ಕೆಂಪಾದವೋ ಅಕ್ಕಿ ಕೆಂಪಾದವೋ…
Team Udayavani, Dec 16, 2019, 6:03 AM IST
ಜಾನುವಾರುಗಳಿಗೆ ಒಳ್ಳೆ ಮೇವು, ರೋಗ ನಿರೋಧಕ ಮತ್ತು ಔಷಧೀಯ ಗುಣಗಳು. ಇವು, ಓರಿಸ್ಸಾ ಮೂಲದ ಕೆಂಪಕ್ಕಿಯ ಗುಣವಿಶೇಷಗಳು. ಈ ಅಕ್ಕಿ ಬಹಳ ಬೇಗ ಬೇಯುತ್ತೆ ಎನ್ನುವುದು ಇದರ ಇನ್ನೊಂದು ಹೆಗ್ಗಳಿಕೆ.
ಬೆಳ್ಳಗೆ, ತೆಳ್ಳಗೆ ಇರುವ ಸೋನಾ ಮಸೂರಿ ಅಕ್ಕಿಯೇ ಕೆಂಪಗಾದರೆ ಹೇಗಿರುತ್ತದೆ? ಹಾಗಾಗಲು ಸಾಧ್ಯವಿಲ್ಲದಿರಬಹುದು, ಆದರೆ, ಅದನ್ನೇ ಹೋಲುವ ದೇಸಿ ಕೆಂಪಕ್ಕಿ ಒಂದಿದೆ. ಅಂಥದ್ದೊಂದು ಅಪರೂಪದ ತಳಿಯ ಅಕ್ಕಿಯ ಪರಿಚಯ ಇದು. ಆರೋಗ್ಯ ಮತ್ತು ಪೌಷ್ಟಿಕಾಂಶದ ದೃಷ್ಟಿಯಿಂದ ಕೆಂಪಕ್ಕಿ ಅತ್ಯುತ್ತಮ. ಆದರೆ, ಅಕ್ಕಿ ದಪ್ಪ ಇರುವುದರಿಂದ ಜನ ಇಷ್ಟಪಡುವುದು ಕಡಿಮೆ. ಬೇಯುವುದು ನಿಧಾನ ಎಂಬುದೂ ಅದಕ್ಕೆ ಮತ್ತೂಂದು ಕಾರಣ.
ಹಾಗಾಗಿ ಉತ್ಸಾಹದಿಂದ ಕೆಂಪಕ್ಕಿ ಬಳಸಲು ಶುರುಮಾಡಿದವರು ಸ್ವಲ್ಪ ದಿವಸಕ್ಕೇ ಹಿಂದೇಟು ಹಾಕುತ್ತಾರೆ. ಈ ಸಮಸ್ಯೆಗೆ ಪರಿಹಾರ ರೂಪದಲ್ಲಿ ಬಂದಿದೆ ಒರಿಸ್ಸಾದ ಸಣ್ಣ ಕೆಂಪಕ್ಕಿ ತಳಿ. ನೀಳ ಕಾಳು, ಸೋನಾ ಮಸೂರಿಯಷ್ಟೇ ಗಾತ್ರ. ಶಿವಮೊಗ್ಗ ಬಳಿಯ ಮಲವಗೊಪ್ಪದ ಜಗದೀಶ್ ನಾಯ್ಕ ಕಳೆದ ಎರಡು ವರ್ಷಗಳಿಂದ ಈ ತಳಿ ಬೆಳೆಯುತ್ತಿದ್ದಾರೆ. ಅವರ ಅನುಭವದಂತೆ, ಒಂದು ಎಕರೆಗೆ 15ರಿಂದ 20 ಕೆ.ಜಿ ಬೀಜ ಬೇಕಾಗುತ್ತದೆ.
ಸಸಿಮಡಿ ಬಿಟ್ಟ 30 ದಿನದ ಒಳಗೆ ನಾಟಿ. ಸಸಿಯಿಂದ ಸಸಿಗೆ 10ರಿಂದ 12 ಇಂಚುಗಳ ಅಂತರ ಇರಬೇಕು. 15ರಿಂದ 25 ತೆಂಡೆಗಳು ಬರುತ್ತವೆ. ಎತ್ತರ 3ರಿಂದ 4 ಅಡಿ. ಮಧ್ಯಮ ಎತ್ತರದ ತಳಿಯಾದ್ದರಿಂದ ಬೀಳುವ ಸಂಭವ ಇರುವುದಿಲ್ಲ. ಎಕರೆಗೆ 18ರಿಂದ 25 ಕ್ವಿಂಟಾಲ್ ಇಳುವರಿಯನ್ನು ಜಗದೀಶ್ ಪಡೆಯುತ್ತಿದ್ದಾರೆ. 5ರಿಂದ 6 ಟನ್ ಹುಲ್ಲು ದೊರೆಯುತ್ತದೆ. ಹಸುಗಳಿಗೆ ಈ ಹುಲ್ಲು ತುಂಬಾ ಒಳ್ಳೆಯ ಮೇವಾಗುತ್ತದೆ.
ರಾಜಮನೆತನದವರು ಬಳಸುತ್ತಿದ್ದರು: ಒರಿಸ್ಸಾ ಕೆಂಪಕ್ಕಿ ಭತ್ತದ ಹೊರ ಕವಚ- ಅಂದರೆ, ಸಿಪ್ಪೆ ಬಿಳಿ ಬಣ್ಣ, ಆದರೆ ಅಕ್ಕಿ ಮಾತ್ರ ಕೆಂಪಗಿರುತ್ತದೆ. ಇದು ರುಚಿಕರವಾದ ಅಕ್ಕಿ. ಊಟಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ಜಗದೀಶ್. ಇದನ್ನು ತಿನ್ನುವುದರಿಂದ ಸಕ್ಕರೆ ಖಾಯಿಲೆ ನಿಯಂತ್ರಿಸಬಹುದು. ಆದ್ದರಿಂದ ಈ ತಳಿಗೆ ಬೇಡಿಕೆಯೂ ಹೆಚ್ಚಾಗಿಯೇ ಇದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಇದನ್ನೇ ಹೆಚ್ಚಾಗಿ ಬೆಳೆದು ಇತರೆ ರೈತರುಗಳಿಗೆ ನೀಡಬೇಕೆಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.
ಈ ನೀಳಕಾಳಿನ ಕೆಂಪಕ್ಕಿ ತಳಿಯು ಒರಿಸ್ಸಾ ಮೂಲದ್ದು. ಅಲ್ಲಿ ಇದಕ್ಕೆ “ಬಜ್ರಿ ಜೂಲಿ’ ಎಂಬ ಹೆಸರಿದೆ. ಅಲ್ಲಿನ ಸಂಬಲಪುರದ ರಾಜಮನೆತನಗಳು ಈ ಅಕ್ಕಿಯನ್ನು ಬಳಸುತ್ತಿದ್ದವಂತೆ. ಪಾಯಸ ಇತ್ಯಾದಿ ವಿಶೇಷ ತಿನಿಸುಗಳ ತಯಾರಿಯಲ್ಲಿ ಈ ಅಕ್ಕಿ ಬಳಕೆಯಾಗುತ್ತದೆ. ಹೀಗಾಗಿ ವ್ಯವಸ್ಥಿತವಾಗಿ ಬೆಳೆದರೆ ಮಾರುಕಟ್ಟೆಯ ಹೊಸ ಸಾಧ್ಯತೆಗಳನ್ನು ತೆರೆದಿಡಬಲ್ಲದು ಎಂಬುದು ಜಗದೀಶ್ ಅಭಿಮತ.
ಜಗದೀಶ್ ಕುಟುಂಬದ ಭತ್ತ ಪ್ರೀತಿ: ಜಗದೀಶ್ ಅವರ ತಂದೆ ತಿಮ್ಮಾನಾಯ್ಕ ಮಲೆನಾಡಿನ ಜನಪ್ರಿಯ ದೇಸೀ ಭತ್ತದ ತಳಿಯಾದ “ರತ್ನಚೂಡಿ’ಯನ್ನು ಬೆಳೆಯುತ್ತಿದ್ದರು. 90ರ ದಶಕದಿಂದ ಆ ಕೊಂಡಿ ಕಳಚಿತ್ತು. ಈ ವಿಚಾರ ಜಗದೀಶ್ ಅವರ ಮನದಲ್ಲಿ ಹಿಂದೆಂದಿನಿಂದಲೂ ಇತ್ತು. 2010ರಲ್ಲಿ ಅವರ ಸ್ನೇಹಿತರಾದ ಜ್ಯೋತಿಪ್ರಕಾಶ್, 3 ಎಕರೆ ಜಮೀನಿನಲ್ಲಿ ರತ್ನಚೂಡಿ ಭತ್ತವನ್ನು ಬೆಳೆದಿದ್ದರು. ಅವರಿಂದ 2011ರಲ್ಲಿ ಬಿತ್ತನೆ ಭತ್ತವನ್ನು ಪಡೆದು, ತಮ್ಮ 30 ಗುಂಟೆ ಜಮೀನಿನಲ್ಲಿ ಹಾಕಿದರು. ಮೊದಲ ಬಾರಿ, 12 ಕ್ವಿಂಟಾಲ್ ಇಳುವರಿ ಬಂದಿತು.
32 ದೇಸೀ ತಳಿಗಳು: ಪ್ರತಿ ತಳಿಯ ತಾಕಿನಲ್ಲಿ ಅತಿ ಹೆಚ್ಚು ಕಾಳುಗಳನ್ನು ಹೊಂದಿರುವ ತೆಂಡೆಯನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿ 3ರಿಂದ 4 ದಪ್ಪ ಭತ್ತದ ಗೊನೆಗಳನ್ನು ಆರಿಸಿ ಮುಂದಿನ ವರ್ಷಕ್ಕೆ ಬೀಜವನ್ನು ವಿಂಗಡಣೆ ಮಾಡಿಕೊಳ್ಳುವುದು ಇವರು ಅನುಸರಿಸುವ ಪದ್ಧತಿ. ಇದುವರೆಗೆ 50ರಿಂದ 60 ರೈತರು ಇವರಿಂದ ಭತ್ತದ ತಳಿಗಳನ್ನು ಪಡೆದಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಹತ್ತಕ್ಕೂ ಹೆಚ್ಚು ದೇಸೀ ಭತ್ತದ ತಳಿಗಳನ್ನು ಉಳಿಸುತ್ತಾ ಬರುತ್ತಿದ್ದಾರೆ.
ಕರಿಗಜವಿಲಿ, ಹೆಚ್.ಎಂ.ಟಿ, ರತ್ನಚೂಡಿ, ಸಿದ್ದಸಣ್ಣ, ಅಂಬೆ ಮೋರು ಮತ್ತು ಕಾಗೇಸಾಳಿ ಇವರು ನಿರಂತರವಾಗಿ ಬೆಳೆಯುತ್ತಿರುವ ದೇಸಿ ತಳಿಗಳು. 2019ರಲ್ಲಿ 32 ದೇಸಿ ಭತ್ತದ ತಳಿಗಳನ್ನು ಬೆಳೆದಿದ್ದಾರೆ. ಅದರಲ್ಲಿ ಹೆಚ್ಚು ಪ್ರದೇಶದಲ್ಲಿ ಒರಿಸ್ಸಾ ಕೆಂಪಕ್ಕಿಯೇ ಇದೆ. ಮುಂದಿನ ದಿನಗಳಲ್ಲಿ ಔಷಧೀಯ ಗುಣಗಳನ್ನು ಹೊಂದಿರುವ ಒರಿಸ್ಸಾ ಕೆಂಪಕ್ಕಿ, ನವರ, ಕರಿಗಜಿವಿಲಿ ಇತ್ಯಾದಿ ದೇಸೀ ತಳಿಗಳನ್ನು ಹೆಚ್ಚಾಗಿ ಬೆಳೆಸಿ, ಆಸಕ್ತ ರೈತರುಗಳಿಗೆ ಕೊಡಬೇಕೆಂಬ ಆಶಯ ಇಟ್ಟುಕೊಂಡಿದ್ದಾರೆ.
ಎರೆಹುಳು ತೊಟ್ಟಿ: ಇವರ ಭತ್ತದ ಪ್ರೀತಿಯನ್ನು ಗುರುತಿಸಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಾವಯವ ಕೃಷಿ ಸಂಶೋಧನಾ ಕೇಂದ್ರವು “ಬೀಜ ಸಂರಕ್ಷಕ ರೈತ’ ಎಂಬ ಬಿರುದು ನೀಡಿ ಸನ್ಮಾನಿಸಿದೆ. ಇವರು, 23 ವರ್ಷಗಳಿಂದ ಸಾವಯವ ಕೃಷಿ ಪದ್ಧತಿಯನ್ನೇ ಅನುಸರಿಸಿಕೊಂಡು ಬರುತ್ತಿದ್ದಾರೆ. ಎರೆಹುಳು ತೊಟ್ಟಿ ಮತ್ತು ಜೀವಸಾರ ಘಟಕವನ್ನು ನಿರ್ಮಿಸಿಕೊಂಡು ತೋಟಕ್ಕೆ ನೀರಿನ ಮುಖಾಂತರ ಹಾಯಿಸುವುದು ಇವರ ವೈಶಿಷ್ಟ್ಯ. ಅಡಿಕೆ ಮಧ್ಯೆ ಬೀನ್ಸ್, ಮೆಣಸಿನಕಾಯಿ, ಬೆಂಡೆ ಇತ್ಯಾದಿ ತರಕಾರಿಗಳನ್ನು ಬೆಳೆಯುತ್ತಾರೆ.
ಮೇಳದಲ್ಲಿ ಸಿಕ್ಕ ಕಾಳು: ರಾಜ್ಯದ ರೈತರಿಗೆ ಈ ತಳಿಯನ್ನು ಪರಿಚಯಿಸಿದ್ದು “ಸಹಜ ಸಮೃದ್ಧ’ ಸಂಸ್ಥೆ. ಎರಡು ವರ್ಷದ ಹಿಂದೆ ವಿಶಾಖಪಟ್ಟಣದಲ್ಲೊಂದು ದೇಸೀ ಬೀಜ ಮೇಳ ನಡೆದಿತ್ತು. ಒರಿಸ್ಸಾದ ಬರಘಡ ಪ್ರಾಂತ್ಯದ ಶಿವಪ್ರಸಾದ್ ಸಾಹು ಈ ತಳಿಯನ್ನು ಪ್ರದರ್ಶಿಸಿದ್ದರು. ಆವರೆಗೂ ಕೆಂಪಕ್ಕಿಯಲ್ಲಿ ಈ ರೀತಿಯ ತಳಿ ನೋಡಿರದ ಸಂಸ್ಥೆಯ ಜಿ. ಕೃಷ್ಣಪ್ರಸಾದ್ ತಕ್ಷಣ ಬಿತ್ತನೆ ಬೀಜಕ್ಕೆ ಬೇಡಿಕೆ ಇಟ್ಟರು.
100 ಕೆ.ಜಿ.ಯಷ್ಟು ಪಡೆದು ರಾಜ್ಯದ ಆಸಕ್ತ ರೈತರಿಗೆ ವಿತರಿಸಿದರು. ಪ್ರಸ್ತುತ ರಾಜ್ಯದ ಸಾವಯವ ಕೃಷಿಕರಾದ ಚುರ್ಚಿಗುಂಡಿಯ ನಂದೀಶ್, ಕುಂಬಳೂರಿನ ಆಂಜನೇಯ, ಮಳವಳ್ಳಿಯ ಘನಿ ಖಾನ್, ಕೆ.ಎಂ.ದೊಡ್ಡಿಯ ನಂಜೇಗೌಡ, ಮದ್ದೂರಿನ ಶಂಕರಣ್ಣ ಮುಂತಾದ ರೈತರು ಈ ತಳಿಯನ್ನು ಬೆಳೆಯುತ್ತಿದ್ದಾರೆ.
* ಚೈತ್ರಾ ಟಿ. ಓ. ಮಲವಗೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.