ಕರುನಾಡಿನ ಶ್ರೀಮಂತ ಪರಂಪರೆ: ಮೈಸೂರು ಸ್ಯಾಂಡಲ್ ಸೋಪ್
Team Udayavani, Apr 2, 2018, 5:41 PM IST
ಮೈಸೂರು ಸ್ಯಾಂಡಲ್ ಸೋಪು ಶತಮಾನಕ್ಕಿಂತಲೂ ಹೆಚ್ಚು ಕಾಲದಿಂದ ಭಾರತೀಯರ ಹೃದಯದಲ್ಲಿ ಮನೆ ಮಾಡಿದೆ. ಅಪ್ಪಟ ಶ್ರೀಗಂಧದೆಣ್ಣೆ ಬಳಸಿ ತಯಾರಿಸಲ್ಪಡುತ್ತಿರುವ ಸೋಪಿನ ಕಥೆ ಇಂತಿದೆ…
ಅದು 19ನೇ ಶತಮಾನದ ಆರಂಭ ಕಾಲ. ಮೈಸೂರು ಸಂಸ್ಥಾನವು ಯದುವಂಶದ ಅರಸ ಕೃಷ್ಣರಾಜ ಒಡೆಯರ ಆಳ್ವಿಕೆಯಲ್ಲಿತ್ತು. ಹೇರಳವಾಗಿ ಶ್ರೀಗಂಧ ಬೆಳೆಯುತ್ತಿದ್ದ ಕಾಲವದು. ಗಂಧದ ನಾಡೆಂದೇ ಹೆಸರುವಾಸಿಯಾದ ಮೈಸೂರು ಸಂಸ್ಥಾನದಲ್ಲಿ ಬೆಳೆದ ಶ್ರೀಗಂಧವನ್ನು ಯೂರೋಪ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿತ್ತು.
ಈ ಮಧ್ಯೆ ಮೊದಲನೆ ಪ್ರಪಂಚ ಯುದ್ಧ ಶುರುವಾಗಿದ್ದರಿಂದ ಗಂಧದ ತುಂಡುಗಳನ್ನು ರಫ್ತು ಮಾಡಲು ಸಾಧ್ಯವಾಗಲಿಲ್ಲ. ಅಗಾಧ ಪ್ರಮಾಣದಲ್ಲಿ ಸಂಗ್ರಹವಾಗಿರುವ ಪರಿಮಳಯುಕ್ತ ಮರದ ತುಂಡುಗಳನ್ನು ಏನಾದರೂ ಮಾಡಿ ಬಳಸಿಕೊಳ್ಳಬೇಕೆಂದು ಅರಸರು ತೀರ್ಮಾನಿಸಿದರು. ತಕ್ಷಣ ಆಸ್ಥಾನದ ದಿವಾನರಾದ ಮೋಕ್ಷಗುಂಡ ವಿಶ್ವೇಶ್ವರಯ್ಯ ಹಾಗೂ ಇತರರಲ್ಲಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದರು. ಶ್ರೀಗಂಧದ ಎಣ್ಣೆ ತಯಾರಿಸಿ ರಫ್ತು ಮಾಡಲು ಯೋಚಿಸಿದರು. ಅದಕ್ಕಾಗಿ ಮೈಸೂರು ನಗರದಲ್ಲಿ ಗಂಧದ ಎಣ್ಣೆ ತಯಾರಿಸುವ ಕಾರ್ಖಾನೆ ಸ್ಥಾಪಿಸಲು ನಿರ್ಧರಿಸಿದರು.
ಹೀಗೆ ಉತ್ಪಾದಿಸಿದ ಗಂಧದೆಣ್ಣೆಯನ್ನು ಕೂಡ ಯೂರೋಪ್ ರಾಷ್ಟ್ರಗಳಿಗೆ ರಫ್ತು ಮಾಡಲು ಸಾಧ್ಯವಾಗಲಿಲ್ಲ. ಹೀಗಿದ್ದಾಗಲೇ ಮೈಸೂರಿಗೆ ಬಂದ ವಿದೇಶಿ ಪ್ರವಾಸಿಗನೊಬ್ಬ ಮಹಾರಾಜರನ್ನು ಭೇಟಿ ಮಾಡಿ ಶ್ರೀಗಂಧದೆಣ್ಣೆಯಿಂದ ತಯಾರಿಸಿದ ಅಪರೂಪದ ಸೋಪುಗಳನ್ನು ಕೊಡುಗೆಯಾಗಿ ನೀಡಿದ. ಅದನ್ನು ಕಂಡ ಮಹಾರಾಜರಿಗೆ ನಾವೇಕೆ ಇಂತಹ ಸೋಪುಗಳನ್ನು ತಯಾರಿಸಬಾರದು ಎಂಬ ಆಲೋಚನೆಬಂತು. ಹೀಗೆ ಮಾಡಿದರೆ ಸಂಸ್ಥಾನದಲ್ಲಿ ಕೈಗಾರಿಕಾಭಿವೃದ್ಧಿಗೂ ಅವಕಾಶ ಕೊಟ್ಟಂತಾಗುತ್ತದೆ ಎಂದು ತೀರ್ಮಾನಿಸಿ ತಕ್ಷಣ ದಿವಾನರಲ್ಲಿ ಚರ್ಚಿಸಿ ಕಾರ್ಯರೂಪಕ್ಕೆ ತಂದರು.
ಐಐಎಸ್ಸಿಯಲ್ಲಿ ಪ್ರಯೋಗ: ದಿವಾನ್ ವಿಶ್ವೇಶ್ವರಯ್ಯನವರ ಉದ್ದೇಶ ಅತ್ಯುತ್ತಮ ಗುಣಮಟ್ಟದ ಸೋಪುಗಳನ್ನು ತಯಾರಿಸಿ, ಸುಂದರ ಪ್ಯಾಕ್‌ನೊಂದಿಗೆ ಕಡಿಮೆ ಬೆಲೆಯಲ್ಲಿ ಸಾರ್ವಜನಿಕರಿಗೆ ದೊರೆಯುವಂತೆ ಮಾಡುವುದಾಗಿತ್ತು. ಅದಕ್ಕಾಗಿ ಸಾಬೂನು ತಯಾರಿಕೆ ತಜ್ಞರನ್ನು, ತಾಂತ್ರಿಕ ಪರಿಣಿತರನ್ನು ಬಾಂಬೆಯಿಂದ ಕರೆಸಿಕೊಂಡು ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಸೋಪ್ ತಯಾರಿಕೆಯ ಪ್ರಯೋಗ ಮಾಡಿದರು.
ಇಂಡಸ್ಟ್ರೀಯಲ್ ಕೆಮಿಸ್ಟ್ ಸೋಸಲೆ ಗರ್ಲಾಪುರಿ ಶಾಸ್ತ್ರಿ ಎಂಬ ಯುವ ಪ್ರತಿಭೆಯನ್ನು ಸೋಪ್ ತಯಾರಿಕೆ ಬಗ್ಗೆ ಹೆಚ್ಚಿನ ತರಬೇತಿಗೆ ಇಂಗ್ಲೆಂಡ್ ಕಳಿಸಿದರು. ಇಂಗ್ಲೆಂಡ್‌ನಿಂದ ಹಿಂತಿರುಗಿದ ಸೋಸಲೆ ಶಾಸ್ತ್ರಿ ಅವರು ವಿಶ್ವೇಶ್ವರಯ್ಯನವರ ಕನಸನ್ನು ನನಸಾಗಿಸುವಲ್ಲಿ ಯಶಸ್ವಿಯಾದರು. ಸೋಸಲೆ ಶಾಸ್ತ್ರಿಯವರ ಸಾಧನೆ ಹಾಗೂ ಶ್ರಮ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆಯಲ್ಲಿ ಅಡಗಿದ್ದರಿಂದ ಅವರನ್ನು ಸೋಪ್ ಶಾಸ್ತ್ರಿ ಎಂತಲೇ ಗುರುತಿಸುವಂತಾಯ್ತು.
ಕೆ.ಆರ್. ವೃತ್ತದ ಬಳಿ ಮೊದಲ ಕಾರ್ಖಾನೆ: 1916ರ ಮೇ ಮಾಸದಲ್ಲಿ ಬೆಂಗಳೂರಿನ ಕೆ.ಆರ್. ವೃತ್ತದ ಬಳಿ ಮೈಸೂರು ಸಂಸ್ಥಾನದ ಅಪ್ಪಟ ಗಂಧದೆಣ್ಣೆ ಬಳಸಿಕೊಂಡು ಸಾಬೂನು ತಯಾರಿಸುವ ಸರ್ಕಾರಿ ಒಡೆತನದ ಪ್ರಥಮ ಕಾರ್ಖಾನೆ ಜನ್ಮತಾಳಿತು. ಇದೇ ವರ್ಷದಲ್ಲಿ ಅರಸರು ಮತ್ತೂಂದು ಶ್ರೀಗಂಧದೆಣ್ಣೆ ಹೊರತೆಗೆಯುವ ಕಾರ್ಖಾನೆಯನ್ನು ಮೈಸೂರಲ್ಲಿ ಸ್ಥಾಪಿಸಿದರು.
ಅದರಿಂದ ಉತ್ಪಾದಿಸುವ ಎಣ್ಣೆಯನ್ನು ಸಾಬೂನು ಕಾರ್ಖಾನೆಗೆ ಪೂರೈಸಲಾಗುತ್ತಿತ್ತು. ದಿನೇ ದಿನೇ ಸಾಬೂನು ಹಾಗೂ ಗಂಧದೆಣ್ಣೆ ಬೇಡಿಕೆ ಹೆಚ್ಚಾದ್ದರಿಂದ 1944ರಲ್ಲಿ ಮತ್ತೂಂದು ಗಂಧದೆಣ್ಣೆ ತಯಾರಕ ಘಟಕವನ್ನು ಶಿವಮೊಗ್ಗದಲ್ಲಿ ಸ್ಥಾಪಿಸಲಾಯಿತು. ಇದು ಕರ್ನಾಟಕ ಏಕೀಕರಣದ ನಂತರ ಆರಂಭವಾದ ಘಟಕ ಎನಿಸಿತು.
‘ಶರಭ’ ಮುದ್ರೆ: ಸುವಾಸಿತ ಮೈಸೂರು ಸ್ಯಾಂಡಲ್ ಸೋಪ್‌ನ ವಿಶಿಷ್ಟತೆಗೆ ತಕ್ಕಂತೆ ಒಂದು ಮುದ್ರೆಯನ್ನು ಹೊಂದಬೇಕೆಂದು ತೀರ್ಮಾನಿಸಿದ ಸರ್ಕಾರ ಎಂಟು ಕಾಲುಗಳುಳ್ಳ (ಸಿಂಹದ ದೇಹ ಹಾಗೂ ಆನೆಯ ಶಿರವುಳ್ಳ) ಕಾಲ್ಪನಿಕ ಪ್ರಾಣಿ ‘ಶರಭ’ವನ್ನು ಸೃಷ್ಟಿಸಿತು. ಧೈರ್ಯ ಮತ್ತು ಬುದ್ಧಿವಂತಿಕೆಯ ಸಂಕೇತವೆನೆಸಿದ ಶರಭ ರಾಜ್ಯದ ಶ್ರೀಮಂತ ಪರಂಪರೆಯನ್ನು ಎತ್ತಿತೋರಿಸುವಂತಿದೆ. ಟ್ರಾಮ್ ಟಿಕೆಟ್‌ಗಳ ಮೇಲೆ, ಬೆಂಕಿ ಪೊಟ್ಟಣಗಳ ಮೇಲೆ ಮುದ್ರಿಸಿ ಮೈಸೂರು ಸ್ಯಾಂಡಲ್ ಸೋಪ್ ರಾರಾಜಿಸುವಂತೆ ನೋಡಿಕೊಳ್ಳಲಾಯಿತು.
ಕರಾಚಿವರೆಗೆ ಒಂಟೆಗಳ ಮೆರವಣಿಗೆಯಲ್ಲಿ ಸೋಪನ್ನು ಹೊತ್ತೂಯ್ಯುವಂಥ ಜಾಹೀರಾತನ್ನೂ ಪ್ರಕಟಿಸಲಾಯಿತು. ಪ್ರಚಾರ ಕಾರ್ಯದ ಭರಾಟೆ ಮೂಲಕ ಜನರ ಮನದಾಳದಲ್ಲಿ ಮೈಸೂರು ಸ್ಯಾಂಡಲ್ ಸೋಪ್‌ನ ಮುದ್ರೆ ಒತ್ತಲಾಯಿತು. ಇದರ ಪರಿಣಾಮ ಸೋಪಿನ ಬೇಡಿಕೆ ದೇಶ-ವಿದೇಶಗಳಲ್ಲಿ ಹೆಚ್ಚಳವಾಯಿತು. ಮೈಸೂರು ಸ್ಯಾಂಡಲ್ ರಫ್ತು ಮಾಡುವ ಕಾರ್ಯ 1965ರಲ್ಲಿ ಶುರುವಾಯ್ತು. ರಾಜ್ಯ ಸರ್ಕಾರ 1980ರಲ್ಲಿ ಮೈಸೂರು ಮತ್ತು ಶಿವಮೊಗ್ಗದ ಗಂಧದೆಣ್ಣೆ ತಯಾರಕ ಕಂಪನಿಗಳನ್ನು ಒಟ್ಟುಗೂಡಿಸಿ ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಲಿ., (ಕೆಎಸ್‌ಆ್ಯಂಡ್‌ಡಿಎಲ್) ರಚಿಸಿತು.
ಶೇ.100 ರಷ್ಟು ಗಂಧದೆಣ್ಣೆಯನ್ನು ಬಳಸಿ ಸೋಪು ತಯಾರಿಸುವ ಏಕೈಕ ಸಂಸ್ಥೆಯಾದ್ದರಿಂದ ಮೈಸೂರು ಸ್ಯಾಂಡಲ್ ಸೋಪ್‌ಗೆ 2006ರಲ್ಲಿ ಜಿಯಾಗ್ರಫಿಕಲ್ ಇಂಡಿಕೇಟರ್ (ಜಿಐ) ಟ್ಯಾಗ್ ದೊರೆತು ಮತ್ತಷ್ಟು ಖ್ಯಾತಿ ಪಡೆಯಿತು. ಇಂದು ನೂರಾರು ಸೋಪುಗಳು ಮಾರುಕಟ್ಟೆಯಲ್ಲಿದ್ದರೂ ಸಹ ಮೈಸೂರು ಸ್ಯಾಂಡಲ್ ಸೋಪಿಗೆ ಒಂದು ವಿಶೇಷ ಮಾನ್ಯತೆ ಇರುವುದಂತೂ ನಿಜ.
ದೇಶಾದ್ಯಂತ ಉತ್ತಮ ಮಾರುಕಟ್ಟೆ: ದೇಶೀಯ ಮಾರುಕಟ್ಟೆ ಬೇಡಿಕೆಯನ್ನು ಗಮನಿಸಿದರೆ ತಮಿಳುನಾಡು ಪ್ರಥಮ ಸ್ಥಾನದಲ್ಲಿದ್ದು ನಂತರ ಸ್ಥಾನ ಬೆಂಗಳೂರಿಗಿದೆ. ಹೈದರಾಬಾದ್, ಮುಂಬೈ, ದೆಹಲಿ ಹಾಗೂ ಕೊಲ್ಕತಾದಲ್ಲೂ ಸಹ ಉತ್ತಮ ಮಾರುಕಟ್ಟೆ ಕಂಡುಕೊಂಡಿರುವ ಕೆಎಸ್‌ಆ್ಯಂಡ್‌ಡಿಎಲ್ ರಾಜ್ಯದ ಮಾರುಕಟ್ಟೆಯಲ್ಲಿ ಸ್ಯಾಂಡಲ್‌ವುಡ್ ಸಾಬೂನುಗಳಿಗೆ ಸಾಕಷ್ಟು ಬೇಡಿಕೆ ಹೊಂದಿದೆ.
ಉತ್ತರ ಭಾರತದಲ್ಲಿ ಪ್ರಿಮೀಯಂ ಹಾಗೂ ಮೈಸೋಪ್ ಸರಣಿಗೆ ಬಹಳಷ್ಟು ಬೇಡಿಕೆಯಿದೆ. ಇದರ ಜತೆಯಲ್ಲಿ ಅಗರಬತ್ತಿ, ಧೂಪ, ಟಾಲ್ಕಂ ಪೌಡರ್, ಬಾಡಿ ವಾಷ್, ಹ್ಯಾಂಡ್ ವಾಷ್, ಬೇಬಿ ಪ್ರಾಡಕ್ಟ್, ಬಾಡಿ ಮಸಾಜ್ ತೈಲ, ಫೇಸ್ ಪ್ಯಾಕ್, ಫೆನಾಯಿಲ್ ಉತ್ಪನ್ನಗಳನ್ನು ಸಹ ಹೊರತಂದಿರುವುದು ಶ್ಲಾಘನೀಯ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.