ಕಂಪೆನಿಗೆ ಟಾಟಾ: ರೈತರಿಗೆ ಜಮೀನು ವಾಪಸ್
Team Udayavani, Mar 4, 2019, 12:30 AM IST
ಛತ್ತೀಸ್‌ಗಢದ ಬುಡಕಟ್ಟು ಜಿಲ್ಲೆ ಬಸ್ತಾರ್‌ನಲ್ಲಿ ಸಾವಿರಾರು ರೈತರಿಗೆ ಸಂಭ್ರಮ. ಪ್ರತಿ ದಿನವೂ ಲೊಹಾಂಡಿಗುಡ ಮತ್ತು ತಾಕರ್ಗುಡ ತಾಲೂಕುಗಳ ಹತ್ತಾರು ರೈತರು ಪಂಚಾಯತ್ ಕಚೇರಿಗೆ ಭೇಟಿ ನೀಡಿ, ತಮ್ಮ ಭೂದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.
ಇದಕ್ಕೆಲ್ಲ ಕಾರಣವೇನು?
ಮುಖ್ಯಮಂತ್ರಿ ಭೂಪೇಶ ಬಾಘಲ್ ಅವರ ಘೋಷಣೆ: ಟಾಟಾ ಉಕ್ಕಿನ ಕಾರ್ಖಾನೆಗಾಗಿ ರೈತರಿಂದ ವಶಪಡಿಸಿಕೊಂಡ ಜಮೀನನ್ನು ಆಯಾ ರೈತರಿಗೆ ಹಿಂತಿರುಗಿಸಲಾಗುವುದು. ಅದನ್ನು ಕಾರ್ಯಗತಗೊಳಿಸಲಿಕ್ಕಾಗಿ ಪಟ್ವಾರಿಗಳಾದ ಪ್ರಮೋದ್ ಕುಮಾರ್ ಬಾಘಲ್
ಮತ್ತು ಅನಿಲ್ ಬಾಘಲ್ ರೈತರ ಭೂದಾಖಲೆಗಳನ್ನು ಜಾಗರೂಕತೆಯಿಂದ ಪರಿಶೀಲಿಸುತ್ತಿದ್ದಾರೆ.
ನ್ಯಾಯಬದ್ಧ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ, ಪುನರ್ ಸ್ಥಾಪನೆ ಮತ್ತು ಪುನರ್ವಸತಿಗಳಲ್ಲಿ ಪಾರದರ್ಶಕತೆ ಕಾಯಿದೆ, 2013 ಅನುಸಾರ ಅಲ್ಲಿನ ಮುಖ್ಯಮಂತ್ರಿ ಈ ಘೋಷಣೆ ಮಾಡಿದ್ದಾರೆ. ಇದು ಕಾರ್ಯಗತವಾದಾಗ, ಭಾರತದಲ್ಲೇ ರೈತರಿಂದ ಸ್ವಾಧೀನ ಪಡಿಸಿಕೊಂಡ ಜಮೀನನ್ನು ಅವರಿಗೆ ಹಿಂತಿರುಗಿಸಿದ ಮೊತ್ತಮೊದಲ ರಾಜ್ಯ ಎಂಬ ಹೆಗ್ಗಳಿಕೆ ಛತ್ತೀಸ್‌ಗಢದ ಪಾಲಾಗಲಿದೆ.
ಹತ್ತು ವರ್ಷದ ಹಿಂದೆ…
ಹತ್ತು ವರ್ಷಗಳ ಮುಂಚೆ, ಟಾಟಾ ಸ್ಟೀಲ್ ಸ್ಥಾವರಕ್ಕಾಗಿ ಹತ್ತು ಹಳ್ಳಿಗಳಲ್ಲಿ 1,765 ಹೆಕ್ಟೇರ್ ಭೂಸ್ವಾಧೀನ ಮಾಡಲಾಗಿತ್ತು. ರೂ.19,500 ಕೋಟಿ ವೆಚ್ಚದಲ್ಲಿ ಲೊಹಾಂಡಿಗುಡದಲ್ಲಿ ಸ್ಥಾವರ ಸ್ಥಾಪಿಸುವ ಯೋಜನೆ ಅದಾಗಿತ್ತು. ಆದರೆ, ಸರಕಾರ ಸ್ವಾಧೀನ ಪಡಿಸಿಕೊಂಡ ಬಹುಪಾಲು ಜಮೀನು ಫಲವತ್ತಾಗಿತ್ತು. ಬೆಳಾರ್ ಗ್ರಾಮದ ರೈತ ಪಿಲು ರಾಮ್ ಮನ್‌ಡಾವಿ ಹೀಗೆಂದು ನೆನಪು ಮಾಡಿಕೊಳ್ಳುತ್ತಾರೆ, ನಾವು ಪ್ರತಿ ವರ್ಷವೂ ಎರಡು ಮೂರು ಬೆಳೆ ಬೆಳೆಯುತ್ತಿದ್ದೆವು. ನಮ್ಮ ಕುಟುಂಬಗಳ ನಿರ್ವಹಣೆಗೆ ಅವುಗಳ ಫಸಲು ಸಾಕಾಗುತ್ತಿತ್ತು.
ಆದ್ದರಿಂದಲೇ ಅಲ್ಲಿ ಭೂಸ್ವಾಧೀನಕ್ಕೆ ವ್ಯಾಪಕ ಪ್ರತಿಭಟನೆ ವ್ಯಕ್ತವಾಯಿತು. ಜಮೀನು ಕಳೆದುಕೊಂಡ ಬಹುಪಾಲು ರೈತರು ಪರಿಹಾರದ ಹಣ ಸ್ವೀಕರಿಸಲು ನಿರಾಕರಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡದ್ದಕ್ಕಾಗಿ 2009-2010ರ ಅವಧಿಯಲ್ಲಿ 250ಕ್ಕಿಂತ ಅಧಿಕ ರೈತರನ್ನು ಬಂಧಿಸಲಾಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಸರಕಾರ ನನ್ನನ್ನು 45 ದಿನ ಜೈಲಿನಲ್ಲಿ ಬಂಧಿಸಿಟ್ಟಿತ್ತು ಎಂದು ಅವಲತ್ತುಕೊಳ್ಳುತ್ತಾರೆ ಪಿಲು ರಾಮ್
ಹತ್ತಿರದ ಬಡಾಂಜೀ ಗ್ರಾಮದ ಮದ್ದಾರಾಮರನ್ನು ಪೊಲೀಸರು ಮೂರು ಸಲ ಬಂಧಿಸಿದ್ದರು. ಟಾಟಾ ಕಾರ್ಖಾನೆಗಾಗಿ ನನ್ನ 6.47 ಹೆಕ್ಟೇರ್ ಜಮೀನೆಲ್ಲವನ್ನೂ ಸರಕಾರ ತಗೊಂಡಿತು. ನಾನು ಪ್ರತಿಭಟಿಸಿದೆ. ಸರಕಾರ ಕೊಟ್ಟ ಪರಿಹಾರದ ಹಣವನ್ನು ನಾನು ತಗೊಳ್ಳಲಿಲ್ಲ. ಆವಾಗಿನಿಂದ ನಮಗೆ ಬದುಕುವುದೇ ಕಷ್ಟವಾಗಿದೆ. ನಮ್ಮ ಜಮೀನು ನಮಗೆ ವಾಪಾಸು ಸಿಗುತ್ತದೆಂದು ನಾವು ನಿರೀಕ್ಷಿಸಿರಲಿಲ್ಲ ಎನ್ನುತ್ತಾರೆ ಮದ್ದಾ ರಾಮ್. ಆ ಕಾಯಿದೆಯ ಸೆಕ್ಷನ್ 101 ಅನುಸಾರ, ಈ ಚಾರಿತ್ರಿಕ ಕ್ರಮಕ್ಕೆ ಮುಂದಾಗಿದೆ ಛತ್ತೀಸ್‌ಗಢ ಸರಕಾರ. ಜಮೀನನ್ನು ಸ್ವಾಧೀನಪಡಿಸಿಕೊಂಡ ದಿನದಿಂದ ಐದು ವರುಷ ಉಪಯೋಗಿಸದಿದ್ದರೆ, ಅದನ್ನು ಮೂಲ ಮಾಲೀಕನಿಗೆ ಹಿಂತಿರುಗಿಸಬಹುದು ಅಥವಾ ಲ್ಯಾಂಡ್ ಬ್ಯಾಂಕಿಗೆ (ಜಮೀನು ಖಜಾನೆಗೆ) ಸೇರಿಸಿಕೊಳ್ಳ ಬಹುದು ಎನ್ನುತ್ತದೆ ಸೆಕ್ಷನ್ 101. ಜಮೀನು ಬಳಕೆಗೆ ಸಂಬಂಧಿಸಿದಂತೆ, ಪೂರ್ವಾನ್ವಯದ ಅಂಶವೂ ಕಾಯಿದೆಯಲ್ಲಿದೆ. ಪರಿಹಾರದ ಹಣವನ್ನು 2013ರ ಮುಂಚೆ ಘೋಷಿಸಿದ್ದು, ಜಮೀನು ಸ್ವಾಧೀನ ಪಡೆದುಕೊಳ್ಳದ ಮತ್ತು ಪರಿಹಾರದ ಹಣ ಪಾವತಿಸದ ಅಪೂರ್ಣ ಪ್ರಕ್ರಿಯೆಯ ಪ್ರಕರಣಗಳಲ್ಲಿ ಜಮೀನು ಸ್ವಾಧೀನ ರದ್ದಾ
ಗುತ್ತದೆ.
ಪಶ್ಚಿಮ ಬಂಗಾಳ ರಾಜ್ಯದಲ್ಲಿಯೂ ರೈತರ ಕೃಷಿ ಜಮೀನನ್ನು ಅವರಿಗೆ ವಾಪಸು ನೀಡಲಾಗಿದೆ. ಅಲ್ಲಿಯೂ ರೈತರ 403 ಹೆಕ್ಟೇರ್ ಜಮೀನು ಸ್ವಾಧೀನ ಪಡಿಸಿಕೊಂಡದ್ದು ಟಾಟಾ ಕಂಪೆನಿ ತನ್ನ ಸಣ್ಣ ಕಾರು ನ್ಯಾನೋ ಉತ್ಪಾದಿಸಲಿಕ್ಕಾಗಿ. ದೀರ್ಘಾವಧಿ ಹೋರಾಟದ ನಂತರ ರೈತರು ತಮ್ಮ ಜಮೀನು ವಾಪಸು ಪಡೆದರು; ಆದರೆ, ಟಾಟಾ ಕಂಪೆನಿ ಅಲ್ಲಿ ಕಾರು ಉತ್ಪಾದನೆಗಾಗಿ ಕಟ್ಟಡಗಳನ್ನು ನಿರ್ಮಿಸಿತ್ತು. ರೈತರಿಗೆ ಜಮೀನು ಹಿಂತಿರುಗಿಸುವ ಮುನ್ನ, ಅಲ್ಲಿನ ಕಟ್ಟಡಗಳನ್ನು ಕೆಡವಲಾಯಿತು. ಆದರೆ ಈ ಅವಾಂತರಗಳಿಂದಾಗಿ, ಅಲ್ಲಿನ ಜಮೀನು ಕೃಷಿಗೆ ಯೋಗ್ಯವಾಗಿ ಉಳಿದಿಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ಅನುರಾಧಾ ತಲ್ವಾರ್
ಅದೇನಿದ್ದರೂ, ಹಲವು ರಾಜ್ಯಗಳಲ್ಲಿ ಉಪಯೋಗಿಸದ ರೈತರ ಜಮೀನನ್ನು ಅವರಿಗೆ ಹಿಂತಿರುಗಿಸಲು ಕಾಯಿದೆಯಲ್ಲಿ ಅವಕಾಶ ಕಲ್ಪಿಸಲಾಗಿಲ್ಲ. ಆ ರಾಜ್ಯಗಳಲ್ಲಿ ಅಂತಹ ಜಮೀನನ್ನು ಲ್ಯಾಂಡ್ ಬ್ಯಾಂಕಿಗೆ ಸೇರಿಸಲಾಗುತ್ತಿದೆ. ಇನ್ನು ಕೆಲವು ರಾಜ್ಯಗಳು ರೈತರ ಕೃಷಿ ಜಮೀನನ್ನು ಸುಲಭವಾಗಿ ಸ್ವಾಧೀನಪಡಿಸಿಕೊಳ್ಳಲಿಕ್ಕಾಗಿ, ಕಾಯಿದೆಯನ್ನೇ ತಿದ್ದುಪಡಿ ಮಾಡಿವೆ. ಇದೆಲ್ಲ ರೈತರಿಗೆ ಮಾಡುವ ಅನ್ಯಾಯ, ಅಲ್ಲವೇ? ಉದಾಹರಣೆಗೆ, ಒಡಿಸ್ಸಾದ ಜಗತ್ಸಿಂಗ್ಪುರ ಜಿಲ್ಲೆಯ ಪೋಸ್ಕೋ ಯೋಜನೆಯನ್ನು ಕೊರಿಯಾದ ಕಂಪೆನಿ 2017ರಲ್ಲಿ ಕೈಬಿಟ್ಟರೂ, ಸ್ವಾಧೀನ ಪಡಿಸಿಕೊಂಡ ಜಮೀನನ್ನು ರೈತರಿಗೆ ಹಿಂತಿರುಗಿಸಲಿಲ್ಲ. ಒರಿಸ್ಸಾ ಸರಕಾರ 2011 ಮತ್ತು 2013ರಲ್ಲಿ ಮೂರು ಪಂಚಾಯಿತಿಗಳಲ್ಲಿ ಬಲಾತ್ಕಾರದಿಂದ ಸ್ವಾಧೀನ ಪಡಿಸಿಕೊಂಡ 1,092 ಹೆಕ್ಟೇರ್ ಜಮೀನನ್ನು ಲ್ಯಾಂಡ್ ಬ್ಯಾಂಕಿಗೆ ಸೇರಿಸಿಕೊಂಡಿತು. ಆ ಅರಣ್ಯಭೂಮಿಯನ್ನು ಲ್ಯಾಂಡ್ ಬ್ಯಾಂಕಿಗೆ ಸೇರಿಸುವುದು ಕಾನೂನಿನ ಉಲ್ಲಂಘನೆ ಎಂಬುದನ್ನು ಕಾರ್ಯಕರ್ತರು ತೋರಿಸಿಕೊಟ್ಟ ನಂತರ, ಅದನ್ನು ಜಿಂದಾಲ್ ಸ್ಟೀಲ್ ವರ್ಕ್ಸ್ ಕಂಪೆನಿಗೆ 2018ರಲ್ಲಿ ನೀಡಲಾಗಿದೆ.
ತಮ್ಮ ಜಮೀನಿನ ಮೇಲಿನ ಹಕ್ಕುಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕಾದರೆ ದೇಶವ್ಯಾಪಿ ಆಂದೋಲನದ ಅಗತ್ಯವಿದೆ. ಇಲ್ಲವಾದರೆ, ತಮ್ಮ ಏಕೈಕ ಜೀವನಾಧಾರವಾದ ಜಮೀನನ್ನೇ ರೈತರು ಕಳೆದುಕೊಂಡು, ಅವರ ಬದುಕು ದಿಕ್ಕೆಟ್ಟು ಹೋದೀತು. ಈ ನಿಟ್ಟಿನಲ್ಲಿ, ಛತ್ತೀಸ್‌ಗಢ ರಾಜ್ಯವು ರೈತರ ಹಿತರಕ್ಷಣೆಗಾಗಿ ನ್ಯಾಯಬದ್ಧ ಕ್ರಮ ಕೈಗೊಂಡಿದೆ. ಇತರ ರಾಜ್ಯಗಳೂ ಈ ಮಾದರಿಯನ್ನು ಅನುಸರಿಸಿ ತಾವು ರೈತಪರ ಎಂಬುದನ್ನು ತೋರಿಸಿ ಕೊಡಲಿ.
ಭಾರತದಲ್ಲಿ ಜಮೀನು ಸ್ವಾಧೀನ
ಸುಪ್ರೀಂ ಕೋರ್ಟ್ ಪ್ರಕರಣಗಳ ಪರಿಶೀಲನೆ (1950 2016) ಎಂಬ ವರದಿಯನ್ನು ದೆಹಲಿಯ ಸೆಂಟರ್ ಫಾರ… ಪಾಲಿಸಿ ರೀಸರ್ಚ್ ಪ್ರಕಟಿಸಿದೆ. ಆ ಕಾಯಿದೆಯ ಪೂರ್ವಾನ್ವಯದ ವಿಧಿಯ ಅನುಸಾರ, 2014 2016 ಅವಧಿಯಲ್ಲಿ ಸುಪ್ರೀಂ ಕೋರ್ಟಿನಲ್ಲಿ 280 ಪ್ರಕರಣಗಳು ದಾಖಲಾಗಿವೆ. ಶೇಕಡಾ 95ರಷ್ಟು ಜಮೀನು ಸ್ವಾಧೀನವನ್ನು ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿದೆ. ಇದರಿಂದಾಗಿ ಹಲವಾರು ರೈತ ಮಾಲೀಕರು ತಮ್ಮ ಜಮೀನು ವಾಪಸು ಪಡೆಯಲು ಅಥವಾ ಪರಿಹಾರ ಪಡೆಯಲು ಸಾಧ್ಯವಾಯಿತು.
-ಅಡ್ಡೂರು ಕೃಷ್ಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.