ಹುಲ್ಲುಕಡ್ಡಿಯ ಪವಾಡ ಹುಲ್ಲು ಹೊನ್ನು..!
Team Udayavani, Feb 22, 2021, 6:28 PM IST
“ಸಮಯಕ್ಕಾದ ಹುಲ್ಲು ಕಡ್ಡಿ ಸಹಸ್ರ ಹೊನ್ನು’ ಎಂಬ ಗಾದೆ ಮಾತು, ಯಾದಗಿರಿ ಸೇರಿದಂತೆ ಹೈದ್ರಾಬಾದ್ ಕರ್ನಾಟಕ ಭಾಗದ ಬಹುತೇಕ ಭಜಂತ್ರಿಗಳ ಬಾಳಿನಲ್ಲಿ ನಿಜವಾಗಿದೆ!
ಈಗ ಇವರಿಗೆ ವರ್ಷವಿಡೀ ಕೈ ತುಂಬಾ ಕೆಲಸ, ಆದಾಯ ಇಲ್ಲ. ಬ್ಯಾಂಡ್ ಬಾರಿಸುವುದು, ಈಚಲ ಬುಟ್ಟಿ, ಕಸಬರಿಕೆ ಮಾಡಿ ಮಾರುವ ಕುಲದ ವೃತ್ತಿ, ಸಂತೃಪ್ತ ಬದುಕಿಗೆ ಸಹಕಾರಿಯಾಗುತ್ತಿಲ್ಲ. ಹೀಗಾಗಿ ಇದನ್ನಷ್ಟೇ ನಂಬಿ ಕೂರುವ ಬದಲು, ನಾಲ್ಕು ಕಾಸು ಸಂಪಾದನೆಗೆ ದಾರಿಮಾಡಿಕೊಡುವ ಕೆಲಸವೊಂದು ಬೇಕಲ್ಲ ಎಂದು ಈ ಜನ ಯೋಚಿಸಿದ ಸಂದರ್ಭದಲ್ಲೇ, ಹುಲ್ಲು ಕಡ್ಡಿಯೊಂದು ಆಸರೆಯಾಗಿ ಬಂದಿದೆ! ಕವಚಿ ಹುಲ್ಲು… ಅದೇ ಕವಚಿ ಹುಲ್ಲು! ಯಾದಗಿರಿ ಕಡೆ ಇದನ್ನು ಗಣೆ ಹುಲ್ಲು ಅಂತಲೂ, ಬಳ್ಳಾರಿ- ಕೊಪ್ಪಳದ ಆಸುಪಾಸು ಸೆಳಬಿನ ಕಡ್ಡಿ ಅಂತಲೂ ಕರೆಯುತ್ತಾರೆ. ಬಳ್ಳಾರಿ, ಕೊಪ್ಪಳ, ಗದಗ ಮುಂತಾದ ಜಿಲ್ಲೆಗಳಲ್ಲಿ ಇದು ಯಥೇತ್ಛವಾಗಿ ಸಿಗುತ್ತದೆ. ಅರಣ್ಯ, ಅರಣ್ಯದಅಂಚಿನ ಬಯಲು ಪ್ರದೇಶದಲ್ಲಿ, ಹೊಲ-ಗದ್ದೆಗಳ ಬದುವಿನ ಮೇಲೆ ಹೆಚ್ಚಾಗಿ ಬೆಳೆಯುತ್ತದೆ. ಇದು ಎಳಸಲು ಇದ್ದಾಗ ಮಾತ್ರ ದನಕರುಗಳು ತಿನ್ನುತ್ತವೆ.
ನೂರಾರು ಕಿ.ಮೀ. ಸೆಳೆತ :
ಈ ಕವಚಿ ಹುಲ್ಲನ್ನು ಕೊಪ್ಪಳ, ಗದಗ, ಬಳ್ಳಾರಿ ಭಾಗದ ಜನರು, ತಮ್ಮ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಉಪಯೋಗಿಸುತ್ತಾರೆ. ಆದರೆ ಯಾದಗಿರಿ ಭಾಗದಲ್ಲಿ ಈ ಹುಲ್ಲಿಗೆ ಭಾರೀ ಬೇಡಿಕೆ ಇದೆ. ಹೀಗಾಗಿ ಈ ಹುಲ್ಲು ಅರಸಿ ಕೊಂಡು ಅನೇಕ ಭಜಂತ್ರಿ ಕುಟುಂಬ ಗಳು ನೂರಾರು ಕಿ.ಮೀ. ದಾರಿ ಕ್ರಮಿಸಿ ಈ ಕಡೆ ಬರುತ್ತಾರೆ. 2-3 ತಿಂಗಳು ವಾಸ್ತವ್ಯ ಮಾಡಿ ಹಸಿವು, ನಿದ್ದೆ-ನೀರಡಿಕೆ, ಚಳಿ-ಬಿಸಿಲು… ಇದ್ಯಾವುದನ್ನೂ ಲೆಕ್ಕಿಸದೇ ಕಾಡು- ಮೇಡು ಅಲೆದು, ಭರ್ಜರಿ ಹುಲ್ಲಿನ ಬೇಟೆ ಆಡುತ್ತಾರೆ.
ಹುಲ್ಲಿಗೆ ಭಾರಿ ಬೇಡಿಕೆ:
ಕವಚಿ ಹುಲ್ಲಿನಲ್ಲಿ ದಪ್ಪ ಮತ್ತು ತೆಳಪು ಕಡ್ಡಿ ಎಂದು ಎರಡು ಭಾಗ ಮಾಡುತ್ತಾರೆ. ದಪ್ಪ ಕಡ್ಡಿಯನ್ನು ಪತ್ರೋಳಿ ಊಟದ ಎಲೆ ತಯಾರಿಕೆಗೆ ಮತ್ತು ತೆಳಪು ಕಡ್ಡಿಯನ್ನು ಕಸಬರಿಕೆ ಮಾಡಲು ಬಳಸುತ್ತಾರೆ. ಯಾದಗಿರಿಯ ಸುತ್ತಮುತ್ತ ಮುತ್ತುಗದ ಗಿಡಗಳು ಇವೆ. ಈ ಗಿಡದ ಎಲೆಗಳನ್ನು ಬಳಸಿ ಹೂವು ಕಟ್ಟುವ ಮಂದಿ ಪತ್ರೋಳಿ ಸಹ ಮಾಡಲಿದ್ದು, ಇದಕ್ಕೆ ಈ ಹುಲ್ಲಿನ ಕಡ್ಡಿಬೇಕೇ ಬೇಕು. ಸ್ಥಳೀಯವಾಗಿ ಈ ಕಡ್ಡಿ ಸಿಗಲ್ಲ! ಹೀಗಾಗಿಭಜಂತ್ರಿಗಳು ಅಂತಹವರಿಗೆ ಈ ಹುಲ್ಲಿನ ಕಡ್ಡಿ ಮಾರುತ್ತಾರೆ. ಈ ಹುಲ್ಲಿನಿಂದ ಮಾಡಿದ ಕಸಬರಿಕೆಗಳನ್ನು ಬಳಸುವ ಮನೆತನಗಳೂ ಇಂದಿಗೂಇವೆ. ಗೌಡ, ಕುಲಕರ್ಣಿ, ಒಕ್ಕಲು ಮನೆತನದವರುಇದನ್ನು ಖರೀದಿಸುತ್ತಾರೆ. ಹೀಗೆ ನಮಗೆ ಕಾಯಂ ಗ್ರಾಹಕರು ಇದ್ದು, ಅಂತಹವರಿಂದಲೇ ಈ ಉದ್ಯೋಗದಿಂದ ಜೀವನಕ್ಕೆ ಆಸರೆ ಆಗಿದೆ..’ ಎನ್ನುತ್ತಾರೆ ಕಸಬರಿಗೆ ಮಾರುವ ಕಾಯಕದ ಸಾಬಮ್ಮ.
ಹಣ ನೀಡುವ ಹುಲ್ಲು..! :
ಒಂದು ಪೆಂಡೆ ಕವಚಿ ಹುಲ್ಲಿನಲ್ಲಿ 80-90 ಹಿಡಿ ಹುಲ್ಲು ಸಿಗುತ್ತೆ. ಒಂದು ಹಿಡಿ ಹುಲ್ಲನ್ನು 15-20 ರೂ.ಗೆ ಮಾರುತ್ತಾರೆ. ಇಲ್ಲದಿದ್ದರೆ ಹುಲ್ಲು ಕೊಟ್ಟು ಪ್ರತಿಯಾಗಿ ಜೋಳ, ಶೇಂಗಾ, ಗೋಧಿ, ಅಕ್ಕಿ… ಹೀಗೆ ದವಸ- ಧಾನ್ಯ ಪಡೆಯುತ್ತಾರೆ. ವರ್ಷದಲ್ಲಿ ಕನಿಷ್ಠ 1-2 ತಿಂಗಳು ಕಾಯಂ ಈ ಕಡೆಬರ್ತೀವಿ. ಎಷ್ಟು ಸಾಧ್ಯವೋ ಅಷ್ಟು ಗಣೆ ಹುಲ್ಲು ಕೊಯ್ದು ಒಯ್ಯುತ್ತೀವಿ. ಎಲ್ಲವನ್ನೂ ಮಾರಿದ್ರೆ ವರ್ಷಕ್ಕಾಗುವಷ್ಟು ಕಾಳು-ಕಡಿ,
ಮೇಲೆ ಒಂದಿಷ್ಟು ಖರ್ಚಿಗೆ ಕಾಸು ಸಿಗುತ್ತೆ. ಹೇಗೋ ಜೀವನ ನಡಿತೈತಿ..’ ಎನ್ನುತ್ತಾರೆ ಅರಕೇರಿ ಬಸವರಾಜ. “ಮೊದಲೆಲ್ಲ ನಾವು ತುಂಬಾ ಜನಬರ್ತಿದೀವಿ. ಈಗ ಕಾಲ ನಾಜೂಕು ಆಗೈತಿ, ಪತ್ರೋಳಿಯಲಿ ಊಟ ಮಾಡುವ ಮಂದಿ,ಗಣೆ ಬಾರಿಗೆ ಬಳಸುವ ಮಂದಿ ವರ್ಷ ವರ್ಷಕ್ಕೂ ಕಮ್ ಆಗ್ಯಾರ.
ಹೀಗಾಗಿ ನಮ್ಮಲ್ಲಿಅನೇಕರು ಈಗಾಗಲೇ ಈ ಕಸುಬನ್ನೂ ಕೈ ಬಿಟ್ಟಾರೆ. ನಾವು ಮಾಡಲಿಕ್ಕೆ ಅತ್ತೀವಿ. ಎಷ್ಟು ದಿನ ನಡೆಯುತ್ತೋ ಗೊತ್ತಿಲ್ಲ..’ ಎನ್ನುತ್ತಾರೆ ಶಿವಮ್ಮ. “ಈ ಕಡ್ಡಿ ಸಂಗ್ರಹಿಸಲು ಹೆಚ್ಚಿಗೆ ಶ್ರಮ, ಸಮಯ ಬೇಕು ರ್ರೀ… ಆದರೆ ಜನ ಮಾತ್ರ ಮೊದಲಿನ ರೇಟಿಗೇ ಹುಲ್ಲು ಕೇಳ್ತಾರೆ. ಈ ದಂಧೆ ಬ್ಯಾಸರ ತರ್ ತೈತಿ. ಫೈದಾ ಇಲ್ಲ. ಮೊದಲಿನಿಂದಲೂ ಮಾಡಿಕೊಂಡು ಬಂದಿವಿ ಅಂತಾ ಬಂದಿವಿ ಅಷ್ಟೆ…’ ಅಂತಾರೆ ಬಾಗಮ್ಮ. ನೆಚ್ಚಿಕೊಂಡ ಕುಲ ಕಸುಬಿನಲ್ಲಿ ಭವಿಷ್ಯ ಇಲ್ಲ, ಮುಂದೇನು ಎಂಬ ಆತಂಕದಲ್ಲಿ ಭಜಂತ್ರಿ ಸಮುದಾಯದ ಜನರಿದ್ದಾಗ, ಈ ಕವಚಿ ಹುಲ್ಲು ಅವರ ಬಾಳಲ್ಲಿ ಆಶಾಕಿರಣವೊಂದನ್ನು ಮೂಡಿಸಿದೆ. ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ ಎನ್ನುವಂತೆ ನೂರಾರು ಕುಟುಂಬಗಳು ಶೋಚನಿಯ ಸ್ಥಿತಿ ತಲುಪಿರುವಾಗ ಈ ಕವಚಿ ಹುಲ್ಲು ಅವರ ಹಸಿವು ನೀಗಿಸಿ, ತೃಪ್ತ ಭಾವ ಮೂಡಿಸಿರುವುದು ದಿಟ
ದೀಪಾವಳಿಗೆ ದಾಪುಗಾಲು :
ಈ ಹುಲ್ಲಿನ ಸಂಗ್ರಹಣೆಗೂ ಸೀಜನ್ ಇದೆ. ಪ್ರತಿ ವರ್ಷ ದೀಪಾವಳಿ ಹಿಂದುಮುಂದು ಇದಕ್ಕೆ ಸೂಕ್ತ ಕಾಲ.ಈ ಹೊತ್ತಿನಲ್ಲಿ ಬೆಳ್ಳಂಬೆಳಗ್ಗೆ ಕಡ್ಡಿ ಸಂಗ್ರಹಣೆಗೆ ಹೋದವರು ಮತ್ತೆ ಮರಳುವುದು ಸಂಜೆ ಹೊತ್ತಿಗೆ. ಒಬ್ಬ ವ್ಯಕ್ತಿ ದಿನವೊಂದಕ್ಕೆ ಕನಿಷ್ಠ ಪಕ್ಷ ಒಂದು ಪೆಂಡೆ ಹುಲ್ಲು ಸಂಗ್ರಹಿಸುತ್ತಾನೆ. ಹೀಗೆ ಸಂಗ್ರಹಿಸಿದ ಹುಲ್ಲನ್ನು ಒಣಗಿಸಿ, ಸ್ವಚ್ಛ ಮಾಡಿ ಅಚ್ಚುಕಟ್ಟಾಗಿ ಪೆಂಡೆ ಕಟ್ಟಿ ಪೇರಿಸಿಡುತ್ತಾರೆ.
ಚಿತ್ರ-ಲೇಖನ: ಸ್ವರೂಪಾನಂದ ಕೊಟ್ಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.