ಬೇಡ್ತಿ ಕಲಿಸಿದ ಪರಿಸರ ಪಾಠ


Team Udayavani, Dec 25, 2017, 2:29 PM IST

bedti-kalisida].jpg

ಪರಿಸರ ಹೋರಾಟಕ್ಕೆ ಬೇಡ್ತಿ ಹೆಸರುವಾಸಿ. ವನವಾಸಿಗರು, ಕೃಷಿಕರು, ಮೀನುಗಾರರು ಬೇರಿಳಿಸಿ ಬದುಕಿದ ಕಣಿವೆಯಲ್ಲಿ ಕಾಡುತ್ಪನ್ನ ನಂಬಿ ಸಾಮ್ರಾಜ್ಯಗಳು ಉದಯಿಸಿವೆ. ಕೋಟೆಕೊತ್ತಲ, ಪುರಾಣ, ಕಾವ್ಯ, ಪ್ರವಾಸಿ ಕಥನಗಳಲ್ಲಿ ಬೇಡ್ತಿ ಕಾಡುತ್ತಿದೆ. ಮಳೆಗಾಲದಲ್ಲಿ ಪ್ರವಾಹವಾಗಿ, ಬೇಸಿಗೆಯಲ್ಲಿ ಸಣಕಲಾಗಿ ಸೊರಗುವ ಇವಳಂತೆ ನದಿ ದಂಡೆಯ ಬದುಕು ಬದಲಾವಣೆಯ ಕಾಲಘಟ್ಟದಲ್ಲಿ ಇಂದು ಸಂಕಟ, ಸವಾಲು ಎದುರಿಸುತ್ತಿದೆ.
 
ಮುನಿಗಳು ಹಾಗೂ ವಿಪ್ರರು ಸೂತಮುನಿಗಳನ್ನು ಕಾಣಲು ಹೋದಾಗ ಬೇಡತಿ ನದಿ ದಾಟಿದ ಪ್ರಸ್ತಾಪ ಸಹ್ಯಾದ್ರಿ ಕಾಂಡದಲ್ಲಿದೆ. ನದಿಗೆ ಬೇಡ್ತಿ ಎಂಬ ಹೆಸರು ಬಂದಿದ್ದು ಏಕೆ? ಈ ಪ್ರಶ್ನೆಗೆ ಉತ್ತರವಾಗಿ ಜನಪದರಲ್ಲಿ ಅರಸು ಯುಗದ ಕತೆಯಿದೆ. ಸೋದೆಯ ಅರಸು ಬೇಟೆಗೆ ಹೋದನು, ಬೇಡರ ಮಹಿಳೆಗೆ ಮನ ಸೋತನು. ಅವಳ ಸಂಗ ಬಯಸಿದನು. ದೊರೆಯ ಆಹ್ವಾನಕ್ಕೆ ಒಪ್ಪದ ಆ ಮಹಿಳೆ,  ಸಾಮ್ರಾಜ್ಯ ಪತನವಾಗಲೆಂದು ಶಾಪವಿತ್ತು,  ನದಿಗೆ ಹಾರಿ ಪ್ರಾಣ ತೆತ್ತಳು. ಅಂದಿನಿಂದ ನದಿಗೆ ಬೇಡತಿ ಎಂಬ ಹೆಸರು ಬಂತು ಎನ್ನುತ್ತಾರೆ.

ಧಾರವಾಡದ ಸೋಮೇಶ್ವರ ದೇಗುಲದ ಸನಿಹ ಜನಿಸುವ ಶಾಲ್ಮಲೆ, ಹುಬ್ಬಳ್ಳಿಯ ಮೂಲಕ ಹರಿವ ಹೊಳೆಯನ್ನು ಕಲಘಟಗಿಯಲ್ಲಿ ಸೇರಿ ಬೇಡ್ತಿಯಾಗುತ್ತಾಳೆ. ನದಿ ಮೂಲದಿಂದ ಉತ್ತರ ಕನ್ನಡದ ಅಂಕೋಲಾದ ಸಾಗರ ಸಂಗಮದವರೆಗೆ 152ಕಿಲೋ ಮೀಟರ್‌ ಪಯಣ, ಇದರಲ್ಲಿ 86 ಕಿ.ಲೋ ಮೀಟರ್‌ ಅರಣ್ಯ ಜಿಲ್ಲೆಯಾದ ಉತ್ತರ ಕನ್ನಡದಲ್ಲಿದೆ. ಬಯಲುಸೀಮೆಯ ಎರೆ ಹೊಲದ ಹತ್ತಿ, ಜೋಳ, ಮೆಣಸಿನ ಸೀಮೆ ಸುತ್ತಾಡಿ, ಬೆಲೆ ಬಾಳುವ ತೇಗದ ಕಾಡಲ್ಲಿ ನುಸುಳಿ ಮಲೆನಾಡು, ಕರಾವಳಿಯ ಅಡಿಕೆ, ಭತ್ತದ ನೆಲೆಯಲ್ಲಿ ಸಾಗುತ್ತದೆ ಬೇಡ್ತಿ ನದಿ.

ಅಬ್ಬರದ ಮಳೆಯಲ್ಲಿ ಮಣ್ಣಿನ ಮದುವೆಯಾಗಿ ಮಣ್ಣಿನ ಮೈಬಣ್ಣ ಹೊತ್ತು ಬರುತ್ತದೆ. ಮಲೆನಾಡ ಹೊಳೆ, ಹಳ್ಳಗಳ ತಿಳಿನೀರಿನ ಸ್ನೇಹ ಸಂಪಾದಿಸಿ ಈ ನದಿಗೆ ಹೊಸ ಮೆರಗು ಸಿಕ್ಕಿದೆ.   ನಿತ್ಯಹರಿದ್ವರ್ಣೆಯ ಮಗಳು ಸೋಂದಾ ಹೊಳೆ, ಬೇಡ್ತಿಯಲ್ಲಿ ಸೇರಿದ ಬಳಿಕ ಗಂಗಾವಳಿಯಾಗಿ ನದಿಯ ನಾಮ ಬದಲಾಗುತ್ತದೆ.  ಕೆನರಾ ಜಿಲ್ಲೆಯ ಭೂಗೋಳ ಎಂಬ 1905ರ ಕಾಲದ ಪಠ್ಯಪುಸ್ತಕದಲ್ಲಿ ಕೋಳಿ ಕೂಗು ಕೇಳುವ ಜಾಗಗಳಲ್ಲೆಲ್ಲ ಇಲ್ಲಿ ಕೋಟೆಗಳಿವೆ ಎಂಬ ವಿವರಣೆ ಇದೆ. ಜನಜೀವನ ರಕ್ಷಣೆ, ಸಾಮ್ರಾಜ್ಯ ವಿಸ್ತರಣೆಗೆ ನೆರವಾಗುವ ಕೋಟೆಗಳು ಕಾಲದ ಬದುಕಿನ ಕೈಗನ್ನಡಿ.

ಕಣಿವೆಯ ಕಾಡಿನಲ್ಲಿ ಸುಂದರ ಸಾಮ್ರಾಜ್ಯ ಕಟ್ಟಿದವರು ಸುಧಾಪುರ ಅರಸರು. ನೆಲದುರ್ಗ, ಜಲದುರ್ಗ, ಗಿರಿದುರ್ಗ, ವನದುರ್ಗ ರೂಪಿಸಿದವರು. ಕಾಡಿನ ಕಾಳು ಮೆಣಸು ಅರಸುಯುಗದ ಆರ್ಥಿಕತೆಯ ಪ್ರಮುಖ ಆಧಾರ. ನೈಸರ್ಗಿಕ ಅರಣ್ಯದ ಅಮೂಲ್ಯ ಸಾಂಬಾರ ಸರಕಿನ ಪರಿಮಳಕ್ಕೆ ವಿಶ್ವದ ವ್ಯಾಪಾರಿಗಳನ್ನು ಸೆಳೆವ ತಾಕತ್ತು.  ಕಾರವಾರದ ಸದಾಶಿವಘಡದಲ್ಲಿ 15ನೇ ಶತಮಾನದಲ್ಲಿ ವ್ಯಾಪಾರಕ್ಕೆ ಬಂದ ಅರಬರ ಅಕ್ಕರೆಯ ಕಾರ್ವಾರ ಮೆಣಸು ನದಿ ಕಣಿವೆಯ ಸೋದೆಯ ಮೆಣಸು, ಕಾನಿನ ಮೂಲದ್ದಾಗಿದೆ.  

ಅರಸು, ಕವಿ ಸದಾಶಿವರಾಯ ಪರಿಸರ ಜಾಗೃತಿಯ ಹರಿಕಾರ. ಇವರ ಕಾವ್ಯಗಳಲ್ಲಿ ಕಣಿವೆಯ ಕೃಷಿ ಪರಿಸರ ಸೊಬಗು ಮೇಳೈಸಿದೆ. “ಅಕಳನಂದನೆ ತುಂಗೆ ಕೃಷ್ಣವೇಣಿ, ನಳಿನ ಸುಖ ಚಂದ್ರಾಗ್ನಿ ನದಿ ನೇತ್ರಾವತಿ ಭೀಮ’ ಎಂದು ಆರಂಭಗೊಳ್ಳುವ ಒಂದು ಕಾವ್ಯದಲ್ಲಿ ನೀರ ಗುರು ನಂದೀಶ ಎಂಬ ಅದ್ಬುತ ಉಪಮೆಯಿದೆ.  ದೇಶದ ವಿವಿಧ ನದಿಗಳ ಉಲ್ಲೇಖಗಳಿವೆ.  ಕ್ರಿ.ಶ 1801 ಮಾರ್ಚ್‌ 11ರಂದು ಪ್ರವಾಸಿ ಡಾ. ಫ್ರಾನ್ಸಿಸ್‌ ಬುಕಾನನ್‌, ಬೇಡ್ತಿ ನದಿ ದಾಟಿ ಕೆರೆಹೊಸಳ್ಳಿಗೆ ಹೋಗುವಾಗ ಪ್ರವಾಹ ಕಾಲದಲ್ಲಿ ಮಾತ್ರ ಈ ನದಿ ತುಂಬಿ ಹರಿಯುತ್ತದೆ ಅನ್ನುತ್ತಾನೆ.

ಬೇಸಿಗೆಯಲ್ಲಿ ನದಿ ಒಣಗುವ ನೋಟವನ್ನೂ ಆತ ದಾಖಲಿಸಿದ್ದಾನೆ. ಕ್ರಿ.ಶ 1,796ರಲ್ಲಿ ಮಲಬಾರಿನ ನಾಟಾ ವರ್ತಕನೊಬ್ಬ ಪ್ರಪಂಚದಲ್ಲಿ ಎಲ್ಲಿಯೂ ನೋಡದ ದೊಡ್ಡ ತೇಗದ ಮರಗಳನ್ನು ಸೋಂದಾ, ಬನವಾಸಿ ಕಾಡಿನಲ್ಲಿ ಕಂಡಿದ್ದಾಗಿ ಇಂಗ್ಲೀಷರಿಗೆ ಪತ್ರ  ಬರೆಯುತ್ತಾನೆ. ತೇಗವೆಂಬ ರಾಜವೃಕ್ಷಕ್ಕೆ ಮನಸೋತ ಬ್ರಿಟೀಷರು ಕ್ರಿ.ಶ 1863ರ ನಂತರದಲ್ಲಿ ನದಿ ಕಣಿವೆಯ ಅಂಕೋಲಾ ಅರೆಬೈಲು ಘಟ್ಟ ಪ್ರದೇಶದಲ್ಲಿ ತೇಗದ ನೆಡುತೋಪು ಬೆಳೆಸಲು ಮುಂದಾಗುತ್ತಾರೆ. ಕಾಳು ಮೆಣಸಿನ ನಂತರದಲ್ಲಿ ತೇಗ ವಿದೇಶಿಗರನ್ನು ಸೆಳೆಯುತ್ತದೆ. 

 ನದಿ ಮೂಲದಿಂದ ಸಾಗರ ಸಂಗಮದವರೆಗೆ ಯಾವ ಅಡೆತಡೆಯಿಲ್ಲದೇ ಹರಿವು. ಕೃಷಿ, ಮೀನುಗಾರಿಕೆಗೆ ನೆರವು. ದೀಪಾವಳಿ ಹಬ್ಬಕ್ಕೆ ಮುಂಚೆ ಗಂಗಾಷ್ಠಮಿಯ ನಸುಕಿನಲ್ಲಿ ದೇಗುಲ ಹಾಗೂ ಮನೆ ಮನೆಗಳ ಸಂಭ್ರಮದ ಗಂಗಾಪೂಜೆ ಜನಜೀವನ ಸಂಸ್ಕೃತಿಯ ಭಾಗವಾಗಿದೆ. ಯಲ್ಲಾಪುರ, ಶಿರಸಿ, ಅಂಕೋಲಾದ ಕಗ್ಗಾಡು, ಕಣಿವೆ, ಕರಾವಳಿಯಲ್ಲಿ ಕೃಷಿಯ ಚೆಂದದ ಚಿತ್ರಗಳಿವೆ. ಹವ್ಯಕ, ಸಿದ್ದಿ, ಕರೆಒಕ್ಕಲಿಗ, ಹಾಲಕ್ಕಿ, ಮರಾಠಿ, ಕುಣಬಿ, ನಾಡವ, ಹರಿಕಾಂತ, ಹಸಲರು..ಇವರೆಲ್ಲಾ  ಸೋಲುತ್ತ ಗೆಲ್ಲುತ್ತ ಹೊಸ ನಾಳೆಗಳಿಗಾಗಿ ಕಷ್ಟಸಹಿಷ್ಣುಗಳಾಗಿ ನಿಂತವರು.

 ಅಬ್ಬರದ ಮಳೆಯ ಸಂಕಷ್ಟ, ಸವಾಲುಗಳ ಮಧ್ಯೆಯೇ ಬೆಳೆದವರು. ಕಾಡೊಳಗಿನ ಕತ್ತಲ ಕೃಷಿ ನೆಲೆಯಲ್ಲಿ ಘಟ್ಟವೇರಿದ ಸಾಹಸಿಗರು. ಮರ ಬಳ್ಳಿಗಳಲ್ಲಿ ಪರಿಸರ ಜೀವನ ಶಾಲೆ. ಕಾಟಾಕ್ವಯ್‌, ಕುಂಬತ್ತೋಡ್‌, ಕಟ್ರಿಕಿಮಿಯಾವ್‌, ಕರಿಕುಂಚು, ಸಾತಾಡೆ, ಕೊನೆY ವನವಾಸಿ ಸಿದ್ಧಿಯರ ಪರಿಸರ ನಿಘಂಟಿನಲ್ಲಿ ಇನ್ನೂ ಹೊರಜಗತ್ತು ಅರಿಯದ ನಿಗೂಢಗಳಿವೆ. ಚಂಪಾಷಷ್ಠಿಗೆ ಕೂಲಿ ಕೆಲಸಕ್ಕೆ ಮುದ್ದಾಂ ಬಿಡುವು ನೀಡಿ ಕಾಡಿಗೆ ಬೇಟೆಗೆ ಹೊಕ್ಕುವ ಕುವರರಿಗೆ ಅಂದು ಉಡಗಳು ತತ್ತಿಯಿಡುವ ನಿಖರತೆ ತಿಳಿದಿದೆ.

ಭತ್ತದ ಕೊಯ್ಲು ಮುಗಿದು ಪಕ್ಷಿಗಳು ಖುಷಿ ಪಡುವ ಮಕರ ಸಂಕ್ರಾಂತಿಯೂ ವನವಾಸಿಗರನ್ನು  ಕರೆಯುತ್ತದೆ. ಮೇಣದ ಕೋಲು ಹಿಡಿದು ಸಂಗೋಳಿ ಮರದ ತುದಿಯಲ್ಲಿ ಮುಂಜಾನೆ ಐದಕ್ಕೆ ಕೂಡ್ರುವ ವನವಾಸಿಗರಿಗೆ ಹಕ್ಕಿ ಸಂಕ್ರಾಂತಿಯ ಸುಗ್ಗಿಯಿದೆ. ನದಿ ದಂಡೆಯ ಬೆಸ್ತರ ಬದುಕಿನ ಖುಷಿಗೆ ಗಂಗಾವಳಿ ಮೀನಿನ ಪ್ರಭಾವಳಿಯಿದೆ. ಮಾಗೋಡ್‌ ಕಣಿವೆಯ ಮೂಲೆಯಿಂದ, ಶಿವಗಂಗಾ ಜಲಪಾತದ ತಪ್ಪಲಿಂದ, ಜೇನುಕಲ್‌ ಗುಡ್ಡದ ತಗ್ಗಿನಿಂದ ನದಿ ಆಸುಪಾಸಿನ ಜೇನು-ಮೀನಿನ ಕತೆಗಳ ಲೆಕ್ಕ ಇಟ್ಟವರಿಲ್ಲ! ಅಡಿಕೆ ಬೆಳೆದು ಬೇರು ಬಿಟ್ಟ ಕಣಿವೆಯ ಹವ್ಯಕರಿಗೆ ಶತಮಾನಗಳ ಹಿಂದೆ ಪೇಟೆ ಬಹುದೂರ.

ಸುತ್ತಲಿನ ಕಾಡು ಗಿಡಗಳ ಬೇರು, ಚಿಗುರು, ತೊಗಟೆ, ಫ‌ಲಗಳಲ್ಲಿ ಕಷಾಯ-ತಂಬುಳಿಯ ಆರೋಗ್ಯ ಅಸ್ತ್ರ ದೊರಕಿದೆ. ಕಾಸಿನ ಖರ್ಚಿಲ್ಲದ ಅಡವಿ ಆಹಾರದ ಸರಳ ಬದುಕಿನ ಸೂತ್ರ ಸಿಕ್ಕಿದೆ. ದಪ್ಪಾಪಿ, ಚಾಲೂ ದಪ್ಪಾಪಿ, ತೋವುಂಚಿ, ತೋವುಂಚಿ ಮಾರ್ವಾಡಿ ಬಾರ್‌ 1, ತೋವುಂಚಿ ಮಾರ್ವಾಡಿ ಬಾರ್‌ 2, ಜಾಡಿ ಆಫಿ ಹೀಗೆ  ಯಲ್ಲಾಪುರದ  ಪುಟ್ಟ ಅಡಿಕೆ ಮಾರುಕಟ್ಟೆಯಲ್ಲಿ ವಿಶೇಷ ಆಫಿ ಅಡಿಕೆ ಸುಮಾರು 32 ವಿಧಗಳಾಗಿ ವಿಂಗಡನೆಯಾಗಿ ಕಲ್ಕತ್ತಾ, ರಾಜಸ್ಥಾನ್‌, ನಾಗಪುರ ಸೇರಿದಂತೆ ದೇಶದ ವಿವಿಧ ಮಾರುಕಟ್ಟೆ ತಲುಪುವಲ್ಲಿ  ನದಿ ನಾಡಿನ ಕೃಷಿ ಕೌಶಲವಿದೆ. 

 ನದಿ ಬದುಕು ಜಲವಿದ್ಯುತ್‌ ಯೋಜನೆಗೆ ಹೊರಟ ಕತೆ ಎಲ್ಲೆಡೆಯಿದೆ. ಬೇಡ್ತಿಯದು ಇಂಥದೇ ವ್ಯಥೆ. ಜಲವಿದ್ಯುತ್‌ ಯೋಜನೆಯ ಪ್ರಸ್ತಾಪ 1972ರಲ್ಲೇ ಶುರುವಾಗಿದೆ. ಇದು ಬೃಹತ್‌ ಜಲ ವಿದ್ಯುತ್‌ ಯೋಜನೆಯ ಅಂತಿಮ ರೂಪಪಡೆದು ಕ್ರಿ,ಶ 1979ರಲ್ಲಿ ಅಬ್ಬರದ ಕಾರ್ಯಾರಂಭ. ಸಂಕಷ್ಟಗಳ ಸರಮಾಲೆಯಲ್ಲಿ ಬದುಕು ಕಟ್ಟಿದ ಕಣಿವೆ ಹಳ್ಳಿಗರು ಮುಳುಗಡೆಯ ಭಯದಿಂದ ಸಂಘಟಿತರಾದರು. ಸ್ವರ್ನವಲ್ಲಿ ಶ್ರೀ ಸರ್ವಜ್ಞೆàಂದ್ರ ಸರಸ್ವತಿ ಸ್ವಾಮಿಗಳು, ಶಾಸಕಿ ಅನುಸೂಯಾ ಶರ್ಮಾ ನೇತ್ರತ್ವದಲ್ಲಿ ಪರಿಸರ ಹೋರಾಟಕ್ಕೆ ಕಾಡಿನೂರು ಎದ್ದು ನಿಂತಿತು.

ಬೃಹತ್‌ ಜಲ ವಿದ್ಯುತ್‌ ಯೋಜನೆ ಕುರಿತು ಜನಜಾಗೃತಿ ಮೂಡಿಸುವ ಮೂಲಕ ದೇಶದ ಗಮನ ಸೆಳೆದ ಕ್ಷಣವದು. ಕ್ರಿ,ಶ 1981ರಲ್ಲಿ 60ಕ್ಕೂ ಹೆಚ್ಚು ಪ್ರಖ್ಯಾತ ವಿಜಾnನಿಗಳ ಸಭೆ ಸೇರಿಸಿ ಜಲ ವಿದ್ಯುತ್‌ ಯೋಜನೆಯ ಕಾಡು ಕಡಿತಕ್ಕೆ ಪ್ರಬಲ ವಿರೋಧ ನಡೆದಿದೆ. ಅಲ್ಲಿಂದ ನಮ್ಮ ದೇಶದಲ್ಲಿ ಅಮೂಲ್ಯ ಕಾಡು ಮುಳುಗಿಸಿ ಯೋಜನೆ ರೂಪಿಸುವ ಸರಕಾರೀ ನಡೆಯನ್ನು ಪ್ರಶ್ನಿಸುವ ಹೋರಾಟಗಳು ಶುರುವಾಗಿವೆ. ಕರ್ನಾಟಕ ಪರಿಸರ ಚಳುವಳಿ ಇತಿಹಾಸದಲ್ಲಿ ಕ್ರಿ,ಶ 1832ರಲ್ಲಿ ಬ್ರಿಟೀಷರ ಅರಣ್ಯ ನೀತಿ ವಿರೋಧಿಸಿದ ಯಲ್ಲಾಪುರದ ರೈತ ಕೂಟದ ಸಭೆ ಮುಖ್ಯವಾದುದು.

ಸ್ವಾತಂತ್ರ್ಯ ಚಳವಳಿಯ ಘಟ್ಟದಲ್ಲಿ ಕಂಡ ಜಂಗಲ್‌ ಕಾಯ್ದೆ ಭಂಗ, ಜಂಗಲ್‌ ಮಹಲ್‌, ಮುಡೆಬಳ್ಳಿ ಉಳಿಸಿ ಹೋರಾಟಗಳು 1905-1945ರ ಕಾಲಘಟ್ಟದಲ್ಲಿ ನಡೆದಿವೆ. ಜಲ ವಿದ್ಯುತ್‌ ಯೋಜನೆ ವಿರುದ್ಧ 1991ರಲ್ಲಿ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ನೇತ್ರತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ 30,000ಕ್ಕೂ ಹೆಚ್ಚು ಜನ ಭಾಗವಹಿಸಿದ್ದು ಪರಿಸರ ಹೋರಾಟ ಚರಿತ್ರೆಯಲ್ಲಿಯೇ ವಿಶೇಷ ದಾಖಲೆ. ಕೌತುಕದ ಸಂಗತಿಯೆಂದರೆ ಬಹುತೇಕ ಚಳವಳಿಗಳು ಬೇಡ್ತಿ ನದಿ ಕಣಿವೆಯಲ್ಲಿ ಜನಿಸಿವೆ. ಇಂದಿಗೂ ರಾಜ್ಯದ ಪರಿಸರ, ಕೃಷಿ , ನೆಲ ಜಲ ಸಂರಕ್ಷಣೆಗಳ ಪ್ರಮುಖ ಚರ್ಚೆಗಳು ಇಲ್ಲಿಂದಲೇ ಶುರುವಾಗುತ್ತವೆ. 

 ಪರಿಸರ ಜಾಗೃತಿ, ನದಿ ಸಂರಕ್ಷಣೆಯ ಪ್ರಜ್ಞೆ ಎಲ್ಲೆಡೆಗಿಂತ ಮುಖ್ಯವಾಗಿ ಬೇಡ್ತಿಯಲ್ಲಿ ನಡೆಯಲು ಪರಂಪರೆ ಕಲಿಸಿದ ಹೋರಾಟದ ಬದುಕು ಮುಖ್ಯವಾಗಿದೆ. ಜನಜೀವನಕ್ಕೆ ಶತ ಶತಮಾನಗಳಿಂದ ಜೈನ, ಮಾಧ್ವ, ವೀರಶೈವ, ಹವ್ಯಕ ಶಕ್ತಿ ಪೀಠಗಳ ಮಾರ್ಗದರ್ಶನವಿದೆ. ಸುಧಾಪುರದೊಳ್‌ ಭಟ್ಟಾಕಳಂಕ ಸ್ವಾಮಿಗಳ್‌ ಶಾಸ್ತ್ರಗಳೆಲ್ಲವಂಕಲ್ತು ಮಹಾ ವಿದ್ವಾಂಸರೆನಿಸಿ ಷಡಾºಷಾ ಕವಿಗಳಾಗಿ ಕರ್ನಾಟಕ ವ್ಯಾಕರಣಮಮ್‌ ರಚಿಸಿ ಕೀರ್ತಿಯಂ ಪಡೆದರ್‌ ಎಂಬುದು ನಾಡು ನುಡಿಗೆ ನದಿ ನಾಡಿನ ಬೆಳಕಾಗಿದೆ. ಬೆಳವಡಿಯ ಮಲ್ಲಮ್ಮ ಶಸ್ತ್ರವಿದ್ಯೆ ಕಲಿತು ವೀರ ವನಿತೆಯಾದ ಚಾರಿತ್ರಿಕ ನೆಲೆಯಿದು.

ಮಣ್ಣಿನ ಗುಣ ಹೀಗಿರುವುದರಿಂದಲೇ ನದಿ ಕಣಿವೆಯ ಹೋರಾಟ ಶಕ್ತಿಯುತವಾಗಿದೆ.  ಹಿಮಾಲಯದ ತಪ್ಪಲಲ್ಲಿ ಶುರುವಾದ ಚಿಪೋ›ಚಳವಳಿ ಅಪ್ಪಿಕೋ, ಚಳವಳಿಯಾಗಿ ಜನಿಸಿದ್ದು ಇಲ್ಲಿಯೇ ! ಸುಂದರಲಾಲ್‌ ಬಹುಗುಣ, ಡಾ.ಮಾಧವ ಗಾಡ್ಗಿàಳ್‌, ಡಾ.ಶಿವರಾಮ ಕಾರಂತ ಹೀಗೆ ನಾಡಿನ ಜನಮನದಲ್ಲಿ ಪರಿಸರ ಪ್ರಜ್ಞೆಯ ಬೀಜ ಬಿತ್ತಿದ ತಜ್ಞರೆಲ್ಲ ಬೇಡ್ತಿ ನದಿ ಕಣಿವೆಯ ಗೆಳೆಯರು. ಕ್ರಿ,ಶ 1911ರಲ್ಲಿ ನದಿಯಂಚಿನ ಕಾಡು ಸಂರಕ್ಷಣೆಗೆ ನಿಯಮ ರೂಪಿಸಿದ ಕಾರ್ಯ ಯೋಜನೆಗಳಿಂದ ಶುರುವಾಗಿ ಶಾಲ್ಮಲಾ ನದಿ ಕಣಿವೆಯ ಸಂರಕ್ಷಿತ ವಲಯ ಗುರುತಿಸುವರೆಗೆ ಸಾಗಿ ಬಂದ ಚರ್ಚೆ,

ಚಳವಳಿ, ಆಂದೋಲನ, ಪ್ರತಿಭಟನೆ, ಅಧ್ಯಯನ, ದಾಖಲಾತಿಗಳಿಗೆ ಲೆಕ್ಕವಿಲ್ಲ. ವಿಶ್ರಾಂತಿಗೆ ಬಿಡುವಿಲ್ಲ, ಈಗಲೂ ಹೋರಾಟಗಳು ಸಾಗಿವೆ.   ಅರಣ್ಯ, ನೀರು ಕುರಿತ ಪರಿಸರ ಸಾಕ್ಷರತೆಯಲ್ಲಿ ಇಡೀ ರಾಜ್ಯವೇ ಗಮನಿಸಬೇಕಾದ ಪಾಠಗಳು ಇಲ್ಲಿವೆ. ಇಷ್ಟಾಗಿಯೂ ಮಳೆ ಕೊರತೆ, ಅರಣ್ಯ ನಾಶದ ಪ್ರಹಾರಕ್ಕೆ ನೀರ ನೆಲೆ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿದೆ. ಹುಬ್ಬಳ್ಳಿಯ ಮಹಾನಗರದ ಹೊಲಸು ನೀರು ನದಿಗುಂಟ ಹರಿದು ಬಂದು ಜೀವಜಲದ ಮನುಕುಲದ ಕಾಳಜಿಗೆ ಸಾಕ್ಷಿಯಾಗಿದೆ.

ಕೊಳಚೆ ನೀರನ್ನು ಪುನಃ ಶುದ್ಧೀಕರಿಸಿ ಯಲ್ಲಾಪುರ ನಗರಕ್ಕೆ ಒಯ್ಯುವ ಸರಕಾರೀ ಯಂತ್ರದ ಮೂರ್ಖ ಪ್ರಯೋಗಗಳು ಕೋಟಿ ಕೋಟಿ ಹಣವನ್ನು ಹೊಳೆಗೆಸೆದು ಸೋತಿವೆ. ಬಿದಿರಕ್ಕಿ, ಬಾಳೆಕಾಯಿ, ಹಲಸು, ಗೆಣಸು ತಿನ್ನುತ್ತ ಕಷ್ಟದ ಕಣಿವೆಯಲ್ಲಿ ಕೃಷಿ ಬೆಳೆಸಿದ ಹಳೆಯ ತಲೆಮಾರು ಈಗ ಯುವಕರ ನಗರ ವಲಸೆಯ ಪ್ರಹಾರಕ್ಕೆ ಸೊರಗಿದೆ, ನೀರು ನಂಬಿ ಊರು ಕಟ್ಟುವ ಪ್ರಶ್ನೆಗಳು ಜನಿಸಿವೆ. ಒಂದು ಮರ ಕಡಿದರೂ ಸುದ್ದಿಯಾಗುವ ಜಾಗೃತ ನೆಲೆಯಲ್ಲಿ ಬೇರಿಳಿಸಿ ಬದುಕಿದವರಲ್ಲಿ ಹೊಸ ಹೊಸ ಸಂಕಟಗಳು ಕಾಡುತ್ತಿದೆ. 

* ಶಿವಾನಂದ ಕಳವೆ

ಟಾಪ್ ನ್ಯೂಸ್

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.