಟಲ್
ಸ್ಟೋರ್ಸ್‌ನ ದರವೂ ಒಂದೇ ಇರುವುದಿಲ್ಲ. ಇದೇ ಸಗಟು ದರ ಸೂಚ್ಯಂಕಕ್ಕೂ ಗ್ರಾಹಕರ ಬೆಲೆ ಸೂಚ್ಯಂಕಕ್ಕೂ ಇರುವ ವ್ಯತ್ಯಾಸ. ಯಾವುದೇ ಪದಾರ್ಥ ಗ್ರಾಹಕರ ಕೈಗೆ ಬರುವಾಗ ಅದು ಮೂಲ ದರವಾಗಿರದೇ, ಅದು ನಾಲ್ಕಾರು ಕೈಗಳನ್ನು ದಾಟಿ ಬರುವುದರಿಂದ ಅದಕ್ಕೆ ಹಲವಾರು ಖರ್ಚು ವೆಚ್ಚಗಳು ಕೂಡುತ್ತಾ ಹೋಗುತ್ತದೆ. ಕಳೆದ ತಿಂಗಳಿಗೆ ಹೋಲಿಸಿದರೆ ಗ್ರಾಹಕರ ಬೆಲೆ ಸೂಚ್ಯಂಕದಲ್ಲಿ. ಶೇ.37 ಮತ್ತು ಸಗಟು ಬೆಲೆ ಸೂಚ್ಯಂಕದಲ್ಲಿ ಶೇ.2.77ರಷ್ಟು ಏರಿಕೆ ಕಂಡುಬಂದಿದೆ.
– ರಮಾನಂದ ಶರ್ಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.