ಸಾಲಂ ಶರಣಂ ಸತ್ಯಾಮಿ, ಧರ್ಮರಾಯರಾಗುವ ಮೊದಲು ಯೋಚಿಸಿ
Team Udayavani, Jul 24, 2017, 7:05 AM IST
ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅನ್ನೋದು ಕೇವಲ ಗಾದೆಯಲ್ಲ. ಅದು ಮನೆ ಕಟ್ಟೋರ ಧ್ಯೇಯವಾಕ್ಯ.
ಮನೆ ಕಟ್ಟಬೇಕಾದರೆ ಸಾಲ ಮಾಡಲೇಬೇಕು. ನೂರಕ್ಕೆ ಶೇ.95ರಷ್ಟು ಜನ ಸಾಲದಿಂದಲೇ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳುವದು. ಉಳಿದ ಶೇ.5ರಷ್ಟು ಮಂದಿ ಮಾತ್ರ ಕೈಯಲ್ಲಿ ದುಡ್ಡು ಹಿಡಿದು ಸಾಲವಿಲ್ಲದೇ ಮನೆ ಕಟ್ಟುವುದು. ಸಾಲ ಮಾಡುವ ಆತುರದಲ್ಲಿ ನಾವೆಲ್ಲ ಒಂದಷ್ಟು ತಪ್ಪುಗಳನ್ನೂ ಮಾಡುತ್ತೇವೆ. ಆಮೇಲೆ ಅದರ ಪರಿಣಾಮವನ್ನು ಜೀವನ ಪೂರ್ತಿ ಅನುಭವಿಸುತ್ತೇವೆ.
ಒಂದೇ ಸಾಲ ಸಾಕು
ಮಧ್ಯಮವರ್ಗದ ಜನರ ದೊಡ್ಡ ಗುರಿಯಾವುದು? ಸೈಟು ಕೊಂಡು ಮನೆಕಟ್ಟುವುದು. ಈ ಆಸೆ ಈಡೇರಬೇಕಾದರೆ ಮನೆ ಸಾಲ ಮಾಡುವ ಮೊದಲು ಇತರೆ ಸಾಲಗಳನ್ನು ತೀರಿಸಿ ಕೊಳ್ಳಿ. ನಿಮ್ಮ ಆದಾಯದ ಒಳ ಹರಿವು ಕ‚ಡಿಮೆಯಾಗುತ್ತದೆ. ಹೀಗೆ ಕಡಿಮೆ ಆದರೆ ಬ್ಯಾಂಕ್‌ಗಳು ಸಾಲ ಕೊಡಲು ಹಿಂದೆ, ಮುಂದೆ ನೋಡುತ್ತವೆ. ಇದರಿಂದ ನಿಮ್ಮ ಸಾಲ ಪಡೆಯುವ ಯೋಗ್ಯತೆ ಅಥವಾ ಅರ್ಹತೆಗೆ ತೀವ್ರತರವಾಗಿ ಪೆಟ್ಟು ಬೀಳುತ್ತದೆ. ನೀವು ಈ ಮೊದಲು ಪಡೆದ ಸಾಲಗಳನ್ನು ತೀರಿಸಿದ್ದರೆ ಮತ್ತೆ ಸಾಲ ಬೇಗ ಸಿಗುತ್ತದೆ. ಬ್ಯಾಂಕ್‌ಗಳು ಸಾಲ ಕೊಡಬೇಕಾದರೆ ಆದಾಯ, ಮರುಪಾವತಿ ತಾಕತ್ತು, ಇತರೆ ಸಾಲಗಳು ಇದ್ದರೆ ಇವರು ಹೇಗೆ ಸಾಲ ತೀರಿಸಿಯಾರು? ಅನ್ನೋದನ್ನು ಮೊದಲು ಲೆಕ್ಕ ಹಾಕುತ್ತದೆ. ಈ ಕಾರಣದಿಂದ ಸಾಲದ ಕಾರ್ಡುಗಳನ್ನು ಹೆಚ್ಚಾಗಿ ಬಳಸುವುದು ಬೇಡ. ನಿಮಗೆ ಒಂದು ಸಾರಿ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಗೊತ್ತಾದರೆ ಬ್ಯಾಂಕ್‌ಗಳು ಕ್ಯಾರೇ ಅನ್ನೋದಿಲ್ಲ. ತಿಳಿದಿರಲಿ.
ಸಾಲ ಹೇಗೆ ಸಿಗುತ್ತೆ?
ನೀವು ಸಾಲ ಮಾಡುವ ಮೊದಲು ತಿಳಿದು ಕೊಳ್ಳಬೇಕಾದದ್ದು ಬ್ಯಾಂಕ್‌ಗಳು ಸಾಲವನ್ನು ಮಾರುಕಟ್ಟೆ ಬೆಲೆಯ ಆಧಾರದ ಮೇಲೆ ಸಾಲ ನೀಡುತ್ತವೆಯೋ ಅಥವಾ ಸ್ವತ್ತು ನಿರ್ದೇಶಿತ ಬೆಲೆ ಆಧಾರದ ಮೇಲೆ ಸಾಲ ನೀಡುತ್ತವೆಯೋ ಎನ್ನುವುದು. ಮಾರುಕಟ್ಟೆ ಮತ್ತು ಸರ್ಕಾರ ನಿಗದಿ ಪಡಿಸಿದ ಬೆಲೆಯ ನಡುವೆ ಶೇ. 100ರಷ್ಟು ವ್ಯತ್ಯಾಸವೂ ಇರುತ್ತದೆ. ಸರ್ಕಾರ ನಿರ್ದೇಶಿತ ಬೆಲೆಯ ಯಾವತ್ತೂ ಮಾರುಕಟ್ಟೆ ಬೆಲೆಗಿಂತ ಕಡಿಮೆ ಇರುತ್ತದೆ. ಉದಾಹರಣೆಗೆ, ನೀವು ಮನೆ ಕೊಳ್ಳುತ್ತಿದ್ದೀರಿ ಅಂದುಕೊಳ್ಳಿ. ಅದರ ಬೆಲೆ 25 ಲಕ್ಷ . ಆದರೆ ಸರ್ಕಾರಿ ದಾಖಲೆಯಲ್ಲಿರುವ ಬೆಲೆ 12 ಲಕ್ಷವಿರುತ್ತದೆ. ಬ್ಯಾಂಕ್‌ಗಳು ಸಾಲ ಕೊಡಬೇಕಾದರೆ ಸರ್ಕಾರಿ ನಿರ್ದೇಶಿತ ಬೆಲೆಯಿಂದ 12ಲಕ್ಷದಲ್ಲಿ ಶೇ. 80ರಷ್ಟು ಸಾಲ ನೀಡುತ್ತವೆ ಎಂದಿಟ್ಟುಕೊಳ್ಳೋಣ. ಅಂದರೆ ನಿಮಗೆ ಸಾಲವಾಗಿ ಸಿಗುವುದು 9.6ಲಕ್ಷ ಮಾತ್ರ. ಅಂದರೆ ಉಳಿಕೆ ಹಣವನ್ನು ನೀವು ಹೊಂದಿಸಬೇಕಾಗುತ್ತದೆ.
ಸರಿಯಾಗಿ ಹಿಂಪಾವತಿ ಮಾಡಿ
ಇವತ್ತು ಮಾಡಿದ್ದು ತಪ್ಪಿಗೆ ನಾಳೆಯೇ ಶಿಕ್ಷೆ ಅಂತಾರಲ್ಲ, ಹಾಗೇನೇ ಸಾಲದ ವಿಚಾರದಲ್ಲೂ. ನಿಮಗೆ ಸಾಲ ಸಿಕ್ಕಿದೆ, ಮನೆ ಕೊಂಡಿದ್ದೀರಿ. ಸಂತೋಷ. ಆದರೆ ಮರುಪಾವತಿ ಮಾಡಬೇಕಾದರೆ ಹುಷಾರು. ಬ್ಯಾಂಕ್ ನಿಗಧಿ ಮಾಡಿರುವ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವುದು ಒಳಿತು. ಏಕೆಂದರೆ ಎರಡನೆಯ ಬಾರಿ ಅಥವಾ ಬೇರೆ ವಿಚಾರವಾಗಿ ಲೋನ್ ಪಡೆಯ ಬೇಕಾದಾಗ ನಿಮ್ಮ ಉದಾಸೀನ ಕೌಂಟ್ ಆಗುತ್ತದೆ. ಮರುಪಾವತಿ ಮೊತ್ತ ಸಣ್ಣದಾದರೂ ನೀವು ಸಮಯಕ್ಕೆ ಸರಿಯಾಗಿ ಹಣ ಕಟ್ಟುತ್ತಿದ್ದೀರಾ? ಎಷ್ಟು ಡ್ನೂ ಮಾಡಿದ್ದೀರ? ಬಡ್ಡಿಗೆ ಬಡ್ಡಿ ಏನಾದರೂ ಕಟ್ಟಿದ್ದೀರಾ? ಅವಧಿಗೆ ಮೊದಲೇ ಮರುಪಾವತಿ ಮಾಡಿದ್ದೀರಾ ಹೀಗೆ ಹಲವಾರು ಅಂಶಗಳನ್ನು ಗಣನೆಗೆ ತೆಗೆದು ಕೊಳ್ಳುತ್ತದೆ.
ಗಮನವಿರಲಿ
ನಿಮ್ಮ ಅಕೌಂಟ್ ಡೀಟೇಲ್ಸ್ ಸರಿಯಾಗಿ ನಿರ್ವಹಿಸಿ. ಅನಾವಶ್ಯಕವಾಗಿ ಬೇರೆಯವರ ಹಣವನ್ನು ನಿಮ್ಮ ಖಾತೆಯಲ್ಲಿ ಇಡುವುದು, ಆ ಮೂಲಕ ವ್ಯವಹಾರ ಮಾಡುವುದು ಇವೆಲ್ಲದರಲ್ಲಿ ಎಚ್ಚರವಿರಲಿ. ನೀವು ಸಾಲಕ್ಕೆ ಅರ್ಜಿ ಹಿಡಿದು ನಿಂತಾಗ ಬ್ಯಾಂಕ್‌ಗಳು ನಿಮ್ಮ 6 ತಿಂಗಳ ವಹಿವಾಟನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಬಂದ ಹಣ, ಖರ್ಚು ಮಾಡಿದ ಹಣಕ್ಕೂ ಲೆಕ್ಕ ಕೊಡಬೇಕಾಗುತ್ತದೆ. ನಿಮ್ಮ ಆದಾಯವನ್ನು ಎಲ್ಲೆಲ್ಲಿ? ಹೇಗೇಗೆ? ಖರ್ಚು ಮಾಡುತ್ತಿದ್ದೀರಿ ಅನ್ನೋದು ಮೊದಲು ಬ್ಯಾಂಕ್‌ಗಳಿಗೆ ಮನವರಿಕೆಯಾಗಬೇಕು. ಬ್ಯಾಂಕಿಗೆ ಅನುಮಾನ ಬಂದರೆ ಆದಾಯದ ಮೂಲ ಹೇಗೆ, ಎತ್ತ ಎಂಬ ಪ್ರಶ್ನೆಯನ್ನು ತಪ್ಪದೇ ಕೇಳುತ್ತದೆ. ಆಗ ಎಲ್ಲವನ್ನೂ ವಿವರಿಸಬೇಕು. ಸ್ನೇಹಿತರು ಪ್ರತಿ ತಿಂಗಳೂ ಸಾಲಕ್ಕೆ ಹಣ ಕಳುಹಿಸಲು ಹೇಗೆ ಸಾಧ್ಯ? ಹೀಗೆ ಕೇಳಿದಾಗ ಉತ್ತರಿಸುವುದು ಕಷ್ಟವಾಗುತ್ತದೆ.
ಜಾಬು ಜವಾಬು
ಸಾಲದ ಪ್ರಮಾಣ ಹಿಗ್ಗಿಸುವ ತಾಕತ್ತು ಇರುವುದು ನಿಮ್ಮ ಆದಾಯಕ್ಕೆ ಮಾತ್ರ. ಆದಾಯ ಹೆಚ್ಚಿದಂತೆ ಸಾಲ ಪಡೆಯುವ ಸಾಮರ್ಥಯ ಕೂಡ ಹೆಚ್ಚುತ್ತದೆ. ಇವೆಲ್ಲವೂ ಸಾಲಗಾರರಿಗೆ ಪ್ಲಸ್ ಪಾಯಿಂಟ್‌ಗಳೇ ಆಗಿವೆ. ಈ ಕಾರಣಕ್ಕೆ ಆಗಾಗ ಉದ್ಯೋಗ ಬದಲಿಸುವುದು ಸೂಕ್ತ ಎನಿಸುತ್ತದೆ. ಆದರೆ ಸಾಲಕ್ಕಾಗಿ ನೀವು ತೋರಿಸಿರುವ ಆದಾಯವನ್ನೂ, ಬರುತ್ತಿರುವ ಆದಾಯವನ್ನೂ ಲೆಕ್ಕ ಮಾಡಿದಾಗ, ಬಿಟ್ಟು ಬಂದ ಉದ್ಯೋಗದಲ್ಲಿ ಬರುತ್ತಿದ್ದ ಸಂಬಳಕ್ಕೂ, ಈಗಿನ ಸಂಬಳಕ್ಕೂ ತಾಳೆ ಮಾಡಿದಾಗ ತಿಂಗಳ ಆದಾಯ ಕಡಿಮೆಯಾದರೆ ಸಾಲ ಸಿಗುವ ಪ್ರಮಾಣ ಕೂಡ ಕಡಿಮೆಯಾಗುತ್ತದೆ ಎಚ್ಚರ. ಉದ್ಯೋಗ ಬದಲಿಸಿದಂತೆ ಆದಾಯ ಏರುತ್ತಿರಬೇಕು. ಒಂದು ಪಕ್ಷ ಉದ್ಯೋಗ ಬದಲಿಸಿ ಎರಡು ತಿಂಗಳಾದರೆ, ಬಿಟ್ಟ ಉದ್ಯೋಗದ ಆದಾಯ ಸರ್ಟಿಫಿಕೇಟು ಬೇಕಾಗುತ್ತದೆ.
ಜಾಮೀನು ಹಾಕ್ತೀರಾ?
ಬದುಕಲ್ಲಿ ಸಾಲ ಮಾಡಲೇಬೇಕಾಗುತ್ತದೆ. ಹೀಗೆ ಮಾಡುವುದಕ್ಕೂ ಮೊದಲು ಬೇರೆ ಸಾಲಗಾರರಿಗೆ ಜಾಮೀನು ಸಹಿ ಹಾಕಬೇಡಿ. ನಿಮ್ಮ ಸಾಲದ ಸಾಮರ್ಥಯ ಕುಂದಿಸಲು ಇದು ನೆರವಾಗುತ್ತವೆ. ನಿಮಗೇ ಸಾಲ ಬೇಕಾದಲ್ಲಿ ಸಾಕ್ಷಿ ಸಹಿ ಹಾಕಿದ್ದರೆ, ನೀವೇ ಸಾಲ ಮಾಡಿದಂತೆ ಬ್ಯಾಂಕ್‌ಗಳು ಪರಿಗಣಿಸುತ್ತವೆ. ಒಂದು ಪಕ್ಷ ಜಾಮೀನು ಹಾಕಿ /ಸಂಬಂಧಿ ಸಾಲ ಮರುಪಾವತಿಸದೇ ಇದ್ದರೆ, ಅದರ ಹೊಣೆಗಾರಿಕೆ ಕೂಡ ನಿಮ್ಮ ಮೇಲೆ ಬೀಳುತ್ತದೆ. ನೀವು ಸಾಲ ಕೇಳಲು ಹೋದಾಗ ಇವೆಲ್ಲವೂ ಲೆಕ್ಕಕ್ಕೆ ಬರುತ್ತದೆ ಹುಷಾರ್. ಧರ್ಮರಾಯರಾಗುವ ಮೊದಲು ಯೋಚಿಸಿ.
– ಗೂಳಿ ಚಿನ್ನಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.