ಮನೆಯೊಳಗೇ ಬೆಳೆಯಲಿ ದುಡ್ಡಿನ ಗಿಡ
Team Udayavani, Apr 22, 2019, 6:00 AM IST
‘ನನ್ನ ಮನೆಯಾಕೆಗೆ ಸರಿಯಾಗಿ ದುಡ್ಡು ಎಣಿಸಲಿಕ್ಕೂ ಬರಲ್ಲ’… ಇದು ಹೆಚ್ಚಿನ ಗಂಡಸರ ಮಾತು. ಆದರೆ ನೆನಪಿರಲಿ: ಹಣ ಎಣಿಸಲು ಬಾರದ ಮಹಿಳೆಯೂ ಪೈಸೆಗೆ ಪೈಸೆ ಜೋಡಿಸಿ ಗಂಡನಿಗೆ ಗೊತ್ತಾಗದಂತೆ ಚೀಟಿ ಕಟ್ಟುತ್ತಾಳೆ. ಸೀರೆ ಖರೀದಿಸುತ್ತಾಳೆ. ಮನೆಗೆ ಅಗತ್ಯವಿರುವ ಪಾತ್ರೆ-ಪಗಡ ಕೊಂಡು ಕೊಳ್ಳುತ್ತಾಳೆ.
ಸಂಸಾರ ಸಮೇತ ಬಂಧುಗಳ ಮನೆಗೆ ಹೋಗುತ್ತೀರಿ. ಆಗ, ಮನೆಯ ಹೆಂಗಸರು, ಬಹಳ ಸೂಕ್ಷ್ಮವಾಗಿ ಬಂಧುಗಳ ಮನೆಯನ್ನು ಗಮನಿಸುತ್ತಾರೆ. ಅವರ ಮನೆಯಲ್ಲಿ ಏನೇನಿದೆ? ಯಾವ ಕಾರಣಕ್ಕೆ ಅವರ ಮನೆ ಹೆಚ್ಚಿನ “ಲುಕ್’ ಪಡೆದುಕೊಂಡಿದೆ? ಅವರಿಗಿಂತ ನಾವು ಯಾವ್ಯಾವ ರೀತಿಯಲ್ಲಿ ಕಡಿಮೆ “ಲೆವೆಲ್’ ಹೊಂದಿದ್ದೇವೆ ಎಂದು ಲೆಕ್ಕ ಹಾಕುತ್ತಾರೆ.
ಹೇಗಾದರೂ ಮಾಡಿ, ಬಂಧುಗಳ ಮನೆಯಲ್ಲಿ ಇರುವಂಥ ವಸ್ತುಗಳನ್ನು ನಾವು ಹೊಂದಬೇಕು ಎಂದು ಆಸೆಪಡುತ್ತಾರೆ. ಅಲ್ಲಿಂದ ವಾಪಸಾಗಿ ಎರಡು ಮೂರು ದಿನ ಕಳೆದ ಮೇಲೆ, ಒಂದು ದಿನ ಗಂಡನ ಎದುರು ನಿಂತು “ನೋಡಿ, ಮನೆಯಲ್ಲಿ ಓವನ್ ಇಲ್ಲ, ವಾಟಲ್ ಪ್ಯೂರಿಫೈಯರ್ ಇಲ್ಲ, ಆಕ್ವೇರಿಯಂ ಇಲ್ಲ. ಮೊನ್ನೆ ಹೋಗಿದ್ದೆವಲ್ಲ, ಅವರಿಗೂ ನಿಮಗೆ ಬರುವಷ್ಟೇ ಸಂಬಳವಂತೆ. ಹಾಗಿದ್ದರೂ ಅವರು ಎಲ್ಲವನ್ನೂ ಹೊಂದಿಸಿಕೊಂಡಿದ್ದಾರೆ. ನಮಗೂ ಅವೆಲ್ಲಾ ವಸ್ತುಗಳ ಅಗತ್ಯವಿದೆ. ಮನೆ ಅಂದಮೇಲೆ ಅವೆಲ್ಲಾ ಇರಬೇಕು. ದುಡ್ಡು ಹೊಂದಿಸಿ ತೆಗೆದುಕೊಡಿ’ ಅನ್ನುತ್ತಾರೆ.
ಬೇಡ ಅನ್ನಬೇಡಿ
ಮನೆಯೊಳಗೆ ಕಿರಿಕಿರಿಯ ಕಿಡಿ ಹೊತ್ತಿಕೊಳ್ಳುವುದೇ ಇಲ್ಲಿಂದ. ಬಹುಪಾಲು ಗಂಡಸರಿಗೆ, ಹೆಂಗಸರು ಅನಗತ್ಯ ವಸ್ತುಗಳಿಗಾಗಿ ಪೀಡಿಸುತ್ತಾರೆ ಎಂಬ ಪೂರ್ವಾಗ್ರಹ ಇರುತ್ತದೆ. ಬಂಧುಗಳ ಮನೆಯಲ್ಲಿ ಓವನ್ ಇದೆ ಅಂದಮಾತ್ರಕ್ಕೆ ಅದು ನಮ್ಮ ಮನೆಯಲ್ಲೂ ಇರಬೇಕೆಂದು ಬಯಸುವುದು ನ್ಯಾಯವಾ? ಅದಕ್ಕೆಲ್ಲಾ ದುಡ್ಡು ಬೇಡವಾ? ಒಂದು ಬ್ರಾಂಡೆಡ್ ಕಂಪನಿಯ ಓವನ್ ಖರೀದಿಸಬೇಕು ಅಂದರೆ ಕಡಿಮೆ ಅಂದರೂ 10 ಸಾವಿರ ರುಪಾಯಿ ಬೇಕಾಗುತ್ತದೆ. ಅಷ್ಟೊಂದು ಹಣ ಹೊಂದಿಸುವುದು ಹೇಗೆ? ಮಧ್ಯಾಹ್ನದ ಅನ್ನ-ಸಾಂಬಾರ್ ಅಥವಾ ಪಲ್ಯವನ್ನು ಬಿಸಿ ಮಾಡುವ ಒಂದೇ ಉಪಯೋಗ ತಾನೇ ಓವನ್‌ನಿಂದ ಆಗುವುದು? ಅದರ ಬದಲು ಸ್ಟವ್ ಮೇಲಿಟ್ಟೇ ಬಿಸಿ ಮಾಡಿಕೊಳ್ಳಬಹುದು. ಆ ಮೂಲಕ, ಅನಗತ್ಯ ಖರ್ಚಿನಿಂದ ತಪ್ಪಿಸಿಕೊಳ್ಳಬಹುದು. ಹೆಚ್ಚಿನ ಗಂಡಸರು ಯೋಚಿಸುವುದೇ ಹೀಗೆ.
ಪರಿಹಾರ ಖಂಡಿತ ಇದೆ
ಈ ಯೋಚನೆಯೆಲ್ಲವೂ ನಿಜ. ಅಡುಗೆ ಮನೆಯಲ್ಲಿ ತಂಗಳು ಅನ್ನಿಸಿದ ಪದಾರ್ಥವನ್ನು ಬಿಸಿ ಮಾಡುವ ಕೆಲಸವಷ್ಟೇ ಓವನ್‌ನಿಂದ ಆಗುವುದು. ಆದರೆ, ಅದನ್ನು ಪ್ರಯೋಜನಕ್ಕೆ ಬಾರದ ವಸ್ತು ಎಂದು ಒಪ್ಪಲು ಯಾವ ಮಹಿಳೆಯೂ ಸಿದ್ಧವಿಲ್ಲ. ಮನೆಯಲ್ಲಿ ಆಕ್ವೇರಿಯಂ ಇದ್ದರೆ ಅದರಿಂದ ಮನೆಯ ಲುಕ್ ಹೆಚ್ಚುತ್ತದೆ. ಬೇಸರ ಅನ್ನಿಸಿದಾಗ ರಿಲ್ಯಾಕ್ಸ್ ಆಗಲಿಕ್ಕೆ ಆಕ್ವೇರಿಯಂನಲ್ಲಿ ಆಡುವ ಮೀನುಗಳ ನಲಿದಾಟವೇ ಕಾರಣವಾಗುತ್ತದೆ. ಅಯ್ಯೋ, ಇದೆಲ್ಲ ಅಗತ್ಯ ಅನ್ನುವುದಾದರೆ, ದುಡ್ಡು ಹೊಂದಿಸುವುದು ಹೇಗೆ ಮಾರಾಯರೇ? ಎಂದು ಕೇಳುತ್ತೀರಿ ಅಲ್ಲವಾ? ಅದಕ್ಕೆ ಇಲ್ಲಿ ಸರಳ ಪರಿಹಾರವಿದೆ.
ಏನು ಮಾಡಬೇಕು ಗೊತ್ತೆ? ಮನೆಗೆ ಮೈಕ್ರೋ ಓವನ್, ಆಕ್ವೇರಿಯಂ ಅಥವಾ ವಾಟರ್ ಪ್ಯೂರಿಫೈಯರ್‌ನಂಥ ವಸ್ತುಗಳು ಬೇಕೆಂದು ಕೇಳುತ್ತಾರಲ್ಲ. ಆಗ, ಈ ವಸ್ತುಗಳ ಖರೀದಿಯ ಹೊಣೆಯನ್ನು ಹೆಂಗಸರಿಗೇ ಬಿಟ್ಟು ಬಿಡಬೇಕು. “ನೋಡೂ, ಆ ವಸ್ತುನ ಖಂಡಿತ ತಗೊಳ್ಳೋಣ. ಅದಕ್ಕೆ ಅಂತಾನೇ ಒಂದಷ್ಟು ಹಣ ಜೋಡಿಸೋಣ. ಮೊದಲು 500 ರುಪಾಯಿಗಳನ್ನು ಬೋಣಿಗೆಯ ರೂಪದಲ್ಲಿ ನಾನೇ ಹಾಕ್ತೇನೆ. ಐದು ತಿಂಗಳ ನಂತರ ಮತ್ತೆ 1000 ರುಪಾಯಿ ಕೊಡ್ತೇನೆ. ಪ್ರತಿ ತಿಂಗಳೂ ಸ್ವಲ್ಪ ಸ್ವಲ್ಪ ಹಣ ಉಳಿತಾಯ ಮಾಡಿ ಅಗತ್ಯವಿರುವಷ್ಟು ಹಣವನ್ನು ಜೋಡಿಸುವುದು ನಿನ್ನ ಜವಾಬ್ದಾರಿ. ಒಂದೇ ಬಾರಿಗೆ ಎಂಟು-ಹತ್ತು ಸಾವಿರ ರುಪಾಯಿ ಹೊಂದಿಸಲು ನನಗಂತೂ ಸಾಧ್ಯವಿಲ್ಲ. ಹೇಗಿದ್ದರೂ ಮನೆ ಖರ್ಚಿಗೆಂದು ಪ್ರತಿ ತಿಂಗಳೂ ಹಣ ಕೊಡ್ತಾ ಇರುತ್ತೇನೆ. ಅದರಲ್ಲಿ ತಿಂಗಳಿಗೆ ಸಾವಿರ ರುಪಾಯಿ ಉಳಿಸಿದರೂ ಐದು ತಿಂಗಳಿಗೆ ಐದು ಸಾವಿರ ಉಳಿಸಬಹುದು. ಈಗ ಬೋಣಿಯ ರೂಪದಲ್ಲಿ 500 ರೂ. ಹಾಕಿದ್ದೇನೆ. ಐದು ತಿಂಗಳ ನಂತರ, ಮತ್ತೆ 1000 ರೂ. ಕೊಡುತ್ತೇನೆ. ಅಂದು ನೋಡಿ, ಕಾಸು ಉಳಿಸುವ ಕೆಲಸ ಮನೆಯೊಳಗೆ ಸದ್ದಿಲ್ಲದೇ ಆರಂಭವಾಗುತ್ತದೆ.
ಮನೆಯೊಡತಿಗೆ ಗೊತ್ತು
“ಅಯ್ಯೋ ಬಿಡ್ರಿ, ಅವಳಿಗೇನು ಗೊತ್ತು? ಅವಳಿಗೆ ಸರಿಯಾಗಿ ದುಡ್ಡು ಎಣಿಸಲಿಕ್ಕೂ ಬರಲ್ಲ’… ಇದು ಹೆಚ್ಚಿನ ಗಂಡಸರ ಮಾತು. ಆದರೆ ನೆನಪಿರಲಿ: ಹಣ ಎಣಿಸಲು ಬಾರದ ಮಹಿಳೆಯೂ ಪೈಸೆಗೆ ಪೈಸೆ ಜೋಡಿಸಿ ಗಂಡನಿಗೆ ಗೊತ್ತಾಗದಂತೆ ಚೀಟಿ ಕಟ್ಟುತ್ತಾಳೆ. ಸೀರೆ ಖರೀದಿಸುತ್ತಾಳೆ. ಮನೆಗೆ ಅಗತ್ಯವಿರುವ ಪಾತ್ರೆ-ಪಗಡ ಖರೀದಿಸುತ್ತಾಳೆ. ತಿಂಗಳು ತಿಂಗಳೂ ಸ್ವಲ್ಪ ಸ್ವಲ್ಪ ಹಣ ಉಳಿಸಿ,ಅದರಿಂದಲೇ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬಹುದು ಅನ್ನಿಸಿದರೆ, ಆಕೆಯಲ್ಲಿರುವ ಉಳಿತಾಯದ ಬುದ್ಧಿ ಚುರುಕಾಗುತ್ತದೆ.
ಅನಗತ್ಯವಾಗಿ ಖರೀದಿಸುತ್ತಿರುವ ಕೆಲವೊಂದು ವಸ್ತುಗಳಿಗೆ ಕೊಕ್ಕೆ ಹಾಕುತ್ತಾಳೆ. ಉದಾಹರಣೆಗೆ ಒಂದು ತಿಂಗಳಿಗೆ 5ಲೀಟರ್ ಅಡುಗೆ ಎಣ್ಣೆ ಬಳಸುತ್ತಿದ್ದರೆ, ಅದನ್ನು 4 ಲೀಟರ್‌ಗೆ ಇಳಿಸುತ್ತಾಳೆ. ಕರೆಂಟ್ ಬಿಲ್ ತಿಂಗಳಿಗೆ ನೂರಿನ್ನೂರು ರುಪಾಯಿ ಕಡಿಮೆ ಬರುವಂತೆ ಮಾಡುತ್ತಾಳೆ! ಪರಿಣಾಮ, ಅಡುಗೆ ಮನೆಯ ಡಬ್ಬಿಯೊಳಗೆ ಒಂದೊಂದೇ ನೋಟು ಸೇರ್ಪಡೆಯಾಗುತ್ತಾ ಹೋಗುತ್ತದೆ. ಐದನೇ ತಿಂಗಳ ಕೊನೆಗೆ ಎಣಿಸಿದ ನೋಡಿದರೆ, ಭರ್ತಿ ಆರೇಳು ಸಾವಿರ ರುಪಾಯಿ ! ಒಂದರ್ಥದಲ್ಲಿ ಬೋನಸ್ ರೂಪದಲ್ಲಿ ಸಿಕ್ಕಿದ ಈ ಹಣದಿಂದ ಆಕ್ವೇರಿಯಂ ಅಥವಾ ಮೈಕ್ರೋ ಓವನ್ ಅಥವಾ ವಾಟರ್ ಪ್ಯೂರಿಫೈಯರ್ ಖರೀದಿಸಬಹುದು. ಆ ಮೂಲಕ ಮನೆಯೊಡತಿಗೆ ಸಂಭ್ರಮದ ಗುಟ್ಟನ್ನೂ, ಉಳಿತಾಯದ ಪಾಠವನ್ನು ಒಟ್ಟಿಗೇ ಹೇಳಿಕೊಡಬಹುದು.
ಮನೆಯೊಳಗೇ ದುಡ್ಡಿನ ಗಿಡ ಬೆಳೆಸುವುದು ಅಂದರೆ ಹೀಗೇನೇ…
ಗೇಲಿ ಮಾಡಬೇಡಿ, ಪ್ರೋತ್ಸಾಹಿಸಿ…
ಹಣ ಉಳಿಸಿ, ಅದರಿಂದಲೇ ಏನಾದರೂ ಖರೀದಿಸಬೇಕು ಅನ್ನಿಸಿದಾಗ, ದುಬಾರಿ ಬೆಲೆಯ ಉತ್ಪನ್ನಗಳ ಕುರಿತು ಯೋಚಿಸಬೇಡಿ. ಒಬ್ಬ ಗೃಹಿಣಿಗೆ ತಿಂಗಳಿಗೆ 1000 ಉಳಿಸುವ ಶಕ್ತಿ ಇದ್ದಾಗ, 10 ಸಾವಿರ ರುಪಾಯಿಗೆ ಸಿಗುವ ಉತ್ಪನ್ನಗಳ ಕುರಿತೇ ಯೋಚಿಸಿ. ನಿನ್ನಿಂದ ಇದೆಲ್ಲ ಆಗಲ್ಲ ಬಿಡು ಎಂದು ಹೆಂಗಸರನ್ನು ಗೇಲಿ ಮಾಡಬೇಡಿ. ಅಕಸ್ಮಾತ್, ಒಂದು ತಿಂಗಳು ಹಣ ಉಳಿಸಲು ಸಾಧ್ಯವಾಗದಿದ್ದರೂ ಪ್ರೋತ್ಸಾಹದ ಮಾತುಗಳನ್ನೇ ಹೇಳಿ.
ಅಮ್ಮ ಹಣ ಉಳಿಸಿರುವುದನ್ನು ಮಕ್ಕಳ ಮುಂದೆ ಅಭಿಮಾನದಿಂದಲೇ ಹೇಳಿ. ಇದರಿಂದ, ನಾವೂ ಹಣ ಉಳಿಸಬೇಕೆಂಬ ಆಸೆ ಮಕ್ಕಳಲ್ಲೂ ಸಹಜವಾಗಿಯೇ ಉಂಟಾಗುತ್ತದೆ. ಮಕ್ಕಳು ತಿಂಗಳಿಗೆ 50 ರುಪಾಯಿ ಉಳಿಸಿದವು ಅಂದುಕೊಂಡರೂ, 12 ತಿಂಗಳಿಗೆ ಅದೇ 600 ರುಪಾಯಿ ! ಅದರ ಜೊತೆಗೆ 400 ರುಪಾಯಿ ಹಾಕಿದರೆ, 1000 ರುಪಾಯಿನ ಪಟಾಕಿ ಸಿಗುತ್ತದೆ.!
ಹಣ ಉಳಿಸಲು ಎಷ್ಟೊಂದು ದಾರಿಗಳಿವೆ ನೋಡಿ.
— ಗೌತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್; ತಪ್ಪಿದ ಅನಾಹುತ
Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ
Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.