ಟೋಪಿವಾಲಾ ಹವಾಲಾ
ಕಮಿಷನ್ ಕಡಿಮೆ,ಹೆಚ್ಚು ಮೊತ್ತ
Team Udayavani, Sep 23, 2019, 5:25 AM IST
ಕಪ್ಪು ಹಣವೆನ್ನುವ ಭೂತ “ಹವಾಲಾ’ ಎಂಬ ಅವತಾರವೆತ್ತಿ ಯಾವ ರೀತಿ ಸಂಚಾರ ಮಾಡುತ್ತದೆ ಎನ್ನುವುದು ಸೋಜಿಗದ ಸಂಗತಿ. ಅದರ ಅರಿವಿಲ್ಲದೆಯೇ ಅಮಾಯಕರು ಇದರ ಕಪಿಮುಷ್ಠಿಯಲ್ಲಿ ಸಿಕ್ಕಿಬೀಳುವ ಸಾಧ್ಯತೆಗಳೂ ಇರುತ್ತವೆ!
ಸ್ವಿಸ್ ಬ್ಯಾಂಕಿನಲ್ಲಿ ಇದೆಯೆನ್ನಲಾದ ಕಪ್ಪುಹಣದ ಬಗ್ಗೆ ದೇಶದ ಎಲ್ಲೆಡೆ ವ್ಯಾಪಕವಾದ ಚರ್ಚೆ ಆಗುತ್ತಲೇ ಇರುತ್ತಿದೆ. ಅಲ್ಲಿ ಇದೆಯೆನ್ನಲಾದ ದುಡ್ಡು ಎಷ್ಟು? ಎನ್ನುವ ಪ್ರಶ್ನೆ ಒಂದೆಡೆಯಾದರೆ ಅದನ್ನು ವಾಪಾಸು ತರುವ ಬಗ್ಗೆ ಇನ್ನೊಂದೆಡೆ ಚರ್ಚೆ ನಡೆಯುತ್ತಿದೆ. ಇವೆಲ್ಲದರ ನಡುವೆ ಕೆಲವರಾದರೂ ಈ ದೇಶದಿಂದ ಕಪ್ಪು ಹಣ ಒಳಕ್ಕೆ ಮತ್ತು ಹೊರಕ್ಕೆ ಹರಿದಾಡುವುದಾದ್ರೂ ಹೇಗೆ ಎಂದು ತಲೆಕೆಡಿಸಿಕೊಂಡಿದ್ದಾರೆ. ಹೌದು! ಈ ಕಪ್ಪು ಹಣವೆನ್ನುವ ಭೂತ ಯಾವ ರೀತಿ ಅವತಾರವೆತ್ತಿ ಯಾವ ರೀತಿ ಸಂಚಾರ ಮಾಡುತ್ತದೆ ಎನ್ನುವುದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದು ಒಳ್ಳೆಯದು. ಅರಿವಿಲ್ಲದೆಯೇ ಅಮಾಯಕರು ಇದರ ಕರಾಳಾಗ್ನಿಯಲ್ಲಿ ಬೆಂದು ಹೋಗುವ ಸಾಧ್ಯತೆಗಳೂ ಇವೆಯಲ್ಲ?
ದೂರದ ದುಬೈಯಲ್ಲಿ ಒಬ್ಟಾತ ಭಾರತೀಯ ಇದ್ದಾನೆ ಎಂದಿಟ್ಟುಕೊಳ್ಳಿ. ಆತನಿಗೆ ಭಾರತದಲ್ಲಿರುವ ತನ್ನ ಮನೆಗೆ ಒಂದಷ್ಟು ದುಡ್ಡು ಕಳುಹಿಸುವುದು ಇರುತ್ತದೆ. ನೇರಾ ನೇರವಾದ ಸುಲಭದ ದಾರಿ ಎಂದರೆ, ಸೀದಾ ಅಲ್ಲಿನ ಒಂದು ಬ್ಯಾಂಕಿಗೆ ಹೋಗಿ ದುಡ್ಡು ಕಟ್ಟಿದರೆ ಅದು ಸೀದಾ ಬಂದು ಭಾರತದಲ್ಲಿರುವ ಪತ್ನಿಯ ಖಾತೆಗೆ ಬಂದು ಬೀಳುತ್ತದೆ. ಅಥವಾ ವೆಸ್ಟರ್ನ್ಯೂನಿಯನ್‌ನಂತಹ ಮನಿ ಟ್ರಾನ್ಸ್‌ಫರ್ ಕಂಪೆನಿಗಳನ್ನೂ ಸಂಪರ್ಕಿಸಬಹುದು
ಆದರೆ ಅದೆಲ್ಲಾ ಕಿರಿಕಿರಿ ಬೇಡವೆಂದು ಆತ ಅಲ್ಲೇ ಬೀದಿಬದಿಯ ಒಂದು ಸಣ್ಣ ಕುಫಿಯಾ ಅಂಗಡಿಗೆ ಕಾಲಿಡುತ್ತಾನೆ. ಅಲ್ಲಿ ಕುಳಿತಿರುವ ಹವಾಲಾ ವರ್ತಕನ ಕೈಯಲ್ಲಿ, ಮನೆಗೆ ಕಳುಹಿಸಲಿರುವ ಮೊತ್ತವನ್ನು ಇಡುತ್ತಾನೆ. ಮನೆಯ ಅಡ್ರೆಸ್, ಫೋನ್ ನಂಬರ್ ಇತ್ಯಾದಿಗಳನ್ನು ನೀಡುತ್ತಾನೆ. ಯಾವುದೇ ಪೇಪರ್ ರಶೀದಿ ಪುರಾವೆ ಏನೇನೂ ಇಲ್ಲ. ಬರೇ ಬಾಯಿಮಾತಿನಲ್ಲಿ ನಡೆಯುವ ಈ ವ್ಯವಹಾರ ಅತ್ಯಂತ ನಂಬಿಗಸ್ಥ ಹಾಗೂ ಪರಿಣಾಮಕಾರಿಯಾಗಿದೆ. ಗಿರಾಕಿ, ತನ್ನ ರೂಮಿಗೆ ಸೇರುವ ಮೊದಲೇ ಇಲ್ಲಿ ಮಂಗಳೂರಿನಲ್ಲಿರುವ ಆತನ ಪತ್ನಿಯ ಕೈಯಲ್ಲಿ ದುಡ್ಡು ರವಾನೆಯಾಗಿರುತ್ತದೆ. ಬ್ಯಾಂಕುಗಳು ನೀಡುವ ದರಕ್ಕಿಂತ ಜಾಸ್ತಿ ದರ ನೀಡುವುದಲ್ಲದೆ ಕಮಿಶನ್ ಕೂಡಾ ಕಡಿಮೆ; ಅಂದರೆ ಅದೇ ದಿರಮ್ ಮೊತ್ತಕ್ಕೆ ಜಾಸ್ತಿ ರುಪಾಯಿ ದಕ್ಕುತ್ತದೆ. ಆಲ್ ಈಸ್ ವೆಲ್ ಆದರೆ, ಅತ್ಯಂತ ಅಚ್ಚುಕಟ್ಟಾಗಿ ನಡೆಯುವ ಈ ಹವಾಲಾ ವ್ಯವಹಾರದಲ್ಲಿ ಇರುವ ಒಂದೇ ಒಂದು ಸಮಸ್ಯೆ ಏನೆಂದರೆ ಅದು 100% ಕಾನೂನುಬಾಹಿರ.
ನಂಬಿಕೆಯೇ ಇಲ್ಲಿನ ಜೀವಾಳ
ದುಬೈ ಅಥವಾ ಪ್ರಪಂಚದ ಇನ್ನಾವುದೋ ಮೂಲೆಯಲ್ಲಿ ಕುಳಿತ ಆ ವ್ಯಕ್ತಿ, ಭಾರತದ ಇನ್ನೊಂದು ಮೂಲೆಗೆ ಕಾನೂನಿನ ಕಣ್ತಪ್ಪಿಸಿ ದುಡ್ಡು ಹೇಗೆ ಕಳುಹಿಸುತ್ತಾನೆ ಎಂದಿರಾ? ಇದೇ ಹವಾಲಾ ಜಾಲದ ಶಕ್ತಿ. ಅಂತಾರಾಷ್ಟ್ರೀಯ ಬ್ಯಾಂಕಿಂಗ್ ವ್ಯವಸ್ಥೆಯಂತೆಯೇ ದೇಶ ವಿದೇಶಗಳಲ್ಲಿ ಹವಾಲಾ ಚಾಲಕರ ಒಂದು ಬೃಹತ್ ಜಾಲವೇ ಇದೆ. ಯಾವುದೇ ಕಾಗದ ಪತ್ರಗಳಿಲ್ಲದೇ ಕೇವಲ ನಂಬಿಕೆಯಿಂದ ಮಾತ್ರವೇ ನಡೆಯುವ ಜಾಲ! ಇಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿರುವಷ್ಟು ನಂಬಿಕೆ- ವಿಶ್ವಾಸಗಳು ರಿಸರ್ವ್ ಬ್ಯಾಂಕಿನ ವ್ಯವಹಾರದಲ್ಲೂ ಇರಲಾರದು. ಇದು ವಿಪರ್ಯಾಸವಾದರೂ ಸತ್ಯ.
ಅಂತಹ ನಂಬಿಗಸ್ಥ ಜಾಲದ ಒಂದು ಕೊಂಡಿ ಇಲ್ಲಿ ನಮ್ಮೂರಲ್ಲೂ ಇರುತ್ತದೆ. ದುಬೈಯ ಹವಾಲಾ ಕುಳವಾರು, ಮಂಗಳೂರಿನ ಕುಳವಾರಿಗೆ ಫೋನಾಯಿಸಿ ಇಲ್ಲಿ ದುಡ್ಡು ಬಟ್ವಾಡೆ ಮಾಡುವುದಕ್ಕೆ ನಿರ್ದೇಶಿಸುತ್ತಾನೆ. ಇದಕ್ಕೆ ಮೊಬೈಲ್ ನಂಬರ್, ಕೋಡ್ ವರ್ಡುಗಳನ್ನು ಬಳಸುವುದೂ ಇದೆ. ಇದೇ ರೀತಿ ಮಂಗಳೂರಿನಿಂದ ದುಬೈಗೂ ರವಾನೆಗಳಿರುತ್ತವೆ. ಕೊನೆಗೆ ಯಾವಾಗಾದರೊಮ್ಮೆ ಕ್ರೆಡಿಟ್/ ಡೆಬಿಟ್ ಲೆಕ್ಕಾಚಾರ ಹಾಕಿ ನಿವ್ವಳ ಮೊತ್ತದ ಪಾವತಿಯನ್ನು ಸ್ಮಗ್ಲಿಂಗ್‌ಅಥವಾ ಇನ್ನಾವುದೋ ರೀತಿಯಲ್ಲಿ ಸೆಟಲ್ ಮಾಡಿಕೊಳ್ಳುತ್ತಾರೆ. ಇದೇ ರೀತಿ ಅಮೇರಿಕಾ ಯುರೋಪು ಕಡೆ ದುಡ್ಡು ಕಳುಹಿಸಬೇಕಿದ್ದರೆ, ಕಾಳಧನದವರು ಆಶ್ರಯಿಸುವುದು ಹವಾಲಾ ಜಾಲವನ್ನೇ! ಇಲ್ಲಿನ ರಾಜಕೀಯ ಪುಢಾರಿಗಳು ಬಿಸಿನೆಸ್ ಧುರೀಣರು, ಸಿನಿಮಾ ನಿರ್ಮಾಪಕರು ಇತ್ಯಾದಿ ಇತ್ಯಾದಿ ಕಾಸುಳ್ಳ ಕುಡಿಕೆದಾರರು ದೇಶಕ್ಕೆ ದುಡ್ಡನ್ನು ಹವಾಲಾ ಮೂಲಕ ಕಳುಹಿಸುತ್ತಾರೆ. ಇವೆಲ್ಲವೂ ಕಪ್ಪುಧನವಾದ ಕಾರಣ, ಬ್ಯಾಂಕಿಂಗ್ ಜಾಲವನ್ನು ಬಳಸಿಕೊಳ್ಳುವಂತಿಲ್ಲ. ಬಹುತೇಕ ಹವಾಲ ನಡೆಯುವುದು ಹೀಗೆ.ಇದರಲ್ಲಿ ಸಂದರ್ಭಾನುಸಾರ ಅಲ್ಪಸ್ವಲ್ಪ ವ್ಯತ್ಯಾಸಗಳಿರಬಹುದು.
ನಾವೂ ಜವಾಬ್ದಾರರು…
ದೇಶದಲ್ಲಿ ಅಪಾರ ಮೊತ್ತದಲ್ಲಿ ಹರಿದಾಡುವ ಕಪ್ಪುಧನ, ಈ ದೇಶದ ಬಿಸಿನೆಸ್ ಮತ್ತು ಆರ್ಥಿಕ ವ್ಯವಸ್ಥೆಯ ಜೀವನಾಡಿ. ಇಲ್ಲಿನ ರಾಜಕೀಯ ಪಕ್ಷಗಳು, ಬಿಸಿನೆಸ್ ಮನೆತನದವರು, ಸುಪಾರಿಕೋರರು, ಗೂಂಡಾ ದುರ್ಜನರು ಹಣವನ್ನು ಅತ್ತಿತ್ತ ವರ್ಗಾಯಿಸುವುದು ಹವಾಲ ಮೂಲಕವೇ.
ಸಮಸ್ಯೆಯೇನೆಂದರೆ, ನಾಲ್ಕು ಜನರಿಗೆ ಸೌಕರ್ಯ ಉಂಟುಮಾಡುವ ಕೈಯಲ್ಲಿ ಸ್ವಲ್ಪ ಕಾಸು ಉಳಿಸುವ ಪ್ರತಿಯೊಂದು ಚಟುವಟಿಕೆಯನ್ನೂ ಅದು ಕಾನೂನು ಬಾಹಿರವಾದರೂ ಕೂಡಾ, ನಾವೆಲ್ಲ ಪ್ರೋತ್ಸಾಹಿಸುತ್ತೇವೆ. ಈ ದೇಶದಲ್ಲಿ ಲಂಚ, ಭ್ರಷ್ಟಾಚಾರ, ಕಪ್ಪುಹಣ ಈ ಪರಿಯಲ್ಲಿ ರಾರಾಜಿಸಲು ಅದರ ಬಗ್ಗೆ ಜನತೆಗೆ ಇರುವ ಆಷಾಡಭೂತಿತನವೇ ಮುಖ್ಯಕಾರಣ. ಇದು ಮುಖ್ಯ ವಿಚಾರ.
ಅದೇ ರೀತಿ ಹವಾಲ ಕೂಡಾ ಜನಸಾಮಾನ್ಯರ ಹಾಗೂ ಬಿಸಿನೆಸ್ ಧುರೀಣರ, ಭ್ರಷ್ಟರ ಪೋಷಣೆಯಿಂದ ಬೆಳೆಯುತ್ತಿದೆ. ಸ್ವಲ್ಪ ಲಾಭಕ್ಕೆ, ಸ್ವಲ್ಪ ಸೌಕರ್ಯಕ್ಕೆ, ಸ್ವಲ್ಪ ಉದಾಸೀನಕ್ಕೆ ಬಲಿಬಿದ್ದು ಅಮಾಯಕರು ಹವಾಲಾಕೋರರ ಬಾಗಿಲು ತಟ್ಟುತ್ತಾರೆ, ತಾವು ಎಂತಹ ಅಪಾಯಕಾರಿ ಜಾಲದಲ್ಲಿ ಸಿಕ್ಕಿ ಬೀಳುತ್ತಿದ್ದೇವೆ ಎನ್ನುವುದರ ಅರಿವಿರುವುದಿಲ್ಲ. ಯಾವುದೋ ಒಂದು ಸಂದರ್ಭದಲ್ಲಿ ಕಳ್ಳಸಾಗಾಣಿಕೆ- ಭಯೋತ್ಪಾದನೆ ವಿಚಾರವಾಗಿ ನಾಲ್ಕು ಹವಾಲಾಕೋರರನ್ನು ಪೋಲೀಸರು ಹಿಡಿದಾಗ ಆತನ ಅಂಗಡಿಯಲ್ಲಿ ವ್ಯವಹಾರ ಕುದುರಿಸಿದ ನೂರಾರು ಅಮಾಯಕ ಮಂದಿ ಸುಖಾಸುಮ್ಮನೆ ಸಿಕ್ಕಿಹಾಕಿಕೊಳ್ಳುತ್ತಾರೆ.
ಹೇಳಿಕೇಳಿ ಕಾನೂನುಬಾರ; ಇತ್ತೀಚೆಗಿನ ದಿನಗಳಲ್ಲಂತೂ ಭಯೋತ್ಪಾದನೆಯ ಜೊತೆಗೆ ನಿಕಟವಾಗಿ ಬೆಸೆದುಕೊಂಡಿರುವ ಈ ವ್ಯವಹಾರ, ಕೆಲವು ನೂರು ಸಾವಿರದ ವರ್ಗಾವಣೆಗಾಗಿ ಹವಾಲ ಬಳಸಿ ಹವಾಲಾತ್‌ನ ಹವಾ ಸೇವಿಸುವ ದುರಾದೃಷ್ಟ ನಮ್ಮ ಪಾಲಾಗಬಾರದಲ್ಲ? ನೆನಪಿರಲಿ, ಕಾನೂನಿನ ಕೈಯಲ್ಲಿ ಯಾವತ್ತೂ ಸಿಕ್ಕಿ ಬೀಳುವುದು ನಾಲ್ಕಾಣೆ ಕದ್ದ ಅಮಾಯಕನೇ ಹೊರತು, ಕೋಟ್ಯಂತರ ದೋಚಿದ ಖಳನಾಯಕನಲ್ಲ!
– ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.