ಶರಾವತಿ ನೀರಿಗೆ ಬೆಂಗಳೂರು ದಾರಿ
Team Udayavani, Jul 16, 2018, 6:00 AM IST
ಮಳೆಗಾಲದಲ್ಲಿ ಮಳೆ ನೀರಿನೊಂದಿಗೆ ತೇಲುವ ಬೆಂಗಳೂರು, ಬೇಸಿಗೆಯಲ್ಲಿ ತೀವ್ರ ಜಲಕ್ಷಾಮಕ್ಕೆ ತುತ್ತಾಗುತ್ತದೆ. ಕೆರೆಗಳನ್ನು ನುಂಗುತ್ತ ಬೆಳೆದ ಈ ಮಹಾನಗರವೀಗ, ನೀರಿಗೆ ಬೆಂಕಿ ತಗಲುವ ನೆಲೆಯಾಗಿ ಜಲಮಾಲಿನ್ಯಕ್ಕೆ ಹೆಸರಾಗಿದೆ. ಕೋಲಾರ, ಚಿಕ್ಕಬಳ್ಳಾಪುರಗಳ ನದಿ ಕಾಡುಗಳನ್ನು ನುಂಗಿ, ಕಾವೇರಿ ನೀರು ಕುಡಿದು ಈಗ 425 ಕಿಲೋ ಮೀಟರ್ ದೂರದ ಶರಾವತಿಯ ನೀರನ್ನು ಬಯಸುತ್ತಿದೆ. ಸೀತೆಗೆ ಬಾಯಾರಿದಾಗ ಶ್ರೀರಾಮ ಬಿಟ್ಟ ಬಾಣದಿಂದ ಅಂಬುತೀರ್ಥದಲ್ಲಿ ಶರಾವತಿ ನದಿಯ ಜನನವಾಯಿತಂತೆ. ಈಗ ತ್ಯಾಗರಾಜ ಸಮಿತಿಯ ಬಾಣ ಲಿಂಗನಮಕ್ಕಿಯತ್ತ ಹೊರಟಿದೆ. ಅರಣ್ಯನಾಶದಿಂದ ತತ್ತರಿಸಿ ಶರಶಯೆಯಲ್ಲಿ ಮಲಗಿರುವ ಶರಾವತಿ ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರಿಗೆ ನೀರು ನೀಡಬಲ್ಲಳೇ?
ಬೃಹತ್ ಬೆಂಗಳೂರಲ್ಲಿ ಯಾರೆಲ್ಲ ಇದ್ದಾರೆ?
ಗೌರವಾನ್ವಿತ ರಾಜ್ಯಪಾಲರು, ಹೈಕೋರ್ಟ್ ನ್ಯಾಯಾಧೀಶರು, ಮುಖ್ಯಮಂತ್ರಿ, ಸಚಿವರು, ಶಾಸಕರು, ಅಧಿಕಾರಿಗಳು, ತಜ್ಞರು, ವಿಜಾnನಿಗಳೆಲ್ಲರ ನೆಲೆ ಈ ಊರು. ಇಲ್ಲಿ, ದೇಶ ವಿದೇಶದ ರೋಗಿಗಳಿಗೆ ಚಿಕಿತ್ಸೆ ನೀಡುವ ಅತ್ಯಾಧುನಿಕ ಆಸ್ಪತ್ರೆಗಳಿವೆ. ಕಾಂಕ್ರೀಟ್ ಕಾಡಿನ ಸಿಲಿಕಾನ್ ಸಿಟಿಯಲ್ಲಿ ಕೆರೆಗಳಿಗೆ ಬೆಂಕಿ ಬೀಳುವುದು ಹಳೆಯ ಕಾಯಿಲೆ. ಅಂತರ್ಜಲ ಕುಸಿತ, ಕೆರೆನಾಶ, ಜಲಮಾಲಿನ್ಯಕ್ಕೆ ಖ್ಯಾತವಾದ ಈ ನಗರ, ಅರ್ಧ ತಾಸು ಮಳೆ ಬಂದರೆ ಪ್ರವಾಹದಲ್ಲಿ ಅಯ್ಯೋ! ಎಂದು ಅಳುತ್ತದೆ. ಅರಣ್ಯ ಇಲಾಖೆ ಕೇಂದ್ರ ಕಚೇರಿ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಕೊಳಚೆ ನಿರ್ಮೂಲನಾ ಮಂಡಳಿ….ಹೀಗೆ ಪರಿಸರ ಸಂರಕ್ಷಣೆಗೆ ಶ್ರಮಿಸಬೇಕಾದ ತರಹೇವಾರಿ ಅಧಿಕಾರ ಕೇಂದ್ರಗಳ ಬೇರು ಇಲ್ಲಿದೆ. ನೆಲಜಲ ಸಂರಕ್ಷಿಸುವ ಕಾನೂನು ಹುಟ್ಟುವುದನ್ನು, ಸಾಯುವುದನ್ನು ಇಲ್ಲಿ ನಿತ್ಯ ನೋಡಬಹುದು. ಕೆರೆ, ಕಾಡು, ಗೋಮಾಳ, ಕಾಲುವೆಗಳನ್ನು ನುಂಗಿದ ನೆಲೆಯಲ್ಲಿ ವಾರ್ಷಿಕ ಒಂದು ಸಾವಿರ ಮಿಲಿ ಲೀಟರ್‌ಗೂ ಅಧಿಕ ಮಳೆ ಸುರಿಯುತ್ತದೆ. ಉದ್ಯಾನ ನಗರದ ಕೊಳೆ ಹೊತ್ತು ಸುಮಾರು 40-45 ಟಿಎಮ್‌ಸಿ ನೀರು ಚರಂಡಿ, ರಾಜಾಕಾಲುವೆ ಮೂಲಕ ವೃಷಭಾವತಿ ಸೇರಿದಂತೆ ಅಕ್ಕಪಕ್ಕದ ಹಳ್ಳಕೊಳ್ಳಗಳಲ್ಲಿ ನೊರೆ ನೆರೆಯಾಗುತ್ತದೆ. ಸಮಸ್ಯೆಗಳ ಹಳೆಯ ದಪ್ತಾರು ತೆಗೆದು ಪಟ್ಟಿ ಮಾಡುತ್ತ ಕುಳಿತರೆ ಬೆಂಗಳೂರಲ್ಲಿ ಯಾರೆಲ್ಲ ಗಣ್ಯರು ಹೇಗಿದ್ದಾರೆಂಬ ಪ್ರಶ್ನೆ ಪುನಃ ಕಾಡುತ್ತದೆ.
ಪ್ರಸ್ತುತ ಬೆಂಗಳೂರಿನ ಜನಸಂಖ್ಯೆ ಒಂದೂವರೆ ಕೋಟಿ ಇದೆ. ಒಂದು ವರ್ಷಕ್ಕೆ, ಕಾವೇರಿ ಹಾಗೂ ತಿಪ್ಪಗೊಂಡನಹಳ್ಳಿ ಜಲಾಶಯಗಳಿಂದ ಸುಮಾರು 19 ಟಿಎಮ್‌ಸಿ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಶೇ. 15-20 ರಷ್ಟು ಜನ ಆಳದ ಕೊಳವೆ ಬಾವಿಯಿಂದ ಬದುಕಿದ್ದಾರೆ. ಅಂತರ್ಜಲ ಕುಸಿತದಲ್ಲಿ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ರಾಜ್ಯ ನಮ್ಮದು. ಕಾವೇರಿ ಕಣಿವೆಯ ಮರಕಡಿದವರು, ಕನಕಪುರದ ಬಂಡೆ ನುಂಗಿ ನೀರು ಕುಡಿದವರು, ಪಿನಾಕಿನಿಯ ಮರಳು ದೋಚಿದವರಿಗೆಲ್ಲ ಬೆಂಗಳೂರು ಬಹಳ ಸುರಕ್ಷಿತ. ರಿಯಲ್‌ಎಸ್ಟೇಟ್, ಲಾಗಾಯ್ತಿನಿಂದಲೂ ಇವರಿಗೆಲ್ಲ ರೆಡ್ ಕಾಪೆìಟ್ ಹಾಸಿದೆ. ಯಾವ ಅಂಕಿತಕ್ಕೆ ಸಿಲುಕದೇ ಭೂ ಬಳಕೆಯ ಶಿಸ್ತು ಮರೆತು ಅಸಡಾಬಸಡಾ ಬೆಳೆಯುತ್ತಿದೆ. ಊರ ನೀರಿನ ದಾಹಕ್ಕೆ ಮಿತಿಇಲ್ಲ. ಕ್ರಿ. ಶ. 2030 ರವೇಳೆಗೆ ಏರುವ ಬೇಡಿಕೆಗೆ ನೀರು ಹುಡುಕುವ ಕಾರ್ಯ ನಡೆದಿದೆ. ಜನಸಂಖ್ಯೆಯ ಲೆಕ್ಕ ಹಿಡಿದು ವಿಶ್ವ ಆರೋಗ್ಯ ಸಂಸ್ಥೆ ಸೂಚಿತ ತಲಾ ಜಲ ಬಳಕೆಯ ಅಂದಾಜಿನಲ್ಲಿ ನೇತ್ರಾವತಿ, ಕೃಷ್ಣಾ, ಶರಾವತಿ ಎನ್ನುತ್ತ ಹೊಸ ನದಿಗಳನ್ನು ನೋಡಲಾಗುತ್ತಿದೆ. ದಕ್ಷಿಣ ಕನ್ನಡದ ನೇತ್ರಾವತಿಯ ಸಾಗರ ತಟದಿಂದಲೂ ನೀರು ಮೀರುವ ಭವ್ಯ ಪರಿಕಲ್ಪನೆಗಳು ಶುರುವಾಗಿವೆ. ಪೈಪ್ ಹಿಡಿದು ಹಿಮಾಲಯಕ್ಕೆ ಹೋಗುವುದಷ್ಟೇ ಬಾಕಿ ಇದೆ.
ತೀವ್ರ ಬರದ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ನೀಡಲು ಸಕಲೇಶಪುರದ ಗುಡ್ಡ ಅಗೆದು ಇಲಿ ಹಿಡಿದ ಹದಿಮೂರು ಸಾವಿರ ಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆ ಕಾರ್ಯ ಕಣ್ಮುಂದಿದೆ. ಘನ ನೀರಾವರಿ ತಜ್ಞತೆಯಲ್ಲಿ ಯಾವ ಸಂಗ್ರಹಣಾ ಅಣೆಕಟ್ಟೆ ಇಲ್ಲದೇ ಮಳೆಗಾಲದ 100 ದಿನಗಳಲ್ಲಿ ಐದಾರು ಹಳ್ಳಗಳಲ್ಲಿ ಹರಿಯುವ 14 ಟಿಎಮ್‌ಸಿ ನೀರಿನಲ್ಲಿ ಏಳೆಂಟು ಟಿಎಮ್‌ಸಿ ಎತ್ತುವುದು ತಾಂತ್ರಿಕವಾಗಿ ಅಸಾಧ್ಯವೆನಿಸಿದೆ. ಆದರೆ ಬಯಲುಸೀಮೆಗೆ 24 ಟಿಎಮ್‌ಸಿ ನೀರು ಒದಗಿಸುವ ಕನಸು ಚೆಲ್ಲುತ್ತ ಖಾಲಿ ಪೈಪ್ ಯೋಜನೆ ಕಾಮಗಾರಿಗೆ ಕಣ್ಮುಚ್ಚಿ ಕಾಸು ಖರ್ಚಾಗುತ್ತಿದೆ. ಸರಕಾರಗಳಿಗೆ ನೀರಿನ ಸಮಸ್ಯೆ ಬಹುದೊಡ್ಡ ಬಂಡವಾಳವಾಗಿದೆ. ಚುನಾವಣೆ ಎದುರಿಸಲು ಹೊಸ ಯೋಜನೆಗಳ ಕನಸು ಬಿತ್ತುವುದು ಅಭ್ಯಾಸವಾಗಿದೆ. ಸುರಿಯುವ ಮಳೆ, ಕಳೆದು ಹೋಗುತ್ತಿರುವ ಕೆರೆ, ನದಿ, ಕಾಡು ನೋಡದ ತಜ್ಞರು ಬೃಹತ್ ಪೈಪಿನ ಪರಿಕಲ್ಪನೆಯಲ್ಲಿ ಕರ್ನಾಟಕದ ಜಲಭವಿಷ್ಯ ರೂಪಿಸುವವರು. ಹೀಗಾಗಿ ಲಿಂಗನಮಕ್ಕಿ ಯೋಜನೆ ಇನ್ನೊಂದು ಎತ್ತಿನ ಹೊಳೆಯೇ? ಚರ್ಚೆ ಶುರುವಾಗಿದೆ.
ಬೆಂಗಳೂರು ನೀರು ಸರಬರಾಜು ಮಂಡಳಿಯ ಅಧ್ಯಕ್ಷ ಬಿ. ಎನ್. ತ್ಯಾಗರಾಜು, 2014 ರ ಅಕ್ಟೋಬರ್ 21 ರಂದು ಸರಕಾರಕ್ಕೆ ಲಿಂಗನಮಕ್ಕಿ ನೀರು ಪೂರೈಕೆಯ ಪರಿಕಲ್ಪನಾ ವರದಿ ನೀಡಿದ್ದಾರೆ. ಈಗ ಈ ಬಗ್ಗೆ ವಿಸ್ತ್ರತ ವರದಿ ನೀಡುವಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಶರಾವತಿ ನದಿಗೆ ಸಮುದ್ರ ಮಟ್ಟದಿಂದ 555 ಮೀಟರ್ ಎತ್ತರದಲ್ಲಿ ಹಸಿರುಮಕ್ಕಿಯಲ್ಲಿ ಹೊಸ ಅಣೆಕಟ್ಟು ನಿರ್ಮಿಸುವುದು. ಅಲ್ಲಿಂದ 30 ಟಿಎಮ್‌ಸಿ ನೀರನ್ನು ಮಾಣಿ ಜಲಾಶಯಕ್ಕೆ ಒಯ್ದು ಆಗುಂಬೆ- ಕಾರೆ-ಶಿರಲಾಲು-ಮೂಡಿಗೆರೆಯಿಂದ ಯಗಚಿಗೆ ಒಯ್ಯುವುದು ತ್ಯಾಗರಾಜ ಅವರ ಗುರಿ. ಯಗಚಿಯಿಂದ 130 ಕಿಲೋ ಮೀಟರ್ ದೂರದ ಬೆಂಗಳೂರಿಗೆ ಸಹಜ ಗುರುತ್ವಾಕರ್ಷಣೆ ಮೂಲಕ ಕಾಲುವೆಯಲ್ಲಿ ಹರಿಯಲಿದೆ. ಸುಮಾರು 12,500 ಕೋಟಿ ರೂಪಾಯಿಗಳ ಯೋಜನೆ ಇದಾಗಿದೆ. ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಗರಿಷ್ಠ 1819 ಅಡಿ ಭರ್ತಿಯಾದರೆ 151.75 ಟಿಎಮ್‌ಸಿ ನೀರು ಸಂಗ್ರಹವಾಗುತ್ತದೆ. ನೀರು 980 ಮೀಟರ್ ಎತ್ತರದ ಮೂಡಿಗೆರೆಗೆ ವಿವಿಧ ಹಂತಗಳಲ್ಲಿ ಪಂಪ್ ಆಗಬೇಕು. ಇದಕ್ಕಾಗಿ ರಸ್ತೆ, ಪೈಪು, ಜಲಾಶಯಗಳಿಗೆ ಭೂಮಿ ಬೇಕು. ಮೂರೂವರೆ ಮೀಟರ್ ಗಾತ್ರದ ಮೂರು ಬೃಹತ್ ಪೈಪುಗಳು ಕಾಯ್ದಿಟ್ಟ ಅರಣ್ಯ, ವನ್ಯಜೀವಿ ವಲಯದ 1,200 ಎಕರೆ ಅರಣ್ಯ ಸೀಳಿಕೊಂಡು 180 ಕಿಲೋ ಮೀಟರ್ ದೂರ ಪಶ್ಚಿಮ ಘಟ್ಟದ ಬೆಟ್ಟದಲ್ಲಿ ಕ್ರಮಿಸಬೇಕಾಗಿರುವುದರಿಂದ ಯೋಜನೆಯ ನಿರ್ವಹಣೆ ಜಟಿಲವಿದೆ. ಬೆಂಗಳೂರಿಗೆ ನೀರು ಒಯ್ಯುವ ಘಟ್ಟ ಶ್ರೇಣಿಯ ಕೊಳವೆ ಮಾರ್ಗ ಮಲೆನಾಡಿನ ಜಲಮೂಲಗಳನ್ನು ನಾಶ ಮಾಡಲಿದೆ.
ಲಿಂಗನಮಕ್ಕಿ ವಿದ್ಯುತ್ ಯೋಜನೆಗೆ ನಿರ್ಮಿಸಿದ ಅಣೆಕಟ್ಟೆಯಿಂದ ಕುಡಿಯಲು ನೀರೆತ್ತಿದರೆ ವಿದ್ಯುತ್ ಉತ್ಪಾದನೆ ಕುಂಠಿತವಾಗುತ್ತದೆ. ಆದರೆ ನಾಡಿನ ಜನರ ದಿಕ್ಕು ತಪ್ಪಿಸಲು ಈಗಾಗಲೇ ಕೆಪಿಸಿಯ ನಿವೃತ್ತ ಅಧಿಕಾರಿಗಳು ಸಜಾjಗಿದ್ದಾರೆ. ಮುಂದಿನ 2022ರ ವೇಳೆಗೆ ರಾಜ್ಯದಲ್ಲಿ ಒಂದು ಸಾವಿರ ಮೆಗಾ ವ್ಯಾಟ್ ಹೆಚ್ಚುವರಿ ಉತ್ಪಾದನೆಯಾಗಲಿದೆ. ಲಿಂಗನಮಕ್ಕಿಯ ಕೊರತೆಯಿಂದ ರಾಜ್ಯಕ್ಕೆ ಕತ್ತಲು ಆವರಿಸುವುದಿಲ್ಲ ಎಂದಿದ್ದಾರೆ. ನೀರು, ಕೃಷಿಗೆ ಬಳಕೆಯಾಗುವುದರಿಂದ ಬಯಲು ಸೀಮೆಯಲ್ಲಿ ಕೃಷಿ ವಿದ್ಯುತ್ ಬಳಕೆಗೆ ಖರ್ಚಾಗುವ ಹಣ, ವಿದ್ಯುತ್ ಉಳಿತಾಯವಾಗುತ್ತದೆಂಬ ಲೆಕ್ಕವಿದೆ. ಆದರೆ ಲಿಂಗನಮಕ್ಕಿ ಜಲಾಶಯದ ಆಸುಪಾಸಿನ ಪರಿಸ್ಥಿತಿ ಬಿಗಡಾಯಿಸಿದೆ. ಇತ್ತೀಚಿನ ವರ್ಷಗಳಲ್ಲಿ ಮಲೆನಾಡು ತೀವ್ರ ಜಲಕ್ಷಾಮ ಅನುಭವಿಸುತ್ತಿದೆ. ಈಗ ಬೆಂಗಳೂರಿಗಿಂತ ಕಡಿಮೆ ಮಳೆ ಸುರಿಯುತ್ತಿದೆ. ಶಿವಮೊಗ್ಗ ಜಿಲ್ಲೆಯ ಸಾಗರ, ಶಿಕಾರಿಪುರ, ಸೊರಬ, ಶಿರಾಳಕೊಪ್ಪ ಪ್ರದೇಶಗಳಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ಕೆರೆಕಟ್ಟೆಗಳು ಬರಿದಾಗಿವೆ. ಅರೆಮಲೆನಾಡಿನ ಸೆರಗಿನಲ್ಲಿ 2016-17 ರಲ್ಲಿ 400 ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಯುವ ಯಂತ್ರಗಳು ಬೇಸಿಗೆಯಲ್ಲಿ ಸಾವಿರಾರು ಬಾವಿಗಳನ್ನು ಕೊರೆದಿವೆ. ಮಳೆ ಕೊರತೆ, ಅಂತರ್ಜಲ ಕುಸಿತದಿಂದ ನದಿ ಕಣಿವೆಯ ಆಸುಪಾಸಿನ ಹಳ್ಳಿಗಳು ಕಂಗಾಲಾಗಿವೆ. ತೀರ್ಥಹಳ್ಳಿಯ ಅಂಬುತೀರ್ಥದಲ್ಲಿ ಜನಿಸಿ 136 ಕಿಲೋ ಮೀಟರ್ ಹರಿಯುವ ಶರಾವತಿಯನ್ನೇ ನಂಬಿ ಘಟ್ಟ, ಕರಾವಳಿಯ ಜನಜೀವನಸಾಗಿದೆ. ಜಲವಿದ್ಯುತ್ ಯೋಜನೆಯ ಮುಳುಗಡೆಯ ಪರಿಣಾಮ ಹಾಗೂ ಅರಣ್ಯ ಸಂರಕ್ಷಣೆಯ ಬಿಗಿ ಕಾನೂನು ಅನುಭವಿಸುತ್ತಿರುವ ಮಲೆನಾಡು ಇನ್ನೆಷ್ಟು ವರ್ಷ ತ್ಯಾಗ ಮಾಡಬೇಕೆಂಬ ಮೂಲ ಪ್ರಶ್ನೆ ಇದೆ.
ನದಿ ಇಲ್ಲದೆಡೆ ಬೆಳೆದ ಬೆಂಗಳೂರು, ಇಷ್ಟೊಂದು ಅಗಾಧ ಜನಸಂಖ್ಯೆಯನ್ನು ಪೋಷಿಸುತ್ತಿರುವುದು ಅಚ್ಚರಿಯೆನಿಸುತ್ತಿದೆ. ಕ್ರಿ. ಶ. 1896ರಲ್ಲಿ ಬೆಂಗಳೂರಿನ ಜನಸಂಖ್ಯೆ 1.8 ಲಕ್ಷವಿದ್ದಾಗ 18 ಕಿ.ಲೋ ಮೀಟರ್ ದೂರದ ಹೆಸರಘಟ್ಟ ಕೆರೆಯಿಂದ ಮಲ್ಲೇಶ್ವರಕ್ಕೆ ನೀರು ಬಂದಿದೆ. ಇದಕ್ಕೂ ಪೂರ್ವದಲ್ಲಿ ಧರ್ಮಾಂಬುದಿ, ಸಂಪಂಗಿ, ಹಲಸೂರು ಕೆರೆಯ ನೀರು ನೆರವಾಗಿದೆ.
ಜನಸಂಖ್ಯೆ ಏರಿದಂತೆ ಕ್ರಿ.ಶ. 1933-54 ರ ಸಮಯದಲ್ಲಿ 28 ಕಿ.ಲೋ ಮೀಟರ್ ದೂರದ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ನಂಬಿ ಈ ನಗರ ಬದುಕಿದೆ. ಕ್ರಿ.ಶ. 1974ರಲ್ಲಿ 100 ಕಿಲೋ ಮೀಟರ್ ದೂರದ ಕಾವೇರಿ ಪ್ರಥಮ ಹಂತದಿಂದ ಶುರುವಾಗಿ ಕ್ರಿ.ಶ. 2002ರ ನಾಲ್ಕು ಹಂತಗಳಲ್ಲಿ ಜಲ ದಾಹಕ್ಕೆ ತಕ್ಕಂತೆ ಯೋಜನೆ ವಿಸ್ತರಿಸಿದೆ. ವಿಶೇಷವೆಂದರೆ, ದೂರ ದೂರದಿಂದ ನೀರು ಬರಲು ಆರಂಭಿಸಿದಂತೆ ಕೆರೆ ಕಳೆಯುವ ಆಟ ಸಾಗಿದೆ. ಕ್ರಿ.ಶ. 1980ರ ಸುಮಾರಿಗೆ 262 ಕೆರೆಗಳ ಬೀಡಾಗಿದ್ದ ಬೆಂಗಳೂರಲ್ಲಿ ಈಗ 127 ಕೆರೆ ಮಾತ್ರ ಇದೆ. ಇವುಗಳಲ್ಲಿಯೂ 81 ಕೆರೆಗಳಲ್ಲಿ ಮಾತ್ರ ನೀರಿದೆ. ಕಸ ಚೆಲ್ಲುವುದು, ಕೊಳಚೆ ನೀರು ಬಿಡುವುದು, ಕಾಲುವೆ ಅತಿಕ್ರಮಿಸುತ್ತ ನಗರದ ಅಂತರ್ಜಲ ಹಾಳು ಮಾಡುವ ಕಾರ್ಯ ನಡೆದಿದೆ. ಕಾವೇರಿ ನೀರಿಲ್ಲದೇ ಮಂಡ್ಯದ ಭತ್ತದ ಗದ್ದೆ ಒಣಗುತ್ತಿದ್ದರೆ, ಇತ್ತ ಬೆಂಗಳೂರಲ್ಲಿ ನೀರು ಪೋಲಾಗುತ್ತಿರುತ್ತದೆ. ಅತಿ ಹೆಚ್ಚು ನೀರು ಬಳಸುವುದು, ವ್ಯರ್ಥಮಾಡುವುದು ಘನತೆಯಾದಂತೆ ಕಾಣಿಸುತ್ತಿದೆ. ನೀರಿನ ಸಂಕಷ್ಟದಿಂದ ಜನಕ್ಕೆ ಪಾಠ ಕಲಿಸಲು ಕಾನೂನು ಬಿಗಿಯಾಗಬೇಕು. ನೀರನ್ನು ಭೂಮಿಗೆ ಇಂಗಿಸುವುದು, ಮಳೆ ನೀರು ಶೇಖರಿಸುವ ಕಾರ್ಯಗಳು ಜನಪ್ರಿಯವಾಗಬೇಕು. ತ್ಯಾಜ್ಯ ನೀರು ಶುದ್ಧೀಕರಿಸಿ ಬಳಸುವ ಕಾರ್ಯ ವೇಗ ಪಡೆಯಬೇಕು. ಕೆರೆಗಳನ್ನು ಸ್ವತ್ಛವಾಗಿಡುವುದು ಕರ್ತವ್ಯವೆಂಬ ನಾಗರಿಕ ಪ್ರಜ್ಞೆ, ಬಡಾವಣೆಯ ಜನಮನದಲ್ಲಿ ಮೂಡದಿದ್ದರೆ ಬೆಂಗಳೂರು ಜಲ ಭಾಗ್ಯ ಸಾಧ್ಯವಿಲ್ಲ. ಮೇಕೆದಾಟು ಯೋಜನೆ ಮೂಲಕ ಕುಡಿಯುವ ನೀರು ಪಡೆಯುವ ಅವಕಾಶವಿದೆಯಾದರೂ ಅಂತರ ರಾಜ್ಯ ಜಲವಿವಾದ ಇದ್ದೇ ಇದೆ.
ಪರಿಸರ ಕಾನೂನುಗಳ ಮಧ್ಯೆ ಬೃಹತ್ ಯೋಜನೆ ಜಾರಿಗೊಳಿಸುವುದು ಸುಲಭವಲ್ಲ. ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಅರಣ್ಯ ಪರಿಸರ ಮಂತ್ರಾಲಯದ ಪರಿಸರ ಪರಿಣಾಮಗಳ ಅಧ್ಯಯನ ಬೇಡವೆಂಬ ನೆಪದಲ್ಲಿ ಕಣ್ಮುಚ್ಚಿ ಹೆಜ್ಜೆ ಇಡಲಾಗದು. ಇವತ್ತು ಯಾರಿಗೂ ಯಾರ ಮೇಲೂ ವಿಶ್ವಾಸ ಉಳಿದಿಲ್ಲ. “ನೈಸ್’ ರಸ್ತೆಯ ನಾಟಕದಂತೆ, ಎತ್ತಿನಹೊಳೆಯ ಆಟದಂತೆ ಎಲ್ಲವೂ ಕಾಣಿಸುತ್ತಿದೆ. ಪ್ರಯೋಗಕ್ಕೆ ಎಸೆವ ಆಟ ಚಾಲೂ ಇದೆ. ತ್ಯಾಗರಾಜ್ ಸಮಿತಿ ಲಿಂಗನಮಕ್ಕಿ ನೀರಿಗೆ ಮೂಡಿಗೆರೆಯ ದಾರಿ ತೋರಿಸಿದಾಗಲೇ ಸೋತಿದೆ. ಇದರ ಬಳಿಕ ಇನ್ನೊಂದು ಖಾಸಗಿ ವರದಿ ಸರಕಾರದ ಕೈಯ್ಯಲ್ಲಿದೆ. ಅಘನಾಶಿನಿ-ಲಿಂಗನಮಕ್ಕಿ ಸೇರಿಸಿ 40 ಟಿಎಮ್‌ಸಿ ನೀರನ್ನು ಅಜ್ಜಂಪುರಕ್ಕೆ ತುಂಗಾ ಕಣಿವೆಯ ಮೂಲಕ ಒಯ್ಯುವ ಪರಿಕಲ್ಪನೆ ಇದೆ. ನಮ್ಮ ದಾರಿಗಳೆಲ್ಲ ಬೆಂಗಳೂರು ಸೇರುವಂತೆ ನದಿಗಳ ದಿಕ್ಕು ಬದಲಿಸುವ ದುಃಸ್ಸಾಹಸ ಸಾಗಿದೆ. ಸೀತೆಗೆ ಬಾಯಾರಿದಾಗ ಶ್ರೀರಾಮ ಬಿಟ್ಟ ಬಾಣದಿಂದ ಅಂಬುತೀರ್ಥದಲ್ಲಿ ಶರಾವತಿ ಜನನವಾಯಿತಂತೆ! ಈಗ ನೀರಾವರಿ ಸಮಿತಿಯ ಬಾಣಗಳು ಹೊರಟಿವೆ. ಅರಣ್ಯನಾಶದಿಂದ ತತ್ತರಿಸಿ ಶರಶಯೆÂಯಲ್ಲಿ ಮಲಗಿದ ಶರಾವತಿ ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರಿಗೆ ನೀರು ನೀಡಬಲ್ಲಳೇ? ಪ್ರಶ್ನೆ ಉಳಿದಿದೆ.
ಶಿವಾನಂದ ಕಳವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪಾಟ್ನಾ ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.