ಹೊಳೆ ದಂಡೆಯ ಹಳೆ ನೆನಪುಗಳನ್ನು ಜೀಕುತ್ತಾ…


Team Udayavani, May 7, 2018, 12:45 PM IST

hole-dande.jpg

“ಈಜು ಬರುತ್ತದೆಯೇ?’ ಮಕ್ಕಳ ಜೊತೆಗೆ ಮಾತಾಡುವಾಗ ಹಿರಿಯರು ಕೇಳುತ್ತಿದ್ದರು. ಈಜು ಕಲಿಯುವುದನ್ನೇ ನೆಪಮಾಡಿಕೊಂಡು ರಜಾದಿನಗಳಲ್ಲಿ  ಹೊಳೆದಂಡೆ ಹತ್ತಿರವಿರುವ ನೆಂಟರ ಮನೆಗೆ ಮಕ್ಕಳು ಹೋಗುತ್ತಿದ್ದರು. 30-40 ವರ್ಷಗಳ ಹಿಂದೆ  ಉರಿ ಬಿಸಿಲ ಬೇಸಿಗೆಯ ಏಪ್ರಿಲ್‌- ಮೇ ತಿಂಗಳಿನಲ್ಲಿ ಈಜುಕಲಿಯಲು ನಮ್ಮ ಹಳ್ಳಗಳು ಆಶ್ರಯ ನೀಡಿದ್ದವು.  ಇಂದು, ಜನವರಿಯಲ್ಲೇ ನೀರು ಒಣಗಿ ಬರಿದಾಗುವ ಈ ಹಳ್ಳದ ಒಡಲಲ್ಲಿ ಸಾವಿರಾರು ಅಡಿ ಆಳಕ್ಕೆ ಕೊಳವೆ ಬಾವಿ ಕೊರೆಯಲಾಗಿದೆ. ನೀರ ನೆನಪಿನ ನಮ್ಮ ಬಾಲ್ಯವನ್ನೊಮ್ಮೆ ನೆನಪಿಸಿಕೊಂಡು ಇಂದಿನ ಪರಿಸ್ಥಿತಿ ನೋಡಿದರೆ ಆತಂಕವಾಗುತ್ತದೆ.  

ಹೊಳೆದಂಡೆಗೂ, ಹಳ್ಳಿ ಬದುಕಿಗೂ  ಅನ್ಯೋನ್ಯ ಸಂಬಂಧವಿದೆ. ಬೇಸಿಗೆಯ ರಜಾ ದಿನಗಳಲ್ಲಿ ಮಲೆನಾಡಿನ ಮಕ್ಕಳೆಲ್ಲ  ಜಲಚರ ಜೀವಿಗಳು. ನೀರಿನಾಟದ ಖುಷಿಯ ಕ್ಷಣಗಳಿಗೆ ಬಾಲ್ಯ ಮೀಸಲು. ಕುಂಟುನೇರಳೆ ಎಲೆಯ “ಪೀಪಿ’ ಊದುತ್ತ ಗದ್ದೆಯ ಬದುವಿನಲ್ಲಿ ಹತ್ತಾರು ಮಕ್ಕಳು ಓಡುತ್ತ ಸಾಗಿದರೆ ಪಯಣ ಹಳ್ಳಕ್ಕೆ ನಿಲ್ಲುತ್ತಿತ್ತು.  ಮಾವಿನ ಎಲೆಯಲ್ಲಿ  ಹಲ್ಲು  ಉಜ್ಜುವುದು, ಸೀಗೆಯಲ್ಲಿ ಮೈ ತಿಕ್ಕಿಕೊಳ್ಳುತ್ತ,  ಈಜುತ್ತ  ಮೈ ಮರೆಯುವುದು ಕಾಲಯೋಗ. ಹುಳಿಮಾವಿನಕಾಯಿ, ಹೊಳೆದಾಸವಾಳದ ಹಣ್ಣು, ಮುರುಗಲು ಹಣ್ಣು, ಸಂಪಿಗೆ ಹಣ್ಣು, ಸಳ್ಳೆ ಹಣ್ಣು, ಕವಳಿ ಹಣ್ಣು ತಿನ್ನುತ್ತ  ನಡೆಯುವ ನಿಸರ್ಗ ಕಲಿಕೆಗೆ ಹಳ್ಳದ ನೀರು ಮುಖ್ಯ ಆಧಾರ.

ಹಿರಿಯರ ಕಣ್ಗಾವಲಲ್ಲಿ  ಈಜು  ತರಬೇತಿ. ಬಂಡೆಯ ಮೇಲಿಂದ ನೀರಿಗೆ ದುಮ್ಮಿಕ್ಕಿ ಮುಳುಗೇಳುವ ಸಾಹಸ ಹಳ್ಳ ಕೊಳ್ಳಗಳ ಬದುಕಿನ ಪಾಠ. ಮಿಂಚುಳ್ಳಿ, ಕಾಜಾಣ, ಕಾಡುಕೋಳಿಗಳೆಲ್ಲ ಆಡುತ್ತ ಹಾಡುತ್ತ ನದಿ ತೊಟ್ಟಿಲಲ್ಲಿ ಬಾಲ್ಯ ಬೆಳೆಯಿತು. ನೆನಪುಗಳು ನೂರೆಂಟು….ಅಡುಗೆ ಮನೆಯ ಜಿರಲೆ ಓಡಿಸಲು ಮುಂಡಿಗೆ ಕಾಯಿ ತಂದಿದ್ದೇವೆ. ಕರಾವಳಿ ಮಹಿಳೆಯರು ನದಿ ದಂಡೆಯ ಇದೇ ಸಸ್ಯದಲ್ಲಿ ಮಲಗುವ ಚಾಪೆ ಹೆಣೆದಿದ್ದಾರೆ. ತೇಲುವ ಬನಾಟೆ ಹೂಗಳು, ನದಿಗೆ ಕವಚಿದ ಸೀಗೆ ಬಳ್ಳಿಗಳು, ದಾಲಿcನ್ನಿಯ ಎಲೆ ತಿಂದ ಸಿಹಿಯ ಘಮಘಮ ನೆನಪಿದೆ.

ಹೊಳೆಗೇರು ಮರ ಕಡಿಯಲು ಹೋಗಿ ಮೈಸುಟ್ಟುಕೊಂಡಿದ್ದು ಕಾಡು ಕಲಿಕೆಯ ಕಾಲ. ಶಾಲೆಗೆ ಹೋಗುವಾಗ, ಪಕ್ಕದ ಗುಡ್ಡ ಏರುವಾಗ, ತೋಟ ಸುತ್ತುವಾಗೆಲ್ಲ ಹಳ್ಳ ದಾಟಬೇಕು. ಕಾಲು ಸಂಕದಲ್ಲಿ ಸರ್ಕಸ್‌ ನಡಿಗೆ, ಕೆಳಗಡೆಯ  ಆಳದ ಪ್ರಪಾತ ನೋಡಿದರೆ ಭಯಾಘಾತ. ನೀರಿಗೆ ಭಯ ಪಟ್ಟರೆ ಊರಲ್ಲಿ ಬದುಕಿಲ್ಲ, ಈಜು ಬಲ್ಲವರಿಗೆ ಮಾತ್ರ ಏಳುವ ಧೈರ್ಯ. ಎರಡು ಮೂರನೇ ಇಯತ್ತೆ ಓದುವ ಕಾಲಕ್ಕೆ  ಮಕ್ಕಳೆಲ್ಲ  ಈಜಿನಲ್ಲಿ  ಶೇಕಡಾ ನೂರರಷ್ಟು ಪಾಸು. ತೇಲುವುದು, ಮುಳುಗುತ್ತ ಈಜುವುದು, ಎತ್ತರದಿಂದ ಜಿಗಿದು  ಗೆಲ್ಲುವ ಜೀವನ ಪಾಠ.

ಹೊಳೆದಂಡೆಯ ಚಪ್ಪಟೆಯ ಪುಟ್ಟ ಕಲ್ಲು ಎತ್ತಿ “ಕಪ್ಪೆ ಕಲ್ಲು’ ಎಸೆಯುವುದು ಚಾಣಾಕ್ಷ್ಯ ವಿದ್ಯೆ. ಬಣ್ಣ ಬಣ್ಣದ ಹಿಟ್ಟು ಕಲ್ಲು ತೇಯ್ದು, ಮೈಯ್ಗೆ ಬಳಿದುಕೊಂಡರೆ ಬದುಕು ಬಣ್ಣದ ಲೋಕ. ಕುಂಟ ನೇರಳೆಯ ಸೊಪ್ಪು ಮೈಗೆ ಕಟ್ಟಿಕೊಳ್ಳುವುದು,  ಕಾಕೆರೊಟ್ಟಿನ ( ಪರಾವಲಂಬಿ ಸಸ್ಯ) ಎಲೆ ಕೀರಿಟವಾಗಿ ತಲೆಗೇರಿದರೆ ಯಕ್ಷಗಾನ ಶುರು. ಅರ್ಜುನ, ಭೀಮ, ಶ್ರೀಕೃಷ್ಣನಾಗಿ ಕುಣಿತ. ಬಿದಿರು ಗಳುವೇ ಚಂಡೆ ಮೃದಂಗವಾಗುತ್ತಿತ್ತು. ಕುಣಿದು ಕುಪ್ಪಳಿಸಿ ಬೆವರಿಳಿದು ಮತ್ತೆ ನೀರಿಗಿಳಿದರೆ ಅದು ಕಾಸಿಗೆ ಸಿಗದ ಖುಷಿಯ ಕ್ಷಣಗಳು.

ವಾಟೆ ಗಳದ ಕೊಳಲು ತಯಾರಿಸಿ ಹೊಳೆದಂಡೆಯ ಕಲ್ಲಿನಲ್ಲಿ ಊದುತ್ತ ಕುಳಿತರೆ ಸ್ವರ್ಗ ಸರಿಯಾಗಿ ಮೂರೇ ಗೇಣು. ಕರಾವಳಿಯ ಮಕ್ಕಳು ಈಜಿನ ವಿಚಾರದಲ್ಲಿ ಇನ್ನೂ ನಿಸ್ಸೀಮರು. ಅವರು ಆಳ ನದಿ  ನೀರಿನ ಭಯ ಮರೆಯಬೇಕು. ದೋಣಿ ನಡೆಸಲು ಕಲಿಯಬೇಕು. ನೀರಿಗೆ ಹೆದರುವವರು ಊರಲ್ಲಿ  ಬದುಕಲು ಸಾಧ್ಯವಿಲ್ಲ. ಉತ್ತರ ಕನ್ನಡದ ಮೊರೆ ಊರಿಗೆ 16 ವರ್ಷಗಳ ಹಿಂದೆ ಹೋಗಿದ್ದೆ. ಸುಮಾರು 300 ಅಡಿ ವಿಸ್ತಾರಕ್ಕೆ ಹರಿಯುವ ಅಘನಾಶಿನಿ ನದಿಯನ್ನು ಆಚೀಚೆ ಓಲಾಡುವ ಪಾತಿ ದೋಣಿಯಲ್ಲಿ ದಾಟಬೇಕಿತ್ತು. ನದಿ ದಂಡೆಯ ಸನಿಹದಲ್ಲಿ ಯಾರ ವಸತಿಯೂ ಇಲ್ಲ.

ನದಿ ದಾಟುವ ಅನುಕೂಲಕ್ಕೆ  ಒಂದು ದೋಣಿಯೇನೋ ಇತ್ತು. ಆದರೆ ಊರಿನ ಜನರೆಲ್ಲ ದೋಣಿ ನಡೆಸುವ ಪರಿಣಿತರಾದ್ದರಿಂದ  ಆ ದೋಣಿ  ದಾಟಿದವರ ಸಂಗಡವೇ  ಒಂದೊಂದು ದಡ ಸೇರಿ ನಿಲ್ಲುತ್ತಿತ್ತು. ಈಚೆ ದಡದಲ್ಲಿದ್ದವರು ಆಚೆ ದಡದ ದೋಣಿ ಪಡೆಯುವುದು ಸುಲಭವಲ್ಲ. ಕಿಲೋ ಮೀಟರ್‌ ದೂರದ ಮನೆಯ  ಯಾರಾದರೂ ಬಂದು ದೋಣಿ ತರಬೇಕು. ಅಲ್ಲಿನ ರಸ್ತೆಯಂಚಿನ ಬೆಳ್ಳಣ್ಣನ ಅಂಗಡಿಯಲ್ಲಿ ಯಾವತ್ತೂ ಗರ್‍ನಾಲ್‌(ಪಟಾಕಿ) ಸಿಗುತ್ತಿತ್ತು. ಹೊಳೆ ದಂಡೆಗೆ ಹೋಗಿ ಒಂದು ಗರ್‍ನಾಲ್‌ ಸಿಡಿಸಿದರೆ  ಸಪ್ಪಳ ಮರೆಹಳ್ಳಿಗೆ ಕೇಳುತ್ತಿತ್ತು.

ಆ ಸಪ್ಪಳ ಕೇಳಿದವರು ಹೊಳೆ ದಂಡೆಯಲ್ಲಿ ಯಾರೋ ದೋಣಿಗಾಗಿ ಕಾಯುತ್ತಿದ್ದಾರೆಂದು ತಿಳಿದು ದೋಣಿ ದಡಕ್ಕೆ ತಂದು ನೆರವಾಗುತ್ತಿದ್ದರು. ಶಾಲೆಗೆ ಹೋಗುವ ಮಕ್ಕಳು, ಮಹಿಳೆಯರೆಲ್ಲ ಅಲ್ಲಿ ದೋಣಿ ನಡೆಸುವ ಪರಿಣಿತರಾಗಿದ್ದರು. ಈ ಊರಿನ ಶಾಲೆಗೆ ಒಮ್ಮೆ ಹೊಸ ಮೇಷ್ಟ್ರು ಬಂದರು. ಅವರು ಯಾವತ್ತೂ ನದಿ ಕಂಡವರಲ್ಲ. ನೀರೆಂದರೆ ಭಯ. ಶಾಲೆ ಮುಗಿಸಿ ಮನೆಗೆ ಹೊರಟರೆ ದೋಣಿ ನಡೆಸಲಾಗದ ಮೇಷ್ಟ್ರು ಒಮ್ಮೊಮ್ಮೆ ರಾತ್ರಿವರೆಗೂ ದಂಡೆಯಲ್ಲಿ ಕಾಯುತ್ತ ಕುಳಿತ ಪ್ರಸಂಗಗಳಿದ್ದವು. ಕಟ್ಟಕಡೆಗೆ ಕಾಡುಕಷ್ಟ ಮೇಷ್ಟ್ರಿಗೂ ವಿದ್ಯೆ ಕಲಿಸಿತು.

ಮುಂದಿನ ಎರಡು ಮೂರು ತಿಂಗಳಲ್ಲಿ ಅವರು ಸ್ವತಃ ದೋಣಿ ಬಿಡಲು ಕಲಿತರು. ಎಲ್ಲರ ಜೀವನ ಪಾಠಗಳು ನದಿದಂಡೆಯಲ್ಲಿ ಶುರುವಾಗುತ್ತಿದ್ದವು. ಮುಳುಗೇಳುತ್ತ ಬದುಕುವುದರಲ್ಲಿ ಖುಷಿ ಇತ್ತು. “ಈಜು ಬರುತ್ತದೆಯೇ?’ನಮ್ಮ ಹಳ್ಳಿಗಳಲ್ಲಿ ಮಕ್ಕಳ ಜೊತೆಗೆ ಮಾತಾಡುವಾಗ 30 ವರ್ಷಗಳ ಹಿಂದೆ ಹಿರಿಯರು ಕೇಳುತ್ತಿದ್ದರು. ಯಾವ ಮಕ್ಕಳಿಗೆ ಈಜು ಬರುವದಿಲ್ಲವೋ ಅವರ ಮನೆಯ ಸನಿಹದಲ್ಲಿ ಹಳ್ಳ, ಹೊಳೆಗಳಿಲ್ಲವೆಂದು ಅರ್ಥೈಸಬಹುದಿತ್ತು. ಅಂಥ ಮಕ್ಕಳು ಈಜು ಕಲಿಯುವುದನ್ನೇ ನೆಪಮಾಡಿಕೊಂಡು ರಜಾ ದಿನಗಳಲ್ಲಿ ಹೊಳೆದಂಡೆ ಹತ್ತಿರವಿರುವ ನೆಂಟರ ಮನೆಗೆ ಹೋಗುತ್ತಿದ್ದರು. 

ಹತ್ತಾರು ಮಕ್ಕಳು ತಂಡ ಕಟ್ಟಿಕೊಂಡು ನೀರಿನ ಭಯ ಮರೆತು ಕಲಿಯುತ್ತಿದ್ದರು. ಆ ಕಾಲಕ್ಕೆ ಈಜುವುದರಿಂದ ವ್ಯಾಯಾಮ ದೊರೆಯುತ್ತದೆ ಎಂಬುದಕ್ಕಿಂತ ಸಮಯ ಕಳೆಯಲು ಉರಿಬಿಸಿಲಿನ ಒಳ್ಳೆಯ ಆಟವಾಗಿತ್ತು. ಹಿರಿಯರಿಗೆ ಮಕ್ಕಳನ್ನು ಹೊಳೆಗೆ ಕಳಿಸಿಲು ಭಯವಿರಲಿಲ್ಲ. ಮನೆಯಲ್ಲಿ ಇಲ್ಲಸಲ್ಲದ ಕಿಲಾಡಿ ಮಾಡುವುದಕ್ಕಿಂತ ನೀರಲ್ಲಿರುವುದು ಲಾಯಕ್ಕೆಂದು ಅವರು ಭಾವಿಸಿದ್ದರು. ಗುಡ್ಡಬೆಟ್ಟಗಳಲ್ಲಿ ದನಕರು ಮೇಯಿಸಿಕೊಂಡು ಮಧ್ಯಾಹ್ನ ನದಿ ದಂಡೆಗೆ ಬರುವುದು ಅಕ್ಕರೆಯ ಕಾಯಕವಾಗಿತ್ತು. ನೀರಿಗಿಳಿಯುವ ಹೊಸ ಹುಡುಗರು ಎಮ್ಮೆಗಳ ಬೆನ್ನೇರಿ ಬಚಾವಾಗುತ್ತಿದ್ದರು.

ಧೂಳಿನಲ್ಲಿ ಅಡ್ಡಾಡಿ, ಬಿಸಿಲಲ್ಲಿ ಕುಣಿದಾಡುವ ನಮ್ಮ ಕಾಲಿಗೆ ಕಲ್ಲು ಮುಳ್ಳಿನ ಗಾಯ ಕಾಯಂ. ಅದು ಮಲೆನಾಡ ಮಕ್ಕಳ ಟ್ರೇಡ್‌ ಮಾರ್ಕ್‌! ಕಜ್ಜಿ ರಸಿಗೆಯಾಗಿ ಹರಿಯುವಾಗ ನಾವು ಹಳ್ಳದಲ್ಲಿ ಹರಿವ ನೀರಿಗೆ ಕಾಲಿಟ್ಟು ಕುಳಿತವರು. ಆಗ ಮೀನುಗಳು ಡಾಕ್ಟರ್‌ ಆಗಿ ಗಾಯ ಕಚ್ಚಿ ತಿನ್ನುತ್ತ ಸ್ವತ್ಛಗೊಳಿಸಿವೆ! ಹಳ್ಳದಲ್ಲಿ ಯಾವೆಲ್ಲ ಮೀನುಗಳಿದ್ದವು? ವಾಟೆ ಬಿದಿರಿನ ಗಾಳದಲ್ಲಿ ಮೀನು ಹಿಡಿಯುತ್ತಿದ್ದ ವಾರಿಗೆಯ ಮಂದಿ ಮಗ್ಗಿಗಿಂತ ವೇಗವಾಗಿ ಮೀನು ಜಾತಿ ವಿವರಿಸುತ್ತಿದ್ದರು. ಈಗ ನಡೆದಂಡೆಯ ವಾರಿಗೆಯ ಗೆಳೆಯರೆಲ್ಲ ನಗರಕ್ಕೆ ಕೂಲಿಗಳಾಗಿ ವಲಸೆ ಹೋಗಿದ್ದಾರೆ. ನದಿಯಂತೆ ನೆನಪುಗಳು ಒಣಗುತ್ತಿವೆ.

ಬಾಲ್ಯದ ಆಪ್ತ ಗೆಳೆಯನಂತಿದ್ದ ನದಿ, ಹಳ್ಳಗಳು ಈಗ ಮುನಿಸಿಕೊಂಡಿವೆ. ನದಿ ಕಣಿವೆಯ ಇಕ್ಕೆಲಗಳಲ್ಲಿ ಅಡಿಕೆ, ಬಾಳೆ, ತೆಂಗಿನ ತೋಟಗಳು ಬೆಳೆದಿವೆ. ನದಿ ನೀರಿಗೆ ಪಂಪ್‌ ಜೋಡಿಸಿ ನೀರೆತ್ತುವ ಆರ್ಭಟಕ್ಕೆ ಹಳ್ಳಗಳು ಒಣಗುತ್ತಿವೆ. 30-40 ವರ್ಷಗಳ ಹಿಂದೆ  ಉರಿ ಬಿಸಿಲ ಬೇಸಿಗೆಯ ಏಪ್ರಿಲ್‌- ಮೇನಲ್ಲಿ ನಮಗೆ ಈಜು ಕಲಿಯಲು ಆಶ್ರಯ ನೀಡಿದ್ದ ನೆಲೆಯಲ್ಲಿ ಇಂದು ಜನವರಿಗೇ ನೀರು ಒಣಗುತ್ತಿದೆ. ಕಲ್ಲು ಬಂಡೆ ಬಿಟ್ಟರೆ ಬೇರೆ ಏನೂ ಉಳಿದಿಲ್ಲ. ನದಿ ದೇಹ ಪ್ರಖರ ಬಿಸಿಲಿಗೆ ಮೈಯೊಡ್ಡಿ ಮಲಗಿದೆ. ಹೊಳೆದಂಡೆಯ ಸಸ್ಯ ಸಂತತಿ ಕಣ್ಮರೆಯಾಗಿವೆ. ಗುಡ್ಡಗಳಲ್ಲಿ ಅಕೇಶಿಯಾ ನೆಡುತೋಪು ಬೆಳೆದು, ಹುಟ್ಟಿ ಬೆಳೆದ ಪರಿಸರವೇ ಪರಕೀಯವೆನಿಸುತ್ತಿದೆ.

ಹಳ್ಳ, ನದಿ ಒಣಗಿದ ಬಳಿಕ ತೋಟ ಉಳಿಸಲು ಹೊಳೆ ದಂಡೆಗಳಲ್ಲಿ ಕೊಳವೆ ಬಾವಿ ಕೊರೆಯಲಾಗುತ್ತಿದೆ. ಇದು ಮುಂದೆ ಏಲ್ಲಿಗೆ ಮುಟ್ಟುತ್ತದೋ ಗೊತ್ತಿಲ್ಲ. ಸದಾ ಜಾಗಟೆ, ಮಂತ್ರಘೋಷಗಳ ಸದ್ದಿರುತ್ತಿದ್ದ ಶ್ರದ್ಧಾ ದೇಗುಲದಲ್ಲಿ ದೇವರು ನಾಪತ್ತೆಯಾದಂತೆ,  ಚಿಲಿಪಿಲಿ ಪುಟಾಣಿಗಳು ಆಟ ಪಾಠದಲ್ಲಿ ಸಂಭ್ರಮಿಸುತ್ತಿದ್ದ ಶಾಲೆಗೆ ಇದ್ದಕ್ಕಿದ್ದಂತೆ ಬೀಗ ಬಿದ್ದಂತೆ ಹಳ್ಳಿ ಹಸಿರಿನ ಜೀವ ಭಾಗವಾದ ಹಳ್ಳಗಳು ಸ್ತಬ್ದಗೊಂಡಿವೆ. ನಮ್ಮ ನಿಸರ್ಗ ಶಾಲೆಯ ಮಡಿಲಲ್ಲಿ ಕಲ್ಲು, ಮರಳು, ಮರ ಕಳ್ಳರು ಅಂಗಡಿ ತೆಗೆದಿದ್ದಾರೆ. ಹವಾಮಾನ ವೈಪರಿತ್ಯ, ಬರಗಾಲದ ಮೂಲ ಪ್ರಶ್ನೆಗಳು ಇಲ್ಲಿ ಮೊಳೆಯುತ್ತಿವೆ.  ಬಾಲ್ಯದ ಬೆರಗಿನ ಚಿತ್ರಗಳನ್ನು ನೆನಪಿನ ಪುಟದಲ್ಲಿ ಎತ್ತಿಡಲು ಹೋದರೆ ಹಳ್ಳವೂ ನೀರು ಕೇಳುತ್ತಿದೆ. ಹಳ್ಳಿ ಹಳ್ಳಕ್ಕೆ ಮರುಬಣ್ಣ ತುಂಬುವುದು ಸಾಧ್ಯವೇ?  

ಮುಂದಿನ ಭಾಗ: ಅಘನಾಶಿನಿಯ ಜೀವಜಗತ್ತು.

* ಶಿವಾನಂದ ಕಳವೆ

ಟಾಪ್ ನ್ಯೂಸ್

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Archana, abhishekam in ancestral village for Kamala’s victory!

US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.