ರೇಷ್ಮೆ ಹುಳದ ಹೋರಾಟದ ಬದುಕು
Team Udayavani, Jan 16, 2017, 3:45 AM IST
ನಮ್ಮ ಬದುಕಿಗೂ ಹೋರಾಟ ಬೇಕು. ಎಲ್ಲದಕ್ಕೂ ಬೇರೆಯವರ ನೆರವು ಸಿಕ್ಕಿಬಿಟ್ಟರೆ ನಾವು ಏನಾಗಬೇಕೋ ಅದಾಗದೇ ಹೋಗಬಹುದು. ಅಥವಾ ಈ ಜಗತ್ತಿನಲ್ಲಿ ಬದುಕಲು ಅಸಮರ್ಥರಾಗಬಹುದು.
ಪರಮೇಶ್ ಸಂಜೆಯ ವಾಕಿಂಗಿಗೆ ಹೋಗಿದ್ದಾಗ ಅವನಿಗೊಂದು ರೇಷ್ಮೆಯ ಗೂಡು ಸಿಕ್ಕಿತು. ಅದರೊಳಗಿಂದ ರೇಷ್ಮೆ ಹುಳ ಹೊರಬರುವುದನ್ನು ನೋಡಬೇಕು ಎಂದು ಅದನ್ನೆತ್ತಿ ಕಿಸೆಗೆ ಹಾಕಿಕೊಂಡ.
ಆವತ್ತು ರಾತ್ರಿ ಆ ಗೂಡಿನಲ್ಲಿ ಸಣ್ಣದೊಂದು ಬಿರುಕು ಕಾಣಿಸಿಕೊಂಡಿತು. ಪರಮೇಶ್ ಸೂಕ್ಷ್ಮವಾಗಿ ನೋಡುತ್ತಿದ್ದ. ಗೂಡಿನಲ್ಲಿ ಸಣ್ಣದಾದ ಚಲನೆ ಕಾಣಿಸಿತು. ಕೆಲ ಗಂಟೆಗಳ ಕಾಲ ಅದು ಮುಂದುವರೆಯಿತು. ನಂತರ ರೇಷ್ಮೆ ಹುಳ ಆ ಬಿರುಕಿನಲ್ಲಿ ಮೂತಿ ಹೊರಹಾಕಿತು. ಪರಮೇಶ್ ನೋಡುತ್ತಲೇ ಇದ್ದ. ಹುಳ ಹೊರಬರಲು ಕಷ್ಟಪಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.
ಸ್ವಲ್ಪ ಸಮಯದಲ್ಲೇ ಹುಳ ತನ್ನ ಪ್ರಯತ್ನವನ್ನು ನಿಲ್ಲಿಸಿದಂತೆ ಕಾಣಿಸಿತು. ಮೂತಿ ಹೊರಬಂದಿದ್ದು ಬಿಟ್ಟರೆ ಬೇರೇನೂ ಮುಂದುವರಿಯಲಿಲ್ಲ. ಹುಳ ತನ್ನದೇ ಗೂಡಿನಲ್ಲಿ ಸಿಕ್ಕಿಹಾಕಿಕೊಂಡಿತು ಎಂದು ಪರಮೇಶ್ ಭಾವಿಸಿದ. ಮನಸ್ಸು ಕರಗಿತು. ಒಂದು ಕತ್ತರಿ ತೆಗೆದುಕೊಂಡು ಹುಷಾರಾಗಿ ಗೂಡು ಕತ್ತರಿಸಿ ಹುಳಕ್ಕೆ ಹೊರಬರಲು ದಾರಿ ಮಾಡಿಕೊಟ್ಟ.
ರೇಷ್ಮೆ ಹುಳ ನಿರಾಯಾಸವಾಗಿ ಹೊರಬಂತು. ಆದರೆ ಅದರ ದೇಹ ಊದಿಕೊಂಡಿತ್ತು. ರೆಕ್ಕೆಗಳು ಸಣ್ಣದಾಗಿದ್ದವು.
ಪರಮೇಶ್ ನೋಡುತ್ತ ಕುಳಿತ. ಯಾವುದೇ ಕ್ಷಣದಲ್ಲಾದರೂ ಅದರ ರೆಕ್ಕೆಗಳು ಬೆಳೆದು ದೇಹಕ್ಕೆ ಆಧಾರವಾಗುವಂತೆ ನಿಲ್ಲುವ ಸಾಧ್ಯತೆಯಿತ್ತು.
ಸುಮಾರು ಹೊತ್ತು ಕಳೆಯಿತು. ಏನೂ ಆಗಲಿಲ್ಲ. ವಾಸ್ತವವಾಗಿ ರೇಷ್ಮೆ ಹುಳ ತನ್ನ ದೈತ್ಯ ದೇಹವನ್ನು ಹೊರಲಾರದೆ ಒದ್ದಾಡುತ್ತಿತ್ತು. ಸಣ್ಣ ರೆಕ್ಕೆಗಳು ಅದಕ್ಕೆ ಹಾರುವ ಶಕ್ತಿ ನೀಡಲಿಲ್ಲ.
ಪರಮೇಶ್ ತಪ್ಪು ಮಾಡಿದ್ದ. ಗೂಡಿನಿಂದ ಹೊರಬರಲು ರೇಷ್ಮೆ ಹುಳಕ್ಕೆ ಅವನು ಸಹಕರಿಸಬಾರದಿತ್ತು. ಹಾಗೆ ಕಷ್ಟಪಡುತ್ತ ಹೊರಬರುವುದೇ ರೇಷ್ಮೆ ಹುಳದ ಪ್ರಕೃತಿ ಎಂಬುದು ಅವನಿಗೆ ತಿಳಿದಿರಲಿಲ್ಲ. ಸಣ್ಣ ಬಿರುಕಿನ ಮೂಲಕ ಹೊರಬರುವಾಗ ರೇಷ್ಮೆ ಹುಳ ತನ್ನ ಊದಿದ ದೇಹದಲ್ಲಿರುವ ದ್ರವವನ್ನು ರೆಕ್ಕೆಗಳಿಗೆ ವರ್ಗಾಯಿಸುತ್ತದೆ. ಅದರಿಂದ ರೆಕ್ಕೆಗಳಿಗೆ ಪುಷ್ಟಿ ದೊರೆತು ಅವು ಬೆಳೆಯುತ್ತವೆ. ಅಂತಹದ್ದೊಂದು ಹೋರಾಟದ ನಂತರವೇ ಅದಕ್ಕೆ ಸ್ವಾತಂತ್ರ್ಯ ಮತ್ತು ಬದುಕುವ ಸಾಮರ್ಥ್ಯ ದೊರಕುತ್ತದೆ.
ರೇಷ್ಮೆ ಹುಳದ ಹೋರಾಟವನ್ನು ಸುಲಭ ಮಾಡುವ ಮೂಲಕ ಪರಮೇಶ್ ಅದರ ಆರೋಗ್ಯವನ್ನು ಕಿತ್ತು ಕೊಂಡಿದ್ದ.
– ಸೀಮ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.