ಸಮೃದ್ದ ಹಾರಕ ಕೃಷಿ
Team Udayavani, Nov 13, 2017, 11:42 AM IST
ಹಾರಕ ತಿಂದೋರು ಹಾರಾರ್ತ ಹೋದ್ರು ಎನ್ನುವ ಮಾತಿದೆ. ತೆವಳುವ ವ್ಯಕ್ತಿಯನ್ನೂ ಹಾರಕ ಹಾರುವಂತೆ ಮಾಡಬಲ್ಲದು ಎನ್ನುತ್ತಾರೆ ಹಿರಿಯರು. ನಮ್ಮನೆಯಲ್ಲಿ ಹಾರಕದಕ್ಕಿಯ ಊಟ ವಾರಕ್ಕೆರಡು ಭಾರಿಯಾದರೂ ಇರಲೇಬೇಕು. ಹಾರಕದ ರುಚಿ ನಮ್ಮ ತಂದೆಯವರು ಹತ್ತಿಸಿದ್ದು. ಎಷ್ಟೇ ದೈಹಿಕ ಶ್ರಮ ಪಟ್ಟರೂ ದಿನಡೀ ಉತ್ಸಾಹದಿಂದ ಇರಲು ಹಾರಕವೇ ಮದ್ದು ಎನ್ನುತ್ತಾ ಸೊಂಪಾಗಿ ಬೆಳೆದು ನಿಂತಿದ್ದ ಹಾರಕದ ಬೆಳೆಯನ್ನು ತೋರಿಸಿ ಸಂತಸದ ನಗು ತುಂಬಿಕೊಂಡರು ವಿರೂಪಾಕ್ಷಯ್ಯ ಹಿರೇಮಠ.
ಕೊಪ್ಪಳ ತಾಲೂಕಿನ ಕುಕನಪಳ್ಳಿ ಗ್ರಾಮದ ವಿರೂಪಾಕ್ಷಯ್ಯ ಹಿರೇಮಠರದು ಹದಿನಾರು ಎಕರೆ ಜಮೀನು. ಹತ್ತು ಎಕರೆಯಲ್ಲಿ ಮೆಕ್ಕೆ ಜೋಳ, ಅರ್ಧ ಎಕರೆ ಶೇಂಗಾ, ಒಂದು ಎಕರೆ ಮೆಣಸು, ಅರ್ಧ ಎಕರೆ ಜಾನುವಾರುಗಳಿಗೆ ಮೇವಿನ ಹುಲ್ಲು, ಎರಡು ಎಕರೆ ತರಕಾರಿ ಕೃಷಿ, ಉಳಿದ ಒಂದೂವರೆ ಎಕರೆ ಹಾರಕ ಸಿರಿಧಾನ್ಯ ಕೃಷಿ ಮಾಡಿದ್ದಾರೆ. ದಿನ ನಿತ್ಯ ಆದಾಯ ಗಿಟ್ಟಿಸಿಕೊಳ್ಳಲು ಹೊಂದಿಸಿಕೊಳ್ಳುವ ಬೆಳೆ ಚಾಣಕ್ಯತೆಯನ್ನು ಇವರಿಂದ ಕಲಿಯುವುದು ಬೆಟ್ಟದಷ್ಟಿದೆ.
ಹಾರಕದ ಮಹಿಮೆ: ಸಿರಿಧಾನ್ಯ ಕೃಷಿಯಲ್ಲಿ ಇವರದು ಪಳಗಿದ ಕೈ. ತಂದೆ ನಿಂಗಯ್ಯ ಹಿರೇಮಠ ಪಾಲಿಸಿಕೊಂಡು ಬರುತ್ತಿದ್ದ “ಸಿರಿಧಾನ್ಯ ಕೃಷಿಗಾಗಿ ಭೂಮಿ ಮೀಸಲು’ ಪದ್ದತಿಯನ್ನು ಇವರೂ ಮುಂದುವರೆಸಿಕೊಂಡು ಬಂದಿದ್ದಾರೆ. ಈ ಬಾರಿ ಒಂದೂವರೆ ಎಕರೆಯಲ್ಲಿ ಹಾರಕ ಬೆಳೆದಿದ್ದಾರೆ. ಜೂನ್ ಎರಡನೆಯ ವಾರದಲ್ಲಿ ಬೀಜ ಬಿತ್ತಿದ್ದಾರೆ. ಭೂಮಿ ಸಿದ್ಧತೆಗೆ ವಿಶೇಷ ಕಾಳಜಿ ವಹಿಸಿದ್ದಾರೆ.
ಹದಗೊಳಿಸಿದ ಭೂಮಿಯಲ್ಲಿ ಮೂರು ತಾಳಿನ ಕೂರಿಗೆಯಿಂದ ಬಿತ್ತನೆ. ಸಾಲಿನ ನಡುವೆ ಒಂದು ಅಡಿ ಎರಡು ಇಂಚು ಅಂತರ ಕಾಯ್ದುಕೊಂಡಿದ್ದಾರೆ. ಬಿತ್ತುವಾಗ ಕುಂಟೆ ಅಡ್ಡಾಡಿದ ಭೂಮಿಯಲ್ಲಿ ಮಣ್ಣು ಏರು ತಗ್ಗುಗಳಾಗಿ ಬೀಳುವುದು ಸಹಜ. ಹೀಗೆ ಅವ್ಯವಸ್ಥೆಯಲ್ಲಿ ಮಣ್ಣು ಹರಡಿದ್ದಲ್ಲಿ ಬೀಜ ಮೊಳೆಯಲು ಕಷ್ಟವಾಗುತ್ತದೆ. ಬುಡದಲ್ಲಿ ವೃದ್ದಿಯಾಗುವ ತೆಂಡೆಗಳ ಸಂಖ್ಯೆ ಕುಂಠಿತಗೊಳ್ಳುತ್ತದೆ.
ಹಾಗಾಗಿ ಬಿತ್ತಿದ ಮೂರನೆಯ ದಿನಕ್ಕೆ ಮುಳ್ಳು ಕುಂಟೆಯಿಂದ ಮಣ್ಣು ಹರಗಿ ಮಟ್ಟಗೊಳಿಸುತ್ತಾರೆ.ಬಿತ್ತನೆ ಮಾಡಿದ ಇಪ್ಪತ್ತನೆಯ ದಿನಕ್ಕೆ ಎರಡು ಇಂಚಿನಷ್ಟು ಗಿಡ ಬೆಳೆದಿರುತ್ತದೆ. ಕಳೆ ನಿಯಂತ್ರಣಕ್ಕೆ ಸಾಲಿನ ಮಧ್ಯೆ ಸಣ್ಣ ಕುಂಟೆ ಒಡಿಸುತ್ತಾರೆ. ಮೂವತ್ತನೆಯ ದಿನಕ್ಕೆ ಐವತ್ತು ಕಿಲೋ ಗ್ರಾಂ ಡಿ.ಏ.ಪಿ, ಐವತ್ತು ಕೆಜಿ 10-26 ರಸಗೊಬ್ಬರ ಹಾಕುತ್ತಾರೆ. ಪುನಃ ತೊಂಭತ್ತನೆಯ ದಿನಕ್ಕೆ ಹೊಡೆ ಒಡೆಯುವ ಸಮಯಕ್ಕೆ ಒಂದು ಕ್ವಿಂಟಾಲ್ ಯೂರಿಯಾ ಉಗ್ಗುತ್ತಾರೆ.
ಕಟಾವಿನ ತನಕ ಹತ್ತು ಬಾರಿ ಕುಂಟೆ ಹೊಡೆಯುತ್ತಾರೆ. ಬೆಳೆಯ ಅಬ್ಬರಕ್ಕೆ ಕುಂಟೆಯ ಓಡಾಟವೂ ಕಾರಣ ಎನ್ನುವುದು ಇವರ ಅನುಭವದ ನುಡಿ. ಈ ಬೆಳೆಗೆ ರೋಗದ ಬಾಧೆಯ ಕಿರಿಕಿರಿ ಇಲ್ಲ. ಕೀಟಗಳು ಹತ್ತಿರವೂ ಸುಳಿಯುವುದಿಲ್ಲ ಎನ್ನುತ್ತಾರೆ ವಿರೂಪಾಕ್ಷಪ್ಪ.ಒಣಗಿ ನಿಂತ ಹಾರಕದ ತೆನೆಗಳು ಅಲ್ಲಲ್ಲಿ ಕಂಡು ಬರುತ್ತಿವೆ. ಇನ್ನೊಂದು ತಿಂಗಳಲ್ಲಿ ಕಟಾವು.
ಒಂದೂವರೆ ಎಕರೆಯಿಂದ ಹತ್ತು ಕ್ವಿಂಟಾಲ್ ಇಳುವರಿ ಸಿಗುವ ನಿರೀಕ್ಷೆ ಇದೆ. ಹಾರಕ ಕೃಷಿಗೆ ವಿನಿಯೋಗಿಸಿದ ಮೊತ್ತ ಐದು ಸಾವಿರ ರೂ. ಹತ್ತು ಕ್ವಿಂಟಾಲ್ ಇಳುವರಿ ಲಭ್ಯವಾಗುತ್ತದೆ. ಕ್ವಿಂಟಾಲ್ ಹಾರಕಕ್ಕೆ 5,000-7,000 ರೂ. ದರವಿದೆ. ಹತ್ತು ಕ್ವಿಂಟಾಲ್ ದೊರೆತರೆ ಕೈ ತುಂಬಾ ಲಾಭದ ಬೆಳೆಯಂತೆ.
ತರಕಾರಿ ಕಡೆ ಗಮನ..: ಹತ್ತು ಎಕರೆ ಜಮೀನಿದ್ದರೂ ಒಂದು ಎಕರೆಯಲ್ಲಿರುವ ತರಕಾರಿ ಬೆಳೆಯ ಬಗ್ಗೆ ವಿಶೇಷ ಒಲವು. ಬೆಂಡೆ, ಬದನೆ, ಟೊಮೆಟೋ, ಮೂಲಂಗಿ, ವಿವಿಧ ಬಗೆಯ ಸೊಪ್ಪುಗಳನ್ನು ಬೆಳೆಯುತ್ತಾರೆ. ದಿನ ನಿತ್ಯ ಫಸಲು ಕಟಾವಿಗೆ ಸಿಗುವ ರೀತಿ ಬೆಳೆ ಹಂಚಿಕೆಯ ಬುದ್ಧಿವಂತಿಕೆ ರೂಢಿಸಿಕೊಂಡಿದ್ದಾರೆ.
ಕಳೆದ ವರ್ಷ ಮಾರುಕಟ್ಟೆಯಲ್ಲಿ ಬದನೆ ಬೆಳೆಗೆ ಅಧಿಕ ಬೇಡಿಕೆಯಿದ್ದ ಹಿನ್ನೆಲೆಯಲ್ಲಿ ಮೂರು ಎಕರೆಗೆ ಕೃಷಿ ವಿಸ್ತರಿಸಿದ್ದರು. ಆರು ಲಕ್ಷ ಆದಾಯ ಕೈ ಸೇರಿತ್ತು. ‘ಬದನೆ ಗಳಿಸಿಕೊಟ್ಟ ಹಣದಲ್ಲಿ ಟ್ರಾಕ್ಟರ್ ಖರೀದಿಸಿದ್ದೇವೆ ನೋಡ್ರೀ’ ಎನ್ನುತ್ತಾ ಟ್ರಾಕ್ಟರ್‌ನತ್ತ ಬೊಟ್ಟು ಮಾಡಿದರು ವಿರೂಪಾಕ್ಷಯ್ಯರ ಸಹೋದರ ಬೆಟದಯ್ಯ ಹಿರೇಮಠ. ಜಮೀನಿನ ಬದುಗಳಲ್ಲಿ ಅಲ್ಲಲ್ಲಿ ನೆಟ್ಟ ಬೇವಿನ ಮರಗಳ ಸಂಖ್ಯೆ ಐದು ನೂರು ದಾಟುತ್ತದೆ.
ಐವತ್ತು ತೆಂಗು, ಒಂದು ನೂರು ತೇಗ, ಐವತ್ತು ಗೇರು, ಹತ್ತು ಮಾವಿನ ಮರಗಳಿವೆ. ಹೈನುಗಾರಿಕೆಯ ಆಸಕ್ತಿಯೂ ಆದಾಯ ವೃದ್ಧಿಸಿಕೊಡುತ್ತಿದೆ. ಜೋಳ ಕಟಾವಿನ ನಂತರ ಹಿಂಗಾರಿನಲ್ಲಿ ಶೇಂಗಾ ಹಾಗೂ ಕೊರಲೆ ಬಿತ್ತುವ ಆಲೋಚನೆಯಲ್ಲಿದ್ದಾರೆ. ಹನ್ನೆರಡು ತಿಂಗಳೂ ಹೊಲದಲ್ಲಿ ತರಕಾರಿ ಬೆಳೆ ಕಟಾವಿಗೆ ಲಭ್ಯವಿರುವಂತೆ ನೋಡಿಕೊಳ್ಳುತ್ತಾರೆ. ನಿತ್ಯ ನಿರಂತರ ಆದಾಯ ಕೈ ಸೇರುವ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ.
* ಕೋಡಕಣಿ ಜೈವಂತ ಪಟಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.