ಅದೃಶ್ಯರ ಅದೃಷ್ಟ ಚೀನಿಕಾಯಿ
Team Udayavani, Apr 23, 2018, 11:52 AM IST
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿ ಚೀನಿಕಾಯಿ ಬೆಳೆಯುವವರು ಕಾಣಸಿಗುವುದು ಅಪರೂಪ. ಇಲ್ಲಿನ ಮರಿಗೇರೆಯ ಅದೃಶ್ಯ ಶಂಕರಪ್ಪ ಮುಶಣ್ಣನವರ್ ಇಪ್ಪತ್ತು ಗುಂಟೆಯಲ್ಲಿ ಪ್ರಾಯೋಗಿಕವಾಗಿ ಚೀನಿಕಾಯಿ ಬೆಳೆದು ಗೆದ್ದಿದ್ದಾರೆ.
ಅಂಗಡಿಯೊಂದರಿಂದ ಬೀಜ ತಂದು ಅಕ್ಟೋಬರ್‌ನಲ್ಲಿ ತನ್ನ ಖಾಲಿ ಬಿಟ್ಟಿದ್ದ ಹೊಲದಲ್ಲಿ ಬಿತ್ತಿದ್ದಾರೆ. ಎರಡು ದಿನಕ್ಕೊಂದು ಬಾರಿಯಂತೆ ನೀರು ಹಾಯಿಸಿದ್ದಾರೆ. ಒಂದು ವಾರವಾಗುವಷ್ಟರಲ್ಲಿ ಬೀಜ ಮೊಳಕೆ ಬಂದಿವೆ. ಅದೇ ವೇಳೆಗೆ ಸ್ವಲ್ಪ ಕೊಟ್ಟಿಗೆ ಗೊಬ್ಬರವನ್ನು ಬುಡಗಳಿಗೆ ಹಾಕಿದ್ದಾರೆ. ಎರಡನೆ ತಿಂಗಳಿಗೆ ಹೂ ಬಿಟ್ಟು ಫಸಲು ಬಂದಿದೆ.
ಬಳ್ಳಿ ಪೂರ್ತಿ ಸುಮಾರು ಹತ್ತರಿಂದ ಹದಿನೈದು ಕೆ.ಜಿ.ಯಷ್ಟು ತೂಗಬಲ್ಲ ಚೀನಿಕಾಯಿಗಳು ಬಂದಿವೆ. ಒಂದೆರಡು ಬಾರಿ ಕೊಟ್ಟಿಗೆ ಗೊಬ್ಬರ, ವಾರಕ್ಕೊಮ್ಮೆ ನೀರು ಹಾಯಿಸುವುದನ್ನು ಬಿಟ್ಟರೆ ಬೇರೇನು ಕೆಲಸವನ್ನೂ ಇವರು ಮಾಡಿಲ್ಲ. ಇವರ ನಿರೀಕ್ಷೆಗೂ ಮೀರಿ ಇಳುವರಿ ಕೈಸೇರಿದೆ. ಕೆ.ಜಿ.ಗೆ ರೂ. 7ರಂತೆ ಸುಮಾರು ಹದಿನೈದು ಸಾವಿರ ರೂಪಾಯಿ ಕಾಯಿಯನ್ನು ಇವರು ಮಾರಾಟ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಒಂದು ಎಕರೆಯಲ್ಲಿ ಚೀನಿಕಾಯಿ ಬೆಳೆಯುವ ಯೋಚನೆ ಇವರದ್ದು. ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾದ ತರಕಾರಿ ಇದಾಗಿದ್ದು ಸರ್ವಋತುಗಳಲ್ಲೂ ಇದಕ್ಕೆ ಬಹುಬೇಡಿಕೆಯಿದೆ. ಪಲ್ಯ, ಸಾಂಬಾರಿನಲ್ಲಿ ಉಪಯೋಗಿಸುವ ಚೀನಿಕಾಯಿ ಬೆಳೆದು ಅದರಿಂದ ಕೈತುಂಬಾ ಆದಾಯ ಗಳಿಸಬಹುದೆಂಬುವುದನ್ನು ಇವರು ತೋರಿಸಿ ಕೊಟ್ಟಿದ್ದಾರೆ.
ಮೊದಲ ಬೆಳೆಗೆ ಯಾವುದೇ ರೋಗಗಳು ಬಾಧಿಸಿಲ್ಲ. ಗೊಬ್ಬರ ಕೂಡಾ ಇವರ ಬಳಿಯೇ ಇದ್ದುದರಿಂದ ತಗುಲಿದ ಖರ್ಚು ಅತಿ ಕಡಿಮೆ. ಎಲ್ಲವನ್ನೂ ಹೊರಗಿನಿಂದ ಖರೀದಿಸಿ, ಕೂಲಿಯಾಳುಗಳನ್ನಿಟ್ಟು ದುಡಿಸಿದರೆ ಈ ಬೆಳೆಯಿಂದ ಲಾಭ ಸಿಗಲಾರದು ಎಂಬುದು ಅದೃಶ್ಯರವರ ಅನುಭವದ ಮಾತು.
* ಚಂದ್ರಹಾಸ ಚಾರ್ಮಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.