ಏರುತ್ತಿದೆ ಬಡ್ಡಿ ದರ !
Team Udayavani, Jun 11, 2018, 12:07 PM IST
ಹೆಚ್ಚಿದ ಬಡ್ಡಿ ದರದಿಂದಾಗಿ ಮರುಪಾವತಿಸಬೇಕಾದ ಸಾಲದ ಒಟ್ಟಾರೆ ಪ್ರಮಾಣ ತುಸು ಹೆಚ್ಚುತ್ತದೆ. ಈ ಪ್ರಮಾಣ ತಗ್ಗಿಸಬೇಕೆಂದರೆ ಕೈಯಲ್ಲಿರುವ ದೊಡ್ಡ ಮೊತ್ತವನ್ನು ಒಮ್ಮೆಲೇ ಪಾವತಿಸಬಹುದು. ಆಗ ಸಾಲದ ಪ್ರಮಾಣವೇ ತಗ್ಗುತ್ತದೆ. ಆಗ, ಸಾಧ್ಯವಾದಷ್ಟು ಬೇಗನೆ ಇಎಂಐಗಿಂತಲೂ ಹೆಚ್ಚಿನ ಹಣವನ್ನು ಪಾವತಿಸಿ ಅವಧಿ ಪೂರ್ವವಾಗಿ ಸಾಲವನ್ನು ತೀರಿಸಬಹುದು.
ಬ್ಯಾಂಕ್‌ಗಳು 15- 20 ಬೇಸಿಸ್ ಪಾಯಿಂಟ್‌ನಷ್ಟು ಎಂಸಿಎಲ್‌ಆರ್ ಹೆಚ್ಚಿಸಿವೆ. ಅದರ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ 25 ಬೇಸಿಸ್ ಪಾಯಿಂಟ್‌ನಷ್ಟು ರೆಪೋ ದರ ಹೆಚ್ಚಿಸಿದೆ. ಈ ಬೆಳವಣಿಗೆಯಿಂದ ಸಹಜವಾಗಿಯೇ ಬ್ಯಾಂಕ್‌ಗಳಲ್ಲಿ ಮಾಡಿದ ಗೃಹ ಸಾಲ ಹಾಗೂ ವಾಹನ ಸಾಲಗಳ ಬಡ್ಡಿ ದರ ಏರಿಕೆಯಾಗಲಿದೆ. ಪ್ರಮುಖ ಗೃಹ ಸಾಲದಾತ ಬ್ಯಾಂಕ್‌ಗಳಾದ ಎಸ್‌ಬಿಐ, ಐಸಿಐಸಿಐ, ಐಡಿಬಿಐ ಹಾಗೂ ಪಿಎನ್‌ಬಿ ಎಂಸಿಎಲ್‌ಆರ್‌ನ ಏರಿಕೆಯನ್ನು ಈಗಾಗಲೇ ಪ್ರಕಟಿಸಿವೆ. ರೆಪೋ ದರ ಹೆಚ್ಚಳದ ಪರಿಣಾಮ ಇನ್ನಷ್ಟೇ ತಿಳಿಯಬೇಕಿದೆ. ಎಲ್ಲರಿಗೂ ಸೂರು ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದ್ದು, ಬಡ, ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಕೈಗೆಟಕುವ ವಿಭಾಗದ ಮನೆಗಳ ಸಾಲದ ನೀಡಿಕೆ ಮಿತಿಯನ್ನು ಮಹಾನಗರದಲ್ಲಿ 35 ಲಕ್ಷ ರೂ.ಗಳಿಗೆ ಹಾಗೂ ಇತರೆಡೆಗಳಲ್ಲಿ 25 ಲಕ್ಷ ರೂ.ಗಳಿಗೆ ರಿಸರ್ವ್ ಬ್ಯಾಂಕ್ ಏರಿಸಿದೆ. ಅಲ್ಲದೆ, ಈ ವರ್ಷ ರೆಪೋ ದರ ಇನ್ನಷ್ಟು ಏರುವುದಿಲ್ಲ ಎಂಬ ಸುಳಿವನ್ನೂ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ನೀಡಿದ್ದಾರೆ. ಇದು ತುಸು ನೆಮ್ಮದಿಯ ವಿಚಾರ.
ಗೃಹ, ವಾಹನ ಸಾಲಗಳಲ್ಲಿ ಎರಡು ವಿಧಗಳಿರುತ್ತವೆ, ಮೊದಲನೆಯದು ಫ್ಲೋಟಿಂಗ್ ಬಡ್ಡಿ ದರ, ಎರಡನೆಯದು ನಿಶ್ಚಿತ ಬಡ್ಡಿದರ. ಫ್ಲೋಟಿಂಗ್ ಬಡ್ಡಿದರವನ್ನು ಆಯ್ಕೆ ಮಾಡಿಕೊಂಡವರಿಗೆ ಈ ಬಡ್ಡಿ ಏರಿಳಿತದ ಪರಿಣಾಮ ಬೀರುತ್ತದೆ. ಬಡ್ಡಿ ಕಡಿಮೆಯಾದರೆ ಅನುಕೂಲವಾಗುತ್ತದೆ, ಏರಿದರೆ ಹೊರೆಯಾಗುತ್ತದೆ. ನಿಶ್ಚಿತ ಬಡ್ಡಿದರ ಆಯ್ಕೆ ಮಾಡಿಕೊಂಡವರಿಗೆ ಇದು ಅನ್ವಯವಾಗುವುದಿಲ್ಲ. ಆದರೆ ಈ ಬಡ್ಡಿದರವನ್ನು ಸಾಮಾನ್ಯವಾಗಿ ಪ್ಲೋಟಿಂಗ್‌ಗಿಂತ ತುಸು ಹೆಚ್ಚೇ ನಿಗದಿಪಡಿಸಲಾಗಿರುತ್ತದೆ. ಕುಟುಂಬಕ್ಕೊಂದು ಸೂರು ಬೇಕು, ಓಡಾಡಲು ಬೈಕ್ ಅಥವಾ ಕಾರು ಬೇಕೆಂದು ಕಷ್ಟಪಟ್ಟು ಹಣ ಹೊಂದಿಸಿಕೊಂಡು ಸಾಲ ಮಾಡಿರುತ್ತಾರೆ ಬಡ ಹಾಗೂ ಮಧ್ಯಮ ವರ್ಗದ ಮಂದಿ. ಸಾಲದ ಬಡ್ಡಿದರ ಏರಿಕೆಯ ಸುದ್ದಿ ಓದಿದಾಗ ಮುಂದೇನು ಮಾಡುವುದು, ಇಎಂಐ ಕಿಸೆಗೆ ಭಾರವಾಗಿಬಿಡುತ್ತದೆಯೇ ಎಂದು ಚಿಂತೆಗೊಳಗಾಗುತ್ತಾರೆ. ಸಾಲದ ಇಎಂಐ ತುಸು ತುಟ್ಟಿಯಾಗುವುದು ಹೌದು, ಆದರೆ ಗಾಬರಿ ಬೀಳದೆ, ತುಸು ಯೋಚಿಸಿ ಹೆಜ್ಜೆಯಿಟ್ಟರೆ, ಹೊರೆಯನ್ನು ತಗ್ಗಿಸಿಕೊಳ್ಳಬಹುದು. ಹೆಚ್ಚಿದ ಬಡ್ಡಿದರದ ಹೊರೆಯನ್ನು ಕಡಿಮೆಗೊಳಿಸುವ ವಿಧಾನ ಹೇಗೆಂದು ನೋಡೋಣ.
ಹೆಚ್ಚಿದ ಬಡ್ಡಿ ದರದಿಂದಾಗಿ ಮರುಪಾವತಿಸಬೇಕಾದ ಸಾಲದ ಒಟ್ಟಾರೆ ಪ್ರಮಾಣ ತುಸು ಹೆಚ್ಚುತ್ತದೆ. ಈ ಪ್ರಮಾಣ ತಗ್ಗಿಸಬೇಕೆಂದರೆ ಕೈಯಲ್ಲಿರುವ ದೊಡ್ಡ ಮೊತ್ತವನ್ನು ಒಮ್ಮೆಲೇ ಪಾವತಿಸಬಹುದು. ಆಗ ಸಾಲದ ಪ್ರಮಾಣವೇ ತಗ್ಗುತ್ತದೆ. ಆಗ, ಸಾಧ್ಯವಾದಷ್ಟು ಬೇಗನೆ ಇಎಂಐಗಿಂತಲೂ ಹೆಚ್ಚಿನ ಹಣವನ್ನು ಪಾವತಿಸಿ ಅವಧಿ ಪೂರ್ವವಾಗಿ ಸಾಲವನ್ನು ತೀರಿಸಬಹುದು. ಇದರಿಂದ ತುಂಬಾ ಹಣ ಉಳಿತಾಯವಾಗುತ್ತದೆ. ಅವಧಿ ಪೂರ್ವವಾಗಿ ಸಾಲ ಮರುಪಾವತಿ ಮಾಡಿದರೆ ಈಗ ಬ್ಯಾಂಕ್‌ಗಳು ದಂಡ ವಿಧಿಸುವುದಿಲ್ಲ. ಬೋನಸ್, ಷೇರುಪೇಟೆಯಿದ ತಗೆದ ಹಣ.. ಹೀಗೆ ದೊಡ್ಡ ಮೊತ್ತ ಕೈಯಲ್ಲಿದ್ದರೆ ಬೇರೆ ಕಡೆ ಹೂಡುವ ಬದಲು ಗೃಹ, ವಾಹನದ ಸಾಲ ಮರುಪಾವತಿಗೆ ಹಾಕಬಹುದು ಅಥವಾ ಪ್ರತಿ ತಿಂಗಳು ಪಾವತಿಸುವ ಇಎಂಐ ಪ್ರಮಾಣವನ್ನು ಹೆಚ್ಚಿಸಬಹುದು. ಎರಡೂ¾ರು ವರ್ಷಗಳ ಹಿಂದೆ ಸಾಲ ಮಾಡಿರುತ್ತೀರಿ. ಈಗ ನಿಮ್ಮ ವೇತನ ಹೆಚ್ಚಾಗಿರುತ್ತದೆ. ಹಾಗಾಗಿ ಹೆಚ್ಚು ಇಎಂಐ ಪಾವತಿಸುವ ಸಾಮರ್ಥ್ಯವಿದೆ ಎಂದಾದರೆ ಹೆಚ್ಚು ಪಾವತಿ ಮಾಡಿ. ಅವಧಿಗಿಂತ ಮೊದಲೇ ಸಾಲ ಕಟ್ಟಿ ಮುಗಿಸಿ.
ಕೈಯಲ್ಲಿ ಹೆಚ್ಚು ಹಣವಿಲ್ಲ, ಬರುವ ಆದಾಯದಿಂದ ಸಾಲದ ಕಂತು ಕಟ್ಟುತ್ತಾ ಬಹಳ ಕಷ್ಟದಿಂದಲೇ ಸಂಸಾರ ಸರಿದೂಗಿಸುತ್ತಿದ್ದೇನೆ ಎನ್ನುವವರು ಪ್ರತಿ ತಿಂಗಳು ಪಾವತಿಸುವ ಸಾಲದ ಇಎಂಐ ಹೆಚ್ಚಬಾರದು ಎಂದುಕೊಳ್ಳುತ್ತಾರೆ. ಅಂಥವರು ಬ್ಯಾಂಕ್‌ನಲ್ಲಿ ಸಾಲದ ಅವಧಿಯನ್ನೇ ಹೆಚ್ಚಿಸಿಕೊಂಡು ಅಷ್ಟೇ ಪ್ರಮಾಣದ ಇಎಂಐ ಉಳಿಸಿಕೊಳ್ಳಬಹುದು. ನೆನಪಿಡಿ, ಹೀಗೆ ಮಾಡಿದರೆ ಅನುಕೂಲ, ಪ್ರತಿ ತಿಂಗಳ ಹೊರೆ ಹೆಚ್ಚುವುದಿಲ್ಲ ಎಂಬುದಷ್ಟೇ. ಅವಧಿ ದೀರ್ಘವಾದಂತೆ ನೀವು ಮರುಪಾವತಿ ಮಾಡಬೇಕಾದ ಒಟ್ಟಾರೆ ಹಣ ಹೆಚ್ಚಾಗುತ್ತದೆ.
ಬಡ್ಡಿದರ ಇನ್ನಷ್ಟು ಹೆಚ್ಚುವ ಸಾಧ್ಯತೆ ಎಂದಾದರೆ, ಫ್ಲೋಟಿಂಗ್‌ನಿಂದ ನಿಶ್ಚಿತ ಬಡ್ಡಿದರಕ್ಕೆ ವರ್ಗಾವಣೆಗೊಳ್ಳಬಹುದು. ಆದರೆ ಮೊದಲೇ ಹೇಳಿದಂತೆ, ನಿಶ್ಚಿತ ಬಡ್ಡಿದರ ಹೆಚ್ಚಿರುತ್ತದೆ. 5 ವರ್ಷಗಳ ಸಣ್ಣ ಅವಧಿಯ ಸಾಲಕ್ಕೆ ನಿಶ್ಚಿತ ಬಡ್ಡಿದರ ಸೂಕ್ತ. 15, 20 ವರ್ಷಗಳಷ್ಟು ದೀರ್ಘಾವಧಿಯ ಸಾಲಕ್ಕೆ ಪ್ಲೋಟಿಂಗ್ ಬಡ್ಡಿದರ ಸೂಕ್ತ. ದೀರ್ಘ ಅವಧಿಯಲ್ಲಿ ಬಡ್ಡಿಯ ಏರಿಳಿತವು ಸಮತೋಲನಗೊಳ್ಳುತ್ತದೆ ಎಂದು ಬ್ಯಾಂಕಿಂಗ್ ತಜ್ಞರು ಹೇಳುತ್ತಾರೆ.
– ರಾಧ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.