ಕಬ್ಬು ಕೃಷ್ಣನ ಕೊಳಲು
Team Udayavani, Mar 5, 2018, 12:20 PM IST
ನದಿ ಇನ್ನು ಎಷ್ಟು ವರ್ಷ ನಮಗಾಗಿ ಬದುಕಬಹುದು ಎಂಬುದಕ್ಕೆ ಕಣಿವೆಯ ಕೃಷಿ ಹಿನ್ನಲೆಯಲ್ಲಿ ಯೋಚಿಸಬಹುದು. ಅತ್ಯಂತ ಕಡಿಮೆ ಮಳೆಯಲ್ಲಿ ಉತ್ತಮ ಫಸಲು ನೀಡುತ್ತಿದ್ದ ನೆಲೆ ಇಂದು ಪ್ರವಾಹ, ನೀರಾವರಿಯ ಹೊಡೆತಕ್ಕೆ ನಂಜಾಗಿದೆ. ಸವುಳು-ಜವುಳು ಸಮಸ್ಯೆಯಿಂದ ಇಳುವರಿ ಕುಸಿದು ಕಬ್ಬು ಕಹಿಯಾಗಲು ಶುರುವಾಗಿದೆ. ಯೋಜನಾ ತಜ್ಞರು, ನೀರಾವರಿ ಸಲಹಾ ಸಮಿತಿ, ಕೃಷಿ ತಜ್ಞರೆಲ್ಲ ತುಂಬಿದ ನಮ್ಮ ನಾಡಿನಲ್ಲಿ ಹೀಗಾದದ್ದು ಏಕೆ?
ಗುಡ್ಡದ ತಗ್ಗಿನ ನದಿದಂಡೆಯಲ್ಲಿ ಗೋವಿನ ಹಿಂಡು ಮೇಯಿಸುತ್ತ ಕೊಳಲನೂದುವ ಶ್ರೀಕೃಷ್ಣನಿಗೂ, ನದಿ ಸೀಮೆಗೆಲ್ಲ ಸಿಹಿ ಸಿಹಿ ಕಬ್ಬನ್ನು ಕೊಳಲಾಗಿಸಿ ಆರ್ಥಿಕತೆಯ ಹೊಸ ಧ್ವನಿ ಹೊರಡಿಸಿದ ಕೃಷ್ಣಾ ನದಿಗೂ ಯಾವುದೇ ಸಂಬಂಧವಿಲ್ಲ. ಆದರೆ, ನದಿ ನೀರು ಒಂದು ಬೆಳೆಯನ್ನು ವಿಸ್ತರಿಸಿದ ರೀತಿ ನೋಡಲು ಕೃಷ್ಣಾ ನದಿ ಕಾರಣವಾಗಿದೆ. ರಾಜ್ಯದ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಎಲ್ಲೆಂದರಲ್ಲಿ ಕಬ್ಬು, ಕಬ್ಬು ಕಬ್ಬು. ಕಳೆದ ಎರಡು ಮೂರು ದಶಕಗಳ ಬದಲಾವಣೆ ಹೇಗಿದೆಯೆಂದರೆ ತಮ್ಮ ಹೊಲದಲ್ಲಿ ಹಿಂದೆ ಯಾವ ಬೆಳೆಯಿತ್ತೆಂಬ ಅರಿವೇ ಮರೆಯುವಷ್ಟರ ಮಟ್ಟಿಗೆ ಆ ಜಿಲ್ಲೆಗಳಲ್ಲಿ ಕಬ್ಬು ಸರ್ವವ್ಯಾಪಿಯಾಗಿದೆ. ಒಂದಿಡೀ ಪ್ರದೇಶದ ಆಹಾರ ಸಂಸ್ಕೃತಿ, ಜೀವನ ವಿಧಾನವನ್ನೇ ಬೆಳೆ ಬದಲಿಸಿದೆ. ಮಲೆನಾಡಿನಲ್ಲಿ ಭತ್ತ ನಷ್ಟದ ಬೇಸಾಯವೆಂದು ಅಡಿಕೆ ಹಣದ ಬೆಳೆಯಾಗಿ 70ರ ದಶಕದ ನಂತರ ಕಣಿವೆ ಬದಲಿಸಿದಂತೆ ಇಲ್ಲಿ ಬಿಳಿಜೋಳ, ಹತ್ತಿ, ಸೂರ್ಯಕಾಂತಿ, ತೊಗರಿ, ಸಜ್ಜೆ ಬೆಳೆಯುತ್ತಿದ್ದ ನೆಲವೀಗ ಕಬ್ಬಿನ ಬೆಳೆಗೆ ಹಂದಗೊಂಡಿದೆ. ಹಿಂಗಾರು ಮುಂಗಾರಿ ಮಳೆಗೆ ತಕ್ಕಂತೆ ಮೂರು ನಾಲ್ಕು ತಿಂಗಳ ಅಲ್ಪಾವಧಿ ಬೆಳೆ ಕಾಣುತ್ತಿದ್ದ ಪರಿಸರದಲ್ಲಿ ಈಗ ಕಬ್ಬು ಎಲ್ಲರ ಉಸಿರು. ಊರಿನ ಆರ್ಥಿಕ ಜೀವನಾಡಿಯಂತೆ ಕಬ್ಬು ಕಾರ್ಖಾನೆಯತ್ತ ಹೋಗುವ ನೋಟ ನೋಡಬಹುದು.
ಟ್ರಾಕ್ಟರ್ ಕಂಪನಿಯ ವಹಿವಾಟು, ರಾಸಾಯನಿಕ ಗೊಬ್ಬರಗಳ ಮಾರಾಟ, ನೀರಾವರಿ ಸಲಕರಣೆ ಸಂತೆ ಸೇರಿದಂತೆ ಎಲ್ಲೆಡೆಯೂ ಕಬ್ಬಿನ ಮುಖ ಕಾಣಿಸುತ್ತದೆ. ‘ ನೀರು ಸಿಕ್ಕರೆ ಸರಕಾರಕ್ಕೇ ಸಾಲ ನೀಡ್ತೀವಿ ಈ “ಮಾತು ಮೊದಲು ಹೇಳಿದ್ದು ಕೃಷ್ಣಾ ರೈತರು. ಈಗ ‘ಕೈಯ್ನಾಗ ಒಂದ್ ಮೊಬೈಲ್, ಕುಂಡ್ಯಾಗೊಂದು ಬೈಕು ಇಲ್ಲದ ಹುಡುಗ್ರ ತೋರಸ್ರಿà’ ತೇರದಾಳ, ಅಥಣಿ, ಬೀಳಗಿ ಮುಂತಾದ ಹಳ್ಳಿಗಳ ಹಿರಿಯರು ಹೀಗೆಂದು ಸವಾಲು ಹಾಕುತ್ತಾರೆ. ಮಣ್ಣಿನ ಗೋಡೆ, ಹೆಬ್ಬಿದಿರಿನ ಮೇಲೆ ಹಾಳ್‌ಮಣ್ಣಿನ ಮೇಲ್‌ವುುದ್ದೆ, ನಾಡ ಹೆಂಚಿನ ಹಳೆಯ ರೂಪದಿಂದ ರೈತರ ಮನೆಗಳು ಬದಲಾಗಿವೆ. ಮನೆ ಜಗುಲಿಯಲ್ಲಿದ್ದ ಬಸವಣ್ಣನ ಸಾಲು ಕಳೆದು ಹೋಗಿ ಅಲ್ಲಿ ಟ್ರ್ಯಾಕ್ಟರ್‌ಗಳು ನಿಂತಿವೆ. ಬಿಳಿಜೋಳದ ರಾಶಿಗಳಿಂದ ತುಂಬಿರುತ್ತಿದ್ದ ಹಳ್ಳಿಗಳು ಈಗ ಜೋಳ ಖರೀದಿಸಿ ಉಣ್ಣುತ್ತಿವೆ. ಶಿಕ್ಷಣದ ಆಸಕ್ತಿಯೂ ಬದಲಾಗಿ ಖಾಸಗಿ ಶಾಲೆಗಳು ಸಕ್ಕರೆ ಕಾರ್ಖಾನೆಗಳಂತೆ ಮೇಲೆದ್ದಿವೆ. ಹಣದ ಬೆಳೆ ಕೃಷಿಕರಿಗೆ, ಕೂಲಿಗಳಿಗೆಲ್ಲ ಆದಾಯ ತಂದಿದೆ. ಊರಿಗೆ ಬಂದವರು ನೀರಿಗೆ ಬರಬೇಕು ಎಂಬುದು ಹಳೆಯ ಮಾತು, ಇಲ್ಲಿ ಕೃಷಿಗೆ ಬಂದವರೆಲ್ಲ ಸಾರಾಸಗಟಾಗಿ ಕಬ್ಬಿನಲ್ಲಿ ಜಮಾ ಆಗಿದ್ದಾರೆ. ಟ್ರ್ಯಾಕ್ಟರ್, ಕಟಾವು ಯಂತ್ರಗಳು ಬಂದಿದ್ದರಿಂದ ‘ಶಾ(ರಾಜ ಬೆಳೆ) ಕ್ರಾಪ್’ ಎದ್ದಿದೆ.
“ಸಾಹೇಬ್ರ, ನಿಮ್ಮ ಮಲಾ°ಡಾಗ ಕೃಷಿ ಭೂಮಿ ಕಡಿಮೆ. ಹಣ ನೀಡೋ ಬೆಳೆ ಇಲ್ಲವಲ್ಲ. ಬದುಕಿಗೆ ಏನ್ ಮಾಡ್ತಾರೆ ಮಂದಿ? ‘ ಮುಧೋಳದ ಬಸ್ ನಿಲ್ದಾಣದಲ್ಲಿ ಹಿರಿಯ ರೈತರೊಬ್ಬರು ದಶಕದ ಹಿಂದೆ ಪ್ರಶ್ನಿಸಿದ್ದರು. ಮಲೆನಾಡಿನಲ್ಲಿ ಅಡಿಕೆ ಚಿನ್ನದ ಬೆಳೆಯೆಂದು ಭ್ರಮೆಯಲ್ಲಿದ್ದ ಕಾಲದಲ್ಲಿ ಕಬ್ಬಿನ ಖುಷಿ ಕಾಸಿನ ಬೆಳೆಯಾಗಿ ಬಯಲು ಸೀಮೆಯಲ್ಲಿ ಕಾಣಿಸುತ್ತಿತ್ತು.
ಹಿಡ್ಕಲ್ ಅಥವಾ ತೇರದಾಳಕ್ಕೆ ಹೋಗಿ ಒಂದು ಎಕರೆ ಹೊಲದ ಬೆಲೆ ಕೇಳಿದರೆ ಅಚ್ಚರಿಯಾಗುತ್ತದೆ. ಮಲೆನಾಡಿನಲ್ಲಿ ಎರಡು ಎಕರೆ ಅಡಿಕೆ ತೋಟ ಮಾರಿದರೆ ಇಲ್ಲಿ ಒಂದು ಎಕರೆ ಕಬ್ಬಿನ ಹೊಲ ಖರೀದಿಸಬಹುದು. ಫಲವತ್ತಾದ ಭೂಮಿ, ಎಕರೆಗೆ 80-90 ಟನ್ ಕಬ್ಬು ಬೆಳೆಯುತ್ತಾರೆ. ಎಕರೆಗೆ 25-28 ಲಕ್ಷ ರೂಪಾಯಿ ಬೆಲೆಯಿಂದ ಹಳ್ಳಿಯ ಬೇಸಾಯದ ಭೂಮಿಗೆ ಇಷ್ಟೊಂದು ಬೆಲೆ ಬಂದಿದ್ದಕ್ಕೆ ಮುಖ್ಯ ಕಾರಣ, ಕೃಷ್ಣಾ ಬಯಲಿನ ಮಣ್ಣು-ನೀರಿನ ಶಕ್ತಿಯಾಗಿದೆ. ಕಷ್ಟಪಟ್ಟು ದುಡಿಯುವ ರೈತರ ಪರಿಶ್ರಮವನ್ನೂ ಮರೆಯುವಂತಿಲ್ಲ.
ಕೃಷ್ಣಾ ಅಂದರೆ ಕಪ್ಪು ಎನ್ನುತ್ತೇವೆ. ಈಗ “ಕಬ್ಬು’ ಎನ್ನಬೇಕಾಗಿದೆ. ನಮ್ಮ ರಾಜ್ಯದಲ್ಲಿ 45 ಸಕ್ಕರೆ ಕಾರ್ಖಾನೆಗಳಿವೆ. ಮಂಡ್ಯ, ಮೈಸೂರು, ಹಾಸನ, ಶಿವಮೊಗ್ಗ, ಬೆಳಗಾವಿ, ಬಾಗಲಕೋಟೆ, ಕಲಬುರಗಿ, ವಿಜಯಪುರ, ಬೀದರ್, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಬ್ಬಿನ ಬೆಳೆ ಇದೆ. ವಿಶೇಷವೆಂದರೆ, ಸುಮಾರು 28 ಸಕ್ಕರೆ ಕಾರ್ಖಾನೆಗಳು ಕೃಷ್ಣಾ ಕಣಿವೆಯ ಬೆಳಗಾವಿ, ಬಾಗಲಕೋಟೆಗಳಲ್ಲಿವೆ. ಪ್ರತಿ ಕಾರ್ಖಾನೆಗೆ ದಿನಕ್ಕೆ 500-600 ಟ್ರ್ಯಾಕ್ಟರ್‌ಗಳಷ್ಟು ಕಬ್ಬು ಬೇಕು. ಒಂದು ಟ್ರ್ಯಾಕ್ಟರ್ ಲೋಡ್ ಕಬ್ಬು ಕಡಿಯಲು ಸುಮಾರು 8 ಜನ ಕಾರ್ಮಿಕರು ದುಡಿಯುತ್ತಾರೆ. ಅಂದರೆ ಒಂದು ಕಾರ್ಖಾನೆ ಅವಲಂಬಿಸಿ ಏಳೆಂಟು ಸಾವಿರ ಕಾರ್ಮಿಕರು ಬದುಕುತ್ತಾರೆ. 150-180 ದಿನಗಳ ಕಾಲ ಕಾರ್ಖಾನೆಗಳು ಕಬ್ಬು ಅರೆಯುತ್ತವೆ. ಒಂದು ಕಾರ್ಖಾನೆ ನಡೆಯಲು ಸುತ್ತಲಿನ 35-40 ಸಾವಿರ ಎಕರೆಯಲ್ಲಿ ಕಬ್ಬು ಬೆಳೆಯಬೇಕು. ಕಾವೇರಿ ಕಣಿವೆಯ ಮಂಡ್ಯ, ಮೈಸೂರು ಪ್ರದೇಶಗಳಲ್ಲಿ ರಾಜ್ಯದಲ್ಲಿ ಅತಿಹೆಚ್ಚು ಕಬ್ಬು ಬೆಳೆಯಲಾಗುತ್ತಿತ್ತು. ಕೆಆರ್‌ಎಸ್ ಅಣೆಕಟ್ಟೆಯಿಂದ ಇಂದು ಸಾಧ್ಯವಾಯಿತು. ಯಾವ ಬೃಹತ್ ನೀರಾವರಿ ಯೋಜನೆಯೂ ಇಲ್ಲದ ಮಾಂಜಾÅ ನದಿ ಕಣಿವೆಯ ಬೀದರ್‌ನಲ್ಲಿ ತೆರೆದ ಬಾವಿಯ ನೀರು ಬಳಸಿ ಕಬ್ಬು ಬೆಳೆಯಲಾಗುತ್ತಿತ್ತು.
ಬೆಳಗಾವಿಯಲ್ಲಿ ಸುಮಾರು 40 ವರ್ಷಗಳ ಹಿಂದೆ ಹೂಗಾರ್ ಶುಗರ್, ಗೋಧಾವರಿ ಶುಗರ್ ಆರಂಭದಿಂದ ರೈತರ ಕಬ್ಬಿನ ಕನಸು ಶುರುವಾಯಿತು. ಆಲಮಟ್ಟಿ, ಹಿಡ್ಕಲ್ ಅಣೆಕಟ್ಟೆಯ ಅನುಕೂಲತೆಯಿಂದ ಅಲ್ಲೆಲ್ಲಾ ನೀರಾವರಿ ಯೋಜನೆಗಳ ವಿಸ್ತರಣೆಯಾಗಿ ಕಬ್ಬಿನ ಸಾಮ್ರಾಜ್ಯ ಬೆಳೆದಿದೆ. ಜಮಖಂಡಿಯ ಚಿಕ್ಕಪಡಸಲಗಿ ಬ್ಯಾರೇಜ್ ನಿರ್ಮಾಣದ ಆರಂಭದಲ್ಲಿ ನಡೆದ ಒಂದು ಘಟನೆ ಹೇಳಬೇಕು. ಅಲ್ಲಿನ ಭೂಮಿಗೆ ನೀರಾವರಿ ಅನುಕೂಲತೆ ದೊರಕಿದ ಬಳಿಕ ರೈತರು ಕಬ್ಬು ಬೆಳೆಯಲು ಶುರುಮಾಡಿದಾಗ ಇಲ್ಲಿನ ಹಳಂಗಳಿ ಗ್ರಾಮೀಣ ಬ್ಯಾಂಕ್ ಕ್ರಿ.ಶ. 1988-89 ರಲ್ಲಿ ಒಂದು ಗ್ರಾಮದ ರೈತರಿಗೆ ನೀಡಿದ ಸಾಲ 9 ಕೋಟಿ ರೂಪಾಯಿಗಳು! ಹೊಲಕ್ಕೆ ನೀರು ಹರಿದರೆ ಆರ್ಥಿಕ ಬದಲಾವಣೆ ಹೇಗೆ ಸಾಧ್ಯವೆಂದು ಇದರಿಂದ ಅರಿಯಬಹುದು. ಉತ್ತಮ ಬಿಸಿಲು, ಮಣ್ಣು, ನೀರಿನ ಅನುಕೂಲತೆ, ಕೃಷಿಗೆ ಉಚಿತ ವಿದ್ಯುತ್ ಸೌಲಭ್ಯದಿಂದ ಕೃಷ್ಣಾ ಕಬ್ಬು ರಾಜ್ಯಕ್ಕೇ ಹೆಸರಾಗಿದೆ. ಕಬ್ಬಿನ ನಾಟಿ, ನೀರಾವರಿಯಲ್ಲಿ ಇಂದು ಸಾಕಷ್ಟು ತಾಂತ್ರಿಕ ಪ್ರಗತಿಯನ್ನು ಇಲ್ಲಿ ನೋಡಬಹುದು. ಕಬ್ಬಿನ ಸಾಲಿನ ನಡುವೆ 6-8 ಅಡಿ ಅಂತರ ಹೆಚ್ಚಿಸಿ ನಡುವಿನ ಭೂಮಿಯಲ್ಲಿ ತರಕಾರಿ ಬೆಳೆಯುವ ಜಾಣ್ಮೆ ಇದೆ. ಹದಿನೈದು ಹದಿನೆಂಟು ತಿಂಗಳಿಗೆ ದೊರೆಯುವ ಕಬ್ಬಿನ ಆದಾಯದ ಮಧ್ಯೆ ಮೂರು ತಿಂಗಳ ತರಕಾರಿ ಆರ್ಥಿಕ ಹೊಸ ಶಕ್ತಿ ತುಂಬಿದೆ.
ಕೃಷ್ಣಾ ನದಿ ಮೂಲದ ಮಹಾರಾಷ್ಟ್ರ ಕಬ್ಬಿನ ಕೃಷಿಗೆ ಮೊದಲು ಹೆಜ್ಜೆ ಇಟ್ಟಿತು. ಇಲ್ಲಿನ ಸತಾರ, ಸಾಂಗ್ಲಿ, ಕೊಲ್ಹಾಪುರ ಪ್ರದೇಶದಲ್ಲಿ ರಾಜ್ಯದ ಶೇ.30ರಷ್ಟು ಕಬ್ಬಿದೆ. ಕ್ರಿ.ಶ 1964ರಲ್ಲಿ ಕೊಯ್ನಾ ಅಣೆಕಟ್ಟು ನಿರ್ಮಾಣದಿಂದ ಶುರುವಾದ ಕಬ್ಬಿನ ಪ್ರೀತಿ ಫಲವಾಗಿ ಇಂದು ಅಂದಾಜು ನಾಲ್ಕು ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಇಲ್ಲಿ ಬೆಳೆದಿದೆ. ಇದೇ ಕೃಷಿ ವಿಜಾnನ ಕರ್ನಾಟಕಕ್ಕೂ ಹರಿದಿದೆ. ನಮ್ಮ ರಾಜ್ಯದಲ್ಲಿ ಅಂದಾಜು 7 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬಿನ ಬೆಳೆ ಇದೆ. ಇದರಲ್ಲಿ ಸಿಂಹಪಾಲು ಬೆಳಗಾವಿ, ಬಾಗಲಕೋಟೆ, ವಿಜಯಪುರದ ಕೃಷ್ಣಾ ಕಣಿವೆಯಲ್ಲಿದೆ. ಒಂದು ಟನ್ ಕಬ್ಬು ಬೆಳೆಯಲು 200 ಟನ್ ನೀರು ಬೇಕು. ನದಿ, ನಾಲಾ, ಕೊಳವೆ ಬಾವಿಗಳಿಂದ ನೀರಾವರಿ ನಡೆದಿದೆ. 400 ಮಿಲಿ ಮೀಟರ್‌ದಿಂದ 700 ಮಿಲಿ ಮೀಟರ್ ವಾರ್ಷಿಕ ಮಳೆ ಸುರಿಯುವ ಪ್ರದೇಶಗಳಲ್ಲಿಯೂ ಕಬ್ಬು ಹಬ್ಬಿದೆ. ಎರಡು ದಶಕಗಳಿಂದ ನಿರಂತರವಾಗಿ ನೀರಾವರಿ ಕಬ್ಬು ಬೆಳೆಯುತ್ತಿದ್ದ ನೆಲಗಳು ಇಂದು ಸವುಳು-ಜವುಳು ಸಮಸ್ಯೆಯಿಂದ ಬಳಲುತ್ತಿವೆ. ಎಕರೆಗೆ 80-90 ಟನ್ ಕಬ್ಬು ಬೆಳೆಯುತ್ತಿದ್ದ ಅಥಣಿ, ಜಮಖಂಡಿ ಪ್ರದೇಶಗಳ ಭೂಮಿಯಲ್ಲಿ ಈಗ 30 ಟನ್ ದೊರಕುವುದು ಕಷ್ಟವಾಗುತ್ತಿದೆ. ಭೂಮಿಯ ಜವುಗು ನೀರು ಹೊರತೆಗೆಯಲು ಕಾಲುವೆ, ಪೈಪ್ ನಿರ್ಮಿಸುವ ಕೆಲಸಗಳು ನಡೆಯುತ್ತಿವೆ. ಒಂದು ಅಂದಾಜಿನ ಪ್ರಕಾರ 50,000 ಹೆಕ್ಟೇರ್ ಭೂಮಿ ಇಲ್ಲಿ ಸವುಳು ಜವುಳು ಸಮಸ್ಯೆಯಿಂದ ಯಾವ ಬೆಳೆಯನ್ನೂ ಬೆಳೆಯದ ಸ್ಥಿತಿ ತಲುಪಿದೆ.
ಚಿಕ್ಕೋಡಿಯ ಮಾಂಜ್ರಿ ಗ್ರಾಮದ 4700 ಎಕರೆ ಭೂಮಿಯಲ್ಲಿ ಈಗಾಗಲೇ ಒಂದು ಸಾವಿರ ಎಕರೆ ಏನೂ ಬೆಳೆಯದ ಹಂತ ತಲುಪಿದೆ. ಸರಕಾರಿ ವರದಿಯಂತೆ ನೀರಾವರಿ ನೆಲೆಯ ಶೇಕಡಾ 15-20ರಷ್ಟು ಪ್ರದೇಶ ತೀವ್ರ ಸಮಸ್ಯೆಯಿಂದ ಬಳಲುತ್ತಿದೆ. ನೀರಾವರಿ ಯೋಜನೆಗೆ ಹೋರಾಡಿದ ರೈತರು ಈಗ ಸವುಳು-ಜವುಳು ಸಮಸ್ಯೆ ನಿವಾರಣೆಗೆ ಬಸಿಗಾಲುವೆಗೆ ಹೋರಾಡುತ್ತಿದ್ದಾರೆ. ಭೂಮಿಗೆಷ್ಟು ನೀರು ಬೇಕೆಂದು ಅರಿಯದೇ ಪ್ರವಾಹ ನೀರಾವರಿಯ ಪ್ರಹಾರಕ್ಕೆ ನೆಲ ನಂಜಾಗಿದೆ. ಯೋಜನಾ ತಜ್ಞರು, ನೀರಾವರಿ ಸಲಹಾ ಸಮಿತಿ, ಕೃಷಿ ತಜ್ಞರೆಲ್ಲ ತುಂಬಿದ ನಾಡಿನಲ್ಲಿ ಹೀಗಾದದ್ದು ಏಕೆ?
ಮುಂದಿನ ಭಾಗ :– ನೀರಾ’ವರಿ’ – ಹೇಳ್ಳೋರು ಯಾರು? ಕೇಳ್ಳೋರ್ಯಾರು?
– ಶಿವಾನಂದ ಕಳವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.