ಕಾರ ಹಿಂದೆ ಹೋದೆ, ನಷ್ಟ ದೊಡನೆ ಬಂದೆ
Team Udayavani, Nov 6, 2017, 6:55 PM IST
ಆಸೆಯೇ ಮೋಸಕ್ಕೆ ಕಾರಣ ಅಂತ ಗೊತ್ತಾಗಿದ್ದು ಆ ಕಾರು ನೋಡಿದ ಮೇಲೆ. ಬರೀ ನೋಡಿದ್ದಷ್ಟೇ ಅಲ್ಲ, ಅದಕ್ಕೆ ಲೈನ್ ಹೊಡೆಯೋಕೆ ಶುರು ಮಾಡಿದೆ ನೋಡಿ ಆಗ. ಮಾರುತಿ 800 ಕಾರು ಎಲ್ಲಿ ಸಿಕ್ಕರೂ ಹುಡ್ಗಿ ಸಿಕ್ಕಂತೆ ಆಗೋದು. ಅದೇನೋ ಹುಚ್ಚು. ಆ ಕಾರು ಕೊಳ್ಳಬೇಕು. ಅದನ್ನು ಡ್ರೈವ್ ಮಾಡಬೇಕು ಅಂತ. ಈ ಹುಚ್ಚನ್ನ ಹತ್ತಿಸಿದ್ದು ಗೆಳೆಯ. ಆತನ ಹತ್ತಿರವೂ ಕಾರಿತ್ತು. ಆಸೆಯ ಮದ ಏರಲು ಕಾರಣವೂ ಇತ್ತು. ಮಾರುತಿಯನ್ನು ಯಾವ ಗಲ್ಲಿಗಾದರೂ ತೆಗೆದುಕೊಂಡು ಹೋಗಬಹುದು, ಸಣ್ಣ ಜಾಗವಿದ್ದರೂ ನುಗ್ಗಿಸಿ ಪಾರ್ಕ್ ಮಾಡಬಹುದು…ಹೀಗೆ ಇಷ್ಟ ಪಡಲು ನೂರಾರು
ಕಾರಣಗಳು ಇದ್ದವು. ಇಂತಿಪ್ಪ ಪ್ರೀತಿಯ ಕಾರನ್ನು ಕೊಳ್ಳುವ ಅನ್ನೋ ಹೊತ್ತಿಗೆ ಅದು ಬ್ಯಾನ್ ಆಗಿಬಿಡುವುದೇ.
ಆದರೇನು? ಸೆಕೆಂಡ್ ಹ್ಯಾಂಡ್ ಕಾರು ಸಿಗುತ್ತಲ್ಲ ಅನ್ನೋ ವಿಷಯ ನೆಮ್ಮದಿಗೆ ಕಾರಣವಾಯಿತು. ಹೊಸಕೆರೆಹಳ್ಳಿಯಲ್ಲಿ
ಗೆಳೆಯ ಗುಟ್ಟಾಗಿ 800 ಹಿಡಿದಿಟ್ಟಿದ್ದ. ಬಿಳಿ ಮೋಡದಂಥ ಬಣ್ಣ. ಫಳ, ಫಳ ಎನ್ನುವ ಟೈರು, ಮುಂಬದಿಯ ಗ್ಲಾಸ್.
ಆಕರ್ಷಣೆ ಎಂದರೆ ಕುಷನ್ ಸೀಟು. ಕೀ ಕೊಟ್ಟರು. ಚಿಗರೆಯಂತೆ ಮೈಸೂರು ರಸ್ತೆ, ಕೆಂಗೇರಿ ದಾಟಿ ಬರುವ
ಹೊತ್ತಿಗೆ ಮನಸ್ಸಿಗೆ ಇಷ್ಟವಾಗಿಬಿಟ್ಟಿತು. ಕೊಂಡರೆ ಇದನ್ನೇ ಕೊಳ್ಳಬೇಕು ಅನ್ನೋ ಹಂಬಲ ಹೆಚ್ಚಾಯಿತು.
ಮಾಡಿದ್ದೂ ಹಾಗೇ. ನೋಟದಲ್ಲಿ ಒಳ್ಳೇ ಕಾರು. ಓಡಿಸಿದಾಗಲೂ ಅಂತಹುದೇ ಅನುಭವ. ಹೆಚ್ಚಾ ಕಮ್ಮಿ 80ಸಾವಿರಕ್ಕೆ
ಮಾತುಕತೆಯಾಯಿತು. ಕೊನೆಗೆ 75ಸಾವಿರಕ್ಕೆ ಬಂದು ನಿಂತಾಗ ಖುಷಿಯೋ ಖುಷಿ. ಕೈಗೆ ಐದುಸಾವಿರ ಅಡ್ವಾನ್ಸ್ ಕೊಟ್ಟು ಬಂದಿದ್ದೂ ಆಯ್ತು. ಮೂರು ದಿನಕ್ಕೆ ಕಾರನ್ನು ಮನೆ ತುಂಬಿಸಿಕೊಂಡದ್ದಾಯಿತು. ನಿರಾಸೆ ಎದುರಾಗಿದ್ದು ಅಲ್ಲೇ. ಡ್ರೈವಿಂಗ್ ಸೀಟಿನ ಬಾಗಿಲು ತೆಗೆದರೆ ಕರ, ಕರ ಅಂದಿತು. ಏನೋ ಸಣ್ಣ ಸಮಸ್ಯೆ, ಇರಲಿ ಅಂದುಕೊಂಡೆ. ಹಾಗೇ ಆಡಿಯೋ ಸೆಟ್ ನಿಮಗೆ ಅಂತ ಹೇಳಿದ್ದ ಮಾಲೀಕ. ನೋಡಿದರೆ ಹೇಳಿದ ಕಂಪೆನಿಯ ಹೆಸರೇ ಅಲ್ಲಿ ಇರಲಿಲ್ಲ. ಇರಲಿ
ಮತ್ತೂಂದು ಹಾಕಿಸಿಕೊಳ್ಳೋಣ ಅಂತ ಸಮಾಧಾನ ಮಾಡಿಕೊಂಡೆ.
ಒಂದಷ್ಟು ವಾರಗಳ ಕಾಲ ಮೂಲ ಮಾಲೀಕ ಹೇಳಿದಂತೆ ನಡೆದು ಕೊಳ್ಳಲಿಲ್ಲವೆಂಬ ಬೇಸರದಿಂದಲೂ, ಕೊನೆಗೂ ಕಾರು ಸಿಕ್ತಲ್ಲ ಅನ್ನೋ ಖುಷಿಯಿಂದಲೂ ಕಾರನ್ನು ಓಡಿಸುತ್ತಿರುವಾಗಲೇ ಅದಕ್ಕೆ ಹೃದಯ ಸಮಸ್ಯೆ (ಎಂಜಿನ್) ಇದೆ ಅಂತ ತಿಳಿದದ್ದು. ಗೆಳೆಯ ಮತ್ತು ನಾನು ಕಾರಿನ ರೂಪ ನೋಡಿದೆವೇ ಹೊರತು ಅದರ ಆರೋಗ್ಯದ ಬಗ್ಗೆ ಕೇಳಿರಲಿಲ್ಲ. ನನ್ನ ಲೆಕ್ಕಾಚಾರ ಇದ್ದದ್ದು ಏನೆಂದರೆ ಹೊಸ ಕಾರು ಕೊಂಡರೆ ಎರಡು ಲಕ್ಷ ದಾಟುತ್ತಿತ್ತಲ್ಲ, ಹಳೇ ಕಾರು ಕೇವಲ 75ಸಾವಿರಕ್ಕೆ ಸಿಗುತ್ತಿದೆ ಅನ್ನೋದು. ಹೀಗೆ ಎಲ್ಲವನ್ನು ಸರಿ ಮಾಡಿಸಲು ಗ್ಯಾರೇಜಿಗೆ ಬಿಟ್ಟು ಬಿಲ್ಲು ಕೈಗೆ ಬಂದಾಗ ಹೆಚ್ಚುವರಿ ಒಂದು ಲಕ್ಷ ದಾಟಿಬಿಟ್ಟಿತ್ತು. ಪಿಗ್ಗಿಯ ಬಿಸಿ ಸರಿಯಾಗಿಯೇ ತಟ್ಟಿತ್ತು. ನೀವು ಕಾರು ಕೊಳ್ಳುವಾಗ ಆಸೆ, ನಿರೀಕ್ಷೆ ಕಂಟ್ರೊಲ್ ಮಾಡಿಕೊಂಡು, ಕಾರಿನ ಯೋಗ್ಯತೆಯನ್ನು ತಿಳಿದುಕೊಳ್ಳಿ.
– ಕೇಶವದಾಸ, ಬನಶಂಕರಿ