ಗೆಣಸು ಬೆಳೆದು ಗೆದ್ದರು !
Team Udayavani, Jul 31, 2017, 7:25 AM IST
ಖಾನಾಪುರ ತಾಲೂಕಿನ ಕೃಷಿ ಭೂಮಿಗಳೆಲ್ಲಾ ಗೆಣಸಿನ ಬಳ್ಳಿಯಿಂದ ಹಸಿರಾಗತೊಡಗಿವೆ. ಕೃಷಿಗೆ ಪಳಗಿಸಿಕೊಂಡ ಬೆಟ್ಟ ಗುಡ್ಡಗಳು, ಬದುಗಳು, ಕಾಲುವೆಯ ದಡಗಳೂ ಹಸಿರಿನಿಂದ ಕಂಗೊಳಿಸ ತೊಡಗಿವೆ. ಕೃಷಿ ಭೂಮಿಗಳಲ್ಲಿ ಹಸಿರು ಬಳ್ಳಿಗಳು ಗಟ್ಟಿಯಾಗಿ ಕುಳಿತಿವೆ. ನಾಟಿ ಹಚ್ಚುವ ಮಹಿಳೆಯರ ವೇಗದ ನಾಟಿ ಗೆಣಸಿನ ಬಳ್ಳಿಗಳನ್ನು ಶಿಸ್ತುಬದ್ದವಾಗಿ ಜೋಡಿಸತೊಡಗಿವೆ. ಪರಿಣಾಮವಾಗಿ ಖಾನಾಪುರದಲ್ಲಿ ಈಗ ಗೆಣಸು ಕೃಷಿ ಗರಿಗೆದರಿ ನಿಂತಿದೆ.
ನಾಟಿಯ ಬಳ್ಳಿಗಳಿಗೆ ಭರ್ಜರಿ ಬೇಡಿಕೆ
ಖಾನಾಪುರ ತಾಲೂಕಿನ ಜಾಂಬೋಟಿ, ಬೈಲೂರು, ಗೋಳಾÂಳಿ, ಅವರೆ, ಅಬ್ಟಾನಟ್ಟಿ, ಕುಸುವಳ್ಳಿ, ಸೋನಾರವಾಡಿ, ದೇವಾಚಿಹಟ್ಟಿ, ಕಾಲ್ಮನಿ, ತೋರಾಳೆ, ತೀರ್ಥಕುಂಟೆ, ಉಚ್ಚವಾಡ ಭಾಗಗಳಲ್ಲಿ ಗೆಣಸು ಬೆಳೆಗಾರರಿದ್ದಾರೆ. ಬೈಲೂರು, ಜಾಂಬೋಟಿ, ಅಮಟೆ, ಗೋಲ್ಯಾಳಿ, ಕನಕುಂಬಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯತೇತ್ಛ ಗೆಣಸು ಬೆಳೆಯುವ ಪ್ರದೇಶವಿದೆ. ಬೆಳಗಾವಿ ತಾಲೂಕಿನ ಬೆಳವಟ್ಟಿ, ಬಡಸಬಾಕೂರು, ಕುದುರೆಮನಿ, ಹಂಗಾರಗಾವಿ, ಕಿನಿ, ಬಾದರವಾಡಿ ಸೇರಿದಂತೆ ಬೆಳಗಾವಿಯ ಪಶ್ಚಿಮ ಭಾಗದಲ್ಲಿನ ಮಹಾರಾಷ್ಟ್ರದ ಗಡಿಭಾಗದವರೆಗೆ ಗೆಣಸಿನ ಬೆಳೆ ಕಂಡುಬರುತ್ತದೆ. ಎಲ್ಲಾ ಭಾಗಗಳಲ್ಲಿಯೂ ನಾಟಿ ಕಾರ್ಯ ಭರದಿಂದ ಸಾಗಿದೆ. ನಾಟಿ ಹಚ್ಚುವ ಬಳ್ಳಿಗೆ ದರ ಸಮರ ಶುರುವಾಗಿದೆ.
ಗೆಣಸು ಕೃಷಿ ಮಾಡುವ ಎಲ್ಲಾ ರೈತರೂ ನಾಟಿಗೆ ಬೇಕಾದ ಬಳ್ಳಿ ತಯಾರಿಸಿಕೊಳ್ಳಲು ಸಾಧ್ಯವಾಗದು. ಬೇರೆಯವರಿಂದ ಖರೀದಿಸಬೇಕು. ನೀರಿನ ಕೊರತೆ ಇದಕ್ಕೆ ಕಾರಣ. ಬೋರ್‌ವೆಲ್ ವ್ಯವಸ್ಥೆ ಹೊಂದಿದವರು ಮಡಿ ತಯಾರಿಸಿ ಬೀಜಕ್ಕೆ ಬೇಕಾದ ಬಳ್ಳಿಯನ್ನು ತಯಾರಿಸುತ್ತಾರೆ. ಹದಗೊಳಿಸಿದ ಸಸಿ ಮಡಿಗೆ ಒಂದು ಅಡಿಯಷ್ಟು ಕತ್ತರಿಸಿದ ಗೆಣಸಿನ ಬಳ್ಳಿಗಳ ತುಂಡುಗಳನ್ನು ಗಿಡದಿಂದ ಗಿಡ ಅರ್ಧ ಅಡಿ, ಸಾಲಿನಿಂದ ಸಾಲು ಒಂದು ಅಡಿ ಊರಿರುತ್ತಾರೆ. ಒಂದೂವರೆ ತಿಂಗಳಲ್ಲಿ ಬಳ್ಳಿ ವಿಸ್ತಾರವಾಗಿ ಹಬ್ಬಿರುತ್ತದೆ. ಸ್ವಲ್ಪ ಪ್ರಮಾಣದ ಯೂರಿಯಾ ಸಿಂಪಡಿಸಿ ದಿನನಿತ್ಯ ನೀರು ಒದಗಿಸುತ್ತಿದ್ದರೆ. ಅಚ್ಚ ಹಸಿರಾಗಿರುವ ಬಳ್ಳಿಗಳು ನಾಟಿಗೆ ಸಿದ್ದ.
ಸೋನಾರ್ ವಾಡಿ ಗ್ರಾಮದ ಜ್ಯೋತಿಬಾ ನಾವಗೇರಕರ್ ಅವರು ಮುಕ್ಕಾಲು ಎಕರೆ ಭೂಮಿಯಲ್ಲಿ ಬೀಜದ ಬಳ್ಳಿಗಳನ್ನು ತಯಾರಿಸಿದ್ದಾರೆ. ಎಲ್ಲ ರೈತರಿಗೆ ತಲುಪಿಸಿದ್ದಾರೆ. ಹತ್ತು ವರ್ಷಗಳಿಂದ ಗೆಣಸು ಕೃಷಿಯಲ್ಲಿ ತೊಡಗಿರುವ ಇವರಿಗೆ ಬೀಜದ ಬಳ್ಳಿಗಳ ತಯಾರಿಯೂ ಆದಾಯದ ಮೂಲವಾಗಿ ಪರಿಣಮಿಸಿದೆ. ನೀರಾವರಿ ರಹಿತ ಗೆಣಸು ಬೆಳೆಗಾರರು ಇವರಲ್ಲಿ ಮುಂಚಿತವಾಗಿ ತಮಗೆ ಬೇಕಾದಷ್ಟು ಬಳ್ಳಿ ಅಗತ್ಯದ ಬಗ್ಗೆ ತಿಳಿ ಹೇಳಿದ್ದಾರೆ.
ಒಂದು ಎಕರೆ ಪ್ರದೇಶಕ್ಕೆ ನಾಟಿ ಮಾಡಲು ಇಪ್ಪತೈದು ಹೊರೆ ಬೀಜದ ಬಳ್ಳಿಯ ಅಗತ್ಯವಿದೆ. ಸಸಿ ಮಡಿ ಮಾಲೀಕರಿಂದ ಹೊರೆ ಲೆಕ್ಕದಲ್ಲಿ ಖರೀದಿಸಬೇಕು. ಪ್ರತೀ ಹೊರೆಗೆ 200ರೂ. ದರವಿದೆ. ಕೆಲವು ಬಾರಿ ಈ ದರ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ಮಡಿ ತಯಾರಿಸಿದ ರೈತರ ಸಂಖ್ಯೆ ಕಡಿಮೆ ಇದ್ದು ಬೇಡಿಕೆ ಅಧಿಕವಾದಲ್ಲಿ ಪ್ರತಿ ಹೊರೆಗೆ 500 ರೂ. ದರ ಎತ್ತಿಡಬೇಕಾದ ಸಂದರ್ಭವೂ ಎದುರಾಗುತ್ತದೆ. ಒಂದು ಎಕರೆಗೆ ಬೇಕಾದ ಬೀಜದ ಬಳ್ಳಿ ತಯಾರಿಸಲು ಇಪ್ಪತ್ತು ಅಡಿ ಉದ್ದ ಇಪ್ಪತ್ತು ಅಡಿ ಅಗಲದ ಸಸಿ ಮಡಿ ಬೇಕಾಗುತ್ತದೆ. ಸೋನಾರವಾಡಿ ಗ್ರಾಮದ ಯಲ್ಲಪ್ಪ ಲಕ್ಷ್ಮಣ್ ನಾಯ್ಕ ಇವರು ಮೂರು ಎಕರೆಯಲ್ಲಿ ಗೆಣಸು ಕೃಷಿ ಮಾಡಿದ್ದಾರೆ. ಎಪ್ಪತ್ತೆ„ದು ಹೊರೆಯಷ್ಟು ಬೀಜದ ಬಳ್ಳಿಗಳನ್ನು ಖರೀದಿಸಿದ್ದಾರೆ. 5000 ರೂ.ವೆಚ್ಚ ಮಾಡಿದ್ದಾರೆ. ಬೆಳಗಾವಿ ತಾಲೂಕಿನ ಹನಗೋಡ ಗ್ರಾಮದ ಸುಭಾಷ್ ಕೋಲ್ಕರ್ ಇವರು ಖಾನಾಪುರ ತಾಲೂಕಿನ ಸೋನಾರವಾಡಿ ಗ್ರಾಮಕ್ಕೆ ಬಂದು ಎಂಟು ಎಕರೆ ಭೂಮಿಯನ್ನು ಲೀಸ್ ಪಡೆದು ಗೆಣಸು ಕೃಷಿ ಮಾಡಿದ್ದಾರೆ. ನೀರಿನ ವ್ಯವಸ್ಥೆ ಇಲ್ಲದೇ ಇದ್ದುದರಿಂದ ಬೇರೆ ರೈತರಿಂದ ಬೀಜದ ಬಳ್ಳಿಗಳನ್ನು ಖರೀದಿಸಿದ್ದಾರೆ. ಪ್ರತಿ ಹೊರೆಗೆ 200 ರೂ ವೆಚ್ಚವಾಗಿದೆ. ಎಂಟು ಎಕರೆಗೆ 200 ಬೀಜದ ಬಳ್ಳಿಯ ಹೊರೆ ಖಾಲಿಯಾಗಿದೆ.
ಬೀಜದ ಗೆಣಸು ಕುಡಿಗಳನ್ನು ಬೆಳೆಸುವುದು ಕೆಲ ರೈತರ ಆದಾಯದ ಮೂಲ. ಮಾರಾಟಕ್ಕೆಂತಲೇ ಬೀಜದ ಬಳ್ಳಿಗಳನ್ನು ಬೆಳೆಸುವ ಹತ್ತಾರು ರೈತ ಕುಟುಂಬಗಳು ಕಂಡು ಬರುತ್ತವೆ. ಗೆಣಸು ಬೆಳೆಯುವ ರೈತರು ತಮಗೆ ಬೇಕಾದಷ್ಟು ಬೀಜದ ಬಳ್ಳಿಗಳನ್ನು ಲಭ್ಯವಿರುವ ಜಮೀನಿನ ಸಸಿ ಮಡಿಯಿಂದ ತಾವೇ ಕತ್ತರಿಸಿಕೊಂಡು ಬರಬೇಕು. ಮಡಿಯವರೆಗೆ ವಾಹನ ಹೋಗಲು ಸೌಕರ್ಯವಿಲ್ಲದಿದ್ದರೆ ಹೊರಲು ಆಳುಗಳು, ನಾಟಿ ಮಾಡುವ ಪ್ರದೇಶದವರೆಗೆ ವಾಹನ ಹೋಗಲು ಅಸಾಧ್ಯವಿದ್ದರೆ ಪುನಃ ಹೊರಲು ಆಳುಗಳ ಅಗತ್ಯವಿದೆ. ಸಾಗಾಟ ವಾಹನದ ವೆಚ್ಚ, ಕೂಲಿ ಬಾಬ್ತು ಸೇರಿ ಜಮೀನು ತಲುಪುವವರೆಗೆ ಬಳ್ಳಿಯ ಹೊರಗೆ ಸಾವಿರ ರೂಪಾಯಿಗಿಂತಲೂ ಅಧಿಕ ಖರ್ಚು ತಗುಲಿದಂತಾಗುತ್ತದೆ ಎನ್ನುತ್ತಾರೆ ಸೋನಾರವಾಡಿ ಗ್ರಾಮದ ಗೆಣಸು ಕೃಷಿಕ ಪರಶುರಾಮ ನಾಯಕ.
ನಾಟಿಗೆ ಆಳುಗಳ ತಂಡವಿದೆ
ಗುಡ್ಡದ ಇಳಿಜಾರಿಗೆ ಅಡ್ಡಲಾಗಿ ತಗ್ಗುಗಳಲ್ಲಿ, ಅಗಲದ ದಿಬ್ಬಗಳಲ್ಲಿ, ಹೊಲದಲ್ಲಿ ಹೀಗೆ ನಾನಾ ವೈರುಧ್ಯದ ಸ್ಥಳಗಳಲ್ಲಿ ಗೆಣಸಿನ ಬೀಜದ ಸಸಿಗಳನ್ನು ಊರಲಾಗುತ್ತದೆ. ಇದಕ್ಕಾಗಿ ಭೂಮಿಯನ್ನು ಹಸನುಗೊಳಿಸಿ ಏರು ಮಡಿ ತಯಾರಿಸಲಾಗುತ್ತದೆ. ಎರಡು ಅಡಿ ಅಗಲ, ಒಂದು ಅಡಿ ಎತ್ತರದ ಏರು ಮಡಿ. ಅಗಲವಿರುವ ಸ್ಥಳದಲ್ಲಿ ಉದ್ದನೆಯದಾಗಿ ನೇಗಿಲಿನ ಸಹಾಯದಿಂದ ಸಾಲನ್ನು ಕೊರೆದು ಸಾಲಿನಲ್ಲಿ ಬಳ್ಳಿಯನ್ನು ಉದ್ದನಾಗಿ ಇಟ್ಟು ಮಣ್ಣು ಮುಚ್ಚಲಾಗುತ್ತದೆ. ಸಸಿ ಮಡಿಯಿಂದ ಬೀಜಕ್ಕಾಗಿ ಆಯ್ದುಕೊಂಡು ಬಂದ ಗೆಣಸಿನ ಬಳ್ಳಿಗಳು 5-10 ಅಡಿ ಉದ್ದವಾಗಿರುತ್ತವೆ. ಅವುಗಳನ್ನು ಅಡಿಗೆ ಒಂದರಂತೆ ಕತ್ತರಿಸುತ್ತಾರೆ. ಒಂದು ಅಡಿ ಬಳ್ಳಿಯಲ್ಲಿ ಆರರಿಂದ ಎಂಟು ಗೆಣ್ಣುಗಳಿರುತ್ತವೆ. ಪ್ರತೀ ಗಂಟಿನ ಜಾಗದಲ್ಲಿ ಬೇರುಗಳು ಹುಟ್ಟಿಕೊಂಡು ಗೆಣಸು ಬೆಳೆಯಲು ಆರಂಭಿಸುತ್ತವೆ. ಎರಡರಿಂದ ಮೂರು ಗಂಟುಗಳು ಮಾತ್ರ ಬೆಳೆಯನ್ನು ಒದಗಿಸಿಕೊಡಲು ಶಕ್ತವಾಗುತ್ತದೆ. ಕೀಟದ ಬಾಧೆಗೆ ಒಳಗಾಗಿರುವ, ತೀರಾ ಎಳೆತಿರುವ ತುದಿ ಭಾಗವನ್ನು ನಾಟಿ ಮಾಡಿದರೆ ಗಿಡದಿಂದ ನಿರೀಕ್ಷಿತ ಇಳುವರಿ ಸಾಧ್ಯವಿಲ್ಲ.
ಗೆಣಸು ನಾಟಿಯ ಅವಧಿ ಆರಂಭವಾಯಿತೆಂದರೆ ಅಲ್ಲಲ್ಲಿ ಕೂಲಿಯಾಳುಗಳ ಗುಂಪು ಸಿದ್ಧಗೊಳ್ಳುತ್ತದೆ. ಹೆಚ್ಚಾಗಿ ಮಹಿಳೆಯರನ್ನೇ ಒಳಗೊಂಡಿರುವ 8-10 ಜನರ ತಂಡವಿರುತ್ತದೆ. ಅದಕ್ಕೊಬ್ಬ ಮುಖ್ಯಸ್ಥರು. ಎಲ್ಲೆಲ್ಲಿ ನಾಟಿ ಕೆಲಸವಿದೆ ಎನ್ನುವುದನ್ನು ಗುರುತಿಸುವುದು, ಸಂಬಂಧಿಸಿದ ರೈತರಿಂದ ವಾಹನಕ್ಕೆ ವ್ಯವಸ್ಥೆ ಮಾಡಿಕೊಳ್ಳುವುದು, ಕೆಲಸ ಮುಗಿದ ನಂತರ ಕೂಲಿ ಮೊತ್ತವನ್ನು ರೈತರಿಂದ ಪಡೆದು ಸಹವರ್ತಿ ಕೆಲಸಗಾರರಿಗೆ ಹಂಚುವ ಜವಾಬ್ದಾರಿಯನ್ನು ತಂಡದ ಮುಖ್ಯಸ್ಥರು ಪಡೆದುಕೊಳ್ಳುತ್ತಾರೆ. ಇಂತಹ ತಂಡಗಳು ಪ್ರತಿ ಗ್ರಾಮಗಳಲ್ಲಿಯೂ ಕಂಡುಬರುತ್ತದೆ. ಎಂಟು ಜನರಿರುವ ಒಂದು ತಂಡ ದಿನಕ್ಕೆ ಎರಡು ಎಕರೆಯಷ್ಟು ಗೆಣಸು ಬಳ್ಳಿ ನಾಟಿ ಮಾಡುತ್ತದೆ.
ಮಳೆ ಹದವಾಗಿ ಆದಲ್ಲಿ ಗೆಣಸಿನ ಬೆಳೆ ರೈತರಿಗೆ ವರದಾನ. ಅತಿಯಾದಲ್ಲಿ ಗಡ್ಡೆಗೆ ಶಿಲೀಂದ್ರಗಳ ಬಾಧೆ ಎದುರಾಗುತ್ತದೆ. ಹುಳದ ಕಾಟ ಇನ್ನೊಂದೆಡೆ. ಈ ಕೀಟ ಎರಗಿದರೆ ಇಡೀ ಗೆಣಸಿನ ಬೆಳೆ ಹಾಳಾಗುವುದೂ ಇದೆ. ಮಳೆ ಅಗತ್ಯದಷ್ಟು ಬೀಳದಿದ್ದರೆ ಗೆಣಸಿನ ಗಾತ್ರದಲ್ಲಿ ವ್ಯತ್ಯಯವಾಗುತ್ತದೆ. ಸಣ್ಣಗಿನ ಚಿರುಟಿದಂತಿರುವ ಗೆಣಸಿಗೆ ಯೋಗ್ಯ ಬೆಲೆ ಲಭ್ಯವಾಗುವುದಿಲ್ಲ. ಉತ್ತಮ ಮಳೆಯಾಗಿ ಕೃಷಿಗೆ ಪೂರಕವಾಗಿದ್ದರೆ ಭರ್ತಿ ಇಳುವರಿ ರೈತನ ಪಾಲಿಗಾಗಲಿದೆ. ಮಾರುಕಟ್ಟೆಗೆ ಒಮ್ಮೆಲೆ ಗೆಣಸಿನ ಆವಕವಾದರೂ ದರ ಕುಸಿತದ ಭೀತಿ ಇಲ್ಲದೆಯೂ ಇಲ್ಲ. ಕಳೆದ ವರ್ಷ ಕೊಯ್ಲಿನ ಆರಂಭದ ಹಂತದಲ್ಲಿ ಕ್ವಿಂಟಾಲ್ ಗೆಣಸಿಗೆ 1200 ದರ ಸಿಕ್ಕಿತ್ತು. ಕ್ರಮೇಣ ಕಟಾವು ಪ್ರಕ್ರಿಯೆ ವೇಗ ಪಡೆದು ಮಾರುಕಟ್ಟೆಗೆ ಗೆಣಸಿನ ರಾಶಿ ರಾಶಿ ಆವಕವಾಗುತ್ತಿದ್ದಂತೆಯೆ ದಿಡೀರ್ 400 ರೂಪಾಯಿಗೆ ಇಳಿದಿತ್ತು. ಈ ಬಾರಿ ಹೀಗಾಗದಿರಲಿ ಎನ್ನುವ ಆಶಯ ಗೆಣಸು ಬೆಳೆಗಾರರಲ್ಲಿದೆ. ಈ ಭಾಗದ ಗೆಣಸು ಕೃಷಿ ಒಂದು ರೀತಿಯಲ್ಲಿ ಮಳೆಯೊಂದಿಗಿನ ಹಾಗೂ ಬೆಲೆಯೊಂದಿಗಿನ ಜೂಜಾಟದಂತಾಗಿದೆ.
– ಜೈವಂತ ಪಟಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.