ಸ್ಮಾರ್ಟ್ ಕ್ಲಾಸ್ ಸ್ಮಾರ್ಟ್ ಫೋನ್
Team Udayavani, Aug 17, 2020, 7:29 PM IST
ಮಕ್ಕಳಿಂದ ಮೊಬೈಲ್ ದೂರ ಇಡ್ಬೇಕು ಅಂತ ಧ್ವನಿ ಜೋರಾಗಿದ್ದ ಕಾಲದಲ್ಲೇ, ಕೋವಿಡ್ ಬಂದು ಪೋಷಕರ ನಿಲುವನ್ನೇ ಬುಡಮೇಲು ಮಾಡಿದೆ. ಶಿಕ್ಷಣ ಆನ್‌ಲೈನ್ ಆಗಿದೆ. ಸ್ಮಾರ್ಟ್‌ಫೋನೇ ಟೀಚರ್ ಆಗಿದೆ. ಇಂಥ ಸಮಯದಲ್ಲಿ ನಮ್ಮ ಮಕ್ಕಳ ಕೈಗೆ ಯಾವ ಗುಣಮಟ್ಟದ ಸ್ಮಾರ್ಟ್‌ಫೋನ್ ನೀಡಬೇಕು?- ಇದರ ಸಂಕ್ಷಿಪ್ತ ನೋಟ ಇಲ್ಲಿದೆ…
ಕೋವಿಡ್ ದಿಂದಾಗಿ ಶಾಲಾ ಕಾಲೇಜುಗಳು ತೆರೆಯದ ಹಿನ್ನೆಲೆಯಲ್ಲಿ, ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಆನ್‌ಲೈನ್ ಪಾಠ ಮಾಡಲು ಅನುಕೂಲವಿಲ್ಲದ ಗ್ರಾಮೀಣ ಪ್ರದೇಶದ ಹಲವು ಶಾಲೆಗಳು ವಾಟ್ಸಾಪ್ ಮೂಲಕ ತಮ್ಮ ವಿದ್ಯಾರ್ಥಿಗಳಿಗೆ ಪಠ್ಯ ವಿಷಯಗಳು, ಪ್ರಶ್ನೆ ಸರಣಿಗಳನ್ನು ಕಳುಹಿಸುತ್ತಿವೆ. ವಾಟ್ಸ್ಯಾಪ್ ಮೂಲಕ ಸಾಧ್ಯವಾದಷ್ಟೂ ಪಾಠಕ್ಕೆ ಸಂಬಂಧಿಸಿದ ಸಂವಹನ ನಡೆಸುತ್ತಿವೆ. ಹೀಗಾಗಿ, ಮೊಬೈಲ್ ಫೋನ್‌ಗಳಿಗೆ ಈಗ ಬೇಡಿಕೆ ಹೆಚ್ಚಾಗಿದೆ. ಕೀ ಪ್ಯಾಡ್ ಮೊಬೈಲ್ ಬಳಕೆ ಮಾಡುತ್ತಿದ್ದವರೂ ಈಗ ತಮ್ಮ ಮಕ್ಕಳ ಆನ್‌ಲೈನ್ ತರಗತಿಗಳ ಸಲುವಾಗಿ, ಪಠ್ಯವನ್ನು ವಾಟ್ಸಾಪ್ ಮೂಲಕ ಪಡೆಯಲು ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳುವ ಅನಿವಾರ್ಯತೆಯಲ್ಲಿದ್ದಾರೆ. ತಮ್ಮ ಬಳಕೆಗೆ ಇಷ್ಟಪಡದವರು ಸಹ, ತಮ್ಮ ಮಕ್ಕಳಿಗಾಗಿ ಸ್ಮಾರ್ಟ್‌ಫೋನ್ ಕೊಡಿಸಲು ಮುಂದಾಗಿದ್ದಾರೆ.
ಹೀಗಾಗಿ, ಕೋವಿಡ್ ಕ್ಲಿಷ್ಟ ಪರಿಸ್ಥಿತಿಯಲ್ಲೂ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಿಗೆ ವ್ಯಾಪಾರ ಚೆನ್ನಾಗಿಯೇ ಆಗುತ್ತಿದೆ! ಅನೇಕರು ಪಟ್ಟಣದಲ್ಲಿರುವ ಮೊಬೈಲ್ ಅಂಗಡಿಗಳಲ್ಲಿ ಸ್ಮಾರ್ಟ್‌ಫೋನ್ ಕೊಂಡರೆ, ಇನ್ನು ಹಲವರು ಅಮೆಜಾನ್, ಫ್ಲಿಪ್‌ಕಾರ್ಟ್‌ನಂಥ ಆನ್ ಲೈನ್ ಶಾಪ್‌ಗ್ಳ ಮೂಲಕ ಫೋನ್ ಖರೀದಿಸುತ್ತಿದ್ದಾರೆ. ಹೀಗಾಗಿ ಅನೇಕ ಮೊಬೈಲ್ ಕಂಪನಿಗಳ ಫೋನ್‌ಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಕೆಲವು ಮಾಡೆಲ್‌ಗಳಂತೂ ಫ್ಲಾಶ್ ಸೇಲ್‌ಗಳಲ್ಲಿ ಕ್ಷಣಾರ್ಧದಲ್ಲಿ ಖಾಲಿಯಾಗುತ್ತಿವೆ.
ಅದೇ ಫೋನ್ ಬೇಕೆನ್ನುವವರು ಇನ್ನೊಂದು ದಿನದ ಫ್ಲಾಶ್ ಸೇಲ್‌ಗಳಿಗೆ ಕಾಯುವಂತಾಗಿದೆ. ಹೀಗೆ ಹೊಸ ಮೊಬೈಲ್ ಫೋನ್ ಕೊಳ್ಳುವಾಗ ಕೆಲವು ಅಂಶಗಳನ್ನು ಖರೀದಿದಾರರು ಗಮನಿಸುವುದು ಒಳಿತು. ಇಲ್ಲವಾದರೆ ಹೆಚ್ಚು ಹಣಕೊಟ್ಟು ಸಹ ಪ್ರಯೋಜನ ಇಲ್ಲದಂತಾಗುತ್ತದೆ.
ಮೊಬೈಲ್‌ಫೋನ್ ಕೊಳ್ಳುವಾಗ ಈ ಅಂಶಗಳನ್ನು ನೋಡಿ ಆಯ್ಕೆ ಮಾಡಿ:
- ಎಲ್ಲಕ್ಕಿಂತ ಮೊದಲು ಮೊಬೈಲ್ ಫೋನ್‌ನ ಆಂತರಿಕ ಸಂಗ್ರಹ ಮತ್ತು ರ್ಯಾಮ್ ಗಮನಿಸಿ. ಆಂತರಿಕ ಸಂಗ್ರಹ ಕನಿಷ್ಠ 64 ಜಿಬಿ ಇರಲಿ. ಒಂದು ಹೊಸ ಫೋನಿನಲ್ಲಿ ಅದಾಗಲೇ 20 ಜಿಬಿಯಷ್ಟು ಸಂಗ್ರಹದಲ್ಲಿ ಅವರದೇ ಆ್ಯಪ್‌ಗ್ಳು ಇತ್ಯಾದಿ ಇರುತ್ತವೆ. ಒಂದು ವೇಳೆ 32 ಜಿಬಿ ಫೋನ್ ಕೊಂಡರೆ ನಿಮಗೆ ಉಳಿಯುವುದು 10-12 ಜಿಬಿ ಆಂತರಿಕ ಸಂಗ್ರಹ. ಇದು ಸಾಲುವುದಿಲ್ಲ. ಶಾಲೆಯಿಂದ ಮೊಬೈಲ್‌ಗೆ ಕಳುಹಿಸುವ ಫೋಟೋ, ವಿಡಿಯೋ ಇತ್ಯಾದಿಗಳನ್ನು ಉಳಿಸಿಕೊಳ್ಳಲು ಫೋನ್‌ನಲ್ಲಿ ಸ್ಥಳಾವಕಾಶ ಬೇಕು. ಹಾಗಾಗಿ ಕನಿಷ್ಠ 64 ಜಿಬಿ ಫೋನ್ ಕೊಳ್ಳಿ. ನಂತರ 128 ಜಿಬಿ ಆಯ್ಕೆಯ ಫೋನ್‌ಗಳಿವೆ. ಅದನ್ನು ಕೊಂಡರೆ ಇನ್ನೂ ಅನುಕೂಲ.
- ರ್ಯಾಮ್ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳಬೇಡಿ. 4 ಜಿಬಿ ರ್ಯಾಮ್ ಇದ್ದರೆ ಸಾವಕಾಶವಾಗಿ ನಿಮ್ಮ ಫೋನ್ ಕೆಲಸ ಮಾಡುತ್ತದೆ. ರ್ಯಾಮ್ ಎಂದರೆ ಅದು ಪ್ರೊಸೆಸರ್ ಅಲ್ಲ. ಫೋನ್ ಬಳಸುವಾಗ ಏಕಕಾಲಕ್ಕೆ ನೀವು ತೆರೆಯುವ ಆ್ಯಪ್ ಗಳು ಹಿನ್ನೆಲೆಯಲ್ಲಿ ಉಳಿಯುವ ಸ್ಥಳಾವಕಾಶ ಅಷ್ಟೇ. ಉದಾಹರಣೆಗೆ ಫೇಸ್‌ಬುಕ್, ವಾಟ್ಸ್ಯಾಪ್, ಜಿಮೇಲ್, ವಿಂಕ್ ಮ್ಯೂಸಿಕ್ ಆ್ಯಪ್‌ಎಲ್ಲವನ್ನೂ ಒಮ್ಮೆಗೇ ನೀವು ತೆರೆಯುತ್ತೀರಿ ಎಂದುಕೊಳ್ಳೋಣ. ಫೇಸ್‌ಬುಕ್ ನೋಡುವಾಗ ಉಳಿದವು ಹಿನ್ನೆಲೆಯಲ್ಲಿರುತ್ತವೆ. ಹೀಗೆ ಏಕಕಾಲದಲ್ಲಿ ಅನೇಕ ಆ್ಯಪ್‌ಗಳು ಕಾರ್ಯಾಚರಣೆಯಲ್ಲಿರಲು ಬೇಕಾದ ಜಾಗವೇ ರ್ಯಾಮ್. ನಾವೇನು ಏಕಕಾಲದಲ್ಲಿ ಎಷ್ಟೊಂದು ಆ್ಯಪ್‌ಗಳನ್ನು ತೆರೆದುಕೊಂಡಿರಲು ಸಾಧ್ಯ? ನಮ್ಮ ನಿಮ್ಮಂಥ ಸಾಮಾನ್ಯರಿಗೆ 4 ಜಿಬಿ ರ್ಯಾಮ್ ಬೇಕಾದಷ್ಟು. ಹೀಗಾಗಿ 4 ಜಿಬಿ ರ್ಯಾಮ್ 128 ಜಿಬಿ ಆಂತರಿಕ ಸಂಗ್ರಹದ ಫೋನ್ ನಿಮಗೆ ಸಾಕು. 4 ಜಿಬಿ ಇಲ್ಲವೆಂದರೆ 6 ಜಿಬಿ ರ್ಯಾಮ್, 128 ಜಿಬಿ ಆಂತರಿಕ ಸಂಗ್ರಹ ಕೊಳ್ಳಿ. 6 ಜಿಬಿ ರ್ಯಾಮ್ 64 ಜಿಬಿ ಆಂತರಿಕ ಸಂಗ್ರಹದ್ದು ಬೇಡ. ಆಂತರಿಕ ಸಂಗ್ರಹ ಜಾಸ್ತಿ ಇರುವುದು ನಿಮ್ಮ ಆದ್ಯತೆಯಾಗಬೇಕೇ ಹೊರತು 8 ಜಿಬಿ ರ್ಯಾಮ್, 12 ಜಿಬಿ ರ್ಯಾಮ್‌ನ ಅವಶ್ಯಕತೆಯಿಲ್ಲ.
- ಉತ್ತಮ ಪ್ರೊಸೆಸರ್ ಇರುವ ಫೋನ್ ಗಳನ್ನು ಆರಿಸಿ. ಸ್ನಾಪ್‌ಡ್ರಾಗನ್ 600 ಮತ್ತು 700 ಸರಣಿಯ ಪ್ರೊಸೆಸರ್ ವೇಗ ಹೊಂದಿರುತ್ತದೆ. ಸ್ನಾಪ್ ಡ್ರಾಗನ್ 400 ಸರಣಿಯ ಫೋನ್‌ಗಳ ವೇಗ ಕಡಿಮೆ. 12 ಸಾವಿರ ರೂ.ನ ಫೋನಿನಲ್ಲಿ 400 ಸರಣಿಯ ಪ್ರೊಸೆಸರ್ ಇದ್ದರೆ ಅದು ನೀವು ಕೊಡುವ ದರಕ್ಕೆ ಸೂಕ್ತ ಫೋನಲ್ಲ.
- ಈಗೆಲ್ಲ 12 ಸಾವಿರಕ್ಕೇ 48 ಮೆಗಾಪಿಕ್ಸಲ್ ಕ್ಯಾಮೆರಾ ಇರುವ ಫೋನ್‌ಗಳು ಬಂದಿವೆ. ಕ್ಯಾಮೆರಾ ಕೂಡ ಫೋನ್‌ನಲ್ಲಿ ಮುಖ್ಯ. ಹಾಗಾಗಿ ಒಂದು ಮಟ್ಟಕ್ಕೆ ಉತ್ತಮ ಕ್ಯಾಮೆರಾ ಇರುವ ಫೋನ್ ಆರಿಸಿ. ಬ್ಯಾಟರಿ ಕನಿಷ್ಠ 4000 ಎಂಎಎಚ್ ಇರಲಿ. ವೇಗದ ಚಾರ್ಜರ್ ಇದ್ದರೆ ಒಳ್ಳೆಯದು. ಕೇವಲ ಎಚ್‌ಡಿ ಪರದೆಗೆ 12 ಸಾವಿರ ರೂ. ನೀಡಬೇಡಿ. ಆ ದರಕ್ಕೆ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಇರುವ ಅನೇಕ ಫೋನ್‌ಗಳಿವೆ.
– ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.