ಶೇರು ಪೇಟೆ ಸಮಾಚಾರ; ಖರೀದಿದಾರರ ವರ್ತನೆ ಹೇಗಿರಬೇಕು?
Team Udayavani, Nov 25, 2019, 5:30 AM IST
ನಮ್ಮಲ್ಲಿ ಶೇರುಗಳನ್ನು ಕೊಂಡ ಮಾತ್ರಕ್ಕೆ ತಮ್ಮ ಕೆಲಸ ಮುಗಿಯಿತೆಂದು ಮಗುಮ್ಮಾಗಿ ಕುಳಿತುಕೊಂಡುಬಿಡುವವರ ಸಂಖ್ಯೆ ಹೆಚ್ಚು. ಆದರ ಬೆಳವಣಿಗೆಯ ಬಗೆಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಅಮಾವಾಸ್ಯೆಗೋ ಹುಣ್ಣಿಮೆಗೋ ಒಮ್ಮೆ ಪರೀಕ್ಷಿಸಿ ಶೇರು ಬೆಲೆ ಕುಸಿದಿದ್ದರೆ ಗಾಬರಿ ಬೀಳುವ ಪ್ರವೃತ್ತಿಯವರು ಬಹಳ ಜನ ಇದ್ದಾರೆ. ಶೇರುಪೇಟೆಯ ವ್ಯವಹಾರದತ್ತ ನಮ್ಮ ಸ್ವಭಾವ ಹೇಗಿರಬೇಕು ಎಂಬುದನ್ನು ಲೇಖಕರು ವಿವರಿಸಿದ್ದಾರೆ.
ಶೇರುಪೇಟೆ ಅಪಾಯಭರಿತವಾದದ್ದು. ಅಲ್ಲಿ ಹೂಡಿದ ದುಡ್ಡು ಯಾವಾಗ ಬೇಕಾದರೂ ಕಳೆದುಹೋಗಬಹುದು ಎನ್ನುವ ಸರಳ ಸತ್ಯ ಎಲ್ಲರಿಗೂ ತಿಳಿದೇ ಇದೆ. ಆದರೂ, ಯಾಕೋ ಏನೋ ನಮ್ಮ ಮನಸ್ಸು ಅದರಿಂದ ಬರಬಹುದಾದ ಬೃಹತ್ ಜಾಕ್‌ಪಾಟ್ ಲಾಭಗಳ ಸುತ್ತಲೇ ಗಿರಕಿ ಹೊಡೆಯುತ್ತದೆ. ಆಸೆಯ ಶಕ್ತಿಯೇ ಅಂಥದ್ದು! ಅದು ಅಪಾಯಗಳನ್ನು ಕಡೆಗಣಿಸಿ, ಸಿಗಬಹುದಾದ ಸಿರಿಯತ್ತ ಮಾತ್ರ ಮನಸ್ಸನ್ನು ಕೇಂದ್ರೀಕರಿಸುವಂತೆ ಮಾಡುತ್ತದೆ.
ಶೇರು ಖರೀದಿಸುವಾಗ ಸಲಹೆ ನೀಡಲು ಹಲವಾರು ಜನರು ಇರುತ್ತಾರೆ. ದಿನ ಬೆಳಗಾದರೆ ದೃಶ್ಯ ಮಾಧ್ಯಮದಲ್ಲಿ, ವೃತ್ತ ಪತ್ರಿಕೆಗಳಲ್ಲಿ ಯಾವ ಶೇರನ್ನು ಯಾವ ಬೆಲೆಗೆ ಕೊಂಡುಕೊಳ್ಳಬಹುದು ಎನ್ನುವ ಸಲಹೆ ದಂಡಿಯಾಗಿ ದೊರೆಯುತ್ತದೆ. ಆದರೆ, ಶೇರನ್ನು ಕೊಂಡುಕೊಂಡ ನಂತರ ಏನು ಮಾಡಬೇಕು ಎನ್ನುವ ಸಲಹೆಯನ್ನು ಬಹುತೇಕರು ನೀಡುವುದಿಲ್ಲ. ಅದೇ ಶೇರನ್ನು ಯಾವಾಗ, ಯಾವ ಬೆಲೆಗೆ ಮಾರಿದರೆ ಲಾಭ ಗಳಿಸಬಹುದು ಎಂಬಿತ್ಯಾದಿ ಸಲಹೆ ಸಿಗುವುದೂ ದುರ್ಲಭ. ಹಾಗಾಗಿಯೇ, ಹಲವರ ಕೈಯಲ್ಲಿ ವರ್ಷಾನುಗಟ್ಟಲೆ ಶೇರುಗಳು ಹಾಗೆಯೇ ಖಾತೆಯಲ್ಲಿ ಕೊಳೆಯುತ್ತಿರುತ್ತವೆ. ಅವುಗಳಲ್ಲಿ ಹೆಚ್ಚಿನವುಗಳ ಬೆಲೆ ನೆಲಕಚ್ಚಿ ನಿಮ್ಮ ಹೂಡಿಕೆಯಲ್ಲಿ ಭಾರೀ ನಷ್ಟ ಉಂಟಾಗಿದ್ದರೆ ಅದರಲ್ಲಿ ಆಶ್ಚರ್ಯವಿಲ್ಲ.
ಅಧ್ಯಯನ ಮುಖ್ಯ
ಯಾವುದೇ ಸಂಸ್ಥೆಯ ಶೇರನ್ನು ಯಾವಾಗ ಖರೀದಿಸಬೇಕು ಎನ್ನುವುದಕ್ಕೆ ನೀಡುವ ಮಹತ್ವವನ್ನು, ಯಾವಾಗ ಮಾರಾಟ ಮಾಡಬೇಕು ಎನ್ನುವುದಕ್ಕೂ ನೀಡಬೇಕು. ಮೊತ್ತ ಮೊದಲನೆದಾಗಿ, ಖರೀದಿದಾರರು ತಮ್ಮ ಶೇರಿನ ಗ್ರಹಗತಿಯನ್ನು ಸರಿಯಾಗಿ ಗಮನಿಸುತ್ತಾ ಇರಬೇಕು. ಆ ಕಂಪೆನಿಯ ಸಾಧನೆ ಮತ್ತು ಶೇರುಪೇಟೆಯಲ್ಲಿ ಅದರ ಬೆಲೆಯ ಏರಿಳಿತಗಳನ್ನು ಅಧ್ಯಯನ ಮಾಡುತ್ತಾ ಇರಬೇಕು. ಆ ಕಂಪೆನಿಯ ಸಾಧನೆ ಅಥವಾ ಭವಿಷ್ಯ ಕುಂಠಿತವಾಗುವ ಲಕ್ಷಣಗಳು ಕಂಡು ಬಂದಲ್ಲಿ ಅದನ್ನು ಕೂಡಲೇ ಮಾರಿಬಿಡಿ. ಈ ಸಲುವಾಗಿ ಕಂಪೆನಿಗಳ ಮೂಲಭೂತ ಸಾಧನೆ (ಫಂಡಮೆಂಟಲ್ಸ…) ಮತ್ತು ತಾಂತ್ರಿಕ ಅಂಶಗಳ ಕುರಿತು ಅಧ್ಯಯನ ಮಾಡುತ್ತಾ ಇರಬೇಕು.
ತಾಳ್ಮೆ ಇರಬೇಕು,
ಯಾವುದೇ ಕಾರಣಕ್ಕೂ ಒಂದು ಶೇರಿನ ಬಗ್ಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಳ್ಳಬಾರದು. ಶೇರು ಎನ್ನುವುದು ಹೂಡಿಕೆ ಮಾತ್ರ. ಅದು ಕೇವಲ ಲಾಭ ತಂದುಕೊಡುವ ಮಾರ್ಗ ಮಾತ್ರ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಕೇವಲ ಭಾವನಾತ್ಮಕ ಕಾರಣಕ್ಕಾಗಿ ಅನಿಲ್ ಅಂಬಾನಿಯವರ ಸಂಸ್ಥೆಯ ಶೇರುಗಳನ್ನು ಕಾಪಿಡುತ್ತಾ ಬಂದವರು ಇವತ್ತು ನಿರಾಶರಾಗಿದ್ದಾರೆ. ಶೇರು ಯಾವ ಉದ್ದಿಮೆ ಅಥವಾ ಕ್ಷೇತ್ರಕ್ಕೆ ಸೇರಿದ್ದು ಎನ್ನುವುದು ಬಹಳ ಮುಖ್ಯ. ಒಂದು ಆರ್ಥಿಕ ವ್ಯವಸ್ಥೆಯಲ್ಲಿ ಬೇರೆ ಬೇರೆ ಉದ್ದಿಮೆಗಳ ಏರಿಳಿತ, ಒಂದು ಸಹಜ ಪ್ರಕ್ರಿಯೆ. ನಿಮ್ಮ ಶೇರು ಯಾವ ಉದ್ದಿಮೆಗೆ ಸೇರಿದೆಯೋ ಅದರ ಬೆಳವಣಿಗೆಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಾ ಇರಬೇಕು. ಯಾವುದೇ ರೀತಿಯ ಇಳಿತ ಕಂಡು ಬಂದಲ್ಲಿ ಶೇರನ್ನು ಮಾರಿ ಬಿಡುವುದು ಒಳ್ಳೆಯದು. ಆದರೆ, ತಾಳ್ಮೆ ಮುಖ್ಯವಾಗಿ ಇರಬೇಕಾದ ಅಂಶ. ಈ ದಿನ ಇಳಿದಿರುವ ಬೆಲೆ ನಾಳೆಯೇ ಏರಬಹುದು. ಹಾಗಾಗಿ ಮಾರುಕಟ್ಟೆಯ ಅಧ್ಯಯನದ ಮೂಲಕ ಆ ಶೇರಿನ ಸ್ವಭಾವವನ್ನು ಅರಿತಿದ್ದರೆ ಒಳ್ಳೆಯದು.
ಕುಸಿತದ ಸೂಚನೆ ಸಿಗಲಿ
ಮುಂದಿನ ವಿಚಾರ ದೇಶದ ಸಮಗ್ರ ಆರ್ಥಿಕತೆಗೆ ಸಂಬಂಧಪಟ್ಟದ್ದು. ರಿಸೆಶನ್ (ಆರ್ಥಿಕ ಹಿಂಜರಿಕೆ), ಡಿಪ್ರಶನ್ (ಆರ್ಥಿಕ ಕುಸಿತ)ನಂಥ ವಿದ್ಯಮಾನಗಳು ಇಡೀ ಶೇರು ಮಾರುಕಟ್ಟೆಯನ್ನೇ ಕುಸಿಯುವಂತೆ ಮಾಡುತ್ತವೆ. ಅಂಥ ಸಮಯ ಬರುವ ಮುನ್ನವೇ ಮುನ್ಸೂಚನೆಯನ್ನು ಅರಿತು, ಇರುವ ಶೇರುಗಳಲ್ಲಿ ಭಾಗಶಃ ಅಥವಾ ಪೂರ್ತಿ ಮಾರುವುದು ಒಳ್ಳೆಯದು.
ಚೈನ್ ರಿಯಾಕ್ಷನ್
ಒಂದು ಶೇರಿನ ಅಥವಾ ಮಾರುಕಟ್ಟೆಯ ಬೆಲೆ ಕುಸಿಯಲು ಆ ಕಂಪೆನಿಯ ಅಥವಾ ದೇಶದ ಪರಿಸ್ಥಿತಿಯೇ ಕಾರಣವಾಗಬೇಕು ಎಂದೇನೂ ಇಲ್ಲ. ಇಂದಿನ ದಿನದಲ್ಲಿ ಜಾಗತಿಕ ಮಟ್ಟದಲ್ಲಿ ಎಲ್ಲಾ ಮಾರುಕಟ್ಟೆಗಳೂ ಒಂದಕ್ಕೊಂದು ಥಳುಕು ಹಾಕಿಕೊಂಡಿವೆ. ಪ್ರಪಂಚದ ಯಾವುದೋ ಮೂಲೆಯಲ್ಲಿ ಘಟಿಸಿದ ಘಟನೆಯ ಪರಿಣಾಮ ಇನ್ಯಾವುದೋ ಮೂಲೆಯಲ್ಲಿರುವ ದೇಶದ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಬಹುದು. ಇದರಿಂದಾಗಿ ನಮ್ಮ ದೇಶದ ಮಾರುಕಟ್ಟೆ ಹಾಗೂ ನಮ್ಮ ಶೇರುಗಳು ಕೂಡಾ ಬೆಲೆ ಕಳಕೊಳ್ಳಬಹುದು. ಹೀಗಾಗಿ, ಅಂತಾರಾಷ್ಟ್ರೀಯ ವಿದ್ಯಮಾನಗಳ ಮೇಲೂ ಗಮನವಿಡಬೇಕು.
-ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.