ಜವಾರಿ ಜಾತ್ರೆ ಭಕ್ತಿ ಮಾರ್ಗಕ್ಕೂ ವೃತ್ತಿ ಮಾರ್ಗಕ್ಕೂ…
Team Udayavani, Jan 13, 2020, 6:06 AM IST
ನಗರಪ್ರದೇಶಗಳ ಜನರಿಗೆ ತಮಗೆ ಬೇಕಾದುದನ್ನು ಕೊಳ್ಳಲು ವರ್ಷವಿಡೀ ತೆರೆದಿರುವ ಶಾಪಿಂಗ್ ಮಾಲ್‌ಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ಶಾಪಿಂಗ್ ಮಾಲ್‌ಗಳ ಕೊರತೆಯನ್ನು ಜಾತ್ರೆಗಳು ತುಂಬುತ್ತವೆ. ಬಾದಾಮಿಯಿಂದ 5 ಕಿ.ಮೀ ದೂರದ ಚೋಳಚಗುಡ್ಡದಲ್ಲಿ, ಒಂದು ತಿಂಗಳ ಕಾಲ ನಡೆಯುವ ಬನಶಂಕರಿ ಜಾತ್ರೆ ಈ ಕಾರಣಕ್ಕೆ ಮಹತ್ವ ಪಡೆದುಕೊಳ್ಳುತ್ತದೆ. ಆ ಮೂಲಕ ಭಕ್ತಿ ಮಾರ್ಗಕ್ಕೂ ವೃತ್ತಿ ಮಾರ್ಗಕ್ಕೂ ದಾರಿಯಾಗುತ್ತಿದೆ. “ಬನಶಂಕರಿ ಜಾತ್ರಾಗ್ ಒಂದು ವಾರ ವ್ಯಾಪಾರ ಮಾಡ್ಕೊಂಡು ಬಂದ್ರ, ಎದಕ್ಕರೇ ರೊಕ್ಕ ಆಗ್ತಾವ್’ ಎಂಬ ಮಾತು ಈ ಭಾಗದಲ್ಲಿ ಹೆಚ್ಚು ಪ್ರಚಲಿತ.
ದಕ್ಷಿಣ ಕರ್ನಾಟಕಕ್ಕೆ ಮೈಸೂರಿನ ಚಾಮುಂಡೇಶ್ವರಿ ಶಕ್ತಿ ದೇವತೆಯಾದರೆ, ಉತ್ತರಕರ್ನಾಟಕಕ್ಕೆ ಬಾದಾಮಿಯ ಬನಶಂಕರಿದೇವಿಯೇ ಶಕ್ತಿ ದೇವತೆ. ಪ್ರತಿವರ್ಷ ಬನದ ಹುಣ್ಣಿಮೆಗೆ ನಡೆಯುವ ಬನಶಂಕರಿದೇವಿ ಜಾತ್ರೆ, ಇಡೀ ರಾಜ್ಯದಲ್ಲೇ ಅತಿಹೆಚ್ಚು ದಿನಗಳ ಕಾಲ ನಡೆಯುವ ದೊಡ್ಡ ಜಾತ್ರೆ ಎಂಬ ಖ್ಯಾತಿ ಪಡೆದಿದೆ. ಇದು, ಭಕ್ತರಿಗೆ, ವ್ಯಾಪಾರಸ್ಥರಿಗೆ, ಜಾತ್ರೆಗೆ ಬರುವ ಜನರಿಗೆ ಬೇಡಿದ್ದೆಲ್ಲಾ ಕೊಡುವ ಜಾತ್ರೆಯೂ ಹೌದು. ಕರ್ನಾಟಕ, ಮಹಾರಾಷ್ಟ್ರ ಮುಂತಾದ ನೆರೆರಾಜ್ಯಗಳಿಂದ ಲಕ್ಷಾಂತರ ಭಕ್ತರು, ವ್ಯಾಪಾರಸ್ಥರು ಇಲ್ಲಿಗೆ ಬರುತ್ತಾರೆ. ಬಾದಾಮಿಯ ಮನೆಮನೆಯ ಜನರೂ, ಜಾತ್ರೆಯ ಸಮಯದಲ್ಲಿ ತಮ್ಮ ಮನೆಗೆ ಬರುವ ನೆಂಟರಿಷ್ಟರನ್ನು ಜಾತ್ರೆಗೆ ಕರೆದುಕೊಂಡು ಹೋಗಿ, ಹೆಂಗಸರಿಗೆ ಬನವ್ವನ ಬಳೆ (ಹಸಿರು-ಚಿಕ್ಕೆ ಬಳೆ) ಉಡಿಸಿಯೇ ಕಳುಹಿಸುತ್ತಾರೆ.
ಎಲ್ಲವನ್ನೂ ನೀಡುವ ಜಾತ್ರೆ
ಜಾತ್ರೆ ಒಂದು ತಿಂಗಳ ಕಾಲ ನಡೆಯುವುದರಿಂದ ವ್ಯಾಪಾರಸ್ಥರು ಸುದೀರ್ಘ ಕಾಲದ ವಾಸ್ತವ್ಯಕ್ಕೆ ಬೇಕಾದ ಏರ್ಪಾಡುಗಳನ್ನು ಮಾಡಿಕೊಂಡೇ ಬಂದಿರುತ್ತಾರೆ. ಗೃಹ ಬಳಕೆ ವಸ್ತುಗಳ ವ್ಯಾಪಾರಸ್ಥರು, ಸುಂದರ ಕೆತ್ತನೆಯ ಬಾಗಿಲು- ಕಿಟಕಿ ಮಾಡುವವರು, ಮಕ್ಕಳ ಆಟಿಕೆ ಮಾರಾಟಗಾರರು, ಫನ್‌ಫೇರ್ ಕಂಪನಿಗಳು, ಮಿಠಾಯಿ ಮಾರಾಟಗಾರರು, ಬಟ್ಟೆ ಅಂಗಡಿಯವರು, ಹೋಟೆಲ್‌ಗಳು ಹೀಗೆ ನಾನಾ ಬಗೆಯ ವ್ಯಾಪಾರಸ್ಥರನ್ನು ಇಲ್ಲಿ ಕಾಣಬಹುದು. ಜಾತ್ರೆಯಲ್ಲಿ ಬಳೆಯೇ ಪ್ರಮುಖ ಆಕರ್ಷಣೆಯಾಗಿರುವುದರಿಂದ ಬಳೆ ಮಾರಾಟಗಾರರು, ಬನಶಂಕರಿದೇವಿ ಜಾತ್ರೆಗೆಂದೇ ಹಸಿರು, ಚಿಕ್ಕಿ ಸಹಿತ ತರಹೇವಾರಿ ಬಳೆ ವ್ಯಾಪಾರ ಮಳಿಗೆಗಳನ್ನು ಉದ್ದಕ್ಕೂ ತೆರೆದಿರುತ್ತಾರೆ. ಹಳ್ಳಿಯ ರೈತರಿಗೆ ಬೇಕಾಗುವ ಕೂರಿಗೆ, ಕುಂಟೆ, ನೇಗಿಲು ವಿಶೇಷವಾಗಿ ಸಿಗುತ್ತವೆ. ರುಬ್ಬುವ ಕಲ್ಲು, ಒನಕೆ, ಬಾಗಿಲು ಕಿಟಕಿ, ಬಟ್ಟೆ, ಪಾತ್ರೆ, ಹಾಸಿಗೆ, ತಲೆದಿಂಬು, ಮನೆಯ ಅಲಂಕಾರಿಕ ವಸ್ತುಗಳ ಸಹಿತ ಬಳೆ ಅಂಗಡಿಗಳು ಇಲ್ಲಿ ಹೆಚ್ಚು ವ್ಯಾಪಾರ ಆಗುತ್ತವೆ. ರಾತ್ರಿ 1ರ ವರೆಗೂ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತದೆ.
ಅಂಗಡಿಯೇ ವಾಸದ ಮನೆ
ಬಾಗಲಕೋಟೆ, ಮುಧೋಳ, ಇಳಕಲ್ಲ, ಗದಗ, ಸೊಲ್ಲಾಪುರ, ಬೆಳಗಾವಿ, ರಾಜಸ್ತಾನ, ಹರಿಯಾಣ ಸಹಿತ ವಿವಿಧ ಭಾಗಗಳಿಂದ ವ್ಯಾಪಾರಸ್ಥರು ಇಲ್ಲಿಗೆ ಬರುತ್ತಾರೆ. ವ್ಯಾಪಾರಸ್ಥರು ಒಂದು ತಿಂಗಳ ಕಾಲ ಬಾಡಿಗೆಗೆ ಹಿಡಿದ ಅಂಗಡು ಮಳಿಗೆಗಳಲ್ಲೇ ಠಿಕಾಣಿ ಹೂಡುತ್ತಾರೆ. ಇಲ್ಲಿ ಕೂಲಿಕಾರರನ್ನು ಇರಿಸಿಕೊಳ್ಳುವುದು ಕಡಿಮೆ. ವೃಥಾ ಖರ್ಚು ಎಂದೇ ವ್ಯಾಪಾರಸ್ಥರು ಕುಬುಂಬ ಸಮೇತ ಬಂದುಬಿಡುತ್ತಾರೆ. ಗಂಡ, ಹೆಂಡತಿ, ಮಕ್ಕಳೆಲ್ಲರೂ ಮನೆಯ ಯಜಮಾನರ ಜೊತೆ ಕೈಜೋಡಿಸಿ ಜಾತ್ರೆಯ ವ್ಯಾಪಾರದಲ್ಲಿ ಭಾಗಿಯಾಗುತ್ತಾರೆ. “ಬನಶಂಕರಿ ಜಾತ್ರಾÂಗ್ ಒಂದು ವಾರ ವ್ಯಾಪಾರ ಮಾಡ್ಕೊಂಡು ಬಂದ್ರ, ಎದಕ್ಕರೇ ರೊಕ್ಕ ಆಗ್ತಾವ್’ ಎಂಬ ಮಾತು ಈ ಭಾಗದಲ್ಲಿ ಹೆಚ್ಚು ಪ್ರಚಲಿತ.
ಜಾಗದ ಬಾಡಿಗೆ ಎಷ್ಟು
ಚೋಳಚಗುಡ್ಡ ಗ್ರಾ.ಪಂ. ವತಿಯಿಂದ 313 ಮಳಿಗೆಗಳು ಹಾಗೂ ದೇವಸ್ಥಾನ ಟ್ರಸ್ಟ್ ವತಿಯಿಂದ ಸುಮಾರು 50ಕ್ಕೂ ಹೆಚ್ಚು ಮಳಿಗೆಗಳನ್ನು ಬಾಡಿಗೆ ಕೊಟ್ಟಿರುತ್ತಾರೆ. ಇದಲ್ಲದೆ ರಸ್ತೆಯ ಇಕ್ಕೆಲಗಳಲ್ಲಿ ಖಾಸಗಿಯವರೂ ತಮ್ಮ ಜಾಗವನ್ನು ಬಾಡಿಗೆ ಕೊಡುವುದುಂಟು. ಆ ಮೊತ್ತದಲ್ಲಿ ಏರುಪೇರಿರುವುದರಿಂದ ಅ ಲೆಕ್ಕ ಸಿಗುವುದು ಕಷ್ಟ. ಗ್ರಾ.ಪಂ.ನಿಂದ 10 ಅಡಿ ಸುತ್ತಳತೆಯ ಜಾಗಕ್ಕೆ 2 ಸಾವಿರ, 20 ಅಡಿ ಸುತ್ತಳತೆಯ ಜಾಗಕ್ಕೆ 4 ಸಾವಿರ ಭೂ ಬಾಡಿಗೆ ನಿಗದಿ ಮಾಡಿರುತ್ತಾರೆ. ಅಲ್ಲದೆ ಸುಮಾರು 30 ಎಕರೆಯಷ್ಟು ಪಂಚಾಯಿತಿ ಜಾಗವಿದ್ದು, ಅದರಲ್ಲಿ ವಿವಿಧ ಮಳಿಗೆ, ಫನ್‌ಫೇರ್ ಮುಂತಾದ ದೊಡ್ಡ ಕಂಪನಿಗಳಿಗೆ ನೀಡುತ್ತಿದ್ದು, ಅವುಗಳನ್ನು ಬಹಿರಂಗ ಹರಾಜು ಮೂಲಕ ಕೊಡಲಾಗುತ್ತದೆ. ಪಂಚಾಯಿತಿಗೆ ಜಾತ್ರೆಯ ಮಳಿಗೆಗಳಿಂದ ಸುಮಾರು 20ಲಕ್ಷದವರೆಗೂ ಆದಾಯ ಬರುತ್ತದೆ.
ಫನ್‌ಫೇರ್ ನಡೆಸುವುದೇ ಸರ್ಕಸ್
ಜಾತ್ರೆಯಲ್ಲಿ ಯಾವುದೇ ವ್ಯಾಪಾರವಾದ್ರೂ ಬಂಡವಾಳಕ್ಕೆ ಮೋಸವಿಲ್ಲ. ಆದರೆ, ಫನ್‌ಫೇರ್‌ನವರಿಗೆ ಮಾತ್ರ ಹೇಳಲು ಆಗುವುದಿಲ್ಲ. ಜೇಂಟ್‌ವೀಲ್, ಟೋರಾಟೋರಾ, ಮಕ್ಕಳ ರೈಲು ಹೀಗೆ ವಿವಿಧ ಮನರಂಜನೆಗಳನ್ನೂ, ರೋಮಾಂಚನಕಾರಿ ಅನುಭವವನ್ನೂ ನೀಡುವ ಈ ವ್ಯವಹಾರ ನಡೆಸಲು ಸುಮಾರು 150- 200 ಕೆಲಸಗಾರರು ಬೇಕಾಗುತ್ತದೆ. ಒಂದು ಜಾತ್ರೆಯಿಂದ ಇನ್ನೊಂದು ಜಾತ್ರೆಗೆ ಈ ಸಾಮಗ್ರಿಯನ್ನು ಬಿಚ್ಚಿ, ಜೋಡಿಸಿ, ಸಾಗಿಸಲೆಂದೇ ಸುಮಾರು 4- 5 ಲಕ್ಷ ಖರ್ಚಾಗುತ್ತದೆ. ಒಬ್ಬ ಕೆಲಸಗಾರನಿಗೆ ಊಟ ವಸತಿಯನ್ನು ಹೊರತುಪಡಿಸಿ ಕನಿಷ್ಠ 7,000 ವೇತನವಿರುತ್ತದೆ. ಫನ್‌ಫೇರ್ ನಡೆಸುವ ಜಾಗಕ್ಕೆ 1.30- 2 ಲಕ್ಷ ದವರೆಗೆ ಬಾಡಿಗೆ ನೀಡಬೇಕಾಗುತ್ತದೆ. ಹೀಗಾಗಿ ಅವರು ನಿತ್ಯ 2.50 ಲಕ್ಷದಿಂದ 3 ಲಕ್ಷ ದುಡಿದರೆ ಮಾತ್ರ ಲಾಭವಾಗುತ್ತದೆ. ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ.
ಕಂಪನಿ ನಾಟಕಗಳ ವೈಭವ
ಹಿಂದೆ ಕಂಪನಿ ನಾಟಕಗಳು ಜನರ ಮನರಂಜನೆಯ ಮೂಲವಾಗಿತ್ತು. ಇಂದಿಗೂ ಅವು ತಮ್ಮ ಹೊಳಪು ಕಳೆದುಕೊಂಡಿಲ್ಲ ಎಂಬುದನ್ನು ತಿಳಿಯಲು ಬನಶಂಕರಿ ಜಾತ್ರೆಗೆ ಬರಬೇಕು. ಅಲ್ಲಿ ಈಗಲೂ ಜನರು ನಾಟಕ ನೋಡಲು ಮುಗಿಬೀಳುವುದನ್ನು ಕಾಣಬಹುದು. ಜಾತ್ರೆಯಲ್ಲಿ 10ರಿಂದ 15 ವೃತ್ತಿ ರಂಗಭೂಮಿ ನಾಟಕ ಕಂಪನಿಗಳು ಟೆಂಟ್ ಹಾಕುತ್ತವೆ. ವರ್ಷವಿಡೀ ಊರಿಂದ ಊರಿಗೆ ತೆರಳುವ ತಂಡ ಅಲ್ಲೆಲ್ಲಾ ಎಷ್ಟು ಆದಾಯ ಗಳಿಸುತ್ತವೆಯೋ ಅದರ ನಾಲ್ಕೈದು ಪಟ್ಟು ಹೆಚ್ಚಿನ ಲಾಭವನ್ನು ಜಾತ್ರೆಯಲ್ಲಿ ಗಳಿಸುತ್ತಾರೆ. ಇಲ್ಲಿ ನಾಟಕಗಳು ನಸುಕಿನ 3 ಗಂಟೆ ವರೆಗೂ ಪ್ರದರ್ಶನಗೊಳ್ಳುತ್ತವೆ. ನಾಟಕ ಕಂಪನಿಗಳಿಗೆ 10 ಲಕ್ಷಕ್ಕೂ ಮೇಲ್ಪಟ್ಟು ಆದಾಯ ಗಳಿಸುತ್ತವೆ.
ರೆಡಿಮೇಡ್ ಕಿಟಕಿ ಬಾಗಿಲುಗಳು
ಸಾಗವಾನಿ ಕಟ್ಟಿಗೆಯಿಂದ ತಯಾರಿಸಿದ ಮನೆಯ ಕಿಟಕಿ ಬಾಗಿಲುಗಳು ಜಾತ್ರೆಯ ಆಕರ್ಷಣೆಗಳಲ್ಲಿ ಸೇರಿದೆ. ಅವುಗಳನ್ನು ಖರೀದಿಸಲೆಂದೇ ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ವಿಜಯಪುರ, ಬೆಳಗಾವಿಗಳಿಂದಲೂ ಜನರು ಬರುತ್ತಾರೆ. ತಮಗೆ ಇಷ್ಟವಾಗಿದ್ದು ಅಲ್ಲಿದ್ದರೆ ಕೂಡಲೆ ಖರೀದಿಸುತ್ತಾರೆ. ಇಲ್ಲದೇ ಹೋದರೂ ಮುಂಗಡ ಒಂದಷ್ಟು ಹಣಕೊಟ್ಟು,ಆರ್ಡರ್ ಕೊಟ್ಟು ಹೋಗುತ್ತಾರೆ.
ನಮ್ಮ ಅಜ್ಜನ ಕಾಲದಿಂದಲೂ ಇದೇ ವ್ಯಾಪಾರ ಮಾಡಿಕೊಂಡಿದ್ದೇವೆ. ಜಾತ್ರೆಗೆ ಬಂದು ಮನೆ ಬಾಗಿಲು, ಕಿಟಕಿ ಮುಂತಾದ ಸಾಮಗ್ರಿ ಮಾರಾಟ ಮಾಡುತತ್ತಿದೆ. ಈ ಬಾರಿ ಸುಮಾರು 10 ಲಕ್ಷ ಮೊತ್ತದ ಸಾಮಗ್ರಿ ತಂದಿದ್ದೇವೆ. ಒಮ್ಮೆಯೂ ದೇವಿ ನಮ್ಮ ನಷ್ಟ ಮಾಡಿಲ್ಲ.
-ಬಾಬು ಕಲೇಗಾರ, ಕಿಟಕಿ- ಬಾಗಿಲು ವ್ಯಾಪಾರಸ್ಥ
ನಮಗೆ ಈ ವೃತ್ತಿ ಬಿಟ್ಟರೆ ಬೇರೆ ಗೊತ್ತಿಲ್ಲ. ಸುಮಾರು 20 ಲಾರಿಗಳಷ್ಟು ಕಬ್ಬಿಣದ ಸಾಮಗ್ರಿ ತಂದು ಫನ್‌ಫೇರ್ ನಡೆಸಬೇಕು. 120ರಿಂದ 150 ಜನ ಕೆಲಸ ಮಾಡುತ್ತಾರೆ. ಲಾಭ ಸಿಕ್ಕರೆ ಅದೃಷ್ಟ. ಹಾಕಿದ ಹಣ ಬಂದರೂ ತೃಪ್ತಿ.
– ಏಕನಾಥ ಇಂಗಳೆ, ಚಡಚಣದ ಫನ್‌ಫೇರ್ ಕಂಪನಿ ಮಾಲೀಕ
ಲೇಖನ: ಶ್ರೀಶೈಲ ಕೆ. ಬಿರಾದಾರ
ಚಿತ್ರಗಳು: ವಿಠಲ ಮೂಲಿಮನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.