ಕಾನೂನುಗಳನ್ನು ಮೀರಿದ ನಿಜ ಜೀವನದ ಬದುಕುವ ಸೂತ್ರಗಳು!
Team Udayavani, May 22, 2017, 2:52 PM IST
ನೀರಿಗೆ ತತ್ವಾರ ಇರಬಹುದು. ನಮ್ಮ ದೇಶದಲ್ಲಿ ಜನಪರವಾದ ಕಾಯ್ದೆಗಳಿಗೆ ಸುತರಾಂ ಬರವಿಲ್ಲ. ಒಂದು ಗ್ರಾಹಕ ಕಾಯ್ದೆ ಬಳಕೆದಾರರೆಲ್ಲರ ಹಿತ ಕಾಪಾಡಬಲ್ಲದು. ಮಾಹಿತಿ ಹಕ್ಕು ಕಾಯ್ದೆ ಭ್ರಷ್ಟಾಚಾರಿಗಳ ನಿದ್ದೆ ಕೆಡಿಸಬಲ್ಲದು. ಈ ಕಾಯ್ದೆಗಳನ್ನು ಆಧರಿಸಿದ ಕಾನೂನು ನಿಯಮಗಳು ದೇಶದಲ್ಲಿ ಜಾರಿಯಲ್ಲಿದೆ. ಆದರೆ ಅವು ದುರ್ಬಳಕೆಯಾಗಿದ್ದರೆ ಅಥವಾ ಪ್ರಯೋಜನಕಾರಿ ಅಲ್ಲದಿದ್ದರೆ ನಾವು ನಮ್ಮನ್ನೇ ದೂಷಿಸಿಕೊಳ್ಳಬೇಕು! ಅಷ್ಟಕ್ಕೂ ಬಹುಸಂಖ್ಯಾತ ನಾಗರಿಕರಿಗೆ ದೇಶದ ಕಾನೂನಿನಲ್ಲಿ ತಮ್ಮ ಪರವಾಗಿರುವ ಅಂಶಗಳ ಬಗ್ಗೆಯೇ ಗೊತ್ತಿಲ್ಲ. ಗ್ರಾಹಕರು ತಿಳಿದುಕೊಳ್ಳಲೇಬೇಕಾದ ಮಾಹಿತಿ- ಹಕ್ಕುಗಳು ಇಲ್ಲಿವೆ.
ವಾರಂಟಿ ಗ್ಯಾರಂಟಿ… ಎಲ್ಲಾ ಒಂದೇ….
ಮನೆಗೆ ಹೊಚ್ಚಹೊಸದಾಗಿ ಓವನ್ ಕೊಂಡಿದ್ದೀರಿ. ಮಾಡಲು ಬಾರದೆ ಸೀದುಹೋದ ಕಥೆ ಬಿಡಿ, ಓವನ್ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಅಂಗಡಿಯವನ ಬಳಿ ಹೋದರೆ ಅವನದು ಒಂದೇ ಮಾತು, ಇಲ್ಲಾ ಸಾರ್, ಇದಕ್ಕೆ ಗ್ಯಾರಂಟಿ ಇಲ್ಲ. ಇರುವುದು ವಾರಂಟಿ ಮಾತ್ರ. ಹಾಗಾಗಿ ಏನು ಕೂಡ ಮಾಡಲು ಬರುವುದಿಲ್ಲ!
ಹೌದಲ್ಲ ಎಂದುಕೊಂಡು ತಣ್ಣಗೆ ಕೈಬೀಸಿ ಮನೆಗೆ ಬಂದರೆ ನೀವು ಪಿಗ್ಗಿ ಬಿದ್ದಂತೆ. ವಸ್ತುವಿನ ಉತ್ಪಾದಕ ಅಥವಾ ಮಾರಾಟಗಾರ ಆ ವಸ್ತುವಿನ ಗುಣಮಟ್ಟದ ಬಗ್ಗೆ ಗ್ರಾಹಕನಿಗೆ ನೀಡುವ ಲಿಖೀತ ಗ್ಯಾರಂಟಿ ಪತ್ರವೇ ವಾರಂಟಿ. ಆ ಅವಧಿಯೊಳಗೆ ಅದರ ಬಿಡಿಭಾಗದಲ್ಲಿ ಅಥವಾ ಕಾರ್ಯಕ್ಷಮತೆಯಲ್ಲಿ ಏನಾದರೂ ದೋಷ ಕಂಡುಬಂದರೆ ಅದನ್ನು ಉಚಿತವಾಗಿ ದುರಸ್ತಿ ಮಾಡಿಕೊಡುವುದು ಅಥವಾ ಬದಲಿಸಿಕೊಡುವುದು ಉತ್ಪಾದಕನ ಅಥವಾ ಮಾರಾಟಗಾರನ ಕಾನೂನುಬದ್ಧ ಜವಾಬ್ದಾರಿ. ಒಂದು ವೇಳೆ ವಾರಂಟಿಯ ಭರವಸೆ ಈಡೇರದಿದ್ದಲ್ಲಿ ಗ್ರಾಹಕ, ಪರಿಹಾರ ಕೋರಬಹುದು.
ಗ್ಯಾರಂಟಿ ಇದ್ದರೆ ಮಾತ್ರ ಉಚಿತ ರಿಪೇರಿ ಅಥವಾ ಬದಲಿಸಿಕೊಡುವ ಸೌಲಭ್ಯ ಇದೆ ಎನ್ನುವುದು ನಿಜವಲ್ಲ. ಸಿಂಪಲ್ ಆಗಿ ಹೇಳಬೇಕೆಂದರೆ, ವಾರಂಟಿ- ಗ್ಯಾರಂಟಿಗಳ ಗೊಂದಲ ಮಾರಾಟಗಾರರು ತಮ್ಮ ಲಾಭಕ್ಕಾಗಿ ಸೃಷ್ಟಿಸಿರುವಂಥದ್ದು.
ಈಗ ಬಂದಿದೆ ಸೂಪರ್ ಕ್ಯಾಶ್!
ಒಂದು ಆಫರ್ ನೋಡಿದ ತಕ್ಷಣ ಅದರತ್ತ ಆಕರ್ಷಿತರಾಗುವುದು ಸಮ್ಮತ. ಆದರೆ ಅದನ್ನು ಒಪ್ಪಿಕೊಳ್ಳುವ ಮುನ್ನ ಎಲ್ಲ ಮಗ್ಗಲುಗಳ ತರ್ಕವೂ ಅಗತ್ಯ. ನನಗೆ ಈ ಆಫರನ್ನು ಕೊಟ್ಟರೆ ಅವರಿಗೇನು ಲಾಭ ಎಂಬುದು ನಮಗೆ ಮನದಟ್ಟಾಗಬೇಕು.
ಆನ್‌ಲೈನ್ ವ್ಯಾಲೆಟ್‌ಗಳು ಭಾರತದ ಆರ್ಥಿಕ ಕ್ಷೇತ್ರಕ್ಕೆ ಕಾಲಿಟ್ಟ ಮೊದಲೆರಡು ವರ್ಷ ಆಫರ್‌ಗಳ ಸುರಿಮಳೆಯನ್ನೇ ಸುರಿಸಿದ್ದವು. ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡ ನಂತರ ಆಫರ್ ಮಳೆ ಕಡಿಮೆಯಾಗಿದೆ. ಹಾಗಾಗಿಯೇ ಈಗ ಆ ಕಂಪನಿಗಳು ಕೊಡುವ ಆಫರ್‌ಗಳ ಷರತ್ತುಗಳನ್ನು ಹೆಚ್ಚು ಗಮನಿಸಬೇಕಾಗಿದೆ.
ಇತ್ತೀಚೆಗೆ ಕ್ಯಾಶ್‌ಬ್ಯಾಕ್ ಆಫರ್‌ನಲ್ಲಿ “ಶೇ. 100 ಸೂಪರ್ ಕ್ಯಾಶ್ ಬ್ಯಾಕ್’ ಎಂಬ ಒಕ್ಕಣೆ ಇರುತ್ತದೆ. ಸೂಪರ್ ಕ್ಯಾಶ್ ಎಂಬುದು ಸರಳ ಕ್ಯಾಶ್‌ಬ್ಯಾಕ್‌ಗಿಂತ ಭಿನ್ನ. ಉದಾಹರಣೆಗೆ ನೀವು 100 ರೂ. ರೀಚಾರ್ಜ್ ಮಾಡಿಸಿ 100 ರೂ. ಸೂಪರ್ ಕ್ಯಾಶ್ ಪಡೆದಿರಿ ಎಂದಿಟ್ಟುಕೊಳ್ಳಿ. ಅದನ್ನು ನಿಮ್ಮ ಮುಂದಿನ ರೀಚಾರ್ಜ್ ವೇಳೆಯಲ್ಲಿ ಸಂಪೂರ್ಣವಾಗಿ ಬಳಸಲಾಗುವುದಿಲ್ಲ. ಶೇ. 10ರಷ್ಟು ಮಾತ್ರ ಸೂಪರ್ ಕ್ಯಾಶ್ ನಗದಾಗುತ್ತದೆ. ಅಂದರೆ 100 ರೂ. ರೀಚಾರ್ಜ್‌ಗೆ ಬಳಸಿದರೆ 10 ರೂ. ಸೂಪರ್ ಕ್ಯಾಶ್ ಹಾಗೂ 90 ರೂ. ಬೇರೆ ಇ ಮನಿ ಉಪಯೋಗಿಸಬಹುದು. 100 ರೂ. ಸೂಪರ್ ಕ್ಯಾಶ್ ಗಳಿಸಿದವರು ಅದನ್ನು ಖಾಲಿ ಮಾಡಲು 1000 ರೂ.ಗಳ ವಹಿವಾಟು ಮಾಡಬೇಕು. ಇದರಲ್ಲಿ ಸೂಪರ್ ಕ್ಯಾಶ್ ನಗದಾಗುವುದಕ್ಕೆ ಗರಿಷ್ಠ ಮಿತಿಯನ್ನೂ ಹೇರಿರಲಾಗಿರುತ್ತದೆ. ಒಂದು ವಹಿವಾಟಿಗೆ ಹೆಚ್ಚೆಂದರೆ 20 ರೂ. ಸೂಪರ್ ಕ್ಯಾಶ್ ಬಳಸಬಹುದು ಎಂಬ ನಿಯಮ ಇದ್ದರೆ ನೀವು 200 ರೂ. ವಹಿವಾಟಿಗೂ 20 ರೂ. ಸೂಪರ್ ಕ್ಯಾಶ್ ಬಳಕೆಯಾಗುತ್ತದೆ. ಸಾವಿರ ರೂ. ವ್ಯವಹಾರಕ್ಕೂ ಇಷ್ಟೇ.
ಇದೇ ವೇಳೆ ಯಾವುದೇ ವ್ಯಾಲೆಟ್ “ಅಪ್ ಟು 100 ರೂ, 200 ರೂ ಎಂಬ ಆಫರ್ ಅಪಾಯಕಾರಿ. ಇಲ್ಲಿ ಕ್ಯಾಶ್‌ಬ್ಯಾಕ್ ತೀರಾ ಕನಿಷ್ಟ ಆಗಿರುವ ಸಾಧ್ಯತೆಗಳಿರುತ್ತವೆ.
ಪಿಗ್ಮಿಯ ಹಾದಿಯಲ್ಲಿ ಪಿಗ್ಗಿ ಬೀಳದಿರಿ!
ಉಳಿತಾಯ ಒಳ್ಳೆಯದೇ. ನಮಗೆ ಒಂದೇ ಬಾರಿಗೆ ಹಣವನ್ನು ಒಟ್ಟುಮಾಡುವುದು ಕಷ್ಟ ಅಂತಾದಾಗ ಪಿಗ್ಮಿ ಅನುಕೂಲಕರ. ಉಳಿತಾಯಕ್ಕೆ ಪ್ರೇರೇಪಿಸುವ ಪಿಗ್ಮಿ ನಮ್ಮ ಸೇವಿಂಗ್ಸ್‌ಗೆ ಬಡ್ಡಿಯ ಬೋನಸ್ ಕೊಡುತ್ತದೆಯೇ ಎಂದು ಪ್ರಶ್ನಿಸಿದರೆ ನಿರಾಸೆಯ ಉತ್ತರವನ್ನೇ ನೀಡಬೇಕಾಗುತ್ತದೆ.
ಪಿಗ್ಮಿಯ ಕೆಲವು ಮೂಲಭೂತ ನಿಯಮಗಳನ್ನು ಓದಿಕೊಳ್ಳಬೇಕು. ಸಾಮಾನ್ಯವಾಗಿ ಜಾರಿಯಲ್ಲಿರುವ ಅಂಶಗಳು ಇಂತಿರುತ್ತವೆ. ದಿನಕ್ಕೆ 50 ರೂ. ಇಡಿ, ವಾರಕ್ಕೆ 500 ರೂ. ಹಾಕಿ. ಇಲ್ಲಿನ ಖಾತೆಗೆ ಮೊದಲ ಒಂದು ವರ್ಷ ಯಾವುದೇ ಬಡ್ಡಿ ಕೊಡಲಾಗುವುದಿಲ್ಲ. ವರ್ಷದಿಂದ ಶೇ. 3, ಎರಡು ವರ್ಷ ಪೂರೈಸಿದ ಮೇಲೆ 4, ನಂತರದ ಅವಧಿಗೆ ಪರಮಾವಧಿ ಶೇ. 5 ಅಥವಾ 6. ಇದರಲ್ಲೂ ಮೊದಲ ಆರು ತಿಂಗಳ ಒಳಗೆ ತೆಗೆದರೆ ಏಜೆಂಟ್ ಕಮಿಷನ್ ಮೊತ್ತ ಅಸಲಿನಿಂದಲೇ ಮುರಿಯಲ್ಪಡುತ್ತದೆ. ಆರು ತಿಂಗಳ ನಂತರ ಅಸಲಿನ ಮೇಲೆ ಸಾಲವುಂಟು, ಶೇ. 14 ಅಥವಾ 16ರಷ್ಟು ಬಡ್ಡಿ! ಇಂದು ಉಳಿತಾಯ ಖಾತೆಯಲ್ಲಿ ಹಣವಿಟ್ಟರೂ ದಿನದ ಲೆಕ್ಕದಲ್ಲಿ ಶೇ. 4ರ ಕನಿಷ್ಟ ವಾರ್ಷಿಕ ದರದಲ್ಲಿ ಬಡ್ಡಿ ಕೊಡಲಾಗುತ್ತದೆ. ಆದರೆ ಪಿಗ್ಮಿಯಲ್ಲಿ ಅಂಥ ಯಾವ ಅನುಕೂಲವೂ ಇಲ್ಲ.
ಹಣ ಉಳಿತಾಯದ ಅತ್ಯುತ್ತಮ ಮಾರ್ಗಗಳಲ್ಲಿ ಇದೂ ಒಂದು ಎಂಬುದು ಸಂಶಯಾತೀತ. ಆದರೆ ಈ ಉಳಿತಾಯದ ಹಣದ ವಿಚಾರದಲ್ಲಿ ಕೆಲವು ಜಾಣ್ಮೆಯ ನಡೆಗಳನ್ನು ಇಡಬೇಕು. ಆರು ತಿಂಗಳ ನಂತರ ಬಡ್ಡಿ ಇಲ್ಲದಿದ್ದರೂ ಏಜೆಂಟರ ಕಮಿಷನ್, ಗ್ರಾಹಕನ ಮೂಲಧನದಿಂದ ಕತ್ತರಿಸಲ್ಪಡುವುದಿಲ್ಲ. ಹಾಗಾಗಿ ಸದರಿ ಪಿಗ್ಮಿ ಖಾತೆಯನ್ನು ಬರಕಾಸ್ತುಗೊಳಿಸಿ ಕೈಗೆ ಬಂದ ಮೊತ್ತವನ್ನು ನಿಶ್ಚಿತ ಠೇವಣಿಗೆ ಅದೇ ಹಣಕಾಸು ಸಂಸ್ಥೆಯಲ್ಲಿ ಅಥವಾ ಸುರಕ್ಷಿತ ಎನ್ನಿಸಿದ ಕಡೆ ತೊಡಗಿಸಿ.
ಇನ್ನೊಂದು ಸಲಹೆಯೂ ಇದೆ. ನಿಮಗೆ ಪ್ರತಿ ದಿನ, ವಾರ ಬ್ಯಾಂಕ್‌ಗೆ ಹೋಗುವ ಅವಕಾಶ ಮುಕ್ತವಾಗಿದ್ದರೆ ಆಗ ನೀವು ಬ್ಯಾಂಕ್‌ನಲ್ಲಿಯೇ ಆರ್‌ಡಿ ಅಕೌಂಟ್ ಮಾಡಿ ಇಂಥ ಉಳಿತಾಯದ ಸೂತ್ರವನ್ನು ಕೂಡ ಅನುಸರಿಸಬಹುದು.
ಆನ್‌ಲೈನ್‌ನಲ್ಲಿ ರೀಫರ್ಬಶಿಂಗ್!
ಆನ್‌ಲೈನ್‌ನಲ್ಲಿ ಖರೀದಿ ಮಾಡುವವರು ಬ್ರಾಂಡೆಡ್ ವಸ್ತುಗಳನ್ನು ಖರೀದಿ ಮಾಡುವುದು ಹೆಚ್ಚು ಸೂಕ್ತ. ಎಲೆಕ್ಟ್ರಾನಿಕ್ ವಸ್ತುಗಳ ವಿಚಾರದಲ್ಲಂತೂ ಇದು ಅಂಡರ್‌ಲೈನ್ ಮಾಡಿ ಹೇಳಬೇಕಾದ ವಿಚಾರ.
ಈಗ ಇನ್ನೊಂದು ಹೊಸ ಮಾದರಿಯ ವ್ಯಾಪಾರ ನಡೆಯುತ್ತಿದೆ. ಕೆಲ ಜಾಲತಾಣಗಳಲ್ಲಿ ಮಾರಾಟಕ್ಕಿರುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಅವರು “ಹೊಸದು’ ಎನ್ನುವುದಿಲ್ಲ. ಸೆಕೆಂಡ್ಸ್ ಎಂತಲೂ ಕರೆಯುವುದಿಲ್ಲ. “ರಿಫರ್ಬಶಿಂಗ್’ ಎಂದು ಹೇಳಲಾಗಿರುತ್ತದೆ. ಏನಿದು ರಿಫರ್ಬಶಿಂಗ್? ಗ್ಯಾರಂಟಿ, ವಾರಂಟಿ ಅವಧಿಯ ತಯಾರಿಕೆಯನ್ನು ಕಂಪನಿ ಗ್ರಾಹಕರಿಂದ ವಾಪಾಸು ಪಡೆದು ಅದರೊಳಗಿನ ದೋಷಗಳನ್ನು ನಿವಾರಿಸಿ ಮತ್ತೂಮ್ಮೆ ಮಾರುಕಟ್ಟೆಗೆ ಬಿಡಲಾಗುತ್ತದೆ. ಇಂಥ ಪ್ರಾಡಕ್ಟ್ಗಳಿಗೆ ರಿಫರ್ಬಶಿಂಗ್ ಎನ್ನಲಾಗುತ್ತದೆ. ಇಂಥ ವಸ್ತುಗಳ ಮೇಲೆ ಸಾಮಾನ್ಯಕ್ಕಿಂತ ಹೆಚ್ಚಿನ ಸೋಡಿ ಘೋಷಿಸಿರಲಾಗುತ್ತದೆ. ಆಯ್ಕೆ ನಿಮ್ಮದು!
-ಮಾ. ವೆಂ. ಸ. ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Nikhil Kumarswamy: ಸೋತ ನಿಖಿಲ್‌ಗೆ ಜಿಲೆಯ ಪಕ್ಷ ಸಂಘಟನೆ ಹೊಣೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.