ಶಾರ್ಟ್ ಟರ್ಮ್ ಸಾಲ
Team Udayavani, Aug 19, 2019, 5:00 AM IST
ಈ ವರ್ಷದಲ್ಲಿ ಫೆಬ್ರವರಿ, ಏಪ್ರಿಲ್, ಜೂನ್ ಮತ್ತು ಆಗಸ್ಟ್ ತಿಂಗಳಿನಲ್ಲಿ ರಿಸರ್ವ್ ಬ್ಯಾಂಕ್, ಸತತವಾಗಿ ನಾಲ್ಕು ಸಲ ರೆಪೋ ದರವನ್ನು ಕಡಿಮೆ ಮಾಡಿದೆ. ಹೀಗಾಗಿ ಈ ವರ್ಷದಲ್ಲಿ ರೆಪೋ ದರದಲ್ಲಿ ಶೇಕಡಾ 1.1ರಷ್ಟು ಕಡಿಮೆಯಾಗಿದ್ದು, ಪ್ರಸ್ತುತ ರೆಪೋ ದರ ಶೇಕಡಾ 5.4 ಆಗಿದೆ. ಇಷ್ಟು ಪ್ರಮಾಣದಲ್ಲಿ ರಿಸರ್ವ್ ಬ್ಯಾಂಕ್ ರೆಪೋ ದರ ಕಡಿಮೆ ಮಾಡಿದರೂ, ಬ್ಯಾಂಕುಗಳು ಅದೇ ಪ್ರಮಾಣದಲ್ಲಿ ಗ್ರಾಹಕರಿಗೆ ನೀಡುವ ಸಾಲಗಳ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡುತ್ತಿಲ್ಲ.
ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಗೃಹ ಖರೀದಿ ಅಥವಾ ನಿರ್ಮಾಣ, ವಾಹನ ಖರೀದಿ ಮೊದಲಾಗಿ ಹಲವು ಸಾಲ ಸೌಲಭ್ಯಗಳನ್ನು ನೀಡುತ್ತಿವೆ. ವಿವಿಧ ಸಾಲಗಳಿಗೆ ವಿಧಿಸುವ ಬಡ್ಡಿದರ, ಷರತ್ತುಗಳು ಮತ್ತು ಗ್ರಾಹಕ ನೀಡಬೇಕಾದ ದಾಖಲೆಗಳು, ಅಡಮಾನ ಮೊದಲಾದವುಗಳು ಬೇರೆಯಾಗಿರಬಹುದು.
ಒಂದು ವೇಳೆ ಬ್ಯಾಂಕಿಗೆ ಅಲ್ಪಾವಧಿಯ ಸಾಲ ಬೇಕಾದರೆ, ಇಂಥ ಸಾಲವನ್ನು ಭಾರತದ ರಿಸರ್ವ್ ಬ್ಯಾಂಕ್ ನೀಡುತ್ತದೆ. ಈ ಸಾಲ ಪಡೆಯಲು, ಬ್ಯಾಂಕು ನೀಡುವ ಬಾಂಡುಗಳು ಮತ್ತು ಸೆಕ್ಯೂರಿಟಿಗಳನ್ನು ಆಧರಿಸಿ, ಸಾಲದ ಮೊತ್ತವನ್ನು ರಿಸರ್ವ್ ಬ್ಯಾಂಕ್ ನಿರ್ಧರಿಸುತ್ತದೆ. ಹೀಗೆ ಸಾಲ ಪಡೆಯುವ ಬ್ಯಾಂಕ್, ತಾನು ಪಡೆದ ಸಾಲವನ್ನು ಮರುಪಾವತಿ ಮಾಡಲು, ಪೂರ್ವ ನಿಗದಿತ ದರಕ್ಕೆ ಅನುಗುಣವಾಗಿ ಈ ಬಾಂಡುಗಳನ್ನು ಮತ್ತು ಸೆಕ್ಯೂರಿಟಿಗಳನ್ನು ರಿಸರ್ವ್ ಬ್ಯಾಂಕ್‌ನಿಂದ ಮರುಖರೀದಿಸಬೇಕಾಗುತ್ತದೆ. ಈ ರೀತಿ ತನ್ನ ಆಧೀನ ಬ್ಯಾಂಕುಗಳಿಗೆ ಅಲ್ಪಾವಧಿಯ ಸಾಲವನ್ನು ರಿಸರ್ವ್ ಬ್ಯಾಂಕ್ ನೀಡುವುದನ್ನು ರೆಪೋ ಎಂದು ಕರೆದರೆ, ಈ ಸಾಲಕ್ಕೆ ರಿಸರ್ವ್ ಬ್ಯಾಂಕ್‌ವಿಧಿಸುವ ಬಡ್ಡಿದರವನ್ನು ರೆಪೋದರವೆಂದು ಕರೆಯಲಾಗುತ್ತದೆ.
ಸಾಲಪಡೆಯಲು ಅನುಕೂಲ
ರಿಸರ್ವ್ ಬ್ಯಾಂಕ್ ರೆಪೋದರವನ್ನು ಕಡಿಮೆ ಮಾಡಿದಾಗ ಏನಾಗುತ್ತದೆ ನೋಡೋಣ. ಮೊದಲಿಗಿಂತ ಕಡಿಮೆ ಬಡ್ಡಿಗೆ ರಿಸರ್ವ್ ಬ್ಯಾಂಕ್‌ನಿಂದ ಅಲ್ಪಾವಧಿ ಸಾಲ (ರೆಪೋ) ಪಡೆಯಲು ಬ್ಯಾಂಕುಗಳಿಗೆ ಸಾಧ್ಯವಾಗುತ್ತದೆ. ಇದರಿಂದಾಗಿ, ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿದರೆ, ಹೆಚ್ಚು ಜನ ಗ್ರಾಹಕರು ಸಾಲ ಪಡೆಯಲು ಸಾಧ್ಯವಾಗುತ್ತದೆ. ಹೀಗೆ ಸಾಲ ಪಡೆಯುವ ಗ್ರಾಹಕರು ಮನೆ, ವಾಹನ, ಗೃಹೋಪಯೋಗಿ ವಸ್ತುಗಳು ಮೊದಲಾದವುಗಳನ್ನು ಖರೀದಿಸಲು ಮುಂದಾದಾಗ, ದೇಶದಲ್ಲಿರುವ ಉದ್ಯಮಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಹೆಚ್ಚು ಮಾರುಕಟ್ಟೆ ದೊರೆಯುತ್ತದೆ. ಇದಲ್ಲದೆ ಭಾರತದಲ್ಲಿ ಅಪಾರ ಪ್ರಮಾಣದ ಬಂಡವಾಳ ಹೂಡಿಕೆ ಮಾಡಲು ವಿದೇಶಿ ಹೂಡಿಕೆದಾರರು ಮುಂದಾಗಬಹುದು. ಒಟ್ಟಾರೆಯಾಗಿ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ.
ಈ ವರ್ಷದಲ್ಲಿ ಫೆಬ್ರವರಿ, ಏಪ್ರಿಲ್, ಜೂನ್ ಮತ್ತು ಆಗಸ್ಟ್ ತಿಂಗಳಿನಲ್ಲಿ ರಿಸರ್ವ್ ಬ್ಯಾಂಕ್, ಸತತವಾಗಿ ನಾಲ್ಕು ಸಲ ರೆಪೋದರವನ್ನು ಕಡಿಮೆ ಮಾಡಿದೆ. ಹೀಗಾಗಿ ಈ ವರ್ಷದಲ್ಲಿ ರೆಪೋ ದರದಲ್ಲಿ ಶೇಕಡಾ 1.1ರಷ್ಟು ಕಡಿಮೆಯಾಗಿದ್ದು, ಪ್ರಸ್ತುತ ರೆಪೋದರ ಶೇಕಡಾ 5.4 ಆಗಿದೆ.
ಬಡ್ಡಿ ದರ ಇಳಿದಿಲ್ಲ
ಆದರೆ ಇಷ್ಟು ಪ್ರಮಾಣದಲ್ಲಿ ರಿಸರ್ವ್ ಬ್ಯಾಂಕ್ ರೆಪೋ ದರ ಕಡಿಮೆ ಮಾಡಿದರೂ, ಬ್ಯಾಂಕುಗಳು ಅದೇ ಪ್ರಮಾಣದಲ್ಲಿ ಗ್ರಾಹಕರಿಗೆ ನೀಡುವ ಸಾಲಗಳ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡುತ್ತಿಲ್ಲ. ಮೊದಲನೆಯದಾಗಿ ರಿಸರ್ವ್ ಬ್ಯಾಂಕ್ ರೆಪೋದರವನ್ನು ಕಡಿಮೆ ಮಾಡಿದಾಗ, ಬ್ಯಾಂಕಿನ ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡುವುದು ಅಥವಾ ಯಥಾ ಸ್ಥಿತಿಯಲ್ಲಿ ಮುಂದುವರೆಸುವುದು, ಆಯಾ ಬ್ಯಾಂಕಿನ ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ.
ಎರಡನೆಯದಾಗಿ, ಈ ಮೊದಲು ಬ್ಯಾಂಕುಗಳು ಗ್ರಾಹಕರಿಗೆ ನೀಡಿರುವ ಸಾಲಗಳಲ್ಲಿ ಬ್ಯಾಂಕಿಗೆ ಮರುಪಾವತಿಯಾಗದೆ ಇರುವ ಸಾಲದ ಮೊತ್ತ ಹೆಚ್ಚಾಗುತ್ತಿದೆ. ಹೀಗೆ ಮರುಪಾವತಿಯಾಗದೆ ಉಳಿದಿರುವ ಸಾಲ ಹೆಚ್ಚಾದಂತೆ, ಹಣಕಾಸಿನ ಕೊರತೆಯ ಕಾರಣದಿಂದಲೇ ಬ್ಯಾಂಕುಗಳಿಗೆ ಆಗುತ್ತಿರುವ ನಷ್ಟದ ಪ್ರಮಾಣವೂ ಹೆಚ್ಚಾಗುತ್ತಿದೆ.
ಹಳೆಯ ದರವೇ ಲೆಕ್ಕಕ್ಕೆ ಬರುತ್ತೆ
ಮೂರನೆಯದಾಗಿ, ಬ್ಯಾಂಕುಗಳು ನೀಡುವ ಸಾಲಗಳ ಮೇಲಿನ ಬಡ್ಡಿದರವನ್ನು ನಿರ್ಧರಿಸುವಾಗ, ಬ್ಯಾಂಕಿನಲ್ಲಿ ಗ್ರಾಹಕರು ಇರಿಸುವ ಠೇವಣಿಗೆ ನೀಡುವ ಬಡ್ಡಿದರವನ್ನು ಪರಿಗಣಿಸಬೇಕಾಗುತ್ತದೆ. ಸಾಮಾನ್ಯವಾಗಿ, ಗ್ರಾಹಕರು ಇರಿಸುವ ಠೇವಣಿಗಳಿಗೆ ನೀಡುವ ಬಡ್ಡಿ ಹೆಚ್ಚಾಗಿದ್ದರೆ, ಸಾಲಗಳಿಗೆ ವಿಧಿಸುವ ಬಡ್ಡಿದರವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಬ್ಯಾಂಕುಗಳಿಗೆ ಸಾಧ್ಯವಾಗುವುದಿಲ್ಲ. ಗ್ರಾಹಕರು ಇರಿಸುವ ಠೇವಣಿಗಳಿಗೆ ನೀಡುವ ಬಡ್ಡಿದರವನ್ನು ಕಡಿಮೆ ಮಾಡಿದರೂ, ಈಗಾಗಲೇ ಗ್ರಾಹಕರು ಇಟ್ಟಿರುವ ಹೆಚ್ಚಿನ ಮೊತ್ತದ ಠೇವಣಿಗಳ ಅವಧಿ ಪೂರ್ತಿಯಾಗುವ ತನಕ, ಹಳೆಯ ಬಡ್ಡಿದರವನ್ನು ನೀಡಬೇಕಾಗುತ್ತದೆ.
ಹೀಗೆ ಹಲವು ಅಂಶಗಳನ್ನು ಪರಿಗಣನೆಗೆ ತಗೆದುಕೊಂಡು, ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಲು ಬ್ಯಾಂಕುಗಳಿಗೆ ಸಮಯ ಬೇಕಾಗುತ್ತಿದೆ. ಈ ಸಮಯವನ್ನು ಕಡಿಮೆ ಮಾಡಲು, ಬ್ಯಾಂಕುಗಳು ಪ್ರಯತ್ನಿಸುತ್ತಿವೆ. ಉದಾಹರಣೆಗೆ, ದೊಡ್ಡ ಮೊತ್ತದ ಠೇವಣಿಗಳಿಗೆ ನೀಡುವ ಬಡ್ಡಿದರವನ್ನು, ರೆಪೋದರಕ್ಕೆ ಲಿಂಕ್ ಮಾಡುವ ಯತ್ನ ನಡೆದಿದೆ. ಇದರಿಂದಾಗಿ, ರೆಪೋದರ ಕಡಿಮೆಯಾದಾಗ, ಈ ಠೇವಣಿಗಳಿಗೆ ನೀಡುವ ಬಡ್ಡಿ ಕೂಡಾ ಕಡಿಮೆ ಆಗುತ್ತದೆ. ಗ್ರಾಹಕರಿಗೆ ನೀಡುವ ಕೆಲವು ಸಾಲಗಳ ಮೇಲಿನ ಬಡ್ಡಿದರವನ್ನು ಇದೇ ರೀತಿ ರೆಪೋದರಕ್ಕೆ ಲಿಂಕ್ ಮಾಡುವ ಯತ್ನ ನೆಡೆದಿದೆ. ಇದರಿಂದಾಗಿ, ರೆಪೋದರ ಕಡಿಮೆಯಾದಾಗ, ಇಂಥ ಸಾಲದ ಮೇಲಿನ ಬಡ್ಡಿದರ ಕೂಡಾ ಕಡಿಮೆಯಾಗಿ, ಗ್ರಾಹಕರಿಗೆ ತಕ್ಷಣ ಲಾಭವಾಗುತ್ತದೆ.
– ಶಂಕರ ಯು.ಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.