ಸ್ಟೂಡೆಂಟ್ ಲೋನ್ ಆಫ್ ದಿ ಇಯರ್!
ಸುಸ್ತಿ ಸಾಲದ ಕಷ್ಟ ಸುಖ!
Team Udayavani, Jul 29, 2019, 9:40 AM IST
ಕೆಲವು ಮಾಧ್ಯಮಗಳು, ದೇಶದಲ್ಲಿ ಶೈಕ್ಷಣಿಕ ಸಾಲ ವಿತರಣೆ ಕಳೆದ 4-5 ವರ್ಷಗಳಿಂದ ಕಡಿಮೆಯಾಗುತ್ತಿದೆ ಎನ್ನುವ ಅತಂಕಕಾರಿ ಮಾಹಿತಿಯನ್ನು ಇತ್ತೀಚೆಗೆ ನೀಡಿವೆ. ಇಂಥ ಒಂದು ವರದಿ ಪ್ರಕಾರ, ಬ್ಯಾಂಕುಗಳ ಶೈಕ್ಷಣಿಕ ಸಾಲದ ಪೋರ್ಟ್ ಫೋಲಿಯೋದಲ್ಲಿ ಸುಮಾರು 25% ಕಡಿತ ಆಗಿದೆಯಂತೆ. ಮಾರ್ಚ್ 2015ರಲ್ಲಿ 34ಲಕ್ಷ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆದಿದ್ದರೆ, 2019 ಮಾರ್ಚ್ ಹೊತ್ತಿಗೆ ಇದು 2.5 ಲಕ್ಷಕ್ಕೆ ಇಳಿದಿದೆಯಂತೆ. ಖಚಿತ ಮಾಹಿತಿಯ ಪ್ರಕಾರ, 2016ರಲ್ಲಿ 16800 ಕೋಟಿ ಶೈಕ್ಷಣಿಕ ಸಾಲ ವಿತರಣೆಯಾಗಿದ್ದರೆ, 2019ರಲ್ಲಿ 22550 ಕೋಟಿ ವಿತರಣೆಯಾಗಿದೆ. ಆದರೆ, ನಿಜವಾದ ಅರ್ಥದಲ್ಲಿ ಇದು ಏರಿಕೆಯಲ್ಲ ಎಂದು ಬ್ಯಾಂಕಿಂಗ್ ತಜ್ಞರು ಹೇಳುತ್ತಾರೆ. ಬ್ಯಾಂಕರುಗಳು ಕೊಲ್ಯಾಟರಲ್ ಭದ್ರತೆ ಇಲ್ಲದ 4 ಲಕ್ಷ ಕೆಳಗಿನ ಸಾಲವನ್ನು ನೀಡಲು ಹಿಂಜರಿಯುತ್ತಿದ್ದಾರೆ. ಕೊಲ್ಯಾಟರಲ್ ಭದ್ರತೆ ಇರುವ 4 ಲಕ್ಷಕ್ಕಿಂತ ದೊಡ್ಡ ಪ್ರಮಾಣದ ಸಾಲವನ್ನು ನೀಡಲು ಹೆಚ್ಚಿನ ಆಸಕ್ತಿ ವಹಿಸುತ್ತಾರೆ ಎನ್ನುವ ಮಾತೂ ಬ್ಯಾಂಕಿಂಗ್ ವಲಯದಲ್ಲಿ ಕೇಳಿಬರುತ್ತಿದೆ. ಕರ್ನಾಟಕದಲ್ಲಿ ಈ ಇಳಿಕೆ ಇನ್ನೂ ತೀವ್ರವಾಗಿದೆಯಂತೆ. 2016ರಲ್ಲಿ ಶಿಕ್ಷಣ ಸಾಲ ಪೋರ್ಟ್‌ಫೋಲಿಯೊ 4610 ಕೋಟಿ ತೋರಿಸಿದರೆ, 2018ರಲ್ಲಿ 4415 ಕೋಟಿ ಇದೆಯಂತೆ. ಹಾಗೆಯೇ ಸಾಲದ ಖಾತೆಗಳ ಸಂಖ್ಯೆಯಲ್ಲೂ ಗಮನಾರ್ಹ ಇಳಿಕೆ
ಕಂಡು ಬಂದಿದೆಯಂತೆ.
ಸರ್ಕಾರಿ ಬ್ಯಾಂಕುಗಳ ಧಾರಾಳತನ
2015ರಲ್ಲಿ 3.34ಲಕ್ಷ, 2016ರಲ್ಲಿ 3.12, 2017ರಲ್ಲಿ 2.92, 2018ರಲ್ಲಿ 2.74 ಮತ್ತು 2019ರಲ್ಲಿ 2.50 ಲಕ್ಷ ವಿಧ್ಯಾರ್ಥಿಗಳು ಶೈಕ್ಷಣಿಕ ಸಾಲವನ್ನು ಪಡೆದಿದ್ದಾರೆ. 2015ರಲ್ಲಿ 16800, 2016ರಲ್ಲಿ 1810, 2017ರಲ್ಲಿ 19500, 2018ರಲ್ಲಿ 20900 ಮತ್ತು 2019ರಲ್ಲಿ 22500 ಕೋಟಿ ರು. ಸಾಲವನ್ನು ಬ್ಯಾಂಕುಗಳು
ವಿತರಿಸಿವೆ. 2015ರಲ್ಲಿ 7% ಇದ್ದ ಸುಸ್ತಿ ಸಾಲ, 2016 ರಲ್ಲಿ 8.70, 2017ರಲ್ಲಿ 10.02, 2018ರಲ್ಲಿ 12 ಮತ್ತು 2019ರಲ್ಲಿ 12.50% ಏರಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸಕ್ರಿಯ ಶೈಕ್ಷಣಿಕ ಸಾಲಗಳ ಖಾತೆಗಳು 34 ಲಕ್ಷದಿಂದ 27.80ಕ್ಕೆ ಇಳಿದಿದೆಯಂತೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಶೈಕ್ಷಣಿಕ ಸಾಲ ವಿತರಣೆಯಲ್ಲಿ ಸ್ವಲ್ಪ ಧಾರಾಳತನ ತೋರಿಸುತ್ತಿದ್ದು, ಖಾಸಗಿ ಬ್ಯಾಂಕುಗಳು ಕೊಲ್ಯಾಟರಲ್ ಭದ್ರತೆ ಇಲ್ಲದ ನಾಲ್ಕು ಲಕ್ಷದ ಕೆಳಗಿನ ಸಾಲವನ್ನು ನೀಡಲು ಹಿಂದೇಟು ಹಾಕುತ್ತವೆಯಂತೆ. ಉದ್ಯೋಗ ಖಾತ್ರಿ ಬಗೆಗೂ ಬ್ಯಾಂಕುಗಳು ಹೆಚ್ಚಿನ ಮಹತ್ವ ಕೊಡುತ್ತವೆಯಂತೆ. ವಿದ್ಯಾರ್ಥಿಗಳು ಇಚ್ಚಿಸುವ ಕೋರ್ಸ್‌ಗೆ ಬೇಡಿಕೆ ಇದೆಯೇ ಎನ್ನುವುದನ್ನು ಕೂಡಾ ಕೆಲವು ಬ್ಯಾಂಕುಗಳು ತಮ್ಮದೇ ನೆಟ್‌ವರ್ಕ್ ಮೂಲಕ ವಿಚಾರಿಸಿ ಕೊಳ್ಳುತ್ತಿವೆಯಂತೆ.
ಗೊಂದಲಮಯ ವಿಧಾನಗಳು
ಬಹುತೇಕ ಖಾಸಗಿ ಬ್ಯಾಂಕುಗಳು ಪ್ರತಿಷ್ಟಿತ ವಿದ್ಯಾಸಂಸ್ಥೆಗಳ ಸಂಗಡ ಒಪ್ಪಂದ ಮಾಡಿಕೊಳ್ಳುತ್ತಿದ್ದು, ಅ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮಾತ್ರ ಸಾಲ ಕೊಡುತ್ತಾರಂತೆ. ಕೊಲ್ಯಾಟರಲ್ ಭದ್ರತೆ ಇಲ್ಲದೆ ನೀಡುವ 4 ಲಕ್ಷದ ವರೆಗಿನ ಸಾಲಕ್ಕೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ದಾಖಲೆ ಸಲ್ಲಿಸುವಿಕೆ ಮತ್ತು ವಿಧಿವಿಧಾನ ಗೊಂದಲಮಯ ಮತ್ತು ಕ್ಲಿಷ್ಟಕರವಾಗಿದ್ದು, ಸಾಲ ಪಡೆಯಲು ತುಂಬಾ ಅಡಚಣೆಯಾಗುತ್ತದೆ ಎನ್ನುವ ಅಭಿಪ್ರಾಯವಿದೆ. ಶಿಕ್ಷಣ ಸಾಲವನ್ನು
ಆದ್ಯತಾರಂಗದ ಸಾಲವೆಂದು ಎಂದು ಪರಿಗಣಿಸುತ್ತಿದ್ದು, ಬ್ಯಾಂಕುಗಳು ಆ ಗುರಿಯನ್ನು ಸಾಧಿಸಲು ಈ ಸಾಲವನ್ನು ನೀಡುತ್ತಿವೆ.
ಸಾಲ ಪಡೆದವರ ನಿರ್ಲಕ್ಷ್ಯ
ಸದ್ಯ ಬ್ಯಾಂಕುಗಳು ಭಾರತದಲ್ಲಿಯೇ ಮಾಡುವ ಕೋರ್ಸ್‌ಗಳಿಗೆ 10 ಲಕ್ಷದವರೆಗೆ
ಮತ್ತು ವಿದೇಶದಲ್ಲಿ ಮಾಡುವ ಕೋರ್ಸ್‌ಗಳಿಗೆ 20 ಲಕ್ಷದವರೆಗೆ ಸಾಲ ನೀಡುತ್ತವೆ. ಕೆಲವು ಬ್ಯಾಂಕ್‌ಗಳಲ್ಲಿ ಐಐಟಿ, ಐಐಎಂ ಮತ್ತು ಐಐಎಸ್‌ಸಿಗಳಲ್ಲಿ ಕೋರ್ಸ್ ಮಾಡುವವರಿಗೆ 40 ಲಕ್ಷದವರೆಗೂ ಸಾಲ ನೀಡಲಾಗುತ್ತದೆ. ಉಳಿದ ಸಾಲಗಳಂತೆ, ಶಿಕ್ಷಣ ಸಾಲವೂ ತೀವ್ರಗತಿಯಲ್ಲಿ ಸುಸ್ತಿ ಸುಳಿಗೆ ಸಿಲುಕು ತ್ತಿರುವುದು ಬ್ಯಾಂಕುಗಳನ್ನು ಧೃತಿಗೆಡಿಸಿದೆ ಎಂದು ಹೇಳಲಾಗುತ್ತಿದೆ. ಕೋರ್ಸ್ ಮುಗಿಸಿ ಉದ್ಯೋಗ ಹಿಡಿದು, ತಮಗೆ ಬದುಕು ಕಲ್ಪಿಸಲು ನೆರವಾದ ಬ್ಯಾಂಕ್ ಸಾಲವನ್ನು ಆದ್ಯತೆಯ ಮೇಲೆ ಮರುಪಾವತಿಸುವ ಬದ್ಧತೆಯವರು ಇದ್ದಂತೆ, ನಿಧಾನಕ್ಕೆ ಮರುಪಾವತಿಸಿದರಾಯಿತು, ಈಗಲೇ ಏನು ಅವಸರ ಎನ್ನುವ ಉದಾಸೀನ ಮತ್ತು ನಿರ್ಲಕ್ಷ ಪೃವೃತ್ತಿಯವರೂ ಇರುತ್ತಾರೆ. ಹಾಗೆಯೇ, ಈ ಸಾಲ ಇವತ್ತಲ್ಲ ನಾಳೆ ಮನ್ನಾ ಆಗಬಹುದು ಎಂದುಕೊಂಡು ದಿನ ದೂಡುವವರೂ ಇರುತ್ತಾರೆ.
ಎಚ್ಚೆತ್ತ ಬ್ಯಾಂಕುಗಳು
ಕೆಲವರು ಉದ್ಯೋಗ ದೊರಕದೇ, ಸಾಲ ಮರುಪಾವತಿಸುವ ಉತ್ಸುಕತೆ ಮತ್ತು ಧಾವಂತ ಇದ್ದರೂ, ನಿಸ್ಸಹಾಯಕರಾಗಿರುತ್ತಾರೆ. ಮರುಪಾವತಿಸುವ ಶಕ್ತಿ ಮತ್ತು ಅವಕಾಶ ಇದ್ದರೂ ಸಾಲವನ್ನು ಮರುಪಾವತಿಸದೇ
ಬ್ಯಾಂಕುಗಳನ್ನು ಸತಾಯಿಸುವವರೂ ಇರುತ್ತಾರೆ. ಬ್ಯಾಂಕ್ ಸಾಲ ಪಡೆದವರು ತಮ್ಮ ಕೋರ್ಸ್ ಮುಗಿದ ನಂತರ ಬ್ಯಾಂಕುಗಳ ಸಂಪರ್ಕದಲ್ಲಿ ಇರಬೇಕೆನ್ನುವ ನಿಬಂಧನೆ ಇದ್ದರೂ, ತಮ್ಮ ವಿಳಾಸವನ್ನು ಬ್ಯಾಂಕ್ ಗಳಿಗೆ ತಿಳಿಸದೆ, ಸಂಬಂಧಪಟ್ಟ ಪಾಲಕರು ಈ ಸಾಲಕ್ಕೂ ತಮಗೂ ಸಂಬಂಧ ಇಲ್ಲ ಎಂದು ನುಣುಚಿಕೊಳ್ಳುವ ಘಟನೆಗಳೂ ನಡೆದಿವೆ. ಇದರಿಂದ ಎಚ್ಚೆತ್ತಿರುವ ಬ್ಯಾಂಕ್ ಅಧಿಕಾರಿಗಳು ಸಾಲ ನೀಡಿಕೆಯ ಸಂದರ್ಭದಲ್ಲಿ ಪಾಲಕರನ್ನು ಸಹ- ಸಾಲಗಾರರೆಂದು ಪರಿಗಣಿಸುವ ನಿಯಮ ರೂಪಿಸಿದ್ದಾರೆ. ಇಂಥದೊಂದು ಪ್ರಕರಣದಲ್ಲಿ ಬ್ಯಾಂಕೊಂದು ಫೇಸ್‌ಬುಕ್ ಮೂಲಕ ಸಾಲಗಾರನನ್ನು ಕಂಡುಹಿಡಿದು, ಅವನು ಕೆಲಸ ಮಾಡುವ ಕಂಪನಿಯನ್ನು ಹುಡುಕಿ, ಸಾಲ ವಸೂಲಿ ಮಾಡಿತ್ತು.
ಶಿಕ್ಷಣಸಾಲವನ್ನು ಒಂದು ಪವಿತ್ರವಾದ ಉದ್ದೇಶಕ್ಕೆ, ಬದುಕನ್ನು ರೂಪಿಸಿಕೊಳ್ಳಲು, ಭದ್ರ ಬುನಾದಿ ಹಾಕಿಕೊಳ್ಳಲು ನೀಡಲಾಗುತ್ತಿದೆ. ಈ ಸಾಲವು ಆದ್ಯತೆಯ ಆಧಾರದ ಮೇಲೆ ಕೃತಜ್ಞತೆಯ ರೂಪದಲ್ಲಿ ಸಮಯ ಪರಿಮಿತಿಯಲ್ಲಿ ಮರುಪಾವತಿಯಾಗುವುದು ಬಿಟ್ಟು ಸುಸ್ತಿ ಹಳ್ಳ ಹಿಡಿಯುತ್ತಿರುವುದು ಬ್ಯಾಂಕರ್‌ಗಳನ್ನು ಚಿಂತಾಕ್ರಾಂತರನ್ನಾಗಿ ಮಾಡಿದೆ.
ಸಾಲ ವಿತರಣೆ ಕುಂಠಿತಗೊಳ್ಳಲು ಕಾರಣಗಳೇನು?
ಬ್ಯಾಂಕಿಂಗ್ ವಿಶ್ಲೇಷಕರ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಅಗೋಚರ ಅರ್ಥಿಕ
ಹಿಂಜರಿಕೆಯಲ್ಲಿ ನಿರೀಕ್ಷೆಯಷ್ಟು ಉದ್ಯೋಗ ಸೃಷ್ಟಿಯಾಗಿಲ್ಲ. ಶಿಕ್ಷಣ ಸಾಲದ ಲಾಭ ಪಡೆದು ಅನೇಕ ಖಾಸಗಿ ವಿದ್ಯಾಸಂಸ್ಥೆಗಳು ತಲೆ ಎತ್ತಿವೆ. ಅವೆಲ್ಲಾ ಸಾಮಾನ್ಯ ಕೌಶಲ್ಯ ಉಳ್ಳ ಪದವೀಧರರನ್ನು ಉದ್ಯೋಗ ಮಾರುಕಟ್ಟೆಗೆ ರವಾನಿಸುತ್ತಿವೆ. ಈಗ ಪದವಿ ಪಡೆಯುವವರ ಪೈಕಿ ಶೇ.80ರಷ್ಟು ಎಂಜಿನಿಯರ್‌ಗಳು ಉದ್ಯೋಗಕ್ಕೆ ಅರ್ಹರಲ್ಲ ಎಂದು ಐಟಿ ಕ್ಷೇತ್ರದ ದಿಗ್ಗಜರೊಬ್ಬರೇ ಹೇಳಿದ್ದಾರೆ ಮತ್ತು ಇನ್ನೊಬ್ಬ ಪ್ರತಿಷ್ಠಿತ ಐಟಿ ದಿಗ್ಗಜರು ಇದಕ್ಕೆ ಧ್ವನಿಗೂಡಿಸಿದ್ದಾರೆ. ಶೈಕ್ಷಣಿಕ ಸಾಲ ವಿತರಣೆಯಲ್ಲಿ ಸಾರ್ವಜನಿಕ ರಂಗದ ಬ್ಯಾಂಕುಗಳದ್ದೇ ಮೇಲುಗೈಯಾಗಿದೆ. ಸುಮಾರು 91% ಶೈಕ್ಷಣಿಕ ಸಾಲಗಳನ್ನು ಈ ಬ್ಯಾಂಕುಗಳೇ ನೀಡಿವೆ. ಬೇರೆ ಸಾಲಗಳಿಗೆ ಹೋಲಿಸಿದರೆ, ಶೈಕ್ಷಣಿಕ ಸಾಲದ ನಿಟ್ಟಿನಲ್ಲಿ ಸುಸ್ತಿಸಾಲ ಹೆಚ್ಚು ಎಂದು ಬ್ಯಾಂಕರ್‌ಗಳು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.