ಆರ್‌ಟಿಐ: ಸುಳ್ಳು ಸುದ್ದಿಯ ಹುನ್ನಾರ…
Team Udayavani, Jan 28, 2019, 4:58 AM IST
ಸುಪ್ರೀಂ ಕೋರ್ಟ್ ಆದೇಶದಂತೆ ಮಾಹಿತಿ ಹಕ್ಕು ಅಧಿನಿಯಮದ ಅಡಿ ಒಬ್ಬ ವ್ಯಕ್ತಿಯು ಒಂದು ವರ್ಷಕ್ಕೆ ಕೇವಲ ಮೂರು ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ ಎಂಬ ವದಂತಿ ಹಬ್ಬುತ್ತಿದೆ. ಈ ಸಂಗತಿ ತಿಳಿದು ಸರ್ಕಾರದ ವಿವಿಧ ಇಲಾಖೆಗಳ ಮಾಹಿತಿ ಅಧಿಕಾರಿಗಳು ಹಬ್ಬ ಆಚರಿಸುತ್ತಿದ್ದಾರೆ.
ಈಗ ನಡೆಯುತ್ತಿರುವುದು ವೈರಲ್ ಯುಗ. ಮಲೆನಾಡಿನ ತಾಲೂಕುಗಳಲ್ಲಿ ಕ್ಯಾಸನೂರು ಅರಣ್ಯ ಕಾಯಿಲೆ ಅಲಿಯಾಸ್ ಮಂಗನ ಕಾಯಿಲೆಯ ವೈರಸ್‌ನ ವೈರಲ್. ಬದುಕಿದ್ದಾಗಲೇ ಸತ್ತ ಸುದ್ದಿ ಕಿವಿಗೆ ಬಿದ್ದರೆ ನೂರು ವರ್ಷ ಆಯುಷ್ಯ ಎಂಬ ಮಾತಿದೆ. ಈ ವೈರಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬದುಕಿದ್ದೂ ಸಾಯುವವರು ವಿಪರೀತ ಜನ. ಅವರಿಗೆ ನೂರು ವರ್ಷದ ಗ್ಯಾರಂಟಿ ಇಲ್ಲ! ಇವೆಲ್ಲವಕ್ಕೂ ಮೀರಿದ ವೈರಲ್‌ಗಳಿವೆ. ಅವು ಕಾನೂನು ಅಸ್ತ್ರಗಳನ್ನೇ ಮೊಂಡು ಮಾಡುತ್ತವೆ. ಈಗಾಗಲೇ ಹತ್ತಾರು ಬಾಲಗ್ರಹಗಳಿಂದ ಬಸವಳಿದಿರುವ ಮಾಹಿತಿ ಹಕ್ಕು ಕಾಯ್ದೆಯ ಅನುಷ್ಠಾನಕ್ಕೆ ಈ “ವೈರಲ್’ ಸೋಂಕು ತಗುಲಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ಮಾಹಿತಿ ಹಕ್ಕು ಅಧಿನಿಯಮದ ಅಡಿ ಒಬ್ಬ ವ್ಯಕ್ತಿಯು ಒಂದು ವರ್ಷಕ್ಕೆ ಕೇವಲ ಮೂರು ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ ಎಂಬ ವದಂತಿ ಹಬ್ಬುತ್ತಿದೆ. ಈ ಸಂಗತಿ ತಿಳಿದು ಸರ್ಕಾರದ ವಿವಿಧ ಇಲಾಖೆಗಳ ಮಾಹಿತಿ ಅಧಿಕಾರಿಗಳು ಹಬ್ಬ ಆಚರಿಸುತ್ತಿದ್ದಾರೆ. ಬಹುತೇಕ ಅರ್ಜಿದಾರರಿಗೆ ನೀವು ನಿಗದಿತ ಮೂರು ಅರ್ಜಿಗಿಂತ ಹೆಚ್ಚು ಅರ್ಜಿ ಸಲ್ಲಿಸಿದ್ದೀರಿ. ಹಾಗಾಗಿ, ಅರ್ಜಿ ವಿಲೇ ಮಾಡಿದ್ದೇವೆ ಎಂದು ಮಾರುತ್ತರ ನೀಡಿ ತಪ್ಪಿಸಿಕೊಳ್ಳುವುದು ಅಥವಾ ನೀವು ಸಲ್ಲಿಸಿರುವ 9 ಅರ್ಜಿಗಳಲ್ಲಿ ಮೂರು ಅರ್ಜಿಗಳಿಗೆ ಮಾಹಿತಿ ನೀಡಿ ಉಳಿದ ಅರ್ಜಿಗಳನ್ನು ವಿಲೇ ಮಾಡಿದ್ದೇವೆ ಎಂದು ಮುಖ್ಯವಲ್ಲದ ಮಾಹಿತಿಗಳನ್ನು ನೀಡಿ ಕೈತೊಳೆದುಕೊಳ್ಳುವುದು ಅಕ್ಷರಶಃ ವೈರಲ್ ಆಗಿದೆ. ಈ ಮಿಥ್ಯ ಸುದ್ದಿಯು ಸಾಂಕ್ರಾಮಿಕವಾಗಲು ರಾಜ್ಯದ ಮಾಹಿತಿ
ಆಯೋಗವೇ ಮುಖ್ಯ ಕಾರಣವಾಗಿರುವುದು ದುರಂತ!
ಗ್ರಾ.ಪಂ. ಗೆ ಸಿಕ್ಕಿತೇ ಸುಪ್ರೀಂ ತೀರ್ಪು?
ಆಗಿದ್ದಿಷ್ಟು, 2016ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ವಿಶ್ವೇಶ್ವರಪುರ ಗ್ರಾಮ ಪಂಚಾಯಿತಿಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸುವ ಗಂಗನರಸಿಂಹಯ್ಯ ಎಂಬ ವ್ಯಕ್ತಿ, ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಜಮೀನುಗಳನ್ನು ಲೇಔಟ್‌ಗಳಾಗಿ ಪರಿವರ್ತನೆ ಮಾಡಿರುವ ಎಷ್ಟು ಗ್ರಾಮವಾರು ಬಡಾವಣೆಗಳಿವೆ? ಎಷ್ಟು ಸರ್ಕಾರಿ ಜಮೀನು ಪಂಚಾಯಿತಿ
ವ್ಯಾಪ್ತಿಯಲ್ಲಿವೆ? ಅಧಿಕೃತವಾಗಿ ಪಂಚಾಯಿತಿಗೆ ಪರಿವರ್ತನೆಗೆ ಬಂದಿರುವ ಅರ್ಜಿಗಳ ಸಂಖ್ಯೆ ಎಷ್ಟು? ಈವರೆಗೆ ಅಧಿಕೃತ ಪರಿವರ್ತನೆ ಆದದ್ದು ಎಷ್ಟು? ಎಂಬ ಪ್ರಶ್ನೆಗಳನ್ನು ಕೇಳಿ ಮಾಹಿತಿ ಕೋರುತ್ತಾರೆ. ಗ್ರಾ.ಪಂ.ನಿಂದ ಮಾಹಿತಿ ಸಿಕ್ಕದ ಹಿನ್ನೆಲೆಯಲ್ಲಿ ರಾಜ್ಯ ಮಾಹಿತಿ ಆಯೋಗದಲ್ಲಿ 2017ರಲ್ಲಿಯೇ ದೂರು ದಾಖಲಾಯಿತು. (ಕಮಾಆ 1270 ಎಪಿಎಲ್ 2017) ಮಾಹಿತಿ ಕೊಡಲು ನಿರಾಕರಿಸಿದ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಅರ್ಜಿಗೆ ಎರಡು ಆಕ್ಷೇಪಗಳನ್ನು ಸಲ್ಲಿಸಿದ್ದರು. ಮಾಹಿತಿ ಕೇಳಿದ ಅರ್ಜಿದಾರ ವ್ಯಕ್ತಿಯಾಗಿರದೆ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಎಂಬುದಾಗಿದೆ. ಈ ಅಂಶದ ಕಾರಣ ಮಾಹಿತಿ ಕೊಡಲು ಬರುವುದಿಲ್ಲ. ಇನ್ನೊಂದು ಆಕ್ಷೇಪ ಹೆಚ್ಚು ಗಮನಾರ್ಹವಾದುದು. ಸುಪ್ರೀಂಕೋರ್ಟ್‌ನ ಆದೇಶದಂತೆ
ಮಾಹಿತಿ ಹಕ್ಕು ಅಧಿನಿಯಮದಡಿ ಒಬ್ಬ ವ್ಯಕ್ತಿ ಒಂದು ವರ್ಷಕ್ಕೆ ಕೇವಲ ಮೂರು ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಲು ಮಾತ್ರ ಅವಕಾಶವಿರುತ್ತದೆ. ಆದರೆ ಅರ್ಜಿದಾರ ಒಂದು ಬಾರಿಗೆ 16 ಅರ್ಜಿಗಳನ್ನು ಸಲ್ಲಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಅರ್ಜಿದಾರನ ಮೊದಲ ಮೂರು ಅರ್ಜಿಗಳಿಗೆ ಉತ್ತರ ನೀಡಿ ಉಳಿದವುಗಳನ್ನು ವಿಲೆ ಇಡಲಾಗಿದೆ.
ರಾಜ್ಯ ಆಯೋಗದಿಂದ ಅರ್ಜಿ ವಜಾ!
ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯುಕ್ತ ಜಿ.ಜಯಕುಮಾರ್, ಸಂಸ್ಥೆಗಳ ಹೆಸರಿನಲ್ಲಿ ಮಾಹಿತಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂಬ ಆಕ್ಷೇಪವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ಆದರೆ, ಆರೋಪಿಗಳು ಪ್ರಸ್ತಾಪಿಸದಿ ದ್ದರೂ ತಾವೇ ತಾವಾಗಿ ಅರ್ಜಿ ವಿರುದ್ಧದ ಅಂಶವೊಂದನ್ನು ಪ್ರಸ್ತಾಪಿಸಿ, ಅರ್ಜಿದಾರ ಕೇಳಿದ ಮಾಹಿತಿಗಳು ಪ್ರಶ್ನೆ ರೂಪದಲ್ಲಿ ಇರುವುದು ನಿಯಮಬಾಹಿರ ಎಂದು ತಿಳಿಸುತ್ತಾರೆ. ತೀರ್ಪಿನಲ್ಲಿ ಅಮರ್‌ಲಾಲ್ ಅರೋರಾ ವಿರುದ್ಧ ಸಿಪಿಐಓ ಮುಖ್ಯ ಅಂಚೆ ಕಚೇರಿ ನವದೆಹಲಿ ಪ್ರಕರಣದ ಕೋರ್ಟ್ ಅಭಿಪ್ರಾಯ ಹಾಗೂ ಬಾಂಬೆ ಹೈಕೋರ್ಟ್‌ನ ಆದೇಶವನ್ನು ಉಲ್ಲೇಖೀಸಿ, ಅರ್ಜಿಯಲ್ಲಿ ಪ್ರಶ್ನಾರ್ಥಕ ರೂಪದಲ್ಲಿ ಕೋರಿರುವ ಮಾಹಿತಿಯನ್ನು ಒದಗಿಸಲು ಕಾಯಿದೆಯಲ್ಲಿ ಅವಕಾಶವಿಲ್ಲ ಎಂದು ಸಾರಲಾಗುತ್ತದೆ. ಪ್ರಶ್ನೆ ರೂಪದಲ್ಲಿ ಮಾಹಿತಿ ಕೋರುವಂತಿಲ್ಲ ಎಂಬ ವಾದವನ್ನು ಪ್ರತ್ಯೇಕವಾಗಿ ಚರ್ಚಿಸಬೇಕು. ಆದರೆ, ಆರೋಪಿಗಳು ಉಲ್ಲೇಖೀಸಿದ ವಾರ್ಷಿಕ ಮೂರು ಅರ್ಜಿಗಳಿಗಷ್ಟೇ ಅವಕಾಶ ಎಂಬ ಸುಪ್ರೀಂಕೋರ್ಟ್ ತೀರ್ಪು ಕುರಿತ ವಾದದ ಬಗ್ಗೆ ತೀರ್ಪಿನಲ್ಲಿ ಏನೇನೂ ಪ್ರಸ್ತಾಪವಾಗಿಲ್ಲ. ತೀರ್ಪು 2018ರ ಏಪ್ರಿಲ್ ನಾಲ್ಕರಂದೇ ಬಂದಿದೆ. ಹೇಳಿಕೇಳಿ ರಿಯಲ್ ಎಸ್ಟೇಟ್‌ನ ಪ್ರಕರಣ ಎಂದರೆ ಅದು ನೂರಾರು ಕೋಟಿ ರೂ.ಗಳ ಕೈ ಬದಲಾಗುವ ವಹಿವಾಟು. ಇಂಥ ಸಂದರ್ಭದಲ್ಲಿ ಬಂಡವಾಳ ಹೂಡುವವರು ಬೇರೆ ಬೇರೆ ಹಿತಾಸಕ್ತರ ಕೈ ಬಿಸಿ ಮಾಡಿಯೇ ಮಾಡುತ್ತಾರೆ. ಅಧಿಕಾರಿಗಳಿಂದ ಆರಂಭಿಸಿ ನ್ಯಾಯಾಲಯ ವ್ಯವಸ್ಥೆಯ ಕಂಬಗಳವರೆಗೆ ಅವರ ವಶೀಲಿ, ಒತ್ತಡವಿರುತ್ತದೆ. ಅದನ್ನು ಮೀರಿ ನಿಲ್ಲುವ ಕೆಲಸ ಮಾಡುವುದು ಸುಲಭವಲ್ಲ. ಕೆಲವೊಮ್ಮೆ ಜಾಣ್ಮೆಯ ಮರೆವು ಲಾಭಕರವಾಗಿರುವುದನ್ನು ಕಾಣುತ್ತೇವೆ!
ವದಂತಿ, ಆದೇಶ ಮತ್ತು ಅದೇ ನಿಜ!
ವಿಶ್ವೇಶ್ವರಪುರ ಗ್ರಾಮ ಪಂಚಾಯಿತಿಯ ವಾದವೇ ಮಾಹಿತಿ ಆಯೋಗದ ಎದುರು ಗೆಲುವು ಪಡೆಯಿತು. ಆ ತೀರ್ಪಿನ ಪ್ರತಿ ಆನ್‌ಲೈನ್‌ನಲ್ಲಿಯೇ ಸುಲಭವಾಗಿ ಸಿಗುವಾಗ ಊಹಿಸಲಾಗದ ರೀತಿಯಲ್ಲಿ ಅದು ಪ್ರಭಾವ ಬೀರಿತು. ಸುಪ್ರೀಂಕೋರ್ಟ್‌ನ ತೀರ್ಪಿನ ಅನ್ವಯ ಯಾವುದೇ ಅರ್ಜಿದಾರ, ವಾರ್ಷಿಕ ಮೂರು ಆರ್‌ಟಿಐ ಅರ್ಜಿ ಸಲ್ಲಿಸುವಂತಿಲ್ಲ ಎಂಬ ವದಂತಿ ಹರಡಿ ಅದೇ ನಿಜ ಎಂದು ನಂಬುವ ಸ್ಥಿತಿ ನಿರ್ಮಾಣವಾಗಿದೆ. ಅಷ್ಟಕ್ಕೂ ಅರ್ಜಿಯನ್ನು ತಿರಸ್ಕರಿಸಲು ಕಾರಣಗಳನ್ನು ಆಡಳಿತ ಹಾಗೂ ಅಧಿಕಾರಶಾಹಿ ಹುಡುಕುತ್ತಲೇ ಇರುವಾಗ ಈ ಮಾಹಿತಿಯನ್ನು ಅರ್ಜಿದಾರರ ಬಲ ಕುಗ್ಗಿಸಲು ವ್ಯಾಪಕವಾಗಿ ಬಳಸಲಾಗುತ್ತದೆ. ಕೆಲವೇ ಕೆಲವು ಉದಾಹರಣೆಗಳನ್ನು ಇಲ್ಲಿ ಪ್ರಸ್ತಾಪಿಸುವುದಾದರೆ, ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದಂತೆ ಮಧುಗಿರಿ ಜಿ.ಪಂನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿ, ಜನವರಿ ಒಂದರಂದು ಪಾರ್ವತಮ್ಮ ಬಿದರಣ್ಣ ಗುಂಡಕಲ್ಲು ಎನ್ನುವವರ ಅರ್ಜಿಯನ್ನು ತಿರಸ್ಕರಿಸಿ ನೀವು 12 ವಿಷಯ ಕೇಳಿದ್ದರಿಂದ ವಿಲೇ ಮಾಡಿದ್ದೇವೆ. ಮೂರು ವಿಷಯವನ್ನು ಪ್ರತ್ಯೇಕವಾಗಿ ಕೇಳಿ ಮಾಹಿತಿ ಪಡೆದುಕೊಳ್ಳಿ ಎಂದು ಟಿಪ್ಪಣಿ ಬರೆದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮಾಚೋಹಳ್ಳಿ ಗಂಗನರಸಿಂಹಯ್ಯ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮೂರು ಅರ್ಜಿ ನಿಯಮವನ್ನು ಉಲ್ಲೇಖೀಸಿ 2019ರ ಜನವರಿ 16 ರಂದು ತಿರಸ್ಕರಿಸಿದೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟದ ವೈ ಹುಣಸೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಲ್ಲಿನ ರವಿಕುಮಾರ್ ಗೆಜ್ಜಿಗಾನಹಳ್ಳಿ ಅವರ ಅರ್ಜಿಯನ್ನು ಸುಪ್ರೀಂಕೋರ್ಟ್‌ನ ಕಾಲ್ಪನಿಕ ಆದೇಶವನ್ನು ಉಲ್ಲೇಖೀಸಿ ಜನವರಿ ಎರಡರಂದು ವಜಾ ಮಾಡಲಾಗಿದೆ.
ಮಾಹಿತಿ ಆಯೋಗದ ಮುಂದೆ ಅರ್ಜಿದಾರ ಹಾಗೂ ಆರೋಪಿಗಳು ಮಾಹಿತಿ ಹಕ್ಕು ಕಾಯ್ದೆಯನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿ ಅದರ ಲಾಭ ಪಡೆಯಲು ಪ್ರಯತ್ನಿಸುವುದು ನಡೆದುಬಂದಿರುವಂಥದು. ಅವರ ವಾದ ಪ್ರತಿವಾದಗಳೇನಿದ್ದರೂ ಮಾಹಿತಿ ಆಯೋಗ ಕಾಯ್ದೆಯ ಅಂಶಗಳಿಗೆ ವ್ಯತಿರಿಕ್ತವಲ್ಲದ, ದುರುಪಯೋಗದ ಅಂಶಗಳನ್ನು ನಿವಾರಿಸಿ ಕಾಯ್ದೆಯ ಆಶಯಗಳಿಗೆ ಪೂರಕವಾಗಿ ಸುವ್ಯವಸ್ಥಿತ ಆಡಳಿತಕ್ಕೆ ದಾರಿ ಮಾಡಿಕೊಡುವಂಥ ತೀರ್ಪು ಕೊಡಬೇಕಾದುದು ನಿರೀಕ್ಷಣೀಯ. ವಿಶ್ವೇಶ್ವರಪುರ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ತನ್ನ ವಾದದಲ್ಲಿ ಸುಪ್ರೀಂಕೋರ್ಟ್‌ನ ಆದೇಶವನ್ನು ಉಲ್ಲೇಖೀಸಿದ್ದಾನೆ ಎಂದ ಮೇಲೆ ಅದನ್ನು ಒಪ್ಪುವ ಅಥವಾ ಅಲ್ಲಗಳೆಯುವ ಕೆಲಸವನ್ನು ಆಯೋಗ ಮಾಡಲೇಬೇಕಾಗಿತ್ತು.
ಅಷ್ಟಕ್ಕೂ, ಸಂಪೂರ್ಣವಾಗಿ ಕಾಯ್ದೆಯ ನಿರೀಕ್ಷೆಗಳನ್ನೇ ಬುಡಮೇಲು ಮಾಡುವಂತೆ ಪ್ರತಿಪಾದನೆ ಇರುವಾಗ ತೀರ್ಪಿನ ಪ್ರತಿ ಇಟ್ಟು ಮಾತನಾಡಿ ಎನ್ನಬೇಕಿತ್ತು. ಈ ವಿಚಾರದಲ್ಲಿ ಅದರ ಮೌನ ಒಂದು ರೀತಿಯಲ್ಲಿ ಸಮ್ಮತಿಯಂತೆ ಕಂಡುಬಂದಿರುವುದರಿಂದಲೇ ಇಂದು ರಾಜ್ಯದ ಹತ್ತಾರು ಕಡೆ ಅದನ್ನು ಬಳಸಿ ಮಾಹಿತಿ ಅರ್ಜಿಗಳನ್ನು ಕೊಲ್ಲಲಾಗುತ್ತಿದೆ. ಕೊನೇಪಕ್ಷ, ಈಗಲಾದರೂ ಮಾಹಿತಿ ಆಯೋಗ ಪ್ರಕಟಣೆ ನೀಡಿ ಅಧಿಕಾರಿಗಳಲ್ಲಿ ಹರಡಿರುವ ತಪ್ಪು ಅಭಿಪ್ರಾಯವನ್ನು ನಿವಾರಿಸಬೇಕಿತ್ತು. ಆ ಕೆಲಸವೂ ಆಗಿಲ್ಲ. ನಿಜಕ್ಕಾದರೆ, ಸುಪ್ರೀಂಕೋರ್ಟ್ ಆ ತರಹದ ಆದೇಶವನ್ನು ಕೊಟ್ಟೇ ಇಲ್ಲ. ಮಾಹಿತಿ ಹಕ್ಕುಗಳ ಕುರಿತಾಗಿ ರಾಜಧಾನಿ ದೆಹಲಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಆರ್‌ಟಿಐ ಫೌಂಡೇಶನ್ [http://www.rtifoundationofindia.com/ಅತ್ಯಂತ ಸ್ಪಷ್ಟ ಪದಗಳಲ್ಲಿ ಇಂತಹ ಯಾವುದೇ ತೀರ್ಪು ಪ್ರಕಟವಾಗಿಲ್ಲ ಎಂದು ತಿಳಿಸಿದೆ. ಮಾಹಿತಿ ಆಯೋಗದ ಆಯುಕ್ತರ ನೇಮಕದಲ್ಲೂ ರಾಜ್ಯ ಸರ್ಕಾರದ ರಾಜಕೀಯ ಹಿತಾಸಕ್ತಿಗಳು ಪಾತ್ರ ವಹಿಸುವುದರ ಅಪಾಯವನ್ನು ಈ ಬೆಳವಣಿಗೆಗಳು ಅತ್ಯಂತ ನಿಖರವಾಗಿ ಹೇಳಿದಂತಾಗಿದೆ.
ಪ್ರಶ್ನೆಗೆ ಒಳಗಾಗಬೇಕಿರುವ ತಪ್ಪು ವ್ಯಾಖ್ಯಾನ!
ಪ್ರಶ್ನೆಗಳ ರೂಪದಲ್ಲಿ ಕೇಳಿದ ಮಾಹಿತಿ ಹಕ್ಕು ಅರ್ಜಿಗಳನ್ನು ತಿರಸ್ಕರಿಸುವುದು ಕೂಡ ರಾಷ್ಟ್ರೀಯ ಗ್ರಾಹಕ ಆಯೋಗ ಹಾಗೂ ನ್ಯಾಯಾಲಯಗಳ ತೀರ್ಪಿನ ತಪ್ಪು ವ್ಯಾಖ್ಯಾನ. ಅನಿಸಿಕೆ, ಪ್ರತಿಪಾದನೆ, ಸಾಧ್ಯತೆಗಳ ಕುರಿತಾಗಿ ಪ್ರಶ್ನಿಸುವ, ದಾಖಲೆಯ ರೂಪದಲ್ಲಿ ಇಡಲಾಗದ ಸ್ವರೂಪದ ಮಾಹಿತಿಯನ್ನು ಪ್ರಶ್ನೆ ರೂಪದಲ್ಲಿ ಕೇಳಿದರೆ ಮಾತ್ರ ಅಂತಹ ಅರ್ಜಿಯನ್ನು ವಜಾ ಮಾಡಬೇಕಾಗುತ್ತದೆ. ಒಂದು ಯೋಜನೆಯ ಅಂದಾಜು ವೆಚ್ಚದ ವಿವರ ಕೊಡಿ ಎಂದು ಪ್ರಶ್ನೆಯಲ್ಲದ ಮಾದರಿಯಲ್ಲಿ ಕೇಳುವಂತೆಯೇ, ಅಂದಾಜು ವೆಚ್ಚ ಎಷ್ಟು ಎಂದೂ ನೇರವಾಗಿ ಪ್ರಶ್ನಿಸಬಹುದು. ಎರಡಕ್ಕೂ ಮಾಹಿತಿ ಒಂದೇ, ಇಲ್ಲಿ ಪ್ರಶ್ನೆ ಆಕ್ಷೇಪಾರ್ಹ ಅಲ್ಲ. ಅಂದಾಜು ವೆಚ್ಚವನ್ನು ನೀವು ಇಷ್ಟು ಮೊತ್ತಕ್ಕಿಂತ ಕಡಿಮೆ ಇರಿಸಲು ಕಾರಣವೇನು ಎಂದು ಮಾಹಿತಿ ಅರ್ಜಿಯಲ್ಲಿ ಪ್ರಶ್ನಿಸಿದರೆ ಅದು ದಾಖಲೆಗಳಲ್ಲಿ ಸಿಗುವುದಿಲ್ಲ. ಇಂತಹ ಪ್ರಶ್ನೆಗಳು ನಿಷಿದ್ಧ. ಈಗಾಗಲೇ ಬಂದಿರುವ ಹಲವಾರು ಮಾಹಿತಿ ಆಯೋಗದ ತೀರ್ಪುಗಳಲ್ಲಿ ಒಂದಂಶವನ್ನು ಸ್ಪಷ್ಟಪಡಿಸಲಾಗಿದೆ, ಯಾವ ಯಾವ ಮಾಹಿತಿಗಳು ದತ್ತ ಸ್ವರೂಪದಲ್ಲಿ ಲಭ್ಯ ಇದೆಯೋ ಅವುಗಳನ್ನು ಪ್ರಶ್ನೆ ರೂಪದಲ್ಲಿ ಕೇಳಿದರೂ ಕೊಡತಕ್ಕದ್ದು. ಮಾಹಿತಿ ಅರ್ಜಿಗಳನ್ನು ಮೂಲೆಗುಂಪು ಮಾಡುವ ಪ್ರತಿಜ್ಞೆ ಮಾಡಿರುವ ಸರ್ಕಾರಿ ಅಧಿಕಾರಿಗಳದ್ದು ‘ಸೆಲೆಕ್ಟೀವ್ ಯರಿಂಗ್’. ಪ್ರಶ್ನೆ ರೂಪದಲ್ಲಿದ್ದರೆ ಅರ್ಜಿ ತಿರಸ್ಕರಿಸಿ! ಪ್ರಶ್ನೆ ಕುರಿತು ತಪ್ಪು ವ್ಯಾಖ್ಯಾನವನ್ನು ಅಧಿಕಾರಿಗಳು ಮಾಡಿದರೆ ಬಿಡಿ, ಮಾಹಿತಿ ಕೊಡಿಸಬೇಕಾದವರೇ ತಪ್ಪು ಮಾಡಿದರೆ? ದೇವರೇ ಕಾಪಾಡಬೇಕು!
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.