ನದಿ ಚಿಂತನೆ-2: ನದಿಯನ್ನು ನೋಡುವುದು ಹೇಗೆ?


Team Udayavani, Sep 18, 2017, 1:34 PM IST

18-ISIRI-2.jpg

ಸೇತುವೆಯ ಮೇಲೆ ನಿಂತು ನೋಡಬೇಕೆ? ದೋಣಿಯಲ್ಲಿ ತೇಲುತ್ತ ಅರಿಯಬೇಕೆ? ನೀರಿನಾಳಕ್ಕೆ ಧುಮುಕಿ ಅರ್ಥ ಮಾಡಿಕೊಳ್ಳಬೇಕೆ? ಚರಿತ್ರೆಯ ಪುಟ  ಹಿಡಿದು ಓದು ಆರಂಭಿಸಬೇಕೆ? ಡ್ರೋನ್‌ ಕೆಮರಾದ ಮೂಲಕ ನೋಡಬೇಕೆ? ಪ್ರಶ್ನೆಗಳು ಹಲವಿದೆ. ಹನಿ ಹನಿ ಕೂಡಿ ಝರಿ, ತೊರೆ, ಹಳ್ಳ, ನದಿಯಾಗುತ್ತದೆ. ನಗರವನ್ನು ನೋಡಿದಂತೆ ವಿಶಾಲ ನದಿಯನ್ನು ನೋಡಲಾಗುವುದಿಲ್ಲ, ಬಿಡಿ ಬಿಡಿಯ ನೋಟದ ಮೂಲಕ ಇಡಿಯಾದ ಅರಿವು ಪಡೆಯಬೇಕು. 

ಉತ್ತರ ಕನ್ನಡದ ಕಾಳಿ ನದಿಗೆ ಅಣೆಕಟ್ಟುಗಳ ಸರಮಾಲೆ ಇದೆ. ಸುಪಾ, ಕಾನೇರಿ,  ಬೊಮ್ಮನಹಳ್ಳಿ, ತಟ್ಟಿಹಳ್ಳ, ಕೊಡಸಳ್ಳಿ, ಕದ್ರಾಗಳಲ್ಲಿ ಜಲಾಶಯವಿದೆ.  ಸುಮಾರು 184 ಕಿಲೋ ಮೀಟರ್‌ ಹರಿಯುತ್ತಿದ್ದ ನದಿ ಇಂದು 40 ಕಿಲೋ ಮೀಟರ್‌ ಕೂಡಾ ಹರಿಯುತ್ತಿಲ್ಲ, ನಮ್ಮ ವಿದ್ಯುತ್‌ ಲಾಭಕ್ಕೆ ನಿಂತು ನಿಂತು ಸಾಗುತ್ತಿದ್ದಾಳೆ. 40 ವರ್ಷಗಳೀಚೆಗೆ ಕಾಳಿ ವಿದ್ಯುತ್‌ ಶಕ್ತಿ ಮಾತೆಯಾಗಿ ಬದಲಾಗಿದ್ದಾಳೆ. ಹರಿಯುವ ನದಿ ನಿಂತಿದ್ದಕ್ಕೆ ಕಣಿವೆಯ  ಕಾಡು ಮುಳುಗಿದೆ. ಕೃಷಿ ಭೂಮಿಗಳು ಜಲಸಮಾಧಿಯಾಗಿವೆ. ನದಿಯ ಜೊತೆ ಒಡನಾಡಿ ನೀರಿನ ನಿಜ ಬದುಕು ಅರ್ಥಮಾಡಿಕೊಂಡವರು ನಿರಾಶ್ರಿತರಾಗಿ ಹೊಸ ನೆಲೆಗೆ ಹೋಗಿದ್ದಾರೆ. ನದಿ ದಂಡೆಯ ಹೆಬ್ಬಿದಿರು ನಂಬಿದ್ದ ಗಜಪಡೆ ಆಹಾರಕ್ಕೆ ಭತ್ತ, ಬಾಳೆ ತೋಟ ಹುಡುಕುತ್ತಿವೆ. ನದಿ ಕೊನೆಯ ಕಾರವಾರದ ಸದಾಶಿವಘಡದ ಸಮುದ್ರತಟದ ಮೀನುಗಾರರಿಗೂ, ನದಿಮೂಲ ಕುಶಾವಳಿಯ ಕುಣಬಿ ವನವಾಸಿಗರಿಗೂ ನದಿ ನೋಟದ ಅನುಭವದಲ್ಲಿ ವ್ಯತ್ಯಾಸವಿದೆ.  ದಂಡೆ ನಿವಾಸಿಗಳ ಕೊಂಕಣಿ, ಕನ್ನಡ, ಮರಾಠಿ, ಹವ್ಯಕ, ಸಿದ್ದಿ, ಗೌಳಿ, ಅಟ್ಟೆಕುಣಬಿಯರ ಭಾಷಾ ಸೊಬಗು ಕಾಡು ಸಂಕುಲಗಳಿಗೆ ಬೆರಗಿನ ಹೆಸರಿಟ್ಟಿದೆ. ಕಾಟಾಕ್ವಯ್‌(ಕಾಜಾಣ), ಕಟ್ರಿಕೆಮಿಯಾವ್‌(ಕಪ್ಪಿರುವೆ)ಗಳ ಪಟ್ಟಿ ಮಾಡುತ್ತ ಕಾಳಿಸಂಡೋ(ಮೂಲ)ದಿಂದ ಕಾರವಾರದತ್ತ ಮೂಲನಿವಾಸಿಗಳನ್ನು ಮಾತಾಡಿಸಿದರೆ ಕಾಳಿ ಕಾವ್ಯ ಕೇಳಬಹುದು. ಕಾಡು ನದಿ ಕಣಿವೆಯ ಜನಕ್ಕೆ ಬದುಕುವ ಕೌಶಲ್ಯ ಕಲಿಸಿದೆ, ಶಕ್ತಿ ತುಂಬಿದೆ. ಆಹಾರ, ಕೃಷಿ ಬದುಕುಗಳಲ್ಲಿ ಹೆಜ್ಜೆ ಹೆಜ್ಜೆಗೆ ವಿಶೇಷತೆ ಬೆಳೆಸಿದೆ.

ಅಂಕಿಸಂಖ್ಯೆಯಂತೆ  ನದಿ ಕಣಿವೆಯ 5175 ಕಿಲೋ ಮೀಟರ್‌ ವ್ಯಾಪ್ತಿಯ ಜಲಾನಯನ ಕ್ಷೇತ್ರದಿಂದ ವರ್ಷಕ್ಕೆ ಎಷ್ಟು ಕ್ಯುಸೆಕ್ಸ್‌ ನೀರು ಹರಿಯುತ್ತದೆಂಬ ಲೆಕ್ಕ  ದೊರೆಯುತ್ತದೆ. ಅಣೆಕಟ್ಟೆ ನಿರ್ಮಾಣದಿಂದ  ಈ ಅಳತೆ ಸಾಧ್ಯವಾಗಿದೆ. ಕಣಿವೆಯಲ್ಲಿ ಹರಿಯುವ ಅಗಣಿತ ನೀರಿಗೆ ಬೆಲೆ ಗುರುತಿಸುತ್ತಿದ್ದಂತೆ ಮೂಲ ನಿಸರ್ಗದ ಮೌಲ್ಯ ಮರೆತು ಹೋಗುತ್ತದೆ. ಇದನ್ನು ತುಂಗಭದ್ರಾ, ಕೆಆರ್‌ಎಸ್‌ಗಳಲ್ಲಿ ಗಮನಿಸಬಹುದು. ಇಷ್ಟು ನೀರಿನಿಂದ ಎಷ್ಟು ವಿದ್ಯುತ್‌ ಉತ್ಪಾದಿಸಬಹುದು? ಎಷ್ಟು ಕ್ಷೇತ್ರಕ್ಕೆ ನೀರುಣಿಸಿ ಕೃಷಿ ವಿಸ್ತರಿಸಬಹುದೆಂದು ಲೆಕ್ಕ ಹಾಕುವಲ್ಲಿ ಪಳಗಿದ್ದೇವೆ. ಇಷ್ಟು ವರ್ಷ ನದಿ ನೋಡುವುದಕ್ಕೂ, ಜಲಾಶಯ ನಿರ್ಮಾಣದ ಬಳಿಕ ನಾವೇ ಮಾತಾಡುವುದಕ್ಕೂ ವ್ಯತ್ಯಾಸವಿದೆ. ಒಂದರ್ಥದಲ್ಲಿ ನಗರ ನೋಡಿದಂತೆ ಅಗಲಕ್ಕೆ ಹರಿವ ನದಿ ನೋಡುವ ಅಭ್ಯಾಸ ಅಂಟಿದೆ. ಜಲ ಬಳಕೆಯ ಲಾಭದ ವಿಚಾರದಲ್ಲಿ ಓಡುತ್ತ ಹೊರಟ ನಾವು ಝರಿ, ತೊರೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಹಿಂದಿದ್ದೇವೆ. ಕಲ್ಯಾಣದಲ್ಲಿ ಕ್ರಾಂತಿಯಾದಾಗ ಧರ್ಮಗ್ರಂಥ ಹೊತ್ತು ಬಂದ ಚೆನ್ನಬಸವಣ್ಣ ಕಾಳಿ ಕಣಿವೆಯ ರಕ್ಷಿಘಟ್ಟದಲ್ಲಿ  ರಕ್ಷಣೆ ಪಡೆದವರು. ಇಲ್ಲಿನ ಉಳವಿ ಇಂದು ಪುಣ್ಯಕ್ಷೇತ್ರವಾಗಿದೆ. ನದಿ ಮೂಲದಲ್ಲಿ ನಿಂತ ಛಾಪಲಾದೇ ಕುಶಾವಳಿಯ ಕುಣಬಿ ವನವಾಸಿಗರ ಬದುಕಿನ ಬೆಂಗಾವಲಾಗಿದ್ದಾಳೆ. ಅಗಡೇ ತೇಮ್‌, ಎಂಡಾತೇಮ್‌ ಬೆಟ್ಟಗಳು ನದಿ ಜನನದ ಮೂಲಗಳು. ನೀರಿನ ಸಂರಕ್ಷಣೆಗೆ ಕಾಡು ನಿಂತಿದೆ, ಮಾನವರಿಗೆ ಅಭಯ ನೀಡಲು ದೈವತಾಣಗಳು ಉದಯಿಸಿವೆ. 

ಹುಲಿರಾಯನ  ಅರಮನೆ, ಬೇಟೆಯ ತಾಣವಾಗಿ ದೇಶಿಗರನ್ನು ಸೆಳೆದವಳು ಕಾಳಿ. ಕ್ರಿ.ಶ 1850-1882ರ ಸಮಯದಲ್ಲಿ  ವರ್ಷಕ್ಕೆ ತಲಾ 30 ಹುಲಿಗಳಂತೆ 640 ಹುಲಿಗಳನ್ನು ಬೇಟೆಯಾಡಿದ ಪ್ರದೇಶವಿದು. ಕ್ರಿ.ಶ 1882ರ ಏಪ್ರಿಲ್‌ನಲ್ಲಿ ಇಲ್ಲಿನ ಪೊಟೋಲಿ ಸನಿಹದಲ್ಲಿ ಒಂದು ಹೆಣ್ಣು ಹುಲಿ ಹಾಗೂ ಏಳು ತಿಂಗಳ ಪ್ರಾಯದ ಐದು ಮರಿಗಳನ್ನು ಬೇಟೆಗಾರನೊಬ್ಬ ಒಂದೇ ದಿನ ಬೇಟೆಯಾಡಿದ ದಾಖಲೆ ಇದೆ! ಇನ್ನೂ ಮಹತ್ವದ ಸಂಗತಿಯೆಂದರೆ ಇಂಗ್ಲೆಂಡಿನ ಸಾಮರ್‌ಸೆಟ್‌ ರಾಜ್ಯದ ರಾಜಕುಮಾರ ಎಡ್ವರ್ಡ್‌ಪರ್ಸ್‌ ಮ್ಯೂರ್‌ ಕ್ರಿ.ಶ 1865 ಡಿಸೆಂಬರ್‌ 20ರಂದು ಕಾಳಿ ಕಣಿವೆಯ ಯಲ್ಲಾಪುರದ ಲಾಲಗುಳಿ ಸನಿಹದಲ್ಲಿ ಕರಡಿ ದಾಳಿಗೆ ಸಾವನ್ನಪ್ಪಿದ್ದಾರೆ. ನಮ್ಮ ನದಿಯಂಚಿನಲ್ಲಿ 150 ವರ್ಷಗಳ ಹಿಂದೆ ಎಂಥ ಸುದ್ದಿ ಸುದ್ದಿಯಾಗದೇ ಸತ್ತಿದೆ! ವಿದೇಶಿ ಪ್ರವಾಸಿಗರ ಪತ್ರ, ಬ್ರಿಟೀಷ್‌ ದಾಖಲೆಗಳಲ್ಲಿ ನದಿ ನೋಟದ ರೋಚಕ ಕತೆಗಳಿವೆ. ಕಾಟಿಗಳ ಬೀಡಾಗಿ, ಮಂಗಟ್ಟೆ(ಹಾರ್ನ್ಬಿಲ್‌) ಸೊಬಗಿನ ಜೀವವೈವಿಧ್ಯ ಸಂರಕ್ಷಣೆಯ ತಾಣವಾದ ನೆಲೆಯನ್ನು ಸೋದೆಯ ಅರಸು ಆಳಿದವರು. ಕಾಡಿನ ಮಂಗಗಳನ್ನು ದೈಭಾವನೆಯಿಂದ ಇಲ್ಲಿ ಬೇಟೆಯಾಡುತ್ತಿಲ್ಲವೆಂದು ಆಗ ಬಂದ ಇಟಲಿ ಪ್ರವಾಸಿ (ಕ್ರಿ,ಶ 1695ರ ಮಾರ್ಚ್‌ 8 ) ಬರೆದಿದ್ದಾರೆ. ಮಂಗನನ್ನು ಕೊಂದಿದ್ದಕ್ಕೆ ಶಿಕ್ಷೆ ಅನುಭವಿಸಿದ ಆಂಗ್ಲರಿದ್ದಾರೆ. ಮರಗಳು ದೇವರ ಆಸ್ತಿ, ಮರ ಕಡಿಯುವುದಾದರೆ ಊರ ಗೌಡನ ಅಪ್ಪಣೆ ಪಡೆಯಬೇಕೆಂದು ಕ್ರಿ.ಶ 1801ರ ಮಾರ್ಚ್‌ 5ರಂದು ಪ್ರವಾಸಿ ಬುಕಾನನ್‌  ಕದ್ರಾದಲ್ಲಿ ಉಲ್ಲೇಖೀಸಿದ್ದಾರೆ. ಒಂದೇ ಹಳ್ಳಿಯಲ್ಲಿ ಗುಡ್ಡಬೆಟ್ಟ, ಮರ, ಕಲ್ಲು, ಹೊಲಗಳಲ್ಲಿ 32 ದೇವಗುತ್ತುಗಳನ್ನು ಪೂಜಿಸುವ ದೇವಕಾರು ಹಳ್ಳಿ ಇದೆ, ಕಣಿವೆ ಬದುಕಿನ ಸಂಕಷ್ಟಗಳಿಗೆ ಎರಡು ಶತಮಾನದ ಸಾಕ್ಷಿಗಳಿವೆ. 

ಕಾಡಿನ ಸಂಪತ್ತನ್ನು ವ್ಯಾವಹಾರಿಕವಾಗಿ ನೋಡುವ ಬ್ರಿಟೀಷರ ಕಾರಣಕ್ಕೆ ಕಣಿವೆ ಬದಲಾಗಿದೆ. ರಾಮಾಯಣದ ದಂಡಕಾರಣ್ಯವಾಗಿತ್ತೆಂಬ ದಾಂಡೇಲಿಯ ದಟ್ಟ ಕಾನನ ಬ್ರಿಟೀಷರ ತೇಗದ ಪ್ರೀತಿಗೆ ಬಲಿಯಾಗಿದೆ. ಆಗ ಪಶ್ಚಿಮಘಟ್ಟದ ಅದರಲ್ಲಿಯೂ ಕಾಳಿ ಕಣಿವೆಯ ತೇಗ ವಿಶೇಷ ಬೇಡಿಕೆ ಪಡೆದಿತ್ತು. ನೈಸರ್ಗಿಕವಾಗಿ ಬೆಳೆದಿದ್ದ  ತೇಗದ ಮರ ಕಟಾವು ಮಾಡಿ ಮಳೆಗಾಲದ ಪ್ರವಾಹದ ಕಾಲದಲ್ಲಿ ನದಿಗೆ ಎಸೆಯುತ್ತಿದ್ದರು. 60-70 ಕಿಲೋ ಮೀಟರ್‌ ದೂರದಿಂದ ಪ್ರವಾಹದಲ್ಲಿ ತೇಲಿ ಬಂದ ನಾಟಾಗಳನ್ನು ಸಾಗರ ಸಂಗಮದ ಚಿತ್ತಾಕುಲ(ಸದಾಶಿವಘಡ)ದ ನದಿ ಪಾತ್ರದಲ್ಲಿ ಹಿಡಿದು ಸಂಗ್ರಹಿಸುತ್ತಿದ್ದರು. ಇಲ್ಲಿಂದ ಹಡಗಿನ ಮೂಲಕ ಮುಂಬೈ ಮಾರ್ಗದಲ್ಲಿ ಮರಗಳ ದೇಶ ಯಾತ್ರೆ ನಡೆಯುತ್ತಿತ್ತು. ಘಟ್ಟದಲ್ಲಿ ರಸ್ತೆಗಳು, ಲಾರಿಗಳಿಲ್ಲದ ಕಾಲದಲ್ಲಿ ನದಿ ಪ್ರವಾಹದ ನೀರಿನಲ್ಲಿ ಮರ ಸಾಗಿಸುತ್ತಿದ್ದರು. ಅರಣ್ಯದ ನೈಸರ್ಗಿಕ ತೇಗದ ಮರಗಳು ಕಡಿದು ನಾಶವಾದ ಬಳಿಕ ಕ್ರಿ.ಶ 1840ರ ನಂತರದಲ್ಲಿ ತೇಗದ ಕೃತಕ ನೆಡುತೋಪು ಬೆಳೆಸುವ ಕೆಲಸ ಕಣಿವೆಯಲ್ಲಿ ಶುರುವಾಯಿತು. ನದಿ ದಂಡೆಯಂಚಿನ ನೈಸರ್ಗಿಕ ಕಾಡು ಕಡಿದು ತೇಗ ಬೆಳೆಸಿದರು. ಮರಗಳು ಬೆಳೆದಾಗ ಕಡಿದು ಸಾಗಿಸಲು ನದಿಗಳು ಅನುಕೂಲವೆಂದು ಬ್ರಿಟೀಷ್‌ ಅಧಿಕಾರಿಗಳು ಲೆಕ್ಕ ಹಾಕಿದ್ದರು. 

ಸ್ವಾತಂತ್ರ್ಯಪೂರ್ವದಲ್ಲಿ ಕ್ರಿ.ಶ 1895-1937ರ ಕಾಲದಲ್ಲಿ  ಕೆನರಾದಲ್ಲಿ ಬರೆದ 42 ಅರಣ್ಯ ಕಾರ್ಯ ಯೋಜನೆಯ ವರದಿ ಓದಿದರೆ ಬ್ರಿಟೀಷರ ಕಾಳಿ ಕಣಿವೆಯ ತೇಗದ ಪ್ರೀತಿ ಕಾಣಿಸುತ್ತದೆ. ಮರದ ದೋಣಿಗಳು ನದಿಯಲ್ಲಿ ತೇಲಿ ಸಾರಿಗೆ ಸಂಪರ್ಕಕ್ಕೆ ಅನುಕೂಲವಾಗಿದ್ದು ಒಂದು ಮುಖವಾದರೆ ಇಲ್ಲಿ ಮರವೇ ನದಿಗುಂಟ ತೇಲಿದೆ. ಕ್ರಿ.ಶ 1905ರಲ್ಲಿ ಕ್ಲಿಕ್ಕಿಸಿದ ಒಂದು ಅಪರೂಪದ ಕಾಳಿ ನದಿಯ ಚಿತ್ರ ಕಾರವಾರದಲ್ಲಿದೆ. ಅದರಲ್ಲಿ ನದಿಯಲ್ಲಿ ತೇಲುವ ಮರ ಸಂಪತ್ತು ನೋಡಬಹುದು! ಇನ್ನೊಂದು ವಿಶೇಷವೆಂದರೆ ಕರಾವಳಿಯ ಎಲ್ಲ ನದಿಗಳಂಚಿನಲ್ಲಿ ಮರಕೊಯ್ಯುವ (ಸಾಮಿಲ್‌ಗ‌ಳು ) ಉದ್ದಿಮೆಗಳಿವೆ. ನೀರಲ್ಲಿ ಮುಳುಗಿಸಿ ಕಾಡು ಮರವನ್ನು ಕೀಟಬಾಧೆಯಿಂದ ಸಂರಕ್ಷಿಸುವುದು ಮರ ರಕ್ಷಣೆಯ ವೈಜಾnನಿಕ ವಿಧಾನವಾಗಿದೆ.  ಇದಕ್ಕೆ ಪೂರಕವಾಗಿ ನೀರಲ್ಲಿ ತೇಲಿ ಬಂದ ನಾಟಾಗಳು ನದಿಯಂಚಿನಲ್ಲಿ ಸಾಮಿಲ್‌ ಜನನಕ್ಕೆ ಕಾರಣವಾಗಿದೆ. 

ಅಮವಾಸ್ಯೆ, ಹುಣ್ಣಿಮೆಗಳು ಕಾಳಿ ಸಂಗಮದಲ್ಲಿ ಜಲಚರಗಳ ಸುಗ್ಗಿ ಕಾಲ. ಸಮುದ್ರ ಇಳಿತದ ಹೊತ್ತಿನಲ್ಲಿ ಸೇತುವೆಯಲ್ಲಿ ನಿಂತು ಕಾಳಿ ನದಿ ನೋಡಿದರೆ ನೂರಾರು ಮಹಿಳೆಯರು, ಮಕ್ಕಳೆಲ್ಲ ನದಿಗಿಳಿದು ಚಿಪ್ಪಿಕಲ್ಲು( ಬಳಚು, ಮೃದ್ವಂಗಿ) ಸಂಗ್ರಹಕ್ಕೆ ಪೈಪೋಟಿಗೆ ಇಳಿಯುತ್ತಾರೆ. ಕಾಲವಾ, ಕೊಂಡಿ, ತಿಸರೆ, ಕುರುಟೆ, ಕುಬಿ ಸಂಗ್ರಹಿಸುತ್ತಾರೆ. ಚಿಪ್ಪು ಹಿಡಿದು ಮಾರುವುದು ಬಡವರ ಅನ್ನದ ದಾರಿಯಾಗಿದೆ. ಸಮುದ್ರ ಸಂಗಮದಲ್ಲಿ ಸಿಹಿನೀರು, ಉಪ್ಪು ನೀರು ಸೇರುವ ತಾಣಗಳಲ್ಲಿ ವಿಶೇಷವಾಗಿ ಮೃದ್ವಂಗಿಗಳು ಬೆಳೆಯುತ್ತವೆ. ಇವು ಸಾಗರದ ಇಳಿತದ ಸಮಯಕ್ಕೆ ನದಿ ಮಕ್ಕಳಿಗೆ ದೊರೆಯುತ್ತದೆ. ನೀರಲ್ಲಿ ಮುಳುಗೇಳುತ್ತ ಹುಡುಕಾಟ ನಡೆಯುತ್ತದೆ. ಆದರೆ ಇದೇ ನದಿ ದಂಡೆಯ ದಾಂಡೇಲಿಯ ಕಾಗದ ಕಾರ್ಖಾನೆ ಕಾಡಿನ ಬಿದಿರು ಕಡಿದು, ನೆಡುತೋಪಿನ ಅಕೇಶಿಯಾ ಮರ ನಂಬಿ ಸಾವಿರಾರು ಕೋಟಿಯ ಉದ್ಯಮವಾಗಿದೆ. 

ಜಲ ಮಾಲಿನ್ಯದ ಮುಖಗಳನ್ನು ನದಿದಂಡೆಯಲ್ಲಿ ನೋಡಬಹುದು. ಒಂದು ರೂಪಾಯಿ ಬಂಡವಾಳ ವಿನಿಯೋಗಿಸಿದೇ ನಿಸರ್ಗ ಅಕ್ಷರ ಬಾರದ ಬಡ ಮಕ್ಕಳಿಗೆ ಚಿಪ್ಪು ಉತ್ಪಾದಿಸಿ ಬದುಕಿಗೆ ದಾರಿ ತೋರಿಸಿದೆ.  ನದಿ ನೋಡುವಾಗ ಪಾರಂಪರಿಕ ಬದುಕಿನ ಸೂಕ್ಷ್ಮಗಳು ಕಾಡುತ್ತವೆ.

ಕಾಳಿ ನದಿಗೆ  ಕದ್ರಾದಲ್ಲಿ ಅಣೆಕಟ್ಟು ನಿರ್ಮಾಣವಾದಾಗ ಹಲವರು ನದಿಯ ಸಿಹಿ ನೀರಿನ ಹರಿವು ಕಡಿಮೆಯಾಗುವುದರಿಂದ ಸಮುದ್ರದ ಉಪ್ಪು ನೀರು ಒಳನುಸುಳುತ್ತಿದೆಯೆಂದರು. ಬೇಸಿಗೆಯಲ್ಲಿ ಕಾಡು ಗುಡ್ಡದಿಂದ ಸಾಗರ ಸೇರುವ ನದಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಸಮುದ್ರದ ನೀರು ನದಿಗುಂಟ ಒಳ ನುಸುಳುತ್ತದೆ. ಸಮುದ್ರ ಸಂಗಮದಿಂದ ಹತ್ತಾರು ಕಿಲೋ ಮೀಟರ್‌ ದೂರದವರೆಗೂ ಉಪ್ಪು ನೀರು ನುಗ್ಗಿ ಭತ್ತದ ಗದ್ದೆ, ತರಕಾರಿ, ತೋಟಕ್ಕೆಲ್ಲ ತೊಂದರೆಯಾಗುತ್ತದೆ.  ಉಪ್ಪು ಮಣ್ಣಿನಲ್ಲಿ ಬೆಳೆ ಬೆಳೆಯಲು ಅಸಾಧ್ಯವಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಸಿಹಿ ನೀರಿನ ಜಲಚರಗಳು ಮಾಯವಾಗುತ್ತವೆ. ಅಕ್ಕಪಕ್ಕದ ಕೃಷಿ ಹಸಿರು ಪರಿವರ್ತನೆಯಾಗುತ್ತದೆ. ನೀರಿನ ಗುಣ ಬದಲಾದರೆ ನದಿ ದಡದ ಬದುಕು ಕಂಗಾಲಾಗುತ್ತದೆ. 

ನದಿಗಳ ನೆಲೆ ಬೆಲೆಯ ಅರಿವಿಲ್ಲದಿದ್ದರೂ ನೀರಿನ ಬೆಲೆಯಂತೂ ನಮಗೆಲ್ಲ ತಿಳಿದಿದೆ.  ಗುಡ್ಡಬೆಟ್ಟದಲ್ಲಿ ಕೃಷಿ ನಂಬಿ ಬದುಕಿದ ಜನಪದರಿಗೆ ನದಿದಂಡೆಯ ಕಲ್ಲು, ಮರಗಳಲ್ಲಿ ದೇವರು ಕಾಣಿಸುತ್ತಿತ್ತು. ಈಗ ರಾಜಕಾರಣಿಗಳಿಗೆ ಪ್ರತಿ ನದಿಗಳ ನೀರಿನಲ್ಲಿ ವೋಟು, ನೋಟು ಕಾಣಿಸುತ್ತಿದೆ. ಯೋಜನೆ ಹೆಣೆಯುವ ಕೆಲಸ ನಡೆಯುತ್ತಿದೆ.  ನದಿ ನಂಬಿ ಬದುಕಿದ ಉದ್ಯಮಗಳು ನದಿ ನುಂಗುವ ಆಟ ಆಡುತ್ತಿವೆ. ರಾಜಕಾರಣಿಗಳ ಬೆಂಗಾವಲಿನಲ್ಲಿರುವ ಉದ್ದಿಮೆಗಳು ನದಿದಂಡೆಯ ಉದ್ದಕ್ಕೂ ಹೊಸ ನಗರವಾಗಿ ಬೆಳೆಯುತ್ತಿವೆ. ಕಾಡು, ನೀರುಳಿಸಲು ಕಾನೂನಿದೆ. ನದಿಯ ಪರವಕಾಲತ್ತುಗಳಲ್ಲಿ ಮೀನಿನ ಮಾತಿಗಿಂತ ಜಮೀನಿನ ಮಾತು ಕೇಳಿಸುತ್ತಿದೆ. ಗಾಳ ಹಿಡಿದು ಒಂದು ಮೀನು ಹಿಡಿಯಲು ಎರಡು ತಾಸು ಕುಳಿತು ನದಿ  ಅರಿಯುವ ಸಂಯಮ ಇಂದು ಯಾರಿಗಿದೆ? ಬದುಕಿನ ಅವಸರದ ಆಟಕ್ಕೆ ಮೀನಲ್ಲ, ನದಿಯನ್ನೇ ಹಿಡಿಯುವ ಕೆಲಸ ನಡೆದಿದೆ. ಮನುಕುಲವೇ ಮೇಲುಗೈ ಸಾಧಿಸಿರುವಾಗ ನಿಸರ್ಗದ ಸಹಜ ಕಣ್ಣಿನಲ್ಲಿ ನದಿ ನೋಡುವ ಮನಸ್ಸಾದರೂ ಯಾರಿಗಿದೆ?

ಶಿವಾನಂದ ಕಳವೆ

ಟಾಪ್ ನ್ಯೂಸ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.