ರಿಯಲ್ ಗೆಲಾಕ್ಸಿ ಐಕೂ; ಈ ವಾರ 3 ಹೊಸ ಫೋನ್‌ಗಳು ಮಾರುಕಟ್ಟೆಗೆ
Team Udayavani, Feb 24, 2020, 5:46 AM IST
ಇವತ್ತು- ನಾಳೆ ಭಾರತದಲ್ಲಿ ಮೂರು ಹೊಸ ಫೋನ್‌ಗಳು ಬಿಡುಗಡೆಯಾಗುತ್ತಿವೆ. ಇದರಲ್ಲಿ ವಿವೋದ ಶಾಖೆಯಾದ “ಐಕೂ’ ಎಂಬ ಹೊಸ ಬ್ರಾಂಡ್ ಸೇರಿದೆ. ಜೊತೆಗೆ ರಿಯಲ್‌ಮಿ , ಸ್ಯಾಮ್‌ಸಂಗ್‌ಗಳು ಸಹ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಇವುಗಳ ಪೈಕಿ ಎರಡು ಫೋನ್‌ಗಳು 5ಜಿ ತಂತ್ರಜ್ಞಾನವನ್ನು ಹೊಂದಿವೆ. ಆದರೆ ಭಾರತದಲ್ಲಿ 5ಜಿ ನೆಟ್‌ವರ್ಕ್ ಇಲ್ಲ ಎಂಬುದು ಗ್ರಾಹಕರ ಗಮನದಲ್ಲಿರಲಿ.
ಮೊಬೈಲ್ ಫೋನ್ ಮಾರಾಟಕ್ಕೆ ಎರಡನೇ ದೊಡ್ಡ ಮಾರುಕಟ್ಟೆಯಾಗಿರುವ ಭಾರತದಲ್ಲಿ ಹೊಸ ಫೋನ್‌ಗಳು ಒಂದರ ಹಿಂದೊಂದರಂತೆ ಬಿಡುಗಡೆಯಾಗುತ್ತಲೇ ಇವೆ. ಮೊಬೈಲ್ ತಯಾರಿಕೆಯಲ್ಲಿ ಹೆಸರಾದ ಕಂಪೆನಿಗಳು ತಮ್ಮ ಆರಂಭಿಕ, ಮಧ್ಯಮ ಮತ್ತು ಅತ್ಯುನ್ನತ ದರ್ಜೆಯ ಫೋನ್‌ಗಳನ್ನು ಸರಾಸರಿ 2-3 ತಿಂಗಳಿಗೊಂದರಂತೆ ಹೊರತರುತ್ತಿವೆ. ಈ ವಾರ ಅಂದರೆ ಫೆಬ್ರವರಿ ಕೊನೆಯ ವಾರ ಮೂರು ಕಂಪೆನಿಗಳ ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗುತ್ತಿವೆ. ಈ ಮೂರೂ ಫೋನ್‌ಗಳು ಗ್ರಾಹಕರ ಕುತೂಹಲ ಕೆರಳಿಸಿವೆ. ಇವಿನ್ನೂ ಬಿಡುಗಡೆಯಾಗಿಲ್ಲದ ಕಾರಣ ಇವುಗಳ ಅಧಿಕೃತ ದರ ಘೋಷಣೆ ಮಾಡಿಲ್ಲ. ಆದರೆ ಅವುಗಳ ತಾಂತ್ರಿಕ ವಿವರ ಬಹುತೇಕ ಲಭ್ಯವಾಗಿದೆ.
ಐಕೂ 3
ಇದು ಹೊಚ್ಚ ಹೊಸ ಮೊಬೈಲ್ ಬ್ರಾಂಡ್. ಇದು ವಿವೋದ ಉಪ ಉತ್ಪನ್ನ. ನಿಮಗೆ ಮೊದಲಿಂದಲೂ ತಿಳಿದಿದೆ, ಒನ್‌ಪ್ಲಸ್, ಒಪ್ಪೋ, ವಿವೋ, ರಿಯಲ್‌ಮಿ ಒಂದೇ ಕುಟುಂಬದ ಕುಡಿಗಳು. ಈಗ ಆ ಕುಟುಂಬಕ್ಕೆ ಮತ್ತೂಂದು ಬ್ರಾಂಡ್ ಸೇರ್ಪಡೆ ಅದು ಐಕೂ (ಜಿಕಿOO). ಐಕೂ ಎಂದರೆ, ಐ ಕ್ವೆಸ್ಟ್ ಆನ್ ಅಂಡ್ ಆನ್! ಇದನ್ನು ಐಕ್ಯೂ ಅನ್ನಬೇಕೇ? ಐಕೂ ಎನ್ನಬೇಕೆ ಎಂದು ತಿಳಿಯಲು ವಿಡಿಯೋ ನೋಡಿದಾಗ,ಇದನ್ನು ಐಕೂ ಎಂದೇ ಉತ್ಛರಣೆ ಮಾಡಬೇಕೆಂದು ತಿಳಿಯಿತು. ಐಕೂ3 ಹೆಸರಿನ ಅತ್ಯುನ್ನತ ದರ್ಜೆಯ ಫೋನನ್ನು ಕಂಪೆನಿ ಭಾರತದಲ್ಲಿ ಫೆ.25ರಂದು ಬಿಡುಗಡೆ ಮಾಡುತ್ತಿದೆ. ಈ ಫೋನು ಸ್ನಾಪ್‌ಡ್ರಾಗನ್ 865 ಪ್ರೊಸೆಸರ್ ಹೊಂದಿದೆ. ಇದು 5ಜಿ ತಂತ್ರಜ್ಞಾನ ಹೊಂದಿದೆ. ಆದರೆ ಭಾರತದಲ್ಲಿ ಇನ್ನೂ 5ಜಿ ಬಂದಿಲ್ಲ. ದೇಶಕ್ಕೆ 5ಜಿ ತರಂಗಾಂತರ ಬಂದು, ಅದು ಮೊಬೈಲ್ ಸಂಪರ್ಕ ನೀಡುವ ಸೇವಾದಾತ ಕಂಪೆನಿಗಳಿಗೆ ಹಂಚಿಕೆಯಾಗಿ, ಅದು ನಮ್ಮ ನಿಮ್ಮ ಮೊಬೈಲ್‌ಗೆ ಬರಬೇಕಾದರೆ ಕನಿಷ್ಟ 2 ವರ್ಷಗಳು ಬೇಕು. ಹಾಗಾಗಿ ಭಾರತದಲ್ಲಿ 5ಜಿ ಇರುವ ಫೋನನ್ನು ಈ ಕೊಂಡರೆ ಏನೇನೂ ಪ್ರಯೋಜನವಿಲ್ಲ. ಇನ್ನೂ ಎರಡು-ಮೂರು ವರ್ಷದ ನಂತರ ಬರುತ್ತಲ್ಲಾ? ಅನ್ನಬಹುದು. ಅಲ್ಲಿಯವರೆಗೆ ಈಗ ಕೊಂಡ ಫೋನನ್ನು ನೀವು ಬಳಸುವ ಸಾಧ್ಯತೆಯೂ ಇಲ್ಲ. ಹಾಗಾಗಿ 5ಜಿ ಎಂಬುದು ಭಾರತದಲ್ಲಿ ಸದ್ಯಕ್ಕೆ ಊಟಕ್ಕಿಲ್ಲದ ಉಪ್ಪಿನಕಾಯಿ. ಹಾಗಾಗಿ ಕಂಪೆನಿ 4ಜಿ ಆವೃತ್ತಿಯನ್ನೂ ಬಿಡುಗಡೆ ಮಾಡುತ್ತಿದೆ.
ಇದು 6.44 ಇಂಚಿನ ಪರದೆ ಹೊಂದಿದೆ. ಫುಲ್‌ಎಚ್‌ಡಿ ಪ್ಲಸ್ ಅಮೋಲೆಡ್ ಬರದೆ ಹೊಂದಿದೆ. ನಾಲ್ಕು ಹಿಂಬದಿ ಕ್ಯಾಮರಾ ಹೊಂದಿದೆ. 48 ಮೆ.ಪಿ. ಮುಖ್ಯ ಕ್ಯಾಮರಾ ಇದೆ. ಸೆಲ್ಫಿàಗಾಗಿ 16 ಮೆ.ಪಿ. ಕ್ಯಾಮರಾ ಇದೆ. 4440 ಎಂ.ಎ.ಎಚ್. ಬ್ಯಾಟರಿ ಇದೆ. ಇದಕ್ಕೆ 55 ವ್ಯಾಟ್ಸ್ ವೇಗದ ಚಾರ್ಜಿಂಗ್ ಸೌಲಭ್ಯ ಇದೆ. ಕೇವಲ 15 ನಿಮಿಷದಲ್ಲಿ ಶೇ. 50ರಷ್ಟು ಬ್ಯಾಟರಿ ಭರ್ತಿಯಾಗುತ್ತದಂತೆ. ಆಂಡ್ರಾಯ್ಡ 10 ಇದ್ದು, 6 ಜಿಬಿ ರ್ಯಾಮ್‌ನಿಂದ 12 ಜಿಬಿ ರ್ಯಾಮ್‌ವರೆಗೂ ಎರಡು ಮೂರು ಆವೃತ್ತಿಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದರ ದರ 35 ಸಾವಿರದಿಂದ ಆರಂಭವಾಗಬಹುದಾಗಿದೆ. ಇದು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿದೆ.
ರಿಯಲ್‌ಮಿ ಎಕ್ಸ್ 50 ಪ್ರೊ 5ಜಿ
ಐಕೂ ಕಂಪೆನಿಯ ಹಿರಿಯಣ್ಣನೇ ಆದ ರಿಯಲ್ ಮಿ ಸಹ ಇಂದು (ಫೆ. 24) ತನ್ನ ಹೊಸ ಪೋನನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಇದೂ 5ಜಿ ಫೋನು! ಇದರಲ್ಲೂ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್ ಇದೆ. ಹಾಗಾಗಿ ಅತ್ಯುನ್ನತೆ ದರ್ಜೆಯ ಫೋನಿದು. ಸುಪರ್ ಅಮೋಲೆಡ್ ಪರದೆ ಇರಲಿದೆ. ಹಿಂಬದಿ 64 ಮೆಗಾಪಿಕ್ಸಲ್ಸ್ ಮುಖ್ಯ ಕ್ಯಾಮರಾ ಸೇರಿ ನಾಲ್ಕು ಕ್ಯಾಮರಾ ಇರಲಿವೆ. ಮುಂಬದಿ ಎರಡು ಲೆನ್ಸಿನ ಕ್ಯಾಮರಾ ಇರಲಿದೆ. 65 ವ್ಯಾಟ್ಸ್ ವೇಗದ ಜಾರ್ಜರ್ ಇರಲಿದೆ. 4000 ಎಂಎಎಚ್ ನ ಆಸುಪಾಸು ಬ್ಯಾಟರಿ ಇರಲಿದೆ. ಇದು ಸಹ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ದೊರಕುತ್ತದೆ. ದರ 35 ಸಾವಿರದ ಆಸುಪಾಸು ಇರಲಿದೆ.
ಸ್ಯಾಮ್‌ಸಂಗ್ ಗೆಲಾಕ್ಸಿ ಎಂ31
ಮೇಲಿನೆರಡೂ ಫೋನು ಅತ್ಯುನ್ನತ ದರ್ಜೆಯ ಫೋನ್‌ಗಳಾದರೆ, ಸ್ಯಾಮ್ ಸಂಗ್ ಬಿಡುಗಡೆ ಮಾಡಲಿರುವ ಗೆಲಾಕ್ಸಿ 31 ಮಧ್ಯಮ ದರ್ಜೆಯದು. ಇದು ಫೆ.25ರಂದು ಬಿಡುಗಡೆಯಾಗಲಿದೆ. (ಸಾಮಾನ್ಯವಾಗಿ ಮೊಬೈಲ್ ಕಂಪೆನಿಗಳು ಮಂಗಳವಾರವೇ ಹೊಸ ಫೋನ್ ಬಿಡುಗಡೆ ಮಾಡುತ್ತವೆ! ಭಾರತದಲ್ಲಿ ಆಸ್ತಿಕರು ಮಂಗಳವಾರ ಶುಭ ಕಾರ್ಯಕ್ರಮಗಳನ್ನು ಮಾಡಲು ಹಿಂದೇಟು ಹಾಕುತ್ತಾರೆ! ) ಗೆಲಾಕ್ಸಿ ಎಂ 31 ಕಳೆದ ವರ್ಷ ಬಿಡುಗಡೆಯಾಗಿದ್ದ ಗೆಲಾಕ್ಸಿ ಎಂ 30ಎಸ್‌ನ ಉತ್ತರಾಧಿಕಾರಿ. ಇದು ಸ್ಯಾಮ್‌ಸಂಗ್‌ನದೇ ತಯಾರಿಕೆಯಾದ ಎಕ್ಸಿನಾಸ್ 9611 ಪ್ರೊಸೆಸರ್ ಹೊಂದಿದೆ. 6 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಹೊಂದಿರಲಿದೆ. ಆಂಡ್ರಾಯ್ಡ 10 ಆವೃತ್ತಿ ಇರಲಿದ್ದು 6000 ಎಂಎಎಚ್ ಭರ್ಜರಿ ಬ್ಯಾಟರಿ ಹೊಂದಿದೆ. ಯುಎಸ್‌ಬಿ ಟೈಪ್ ಸಿ ಚಾರ್ಜರ್ ಪೋರ್ಟ್ ಹೊಂದಿದೆ. 16 ಸಾವಿರದ ಆಸುಪಾಸು ದರವಿರಲಿದೆ.
– ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.