ಕಾಡು ಗಿಡ ರಾಮ ಪತ್ರೆ ತೋಟದಲ್ಲಿ ಬೆಳೆದರೆ ಲಾಭವಂತೆ
Team Udayavani, Feb 27, 2017, 2:22 PM IST
ಸಮೃದ್ಧಿಗಿಡ ಗೆಳೆತನ ಸಂಘದ ನಾವು 53ಸದಸ್ಯರನ್ನುನಗು ಮುಖದಿಂದ ಎದುರುಗೊಂಡ ತಮ್ಮಣ್ಣಗೌಡರು ಬನ್ನಿ, ಬನ್ನಿ ಮಳೆಬಂದೀತು. ರಾಮಪತ್ರೆ ತೋಟ ನೋಡೋಣ ಎಂದು ಕರೆದೊಯ್ದರು. ಅಡಿಕೆ ತೋಟದಲ್ಲಿದ್ದ ಸಸಿಗಳನ್ನು ತೋರಿಸುತ್ತಾ … ಇವೆಲ್ಲ ನಾಲ್ಕು ವರುಷದ ಸಸಿಗಳು. ಹನ್ನೊಂದು ವರುಷದ ಸಸಿಗಳು ಗುಡ್ಡದಮೇಲಿವೆ ಎಂದು ಗುಡ್ಡ ಹತ್ತ ತೊಡಗಿದರು.
ಮಂಗಳೂರು – ಬೆಂಗಳೂರು ಹೆದ್ದಾರಿಯ ಉಪ್ಪಿನಂಗಡಿಯಲ್ಲಿ ಬಲಕ್ಕೆತಿರುಗಿ, ರಸ್ತೆಯಲ್ಲಿ ಸುಮಾರು 20ನಿಮಿಷ ವಾಹನದಲ್ಲಿ ಮುಂದುವರಿದರೆ ಸಿಗುವ ಊರು ಕಡಬ. ಅಲ್ಲಿಂದ ಶ್ರೀನಿವಾಸ ದೇವಸ್ಥಾನದ ರಸ್ತೆಯಲ್ಲಿ ಇನ್ನೂ 20ನಿಮಿಷ ಸಾಗಿ, ಎಡಕ್ಕೆ ಕಚ್ಚಾರಸ್ತೆಗೆತಿರುಗಿ ಹೋದರೆ ಸಿಗುತ್ತದೆ ಈ ತಮ್ಮಯ್ಯಗೌಡರ ಮನೆ.
ರಾಮಪತ್ರೆ ಉಷ್ಣವಲಯದ ಸಸ್ಯ. ಇದರ ಸಸ್ಯ ಶಾಸ್ತ್ರೀಯಹೆಸರು ಮಿರಿಸ್ಟಿ ಕಡಾಕ್ಟಿಲೊಯಿಡೆಸ್. ಭಾರತದ ಪಶ್ಚಿಮಘಟ್ಟ, ಇಂಡೋನೇಷ್ಯಾ, ಫಿಲಿಫೈನ್ಸ್, ನ್ಯೂಗಿನಿಯಾ, ಸೊಲೊಮನಿ ದ್ವೀಪ, ದಕ್ಷಿಣ ಫೆಸಿಪಿಕ್ ದ್ವೀಪಗಳು – ಇಲ್ಲಿನ ಮಳೆಕಾಡುಗಳಲ್ಲಿ ಕಂಡುಬರುವ ಕಾಡುಗಿಡ.
ಪಶ್ಚಿಮಘಟ್ಟಗಳ ಮಳೆ ಕಾಡುಗಳ ಸಸ್ಯಗಳ ಅಧ್ಯಯನ ನಡೆಸಿದ ಸಸ್ಯಶಾಸ್ತ್ರಜ್ಞರು ರಾಮಪತ್ರೆ ಅಳಿವಿನಂಚಿನಲ್ಲಿರುವ ಔಷಧೀಯ ಸಸ್ಯ ಎಂದು ಗುರುತಿಸಿದ್ದಾರೆ. ಇದು ದಟ್ಟ ಮಳೆಕಾಡುಗಳಲ್ಲಿ ಸಮುದ್ರಮಟ್ಟದಿಂದ 100ಮೀ. – 800ಮೀ. ಎತ್ತರದ ಬೆಟ್ಟಗಳಲ್ಲಿ ಬೆಳೆಯುವ ಸಸ್ಯ. ಇದರಹಣ್ಣಿನಒಳರಚನೆ ಜಾಯಿಕಾಯಿಯಂತಿದೆ. ಆದರೆ ಇದರ ಬೀಜದ ಸಿಪ್ಪೆಯ ಪರಿಮಳ ಜಾಯಿಕಾಯಿಯದಕ್ಕಿಂತ ಕಡಿಮೆ.
ತಮ್ಮಣ್ಣಗೌಡರ ತಂದೆಯವರಿಗೆ ಆರು ಜನಗಂಡು ಮಕ್ಕಳು. ಇವರಪಾಲಿಗೆಬಂದದ್ದುಐದು ಎಕರೆ ಅಡಿಕೆತೋಟ – ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ ನೂಜಿಬಾಳ್ತಿಲ ಗ್ರಾಮದಲ್ಲಿ. ಅಲ್ಲಿ ಅಡಿಕೆ ಮರಗಳ ನಡುವೆ ರಾಮಪತ್ರೆ ಗಿಡಗಳನ್ನು ನೆಟ್ಟುಬೆಳೆಸಿದ್ದಾರೆ ತಮ್ಮಣ್ಣ ಗೌಡರು. ವಿಶೇಷವೆಂದರೆ ಅವೆಲ್ಲವೂ ಅವರೇ ಕಸಿಕಟ್ಟಿದ ಗಿಡಗಳು. ಪಶ್ಚಿಮಘಟ್ಟದ ಬುಡದಲ್ಲಿರುವ ಆ ಜಮೀನು ಕಾಡುಸಸ್ಯವಾದ ರಾಮಪತ್ರೆ ಬೆಳೆಸಲುಸೂಕ್ತ. ಅವರು ಕಸಿಗಿಡಗಳನ್ನುಖರೀದಿಸಿ ತಂದಿದ್ದರೆ ದುಬಾರಿ ಆಗುತ್ತಿತ್ತು. ಯಾಕೆಂದರೆ, ನರ್ಸರಿಗಳಲಿ ರಾಮಪತ್ರೆಯ ಒಂದು ಸಸಿಯ ಬೆಲೆರೂ.150ರಿಂದರೂ.250. ಸಸಿಯ ಬೆಲೆ ಅಷ್ಟು ಜಾಸ್ತಿಯಾಕೆಂದು ಕೇಳಿದಾಗ ಅವರಿತ್ತವಿವರಣೆ: ನೂರು ರಾಮಪತ್ರೆಗಿಡಗಳಿಗೆ ಒಳ್ಳೆಯ ಫಲ ನೀಡುವ ಗಿಡದಕಡ್ಡಿಗಳನ್ನುಕಸಿಕಟ್ಟಿದರೆ, ಅದರಲ್ಲಿ ಕೇವಲ15ರಲ್ಲಿ ಮಾತ್ರ ಕಸಿಕಟ್ಟಿದ್ದು ಕೂಡಿಕೊಳ್ಳುತ್ತದೆ.
ಇಪ್ಪತ್ತು ವರುಷಗಳ ಮುನ್ನಕಾಡಿನಿಂದ ರಾಮಪತ್ರೆ ಹಣ್ಣುಗಳನ್ನುಸಂಗ್ರಹಿಸಿ ತಂದು ಮಾರಾಟಮಾಡುತ್ತಿದ್ದರು ತಮ್ಮಣ್ಣಗೌಡರು. ಈವ್ಯವಹಾರದಲ್ಲಿ, ಇನ್ನೂಹತ್ತಿಪ್ಪತ್ತುಪಟ್ಟು ರಾಮಪತ್ರೆ ಹಣ್ಣುಗಳಿಗೆ ಬೇಡಿಕೆ ಇದೆ ಎಂಬ ವಿಷಯ ಅವರಿಗೆ ಸ್ಪಷ್ಟವಾಗಿತಿಳಿಯಿತು. ಆದ್ದರಿಂದ, ತಾನೇ ರಾಮಪತ್ರೆ ಬೆಳೆಯಬೇಕೆಂದು ಅವರು ನಿರ್ಧರಿಸಿದರು. ಆದರೆ ಫಸಲು ಬರೋದು ನೆಟ್ಟು ಹತ್ತನೇ ವರುಷದಲ್ಲಿ. ಹಾಗಾಗಿ ಬೆಳೆಗಾರ ಅಷ್ಟು ವರುಷ ಕಾಯಲು ತಯಾರಾಗಿರಬೇಕು ಎಂದು ಈ ಬೆಳೆಯ ಮುಖ್ಯಸಂಗತಿಯನ್ನು ಹಂಚಿಕೊಂಡರು.
ಒಂದು ಗಿಡದಿಂದ ಎಷ್ಟು ಇಳುವರಿ ಸಿಕ್ಕೀತು? ಎಂದು ಕೇಳಿದೆ. ಅದಕ್ಕೆ ತಮ್ಮಣ್ಣ ಗೌಡರ ಉತ್ತರ, ಇಷ್ಟೇ ಅಂತ ಹೇಳಲಾಗದು. ಎರಡು ಕಿಲೋದಿಂದ 200ಕಿಲೋವರೆಗೆ ಸಿಕ್ಕೀತು. ಹಳೆಯ 75ಮರಗಳಿಂದ ನನಗೆ 200ಕ್ವಿಂಟಾಲ… ಇಳುವರಿ ಸಿಕ್ಕಿದೆ. ರಾಮಪತ್ರೆ ಗಿಡಗಳಿಗೆ ಶೇಕಡಾ 50 ನೆರಳುಬೇಕು. ಇವುಗಳ ಬೇರು ನೆಲದೊಳಗೆ ಬೆಳೆದಂತೆ ಇಳುವರಿ ಹೆಚ್ಚಾಗುತ್ತದೆ.
ರಾಮಪತ್ರೆ ಗಿಡಗಳ ಕೃಷಿಯ ಅನುಕೂಲತೆಗಳ ಬಗ್ಗೆ ತಮ್ಮಣ್ಣಗೌಡರು ನೀಡಿದ ಮಾಹಿತಿ: ಈಗಿಡಗಳನ್ನು ನೆಟ್ಟರಾಯಿತು. ಅದರ ಪಾಡಿಗೆ ಅದು ಬೆಳೀತಾ ಇರುತ್ತದೆ. ನಾನು ಈ ಗಿಡಗಳಿಗೆ ಗೊಬ್ಬರ ಏನೂ ಹಾಕೋದಿಲ್ಲ. ಅಡಿಕೆ ಮರಗಳಿಗೆ ವರುಷಕ್ಕೊಮ್ಮೆ ಒಂದು ಕಿಲೋ ಆಡಿನ ಹಿಕ್ಕೆ ಗೊಬ್ಬರ ಹಾಕ್ತೇನೆ. ರಾಮಪತ್ರೆ ಗಿಡಗಳಿಗೆ ಯಾವುದೇ ರೋಗಬಾಧೆಯಿಲ್ಲ. ಈ ಗಿಡಗಳಲ್ಲಿ ಭಾರೀಕಾಯಿ ಬಿಟ್ಟಾಗ ಕೆಲವೊಮ್ಮೆ ರೋಗ ತಗಲುವುದಿದೆ.
ನಾನು ರಾಮಪತ್ರೆ ಮಾರೋದು ಇಲ್ಲೇ ಹತ್ತಿರದ ನೆಲ್ಯಾಡಿಯಲ್ಲಿ. ನನಗೆ ಕಿಲೋಕ್ಕೆ600ರೂಪಾಯಿ ರೇಟ್ಸೆಗ್ತದೆ. ಇದು ಒಳ್ಳೇರೇಟು. 1994ರಲ್ಲಿ ಕಿಲೋಕ್ಕೆ 70ರೂ. ರೇಟ್ ಇತ್ತು. ಅನಂತರ ಏರುತ್ತಲೇ ಬಂದಿದೆ. ಕಿಲೋಕ್ಕೆ 100ರೂಪಾಯಿ, ನಂತರ300 ರೂಪಾಯಿ, ಈಗ ಕಿಲೋಕ್ಕೆ 600ರೂಪಾಯಿ ಎಂದು ರಾಮಪತ್ರೆಯ ಧಾರಣೆಯ ಏರುಹಾದಿಯ ಚರಿತ್ರೆತಿಳಿಸಿದರು ತಮ್ಮಣ್ಣಗೌಡರು.
“ನನ್ನನ್ನು ಉಳಿಸಿದ್ದೇರಾಮಪತ್ರೆ. ಅಡಿಕೆಯನ್ನೇ ನಂಬಿದ್ದರೆ ನಾನು ಸೋಲುತ್ತಿದ್ದೆ. ಯಾಕೆಂದರೆ ಅಡಿಕೆಗೆ ಪ್ರತಿವರುಷ ಗೊಬ್ಬರ ಹಾಕಬೇಕು. ಮಳೆಗಾಲದಲ್ಲಿ ಬೋಡೋì ದ್ರಾವಣ ಸ್ಪ್ರೆàಮಾಡಲೇಬೇಕು. ರಾಮ ಪತ್ರೆ ಗಿಡಗಳಿಗೆ ಇಂತಹ ಯಾವುದೇ ಉಪಚಾರ ಮಾಡಬೇಕಾಗಿಲ್ಲ. ಇವು, ತನ್ನಬದುಕಿಗೆ ಊರು ಗೋಲಾದ ರಾಮಪತ್ರೆ ಬಗ್ಗೆ ತಮ್ಮಣ್ಣಗೌಡರ ಮನದಾಳದಮಾತು.
ಬೀಳ್ಕೊಡುವಾಗ ತಮ್ಮಣ್ಣಗೌಡರಿಗೆ ನನ್ನಪ್ರಶ್ನೆ: ಫಸಲಿಗಾಗಿ ಹತ್ತು ವರುಷ ಕಾಯಬೇಕಾಗ್ತದೆ ಅಂತಗೊತ್ತಿದ್ದರೂ, ನೀವು ಇಷ್ಟು ರಾಮಪತ್ರೆ ಗಿಡ ನೆಡಲು ಕಾರಣ ಏನು? ಅವರುಕಣ್ಣುಮಿಟುಕಿಸದೆ ನೀಡಿದ ಉತ್ತರ: ಇನ್ನುಮುಂದೆ ಅಡಿಕೆ ತೋಟ ನೋಡಿಕೊಳ್ಳುವುದು ಕಷ್ಟ. ಯಾಕೆಂದರೆ ಈಗ ಕೆಲಸದವರು ಸಿಗ್ತಾಇಲ್ಲ. ನನ್ನಕಾಲದಲ್ಲಿ ಅಡಿಕೆ ತೋಟನೋಡಿಕೊಂಡೆ ಅಂತ ನನ್ನ ಮಕ್ಕಳಕಾಲದಲ್ಲಿ ಅದು ಸಾಧ್ಯವಿಲ್ಲ. ಅದಕ್ಕಾಗಿ, ಅವರಕಾಲಕ್ಕೆ ಆಗಲಿ ಅಂತಲೇ ನಾನು ರಾಮಪತ್ರೆಗಿಡಗಳನ್ನು ನೆಟ್ಟು ಬೆಳೆಸಿದ್ದು.
(ಸಂಪರ್ಕ: 7353822011)
– ಅಡ್ಡೂರು ಕೃಷ್ಣರಾವ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.