ಪಂಚಮಿತ್ರನೆಂಬ ಅಸಲಿ ಮಿತ್ರನ ಕತೆ ನೋಡಿ ಹೀಗಿದೆ….
Team Udayavani, Aug 28, 2017, 5:45 PM IST
ಸಮಾಜದ ಗರಿಷ್ಠ ದುರಂತವೆಂದರೆ ಖುದ್ದು ಪ್ರಜೆಗಳೇ ಭ್ರಷ್ಟರಾಗಿರುವುದು. ಇಂದು ಉದ್ಯೋಗ ಖಾತ್ರಿ ಯೋಜನೆಯ ಸಾಧಕಬಾಧಕಗಳೇನೇ ಇರಲಿ, ಅದರ ಅನುಷ್ಟಾನದಲ್ಲಿ ಜನ ಸಿಕ್ಕಷ್ಟು ಬಾಚಿಕೊಳ್ಳುವ ಪ್ರವೃತ್ತಿ ತೋರಿದ್ದರಿಂದಲೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸಲೀಸಾಗಿರುವುದು. ಅದರಲ್ಲೂ ಕ್ಷಣಿಕ ಕಾಸಿನ ಆಸೆಗೆ ನಮ್ಮ ಮನೆಯ ಮುಂದಿನ ನಮ್ಮೂರ ರಸ್ತೆಯ ಕಾಮಗಾರಿಯನ್ನು ಕಳಪೆಯಾಗಿ ಮಾಡಿ ಮುಗಿಸಲು ನಾವು ತಯಾರು! ಹಾಗೆಂದು ಒಂದೇ ರಾತ್ರಿಯಲ್ಲಿ ಪ್ರಾಮಾಣಿಕತೆಯ ಹೊಸ ನಾಡು ಸೃಷ್ಟಿಯಾಗಬಯಸುವುದು ವಿಪರೀತ ನಿರೀಕ್ಷೆಯಾದೀತು. ಅಷ್ಟಕ್ಕೂ ಈ ಭ್ರಷ್ಟಾಚಾರದ ವ್ಯಾಧಿ ಒಂದು ದಿನದ ಸಂತಾನವಲ್ಲವಲ್ಲ!
ಅಧಿಕಾರ ವಿಕೇಂದ್ರೀಕರಣಗೊಂಡು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅವ್ಯವಹಾರ, ರಾಜಕೀಯ ಸಂಸ್ಕೃತಿ ಹರಿದುಬಂತು ಎನ್ನುವವರಿದ್ದಾರೆ. ಇದನ್ನು ಧನಾತ್ಮಕವಾಗಿ ಚಿಂತಿಸುವುದಾದರೆ ನಮ್ಮ ಆಡಳಿತವನ್ನು ನಾವು ಮಾಡಿಕೊಳ್ಳುವಾಗ ಜಗತ್ತಿಗೆ ಮಾದರಿಯಾಗುವಂತೆ ಕೆಲಸ ಮಾಡುವ ಹಕ್ಕೂ ನಮಗೆ ಸಿಕ್ಕಂತೆ ಎಂದುಕೊಳ್ಳಬಹುದು.
ರೈತ ಸಮೂಹದ ಅತಿ ದೊಡ್ಡ ಹಿನ್ನಡೆಯೆಂದರೆ ಮಾಹಿತಿ ಕೊರತೆ. ತಾವು ಬೆಳೆದ ಬೆಳೆಯ ಮಾರುಕಟ್ಟೆ ದರ ಗೊತ್ತಿಲ್ಲದೆ ಬೇಕಾಬಿಟ್ಟಿ ಮೊತ್ತಕ್ಕೆ ಮಾರಿಬಿಡುವುದುಂಟು. ಸಂವಹನದ ಅಲಭ್ಯತೆಯಿಂದಾಗಿ ಇನ್ನಿಲ್ಲದ ಬೆಲೆ ಕೊಟ್ಟು ಖರೀದಿಸುವ ಅನಿವಾರ್ಯತೆಗೆ ಸಿಕ್ಕಿರಬಹುದು. ಈ ನಡುವೆ ಸರ್ಕಾರಗಳು ರೈತ ಸಮುದಾಯಕ್ಕೆಂದು ವಿವಿಧ ಯೋಜನೆಗಳನ್ನು, ಸಹಾಯಗಳನ್ನು ಘೋಷಿಸಿದರೂ ಅದು ಅಸಲಿ ರೈತರಿಗೆ ತಲುಪದ ಹತ್ತು ಹಲವು ಉದಾಹರಣೆಗಳನ್ನು ನೋಡುತ್ತಿದ್ದೇವೆ.
ಪಂಚಮಿತ್ರ ಎಂಬ ಅಸಲಿ ಮಿತ್ರ!
ಇದು ಕೂಗಳತೆಯ ದೂರದ ನಮ್ಮ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತಕ್ಕೂ ಅನ್ವಯ. ಇಂದು ಪಂಚಾಯಿತಿಗಳಲ್ಲಿ ಏನಾಗುತ್ತಿದೆ ಎಂಬ ಅರಿವು ದೊರಕದೆ ರೈತರು ಕಂಗಲಾಗಬೇಕಾಗಿದೆ. ಅಲ್ಲಿಗೆ ಹೋಗಿ ವಿಚಾರಿಸಿದರೆ ಸರಿಯಾದ ಮಾಹಿತಿ ಸಿಕ್ಕದಿರುವ ಸಂಭಾವ್ಯತೆಯೇ ಜಾಸ್ತಿ. ಮಾಹಿತಿ ಹಕ್ಕು ಬಳಸುವ ಪ್ರಕ್ರಿಯೆ ತುಸು ದುಬಾರಿ, ಚೂರು ವಿಳಂಬ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಆರಂಭಿಸಿರುವ ಒಂದು ವೆಬ್‌ಸೈಟ್ ಹಲವು ಸಮಸ್ಯೆಗಳಿಗೆ ಉತ್ತರವಾಗಬಲ್ಲದು. ನಮ್ಮ ರಾಜ್ಯದ ಗ್ರಾಮ ಪಂಚಾಯಿತಿಗಳ ಕುರಿತು ಸಮಗ್ರ ಮಾತಿ ಒದಗಿಸುವ ಇಂಟರ್‌ನೆಟ್ ಪ್ರಪಂಚದ “ಪಂಚಮಿತ್ರ’ ಅಂತಜಾìಲ ಪುಟ http://panchamitra.kar.nic.inಕ್ಕೆ ರಾಷ್ಟ್ರ ಪ್ರಶಸ್ತಿ ಲಭ್ಯವಾಗಿದೆ. ಪಂಚಾಯಿತಿ ಮಟ್ಟದ ಪೂರ್ಣ ವಿವರಗಳನ್ನು ಅಧಿಕಾರಿಗಳ ಸಂಪರ್ಕದ ಅಗತ್ಯವಿಲ್ಲದೆ, ಮನೆ ಬಾಗಿಲಿನಲ್ಲಿಯೇ ಬಸಿದುಕೊಳ್ಳಬಹುದು ಎಂಬುದು ಇದರ ವೈಶಿಷ್ಟ್ಯ. ಕನ್ನಡ ಭಾಷೆಯಲ್ಲಿಯೇ ವಿವರಗಳು ಸಿಗುವುದರಿಂದ ಭಾಷಾ ತೊಡಕಿಲ್ಲ. ಇದರಲ್ಲಿ ಕರ್ನಾಟಕದ ನಕ್ಷೆಯಲ್ಲಿ ನಮ್ಮ ಜಿಲ್ಲೆ, ತಾಲೂಕುಗಳನ್ನು ಗುರ್ತಿಸಿ ನಮ್ಮ ಗ್ರಾಮ ಪಂಚಾಯಿತಿಯ ಭಾಗವನ್ನು ತಲುಪಬೇಕಿರುವುದರಿಂದ ಹುಡುಕುವುದು ಸುಲಭ. ಟೈಪಿಸಿದ ಅಕ್ಷರಗಳ ವ್ಯತ್ಯಾಸದಿಂದ ತಪ್ಪಾಗುತ್ತದೆ ಎಂಬ ಗೋಜಲಿಲ್ಲ. ಏನಿದೆ ವೆಬ್‌ಸೈಟ್‌ನಲ್ಲಿ ಎನ್ನುವುದಕ್ಕಿಂತ ಏನಿಲ್ಲ ಎಂದು ಕೇಳುವುದೇ ಕ್ಷೇಮ! ಹಾಲಿ ಸದಸ್ಯರ ಕುರಿತಂತೆ ಒಂದು ಫೋರ್ಟಲ್ ಇದೆ. ಉಳಿದ ಮಾಹಿತಿಗಳ ಜೊತೆಗೆ ಅವರ ಸಂಪರ್ಕ ವಿಳಾಸ, ಫೋನ್ ವಿವರ, ಹಾಗೆಯೇ ಗ್ರಾಪಂನ ಕಚೇರಿ ವಿಳಾಸ, ದೂರವಾಣಿ ಸಂಖ್ಯೆಗಳೂ ಇಲ್ಲಿ ಲಭ್ಯ.
ಗ್ರಾಮ ಪಂಚಾಯಿತಿ ನೀಡುವ ಸೇವೆಗಳು, ನಡೆಸಲು ಉದ್ದೇಶಿಸಿದ ಯೋಜನೆಗಳು, ಬಿಪಿಎಲ್ – ಎಪಿಎಲ್ ಕಾರ್ಡ್ ಮಾಹಿತಿ, ಕರೆದಿರುವ ಟೆಂಡರ್, ಪಂಚಾಯ್ತಿಯ ಪ್ರಸ್ತುತದ ಬ್ಯಾಲೆನ್ಸ್ ಶೀಟ್‌ಗಳನ್ನೆಲ್ಲ ಕ್ಲಿಕ್ಕಿಸಿ ಓದಬಹುದು. ಇವೆಲ್ಲಕ್ಕಿಂತ ಮುಖ್ಯವಾಗಿ, ರೈತರಿಗೇ ಬೇಕಾದುದು ಹಲವಾರಿವೆ. ನೀವೊಂದು ಅರ್ಜಿ ಸಲ್ಲಿಸಿರುತ್ತೀರಿ. ಅದು ಮನೆ ಕಟ್ಟುವುದಿರಬಹುದು, ಪುಟ್ಟ ಅಂಗಡಿ ಮಾಡಲಿರುವುದಿರಬಹುದು ಅಥವಾ ಇನ್ನಾವುದೋ ಕಾರಣ ಎಂದಿಟ್ಟುಕೊಳ್ಳಿ. ಇದರ ಮಾಹಿತಿ, ಪ್ರಗತಿ ವಿವರ ಇಲ್ಲಿ ಗಿಟ್ಟುತ್ತದೆ. ಅರ್ಜಿಯ ಸ್ಥಿತಿ ಎಂಬ ಫಲಕದ ಮೇಲೆ ಕ್ಲಿಕ್ ಮಾಡಿದರೆ ಮಾಹಿತಿ ತೆರೆದುಕೊಳ್ಳುತ್ತದೆ. ಈಗೀಗ ನಗರಗಳು ನಗರಕ್ಕೆ ಅಂಟಿಕೊಂಡಿರುವ ಪಂಚಾಯಿತಿವರೆಗೆ ವಿಸ್ತರಿಸಿರುವುದರಿಂದ ಇಲ್ಲಿನ ಮಾಹಿತಿ ನಗರದವರಿಗೂ ಬೇಕು!
ಹಾಗೆಯೇ, ಗ್ರಾಮ ಪಂಚಾಯಿತಿ ಸದಸ್ಯರ ಸಭೆಗಳಲ್ಲಿ ಆದ ಹಲವು ನಿರ್ಣಯಗಳು ಸ್ಥಳೀಯರ ಹಿತಕ್ಕೆ ಧಕ್ಕೆ ತರುವಂತಹ ಅಪಾಯಗಳಿರುತ್ತವೆ. ಆ ಮಾಹಿತಿಯೂ ಇಲ್ಲಿ ದಾಖಲಾಗಿರುವುದರಿಂದ ಸಭೆಯ ನಿರ್ಣಯಗಳನ್ನು ನಾವೂ ಪರಿಶೀಲಿಸಲು ಸಾಧ್ಯ. ಸಭಾ ನಡವಳಿಕೆ ಎಂಬ ಶೀರ್ಷಿಕೆಯಡಿ ಇವನ್ನು ಒಂದೆಡೆ ಸಂಗ್ರಹಿಸಲಾಗಿದೆ. ಅಗತ್ಯವಿರುವುದನ್ನು ವಿಸ್ತರಿಸಿ ಓದಿಕೊಳ್ಳಬಹುದು. ಹಾಗೆಯೇ ಕಾಮಗಾರಿಗಳ ಪ್ರಗತಿ, ಫಲಾನುಭಗಳ ಪಟ್ಟಿ, ನಾವು ಕಟ್ಟಿರುವ ಹಾಗೂ ಕಟ್ಟಬೇಕಿರುವ ಆಸ್ತಿ ತೆರಿಗೆಗಳ ಲೆಕ್ಕವೂ ಇಲ್ಲಿ ಅಡಕವಾಗಿರುತ್ತದೆ. ಪಂಚಾಯಿತಿ ಕಚೇರಿಗೆ ಅಲೆದು ವಿವರ ಪಡೆಯುವುದಕ್ಕಿಂತ ಅಂತಜಾìಲದಲ್ಲಿ ಅಂಕಿಅಂಶ ಪಡೆಯುವುದು ಸುಲಭದ ಕೆಲಸ.
ಮಾಹಿತಿಯೇ ಭ್ರಷ್ಟಾಚಾರಕ್ಕೆ ಮದ್ದು ಎಂತಿಪ್ಪ ಪತ್ರಿಕೆ!
ಖಾಸಗಿ ಪ್ರಯತ್ನದಿಂದಲೂ ಜನರಲ್ಲಿ ಮಾತಿ ತುಂಬಿ ಅವರನ್ನು ಜಾಗೃತಗೊಳಿಸಬಹುದು ಎಂಬುದನ್ನು ಸಮರ್ಥವಾಗಿ ಚಿಂತಾಮಣಿಯ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದು ನಡೆಸಿದೆ. ಇಲ್ಲಿನ ಮಂಜುನಾಥ ರೆಡ್ಡಿ ಸಂಪಾದಕೀಯದಲ್ಲಿ ಪ್ರಕಟವಾಗುತ್ತಿರುವ ದ್ವೆ„ಮಾಸಿಕ ಅಂಚೆ ಪತ್ರಿಕೆ “ಅರಿವು’ ಇದರ ಪಿಡಿಎಫ್ ಪ್ರತಿಗಾಗಿ ರಾಜ್ಯದ ಯಾರೂ ವಿನಂತಿಸಬಹುದು.
ಇ ಮೇಲೆ ವಿಳಾಸ: [email protected] ಪತ್ರಿಕೆಯ ಓದುಗರ ಸಂಖ್ಯೆ ಹೆಚ್ಚಲು ಅದರಲ್ಲಿ ಲೇಖನ ಕಸುಬು ಚೆಂದವಿರಬೇಕು ಎಂಬ ಮಾತಿದೆ. ಈ ಮಾತನ್ನು ಸುಳ್ಳಾಗಿಸುವ ಪತ್ರಿಕೆ ಈ ಅರಿವು. ಇದು ಮಾಹಿತಿ ಹಕ್ಕಿನ ಅಸ್ತ್ರದ ಬಳಕೆಯ ಮೂಲಕ ಚಿಂತಾಮಣಿಯ ನಗರಸಭೆ, ಗ್ರಾಮಪಂಚಾಯಿತಿ ಹಾಗೂ ಸರ್ಕಾರಿ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸಿ ಅದನ್ನು ಯಥಾವತ್ ಆಗಿ ಪ್ರಕಟಿಸುತ್ತದೆ. ಉದಾ- ರೇಷ್ಮೆ ಕೃಷಿಗೆ ಈ ವರ್ಷ ಯಾರ್ಯಾರಿಗೆ ನೀರಾವರಿ ಸಬ್ಸಿಡಿ ಸಿಕ್ಕಿದೆ ಎಂಬ ಪಟ್ಟಿಯನ್ನು ಪಡೆದು ಪ್ರಕಟಿಸುತ್ತದೆ. ಖುದ್ದು ಹೆಸರಿಸಲಾದ ರೈತನಿಗೆ ಗಾಬರಿಯಾಗಬಹುದು. ಏಕೆಂದರೆ ಆತ ಅದನ್ನು ಪಡೆಯದೇ ಇರುವ ಸಾಧ್ಯತೆ ಇದೆ ಅಥವಾ ಏನೂ ಕೆಲಸ ಮಾಡಿರದ ಖದೀಮ ಸಬ್ಸಿಡಿ ಹೊಡೆದಿರಬಹುದು. ಈ ಎರಡೂ ಪ್ರಕರಣದಲ್ಲಿ ಹೋರಾಡಲು ಈ ಮಾಹಿತಿ ನೆರವು ನೀಡುತ್ತದೆ. ಈ ರೀತಿ ಕಾಮಗಾರಿ ಪಟ್ಟಿ, ಯಶಸ್ವಿನಿಯಡಿ ಆಸ್ಪತ್ರೆಗಳು ಪಡೆದಿರುವ ಮೊತ್ತ, ತೋಟಗಾರಿಕೆ ಇಲಾಖೆಯ ಹನಿ ನೀರಾವರಿ ಸಬ್ಸಿಡಿ, ಗ್ರಾಮಪಂಚಾಯಿತಿಗಳ ಖರ್ಚು ವಿವರ……ಹೀಗೆ ನೇರನೇರವಾಗಿ ಅಂಕಿಅಂಶಗಳು ಪ್ರಕಟಗೊಳ್ಳುವುದರಿಂದ ಹೊಣೆಗಾರರಾದ ಅಧಿಕಾರಿಗಳು ಮುಜುಗರಕ್ಕೊಳಗಾಗುವ ಸಾಧ್ಯತೆಗಳಿವೆ. ಹೀಗೆ ಹೇಳಬಹುದು, ಲೆಕ್ಕದಲ್ಲಿ ಯಾವುದೋ ಕೆರೆಯ ಹೂಳು ತೆಗೆದಿದ್ದಾರೆಂದರೆ ಅದು ಚಿಂತಾಮಣಿಯಲ್ಲಿ “ಅರಿವು’ ಮೂಲಕ ಜಗಜಾjಹೀರವಾಗುತ್ತದೆ. ಸಾಕಲ್ಲವೇ? ಪ್ರಜಾnವಂತ ನಾಗರಿಕ ಮುಂದಿನ ಹೆಜ್ಜೆ ಇಟ್ಟಾನು!
ಇಂಥ ಪತ್ರಿಕೆ ಪ್ರತಿ ತಾಲ್ಲೂಕಿಗೊಂದರಂತೆ ಶುರುವಾಗಬೇಕು. ಇವತ್ತು ಚಿಂತಾಮಣಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರು ಮೂತ್ರ ವಿಸರ್ಜಿಸಿದರೆ ಶುಲ್ಕ ಕೊಡಬೇಕಾದುದಿಲ್ಲ. ಅಲ್ಲಿನ ಬಿಪಿಎಲ್ ಕಾರ್ಡ್‌ದಾರರಿಗೆ ಸಕ್ಕರೆ, ಗೋಧಿ, ಅಕ್ಕಿ ಎಲ್ಲವೂ ಸಿಗುತ್ತಿದೆ. ಇದಕ್ಕೆಲ್ಲ ಕಾರಣ “ಅರಿವು’ ದ್ವೆ„ಮಾಸಿಕ. ಜೊತೆಜೊತೆಗೆ ಎಲ್ಲರಿಗೂ ಅನುಕೂಲವಾಗಬಲ್ಲ ಕಾನೂನು ಮಾಹಿತಿಗಳೂ ಈ ಪತ್ರಿಕೆಯಲ್ಲಿದೆ. ಮುಖ್ಯವಾಗಿ ಬೇರೆಡೆಯಲ್ಲೂ ಸಂಘಟನೆಗಳು ಈ ಅರಿವು ಪತ್ರಿಕೆಯ ಮಾದರಿಯನ್ನು ಮುದ್ದಾಂ ಆರಂಭಿಸಬೇಕು. ಈ ಮಾಹಿತಿ ಕೆಲವರಲ್ಲಾದರೂ ಆ ಕೆಲಸ ಮಾಡಿಸಿದರೆ ಸಾರ್ಥಕ. ವಿವರವನ್ನು ಇಲ್ಲಿ ಕೇಳಿ-
ಜಿ.ಮಂಜುನಾಥ್ ರೆಡ್ಡಿ, ಸಂಪಾದಕರು, “ಅರಿವು’, ಎನ್.ಆರ್.ಬಡಾವಣೆ, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ -563125 ದೂರವಾಣಿ – 08154 254030, ಮೊಬೈಲ್ – 9945312314
ಪ್ರತಿ ಪಂಚಾಯಿತಿಗಳೂ ಪತ್ರಿಕೆ ಮಾಡಿದರೆ?
ರಾಜ್ಯದ ಗ್ರಾಮ ಪಂಚಾಯಿತಿ ಇತಿಹಾಸದಲ್ಲಿ ಹಿಂದೊಮ್ಮೆ ಮಂಡ್ಯದ ಗ್ರಾಮ ಪಂಚಾಯಿತಿಯೊಂದರಲ್ಲಿ “ಗ್ರಾಮ ಸರ್ಕಾರ’ ಎಂಬ ಗೋಡೆ ಪತ್ರಿಕೆಯನ್ನು ಅಲ್ಲಿ ಅಂದಿನ ಅದರ ಅಧ್ಯಕ್ಷ ನ.ಲಿ.ಕೃಷ್ಣ ಎನ್ನುವವರು ಮಾಡಿದ್ದುಂಟು. ಅವರದರಲ್ಲಿ ಸರ್ಕಾರದ ಸುತ್ತೋಲೆ, ಜಾಗೃತಿ ಮಾಹಿತಿಗಳನ್ನು ಪ್ರಕಟಿಸುತ್ತಿದ್ದರು. ಒಂದರ್ಥದಲ್ಲಿ ಅದರ ಪರಿಷ್ಕೃತ ರೂಪವಾಗಿ, ಹೆಚ್ಚು ಪ್ರಭಾವಯುತವಾಗಿ ಸಾಗರ ತಾಲ್ಲೂಕಿನ ಎಡಜಿಗಳೇಮನೆ ಗ್ರಾಪಂ ಅಂತದೊಂದು ಪ್ರಯತ್ನಕ್ಕೆ ಮುಂದಾಗಿತ್ತು. ಆಡಳಿತದ ಪಾರದರ್ಶಕತೆಯ ಪ್ರಯೋಜನಗಳನ್ನು ಸಮೀಕ್ಷಿಸಬಹುದಾದ ಒಂದು ಪ್ರಯತ್ನವೇ ಗ್ರಾಮ ಪಂಚಾಯಿತಿ ಪ್ರಕಟಪಡಿಸಿದ ಪತ್ರಿಕೆ “ಪಂಚವಾಣಿ’ ಪತ್ರಿಕೆ. ಇಲ್ಲಿನ ಪಂಚಾಯಿತಿಯ ಕಾರ್ಯವೈಖರಿಯ ಬಗ್ಗೆ ಕನ್ನಡಿ ಹಿಡಿಯುವ ಕೆಲಸವನ್ನು ಈ ಮಾಸ ಪತ್ರಿಕೆ ಮಾಡಬಲ್ಲದು ಎಂಬ ಆಶಯ ಹಿನ್ನೆಲೆಯಲ್ಲಿತ್ತು. ಆದರೆ ಮೂರು ಸಂಚಿಕೆಗಳ ನಂತರ ರಾಜಕೀಯ ಒತ್ತಡದಿಂದ ಈ ಪ್ರಯತ್ನ ಸ್ಥಗಿತಗೊಂಡಿತು. ಆದರೆ ಇಂತಹ ಪತ್ರಿಕೆಗೆ ಇಂದಿಗೂ ಅವಕಾಶವಿದೆ. ಕಾನೂನಿನ ಚೌಕಟ್ಟಿನಲ್ಲಿಯೇ ಮಾಡಬಹುದು.
ಏನಿರಬಹುದು ಪತ್ರಿಕೆಯಲ್ಲಿ?
ಪತ್ರಿಕೆಯ ಮೂಲಕ ಸರ್ಕಾರದ ಹೊಸ ಹೊಸ ಯೋಜನೆಗಳ ಬಗ್ಗೆ, ವಿವಿಧ ಯೋಜನೆಗಳ ಫಲಾನುಭಗಳ ಪಟ್ಟಿ ವಿವರಗಳನ್ನು ಮತ್ತು ಪಂಚಾಯಿತಿಯ ವ್ಯಾಪ್ತಿಯಲ್ಲಿ ಹಾಗೂ ಪ್ರತಿನಿಧಿಗಳು ಭಾಗವಹಿಸಿದ ನಡೆದ ಕಾರ್ಯಕ್ರಮಗಳ ಸುದ್ದಿಯನ್ನು ಪ್ರಕಟಿಸಲಾಗುತ್ತಿತ್ತು. ವಿವಿಧ ಯೋಜನೆ, ಸಹಾಯಧನಕ್ಕೆ ಸಲ್ಲಿಸಬೇಕಾಗುವ ಅರ್ಜಿ ಮಾದರಿಯನ್ನು ಪತ್ರಿಕೆಯಲ್ಲಿಯೇ ಪ್ರಕಟಿಸಲಾಗುವುದರಿಂದ ಜನ ಅರ್ಜಿಗಾಗಿಯೇ ಪಂಚಾಯಿತಿ ಕಚೇರಿ ಮೆಟ್ಟಿಲು ಹತ್ತಿಳಿಯಬೇಕಾರಲಿಲ್ಲ.
ಈ ಕ್ರಮ ಪರೋಕ್ಷವಾಗಿ ಪ್ರಾಮಾಣಿಕತೆಯ ಕ್ರಾಂತಿ ಮಾಡಬಲ್ಲದು. ಸರ್ಕಾರದ ಯೋಜನೆಗಳ ಫಲಾನುಭವಿಯಾಗಲು ಹಾತೊರೆಯುವ ಪ್ರಬಲರು ಅನರ್ಹರಾಗಿದ್ದೂ ಪಟ್ಟಿಯಲ್ಲಿ ಜಾಗ ಗಿಟ್ಟಿಸುತ್ತಾರೆ. ಆದರೆ ಈ ಅಂಶ ಎಲ್ಲ ಜನರ ಗಮನಕ್ಕೆ ಬರುತ್ತದೆ ಎಂದಾಗ ಅವರು ಹಿಂದೇಟು ಹಾಕುವುದು ಅನಿವಾರ್ಯ. ಮಾಹಿತಿ ಹಕ್ಕು ಕಾಯ್ದೆ ಒಂದು ರೀತಿಯಲ್ಲಿ ದೇಶದಲ್ಲಿ ಕ್ರಾಂತಿಯನ್ನೇ ಹುಟ್ಟುಹಾಕಿದೆ. ಜನರಿಗೆ ಮಾಹಿತಿಯನ್ನು ನಿರಾಕರಿಸಲಾಗದು ಎಂಬುದು ಸತ್ಯ. ಆದರೆ ಇದೇ ವೇಳೆ ಈ ಮಾಹಿತಿ ಒದಗಿಸುವ ಕಾರ್ಯಕ್ಕೇ ಸರ್ಕಾರಿ ಸಂಸ್ಥೆಗಳು ತಮ್ಮ ಸಿಬ್ಬಂದಿಗಳನ್ನು ಬಳಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿಯೂ ಪತ್ರಿಕೆಯ ಪ್ರಯತ್ನ ಪರಸ್ಪರರಿಗೆ ಸಹಕಾರಿಯಾಗಬಲ್ಲದು. ಮಾಹಿತಿಗಳನ್ನೆಲ್ಲ ಪತ್ರಿಕೆಯ ಮೂಲಕ ಢಾಣಾಡಂಗುರಗೊಳಿಸುವುದರಿಂದ ವಿಷಯಗಳು ಪಾರದರ್ಶಕ. ಇದರಿಂದಾಗಿ ಮಾಹಿತಿ ಹಕ್ಕು ಬಳಸುವ ಪ್ರಮೇಯವೇ ಬಾರದೆ ಹೋಗಬಹುದು. ಅಂತೆಯೇ ಪಂಚಾಯಿತಿ ಮಾಹಿತಿ ಪೂರೈಸಲು ಬಳಸಬೇಕಾದ ಸಿಬ್ಬಂದಿ ಸಮಯ ಇತರ ಚಟುವಟಿಕೆಗಳಿಗೆ ಸಿಗುತ್ತದೆ.
ಪತ್ರಿಕೆ ಒಂದು ರೀತಿಯಲ್ಲಿ ಪಂಚಾಯಿತಿಯ ಡೈರೆಕ್ಟರಿ ರೂಪದಲ್ಲಿ ಕೂಡ ಕೆಲಸ ನಿರ್ವಹಿಸಬಲ್ಲದು. ಪ್ರತಿ ಸಂಚಿಕೆಯಲ್ಲಿಯೂ ಎಲ್ಲ ಸದಸ್ಯರ ಸಂಪರ್ಕ ವಿವರವನ್ನು ಪ್ರಕಟಿಸುವುದರಿಂದ ಮಾಹಿತಿ ವಿನಿಮಯಕ್ಕೆ ಪೂರಕ. ಪಂಚಾಯಿತಿಯೊಂದು ಯಾವುದೇ ಮಾಹಿತಿಯನ್ನು ಒದಗಿಸುವ ಕಾಲ್ ಸೆಂಟರ್ ಮಾದರಿಯ ಸೌಲಭ್ಯವನ್ನು ಊರಿನ ಎಲ್ಲ ನಾಗರಿಕರಿಗಾಗಿ ಹುಟ್ಟುಹಾಕುವ ಯೋಚನೆ ಮಾಡಬಹುದಲ್ಲವೇ? ಪತ್ರಿಕೆ ಆ ಹಾದಿಯ ಮೊದಲ ಯತ್ನ ಎಂದುಕೊಳ್ಳಬಹುದು.
ರೈತ ಪರವಾದ, ಕಾರ್ಮಿಕ ಪರವಾದ ಕಾನೂನು ಮಾಹಿತಿ, ಲೇಖನಗಳು, ಕೃಷಿ ತೋಟಗಾರಿಕಾ ಇಲಾಖೆಗಳಿಂದ ರೈತರಿಗೆ ಹೊಸದಾಗಿ ಬಂದಿರುವ ಯೋಜನೆಗಳು, ವಾರ್ಡ್ ಸಭೆ, ಗ್ರಾಮ ಸಭೆಗಳ ಆಹ್ವಾನ, ನಡೆದ ಸಭೆಗಳ ಫಲಶ್ರುತಿ, ಪಂಚಾಯಿತಿ ಸದಸ್ಯರ ಪರಿಚಯ, ಸಂದರ್ಶನಗಳನ್ನು ಪುಟ್ಟ ಪತ್ರಿಕೆಯ ಪುಟಗಳಲ್ಲಿ ಮಾಡುವುದರಿಂದ ಪರಿಣಾಮ ಅಗಾಧ.
ಪಂಚಾಯಿತಿಗಳಿಗೆ ಮನೆಗಂದಾಯ ವಸೂಲಿ ದೊಡ್ಡ ತಲೆ ಬೇನೆ. ಮನೆ ಎದುರಿನ ಬೀದಿ ದೀಪ ಸರಿಯಾಗಿ ಉರಿಯುತ್ತಲ್ಲವೆಂದು ಆರೋಪಿಸಿಯೋ, ಈಗ ಕೈಯಲ್ಲಿ ಹಣಲ್ಲವೆಂತಲೋ ಎಂದು ಹೇಳಿ ನಾಗರಿಕರು ಕಂದಾಯ ಬಾಕಿ ಉಳಿಸಿಕೊಳ್ಳುವುದು ವಾಡಿಕೆ. ನಾಲ್ಕು ಅಂಕಿಯ ಪಾವತಿ ಬಾಕಿಯುಳಿಸಿಕೊಂಡವರಿದ್ದಾರೆ. ಈ ಬಾಕಿಗಳ ಮೊತ್ತ ಕೆಲವು ಲಕ್ಷಗಳಲ್ಲಿ ಇರುತ್ತದೆ. ಇದರ ವಸೂಲಾತಿ ಸಮರ್ಪಕವಾಗಿಯಾದರೆ ಪಂಚಾಯಿತಿ ತನ್ನದೇ ಸಂಪನ್ಮೂಲದಲ್ಲಿ ಆಭಿವೃದ್ಧಿ ಕೆಲಸ ಮಾಡಬಹುದು. ಅದಕ್ಕೆ ಪತ್ರಿಕೆಯ ಸಹಾಯ ಪಡೆಯಬಹುದು ಎಂಬುದು ಒಂದು ಅಂದಾಜು.
ಹೇಗೆ? ಪತ್ರಿಕೆಯ ಪುಟಗಳಲ್ಲಿ ಕಂದಾಯ ಬಾಕಿ ಇರುವವರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂಬ ಪ್ರಕಟನೆಯೇ ಹಲವರನ್ನು ಬಡಿದೆಬ್ಬಿಸಿ ಕಂದಾಯ ಪಾವತಿಸುವಂತೆ ಮಾಡುತ್ತದೆ. ಇದಕ್ಕೂ ಬಗ್ಗದಿದ್ದರೆ ಪ್ರತಿ ತಿಂಗಳು ಒಂದು ಭಾಗದ ಹಳ್ಳಿಗಳ ಬಾಕಿದಾರರ ಪಟ್ಟಿ ಪ್ರಕಟವಾಗುತ್ತಿದ್ದಂತೆ, ತಮ್ಮ ಗಣ್ಯತೆ ಉಳಿಸಿಕೊಳ್ಳಲು ಬಯಸುವವರು ಪಂಚಾಯಿತಿ ಕಚೇರಿಗೆ ಓಡಿಬರುತ್ತಾರೆ. ಸ್ಥಳೀಯವಾಗಿ ಕಂದಾಯ ಬಾಕಿದಾರರಾಗಿ ಪ್ರಚಾರ ಪಡೆಯುವುದು ಯಾರಿಗೂ ಬೇಕಾಗಿರುವುದಿಲ್ಲ.
ಆರ್ಥಿಕ ಸ್ಥಿತಿಗಳು ಸೂಕ್ಷವಾಗಿರುವ ಪಂಚಾಯಿತಿಗಳಿಗೆ ಪತ್ರಿಕೆಗಳೆಂಬ ಪ್ರಯತ್ನ ಬೇಕೆ ಎಂದು ಕೆಲವರಾದರೂ ಗುನುಗಬಹುದು. ಇದು ಪಂಚಾಯಿತಿಗೆ ಇನ್ನೊಂದು ಹೊರೆಯಾಗಬಹುದು ಎಂಬ ಆತಂಕ ಮೂಡಬಹುದು. ಪತ್ರಿಕೆಯನ್ನು ಲಾಭನಷ್ಟದ ಸಮಸ್ಯೆ ಇಲ್ಲದೆ ನಡೆಸಲು ಸಾಧ್ಯ. ಪಂಚಾಯಿತಿ ವ್ಯಾಪ್ತಿಯ ಎಲ್ಲ ಕಂದಾಯ ಮನೆಗಳವರು ಇದರ ಕಡ್ಡಾಯ ಚಂದಾದಾರರಾಗಿರುತ್ತಾರೆ. ನಿಗದಿ ಪಡಿಸುವ ಚಂದಾದರ ಸಾಂಕೇತಿಕವೆಂದುಕೊಂಡರೂ ಎರಡು ಮೂರು ತಿಂಗಳ ಸಂಚಿಕೆಗಳ ಖರ್ಚಿಗಾದೀತು. ವರ್ಷದ ಒಂದು ಸಂಚಿಕೆಯನ್ನು ವಿಶೇಷಾಂಕದ ರೂಪದಲ್ಲಿ ಪ್ರಕಟಿಸುವುದರಿಂದ ಉಳಿದ 9 ಸಂಚಿಕೆಗಳ ವೆಚ್ಚವನ್ನು ಜಾಹೀರಾತುದಾರರಿಂದ ಸಂಪಾದಿಸಬಹುದು. ಹಾಗೆ ನೋಡಿದರೆ, ಕಂದಾಯ ವಸೂಲಾತಿ ಪತ್ರಿಕೆಯ ಭಯದಿಂದ. ಅಂದರೆ ಪತ್ರಿಕೆ ಪ್ರಯತ್ನ ಪರೋಕ್ಷವಾಗಿ ಪಂಚಾಯಿತಿಗೆ ಲಾಭ ತಂದಂತೆ.
-ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.