ಕಾಡೆಂಬ ತಾಯಿಗೆ ಹೃದಯಾಘಾತವಾಗಿದೆ !


Team Udayavani, Oct 16, 2017, 11:03 AM IST

kademaba-kalve.jpg

ಮೃದು ಕಟ್ಟಿಗೆಯ ಮರಗಳು ಮಳೆಕಾಡಿನ ವಿಶೇಷ. ನಿತ್ಯ ಹರಿದ್ವರ್ಣೆಯ  ಈ ನೆಲೆ ನದಿಗಳ ತವರು. ನದಿಮಾತೆ ಹಸಿರೆಲೆಯ ಹೆರಿಗೆ ಮನೆಯಲ್ಲಿ ಜನಿಸಿದವಳು. ಇಂದು ನದಿಗಳ ಜೀವ ಝರಿಗಳ ಮೂಲದಲ್ಲಿ ಬದಲಾವಣೆಯಾಗಿದೆ. ನೀರಿಲ್ಲವೆಂದು, ಇತ್ತ ನಾವು ನದಿ ದಂಡೆಯಲ್ಲಿ ದೊಡ್ಡ ಬೊಬ್ಬೆ ಹೊಡೆಯುತ್ತಿದ್ದೇವೆ. ಆದರೆ ಸ್ವತಃ ನದಿ ಮಾತೆಗೆ ಹೃದಯಾಘಾತವಾಗಿದೆ. ನದಿ ದೇಹ ರಚನೆ ಗೊತ್ತಿಲ್ಲದ  ನಮ್ಮಿಂದ ಶಸ್ತ್ರ ಚಿಕಿತ್ಸೆ ಸಾಧ್ಯವೇ? ಏಲ್ಲಿದ್ದಾರೆ ವನ ವೈದ್ಯರು?

ಒಮ್ಮೆ ದಕ್ಷಿಣ ಕನ್ನಡದ ಕಾಡೊಂದರಲ್ಲಿ ಹಳ್ಳಿಗರೊಬ್ಬರು ಮರ ಕಡಿದರು. ಮರದಿಂದ ರಕ್ತ ಬರುತ್ತಿದೆಯೆಂದು ಪತ್ರಿಕೆಯಲ್ಲಿ ಸುದ್ದಿಯಾಯ್ತು, ಮರದೊಳಗೆ ಮನುಷ್ಯ ಇದ್ದಾನೆಯೇ? ಎಲ್ಲರಿಗೂ ಅಚ್ಚರಿ.  ಕಾಡಿನ ರಾಮಪತ್ರೆ ಮರಕ್ಕೆ ಕಚ್ಚು ಹಾಕಿದರೆ ಗಾಯದ ತೊಗಟೆಯಿಂದ ರಕ್ತದಂತೆ ದ್ರವ ಜಿನುಗುತ್ತದೆ. ಕೆಂಪು ಬಣ್ಣ ಗಮನಿಸಿ ರಕ್ತದ ಸುದ್ದಿ  ಪ್ರಕಟವಾಯ್ತು. ಸುಮಾರು 25 ವರ್ಷಗಳ ಹಿಂದಿನ ಘಟನೆ ಇದು. ನಮ್ಮ ಕಾಡುಗಳಲ್ಲಿ ಜೌಗು ನೆಲೆಗಳಿವೆ. ಅಲ್ಲಿ ಭೂಮಿಯಲ್ಲಿ 150 ಮಿಲಿಯ ವರ್ಷಗಳ ಹಿಂದೆ ಹೂವರಳಿಸಿದ ಸಸ್ಯ ಸಂಕುಲವಾದ ರಾಮಪತ್ರೆ ಮರಗಳಿವೆ. ಇದು ಮರದ ರಕ್ತ ಸುದ್ದಿಯ ಮೂಲವಾಗಿತ್ತು. 

ಜೌಗು ನೆಲದ ಜಡ್ಡಿ ಪ್ರದೇಶದ ಪರಿಸರ ಸೂಕ್ಷ್ಮತೆ ಹೇಗಿದೆಯೆಂದರೆ ನೆಲೆಯನ್ನು  ನಮ್ಮ ಹೃದಯಕ್ಕೆ ಹೋಲಿಸಬಹುದು. ಮಳೆ ನೀರನ್ನು ಹೀರಿಕೊಂಡು ನಿಧಾನಕ್ಕೆ  ವರ್ಷವಿಡೀ ಹರಿಯಲು ಬಿಡುವ ವಿಶಿಷ್ಟ ವ್ಯವಸ್ಥೆ ಇಲ್ಲಿದೆ. ಎಂಥ ಅಬ್ಬರದ ಮಳೆಯಲ್ಲೂ  ಇಲ್ಲಿ  ಪ್ರವಾಹದಂತೆ ನೀರು ಹರಿಯುವುದಿಲ್ಲ, ಮಣ್ಣು ಸವಕಳಿಯಾಗುವುದಿಲ್ಲ.  ಜೌಗುನೆಲೆಯ ಸಸ್ಯ, ಹುಲ್ಲು, ಬೇರುಗಳು ನೀರು ಹಿಡಿದು  ದೇಹಕ್ಕೆ ಅಪದಮನಿ, ಅಭಿದಮನಿಗಳ ಮೂಲಕ ರಕ್ತ ಪೂರೈಸುವಂತೆ ಕಾರ್ಯ ನಿರ್ವಸುತ್ತವೆ.  ಹಡ್ಲು, ಹೂಡ್ಲು, ಜಡ್ಡಿಯೆಂಬ ಈ ಅಮೂಲ್ಯ ಜೌಗು ನೆಲೆಗಳು ನದಿ ತೊರೆಗಳ ಮೂಲ.

ಕೊಡಗಿನ ದೇವರ ಕಾಡು, ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಕಾನು, ಕೇರಳದ ಕಾವು, ಮಹಾರಾಷ್ಟ್ರದ ದೇರಾಯಿಗಳೆಲ್ಲ ನೀರು ನೀಡುವ  ಪವಿತ್ರ ವನಗಳು. ಮರವನ್ನು ವರ ಕೊಡುವ ದೇವರೆಂದು ನಂಬಿದ ಜನಪದರು ನೀರು ನೀಡುವ ನೆಲೆಗಳನ್ನು ದೇವರ ಕಾಡಾಗಿ ನೋಡಿದವರು. ಮರದಲ್ಲಿ ದೇವರನ್ನು ಕಂಡವರು. ಮರ ಕಡಿಯುವುದಕ್ಕೆ ಕೂಲಿ ಸಮಸ್ಯೆ ಪರಿಹಾರಕ್ಕೆ ಕ್ರಿ.ಶ 1913ರಲ್ಲಿ “ಜಂಗಲ್‌ ಮಹಲ್‌’ ಯೋಜನೆ ರೂಪಿಸಿದ ನೆಲೆ ಕರ್ನಾಟಕ. ಅದು ಕೂಲಿಗಾಗಿ ಕಾಡು ಯೋಜನೆ! ಕಾಡಿನ ಮರ ಕಡಿಯಲು ಬರುವವರಿಗೆ ಅರಣ್ಯ ಭೂಮಿ ನೀಡುವ ವಿಶೇಷ ಕಾರ್ಯಕ್ರಮವಿದು.

‘ಕಾನಡಾ ಜಿಲ್ಲೆಯ ಜಂಗಲ್‌ಗ‌ಳಲ್ಲಿ ಜನರು ಬಂದು ವಸತಿ ಮಾಡುವಂತೆ ಪ್ರೇರಣೆ ನೀಡಲಾಗುತ್ತದೆ. ಮುಲ್ಕಿ ಅಧಿಕಾರಿಗಳು ತಮ್ಮ ಖಾತೆಯಲ್ಲಿದ್ದ ಮಹಲುಗಳ ತೆರಿಗೆ ತಗ್ಗಿಸಿ ಸಹಾಯ ಮಾಡುತ್ತಿರುವರು. ಪುಕ್ಕಟೆ ಬೇಸಾಯಕ್ಕೆ ಉತ್ತೇಜನ ನೀಡುತ್ತಿರುವರು. ಬೇಸಾಯಕ್ಕೆ ಬೇಕಾದ ಸಾಮಾನುಗಳನ್ನು ಕೊಡುವುದು, ದನಕರುಗಳಿಗೆ ಪುಕ್ಕಟೆ ಮೇವು, ಒಳ್ಳೆಯ ಮನೆಗಳು, ಸ್ವತಃ ಲಕ್ಷ್ಯ ಪೂರೈಸುವುದನ್ನು ಮಾಡಿದರೆ ನಮ್ಮ ಹೇತುವು ನಿಶ್ಚಿತವಾಗಿ ಸಾಧ್ಯವಾಗುವುದು…ಶತಮಾನದ ಬ್ರಿಟೀಷ್‌ ದಾಖಲೆಗಳು ಯೋಜನೆಯ ಕುರಿತು ಹೀಗೆಲ್ಲಾ  ವಿವರಿಸುತ್ತವೆ.

ಮಲೇರಿಯಾ, ಪ್ಲೇಗ್‌ ಮುಂತಾದ ಬೇನೆಯಿಂದ ತತ್ತರಿಸಿದ ಅರಣ್ಯ ಪ್ರದೇಶಗಳಲ್ಲಿ ಜನವಸತಿ ಕಡಿಮೆ ಇತ್ತು. ಕಾಡು ಎಂದೂ ಕಡಿದು ಮುಗಿಯದ ಕಳೆಯಂತೆ ಕಾಣಿಸಿತು. ಕರಾವಳಿ ದಂಡೆಯಲ್ಲಿದ್ದ ಜನರನ್ನು ಕಾಡಿನ ನಡುವೆ ಕರೆಯುವ ಜಂಗಲ್‌ ಮಹಲ್‌ ಯೋಜನೆ ಜಲಮೂಲದ ಜಡ್ಡಿ ಪ್ರದೇಶಗಳ ಆಕ್ರಮಣಕ್ಕೆ ಕಾರಣವಾಯ್ತು.  ಅಡಿಕೆ, ಕಾಫಿ, ಚಹಾ, ರಬ್ಬರ್‌ಗಳು ಪಶ್ಚಿಮ ಘಟ್ಟದ ಕಾಡು ಕಡಿದು ವಿಸ್ತರಿಸಿದ ವಾಣಿಜ್ಯ ಬೆಳೆಗಳ ಸಾಮ್ರಾಜ್ಯ. ಮರವನ್ನು  ಆದಾಯದ ಮೂಲವಾಗಿ ಕಂಡ ಸರಕಾರಗಳು ಅರಣ್ಯವನ್ನು ಕೃಷಿ ಭೂಮಿಯಂತೆ ನಿರ್ವಹಿಸಿದವು.

ಸ್ವಾತಂತ್ರ್ಯಾ ನಂತರದಲ್ಲಿ ಕಾಡನ್ನು “ಕ್ಲಿಯರ್‌ ಫೆಲ್ಲಿಂಗ್‌’ ( ಸಂಪೂರ್ಣ ಮರ ಕಡಿಯುವುದು), ‘ಸೆಲೆಕ್ಷನ್‌ ಫೆಲ್ಲಿಂಗ್‌'(ಅಲ್ಲಲ್ಲಿ ಕಡಿಯುವುದು) ವಿಧಾನಗಳು ಜಲಮೂಲಗಳ ಹಸಿರು ಹತ್ಯಾಕಾಂಡವಾದವು. ಕ್ರಿ.ಶ 1970ರವರೆಗೂ  ಕೃಷಿಗಾಗಿ ಅರಣ್ಯ ಭೂಮಿ ಹಂಚುವುದು ಕರ್ನಾಟಕದ ಉಪ ಅರಣ್ಯಾಧಿಕಾರಿಯ ದಕ್ಷತೆಯ ಮಾನದಂಡವಾಗಿತ್ತು. ಕಾಡು ಕಣಿವೆಯ ಜೌಗು ನೆಲೆಯಲ್ಲಿ ಸರಕಾರಿ ಪ್ರಾಯೋಜಿತ ಅತಿಕ್ರಮಣದ ಪ್ರಹಾರ ಬೆಳೆಯಿತು.  ಕಾಲುದಾರಿಯಲ್ಲಿ ಓಡಾಡಿ ಕೃಷಿ ಬೆಳೆಸಿದ ಪ್ರದೇಶದಲ್ಲೆಲ್ಲಾ ರಸ್ತೆಗಳಾದವು.

ವಿದ್ಯುತ್‌ ಲೈನ್‌ಗಳು ಬಂದವು. ನದಿ ಕಣಿವೆಯ ಜೌಗು ಮೂಲದಿಂದ ಶುರುವಾಗಿ ಎಲ್ಲೆಡೆ ಸುರಿಯುವ ಮಳೆ ನೀರು ರಸ್ತೆ ಕಾಲುವೆಗುಂಟ ವೇಗವಾಗಿ ಓಡಲು ಶುರುವಾಯ್ತು. ಮಣ್ಣಿನ ಸವಕಳಿಯಿಂದ ಬೆಣ್ಣೆಹಳ್ಳ, ದೂದ್‌ಗಂಗಾದಂಥ ಸ್ವತ್ಛ ನೀರಿನ ತೊರೆಗಳಿಂದ ಗುರುತಿಸಿದ ನದಿಗಳು ಬಣ್ಣ ಬದಲಾಗಿ ಕೆಂಪು ಹೊಳೆಗಳಾದವು. ಕಾಡಿನ ಝರಿ ಮೂಲದ ರಾಮಪತ್ರೆ ಮರದಿಂದ ಕೆಂಪು ದ್ರವ ಜಿನುಗಿದ್ದು ನೋಡಿ ಅಚ್ಚರಿಪಟ್ಟ ಕರಾವಳಿ ನೆಲೆಯಲ್ಲಿ ಇಂದು ಮಳೆಗಾಲಡೀ ನದಿ ನೆತ್ತರಂತೆ ಹರಿಯುತ್ತಿದೆ. 

ಹಳ್ಳಗಳಲ್ಲಿ “ಮಣ್‌ ಕರಡಿ’ ಬಂದಿದೆಯೆಂದು   ನಾವು   ಚಿಕ್ಕವರಿ ದ್ದಾಗ ಹಿರಿಯರು ಮಾತಾಡುತ್ತಿದ್ದರು. “ನೀವು ಮಣ್‌ ಕರಡಿ ನೋಡಿದಿರಾ?’ ಎಂದು ಕೇಳುತ್ತಿದ್ದರು. ಕಾಡಿನ ಕರಡಿಯ ಒಂದು ಜಾತಿ ನದಿಯಲ್ಲಿ ತೇಲಿ ಬಂದಿದೆಯೆಂದು ನಾವು ನೋಡಲು ಓಡುತ್ತಿದ್ದೆವು. ಪ್ರವಾಹದ ನೀರು ಮಣ್ಣು ಸವಕಳಿಯಿಂದ ಕೆಂಪಾಗಿ ಹರಿಯುವುದನ್ನು  ‘ ಮಣ್ಣು ಕರಡಿ’ ಯೆಂದು ತಮಾಷೆಗೆ ಕರೆಯುತ್ತಿದ್ದರು. ಮಳೆ ಸುರಿದಾಗ ಕೃಷಿ ವಿಸ್ತರಣೆ ಮಾಡಲೆಂದು ದಂಡೆಯ ಮಣ್ಣನ್ನು ಕಡಿದು ನದಿಯಲ್ಲಿ ತೇಲಿಸುತ್ತಿದ್ದರು. ಭತ್ತದ ಉಳುಮೆ ಮಾಡಿ ಗದ್ದೆಗೆ ನೀರು ಹರಿಸಿದಾಗಲೂ ಹೀಗೆ ನೀರಿನ ಬಣ್ಣ ಬದಲಾಗಿ ಹರಿಯುತ್ತಿತ್ತು.

ಒಂದೆಡೆ ಅರಣ್ಯ ವಿನಾಶ, ಇನ್ನೊಂದೆಡೆ ಕೃಷಿಗಾಗಿ ಅತಿಕ್ರಮಣದಿಂದ ನೀರಿನ ಬಣ್ಣ ಬದಲಾಯಿತು. ಕಾಡಿನ ಬೆಂಕಿಯಿಂದ ಭೂಸವಕಳಿಯಾಯ್ತು. 80ರ ದಶಕದ ನಂತರ ಅರಣ್ಯದಲ್ಲಿ ನೆಡುತೋಪು ಬೆಳೆಸಲು ಬುಲ್ಡೋಜರ್‌ನಿಂದ ಉಳುಮೆ ನಡೆಯಿತು. ಯಂತ್ರಗಳು ಗುಡ್ಡಗಳನ್ನು ಅರಣ್ಯೀಕರಣದ ಹೆಸರಿನಲ್ಲಿ ಅಸಡಾಬಸಡಾ ಅಗೆದ ಪರಿಣಾಮ ಮಣ್ಣಿನ ಓಟ ಹತ್ತಾರು ಪಟ್ಟು ಹೆಚ್ಚಿತು. ತುಂಗೆಯ ನೆಲೆದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪ್ರದೇಶಗಳಲ್ಲಂತೂ ಮೈಸೂರ್‌ ಪೇಪರ್‌ ಮಿಲ್ಸ್‌ನ ನೆಡುತೋಪು ಆರ್ಭಟಕ್ಕೆ ಕೆರೆ, ನದಿಗಳಲ್ಲಿ ಹೂಳು ತುಂಬಿದವು. ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಹರಿಯುವ ಪಲ್ಲುಣಿ ನದಿಯ ಆಳದ ಗುಂಡಿಗಳು ಕೆರೆಯಂತೆ ಕಾಣುತ್ತಿದ್ದವು.

ನದಿ ಹರಿವಿನ ಕಿಲೋ ಮೀಟರ್‌ ಅಂತರದಲ್ಲಿ 15-20 ಅಡಿ ಆಳದ ಮಡುವಿರುತ್ತಿತ್ತು. ಗುಡ್ಡದಲ್ಲಿ ಜೆಸಿಬಿ ಆರ್ಭಟ ಶುರುವಾದ ನಂತರದಲ್ಲಿ ನದಿಯ ಗುಂಡಿಗಳಲ್ಲಿ ಹೂಳು ತುಂಬಿವೆ, ಬೇಸಿಗೆ ಆಗಮನವಾಗುತ್ತಿದ್ದಂತೆ ನದಿ ಒಣಗುತ್ತಿದೆ. ನದಿಯ ನೀರು ಹರಿಯುವ ಜಾಗದಲ್ಲಿ ಆರಾಮ ಲಾರಿ ಓಡಿಸುವಷ್ಟು ಸಮತಟ್ಟಾಗಿದೆ. ನೀರು ಹಿಡಿಯುವ ಆಳ ಗುಂಡಿಯ ನೈಸರ್ಗಿಕ ರಚನೆಗಳು ಮಣ್ಣುಪಾಲಾಗಿವೆ. ಇದರಿಂದ ನೀರುನಾಯಿ, ಮೊಸಳೆ, ಮೀನುಗಳ ಬದುಕು ಏನಾಗಿದೆಯೆಂದು ಹುಡುಕುತ್ತ ಹೋದರೆ ಜೀವಲೋಕದ ಸಂಕಟಗಳು ನದಿದಂಡೆಯಲ್ಲಿ ಸಿಗುತ್ತವೆ.

ಉತ್ತರ ಕನ್ನಡದ ಯಾಣದಲ್ಲಿ ಪುಟ್ಟ ಚಂಡಿಕಾ ನದಿ ಜನಿಸುತ್ತದೆ. ಚಂಡಿ ಎಂಬುದು ಪಾರ್ವತಿಯ ಇನ್ನೊಂದು ಹೆಸರು. ತಾರಕಾಸುರನ ಮಕ್ಕಳನ್ನು ಸಂಹರಿಸುವಾಗ ಕಾಲನಾಭನೆಂಬ ರಾಕ್ಷಸ, ಯಾಣದ ಬೆಟ್ಟದ ಮೇಲೆ ಬಿಂಕಿಯ ಕಿಡಿ ಕೆಡಹಿದನು. ಸಹ್ಯಪರ್ವತ ಬಿಂಕಿಯಿಂದ ಹೊತ್ತಿ ಉರಿಯತೊಡಗಿತು. ಇದನ್ನು ಗಮನಿಸಿದ ಶಿವನು  ಬೆಂಕಿ ಆರಿಸಲು ಜಲ ರೂಪದಲ್ಲಿ ತನ್ನ ಪತ್ನಿ ಚಂಡಿಯನ್ನು ಕಳಿಸಿದನೆಂಬ ಐತಿಹ್ಯವಿದೆ. ಇದು ಅಘನಾಶಿನಿಯ ಉಪನದಿಯಾಗಿದೆ. ಪಶ್ಚಿಮ ಘಟ್ಟದ ಕಣಿವೆಯ ಪುಟ್ಟ ತೊರೆಯ ಮೂಲಕ್ಕೂ ಪುರಾಣದ ಐತಿಹ್ಯಗಳಿವೆ. ನದಿ ಮೂಲಗಳನ್ನು ಪವಿತ್ರವಾಗಿ ನೋಡಬೇಕೆಂಬುದನ್ನು ಕಾಲದ ನಂಬಿಕೆಗಳು ಕಲಿಸಿವೆ.

ಮರ ಹಾಗೂ ನೀರಿನ ಮಹತ್ವವನ್ನು ಪರಿಸರ ಕಾನೂನು, ವಿಜಾnನ ಇಂದು ಎಷ್ಟೇ ಹೇಳಿದರೂ ಅದು ಪುರಾಣ ಕತೆಯಷ್ಟು ಹೃದ್ಯವಾಗುವುದಿಲ್ಲ. ಆದರೆ ನಮ್ಮ ಅಭಿವೃದ್ಧಿ, ಉದ್ಯಮ ನೀತಿಗಳು ಕಾಡಿನ ಹೃದಯವನ್ನು ಅರ್ಥಮಾಡಿಕೊಂಡಿಲ್ಲ.  ಕತ್ತಿ, ಕೊಡಲಿ, ಗರಗಸ ಹಿಡಿದ ನಾವುಗಳು ಕತ್ತರಿಸುವ ಕಾರ್ಯದಲ್ಲಿ ಮಗ್ನರಾಗಿದ್ದೇವೆ. ಬೆಂಕಿ ಹಿಡಿದು ತಾರಕಾಸುರನ ಮಕ್ಕಳಂತೆ ಕಾಡು ಸುಡುತ್ತಿದ್ದೇವೆ. ಗಣಿಗಾರಿಕೆ, ಅತಿಕ್ರಮಣ, ಬೃಹತ್‌ ಯೋಜನೆಗಳು ಜಲಮೂಲದ ಮೇಲೆ ಆಟಾಟೋಪ ನಡೆಸಿವೆ. ನೀರಿಲ್ಲದಾಗ ಅಳುವ ನಾವು ಜಲಮೂಲದ ನೆಲದ ಸತ್ಯ ಅರಿತಿಲ್ಲ.

ಹನಿ ಹನಿ ನೀರನ್ನು ನಿರಂತರವಾಗಿ ವರ್ಷವಿಡೀ ನದಿಗೆ ನೀಡುತ್ತಿದ್ದ ಕಾಡು ಬರಿದಾಗಿದೆ. ಕಡಿದಾದ ಬೆಟ್ಟಗಳು ನೀರು ಹಿಡಿಯುವ ಹುಲ್ಲು, ಹ್ಯೂಮಸ್‌, ಬಳ್ಳಿ, ಮರಗಳನ್ನು ಕಳೆದುಕೊಂಡಿವೆ. ಜೌಗಿನ ಹಡ್ಲು ಪ್ರದೇಶವನ್ನು ಮನುಷ್ಯ ಮರುಸೃಷ್ಟಿಸಲು ಸಾಧ್ಯವಿಲ್ಲ. ರಾಮಪತ್ರೆ ಸಸಿ ನೆಟ್ಟ ಮಾತ್ರಕ್ಕೆ ಜಡ್ಡಿಗೆ ಜೀವ ಬರುವುದಿಲ್ಲ. ನೈಸರ್ಗಿಕವಾಗಿ ಜಲಮೂಲದ ಮರಗಳು ಬೆಳೆಯುವ ಪರಿಸರ ವ್ಯವಸ್ಥೆ ಸಹಜವಾಗಿ ರೂಪುಗೊಳ್ಳಬೇಕು. ನಮ್ಮ ಒತ್ತಡಗಳು ಕಡಿಮೆಯಾಗಬೇಕು. ಇದಕ್ಕೆ ಶತಮಾನ ಕಾಯಬೇಕು!

ಅರಣ್ಯದ ವಿಚಾರದಲ್ಲಿ ನಾವು ಹೇಗಿದ್ದೇವೆಂದರೆ ಮೆಡಿಕಲ್‌ ಓದದ ಹುಡುಗರ ಕೈಗೆ ಆಸ್ಪತ್ರೆಯ ಆಯುಧಗಳು ಸಿಕ್ಕಿವೆ, ಸಂರಕ್ಷಣೆಯ ಕಾರ್ಯಗಳು ಪ್ರಯೋಗಕ್ಕೆ ಎಸೆವ ಆಟಗಳಾಗಿವೆ. ಜೌಗು ಪ್ರದೇಶ ರಕ್ಷಣೆಯ ಯೋಜನೆಗಳು ಕಾಂಕ್ರೀಟ್‌ ಬಾಂದಾರ ಕಟ್ಟುವ ಮೂರ್ಖತನವನ್ನು ಮಾಡಿವೆ. ಇದಕ್ಕಾಗಿ ಕಾಡು ಗರ್ಭಕ್ಕೆ ರಸ್ತೆ ನಿರ್ಮಾಣವೂ ನಡೆದಿದೆ. ಅರಣ್ಯ ಇಲಾಖೆ ಗೆಲ್ಲುವ ಅಕೇಶಿಯಾದಂಥ ಸಸ್ಯ ಹಿಡಿದು ಗುಡ್ಡಗಳಲ್ಲಿ ಹುಚ್ಚಾಟ ಪ್ರದರ್ಶಿಸಿದ ಫ‌ಲಗಳು ಇಡೀ ಪಶ್ಚಿಮ ಘಟ್ಟದ ಉದ್ದಕ್ಕೂ ಇವೆ..

ಜಲಮೂಲಗಳನ್ನು ಓದದ ಸರಕಾರಗಳು ವೋಟಿಗಾಗಿ ಅಣೆಕಟ್ಟು, ಕಾಲುವೆ ರೂಪಿಸುತ್ತಿವೆ. ನೋಟು ಚೆಲ್ಲಿದಂತೆ ನೀರು ಹರಿಯುತ್ತದೆಂದು ಇವರೆಲ್ಲ ಭಾವಿಸಿದ್ದಾರೆ. ಎತ್ತಿನಹೊಳೆಯಂಥ ಮೂರ್ಖ ಯೋಜನೆಗಳು ಜಾರಿಯಾಗುತ್ತವೆ. ನದಿಯನ್ನು ತಾಯಿಯೆಂದು ಗೌರವಿಸುತ್ತೇವೆ, ಪೂಜಿಸುತ್ತೇವೆ. ಈಗ ಕಾಡಿನ ಮಗ್ಗುಲಲ್ಲಿ ನಿತ್ರಾಣಗೊಂಡ ಅಮ್ಮ ತಣ್ಣಗೆ ಮಲಗಿದ್ದಾಳೆ. ಈಗ ಅವಳಿಗೆ ಹೃದಯಾಘಾತವಾಗಿದೆ. ಹಸಿರು ಹೃದಯವಿಲ್ಲದ ನದಿ ನಾಳೆ ಬದುಕಿರಲು  ಹೇಗೆ ಸಾಧ್ಯ? ಜಲ ಮನ ಅರಿತ ವನವೈದ್ಯರು ನದಿ ನಾಡಿಗೆಲ್ಲ ಬೇಕಾಗಿದ್ದಾರೆ. 

-ಹನಿ ಹನಿ ನೀರನ್ನು ನಿರಂತರವಾಗಿ ವರ್ಷವಿಡೀ ನದಿಗೆ ನೀಡುತ್ತಿದ್ದ ಕಾಡು ಬರಿದಾಗಿದೆ. ಕಡಿದಾದ ಬೆಟ್ಟಗಳು ನೀರು ಹಿಡಿಯುವ ಹುಲ್ಲು, ಹ್ಯೂಮಸ್‌, ಬಳ್ಳಿ, ಮರಗಳನ್ನು ಕಳೆದುಕೊಂಡಿವೆ. ಜೌಗಿನ ಹಡ್ಲು ಪ್ರದೇಶವನ್ನು ಮನುಷ್ಯ ಮರುಸೃಷ್ಟಿಸಲು ಸಾಧ್ಯವಿಲ್ಲ. ರಾಮಪತ್ರೆ ಸಸಿ ನೆಟ್ಟ ಮಾತ್ರಕ್ಕೆ ಜಡ್ಡಿಗೆ ಜೀವ ಬರುವುದಿಲ್ಲ. ನೈಸರ್ಗಿಕವಾಗಿ ಜಲಮೂಲದ ಮರಗಳು ಬೆಳೆಯುವ ಪರಿಸರ ವ್ಯವಸ್ಥೆ ಸಹಜವಾಗಿ ರೂಪುಗೊಳ್ಳಬೇಕು.

* ಶಿವಾನಂದ ಕಳವೆ

ಟಾಪ್ ನ್ಯೂಸ್

Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

7-dvg

Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ

Kasganj: ವಿವಾಹಿತನಿಗೆ ಪೊಲೀಸ್‌ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!

Kasganj: ವಿವಾಹಿತನಿಗೆ ಪೊಲೀಸ್‌ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!

1-lasike

Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ

Uttara Pradesh: ಬುಲ್ಡೋಜರ್‌ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ

Uttara Pradesh: ಬುಲ್ಡೋಜರ್‌ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ

1-e4qeewqewq

Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್

4-bantwala

ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

8-ckm

Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ

8

Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ

Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

7

Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ

6

Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.