ನುಗ್ಗೆ ಬೆಳೆದರೆ ಹಿಗ್ಗು
Team Udayavani, Jul 1, 2019, 5:00 AM IST
ಕಡಿಮೆ ಖರ್ಚಿನ ಲಾಭದಾಯಕ ಬೆಳೆಯೆಂದರೆ ನುಗ್ಗೆ. ಹೆಚ್ಚು ಮಳೆಯಾಗದ ಪ್ರದೇಶದಲ್ಲೂ ಇದನ್ನು ಬೆಳೆಯಬಹುದು. ನುಗ್ಗೆಯಿಂದಲೇ ವರ್ಷಕ್ಕೆ ಲಕ್ಷ ರುಪಾಯಿ ಲಾಭ ಪಡೆದ ರೈತರೊಬ್ಬರ ಯಶೋಗಾಥೆ ಇಲ್ಲಿದೆ…
ಹೈಬ್ರಿಡ್ ತಳಿಯ ನುಗ್ಗೆ ಗಿಡಗಳು ಮಾರುಕಟ್ಟೆಯನ್ನು ಪ್ರವೇಶಿಸಿದಂತೆ ನುಗ್ಗೆಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯುವವರ ಪ್ರಮಾಣ ಹೆಚ್ಚಾಗತೊಡಗಿತು. ನುಗ್ಗೆಯನ್ನು ಬೆಳೆದು ಆದಾಯ ಗಳಿಸಬಹುದೆಂಬುದನ್ನು ಹಲವಾರು ಬೆಳೆಗಾರರು ತೋರಿಸಿಕೊಟ್ಟಿದ್ದಾರೆ. ರಾಜ್ಯದ ಎಲ್ಲೆಡೆಯೂ ಬೆಳೆಯಬಹುದಾದ ಬೆಳೆಯಿದು.
ಸಿದ್ದಪ್ಪ, ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನವರು. ಇವರಿಗೆ ಮೂರು ಎಕರೆ ಜಮೀನಿದೆ. ಪ್ರತಿ ವರ್ಷ ಹತ್ತಿ, ಮೆಣಸನ್ನು ಪ್ರಮುಖ ಬೆಳೆಯಾಗಿ ಬೆಳೆಯುತ್ತಿದ್ದರು, ಪ್ರತಿ ವರ್ಷ ಅವುಗಳಿಂದ ನಷ್ಟ ಅನುಭವಿಸುವುದು ಸಾಮಾನ್ಯವಾಗಿತ್ತು. ಐದು ವರ್ಷಗಳ ಹಿಂದೆ ಬದಲಿ ಬೆಳೆಯ ಹುಡುಕಾಟದಲ್ಲಿದ್ದಾಗ ರೈತರೊಬ್ಬರು ಇವರಿಗೆ ಹೈಬ್ರಿಡ್ ತಳಿಯ ನುಗ್ಗೆ ಬೆಳೆಯುವಂತೆ ಸಲಹೆ ನೀಡಿದರು. ಅದರಂತೆ ಸಿದ್ದಪ್ಪ ತನ್ನ ಮೂರು ಎಕರೆ ಪೂರ್ತಿ ನುಗ್ಗೆ ಬೆಳೆಯುವ ನಿಟ್ಟಿನಲ್ಲಿ ಒಂದು ಕೆ.ಜಿ. ಹೈಬ್ರಿಡ್ ತಳಿಯ ನುಗ್ಗೆ ಬೀಜವನ್ನು ಕೆ.ಜಿ.ಗೆ ರೂ.600ರಂತೆ ಖರೀದಿಸಿ ತಂದರು.
ಭರಪೂರ ಇಳುವರಿ
ಜೂನ್ ಮಾಸದಲ್ಲಿ ಗಿಡದಿಂದ ಗಿಡಕ್ಕೆ ಆರು ಅಡಿ, ಸಾಲಿನಿಂದ ಸಾಲಿಗೆ ಹದಿನೈದು ಅಡಿ ಅಂತರ ಬಿಟ್ಟು ಒಂದು ಅಡಿ ಗುಂಡಿ ತೆಗೆದು ಅದರಲ್ಲಿ ನುಗ್ಗೆ ಬೀಜಗಳನ್ನು ಬಿತ್ತಿದರು. ಕೆಲವೇ ದಿನಗಳಲ್ಲಿ ಮೂರು ಎಕರೆ ತುಂಬಾ 4500 ನುಗ್ಗೆ ಸಸಿಗಳು ಬೆಳೆದು ನಿಂತವು. ನಂತರ ಮೂರು ತಿಂಗಳಿಗೊಮ್ಮೆ ಕೊಟ್ಟಿಗೆ ಗೊಬ್ಬರ, ವಾರಕ್ಕೊಮ್ಮೆ ನೀರು ನೀಡಿದರು. ಜೂನ್‌ನಲ್ಲಿ ನೆಟ್ಟ ಸಸಿ ಜನವರಿಯಲ್ಲಿ ಇಳುವರಿ ನೀಡತೊಡಗಿತು. ಆರಂಭದ ವರ್ಷ ಹೆಚ್ಚಿನ ಇಳುವರಿ ಕೈ ಸೇರಲಿಲ್ಲ. ಎರಡನೇ ವರ್ಷಕ್ಕೆ ಭರಪೂರ ಇಳುವರಿ ಬಂತು. ಇಳುವರಿಯ ದಿನಗಳಲ್ಲಿ ಪ್ರತಿದಿನ ಸರಾಸರಿ 600 ನುಗ್ಗೆ ಕಾಯಿ ಕಟಾವಿಗೆ ದೊರೆಯುತ್ತದೆ. ಹದಿನೈದು ನುಗ್ಗೆಕಾಯಿ ಸೇರಿದರೆ ಒಂದು ಕೆ.ಜಿ. ತೂಗುತ್ತದೆ. ಕೆ.ಜಿ.ಗೆ. ಇಪ್ಪತ್ತರಿಂದ ಮೂವತ್ತು ರೂಪಾಯಿ ದರದಲ್ಲಿ ಮಾರಾಟ ಮಾಡುತ್ತಾರೆ.
ಮೊದಲ ವರ್ಷ ಮೂರು ಎಕರೆಯಲ್ಲಿ ನುಗ್ಗೆ ಬೆಳೆಯಲು ಸುಮಾರು 70 ಸಾವಿರ ರುಪಾಯಿ ಖರ್ಚು ತಗುಲಿತ್ತು. ಎರಡನೇ ವರ್ಷ ಖರ್ಚಿನ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಇದೀಗ ಖರ್ಚುಗಳನ್ನೆಲ್ಲಾ ಕಳೆದು ಸುಮಾರು ಒಂದು ಲಕ್ಷ ರುಪಾಯಿ ಲಾಭ ಸಿಗುತ್ತಿದೆ.
ನುಗ್ಗೆ ಬೆಳೆಯಲು ಮಾರ್ಗದರ್ಶನ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನುಗ್ಗೆ ಸಸಿಗಳನ್ನು ತರಿಸಿ, ಬೆಳೆಯುವ ಕುರಿತು ಮಾಹಿತಿ ನೀಡುವ ಮೂಲಕ ನುಗ್ಗೆ ಬೆಳೆಯುವಂತೆ ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ಈ ಯೋಜನೆಯ ಪ್ರಯೋಜನ ಪಡೆದುಕೊಂಡವರಲ್ಲಿ ಸಿದ್ಧಪ್ಪನವರೂ ಒಬ್ಬರು. ಅವರ ಪತ್ನಿ ಶಂಕ್ರಮ್ಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ಸೌಂದರ್ಯ’ ಸ್ವಸಹಾಯ ಸಂಘದ ಸದಸ್ಯೆ. ಅವರ ಮೂಲಕ ಸಿದ್ದಪ್ಪನವರಿಗೆ ನುಗ್ಗೆ ಬೆಳೆಯುವ ಬಗ್ಗೆ ಮಾಹಿತಿ ದೊರಕಿತು.
ನಡುವೆ ಕನಕಾಂಬರ…
ನುಗ್ಗೆ ಗಿಡಕ್ಕೆ ರೋಗಗಳು ಬರುವುದು ಕಡಿಮೆ. ಹೈಬ್ರಿಡ್ ಗಿಡ ಸರಾಸರಿ ಆರು ವರ್ಷಗಳವರೆಗೆ ಬದುಕುತ್ತದೆ. ನಿರ್ವಹಣೆ ತುಂಬಾ ಸುಲಭ. ನೀರಾವರಿ ವ್ಯವಸ್ಥೆ ಚೆನ್ನಾಗಿದ್ದರೆ ಎರಡು ದಿನಕ್ಕೊಮ್ಮೆಯೂ ನೀರು ನೀಡಬಹುದು. ಆರಂಭದ ಒಂದು ವರ್ಷ ನುಗ್ಗೆ ಸಾಲಿನ ಮಧ್ಯೆ ಕನಕಾಂಬರವನ್ನು ಬೆಳೆಯಬಹುದಾಗಿದೆ. ಹೆಚ್ಚು ಮಳೆಯಾಗದ ಉತ್ತರ ಕರ್ನಾಟಕದ ಭೂಮಿ, ನುಗ್ಗೆ ಬೆಳೆಗೆ ಸೂಕ್ತ.
ಸಂಪರ್ಕ: 8748989931(ಸಿದ್ದಪ್ಪ)
– ಚಂದ್ರಹಾಸ ಚಾರ್ಮಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.