ಮಾಹಿತಿ ಹಕ್ಕು ಉಳಿಸಲು ಸುಪ್ರೀಂಕೋರ್ಟ್ ಬೆಂಬಲ
Team Udayavani, Mar 4, 2019, 12:30 AM IST
ಯಾವುದೇ ಒಂದು ಯೋಜನೆ, ಒಂದು ಇಲಾಖೆಯ ಕೆಲಸ ಅಥವಾ ಶ್ರೀ ಸಮಾನ್ಯನ ಸಲ್ಲಿಸಿದ ಅರ್ಜಿಯ ಕತೆ ಏನಾಯಿತೆಂದು ತಿಳಿಯಲು ಎಲ್ಲರಿಗೂ ಇರುವ ಅವಕಾಶವೇ- ಮಾಹಿತಿ ಹಕ್ಕು ಕಾಯ್ದೆ. ಆದರೆ ಈಗ ಮಾಹಿತಿ ಹಕ್ಕನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಸರ್ಕಾರವೇ ಮಾಡುತ್ತಿದೆ…
ಅಂಕಿಅಂಶಗಳು ಭಯಬೀಳಿಸುವಂತಿವೆ. ಅಂಕಣದ ವ್ಯಾಪ್ತಿಯಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಮಾಹಿತಿ ಹಕ್ಕಿನ ಕಾಯ್ದೆಯ ವಿಚಾರವಾಗಿಯೇ ಪ್ರಸ್ತಾಪಿಸುತ್ತಿರುವಂತಾಗುವುದು ಬೇಸರವೂ ಹೌದು. 2017ರಲ್ಲಿ ಕೇಂದ್ರ ಮಾಹಿತಿ ಆಯೋಗಕ್ಕೆ ಬಂದ ದೂರು, ಮೇಲ್ಮನವಿಗಳ ಸಂಖ್ಯೆಯನ್ನು ಆಧರಿಸಿ 2018ರ ಮಾರ್ಚ್‌ನಲ್ಲಿ ಮಾಹಿತಿ ಹಕ್ಕು ಚಟುವಟಿಕೆಗಳ ಕುರಿತಾಗಿ, ಮುಖ್ಯವಾಗಿ ಮಾಹಿತಿ ಆಯೋಗದ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲುವ ವರದಿಯೊಂದು ಪ್ರಕಟವಾಗಿದೆ. ಅದರ ಪ್ರಕಾರ, ಅವತ್ತಿನವರೆಗಿನ ಅರ್ಜಿದಾರರ ಅಹವಾಲುಗಳನ್ನು ಮೊದಲ ಬಾರಿಗೆ ಕೇಳುವುದಕ್ಕೇ ಒಂದು ವರ್ಷಗಳ ಸಮಯ ಬೇಕು. 23,500 ದೂರುಗಳ ಬಾಕಿಗೆ ಪ್ರತಿದಿನ ಹೊಸ ಹೊಸ ಪ್ರಕರಣಗಳು ಸೇರ್ಪಡೆಯಾಗುತ್ತಲೇ ಇವೆ ಎಂಬುದೂ ಇಲ್ಲಿ ಸ್ಮರಣೀಯ.
ಸಮಯಕ್ಕೆ ಪ್ರಾಮುಖ್ಯತೆ ಕೊಡಬೇಕು
ನಮ್ಮ ದೇಶದಲ್ಲಿ ಹಲವು ವಿಶಿಷ್ಟ ಕಾನೂನುಗಳಿವೆ. ಸಕಾಲ, ಮಾಹಿತಿ ಹಕ್ಕು ತರಹದ ಕಾನೂನುಗಳು ಸಮಯಮಿತಿಯನ್ನು ಆಧರಿಸಿದಂಥವು. ಇಲ್ಲಿ 30 ದಿನಗಳಲ್ಲಿ ಮಾಹಿತಿ ಅಧಿಕಾರಿ, ನಂತರದ 45 ದಿನಗಳಲ್ಲಿ ಮೊದಲ ಮೇಲ್ಮನವಿ ಪ್ರಾಧಿಕಾರದಿಂದ ಉತ್ತರ ಲಭ್ಯವಾಗದಿದ್ದರೆ ಕಾನೂನು ಮೊಂಡು ಆದಂತೆಯೇ ಸರಿ. 2018ರ ಏಪ್ರಿಲ್‌ನಲ್ಲಿ ನಾಲ್ಕು ಮಾಹಿತಿ ಆಯುಕ್ತರ ಹುದ್ದೆಗಳನ್ನೇ ಕೇಂದ್ರ ಸರ್ಕಾರ ತುಂಬಿರಲಿಲ್ಲ. ಇನ್ನೂ ಬುಡಕ್ಕೆ ಹೋದರೆ, 2016ರ ಸೆಪ್ಟೆಂಬರ್ 2ರಂದು ಆ ವರ್ಷದ ಡಿಸೆಂಬರ್ ಹಾಗೂ 2017ರ ಫೆಬ್ರವರಿಯಲ್ಲಿ ಖಾಲಿಯಾಗುವ ಇಬ್ಬರು ಮಾಹಿತಿ ಆಯುಕ್ತರ ಹುದ್ದೆ ಭರ್ತಿಗೆ ಅರ್ಜಿ ಕರೆಯಲಾಗುತ್ತದೆ. ಆದರೆ ಹುದ್ದೆ ಭರ್ತಿ ಮಾಡುವ ಪ್ರಕ್ರಿಯೆ ಮಾತ್ರ ಮುಗಿಯುತ್ತಲೇ ಇಲ್ಲ.
ಕೇಂದ್ರ ಮತ್ತು ರಾಜ್ಯ ಮಾಹಿತಿ ಆಯೋಗಗಳಲ್ಲಿ ಒಬ್ಬ ಮುಖ್ಯ ಮಾಹಿತಿ ಆಯುಕ್ತರು ಹಾಗೂ ಅವರೊಂದಿಗೆ ಹತ್ತು ಜನ ಮಾಹಿತಿ ಆಯುಕ್ತರನ್ನು ನಿಯೋಜಿಸಬಹುದಾದ ಕಾನೂನು ಅನುಕೂಲವನ್ನು ಮಾಡಿಕೊಡಲಾಗಿದೆ. ದೇಶದ ಬಹುಪಾಲು ರಾಜ್ಯಗಳು 1 ಪ್ಲಸ್ ಹತ್ತು ಎಂಬ ಕಾನೂನು ಬಳಸಿಕೊಂಡಿಲ್ಲ. ಸರ್ಕಾರ ಮಾಹಿತಿ ಆಯುಕ್ತರನ್ನು ನೇಮಕ ಮಾಡುವ ಪ್ರಯತ್ನ ಪ್ರತಿ ಬಾರಿ ಗೊಂದಲಗಳನ್ನು ಉಂಟುಮಾಡುತ್ತಿದೆ. ಅದಕ್ಕೆ ಕೂಡ ಸರ್ಕಾರವನ್ನೇ ದೂಷಿಸುವುದು ಅನಿವಾರ್ಯ. ಮಾಹಿತಿ ಆಯುಕ್ತರ ನೇಮಕವನ್ನೂ ಕೂಡ ಸರ್ಕಾರಗಳು ರಾಜಕೀಯ ಪ್ರೇರಿತವಾಗಿ ಮಾಡುತ್ತಿರುವುದರಿಂದ ಅದರ ನೇಮಕಾತಿ ಆದೇಶಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗುತ್ತಿದೆ. ಅಪಾರದರ್ಶಕ, ಕಾನೂನುಬಾಹಿರ ಆಯ್ಕೆಗೆ ಮುಂದಾಗುತ್ತಿರುವುದರಿಂದಲೇ ಮಾಹಿತಿ ಆಯುಕ್ತರ ನೇಮಕ ನೆನಗುದಿಗೆ ಬೀಳುತ್ತಿದೆ. ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ಆಯೋಗ ಸಮರ್ಪಕವಾಗಿ ಕೆಲಸ ಮಾಡುವುದು ಖಡಾಖಂಡಿತವಾಗಿ ಇಷ್ಟವಿಲ್ಲ. ತಾನೇ ಮಾಡಿದ ನೇಮಕವನ್ನು ತನ್ನವರಿಂದಲೇ ನ್ಯಾಯಾಲಯದಿಂದ ಪ್ರಶ್ನಿಸುವಂಥ ವ್ಯವಸ್ಥೆಯನ್ನು ಸರ್ಕಾರ ಅಥವಾ ಅಧಿಕಾರಿಗಳು ಮಾಡಿದ್ದರೆ ತೀರಾ ಅಚ್ಚರಿ ಪಡಬೇಕಾದುದಿಲ್ಲ.
ವಿಪರ್ಯಾಸಗಳ ಸಂತೆ
ಮಾಹಿತಿ ಹಕ್ಕಿನ ಅವತರಣಕ್ಕೂ ಮೊದಲೇ ಸಂವಿಧಾನದ ಆರ್ಟಿಕಲ್ 21ರ ಬದುಕು, ಸ್ವಾತಂತ್ರÂದ ಹಕ್ಕಿನಡಿಯಲ್ಲಿ ಆಡಳಿತದ ಪಾರದರ್ಶಕವನ್ನು ಕೋರ್ಟ್‌ಗಳು ಎತ್ತಿ ಹಿಡಿದ ಹಲವಾರು ಪ್ರಕರಣಗಳಿದ್ದವು. ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠದ ಮುಂದೆ ಬಂದ ಉತ್ತರ ಪ್ರದೇಶ ವಿರುದ್ಧ ರಾಜ್ ನಾರೈನ್ ಪ್ರಕರಣ, ಏಳು ನ್ಯಾಯಾಧೀಶರ ಬೆಂಚ್ ಎದುರು ವಿಚಾರಣೆಗೆ ಒಳಗಾದ ಎಸ್.ಪಿ.ಗುಪ್ತ ವಿರುದ್ಧ ಕೇಂದ್ರ ಸರ್ಕಾರ ಹೂಡಿದ್ದ ಮೊಕದ್ದಮೆ ಮೊದಲಾದ ಪ್ರಕರಣಗಳ ತೀರ್ಪಿನಲ್ಲಿ ಜನರಿಗೆ ಮಾತಿ ಪಡೆದುಕೊಳ್ಳುವ ಹಕ್ಕು ಇದೆ ಎಂಬುದನ್ನೇ ದೃಢಪಡಿಸಲಾಗಿದೆ. ಇದೇ ಮಾದರಿಯ ತೀರ್ಪನ್ನು ಕೇಂದ್ರದ ವಿರುದ್ಧ ಡೆಮೊಕ್ರಟಿಕ್ ರಿಫಾಮ್ಸ್ì ಸಂಘಟನೆ, ಖಾಸಗಿಯದಾದ ರಿಲೆಯನ್ಸ್ ಪೆಟ್ರೋ ಕೆಮಿಕಲ್ ವರ್ಸಸ್ ಇಂಡಿಯನ್ ಎಕ್ಸ್‌ಪ್ರೆಸ್ ದೈನಿಕದ ಸಂದರ್ಭದಲ್ಲೂ ಕಾಣಬಹುದು.
ಆಕ್ಷೇಪಕ್ಕೂ ಅವಕಾಶ
ಈ ಹಿನ್ನೆಲೆಯಲ್ಲಿ 2005ರಲ್ಲಿ ಮಾಹಿತಿ ಹಕ್ಕು ಜಾರಿಯಾದಾಗ, ಆಯುಕ್ತರ ನೇಮಕ ಅತ್ಯಂತ ಹೆಚ್ಚು ಪಾರದರ್ಶಕವಾಗಿರಬೇಕು ಎಂದು ಕಾನೂನು ಸ್ಪಷ್ಟವಾಗಿ ಹೇಳಿದೆ. ಸರ್ಕಾರ ಆಯ್ಕೆಗೆ ಆಡಳಿತ, ವಿರೋಧ ಪಕ್ಷದ ಪ್ರಮುಖರನ್ನು ಒಳಗೊಂಡ ಪ್ರಮುಖ ಆಯ್ಕೆ ಸಮಿತಿಯನ್ನು ರಚಿಸಬೇಕು. ಇದು ಆಯುಕ್ತರ ನೇಮಕ ಸಂದರ್ಭದಲ್ಲಿ ಸಾರ್ವಜನಿಕ ಪ್ರಕಟಣೆಯನ್ನು ಪತ್ರಿಕೆ, ಅಂತಜಾìಲ ಮಾಧ್ಯಮಗಳ ಮೂಲಕ ನೀಡಬೇಕು. ಆಯ್ಕೆ ಸಮಿತಿ ಸದಸ್ಯರು, ಅವರು ನಡೆಸುವ ಚರ್ಚೆಯ ಸಂಪೂರ್ಣ ಮಾಹಿತಿ, ನಿರ್ಣಯಗಳ ವಿವರವನ್ನು ಸರ್ಕಾರ ಬಹಿರಂಗಪಡಿಸಬೇಕು. ಇಷ್ಟೆಲ್ಲ ಆದ ನಂತರ ಆಯ್ಕೆ ಸಮಿತಿ ಸಂಭಾವ್ಯ ಮಾಹಿತಿ ಆಯುಕ್ತರ ಪಟ್ಟಿಯನ್ನು ಪ್ರಕಟಿಸಬೇಕು. ಈ ಆಯ್ಕೆಗಳಲ್ಲಿ ಅಸಮರ್ಪಕ ಎಂಬುವವರ ಕುರಿತು ತಮ್ಮಲ್ಲಿ ಇರುವ ಮಾಹಿತಿಗಳನ್ನು ಸಾರ್ವಜನಿಕರು ಬಳಸಿಕೊಂಡು ಆಕ್ಷೇಪಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಸರ್ಕಾರಗಳು ಮಾಡುವ ಆಯ್ಕೆಗಳನ್ನು ಪದೇ ಪದೇ ಪ್ರಶ್ನಿಸುವ ಅನಿವಾರ್ಯತೆ ಮೂಡುತ್ತಿದೆ. ಮತ್ತೆ ಕರ್ನಾಟಕಕ್ಕೆ ಬರುವುದಾದರೆ, 2018ರ ಆಗಸ್ಟ್ 7ರಂದು ರಾಜ್ಯ ಸರ್ಕಾರ ಪ್ರಕಟಿಸಿದ ನೂತನ ಮಾಹಿತಿ ಆಯುಕ್ತರ ನೇಮಕಾತಿ ಪ್ರಕಟಣೆ ಮೇಲಿನ ಎಲ್ಲ ಅಂಶಗಳನ್ನು ಉಲ್ಲಂ ಸಿದೆ ಎಂಬ ಭಾವನೆ ಇದೆ. ಈ ಹಿನ್ನೆಲೆಯಲ್ಲಿ ನೇಮಕದ ವಿರುದ್ಧ ಹೈಕೋರ್ಟ್‌ನಲ್ಲಿ ರಾಣೆಬೆನ್ನೂರಿನ ಜೆ.ಎಂ.ರಾಜಶೇಖರ್ ಅವರಿಂದ ದೂರು ದಾಖಲಾಗಿದೆ.
ಒಂದು ಆಶಾಕಿರಣ!
ಮಾಹಿತಿ ಹಕ್ಕನ್ನು ವ್ಯವಸ್ಥಿತವಾಗಿ ಸರ್ಕಾರವೇ ಕೊಲ್ಲುತ್ತಿರುವುದನ್ನು ಗಮನಿಸಿರುವ ಮಾಹಿತಿ ಕಾರ್ಯಕರ್ತರಾದ ಅಂಜಲಿ ಭಾರದ್ವಾಜ್ ಹಾಗೂ ಇತರರು ಸುಪ್ರೀಂಕೋರ್ಟ್‌ನಲ್ಲಿ 2018ರಲ್ಲಿ ರಿಟ್ ಪಿಟಿಷನ್ ದಾಖಲಿಸಿದ್ದರು. ಪಿಟಿಷನ್ ಸಂಖ್ಯೆ. 436. ಇದರಲ್ಲಿ ಸಮಯಾಧಾರಿತ ಮಾಹಿತಿ ಹಕ್ಕು ಕಾಯ್ದೆಯನ್ನು, ಮಾಹಿತಿ ಆಯುಕ್ತರ ನೇಮಕಾತಿ ಮಾಡದೆ ನಿಷ್ಕ್ರಿಯಗೊಳಿಸುತ್ತಿರುವ ಕೇಂದ್ರ ಸರ್ಕಾರ ಹಾಗೂ ಇದೇ ನಿಧಾನ ವಿಷ ಪ್ರಯೋಗಿಸುತ್ತಿರುವ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ಒಡಿಶಾÏ, ನಾಗಾಲ್ಯಾಂಡ್, ಗುಜರಾತ್, ತೆಲಂಗಾಣಗಳಲ್ಲದೆ ಕರ್ನಾಟಕವನ್ನೂ ಎದುರು ಪಕ್ಷವಾಗಿ ಹೆಸರಿಸಲಾಗಿತ್ತು. ದೂರುದಾರರು ಎಳೆಎಳೆಯಾಗಿ ನಿರ್ಣಯ ವಿಳಂಬವನ್ನು ಪ್ರಸ್ತಾಪಿಸಿದ್ದರು. ಇದರ ತೀರ್ಪು ಈಗ ಹೊರಬಿದ್ದಿದ್ದು, ಕೋರ್ಟ್ ಸ್ಪಷ್ಟ ಪದಗಳಲ್ಲಿ ಕೇಂದ್ರ ಹಾಗೂ ರಾಜ್ಯಗಳು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ನಿರ್ದೇಶಿಸಿದೆ.
ದೂರಿನಲ್ಲಿ ಕರ್ನಾಟಕದ ಪರಿಸ್ಥಿತಿಯನ್ನು ಪ್ರಸ್ತಾಪಿಸಲಾಗಿತ್ತು. 2017ರ ಅಕ್ಟೋಬರ್ 31ರ ಮಾಹಿತಿಯಂತೆ, 33 ಸಾವಿರ ಅರ್ಜಿಗಳು ತೀರ್ಮಾನಕ್ಕೆ ಕರ್ನಾಟಕದ ಮಾಹಿತಿ ಆಯೋಗದಲ್ಲಿ ಬಾಕಿ ಇತ್ತು. ಈ ಬಾಕಿಯಲ್ಲಿ ಮೇಲ್ಮನವಿ ಹಾಗೂ ದೂರುಗಳು ಸೇರಿದ್ದು, ಈ ಪ್ರಮಾಣದಲ್ಲಿ ಬಾಕಿ ಅರ್ಜಿಗಳಿರುವ ಕರ್ನಾಟಕ ಸುಪ್ರೀಂಕೋರ್ಟ್‌ನ ಗಮನ ಸೆಳೆಯುವಂತಾಗಿತ್ತು. ಆ ಅವಧಿಯಲ್ಲಿ ಕರ್ನಾಟಕದಲ್ಲಿ ಮುಖ್ಯ ಮಾಹಿತಿ ಆಯುಕ್ತರ ಜೊತೆ ನಾಲ್ವರು ಮಾಹಿತಿ ಆಯುಕ್ತರು ಕಾರ್ಯ ನಿರ್ವಸುತ್ತಿದ್ದರು. ರಾಜ್ಯ 2018ರ ಡಿಸೆಂಬರ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಮುಖ್ಯ ಮಾಹಿತಿ ಆಯುಕ್ತರ ಒಂದು ಹುದ್ದೆ ಹಾಗೂ ಇಬ್ಬರು ಮಾಹಿತಿ ಆಯುಕ್ತರ ಸ್ಥಾನ ಭರ್ತಿಗೆ ಸೆಪ್ಟೆಂಬರ್‌ನಲ್ಲಿ ಅರ್ಜಿ ಕರೆಯಲಾಗಿದ್ದು 419 ಅರ್ಜಿ ಬಂದಿವೆ ಎಂದು ಹೇಳಿಕೊಳ್ಳಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆ ಮುಗಿಸಿದ ಸಮಿತಿ ಡಿಸೆಂಬರ್‌ನಲ್ಲಿ ಅಫಿಡೆವಿಟ್ ಸಲ್ಲಿಸುವ ಸಂದರ್ಭದಲ್ಲಿ ಆಯ್ಕೆ ನಡೆಸಿರಲಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿತು. ಕರ್ನಾಟಕದ ಪರಿಸ್ಥಿತಿಯನ್ನು ಪರಿಗಣಿಸಿ ರಾಜ್ಯ ಸರ್ಕಾರ ತೀರ್ಪಿನ ದಿನಾಂಕದಿಂದ ಒಂದು ತಿಂಗಳಲ್ಲಿ ಕಾನೂನು ಅವಕಾಶದಂತೆ ಒಬ್ಬ ಮುಖ್ಯ ಮಾಹಿತಿ ಆಯುಕ್ತ ಹಾಗೂ ಎಲ್ಲ 10 ಮಾಹಿತಿ ಆಯುಕ್ತರ ಸ್ಥಾನಗಳನ್ನು ತುಂಬಲು ಸೂಚಿಸಿದೆ. ಈ ಎಲ್ಲ ಅಗತ್ಯ ಪ್ರಕ್ರಿಯೆ ಆರು ತಿಂಗಳಲ್ಲಿ ಮುಗಿಯಬೇಕು ಎಂದು ಮೊನ್ನೆ ಫೆಬ್ರವರಿ 15ರಂದು ನ್ಯಾಯಾಧೀಶರಾದ ಎ.ಕೆ.ಸಿಕ್ರಿ ಹಾಗೂ ಎಸ್.ಅಬ್ದುಲ್ ನಜೀರ್ ಅವರ ನ್ಯಾಯಪೀಠ ಆದೇಶಿಸಿದೆ.
ನಿವೃತ್ತರ ತಂಗುದಾಣ?
ಮಾಹಿತಿ ಆಯೋಗದ ಆಯುಕ್ತರ ಸ್ಥಾನವನ್ನು ಪ್ರತಿನಿಧಿಸುವವರು ಬಹುಪಾಲು ಸರ್ಕಾರಿ ಅಧಿಕಾರಿಗಳು ಅಥವಾ ನಿವೃತ್ತ ವರ್ಗದವರು. ಈ ಜನರ ನ್ಯಾಯಪರತೆಯ ಬಗ್ಗೆ ಈ ಹಂತದಲ್ಲಿ ಪ್ರಶ್ನಿಸಬೇಕಿಲ್ಲ. ಆದರೆ ಕಾನೂನಿನ ಪರಿಧಿಯ ಒಳಗೇ ತಮ್ಮ ಸಹೋದ್ಯೋಗಿಗಳ ನೆರವಿಗೆ ಅವರು ಮುಂದಾಗುತ್ತಾರೆ ಎಂಬ ಅನುಮಾನವಂತೂ ದಟ್ಟವಾಗಿದೆ. ಅಂತಹ ಉದಾಹರಣೆಗಳೂ ಹುಡುಕಿದರೆ ಸಿಕ್ಕಬಹುದು. ಈ ಕುರಿತು ಕೂಡ ಸುಪ್ರೀಂಕೋರ್ಟ್‌ಗೆ ಅರಿವಿದೆ. ಈಗಾಗಲೇ ಅದು ವಿಸ್ತೃತವಾಗಿ ಕೇಂದ್ರ ಸರ್ಕಾರ ವರ್ಸಸ್ ವಿನುತಾ ಶರ್ಮರ ಪ್ರಕರಣದಲ್ಲಿ ಚರ್ಚೆಯಾಗಿ, ಮಾಹಿತಿ ಆಯುಕ್ತರ ಹುದ್ದೆಗೆ ಕೇವಲ ಸರ್ಕಾರಿ ಅಧಿಕಾರಿಗಳು, ನಿವೃತ್ತರನ್ನು ಮಾತ್ರ ಪರಿಗಣಿಸಬಾರದು. ಅರ್ಹತೆ ಇರುವ ಇತರ ವರ್ಗದವರನ್ನು ಕೂಡ ಸಮಾನವಾಗಿ ಗುರ್ತಿಸಬೇಕು ಎಂದು ಹೇಳಲಾಗಿತ್ತು.
– ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು,
ಬಳಕೆದಾರರ ವೇದಿಕೆ, ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.