ಚಾಟ್ ಬಾಟ್ ಎಂಬ ಮಾಯೆ
Team Udayavani, Apr 16, 2018, 5:04 PM IST
ಇಂಟರ್‌ನೆಟ್‌ನ ಬಳಕೆ ಸರ್ವ ವ್ಯಾಪಿಯಾಗಿರುವ ಈ ದಿನಗಳಲ್ಲಿ ಚಾಟ್‌ಬಾಟ್ ಎಂಬ ಹೊಸದೊಂದು ಸೌಲಭ್ಯ ಜಾರಿಗೆ ಬಂದಿದೆ. ಪ್ರವಾಸ ಹೋಗಲು, ಯಾವ ಹೋಟೆಲ್ ಚೆನ್ನಾಗಿದೆ ಎಂದು ತಿಳಿಯಲು, ರೂಂ, ಟಿಕೆಟ್ ಬುಕ್ ಮಾಡಲು, ವಿಮಾ ಖಾತೆ ತೆರೆಯಲು, ಸಾಲ ಪಡೆಯಲು ಇರುವ ಕಂಡೀಷನ್ಸ್ ತಿಳಿಯಲು ಈಗ ಗೂಗಲ್‌ನಲ್ಲಿ ಹುಡುಕಿ ಪರದಾಡುವ ಅಗತ್ಯವಿಲ್ಲ. ವೆಬ್‌ಸೈಟ್‌ನ ಒಂದು ಮೂಲೆಯಲ್ಲಿ ಕಾಣಿಸಿಕೊಳ್ಳುವ ಚಾಟ್ ಬಾಟ್‌ಗೆ ಪ್ರಶ್ನೆ ಕಳುಹಿಸಿದರೆ ಸಾಕು; ಕೆಲವೇ ಸೆಕೆಂಡುಗಳಲ್ಲಿ ಅದು ವಿವರವಾದ ಉತ್ತರಗಳನ್ನು ನೀಡುತ್ತದೆ. ಹೀಗೆ ಇದೀಗ ಇಂಟರ್‌ನೆಟ್ ಕ್ಷೇತ್ರವನ್ನು ಆವರಿಸಿಕೊಂಡಿರುವ ಚಾಟ್‌ಬಾಟ್ ಇದೀಗ ಇಂಟರ್‌ನೆಟ್ ಕ್ಷೇತ್ರವನ್ನು ಆವರಿಸಿಕೊಂಡಿರುವ ಹೊಸ ಆಕರ್ಷಣೆ. ಆ ಕುರಿತು ಇಲ್ಲಿ ವಿವರಣೆ ಇದೆ…
ನಾವು ಬಳಸುತ್ತಿರುವ ಯಾವುದಾದರೂ ವಸ್ತು ಕಿರಿಕಿರಿ ಮಾಡಿದರೆ, ಅದನ್ನು ತೆಗೆದುಕೊಂಡು ಹೋಗಿ ಕಂಪನಿಯ ಕಸ್ಟಮರ್ ಕೇರ್ ಸಿಬ್ಬಂದಿ ಕೈಗೆ ಕೊಟ್ಟು, ನಮ್ಮ ಸಮಸ್ಯೆಯನ್ನು ಅರ್ಧಗಂಟೆಯವರೆಗೆ ಸವಿಸ್ತಾರವಾಗಿ ಹೇಳಿದರೆ ಮಾತ್ರವೇ ನಮಗೆ ಸಮಾಧಾನ! ನಮ್ಮ ಸಮಸ್ಯೆಯನ್ನು ಕಸ್ಟಮರ್ ಕೇರ್ ಸಿಬ್ಬಂದಿ ಸಮಾಧಾನದಿಂದ ಕೇಳಿಸಿಕೊಂಡರೆ ಸಾಕು; ಅರ್ಧ ಸಮಸ್ಯೆ ಪರಿಹಾರವಾದ ಹಾಗಿರುತ್ತದೆ. ಒಂದು ವೇಳೆ ಆ ಸಿಬ್ಬಂದಿ, ಮುಖ ಗಂಟು ಹಾಕಿಕೊಂಡು ಕುಳಿತು, ನಮ್ಮ ಸಮಸ್ಯೆಯನ್ನು ಕಾಟಾಚಾರಕ್ಕೆ ಕೇಳಿಸಿಕೊಂಡರೆ ಆ ಕ್ಷಣದಿಂದಲೇ ಟೆನ್ಷನ್ ಶುರುವಾಗುತ್ತದೆ.
ಇದೇ ಸನ್ನಿವೇಶವನ್ನು ನಾವು ಕಸ್ಟಮರ್ ಕೇರ್ ಸಿಬ್ಬಂದಿಯ ದೃಷ್ಟಿಕೋನದಿಂದ ನೋಡಿದರೆ… ಆತ ದಿನವೂ ಇದೇ ರೀತಿಯ ಸಮಸ್ಯೆಯನ್ನು ಹಲವರಿಂದ ಕೇಳಿಸಿಕೊಳ್ಳುತ್ತಾನೆ. ಅವೇ ಪ್ರಶ್ನೆಗಳು ಅದೇ ಅದೇ ಉತ್ತರಗಳು, ಹಾವಭಾವಗಳನ್ನು ಪುನರಾವರ್ತಿಸುತ್ತಲೇ ಇರುತ್ತಾನೆ. ನಾಲ್ಕು ಜನರಿಗೆ ಉತ್ತರ ಹೇಳುವುದರಲ್ಲಿ ಆ ಕೆಲಸವೇ ಬೋರಾಗಿ ನಿರಾಸಕ್ತಿ ತೋರಲು ಆರಂಭಿಸುತ್ತಾನೆ. ಇದನ್ನು ಗಮನಿಸಿಯೇ ಕಂಪನಿಗಳು, ಇಲ್ಲಿ ಒಂದು ಯಂತ್ರವನ್ನು ಕೂರಿಸಿದರೆ ಹೇಗೆ ಎಂದು ಚಿಂತಿಸಿದವು. ಕಾಲ ಬದಲಾಗಿ ಇಂಟರ್ನೆಟ್‌ನಲ್ಲಿ ಡೇಟಾ ಹೆಚ್ಚಿದಂತೆ ಕಸ್ಟಮರ್ ಕೇರ್‌ಗೆ ಹೋಗಿ ಸಮಸ್ಯೆ ಹೇಳಿಕೊಳ್ಳುವವರ ಸಂಖ್ಯೆ ಕಡಿಮೆಯಾಯಿತು.
ಮೊಬೈಲ್‌ನಲ್ಲೋ, ಕಂಪ್ಯೂಟರಿನಲ್ಲೋ ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುವವರ ಸಂಖ್ಯೆ ಹೆಚ್ಚಾಯಿತು. ಆಗ ಶುರುವಾಗಿದ್ದೇ ಈ ಚಾಟ್ ಬೋಟ್‌ಗಳು. ಇವು ಆರಂಭದಲ್ಲಿ ಗ್ರಾಹಕ ಸೇವಕನಂತೆ ಕೆಲಸ ಮಾಡಿದವು. ಅಂದರೆ, ಯಾವುದೇ ಟ್ರಾವೆಲ್ ವೆಬ್‌ಸೈಟ್ ತೆರೆದರೆ ಒಂದು ಮೂಲೆಯಲ್ಲಿ ಚಾಟ್ ವಿಂಡೋ ತಾತ್ಕಾಲಿಕವಾಗಿ ಓಪನ್ ಆಗುತ್ತದೆ. ಆ ವಿಂಡೋದಲ್ಲಿ ” ಹಾಯ್ ನಾನು ಕ್ಯಾಥರೀನ್, ನಿಮಗೆ ಯಾವ ರೀತಿಯ ಸಹಾಯ ಮಾಡಲಿ?’ ಎಂದು ಕೇಳುತ್ತಿತ್ತು. ಆಗ ಈ ಕಡೆಯ ಗ್ರಾಹಕರು ತಮ್ಮ ಬೇಡಿಕೆಯನ್ನು ಬರೆದರೆ ಅದಕ್ಕೆ ಉತ್ತರ ಸಿಗುತ್ತಿತ್ತು.
ಅದು ಸೀಮಿತ ಪ್ರಶ್ನೆಗಳಿಗೆ ಸೀಮಿತ ಉತ್ತರ ಕೊಡುತ್ತಿತ್ತು. ಇದೀಗ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಭಿವೃದ್ಧಿಗೊಂಡ ನಂತರ ಹಲವು ರೀತಿಯ ಪ್ರಶ್ನೆಗಳಿಗೆ ಚಾಟ್ ಬೋಟ್‌ಗಳು ಉತ್ತರಿಸುತ್ತಿವೆ. ಅಷ್ಟೇ ಅಲ್ಲ, ಸಿಬ್ಬಂದಿಯ ಪ್ರೊಡಕ್ಟಿಟಿ ಲೆಕ್ಕ ಇಡುವುದು, ಇನ್ವಾಯ್ಸ ತಯಾರಿಸುವುದು, ಟಿಕೆಟ್ ಬುಕ್ ಮಾಡುವುದು, ಮುಂತಾದ ಹಲವು ಕೆಲಸಗಳನ್ನು ಇದರ ಮೂಲಕ ಮಾಡಿಸಬಹುದು. ಉದಾಹರಣೆಗೆ, ಫೇಸ್‌ಬುಕ್ ಮೆಸೆಂಜರ್‌ಗೆ ಹೋಗಿ ಮೈಕ್ರೋಸಾಫ್ಟ್ ಅಭಿವೃದ್ಧಿಪಡಿಸಿದ ರೂಹ್ ಎಂಬ ಬೋಟ್ ತೆರೆದರೆ ನೀವು ಕೇಳಿದ ಎಲ್ಲ ಪ್ರಶ್ನೆಗಳಿಗೂ ಅದು ಉತ್ತರಿಸುತ್ತದೆ. ಅಷ್ಟೇ ಅಲ್ಲ, ಒಬ್ಬ ಸ್ನೇಹಿತನಂತೆ ತಮಾಷೆಯ ಉತ್ತರಗಳನ್ನೂ ನೀಡುತ್ತದೆ.
ಈಗ ಚಾಟ್ ಬೋಟ್ ತಯಾರಿಸುವುದು, ಅವುಗಳ ಸೇವೆಯನ್ನು ಒದಗಿಸುವುದು ಒಂದು ಬೃಹತ್ ಉದ್ಯಮ. ಭಾರತವೂ ಅದರಲ್ಲಿ ಹಿಂದೆ ಬಿದ್ದಿಲ್ಲ. ಹತ್ತಾರು ನೂರಾರು ಕಂಪನಿಗಳು ಈಗ ಚಾಟ್‌ಬೋಟ್‌ಗಳನ್ನು ಪ್ರೋಗ್ರಾಮ್ ಮಾಡುತ್ತಿವೆ. ಅವುಗಳನ್ನು ದೊಡ್ಡ ದೊಡ್ಡ ಕಂಪನಿಗಳ ವಿವಿಧ ಸೇವೆಗಳಿಗೆ ಬಳಸುತ್ತಿವೆ. ಅದರಲ್ಲೂ 2015ರಲ್ಲಿ ಆರಂಭವಾದ ಎಂಗಾಜಿಫೈ ಎಂಬ ಚಾಟ್‌ಬೋಟ್ ಅತ್ಯಂತ ಜನಪ್ರಿಯವಾಗಿದೆ. ಟೆಕ್ಸಾಸ್ ವಿಶ್ವವಿದ್ಯಾಲಯದ ಪದವೀಧರರಾದ ಸಿದ್ದಾರ್ಥ್ ಶೆಖಾವತ್ ಮತ್ತು ಪೂರ್ವ ಸರ್ಸೆ ಎಂಬಿಬ³ರು ಸೇರಿ ರೂಪಿಸಿದ ಎಂಗಾಜಿಫೈ , ಜಗತ್ತಿನಾದ್ಯಂತ ಹೆಸರು ಮಾಡಿದೆ.
ಅಮೆರಿಕದ ಪ್ರಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಾರ್ಥ್, ವರ್ಷಪೂರ್ತಿ ಶ್ರಮವಹಿಸಿ ಕೆಲಸ ಮಾಡಿದರೂ ವರ್ಷಾಂತ್ಯದಲ್ಲಿ ಪರ್ಫಾರ್ಮೆನ್ಸ್ ಸರಿ ಇಲ್ಲ ಎಂಬ ಕಾರಣ ನೀಡಿ ಅವರಿಗೆ ನೋಟಿಸ್ ಕೊಡಲಾಗಿತ್ತು. ಅದನ್ನು ಪ್ರತಿಭಟಿಸಿ, ಅವರು ಕಂಪನಿ ತೊರೆದಿದ್ದರು. ಆಗಲೇ ಅವರಿಗೆ ಕಂಪನಿಗಳಲ್ಲಿ ನೌಕರರ ಪರ್ಫಾರ್ಮೆನ್ಸ್ ರಿವ್ಯೂ ವಿಧಾನ ಸಮರ್ಪಕವಾಗಿಲ್ಲ ಎಂಬ ಅಸಮಧಾನವಿತ್ತು. ಇದೇ ಗುಂಗಲ್ಲಿ ಕಂಪನಿಯಿಂದ ಹೊರಬಂದ ಅವರು, ಎಂಗಾಜಿಫೈ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಇದು ಕಂಪನಿಗಳಲ್ಲಿ ಉದ್ಯೋಗಿಗಳ ಪರ್ಫಾರ್ಮೆನ್ಸ್ ಮರುಪರಿಶೀಲನೆ ಮಾಡುವ ಸೌಲಭ್ಯ ಒದಗಿಸುತ್ತಿತ್ತು.
ಆದರೆ ಉದ್ಯೋಗಿಗಳು ಎಂಗಾಜಿಫೈಅನ್ನು ಡೌನ್‌ಲೋಡ್ ಮಾಡಿಕೊಂಡು, ನೆನಪಿಟ್ಟುಕೊಂಡು ಬಳಸುವಂತೆ ಪ್ರೇರೇಪಿಸುವುದೇ ದೊಡ್ಡ ತಲೆನೋವಾಗಿತ್ತು. ಆಗ ನೆರವಿಗೆ ಬಂದಿದ್ದೇ ಈ ಚಾಟ್ ಬೋಟ್ ಕಲ್ಪನೆ. ಇದನ್ನು ತನ್ನ ಅಪ್ಲಿಕೇಶನ್‌ನಲ್ಲಿ ಅಭಿವೃದ್ಧಿಪಡಿಸುತ್ತಾ ಹೋದ ಸಿದ್ದಾರ್ಥ್, ಇಂದು ಭಾರತದ ಚಾಟ್‌ಬೋಟ್ ಪ್ಲಾಟ್‌ಫಾರಂನಲ್ಲಿ ದೈತ್ಯನಾಗಿ ಬೆಳೆದುನಿಂತಿದ್ದಾರೆ. ಈಗ ಹತ್ತಕ್ಕೂ ಹೆಚ್ಚು ಕಂಪನಿಗಳು ಇವರ ಸೇವೆಯನ್ನು ಬಳಸಿಕೊಳ್ಳುತ್ತಿವೆ. ಚಾಟ್‌ಬೋಟ್‌ಗಳು ಹೆಚ್ಚಾಗಿ ಬಳಕೆಯಲ್ಲಿರುವುದು ಬ್ಯಾಂಕಿಂಗ್ ಕ್ಷೇತ್ರದಲ್ಲಿ.
ಗ್ರಾಹಕರು ಬ್ಯಾಂಕ್‌ಗೆ ಅಲೆದಾಡುವುದನ್ನು ತಪ್ಪಿಸಲು ಈ ಚಾಟ್‌ಬೋಟ್‌ಗಳು ಸಹಾಯ ಮಾಡುತ್ತವೆ. ಯಾವುದೇ ಸಹಾಯಕ್ಕೆ ಬೇಕೆಂದಾಗ, ಸಂಶಯ ನಿವಾರಣ ಆಗಬೇಕು ಅನ್ನಿಸಿದಾಗ ಈ ಚಾಟ್ ಬೋಟ್‌ಗಳು ನೆರವು ನೀಡುತ್ತವೆ. ಎಚ್‌ಡಿಎಫ್ಸಿ ಬ್ಯಾಂಕ್‌ನ ಬ್ಯಾಂಕ್ ಆನ್ ಚಾಟ್ ಎಂಬ ಅಪ್ಲಿಕೇಶನ್ ಅತ್ಯಂತ ಜನಪ್ರಿಯವಾಗಿದೆ. ಇದರ ಜತೆಗೆ ಟ್ರಾವೆಲ್ ಕಂಪನಿಗಳಾದ ಇಕ್ಸಿಗೋ ಮತ್ತು ಯಾತ್ರಾ ಕೂಡ ತಮ್ಮದೇ ಚಾಟ್ ಬೋಟ್ ಹೊಂದಿವೆ. ಪ್ರವಾಸ ಹೋಗಲು ಬಯಸುವವರಿಗೆ ಇವು ಬೇಕಾದ ಎಲ್ಲ ನೆರವನ್ನೂ ನೀಡುತ್ತವೆ. ಕುಡಿಯುವ ನೀರು ಶುದ್ಧೀಕರಣ ಉತ್ಪನ್ನ ಸಂಸ್ಥೆ ಲಿವ್ ಪ್ಯೂರ್ ಹಾಗೂ ವಿಮಾ ಕಂಪನಿಯಾದ ಅಪೊಲೋ ಮ್ಯೂನಿಚ್ ಕೂಡ ಚಾಟ್‌ಬೋಟ್ ಸೌಲಭ್ಯವನ್ನು ಹೊಂದಿವೆ.
ಏನು ಮಾಡುತ್ತವೆ ಚಾಟ್ ಬೋಟ್‌ಗಳು?: ಇವು ಆಪ್ತ ಸಹಾಯಕಿಯಿದ್ದಂತೆ. ನೀವು ಕೇಳುವ ಪ್ರಶ್ನೆಯನ್ನು ಅರ್ಥ ಮಾಡಿಕೊಂಡು ಅವುಗಳಿಗೆ ಪ್ರತಿಕ್ರಿಯಿಸುತ್ತವೆ. ಒಂದು ವೇಳೆ ನೀವು ಎಚ್‌ಡಿಎಫ್ಸಿ ಬ್ಯಾಂಕ್‌ನ ಚಾಟ್‌ಬೋಟ್ ಬಳಸುತ್ತಿದ್ದೀರಿ ಎಂದುಕೊಳ್ಳಿ. ನಿಮ್ಮ ಮನೆಯ ವಿದ್ಯುತ್ ಬಿಲ್‌ಗಳು, ಮೊಬೈಲ್ ರಿಚಾರ್ಜ್‌ಗಳನ್ನು ಇದರಲ್ಲಿ ಮಾಡಬಹುದು. ನೀವು ರಿಚಾರ್ಜ್ ಮಾಡಬೇಕಿರುವ ಮೊತ್ತವನ್ನು ನಮೂದಿಸಿದರೆ ಸಾಕು. ಈ ಚಾಟ್‌ಬೋಟ್ ನಿಮ್ಮ ಮೊಬೈಲ್ ಸಂಖ್ಯೆಗೆ ರಿಚಾರ್ಜ್ ಮಾಡುತ್ತದೆ.
ಅಂದಹಾಗೆ ಈ ಚಾಟ್‌ಬೋಟ್ ಸಿದ್ಧಪಡಿಸಿದ್ದು ಬೆಂಗಳೂರಿನ ಟೆಕ್‌ಬಿನ್ಸ್ ಸೊಲ್ಯುಶನ್ಸ್ ಎಂಬ ಸಂಸ್ಥೆ. ಸಚಿನ್ ಜೈಸ್ವಾಲ್, ಕೇಶವ್ ಪ್ರವಾಸಿ, ನಿತಿನ್ ಬಾಬೆಲ್ ಹಾಗೂ ಶಿಶಿರ್ ಮೋದಿ ಎಂಬ ಗೆಳೆಯರು ಈ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಈ ಕಂಪನಿಯಲ್ಲಿ ರತನ್ ಟಾಟಾ ಕೂಡ ಹೂಡಿಕೆ ಮಾಡಿದ್ದಾರೆ. ಹಾಗೆಯೇ, ಟ್ರಾವೆಲ್ ಕಂಪೆನಿಯ ಚಾಟ್‌ಬೋಟ್‌ನಲ್ಲಿ ನೀವು ನಿಮಗೆ ಬೇಕಾದ ಊರಿನ ಹೋಟೆಲ್‌ಗಳು, ಸ್ಥಳಗಳ ಮಾತಿಯನ್ನು ಪಡೆಯಬಹುದು.
ಇವೆಲ್ಲವನ್ನೂ ಒಂದು ಪ್ರಶ್ನೆ ಕೇಳಿದರೆ ಚಾಟ್ ಬೋಟ್‌ಗಳು ಸುಲಭವಾಗಿ ಒದಗಿಸುತ್ತವೆ. ಮೊನ್ನೆ ಮೊನ್ನೆಯವರೆಗೂ ಉತ್ತಮ ಪ್ರವಾಸಿ ಸ್ಥಳ, ಅಲ್ಲಿರುವ ಒಳ್ಳೆಯ ಹೋಟೆಲ್, ಬಸ್ ನಿಲ್ದಾಣದಿಂದ ಇರುವ ದೂರ… ಇತ್ಯಾದಿ ಮಾಹಿತಿ ತಿಳಿಯಲು ಗೂಗಲ್‌ನಲ್ಲಿ ಹುಡುಕಿ ಓದಿಕೊಳ್ಳಬೇಕಾಗಿತ್ತು. ಈ ಆ ಸಮಸ್ಯೆಯಿಲ್ಲ. ಟ್ರಾವಲ್ ಕಂಪನಿಯ ಚಾಟ್‌ಬೋಟ್‌ಗೆ ಹೋಗಿ ಪ್ರಶ್ನೆಯನ್ನು ಟೈಪ್ ಮಾಡಿದರೆ ಮುಗಿಯಿತು.
ಒಂದರ ಹಿಂದೊಂದು ಉತ್ತರಗಳು ತೆರೆದುಕೊಳ್ಳುತ್ತವೆ. ಇನ್ನು ಹ್ಯಾಪ್ಟಿಕ್ ಪರ್ಸನಲ್ ಅಸಿಸ್ಟಂಟ್ ಚಾಟ್ ಬೋಟ್ ವಿವಿಧ ರೀತಿಯ ಸೇವೆ ಒದಗಿಸುತ್ತವೆ. ಮುಂಬೈ ಹಾಗೂ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಈ ಸಂಸ್ಥೆ, ಯಾವ ಮೊಬೈಲ್ ಪ್ಲಾನ್ ಚೆನ್ನಾಗಿದೆ, ಹೋಟೆಲ್ ಬುಕಿಂಗ್ ಮಾಡುವುದು, ಕಾರಿನ ಬೆಲೆ ಚೆಕ್ ಮಾಡುವುದು ಸೇರಿದಂತೆ ಧ ಸೇವೆಯನ್ನು ಒದಗಿಸುತ್ತದೆ. ಕಾನೂನು ಸಮಸ್ಯೆಯನ್ನು ಪರಿಹರಿಸುವುದಕ್ಕೆ ಚೆನ್ನೈ ಮೂಲದ ಸಂಸ್ಥೆ ಹಿಲಾ ಬೋಟ್, ಸ್ಥಳೀಯ ಅಂಗಡಿಕಾರರ ವಿವರಗಳು ಬೇಕಾದರೆ ಹ್ಯಾಚೆರಿ ಸಾಫ್ಟ್ವೇರ್ ರೂಪಿಸಿದ ಲುಕ್‌ಅಪ್ ಅನ್ನು ಕೇಳಬಹುದು.
ಬೇಕಾದ ಅಳತೆಯ ಉಡುಪು ಹುಡುಕಬೇಕಾದರೆ ಮೈಂಡ್ ಚಾಟ್ ಬೋಟ್ ಇದೆ. ಈ ಬೋಟ್‌ಗೆ ನೀವು ಹೇಳಿದರೆ ಸಾಕು. 24 ಗಂಟೆಯೊಳಗೆ ನಿಮ್ಮ ಮನೆಗೆ ಉಡುಪು ತಂದು ಕೊಡುತ್ತದೆ. ಇದು ಪಕ್ಕಾ ಇ-ಕಾಮರ್ಸ್ ವೆಬ್‌ಸೈಟ್ ರೀತಿ ಕೆಲಸ ಮಾಡುತ್ತದೆ. ಇಲ್ಲಿರುವುದು ಕೆಲವು ಉದಾಹರಣೆಗಳಷ್ಟೇ. ಈ ರೀತಿಯ ಸಾವಿರಾರು ಚಾಟ್‌ಬೋಟ್‌ಗಳು ಸಿಗುತ್ತವೆ. ಇವು ಒಂದೊಂದು ರೀತಿಯ ಸೇವೆಯನ್ನು ಒದಗಿಸುತ್ತವೆ.
ಎಲ್ಲಿ ಸಿಗುತ್ತೆ ಚಾಟ್ ಬೋಟ್?: ಮಾತನಾಡುವ ಯಂತ್ರಮಾನವನ ಬಗ್ಗೆ ಇಷ್ಟೆಲ್ಲ ಮಾತನಾಡಿದ್ದೇವಾದರೂ, ಇವೆಲ್ಲ ಎಲ್ಲಿ ಸಿಗುತ್ತವೆ? ಇವುಗಳನ್ನು ಹುಡುಕಿಕೊಂಡು ಹೋಗುವುದೆಲ್ಲಿಗೆ ಎಂಬ ಪ್ರಶ್ನೆ ಬರದೇ ಇರದು. ಬಹುತೇಕ ಚಾಟ್ ಬೋಟ್‌ಗಳು ಈಗ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಸಿಗುತ್ತವೆ. ಫೇಸ್‌ಬುಕ್ ಬಳಕೆದಾರರು ಸ್ನೇಹಿತರೊಂದಿಗೆ ಮಾತನಾಡುವುದು ಕಡಿಮೆಯಾಗುತ್ತಿದ್ದಂತೆ, ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಚಾಟ್‌ಬೋಟ್‌ಗಳು ಮಾತನಾಡಲು ಆರಂಭಿಸಿವೆ.
ಬ್ಯಾಂಕಿಂಗ್, ಟ್ರಾವೆಲ್ ಸೇರಿದಂತೆ ಬಹುತೇಕ ಬೋಟ್‌ಗಳು ಮೆಸೆಂಜರ್‌ನಲ್ಲಿ ಸಿಗುತ್ತವೆ. ಈ ಹಿಂದೆ ಸ್ಕೈಪ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದವಾದರೂ, ಅವೆಲ್ಲವೂ ಈಗ ತಮ್ಮ ಮನೆ ಬದಲಿಸಿವೆ. ಅದಕ್ಕೂ ಮೊದಲು ಚಾಟ್ ಬೋಟ್‌ಗಳ ಉದ್ಭವವಾಗಿದ್ದು, ವೆಬ್‌ಸೈಟ್‌ಗಳಲ್ಲಿ. ವೆಬ್‌ಸೈಟ್‌ಗಳಲ್ಲಿ ತುರ್ತು ಪ್ರತಿಕ್ರಿಯೆಗಾಗಿ ಚಾಟ್ ವಿಂಡೋಗಳನ್ನು ತಯಾರಿಸಲಾಗಿತ್ತು. ಇವು ಒಂದಷ್ಟು ನಿಗದಿತ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದವು. ಹೆಚ್ಚಿನ ವಿವರ ಬೇಕೆಂದಾದರೆ ಕಸ್ಟಮರ್ ಕೇರ್ ಎಕ್ಸೆಕ್ಯೂಟಿವ್‌ಗೆ ಕರೆ ಮಾಡುವಂತೆ ನಂಬರ್ ನಮೂದಿಸಬಹುದಿತ್ತು.
ಆದಾಯ ಹೇಗೆ?: ಚಾಟ್‌ಬೋಟ್‌ಗಳು ನೇರವಾಗಿ ಗ್ರಾಹಕರಿಂದ ಆದಾಯ ತಂದುಕೊಡಲು ಸದ್ಯಕ್ಕಂತೂ ಆರಂಭಿಸಿಲ್ಲ. ಆದರೆ ಇವು ಗ್ರಾಹಕ ಸೇವೆಗೆ ಕಂಪನಿಗಳು ಮಾಡುವ ವೆಚ್ಚವನ್ನು ಕಡಿಮೆ ಮಾಡುತ್ತವೆ. ಸದ್ಯದ ಮಟ್ಟಿಗೆ ಹೆಚ್ಚು ಜನರು ಚಾಟ್ ಬೋಟ್ ಬಳಸುತ್ತಿದ್ದಾರೆ. ಎಂಬುದೇ ಅವುಗಳ ಯಶಸ್ಸಿನ ಸಂಕೇತ. ದೇಶದ ಚಾಟ್‌ಬೋಟ್‌ಗಳ ಪೈಕಿ ಎಂಗಾಜಿಫೈ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ್ದರೆ, ಮೈಕ್ರೋಸಾಫ್ಟ್ ನಿರ್ಮಿಸಿರುವ ರೂಹ್ ಎಂಬ ಚಾಟ್ ಬೋಟ್ ಅತ್ಯಂತ ದಕ್ಷವಾಗಿದೆ. ಅಷ್ಟೇ ಅಲ್ಲ, ವ್ಯಾಪಕವಾಗಿ ಬಳಕೆಯಲ್ಲೂ ಇದೆ. ಹೀಗಾಗಿ ಇವು ಕಂಪನಿಯ ಆದಾಯಕ್ಕೆ, ಗ್ರಾಹಕರನ್ನು ಸೆಳೆಯುವುದಕ್ಕೆ ಮತ್ತು ಸೇವೆ ನೀಡುವುದಕ್ಕೆ ಪರ್ಯಾಯವಾಗಿವೆಯೇ ಹೊರತು, ಇವುಗಳಿಂದಲೇ ಆದಾಯ ತರಲಾಗದು.
* ಕೃಷ್ಣ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೈಲಹೊಂಗಲ: ಜ್ಞಾನೇಶ್ವರ ಮುನಿ ಮಹಾರಾಜರು ಸಮಾಧಿ ಮರಣ
Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ
Online Discussion: ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ, ಮಧು ಬಂಗಾರಪ್ಪ ಗರಂ
Prabhutva Movie: ಮತದಾನದ ಮಹತ್ವ ತಿಳಿಸುವ ಪ್ರಭುತ್ವ…
Sandalwood: ಕನ್ನಡ ಚಿತ್ರರಂಗಕ್ಕಾಗಿ ಮಿಥ್ ಎಫ್ಎಕ್ಸ್ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.