ಸೋರೆ ಬೆಳೆದವನೇ ಸಿರಿವಂತ
Team Udayavani, Oct 8, 2018, 6:00 AM IST
ಸೋರೆಕಾಯಿ ಬೆಳೆಯಲು ಪ್ರತ್ಯೇಕ ಸಾಲುಗಳೇ ಆಗಬೇಕೆಂದಿಲ್ಲ. ಬದನೆಯಂಥ ಇತರ ತರಕಾರಿಗಳ ಸಾಲುಗಳ ನಡುವೆ, ತೆಂಗಿನಮರದ ಬುಡದಲ್ಲಿಯೂ ಬೆಳೆಯಬಹುದು. ಬಳ್ಳಿಗಳಿಗೆ ಆಧಾರದ ಅಗತ್ಯವಿಲ್ಲ, ನೆಲದಲ್ಲಿ ಹರಡಿಕೊಂಡು ಕಾಯಿ ಕೊಡುತ್ತವೆ.
“ಕರಾವಳಿಯಲ್ಲಿ ಸೋರೆಕಾಯಿಗಿಂತ ಸರಳ ಕೃಷಿ ವಿಧಾನಕ್ಕೆ ಒಗ್ಗುವ ತರಕಾರಿ ಬೆಳೆ ಇನ್ನೊಂದಿಲ್ಲ. ಬೇಸಿಗೆ ಮತ್ತು ಮಳೆಗಾಲ ಈ ಎರಡೂ ಸಮಯದಲ್ಲಿಯೂ ಸೋರೆಕಾಯಿ ಬೆಳೆಯಬಹುದು.ಇದಕ್ಕೆ ಕ್ರಿಮಿಕೀಟಗಳು, ಕೋತಿ, ದನಗಳ ಕಾಟ ಇಲ್ಲ. ರೋಗ ಬರುವುದಿಲ್ಲ. ಕಾಯಿಗೆ ಬೇಡಿಕೆ ತಪ್ಪುವುದಿಲ್ಲ’ - ಇದು ಪ್ರತಿ ವರ್ಷವೂ ಸೋರೆ ಕೃಷಿ ಮಾಡಿಕೊಂಡು ಬಂದಿರುವ ಸಾಂತಪ್ಪ ನಾಯ್ಕರ ಅವರ ಹದಿನೈದು ವರ್ಷಗಳ ಅನುಭವದ ಮಾತು.
ಬದನೆ, ಮೆಣಸು, ಹಾಲುಬೆಂಡೆ ಮೊದಲಾದ ತರಕಾರಿಗಳನ್ನು ಬೆಳೆಯುತ್ತಿದ್ದರೂ, ಅವರು ಸೋರೆಯ ಬೆಳೆ ಮಾಡುವುದನ್ನು ಬಿಡುವುದಿಲ್ಲ. ಕಾರಣ, ಅದರಷ್ಟು ಆರೋಗ್ಯಕರವಾದ ಆಹಾರ ಮತ್ತು ಔಷಧೀಯ ಗುಣ ಇರುವ ಯಾವುದೇ ಕಾಯಿಪಲ್ಲೆಯೂ ಇಲ್ಲ. ಹೀಗಾಗಿ, ಬೆಳ್ತಂಗಡಿ ತಾಲೂಕಿನ ಕಂಡಿಗದಲ್ಲಿರುವ ಸಾಂತಪ್ಪ ಅವರ ತೋಟವನ್ನು ಹುಡುಕಿಕೊಂಡು ಬರುತ್ತಾರಂತೆ.
ಬೀಜ ಸಂರಕ್ಷಣೆ ಕಷ್ಟವೇನಲ್ಲ.ಬಲಿತು ಒಣಗುವ ತನಕ ಕಾಯಿಯನ್ನು ಅದರ ಬಳ್ಳಿಯಲ್ಲೇ ಬಿಟ್ಟು ಒಣಗಿದ ಬಳಿಕ ಮನೆಗೆ ತಂದಿಟ್ಟರಾಯಿತು. ಬೇಕಾದಾಗ ಇದರೊಳಗಿಂದ ಬೀಜ ತೆಗೆಯಬಹುದು. ಸುಭದ್ರವಾಗಿ ಒಳಗಿರುವ ಬೀಜಗಳನ್ನು, ಕೀಟಗಳು, ಇಲಿಗಳು ತಿನ್ನುವ ಆತಂಕವಿಲ್ಲ. ಬೀಜ ತೆಗೆದ ಬಳಿಕ ಉಳಿಯುವ ಅದರ ಬುರುಡೆಯೊಳಗೆ ಬೇರೆ ತರಕಾರಿಗಳ ಬೀಜಗಳನ್ನೂ ಸುರಕ್ಷಿತವಾಗಿ ಇರಿಸಬಹುದು ಎನ್ನುತ್ತಾರೆ ಸಾಂತಪ್ಪ ನಾಯ್ಕರು.
ಸೋರೆಯ ಒಂದು ಬಳ್ಳಿ ಇದ್ದರೂ ಸಾಕು. ಅದರ ಪ್ರತಿ ಎಲೆಗೆ ಒಂದರಂತೆ ಸೋರೆಕಾಯಿಗಳಾಗುತ್ತವೆ. ನಾನು ಬೆಳೆಯುವುದು ನಾಲ್ಕು ಬಳ್ಳಿ. ಇದರಲ್ಲಿ ಐದರಿಂದ ಹತ್ತು ಸಾವಿರದ ತನಕ ಆದಾಯ ತಂದುಕೊಡುವಷ್ಟು ಕಾಯಿಗಳು ಸಿಗುತ್ತವೆ. ನಾಲ್ಕು ತಿಂಗಳ ವರೆಗೆ ಸಮೃದ್ಧ ಫಸಲು ಕೊಡುವ ಕಲ್ಪತರು ಇದೆಂಬುದು ಸಾಂತಪ್ಪರ ಮಾತು. ಸೋರೆಕಾಯಿ ಬೆಳೆಯಲು ಪ್ರತ್ಯೇಕ ಸಾಲುಗಳೇ ಆಗಬೇಕೆಂದಿಲ್ಲ.
ಬದನೆಯಂಥ ಇತರ ತರಕಾರಿಗಳ ಸಾಲುಗಳ ನಡುವೆ, ತೆಂಗಿನಮರದ ಬುಡದಲ್ಲಿಯೂ ಬೆಳೆಯಬಹುದು. ಬಳ್ಳಿಗಳಿಗೆ ಆಧಾರದ ಅಗತ್ಯವಿಲ್ಲ, ನೆಲದಲ್ಲಿ ಹರಡಿಕೊಂಡು ಕಾಯಿ ಕೊಡುತ್ತವೆ. ಸಾಂತಪ್ಪರ ಮನೆಯಲ್ಲಿ ನಾಲ್ಕಾರು ಸುಧಾರಿತ ತಳಿಯ ಹಸುಗಳಿವೆ. ಹೈನುಗಾರಿಕೆ ಇದೆ, ಗೋಬರ್ ಸ್ಥಾವರವಿದೆ. ಗೋಬರ್ ಬಗ್ಗಡವನ್ನು ಧಾರಾಳವಾಗಿ ಸೋರೆಬಳ್ಳಿಯ ಬುಡಕ್ಕೆ ವಾರಕ್ಕೊಂದು ಸಲ ಹನಿಸಿದರೆ ಸಾಕು, ಯಾವುದೇ ರಾಸಾಯನಿಕ ಗೊಬ್ಬರ ಅಗತ್ಯವಿಲ್ಲವಂತೆ.
ಒಂದು ತಿಂಗಳಾಗುವಾಗ ಸೋರೆ ಬಳ್ಳಿಯ ಹೂ ಬಿಡ ತೊಡಗುತ್ತದೆ. ಎರಡು ದಿನಕ್ಕೊಮ್ಮೆ ಬುಡ ನೆನೆಯುವಷ್ಟು ನೀರು ಬೇಸಿಗೆ ಕಾಲದಲ್ಲಿ ಬೇಕು. ಒಂದೂವರೆ ತಿಂಗಳಿನಿಂದ ಕಾಯಿ ಕೊಯ್ಯಲು ಆರಂಭ. ಮೊದಲಿಗೆ ಮೂರರಿಂದ ನಾಲ್ಕು ಕಿ.ಲೋ ತನಕ ತೂಕವಿರುವ ಕಾಯಿಗಳು ದೊರಕುತ್ತವೆ. ಅನಂತರ ಕಾಯಿಗಳು ಸಣ್ಣದಾಗುತ್ತವಾದರೂ ಬಳ್ಳಿ ಹಳತಾಗುತ್ತ ಹೋದಂತೆ ನೀಡುವ ಗೊಬ್ಬರದ ಪ್ರಮಾಣವನ್ನು ಹೆಚ್ಚಿಸುವುದರಿಂದ ಅದೇ ತೂಕದ ಕಾಯಿಗಳನ್ನು ಪಡೆಯಬಹುದು ಅನ್ನುತ್ತಾರೆ ಸಾಂತಪ್ಪ.
ಹಳದಿ ಕಾಮಾಲೆಯಾದವರಿಗೆ ಸೋರೆಕಾಯಿಯ ಹೋಳುಗಳನ್ನು ಅಕ್ಕಿಯೊಂದಿಗೆ ಬೇಯಿಸಿ, ಉಪ್ಪು ಹಾಕದೆ ಅದರ ಗಂಜಿಯನ್ನು ಸೇವಿಸಿದÃ ಕಾಯಿಲೆ ಗುಣವಾಗುತ್ತದಂತೆ. ಸೋರೆ, ಔಷಧರೂಪದ ಆಹಾರವಾದುದರಿಂದ ಸಾವಯವದಲ್ಲೇ ಬೆಳೆದಿರುವ ಸಾಂತಪ್ಪರ ಸೋರೆಕಾಯಿಗೆ ಗ್ರಾಹಕರು ಹೆಚ್ಚು. ಸಾಧಾರಣವಾಗಿ ಅವರು ಬೆಳೆಯುವ ಸೋರೆ, ಕಿಲೋಗೆ ಇಪ್ಪತ್ತು ರೂ.ಗೆ ಮಾರಾಟವಾಗುತ್ತದೆ.
ಬೇಡಿಕೆ ಹೆಚ್ಚಿದಾಗ ಅದು ಮೂವತ್ತರ ತನಕ ಹೋಗುವುದುಂಟು. ಒಂದು ಸೋರೆಕಾಯಿಗೆ ಕೆಲವೊಮ್ಮೆ ನೂರು ರೂ. ಬೆಲೆಯ ಬಂದುದುಂಟು ಎನ್ನುತ್ತಾರೆ ಈ ಬೆಳೆಗಾರರು. ಇದರ ಕೃಷಿಗೆ ಆರೈಕೆ ಕಡಿಮೆ. ಬಾಧೆಗಳು ವಿರಳ. ಕಾಯಿಗಳಿಂದ ಪಲ್ಯ, ಸಾಂಬಾರು, ಪಾಯಸ, ಹಲ್ವ, ಕಡುಬು ಮುಂತಾದ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಬಹುದು. ಹಿತ್ತಲಿನಲ್ಲಿಯೂ ಬೆಳೆದು ಕೈತುಂಬ ಲಾಭ ಗಳಿಸಲು ನೆರವಾಗುವ ಏಕೈಕ ತರಕಾರಿ ಇದು ಎಂಬುದು ಸಾಂತಪ್ಪರ ಹೇಳಿಕೆ.
* ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.