ಚಿಕ್ಕಿಯಿಂದ ಲಕ್ಕಿ
ಬದುಕು ಕಡ್ಲೆ ಮಿಠಾಯಿಯಷ್ಟೇ ಸಿಹಿ
Team Udayavani, Oct 5, 2020, 7:52 PM IST
ಸ್ವಾವಲಂಬಿಗಳಾಗಬೇಕು, ಸ್ವಾಭಿಮಾನಿಗಳಾಗಿ ಬದುಕಬೇಕು ಎಂಬ ಉದ್ದೇಶದಿಂದ ಬಳಾರಿ ಜಿÇÉೆ ಕೂಡ್ಲಿಗಿಯಲ್ಲಿ ಮಾಜಿ ದೇವದಾಸಿ ಮಹಿಳೆಯರು ಒಂದು ಸಾಹಸ ಮಾಡಿದ್ದಾರೆ. ಒಂದು ಟ್ರಸ್ಟ್ ಮಾಡಿಕೊಂಡು, ಅದರ ನೆರವಿನಿಂದ ಚಿಕ್ಕಿ ತಯಾರಿಕಾ ಘಟಕ ಆರಂಭಿಸಿ, ಗೆದ್ದಿದ್ದಾರೆ…
ಕಡು ಬಡತನ, ಅನಕ್ಷರತೆ, ಮೂಡ ನಂಬಿಕೆ.. ಇಂಥವೇ ಹಲವು ಕಾರಣಗಳಿಗೆ ದೇವದಾಸಿ ಆದ ಇವರು ಗೌರವಯುತ ಬದುಕು ಕಟ್ಟಿಕೊಳ್ಳಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸ್ವಾಭಿಮಾನಿ ಮತ್ತು ಸ್ವಾವಲಂಬಿ ಜೀವನ ನಡೆಸಬೇಕೆಂಬ ತುಡಿತವೇನೋ ಇವರಿಗಿತ್ತು. ಆದರೆ, ಸರಕಾರ ನೀಡುವ ಮಾಸಾಶನ, ದೇವದಾಸಿ ಪುನರ್ ವಸತಿ ಯೋಜನೆ ಅಡಿಯಲ್ಲಿ ನೀಡುತ್ತಿದ್ದ ಸಬ್ಸಿಡಿ ಸಾಲದಿಂದ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಲುವುದಿಲ್ಲ ಎಂಬುದೂ ಇವರಿಗೆ ಅರ್ಥವಾಯಿತು.
ಹಾಗಂತ ಇವರು ನಿರಾಶರಾಗಲಿಲ್ಲ. ಕಷ್ಟಗಳನ್ನು ಒಟ್ಟಾಗಿ ಎದುರಿಸಲು ನಿರ್ಧರಿಸಿದರು. ಎಲ್ಲರೂ ಜೊತೆಗೂಡಿ, ಒಂದು ಟ್ರಸ್ಟ್ ಕಟ್ಟಿಕೊಂಡರು. ಇದಿಷ್ಟೂ ಆಗಿ ನೆಟ್ಟಗೆ ಆರು ತಿಂಗಳೂ ಸಹ ಆಗಿಲ್ಲ. ಅದಾಗಲೇ ಇವರ ಬದುಕಿನ ಗತಿ ಬದಲಾಗಿದೆ! ಎಲ್ಲರೂ ಒಟ್ಟಾಗಿ ದುಡಿಯುತ್ತಿರುವ ಉದ್ಯಮ ಲಾಭದ ಹಳಿಗೆ ಬಂದು ನಿಂತಿದೆ. ಅದೇ ಕಾರಣಕ್ಕೆ, ಈ ಎಲ್ಲಾ ಮಹಿಳೆಯರಿಗೆ ಶಾಶ್ವತ ಆರ್ಥಿಕ ಭದ್ರತೆಯ ವಿಶ್ವಾಸ ಮೂಡಿದೆ.
ಊರಮ್ಮ ದೇವಿ ಹೆಸರಿನಲ್ಲಿ… ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಅಂದಾಜು 250 ಮಾಜಿ ದೇವದಾಸಿಯರಿದ್ದಾರೆ. ಭಾಗಶಃ ಪ್ರತಿಯೊಬ್ಬರೂ ಮಾಸಾಶನ, ವಿವಿಧ ಕಸುಬುಗಳಿಗಾಗಿ ಸರಕಾರದಿಂದ ವೈಯುಕ್ತಿಕ ಸಬ್ಸಿಡಿ ಸಾಲ ಸೌಲಭ್ಯ ಪಡೆದಿದ್ದಾರೆ. ಅದರಲ್ಲಿ ಊರಮ್ಮ ದೇವಿ ಮಾಜಿ ದೇವದಾಸಿ ಮಹಿಳೆಯರ ಸೇವಾ ಟ್ರಸ್ಟ್ ನ 15 ಸಮಾನ ಮನಸ್ಕರು ಮಾತ್ರ ಇತರರಿಗಿಂತ ವಿಭಿನ್ನವಾಗಿ ಕಾಣುತ್ತಾರೆ. ಕಾರಣ, ಇವರೆಲ್ಲ ಸೇರಿ ಶೇಂಗಾ ಚಿಕ್ಕಿ (ಬರ್ಫಿ) ತಯಾರಿಕೆ ಘಟಕವನ್ನು ಆರಂಭಿಸಿ, ಸ್ವಯಂ ಉದ್ಯೋಗ ಮಾಡುತ್ತಿರುವುದು. ಇದು ಸರಕಾರದನೆರವಿನೊಂದಿಗೆ ಆರಂಭವಾದ ಮೊದಲ ಮಾಜಿದೇವದಾಸಿ ಮಹಿಳೆಯರ ಚಿಕ್ಕಿ ತಯಾರಿಕೆ ಘಟಕ ಎಂಬುದು ವಿಶೇಷ.
ಭದ್ರತೆ ನೀಡಿದ ಟ್ರಸ್ಟ್ : ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರ ಮುತುವರ್ಜಿಯಿಂದ, ಈ ವರ್ಷದ ಜೂನ್‌ನಲ್ಲಿ ಟ್ರಸ್ಟ್ ಅಸ್ತಿತ್ವಕ್ಕೆ ಬಂತು. ದೇವದಾಸಿ ಪುನರ್ ವಸತಿ ಯೋಜನೆ ಅಡಿಯಲ್ಲಿ, ಈ ಉದ್ಯಮದಲ್ಲಿ ದುಡಿಯಲು ನಿರ್ಧರಿಸಿದ 15 ಮಹಿಳೆಯರು ಹತ್ತು ದಿನ ತರಬೇತಿ ಪಡೆದರು. ಚಿಕ್ಕಿ ತಯಾರಿಕೆಗೆ ತೊಡಗುವ ಸದಸ್ಯರಿಗೆ ಮಹಿಳಾ ಅಭಿವೃದಿಟಛಿ ನಿಗಮದಿಂದ ಬಡ್ಡಿರಹಿತ ಸಾಲ ಸೌಲಭ್ಯ ನೀಡುವುದಾಗಿ ಘೋಷಿಸಿದ್ದು ಮಾತ್ರವಲ್ಲದೆ, ಚಿಕ್ಕಿಗಳನ್ನು ಕೂಡ್ಲಿಗಿ ತಾಲೂಕಿನ ಮಹಿಳಾ ಪೂರಕ ಪೌಷ್ಠಿಕ ಆಹಾರ ಉತ್ಪಾದನಾ ಮತ್ತು ತರಬೇತಿ ಕೇಂದ್ರದಿಂದ, ತಾಲೂಕಿನ 362 ಅಂಗನವಾಡಿಗಳಿಗೆ ಪೂರೈಸಲು ಜಿಲ್ಲಾಧಿಕಾರಿಗಳು ಆದೇಶಿಸಿದರು.
ಸಿಡಿಪಿಓ ಇಲಾಖೆ ಈ ಘಟಕದ ಅಭಿವೃದ್ಧಿಗೆ ಒಂದು ಲಕ್ಷ ಸಬ್ಸಿಡಿ ಸಾಲವನ್ನೂ ನೀಡಿತು. ಪರಿಣಾಮ, ಚಿಕ್ಕಿ ತಯಾರಿಕೆಯ ಉದ್ಯಮ ಆರಂಭಿಸಲು ಬಂಡವಾಳ ದೊರೆತ ನಂತರದಲ್ಲಿ, ತರಬೇತಿ ಪಡೆದು ಬಂದಿದ್ದ ಮಹಿಳೆಯರಿಗೆ ನಿರಂತರ ದುಡಿಮೆಯ ಕೆಲಸವೂ ಸಿಕ್ಕಿತು. ಆ ಮೂಲಕ ನೆಮ್ಮದಿಯ ಬದುಕಿಗೆ ಮಾಡಿಮಾಡಿಕೊಡುವ ಶಾಶ್ವತ ಭದ್ರತೆಯ ಬಲವೂ ಸಿಕ್ಕಿತು. ಇದೆಲ್ಲಾ ಸಾಧ್ಯವಾದದ್ದು ಟ್ರಸ್ಟ್ ಅಡಿಯಲ್ಲಿ. “ಸರ್, ಮೊದಲೆಲ್ಲ 2-3 ಮನೆಯಲ್ಲಿ ಕಸಮುಸುರಿ, ಸ್ವಂತಕ್ಕೆ ಒಂದೆರಡು ಕುರಿ ಸಾಕಾಣಿಕೆ, ಕೂಲಿ ಕೆಲಸ… ಹೀಗೆ ಹತ್ತು ಹಲವು ಕೆಲಸ ಮಾಡ್ತಿದ್ದೆ. ನಿದ್ದೆ, ನೀರಡಿಕೆ ಎನ್ನದೇ ದುಡಿದ್ರೂ ಹೊಟ್ಟೆ ಅರ್ಧಮುರ್ಧ!. ಈ ಜೀವ ತುಂಬಾ ನೋವು ತಿಂದೈತಿ. ಈಗ ದೇವರು ನಮ್ಮ ಪಾಲಿಗೆ ಕಣ್ಣು ತೆಗ್ಧಾನೆ..’ ಎನ್ನುತ್ತಾ ಹಿರಿ ಜೀವ ಮಲಿಯಮ್ಮ ಚಿಕ್ಕಿಗಳನ್ನು ಚೊಕ್ಕವಾಗಿ ಜೋಡಿಸುತ್ತಿದ್ದರೆ, ಉಳಿದವರು ಅಜ್ಜಿಯ ಮಾತಿಗೆ ಧ್ವನಿಗೂಡಿಸಿದರು.
ಚಿಕ್ಕಿಯಿಂದ ಬದುಕು ಚೊಕ್ಕ..! : ಬೆಲ್ಲದ ಪಾನಕ ಮಾಡುವುದು, ಶೇಂಗಾ ಹುರಿಯುವುದು, ಚಿಕ್ಕಿ ತಯಾರಿಸುವುದು, ಪ್ಯಾಕಿಂಗ್.. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಕೆಲಸವನ್ನು ವಹಿಸಲಾಗಿದೆ. ತಲಾ ಅರ್ಧ ಕ್ವಿಂಟಲ್ ಬೆಲ್ಲ ಮತ್ತು ಶೇಂಗಾದಿಂದ ಹೆಚ್ಚುಕಮ್ಮಿ 145 ಪ್ಯಾಕ್ ಚಿಕ್ಕಿ ಆಗುತ್ತವೆ. ದಿನವೊಂದಕ್ಕೆ ಸರಾಸರಿ 350 ಪ್ಯಾಕ್ ರೆಡಿ ಮಾಡ್ತಾರೆ. (45 ಪೀಸ್‌ಗೆ ಒಂದು ಪ್ಯಾಕ್). ಒಂದು ಚಿಕ್ಕಿ ಪೀಸ್ ಬೆಲೆ 1.50 ರೂ, ಒಂದು ಪ್ಯಾಕ್ ಬೆಲೆ 67.50 ರೂ. ಈ ದರವನ್ನು ಜಿಲ್ಲಾಡಳಿತ ನಿಗದಿಪಡಿಸಿದೆ. ಚಿಕ್ಕಿ ತಯಾರಿಸುವಾಗ ಮತ್ತು ಪ್ಯಾಕಿಂಗ್ ಮಾಡುವಾಗ ಮೊದಮೊದಲು ಪೆಟ್ಟು ತಿಂದರೂ, ತಯಾರಿಕೆಯ “ಪಟ್ಟುಗಳು’ ಅರ್ಥವಾದ ಮೇಲೆ ಈ ಹೆಂಗಸರು ಪ್ಯಾಕ್ ಮೇಲೆ ಪ್ಯಾಕ್ ಲೆಕ್ಕದಲ್ಲಿ ಚಿಕ್ಕಿಗಳನ್ನೂ ಪೇರಿಸಿಡುತ್ತಿದ್ದಾರೆ.
ಈ ಟ್ರಸ್ಟ್, ಕಳೆದ ನಾಲ್ಕು ತಿಂಗಳಲ್ಲಿ ಹೆಚ್ಚುಕಮ್ಮಿ ಏಳು ಲಕ್ಷ ಪೀಸ್ ಚಿಕ್ಕಿಗಳನ್ನು ತಯಾರಿಸಿ, ಅಂದಾಜು ಎರಡು ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದೆ. “ಚಿಕ್ಕಿ ತಯಾರಿಕಾ ಘಟಕವನ್ನು ಇನ್ನೂ ಸಾಕಷ್ಟು ಬಲಪಡಿಸಬೇಕಿದೆ. ಕೆಲವು ಹೊಸ ಯಂತ್ರೋಪಕರಣಗಳ ಅಗತ್ಯ ಇದೆ. ಹೀಗಾಗಿ ಬಹುತೇಕ ಲಾಭಾಂಶವನ್ನು ಘಟಕದ ಬಲವರ್ಧನೆಗೆ ಮೀಸಲಿಡುತ್ತಿದ್ದೇವೆ…’ ಎನ್ನುತ್ತಾರೆ ದೇವದಾಸಿ ವಿಮೋಚನಾ ಸಂಘದ ತಾಲೂಕು ಅಧ್ಯಕ್ಷೆ ಕನಿಕೇರಿ ವೆಂಕಮ್ಮ. ಒಟ್ಟಿನಲ್ಲಿ, ಚಿಕ್ಕಿಯಿಂದ ಜನರ ಬಾಯಿ ಸಿಹಿಯಾಗುತ್ತಿದೆ. ಅದೇ ಸಮಯಕ್ಕೆ ದೇವದಾಸಿ ಮಹಿಳೆಯರ ಬದುಕೂ ಚೊಕ್ಕವಾಗುತ್ತಿದೆ.
ಸಾಲ ಬೇಗ ಸಿಗಲಿ.. : ಯಾವುದೇ ಒಂದು ಉದ್ಯಮ ಚೆನ್ನಾಗಿ ನಡೆಯಬೇಕು ಅಂದರೆ ಅದಕ್ಕೆ ಹೆಚ್ಚಿನ ಬಂಡವಾಳದ ಬೆಂಬಲ ಅಗತ್ಯವಾಗಿ ಬೇಕಾಗುತ್ತದೆ. ಲಭ್ಯವಿದ್ದ ಅಲ್ಪ ಪರಿಕರಗಳಲ್ಲಿ ಆರಂಭಿಸಲಾದ ಚಿಕ್ಕಿ ಉತ್ಪಾದನಾ ಘಟಕ, ಇಲ್ಲಿಯವರಿಗೆ ನಡೆದಿದ್ದು ಒಂದು ಲಕ್ಷ ಸಬ್ಸಿಡಿ ಸಾಲ ಮತ್ತು ದೇವದಾಸಿಯರು ಕೊಟ್ಟಿರುವ ಅವರ ಸ್ವಂತ ಹಣದಿಂದ!.”ಘಟಕವನ್ನು ಸಾಲಸೋಲ ಮಾಡಿ ನಡೆಸ್ತಿದೀವಿ.ಎಷ್ಟು ಅಂತಾ ಹಣ ಹಾಕೋದು? 15 ಲಕ್ಷ ಸಾಲವನ್ನು ಸಂಬಂಧಪಟ್ಟ ಇಲಾಖೆಯವರು ಬೇಗ ಕೊಡಲಿ. ಇಲ್ಲದಿದ್ದರೆ ನಮ್ಮ ಬದುಕು ಮತ್ತೆ ಕಷ್ಟಕ್ಕೆ ಸಿಕ್ಕಿಕೊಳ್ಳುತ್ತದೆ. ಹಾಗೇನಾದರೂ ಆಗಿಬಿಟ್ಟರೆ,ಇಲ್ಲಿಯವರೆಗೆ ಕಂಡಿರುವ ಕನಸುಗಳು ನುಚ್ಚುನೂರು ಆಗುತ್ತವೆ..’ ಎನ್ನುತ್ತಾರೆ ಟ್ರಸ್ಟ್ ನ ಸದಸ್ಯೆ ಗಂಗಮ್ಮ.
ಇಷ್ಟು ದಿನ ವೈಯುಕ್ತಿಕವಾಗಿ ಸಬ್ಸಿಡಿ ಸಾಲ ನೀಡಲಾಗುತ್ತಿತ್ತು. ಇದೇ ಮೊದಲಿಗೆ ಒಕ್ಕೂಟಕ್ಕೆ ಸಾಲ ನೀಡಬೇಕಿರುವ ಕಾರಣ ವಿಳಂಬ ಆಗಿದೆ. ದೇವದಾಸಿ ಮಹಿಳೆಯರ ಸೇವಾ ಟ್ರಸ್ಟ್ ಗೆ ಸಾಲ ನೀಡುವ ಪ್ರಕ್ರಿಯೆ ಜಾರಿಯಲ್ಲಿದ್ದು, ಆದಷ್ಟು ಬೇಗನೆ ಸಾಲ ಮಂಜೂರಾಗುತ್ತದೆ..’ ಎನ್ನುತ್ತಾರೆ ಜಿಲ್ಲಾ ಮಹಿಳಾ ಅಭಿವೃದಿಟಛಿ ನಿಗಮದ ನಿರೀಕ್ಷಕಿ, ನಾಗವೇಣಿ.
ಚಿಕ್ಕಿಗೆ ಫುಲ್ ಮಾರ್ಕ್ಸ್ ..! : ಇಲ್ಲಿ ತಯಾರಾಗುವ ಚಿಕ್ಕಿಗಳು ತುಂಬಾ ರುಚಿಕಟ್ಟು, ಅಚ್ಚುಕಟ್ಟಾಗಿವೆ. ಈ ಕಾರಣಕ್ಕೆ ಅಂಗನವಾಡಿ ಆಚೆಗೂ ಡಿಮ್ಯಾಂಡ್ ಇದೆ. “ಇತ್ತೀಚೆಗೆ ಚಿಕ್ಕಿ ಘಟಕದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲ್ಲಿ ತಯಾರಿಸಲಾದ ಚಿಕ್ಕಿ ಸವಿದ ಜಿಲ್ಲಾಧಿಕಾರಿಗಳು ಫುಲ್ ಮಾರ್ಕ್ಸ್ ಕೊಟ್ರಾ! ಪೂರೈಕೆ, ಗುಣಮಟ್ಟ, ರುಚಿ… ಹೀಗೆ ಎಲ್ಲದ್ರಲ್ಲೂ ನಮ್ದೇ ನಂಬರ್ ಒನ್ ಎಂದು ಅಭಿನಂದಿಸಿದರು. ಹೀಗಾಗಿ ಸ್ಥಳದಲ್ಲೇ ಸಿಡಿಪಿಓ ಇಲಾಖೆಯ ಉಪ ನಿರ್ದೇಶಕರು- “ಇನ್ನುಮುಂದೆ ಸಂಡೂರು ತಾಲೂಕಿನ ಅಂಗನವಾಡಿಗಳಿಗೆ ನೀವೇ ಚಿಕ್ಕಿ ಸಪ್ಲೆç ಮಾಡಬೇಕು ಅಂದುಬಿಟ್ರಾ..’ ಎಂದು ವೆಂಕಮ್ಮ ಖುಷಿಯಿಂದ ಹೇಳಿಕೊಳ್ಳುತ್ತಾರೆ. ಒಟ್ಟಿನಲ್ಲಿ, ಈ ಉದ್ಯಮದಲ್ಲಿ ಎಲ್ಲರೂ ಒಟ್ಟಾಗಿ ಶ್ರಮ ಹಾಕಿದರೆ, ತಮ್ಮೆಲ್ಲರ ಭವಿಷ್ಯ ಸುಂದರ ಆಗುತ್ತೆ ಎನ್ನುವ ಸ್ಪಷ್ಟ ಚಿತ್ರಣ ಇವರಿಗೆ ಸಿಕ್ಕಿದೆ. ವೆಂಕಮ್ಮ ಅವರ ಮೊ.ನಂ.7483518490.
ಸ್ವರೂಪಾನಂದ ಕೊಟ್ಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.