ರಿಯಲ್ ಮಿ ಯು 1 ಮತ್ತು ಆನರ್ 8 ಸಿ ಬಿಡುಗಡೆ
Team Udayavani, Dec 10, 2018, 6:00 AM IST
ಭಾರತೀಯ ಮೊಬೈಲ್ ಗ್ರಾಹಕರ ನಾಡಿಮಿಡಿತವನ್ನು ಮೊಬೈಲ್ ಕಂಪೆನಿಗಳು ಚೆನ್ನಾಗಿ ಅರಿತಿವೆ. ಇಲ್ಲಿ ಆರಂಭಿಕ ಹಾಗೂ ಮಧ್ಯಮ ದರ್ಜೆಯ ಮೊಬೈಲ್ ಗಳನ್ನೆ ಹೆಚ್ಚಾಗಿ ಬಯಸುತ್ತಾರೆ. ಅದಕ್ಕನುಗುಣವಾಗಿ ರಿಯಲ್ ಮಿ ಹಾಗೂ ಆನರ್ ಎರಡು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿವೆ. ರಿಯಲ್ ಮಿ ಯು 1 ಹಾಗೂ ಆನರ್ 8 ಸಿ. ಎರಡು ಮೊಬೈಲ್‌ಗಳ ಸಂಕ್ಷಿಪ್ತ ವಿವರ ಇಲ್ಲಿದೆ.
ಮೊನ್ನೆ ಮೊನ್ನೆಯಷ್ಟೇ ಭಾರತದಲ್ಲಿ ಬಿಡುಗಡೆಯಾದ ಎರಡು ಮೊಬೈಲ್‌ಗಳ ಪರಿಚಯವನ್ನು ಮಾಡಿಕೊಳ್ಳೋಣ. ಎರಡು ಮೊಬೈಲ್‌ಗಳೂ 15 ಸಾವಿರ ರೂ.ದೊಳಗಿನ ದರಪಟ್ಟಿಯವು. ಎರಡೂ ಕೊಡುವ ಹಣಕ್ಕೆ ತಕ್ಕ ಮೌಲ್ಯವುಳ್ಳಂಥವು.
ರಿಯಲ್ ಮಿ ಯು 1: ಒಪ್ಪೋ, ವಿವೋ, ಕಂಪೆನಿಯ ಒಡೆತನ ಬಿಬಿಕೆ ಎಂಬ ಕಂಪೆನಿಯದ್ದು. ಒಪ್ಪೋ, ವಿವೋ ಕಡಿಮೆ ಸವಲತ್ತಿಗೆ ಹೆಚ್ಚು ದರ ಇಟ್ಟು ಆಫ್ಲೈನ್‌ನಲ್ಲಿ ಮಾರುವ ಮೊಬೈಲ್‌ಗಳು. ಆನ್‌ಲೈನ್ ಮಾರುಕಟ್ಟೆಯಲ್ಲಿ ಅಮೆಜಾನ್, ಫ್ಲಿಪ್‌ಕಾರ್ಟ್ ಮೂಲಕ ಶಿಯೋಮಿ, ಒನ್‌ಪ್ಲಸ್, ಆನರ್, ಮೊಟೋ ಬ್ರಾಂಡ್‌ಗಳು ಯಶಸ್ವಿಯಾದದ್ದನ್ನು ಕಂಡ ಬಿಬಿಕೆ, ಇವುಗಳ ಜೊತೆ ಪೈಪೋಟಿಗೆಂದೇ ರಿಯಲ್ ಮಿ ಎಂಬ ಬ್ರಾಂಡ್ ಅಸ್ತಿತ್ವಕ್ಕೆ ತಂದಿದೆ. ಎರಡು ಮೂರು ಮೊಬೈಲ್‌ಗಳನ್ನು ಈಗಾಗಲೇ ಬಿಟ್ಟಿದ್ದು, ಯಶಸ್ವಿಯೂ ಆಗಿವೆ. ಈಗ ರಿಯಲ್ ಮಿ ಯು 1 ಎಂಬ ಹೊಸ ಮಾಡೆಲ್ ಬಿಟ್ಟಿದೆ.
ರಿಯಲ್ ಮಿ ಯು 1 ಮೀಡಿಯಾಟೆಕ್ ಹೀಲಿಯೋ ಪಿ 70 ಪ್ರೊಸೆಸರ್ (12ಎನ್‌ಎಮ್ ಎಐ) ಹೊಂದಿದ ವಿಶ್ವದ ಮೊದಲ ಫೋನ್. ಇದು 2.1 ಗಿ.ಹ. ಎಂಟು ಕೋರ್‌ಗಳ ಪ್ರೊಸೆಸರ್. ಈ ಪ್ರೊಸೆಸರ್‌ನ ಅಂಟುಟು ಬೆಂಚ್ ಮಾರ್ಕ್ (ಪ್ರೊಸೆಸರ್‌ನಿಂದ ಮೊಬೈಲ್ ಕೆಲಸ ಮಾಡುವ ವೇಗವನ್ನು ಇದು ತಿಳಿಸುತ್ತದೆ. ಬೆಂಚ್‌ಮಾರ್ಕ್ ಹೆಚ್ಚಾದಷ್ಟೂ ಮೊಬೈಲ್ ವೇಗವಾಗಿ ಕೆಲಸ ಮಾಡುತ್ತದೆ ಎಂಬ ನಂಬಿಕೆಯಿದೆ) ಒಟ್ಟಾರೆಯಾಗಿ 1,45,021 ಇದೆ. ಸ್ನಾಪ್‌ಡ್ರಾಗನ್ 636 ಪ್ರೊಸೆಸರ್ 1,15,611 ಬೆಂಚ್ ಮಾರ್ಕ್ ಮತ್ತು ಹುವಾವೇ ಕಿರಿನ್ 710 ಪ್ರೊಸೆಸೆರ್ 139,974 ಬೆಂಚ್ ಮಾರ್ಕ್ ಹೊಂದಿವೆ. ಅವೆರಡಕ್ಕೂ ಹೋಲಿಸಿದರೆ ಈ ಮಧ್ಯಮ ದರ್ಜೆಯಲ್ಲಿ ಮೀಡಿಯಾಟೆಕ್ ಹೀಲಿಯೋ ಪಿ70 ಬೆಸ್ಟ್ ಅಂತ ಕಂಪೆನಿಯ ಹೇಳಿಕೆ. ತಜ್ಞರು ಅಂಟುಟು ಬೆಂಚ್ ಮಾರ್ಕ್ ಒಂದನ್ನೇ ನಂಬುವುದಿಲ್ಲ. ನೈಜವಾಗಿ ಬಳಸಿದಾಗ ಎಷ್ಟು ವೇಗವಾಗಿ ಕೆಲಸ ಮಾಡುತ್ತದೆ ಎಂಬುದು ಮುಖ್ಯ ಎಂಬುದು ಅವರ ಅನಿಸಿಕೆ.
ಈ ಮೊಬೈಲ್‌ನಲ್ಲಿ ಸೆಲ್ಫಿà ಗೆ ಆದ್ಯತೆ ನೀಡಲಾಗಿದೆ. 25 ಮೆಗಾಪಿಕ್ಸಲ್ ಮುಂದಿನ ಕ್ಯಾಮರಾ, ಹಿಂಬದಿಗೆ 13 + 2 ಮೆಗಾಪಿಕ್ಸಲ್ ಡುಯೆಲ್ ಲೆನ್ಸ್ ಕ್ಯಾಮರಾ ಇದೆ. 6.3 ಇಂಚಿನ ಎಫ್ಎಚ್‌ಡಿ ಪ್ಲಸ್ ಪರದೆ ಇದೆ. ಇದಕ್ಕೆ ವಾಟರ್ ಡ್ರಾಪ್ ನಾಚ್ ಡಿಸ್‌ಪ್ಲೇ ಇದೆ. 3500 ಎಂಎಎಚ್ ಬ್ಯಾಟರಿ ಇದೆ. ಪರದೆಯು ಶೇ.90.8 ರಷ್ಟು ಆವರಿಸಿದೆ. ಪರದೆಯ ರಕ್ಷಣೆಗೆ ಗೊರಿಲ್ಲ ಗ್ಲಾಸ್ 3 ಇರುವುದು ಬೋನಸ್. ಆಂಡ್ರಾಯ್ಡ ಓರಿಯೋ 8.1 ಆಪರೇಟಿಂಗ್ ಸಿಸ್ಟಂ ಇದು ಇದಕ್ಕೆ ಕಲರ್ ಓಎಸ್ 5.2 ಸ್ಕಿನ್ ಇದೆ. ಆದರೆ ಈ ಮೊಬೈಲ್ ಲೋಹದ ದೇಹ ಹೊಂದಿಲ್ಲ. ಪ್ಲಾಸ್ಟಿಕ್ ಬಾಡಿ ಇದ್ದು, ಪಾಲಿಕಾಬೊìನೆಟ್ ಫ್ರೆàಂ ಹೊಂದಿದೆ.
ಈ ಮೊಬೈಲ್ ಎರಡು ಆವೃತ್ತಿಗಳಲ್ಲಿ ಲಭ್ಯ. 3 ಜಿಬಿ ರ್ಯಾಮ್ ಮತ್ತು 32 ಜಿಬಿ ಆಂತರಿಕ ಸಂಗ್ರಹ. (ದರ 12000 ರೂ.) ಮತ್ತು 4 ಜಿಬಿ ರ್ಯಾಮ್ ಮತ್ತು 64 ಜಿಬಿ ಆಂತರಿಕ ಸಂಗ್ರಹ. (ದರ 15 ಸಾವಿರ ರೂ.) ಎರಡು ಸಿಮ್ ಹಾಕಿಕೊಂಡು ಜೊತೆಗೆ 256 ಜಿಬಿವರೆಗೂ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಸೌಲಭ್ಯ ಉಂಟು. ಅಮೇಜಾನ್.ಇನ್ ನಲ್ಲಿ ಮಾತ್ರ ಲಭ್ಯ. ಮುಂದಿನ ಫ್ಲಾಶ್ ಸೇಲ್ ಡಿ.12ರಂದು ಮಧಾಹ್ನ 12ಕ್ಕಿದೆ.
ಆನರ್ 8 ಸಿ: ಇನ್ನು ಈ ವಾರದ 2ನೇ ಅತಿಥಿ ಆನರ್ 8 ಸಿ. ಆನರ್ ಫೋನ್‌ಗಳಲ್ಲಿ ಸಾಮಾನ್ಯವಾಗಿ ಅವರ ಕಂಪೆನಿಯದ್ದೇ ಆದ ಕಿರಿನ್ ಪ್ರೊಸೆಸರ್‌ಗಳನ್ನು ಬಳಸುತ್ತಾರೆ. ಮಧ್ಯ ಮಧ್ಯ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಗಳುಳ್ಳ ಫೋನ್‌ಗಳನ್ನು ಬಿಡುತ್ತಾರೆ. ಆನರ್ 8 ಸಿ ಗೆ ಬಳಸಿರುವುದು ಸ್ನಾಪ್‌ಡ್ರಾಗನ್ 632 ಪ್ರೊಸೆಸರ್. ಇದು ಮಧ್ಯಮ ದರ್ಜೆಯಲ್ಲಿ ಶಕ್ತಿಶಾಲಿ, 8 ಕೋರ್‌ಗಳ 1.8 ಗಿ.ಹ., 14 ಎನ್‌ಎಮ್ ಪ್ರೊಸೆಸರ್. ಇದು ಹೊಚ್ಚ ಹೊಸ ಪ್ರೊಸೆಸರ್ ಆಗಿದ್ದು, ಆನರ್ 8 ಸಿಯಲ್ಲಿ ಮೊತ್ತ ಮೊದಲು ಬಳಕೆಯಾಗಿದೆ.
ಇದು 4000 ಎಂಎಎಚ್ ಬ್ಯಾಟರಿ ಹೊಂದಿದ್ದು, ಎರಡು ದಿನ ಬಾಳಿಕೆ ಬರುತ್ತದೆ ಎಂದು ಕಂಪೆನಿ ಹೇಳಿದೆ. 6.26 ಇಂಚಿನ ಎಚ್.ಡಿ. ಪ್ಲಸ್ ಡಿಸ್‌ಪ್ಲೇ ಇದೆ. (ಫುಲ್ ಎಚ್‌ಡಿ ಪ್ಲಸ್ ಇಲ್ಲದಿರುವುದು ಇದರ ಒಂದು ಸಣ್ಣ ಕೊರತೆ) ನಾಚ್ ಡಿಸ್‌ಪ್ಲೇ ಇದೆ. 19:9 ಅನುಪಾತದ ಫುಲ್‌ವೂÂ ಹೊಂದಿದೆ. 13 ಮೆ.ಪಿ. ಮತ್ತು 2 ಮೆ.ಪಿ. ಹಿಂಬದಿ ಕ್ಯಾಮರಾ ಹಾಗೂ 8 ಮೆ.ಪಿ. ಹಿಂಬದಿ ಕ್ಯಾಮರಾ ಹೊಂದಿದೆ. ಹಿಂಬದಿ ಕ್ಯಾಮರಾ ಎಫ್/1.8 ಅಪರ್ಚರ್ ಹೊಂದಿದ್ದು, ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋ ಬರುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.
ಈ ಮೊಬೈಲ್‌ನಲ್ಲಿ ಟಿಯುವಿ ರೇನ್‌ಲ್ಯಾಂಡ್ ಸರ್ಟಿಫೈಡ್ ಮಾಡಿದ ಕಣ್ಣಿನ ಸುರಕ್ಷತಾ (ಐ-ಕೇರ್ ಮೋಡ್) ಇದ್ದು, ಇದು ನೀಲಿ ಬೆಳಕಿನ ರೇಡಿಯೇಷನ್ ನಿಂದ ಕಣ್ಣನ್ನು ರಕ್ಷಿಸುತ್ತದೆ. ಇದರಿಂದ ಕಣ್ಣಿಗೆ ತ್ರಾಸ ಆಗುವುದಿಲ್ಲ ಎಂಬುದು ಕಂಪೆನಿಯ ವಿವರಣೆ.
ಮತ್ತು ಇದರಲ್ಲಿ ಎರಡು ಬ್ಲೂಟೂತ್ ಕನೆಕ್ಟಿವಿಟಿ ಇದ್ದು, ಏಕಕಾಲದಲ್ಲಿ ನೀವು ನಿಮ್ಮ ಬ್ಲೂಟೂತ್ ಸ್ಪೀಕರ್ ಮತ್ತು ನಿಮ್ಮ ಸ್ಮಾರ್ಟ್ ವಾಚ್‌ಗೆ ಕನೆಕ್ಟ್ ಆಗಬಹುದು. ಎರಡು ಸಿಮ್ ಹಾಕಿಕೊಂಡೂ, 256 ಜಿಬಿವರೆಗಿನ ಮೆಮೊರಿ ಕಾರ್ಡ್ ಹಾಕಿಕೊಳ್ಳಬಹುದಾಗಿದೆ. ಈ ಮೊಬೈಲ್ ದೇಹ ಸಂಪೂರ್ಣ ಲೋಹದ್ದು. ಅಂಡ್ರಾಯ್ಡ ಓರಿಯೋ 8.1 ಇದ್ದು, ಹುವಾವೇದವರ ಇಎಂಯುಐ 8.2 ಸ್ಕಿನ್ ಲಗತ್ತಿಸಲಾಗಿದೆ.
ಈ ಮೊಬೈಲ್ ಎರಡು ಆವೃತ್ತಿಗಳಲ್ಲಿ ಲಭ್ಯ. 4 ಜಿಬಿ ರ್ಯಾಮ್ ಮತ್ತು 32 ಜಿಬಿ ಆಂತರಿಕ ಸಂಗ್ರಹ. (12 ಸಾವಿರ ರೂ.), ಮತ್ತು 4 ಜಿಬಿ ರ್ಯಾಮ್ ಮತ್ತು 64 ಜಿಬಿ ಆಂತರಿಕ ಸಂಗ್ರಹ (13 ಸಾವಿರ ರೂ.) 32 ಜಿಬಿ ಮೆಮೊರಿಗೂ 4 ಜಿಬಿ ರ್ಯಾಮ್ ನೀಡಲಾಗಿದೆ. ಈ ಮೊಬೈಲ್ ಡಿ. 10 ರಿಂದ (ಇಂದಿನಿಂದ) ಅಮೆಜಾನ್. ಇನ್ ನಲ್ಲಿ ಲಭ್ಯ.
– ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.