ಗ್ರಾಹಕ ಹಕ್ಕು ಕಾಯ್ದೆಗೆ ಭರ್ಜರಿ ಸರ್ಜರಿ
Team Udayavani, May 8, 2017, 5:13 PM IST
1986ರ ಡಿಸೆಂಬರ್ 24ರಂದು ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂತು. ಯಾವ ವಕೀಲರ ನೆರವಿಲ್ಲದೇ ಅನ್ಯಾಯಕ್ಕೊಳಗಾದ ಗ್ರಾಹಕ ನೇರವಾಗಿ ಇದಕ್ಕೆ ಸಂಬಂಧಿಸಿದ ನ್ಯಾಯಾಲಯದಲ್ಲಿ ದೂರು ದಾಖಲಿಸಿ ನ್ಯಾಯ ಪಡೆಯಬಹುದು. ಕ್ಷಿಪ್ರ ನ್ಯಾಯ ವ್ಯವಸ್ಥೆ, ಸರಳೀಕೃತ ವಿಧಾನ ಗ್ರಾಹಕ ಶೋಷಣೆಯ ಮಾರುಕಟ್ಟೆ ವ್ಯವಸ್ಥೆಗೆ ದೊಡ್ಡ ಮಟ್ಟದಲ್ಲಿ ಕಡಿವಾಣ ಹಾಕಿದ್ದಂತೂ ನಿಜ.
ಈ ಕಾಯ್ದೆ ಸಾಮಾನ್ಯ ಜನರಿಗೂ ಅಪ್ಯಾಯಮಾನವಾದದ್ದು. ನ್ಯಾಯಾಲಯ, ನ್ಯಾಯಾಧೀಶ ಎನ್ನುವ ಪದಗಳು ಜನಸಾಮಾನ್ಯರಿಗೆ ಹೆದರಿಕೆಯ ಭಾವ ಉಂಟಾಗಬಹುದಾದ ಪದಗಳು. ಕಾರಣ ಕಪ್ಪುಕೋಟುಗಳ ನಡುವೆ ನಾಲ್ಕಾರು ವರ್ಷ ನ್ಯಾಯ ಪಡೆಯಲು ಅಲೆದಾಡುವುದು ನರಕಸದೃಶ ಹಿಂಸೆ. ಇಲ್ಲಿ ಆ ಪದಗಳಿಗೆ ಬದಲಾಗಿ ವ್ಯಾಜ್ಯ ಪರಿಹಾರ ವೇದಿಕೆ, ಅಧ್ಯಕ್ಷ ಎನ್ನುವ ಪದಗಳನ್ನು ಬಳಸಲಾಗಿದೆ. ಮೂರು ತಿಂಗಳಿನಲ್ಲಿ ನ್ಯಾಯದಾನವಾಗಬೇಕಿದೆ. ಇಂತಹ ಒಂದು ಉತ್ಕೃಷ್ಟ ಕಾಯ್ದೆಗೆ 1991, 93, 2002ರಲ್ಲಿ ಹಲವು ತಿದ್ದುಪಡಿಗಳಾಗಿದ್ದು, ಈಗ ಆಮೂಲಾಗ್ರವಾಗಿ ಮತ್ತೂಂದು ತಿದ್ದುಪಡಿಗೆ ಅನುವಾಗುತ್ತಿದೆ. ಅದರ ಕರಡು ಪ್ರತಿ ಪ್ರಕಟವಾಗಿದ್ದು, ಸಾರ್ವಜನಿಕರಿಂದ ಸಲಹೆ ಕೇಳಲಾಗಿದೆ.
ಸಬಲಗೊಳಿಸುವ ಪ್ರಯತ್ನ
ನಿಮಗೆ ನೆನಪಿರಬಹುದು; ಇಂತಹುದೇ ಬಲಿಷ್ಟ ಪ್ರಜಾಸ್ನೇಹಿ ಮಾತಿ ಹಕ್ಕು ಕಾಯ್ದೆ ಜಾರಿಯಲ್ಲಿದೆ. ಇದರಿಂದ ಹೆಚ್ಚು ತೊಂದರೆ ಅನುಭವಿಸಿದವರು ಕೆಂಪುಪಟ್ಟಿಯ ಅಧಿಕಾರಿಗಳು. ಅದನ್ನು ದುರ್ಬಲಗೊಳಿಸಲು ಬ್ಯುರೋಕ್ರಸಿಯ ವ್ಯವಸ್ಥೆ ತಿದ್ದುಪಡಿಗೆ ಕೈಹಾಕಿತ್ತು. ಹಾಗಾಗಿ ಯಾವುದೇ ಕಾಯ್ದೆಗೆ ತಿದ್ದುಪಡಿಯೆಂದರೆ ಪ್ರಜೆಗಳು ಕಣ್ಣಲ್ಲಿ ಕಣ್ಣಿಟ್ಟು ಜಾಗರೂಕತೆಯಿಂದ ಗ್ರಹಿಸಿ ಅಭಿಪ್ರಾಯ ವ್ಯಕ್ತಪಡಿಸಬೇಕಾದ ಸ್ಥಿತಿ ಇದೆ. ಆದರೆ ಈಗ ತಿದ್ದುಪಡಿ ಮಾಡ ಹೊರಟಿರುವ ಗ್ರಾಹಕ ಸಂರಕ್ಷಣಾ ಕಾಯ್ದೆ ಇದಾವುದರ ಸಂಚಿಲ್ಲದೇ ಇನ್ನೂ ಬಲಿಷ್ಟವಾಗುತ್ತಿದೆ ಎಂಬುದು ಕೇಳಿಬರುತ್ತಿರುವ ಅಭಿಪ್ರಾಯ. ಹಾಗಾಗಿ ಈ ತಿದ್ದುಪಡಿಯಲ್ಲಿ ಇರುವ ಮುಖ್ಯ ಅಂಶಗಳನ್ನು ಪ್ರಸ್ತಾಪಿಸಲೇಬೇಕು.
ಈಗಿರುವ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ, ರಾಜ್ಯ ಗ್ರಾಹಕ ಆಯೋಗ, ಕೇಂದ್ರ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಬದಲಾಗಿ, ಸರಳವಾಗಿ ಜಿಲ್ಲಾ ವೇದಿಕೆ, ರಾಜ್ಯ ವೇದಿಕೆ, ಕೇಂದ್ರ ವೇದಿಕೆ ಎನ್ನಲಾಗುತ್ತದೆ. ಈವರೆಗೆ ಕೆಲವು ಜಿಲ್ಲೆಗಳಲ್ಲಿ ಗ್ರಾಹಕ ನ್ಯಾಯಾಲಯ ಇರಲಿಲ್ಲ. ಇದ್ದರೂ ಅದಕ್ಕೆ ಅಧ್ಯಕ್ಷರನ್ನು ನೇಮಿಸಿರುತ್ತಿರಲಿಲ್ಲ. ಈಗ ಒಂದು ಜಿಲ್ಲಾ ವೇದಿಕೆಗೆ ಇನ್ನಾವುದೇ ಜಿಲ್ಲೆಯನ್ನು ಒಳಗೊಳ್ಳುವ ಅವಕಾಶ ಕೊಡಲಾಗಿದೆ. ಜೊತೆಗೆ ಅಧ್ಯಕ್ಷರಿಲ್ಲದ ವೇದಿಕೆಗಳಿಗೆ ಬೇರೊಂದು ವೇದಿಕೆಯ ಅಧ್ಯಕ್ಷರನ್ನು ಪ್ರಭಾರಿಯಾಗಿ ಕಲಾಪ ನಡೆಸುವಂತೆ ವ್ಯವಸ್ಥೆ ಮಾಡಬಹುದಾಗಿದೆ.
ರಾಜಕೀಯ ನೇಮಕಾತಿಗಳಿಗೆ ಕೊಕ್?
ಈ ತಿದ್ದುಪಡಿಯಲ್ಲಿ ಜಿಲ್ಲಾ ವೇದಿಕೆಯ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯಲ್ಲಿ ಹೊಸದೊಂದು ನಿಯಮ ಸೇರಿಸಲಾಗಿದೆ. ಅಧ್ಯಕ್ಷರನ್ನು ನೇಮಿಸುವಾಗ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದ ಜಿಲ್ಲಾ ನ್ಯಾಯಾಧೀಶ ಅಥವಾ ತತ್ಸಮಾನ ಅರ್ಹತೆ ಹೊಂದಿರುವ ವ್ಯಕ್ತಿಗಳಿಗೆ ಹಾಗೂ ಸದಸ್ಯರುಗಳ ಶಿಫಾರಸ್ಸು ಪಟ್ಟಿಯನ್ನು ಕೊಡುವ ಅಧಿಕಾರ ರಾಜ್ಯ ಪಬ್ಲಿಕ್ ಸರ್ವಿಸ್ ಕಮೀಷನ್‌ಗೆ ನೀಡಲಾಗಿದೆ. ರಾಜ್ಯ ಲೋಕಸೇವಾ ಆಯೋಗವು ಅಧ್ಯಕ್ಷರಾಗ ಬಯಸುವ ವ್ಯಕ್ತಿಗಳಿಗೆ ವೈವಾ ಪರೀಕ್ಷೆಯನ್ನು ಮಾಡಿ, ಅದರ ಮೆರಿಟ್ ಆಧಾರದ ಮೇಲೆ ಸಿನಿಯಾರಿಟಿ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸುತ್ತದೆ. ಸದಸ್ಯರಾಗ ಬಯಸುವವರಿಗೆ ಲಿಖೀತ ಮತ್ತು ಮೌಖೀಕ ಪರೀಕ್ಷೆ ನಡೆಸಿ ಅದರ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳ ಶಿಫಾರಸ್ಸು ಪಟ್ಟಿ ನೀಡಲಾಗುತ್ತದೆ. ಇಲ್ಲಿಯವರೆಗಿನ ರಾಜಕೀಯ ಕೃಪಾಪೋಷಿತ ಸದಸ್ಯರ ನೇಮಕಾತಿಯ ಪ್ರಕ್ರಿಯೆ ಇದರಿಂದ ಕೊನೆಗೊಳ್ಳಬಹುದು.
ಈ ಹಿಂದೆ ಜಿಲ್ಲಾ ವೇದಿಕೆ, ರಾಜ್ಯ ವೇದಿಕೆ ಹಾಗೂ ಕೇಂದ್ರ ವೇದಿಕೆಗೆ ದೂರು ದಾಖಲಿಸಲು ಪರಿಹಾರದ ಮೊತ್ತವೆಂದರೆ ನೇರ ನಷ್ಟ, ಪರೋಕ್ಷ ನಷ್ಟ, ಮಾನಸಿಕ ಪರಿಹಾರ ಎಲ್ಲಾ ಸೇರಿ ಒಟ್ಟು ಮೊತ್ತವನ್ನು ಅವಲಂಬಿಸಿ ಆಯಾ ವೇದಿಕೆಗಳಲ್ಲಿ ದೂರು ದಾಖಲಿಸಬೇಕಿತ್ತು. ಈಗ ಒಟ್ಟು ಪರಿಹಾರ ಮೊತ್ತ ಎಷ್ಟೇ ಆಗಿರಲಿ, ನೇರವಾಗಿ ಆದ ನಷ್ಟದ ಮೊಬಲಗನ್ನು ಮಾತ್ರ ಆಧರಿಸಿ ಆಯಾ ವೇದಿಕೆಗಳಲ್ಲಿ ದೂರು ದಾಖಲಿಸಬಹುದು.
ಗ್ರಾಹಕ ನ್ಯಾಯಾಲಯಗಳಲ್ಲಿ ದೂರು ದಾಖಲಿಸಲು ಈ ಹಿಂದೆ ಇದ್ದ ಸೇವಾ ವ್ಯಾಪ್ತಿಗೆ ಈ ಬಾರಿಯ ತಿದ್ದುಪಡಿಯಲ್ಲಿ ಇನ್ನೊಂದು ಅಂಶವನ್ನು ಸೇರಿಸಲಾಗಿದೆ. ಆ ಪ್ರಕಾರ ಮೋಸಕ್ಕೊಳಗಾದ ಗ್ರಾಹಕ ಯಾವ ಸ್ಥಳದಲ್ಲಿ ಸೇವೆ ಅಥವಾ ವಸ್ತುವನ್ನು ಖರೀದಿಸುತ್ತಾನೋ ಆ ವ್ಯಾಪ್ತಿಯ ನ್ಯಾಯಾಲಯದಲ್ಲಿಯಾಗಲೀ ಅಥವಾ ಗ್ರಾಹಕ ಎಲ್ಲಿ ವಾಸವಾಗಿರುತ್ತಾನೋ ಆ ಸ್ಥಳಕ್ಕೆ ಸಂಬಂಧಿಸಿದ ನ್ಯಾಯಾಲಯದಲ್ಲಾಗಲೀ ದೂರು ದಾಖಲಿಸಬಹುದು.
ಈಗ ಆನ್‌ಲೈನ್ ಖರೀದಿಯ ಭರಾಟೆ ಹೆಚ್ಚಾಗಿದೆ. ವಸ್ತುವನ್ನು ಚಿತ್ರದಲ್ಲಿ ಮಾತ್ರ ನೋಡಿ ಖರೀದಿಸಿ ಪಿಗ್ಗಿ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬಾರಿಯ ತಿದ್ದುಪಡಿಯಲ್ಲಿ ಈ ಮೋಸದ ವಿರುದ್ಧವೂ ದೂರು ದಾಖಲಿಸಿ ನ್ಯಾಯ ಪಡೆಯಬಹುದು. ಜೊತೆಗೆ ಕೊಂಡ ವಸ್ತು ಗ್ರಾಹಕನಿಗೆ ತೃಪ್ತಿ ತಾರದಿದ್ದಲ್ಲಿ ಸ್ವೀಕರಿಸಿ ಮೂವತ್ತು ದಿನಗಳ ಒಳಗೆ ವಸ್ತುವನ್ನು ವಾಪಸ್ಸು ನೀಡಿ ಹಣ ಹಿಂಪಡೆಯಲು ಅವಕಾಶ ನೀಡಲಾಗಿದೆ.
ಒಂದು ತಿದ್ದುಪಡಿ ಸ್ವಲ್ಪ ಗೊಂದಲಮಯವಾಗಿದೆ. ಗ್ರಾಹಕ ಚಳವಳಿಯ ಆಶಯದಂತೆ ಈ ವ್ಯವಸ್ಥೆಯಲ್ಲಿ ಗ್ರಾಹಕ ನೇರವಾಗಿ ತನಗಾದ ನಷ್ಟಕ್ಕೆ ನ್ಯಾಯ ಪಡೆಯಬೇಕು ಎಂಬುದಾಗಿತ್ತು. ಆದರೆ ಈಗಿರುವ ವ್ಯವಸ್ಥೆಯಲ್ಲಿ ಗ್ರಾಹಕ ನ್ಯಾಯಾಲಯದಲ್ಲೂ ವಕೀಲರ ಪ್ರವೇಶದಿಂದಾಗಿ ಮೂರು ತಿಂಗಳೊಳಗೆ ದೊರಕಬೇಕಾದ ನ್ಯಾಯದಾನ ಸಿವಿಲ್ ನ್ಯಾಯಾಲಯಗಳಂತೆ ತುಂಬಾ ವಿಳಂಬವಾಗುತ್ತಿದೆ. ಈ ತಿದ್ದುಪಡಿಯ ಪ್ರಕಾರ ಜಿಲ್ಲಾ ವೇದಿಕೆ, ರಾಜ್ಯ ವೇದಿಕೆ ಹಾಗೂ ಕೇಂದ್ರ ವೇದಿಕೆಯಲ್ಲಿ ಕ್ರಮವಾಗಿ ಐದು ಲಕ್ಷ, ಐವತ್ತು ಲಕ್ಷ ಹಾಗೂ ಒಂದೂವರೆ ಕೋಟಿ ರೂ.ವರೆಗಿನ ಪರಿಹಾರ ಮೊತ್ತದ ಕೋರಿಕೆಯ ಪ್ರಕರಣಗಳಿಗೆ ದೂರುದಾರನಾಗಲೀ, ಎದುರು ಪಾರ್ಟಿಯಾಗಲೀ ವಕೀಲರ ಸೇವೆ ಪಡೆಯುವಂತಿಲ್ಲ.
ಈ ಷರತ್ತು ಕೆಲವು ಸಮಸ್ಯೆಗಳನ್ನು ಹುಟ್ಟುಹಾಕಬಹುದು. ಗ್ರಾಹಕ ಬ್ಯಾಂಕ್ ಮೊದಲಾದ ಸಂಸ್ಥೆಗಳ ವಿರುದ್ಧ ದೂರು ದಾಖಲಿಸಿದಾಗ ಸಂಸ್ಥೆಯನ್ನು ಪ್ರತಿನಿಧಿಸುವ ಆರೋಪಿಯಾಗಿ ಯಾರು ಪ್ರಾತಿನಿಧ್ಯ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟವಿಲ್ಲ. ಸಾಮಾನ್ಯವಾಗಿ ವಕೀಲರ ಮೂಲಕ ಹಾಜರಾಗುತ್ತಿದ್ದ ಸಂಸ್ಥೆಗಳು ಆಯ್ದುಕೊಳ್ಳುವ ಪ್ರತಿನಿಧಿಯ ಕುರಿತು ಕಾಯ್ದೆಯಲ್ಲಿ ಸ್ಪಷ್ಟ ವ್ಯಾಖ್ಯೆ ಇಲ್ಲ. ಈವರೆಗಿದ್ದ ಗ್ರಾಹಕ ಕೌನ್ಸಿಲ್ ಬದಲಾಗಿ ಈ ತಿದ್ದುಪಡಿಯಲ್ಲಿ ಕೇಂದ್ರ ಗ್ರಾಹಕ ಸಂರಕ್ಷಣಾ ಆಯೋಗದ ವ್ಯವಸ್ಥೆ ತರಲಾಗಿದೆ. ಅದಕ್ಕೆ ಹೆಚ್ಚಿನ ಅಧಿಕಾರ ನೀಡಲಾಗುತ್ತಿದೆ.
ಈ ಕಾಯ್ದೆಗೆ ಹೊಸದೊಂದು ವಿಷಯವನ್ನು ಸೇರಿಸಲಾಗಿದೆ. ಈ ಅಂಶದ ಪ್ರಕಾರ ಜಿಲ್ಲಾ, ರಾಜ್ಯ ಹಾಗೂ ಕೇಂದ್ರ ವೇದಿಕೆಗಳು “ಮಧ್ಯಸ್ಥಿಕೆದಾರ’ರನ್ನು ನೇಮಿಸಬಹುದಾಗಿದೆ. ವ್ಯಾಜ್ಯ ಉಂಟಾದ ಪ್ರಕರಣಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವ ಸಲುವಾಗಿ ಎಲ್ಲಾ ವೇದಿಕೆಗಳು ಮಧ್ಯಸ್ಥದಾರರ ನೇಮಕ ಮಾಡಬಹುದಾಗಿದೆ. ಅವರುಗಳು ಎರಡು ಪಾರ್ಟಿಗಳ ನಡುವೆ ಇರಬಹುದಾದ ಅಪನಂಬಿಕೆಗಳು, ಪರಸ್ಪರ ದೋಷಾರೋಪಗಳನ್ನು ರಾಜಿ ಪಂಚಾಯ್ತಿಯ ಮೂಲಕ ಬಗೆಹರಿಸಬಹುದಾಗಿದೆ.
ಕಾಯ್ದೆಯಲ್ಲಿ ತೀರ್ಪು ಪುನರ್ ವಿಮರ್ಶೆಗೆ ಅವಕಾಶ ಕಲ್ಪಿಸಲಾಗಿರುವುದು ಗಮನಾರ್ಹ ಅಂಶ. ಹಲವು ಸಂದರ್ಭಗಳಲ್ಲಿ ದೂರುದಾರ ಸಲ್ಲಿಸಿದ ಮುಖ್ಯ ಸಾಕ್ಷಿಯೊಂದನ್ನೇ ಪರಿಗಣಿಸದೆ ಕೆಳ ಹಂತದ ಗ್ರಾಹಕ ವೇದಿಕೆ ಆತನ ವಿರುದ್ಧವಾಗಿ ತೀರ್ಪು ನೀಡಿದ ಪ್ರಕರಣಗಳಿದ್ದವು. ಈ ಸಂದರ್ಭದಲ್ಲಿ ಅರ್ಜಿದಾರ ಅನಿವಾರ್ಯವಾಗಿ ಮೇಲಿನ ಹಂತದ ಗ್ರಾಹಕ ನ್ಯಾಯಾಲಯಕ್ಕೇ ಮೊರೆ ಹೋಗಬೇಕಾಗಿತ್ತು. ಆ ನಿಟ್ಟಿನಲ್ಲಿ ಆತನಿಗೆ ಈಗ ತೀರ್ಪಿತ್ತ ನ್ಯಾಯಾಲಯದಲ್ಲಿಯೇ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು. ತಿದ್ದುಪಡಿಯಲ್ಲಿ ಈ ಬಾರಿ ಸುಳ್ಳು ದೂರು ದಾಖಲಿಸಿದವರಿಗೆ ಹತ್ತು ಸಾವಿರ ದಂಡ ವಸೂಲು ಮಾಡುವ ಬದಲಾಗಿ ಅದನ್ನು ಐವತ್ತು ಸಾವಿರಕ್ಕೆ ಏರಿಸಲಾಗಿದೆ.
ಬಹುಶಃ ದೇಶದ ಮಾಹಿತಿ ಹಕ್ಕು, ಸಕಾಲ, ನಾಗರಿಕ ಸನದು ಮೊದಲಾದ ಗ್ರಾಹಕ ಪರ ಮನೋಭಾವ, ಕಾನೂನು, ಸೌಲಭ್ಯಗಳ ಜಾರಿಗೆ ಗ್ರಾಹಕ ಕಾಯ್ದೆ ಮತ್ತು ಅದರೊಂದಿಗೇ ಬಲವಾದ ಗ್ರಾಹಕ ಆಂದೋಲನ ಕಾರಣವಾಗಿದೆ ಎಂಬುದು ನಿಜವಾದರೂ, ಅಸಲಿಗೆ ಗ್ರಾಹಕ ಕಾಯ್ದೆಯೇ ವಿವಿಧ ದೋಷಗಳಿಂದ ಕುಂಟುವಂತಾಗಿತ್ತು. ಈ ನಡುವೆ ಕಲ್ಪಿಸಲಾದ ಮೂರು ಸಂದರ್ಭದ ತಿದ್ದುಪಡಿಗಳು ಕಾಯ್ದೆಗೆ ಹೆಚ್ಚಿನ ಹರಿತ ಕೊಡಲು ಫಲವಾಗಿತ್ತು.
ಈ ನಡುವೆ, ಕಾಯ್ದೆಯಲ್ಲಿಯೇ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ ರಚನೆಗೆ ಅವಕಾಶ ಕಲ್ಪಿಸಲಾಗಿದೆ. ಒಂದು ಪ್ರಕರಣದಲ್ಲಿ ಒಬ್ಬ ವ್ಯಕ್ತಿಗೆ ನ್ಯಾಯದಾನ ಮಾತ್ರ ಸಿಗುತ್ತದಾದರೆ, ಪ್ರಾಧಿಕಾರ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವ ಸ್ವಾತ್ರಂತ್ರ್ಯ ಹೊಂದಲಿದೆ. ಚೈನ್ ಸ್ಕೀಮ್, ಫೈನಾನ್ಸ್ ಹಗರಣ ಮೊದಲಾದ ಸಾಮೂಹಿಕವಾಗಿ ನಡೆಯುವ ವಂಚನೆ ಸಂದರ್ಭಗಳಲ್ಲಿ ಪ್ರಾಧಿಕಾರ ಜನರ ಪರ ವಿಚಾರಣೆ ನಡೆಸಬಹುದಾಗಿರುವುದು ಕೊಳ್ಳೆ ಹೊಡೆದ ಮೇಲೆ ಬಾಗಿಲು ಹಾಕುವ ಸಂಪ್ರದಾಯಕ್ಕೆ ತೆರೆ ಎಳೆಯಬಹುದು. ತಪ್ಪೆಸಗಿದ ಕಂಪನಿಗಳ ಮೇಲೆ ಭಾರೀ ದಂಡ ವಿಧಿಸುವ ವಿಶೇಷ ಅಧಿಕಾರ ನೀಡಲಾಗುತ್ತಿದೆ.
ಬರಲಿದೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ!
ಈಗಿನ ಮಾಹಿತಿಯಂತೆ, ಕೇಂದ್ರ ಗ್ರಾಹಕ ಪ್ರಾಧಿಕಾರ ಸರ್ಕಾರದ ಕಾರ್ಯದರ್ಶಿ ಮಟ್ಟದ ಓರ್ವ ಆಯುಕ್ತರು ಹಾಗೂ ವಿವಿಧ ಕ್ಷೇತ್ರಗಳ ಪರಿಣತರಾದ ಐವರು ಉಪ ಆಯುಕ್ತರನ್ನು ಒಳಗೊಂಡಿರುತ್ತದೆ. ದೆಹಲಿಯಲ್ಲಿ ಕಾರ್ಯನಿರ್ವಸುವ ಈ ಪ್ರಾಧಿಕಾರ ಗ್ರಾಹಕ ನ್ಯಾಯಾಲಯಗಳ ವ್ಯವಹಾರದಲ್ಲಿ ತಲೆಹಾಕುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಸಾರ್ವಜನಿಕವಾಗಿ ನಡೆಯುವ ವ್ಯವಾಹಾರಿಕ ವಂಚನೆಯ ತಡೆ, ಗ್ರಾಹಕನಿಗಾಗುವ ನಷ್ಟವನ್ನು ತಡೆಯುವ ಉದ್ದೇಶ ಹೊಂದಿದೆ.
ಅಧಿವೇಶನದಲ್ಲಿ ಮಂಡನೆ
ಕೇಂದ್ರದ ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಸಿದ್ಧಗೊಂಡಿರುವ ಕಾಯ್ದೆ ತಿದ್ದುಪಡಿಯ ಕರಡು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಕಳೆದ ಮಾರ್ಚ್ 31ರಂದು ಲೋಕಸಭೆಯಲ್ಲಿ ಮಂಡನೆಯಾಗಿದೆ. ಕರಡು ಹಾಗೂ 2015ರ ಪೊ›. ಇಯಾನ್ ಹಾರ್ಪರ್‌ರ ವರದಿ ಮತ್ತು ಹಲವು ಗ್ರಾಹಕ ಸಂಘಟನೆಗಳ ಸಲಹೆ ಸೂಚನೆಗಳನ್ನು ಪಡೆದು ಸಣ್ಣ ಪುಟ್ಟ ಬದಲಾವಣೆಗಾಳಾಗಿದೆ. ಬಹುಶ ಮೇನಲ್ಲಿ ನಡೆಯುವ ಮುಂದಿನ ಲೋಕಸಭಾ ಅಧಿವೇಶನದಲ್ಲಿ ಈ ಕುರಿತು ಚರ್ಚೆ ನಡೆದು ತಿದ್ದುಪಡಿ ಸ್ವೀಕಾರ ಆಗುವ ಎಲ್ಲ ಸಾಧ್ಯತೆಗಳಿವೆ.
-ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.